ಯೂತ್ ಒಲಂಪಿಕ್ಸ್: ಇದು ಯುವಕರ ಆಟ

– ಹರ‍್ಶಿತ್ ಮಂಜುನಾತ್.

game

ನಮಗೆಲ್ಲಾ ತಿಳಿದಂತೆ ಜಗತ್ತಿನ ಅತಿ ಮುಕ್ಯ ಮತ್ತು ಹೆಸರಾಂತ ಕೂಟಗಳಲ್ಲಿ ಒಲಂಪಿಕ್ ಪಯ್ಪೋಟಿಯೂ ಒಂದು. ಸುಮಾರು ವರುಶಗಳ ಹಿಂದೆ ಶುರುವಾದ ಈ ಆಟಕ್ಕೆ, ಜಗತ್ತಿನ ಹಲವು ನಾಡುಗಳ ಆಟಗಾರರು ಒಂದೆಡೆ ಸೇರಿ ತಮ್ಮ ಸಾಮರ‍್ತ್ಯ ತೋರಿಸಲೊಂದು ವೇದಿಕೆ ಅಣಿಗೊಳಿಸಿದಂತಹ ಹಿರಿಮೆ ಅಯ್.ಒ.ಸಿ (IOC-International Olympic Committee)ಗೆ ಸಲ್ಲುತ್ತದೆ.

ಪ್ರತಿ ನಾಲ್ಕು ವರುಶಗಳಿಗೊಮ್ಮೆ ಸಾಗುವ ಈ ಆಟದಲ್ಲಿ ಎರಡು ರೀತಿಯ ಕೂಟವನ್ನು ಆಯೋಜಿಸಲಾಗುತ್ತದೆ. ಒಂದು ಬೇಸಿಗೆ ಕೂಟ ಮತ್ತೊಂದು ಚಳಿಗಾಲದ ಕೂಟ. ಎರಡು ವರುಶಗಳ ಅಂತರದಲ್ಲಿ ನಡೆಯುವ ಒಂದೊಂದು ಕೂಟವು, ಎರಡೂ ಕೂಟದ ಮುಕ್ತಾಯಕ್ಕೆ ಒಲಂಪಿಕ್ ನ ಒಂದು ಆವ್ರುತ್ತಿಯಾಗಿ ಕೊನೆಗಳ್ಳುತ್ತದೆ. ಅಯ್ದನೇ ನೂರೇಡಿನಲ್ಲಿಯೇ ಒಲಂಪಿಕ್ ಆಟಗಳು ನಡೆದಿದ್ದವು ಎಂಬ ಅಬಿಪ್ರಾಯಗಳು ಬಹುಮಂದಿಯಲ್ಲಿದ್ದರೂ, ಒಲಂಪಿಕ್ ಒಂದು ಹೊಸರೂಪ ಪಡೆದುಕೊಂಡದ್ದು ಮಾತ್ರ 1896ರಲ್ಲಿ. ಇದರ ಅಂಗವಾಗಿ 1896ರಲ್ಲಿ ಮೊದಲ ಬಾರಿ ಹೂಸತನದ ಒಲಂಪಿಕ್ ಆಟಗಳನ್ನು ಅತೆನ್ಸ್ ಮತ್ತು ಗ್ರೀಸ್ ನಗರಗಳಲ್ಲಿ ನಡೆಸಲಾಯಿತು. ಮುಂದೆ ಜಗತ್ತಿನ ಬೇರೆ ಬೇರೆ ನಾಡುಗಳಿಂದ ಪಯ್ಪೋಟಿಗಾರರು ಒಲಂಪಿಕ್ ನಲ್ಲಿ ತಮ್ಮ ತಮ್ಮ ನಾಡುಗಳ ಪರವಾಗಿ ಪೋಟಿಗಿಳಿಯಲು ಹೊಸದಾರಿಯಾಯಿತು. ದಿನಗಳು ಕಳೆದಂತೆ ಈ ಪಯ್ಪೋಟಿಯು ದೊಡ್ಡದಾಗಿ ಬೆಳೆಯಿತು. ಮತ್ತು ಪೋಟಿಯಲ್ಲಿ ಪಾಲ್ಗೊಳ್ಳುವವರ ಅಂಕಿಯೂ ಹೆಚ್ಚಳವಾಯಿತು. ಇದರಿಂದ ಮುಂದೆ ಒಲಂಪಿಕ್ ಆಟಗಳನ್ನು ರೂಪಿಸುವಲ್ಲಿ ಹಲವು ಬದಲಾವಣೆಗಳಾದವು. ಆ ಮೂಲಕ ಹುಟ್ಟು ಪಡೆದದ್ದೇ ಯುವಕರ ಪಯ್ಪೋಟಿ, ಅದು ಯೂತ್ ಒಲಂಪಿಕ್ಸ್ ಮೂಲಕ.

ಯೂತ್ ಒಲಂಪಿಕ್ ಗೇಮ್ಸ್ (YOG- Youth Olympic Games), ಇದೊಂದು 14 ರಿಂದ 18 ವಯಸ್ಸಿನ ಯುವಕರಿಗಾಗಿಯೇ ನಡೆಸುವ ಆಟ. ಇದು ಬಹುಬಗೆಯ ಆಟಗಳ ಕೂಟವಾಗಿದ್ದು, ಜಗತ್ತಿನ ಬೇರೆ ಬೇರೆ ನಾಡುಗಳಲ್ಲಿ ಅಯ್.ಒ.ಸಿ ಸಮಿತಿಯಿಂದ ನಡೆಸಲಾಗುತ್ತದೆ. ಈ ಕೂಟವು ಪ್ರತಿ ನಾಲ್ಕು ವರುಶಗಳಿಗೊಮ್ಮೆ ನಡೆಯುತ್ತಿದ್ದು, ಇದರಲ್ಲಿ ಬೇಸಿಗೆ ಕೂಟ(Summer Event) ಮತ್ತು ಚಳಿಗಾಲದ ಕೂಟ(Winter Event) ಗಳೆಂಬ ಎರಡು ಬಗೆಗಳಿವೆ.

ಬೇಸಿಗೆ ಕೂಟವು 481 ಅಯ್.ಒ.ಸಿ ಅದಿಕಾರಿಗಳ ನಡೆಸುವಿಕೆಯಲ್ಲಿ, 13 ದಿನಗಳ ಅವದಿಯಲ್ಲಿ ನಡೆಯುತ್ತದೆ. ಇದರಲ್ಲಿ ಅತಿ ಹೆಚ್ಚೆಂದರೆ 3530 ಪಯ್ಪೋಟಿಗರು ಪಾಲ್ಗೊಳ್ಳಬಹುದು. ಮೊದಲ ಬೇಸಿಗೆ ಕಾಲದ ಕೂಟವು 2010ರ ಆಗಸ್ಟ್ 14 ರಿಂದ 26ರ ವರೆಗೆ ಸಿಂಗಾಪುರದಲ್ಲಿ ನಡೆದಿತ್ತು. ಹಾಗೆಯೇ ಚಳಿಗಾಲದ ಕೂಟವು 580 ಅಯ್.ಒ.ಸಿ. ಅದಿಕಾರಿಗಳ ಮುಂದಾಳತ್ವದಲ್ಲಿ, 10 ದಿನಗಳ ಅವದಿಯಲ್ಲಿ ನಡೆಯುತ್ತದೆ. ಇಲ್ಲಿ 970 ಪಯ್ಪೋಟಿಗರು ಪೋಟಿಯಲ್ಲಿ ಪಾಲ್ಗೊಳ್ಳಬಹುದು. ಅಂತೆಯೇ ಮೊದಲ ಚಳಿಗಾಲದ ಕೂಟಗಳು 2012ರ ಜನವರಿ 13ರಿಂದ 22ರ ವರೆಗೆ ಇನ್ಸಬರ‍್ಗ್ ಮತ್ತು ಅಸ್ಟ್ರಿಯಾದಲ್ಲಿ ನಡೆದಿತ್ತು.

ಹುಟ್ಟು ಮತ್ತು ಹರಿವು:
1998ರಲ್ಲಿ ಆಸ್ಟ್ರೇಲಿಯಾದ ಕಯ್ಗಾರಿಕಾ ಮೇಲ್ವಿಚಾರಕ(Industrial Manager)ರಾದ ಜೋಹನ್ ರೊಜೆನ್ಸಪ್ ರವರು ಯೂತ್ ಒಲಂಪಿಕ್ ನಂತಹ ಒಂದು ಕೂಟವನ್ನು ಮಟ್ಟ ಮೊದಲ ಬಾರಿಗೆ ಪರಿಚಯಿಸಿದರು. ಮುಂದುವರಿದ ನಾಡುಗಳಲ್ಲಿ ಮಕ್ಕಳ ಎಳವೆಯಲ್ಲಿನ ಬೊಜ್ಜಿನ ಸಮಸ್ಯೆಯ ಕುರಿತು ಜಾಗತಿಕವಾಗಿ ಅರಿವು ಮೂಡಿಸುವ ಮತ್ತು ಯುವಕರನ್ನು ಪಯ್ಪೋಟಿಯಂತಹ ಚಟುವಟಿಕೆಗಳಲ್ಲಿ ಹೆಚ್ಚೆಚ್ಚಾಗಿ ತೊಡಗಿಸಿಕೊಳ್ಳುವಂತೆ ಮಾಡುವ ಸಲುವಾಗಿ ಈ ಕೂಟವನ್ನು ಜಾರಿಗೆ ತರಲಾಯಿತು. ಅಲ್ಲದೇ ಮಕ್ಕಳ ಕಲಿಕೆಯ ಸಾದನೆಗಳನ್ನು ಗಟ್ಟಿಗೊಳಿಸುವ ಮತ್ತು ಕಲಿಕೆಮನೆಗಳಲ್ಲಿ ಕುಸಿಯುತ್ತಿರುವ ಪಯ್ಪೋಟಿಯ ಚಟುವಟಿಕೆಗಳ ಕುರಿತು ಅರಿವು ಮೂಡಿಸುವುದನ್ನು ಗುರಿಯಾಗಿಸಿಕೊಳ್ಳಲಾಯಿತು. ಹೀಗೆ ಜಾರಿಗೆ ಬಂಡ ಯುವಕರ ಪಯ್ಪೋಟಿ ಮುಂದೆ ಅಂತರಾಶ್ಟ್ರೀಯ ಒಲಂಪಿಕ್ ನ ಬಾಗವಾಗಿ ಗುರುತಿಸಿಕೊಂಡಿತು.

ಒಲಂಪಿಕ್ ಪಯ್ಪೋಟಿಯು ಕೇವಲ ಪೋಟಿಗೆ ಸೀಮಿತವಾಗದೆ ಕಲೆ, ಸಂಸ್ಕ್ರುತಿ ಮತ್ತು ಕಲಿಕೆಯ ಕೊಡುಕೊಳ್ಳುವಿಕೆಯೂ ಒಲಂಪಿಕ್ ನಿಂದಾಗಿ ಸಾದ್ಯವಾಗಬೇಕೆಂಬ ನಿಟ್ಟಿನಲ್ಲಿ, ಕಲೆ ಮತ್ತು ಕಲಿಕೆಯನ್ನು ಒಲಂಪಿಕ್ ನ ಒಂದು ಬಾಗವಾಗಿ ಸೇರಿಸಿಕೊಳ್ಳಲಾಯಿತು. ಈ ಕಾರಣಕ್ಕಾಗಿಯೇ ಮುಂದೆ ಅಯ್.ಒ.ಸಿ. ಮುಕ್ಯಸ್ತ ಜಾಕ್ಸ್ ರೋಗ್ ರವರು ಗ್ವಾಟ್ಮಾಲ ನಗರದಲ್ಲಿ 6 ಜುಲಯ್ 2007 ರಂದು ನಡೆದ ಅಯ್.ಒ.ಸಿ ಯ 119ನೇ ಕೂಟದಲ್ಲಿ, ಯುವಕರ ಪಯ್ಪೋಟಿಯ ಕುರಿತಂತೆ ಕೆಲವು ರೂಪುರೇಶಗಳನ್ನು ಮಾಡಿದರು. ಅದರಂತೆ ಜಗತ್ತಿನ ಉತ್ತಮ ಪಯ್ಪೋಟಿಗಾರರನ್ನು ಗುರುತಿಸಿ ಮುಂದೆತರುವುದು, ಒಲಂಪಿಕ್ ಕುರಿತಂತೆ ಯುವಕರಿಗೆ ಅರಿವಿನ ಜೊತೆ ಅವಕಾಶ ಕಲ್ಪಿಸುವುದು, ಕಲಿಕೆಯಲ್ಲಿ ಹೊಸತನವನ್ನು ಮಾಡುವುದು ಮತ್ತು ಒಲಂಪಿಕ್ ಹೆಚ್ಚುಗಾರಿಕೆಯ ಕುರಿತು ಆರೋಗ್ಯಕರ ಚರ‍್ಚೆಗಳನ್ನು ಮಾಡುವುದು. ಈ ನಾಲ್ಕು ಅತಿಮುಕ್ಯ ವಿಶಯಗಳು ಯುವಕರ ಒಲಂಪಿಕ್ ನ ಗುರಿಯನ್ನಾಗಿಸಿಕೊಳ್ಳಲಾಯಿತು.

ಅದರಂತೆ ಮೊದಲ ಯುವಕರ ಒಲಂಪಿಕ್ ಪಯ್ಪೋಟಿಯ ಬೇಸಿಗೆ ಕೂಟದ ಆತಿತ್ಯವನ್ನು ಸಿಂಗಪೂರ ವಹಿಸಿಕೊಂಡು 21 ಪೆಬ್ರವರಿ 2008ಕ್ಕೆ ಚಾಲನೆ ನೀಡಲಾಯಿತು. ಅಂತೆಯೇ 1964 ಮತ್ತು 1976ರ ಒಲಂಪಿಕ್ ನ ಚಳಿಗಾಲದ ಕೂಟವನ್ನು ನಡೆಸಿಕೊಟ್ಟಿದ್ದ ಇನ್ಸ್ ಬ್ರೂಕ್, ಯುವಕರ ಒಲಂಪಿಕ್ ನ 2012ರ ಮೊದಲ ಚಳಿಗಾಲದ ಕೂಟದ ಆತಿತ್ಯ ವಹಿಸಿಕೊಳ್ಳುವುದಾಗಿ 12 ಡಿಸೆಂಬರ್ 2008ರಂದು ಅಯ್.ಒ.ಸಿ. ಗೋಶಣೆ ಮಾಡಿತ್ತು. ಇವೆರಡೂ ಕೂಟಗಳ ಆಯೋಜನೆಯಲ್ಲಿ ಗೆಲುವು ಕಾಣುವ ಮೂಲಕ ಯುವಕರ ಒಲಂಪಿಕ್ ನ ಮೊದಲ ಆವ್ರುತ್ತಿಗೆ ತೆರೆಬಿದ್ದಿತ್ತು. ಇದರ ಮುಂದುವರಿದ ಬಾಗವಾಗಿ ಯುವಕರ ಒಲಂಪಿಕ್ ನ ಎರಡನೆಯ ಆವ್ರುತ್ತಿಯ ಬೇಸಿಗೆ ಕೂಟವು 2014 ಆಗಸ್ಟ 15 ರಿಂದ 28ರ ವರೆಗೆ ಚೀನಾದ ನಂಜಿಂಗ್ ನಲ್ಲಿ ನಡೆಸಲಾಯಿತು. ಮುಂದಿನ ಚಳಿಗಾಲದ ಕೂಟವು 2016 ರಲ್ಲಿ ಲಿಲ್ಲೇಹ್ಮರ್ ನಲ್ಲಿ ನಡೆಯಲಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: nanjing2014)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: