ಕಿಡಿ ಹಚ್ಚಲು ಸುಟ್ಟು ಬೂದಿಯಾಗುವ ಹೆಣಕ್ಕೆ ನೂರು ವಿದಿಗಳ ಅಂತ್ಯ ಸಂಸ್ಕಾರ

ಎಸ್.ಎನ್.ಬಾಸ್ಕರ್‍.

reasoning
ಮಾನವನನ್ನೂ ಒಳಗೊಂಡಂತೆ ಹಸಿವು, ನಿದ್ರೆ, ಊಟ, ವಿಸರ‍್ಜನೆಗಳು, ಕಾಮ – ಇವು ಯಾವುದೇ ಜೀವಿ ಅತವಾ ಪ್ರಾಣಿಯ ಮೂಲಬೂತ ಕ್ರಿಯೆಗಳು. ಈ ಕ್ರಿಯೆಗಳಲ್ಲಿ ಸ್ವಲ್ಪವೇ ಏರು ಪೇರಾದರೂ ಸಹಾ ಜೀವಿಯ ಪ್ರಾಣಕ್ಕೆ ಸಂಚಕಾರ ಕಟ್ಟಿಟ್ಟ ಬುತ್ತಿ. ಬುದ್ದಿಶಕ್ತಿ, ತರ‍್ಕ, ಜ್ನಾನ, ಚಿತ್ತ ಇವುಗಳ ಕಾರಣವಾಗಿ ಮಾತ್ರ ಮಾನವ ಇತರ ಪ್ರಾಣಿಗಳಿಗಿಂತ ಬಿನ್ನವಾಗಿದ್ದಾನೆಯೇ ಹೊರತು ಉಳಿದಂತೆ ಮಾನವ ಸಹಾ ಮೂಲತಹ ಪ್ರಾಣಿಯೇ ಎಂಬುದು ಎಲ್ಲರು ಒಪ್ಪಿರತಕ್ಕಂತಹ ಸಂಗತಿಯೇ ಆಗಿದೆ. ಈ ಮೂಲಬೂತ ಕ್ರಿಯೆಗಳನ್ನು ಮೀರಿ ನಿಲ್ಲುವುದು ಅತವಾ ಇವುಗಳನ್ನು ಗೆದ್ದು ಜೀವಿಸಲು ಯತ್ನಿಸುವುದು ತಾನು ಪ್ರಾಣಿಯೇ ಅಲ್ಲ ಎಂದು ತೋರ‍್ಪಡಿಸುವ ಯತ್ನವಾಗಿರುತ್ತದೆ. ಅಸಲಿಗೆ ಗೆಲುವಾದರೂ ಯಾರ ವಿರುದ್ದ? ಸಕಲ ಜೀವಸಂಕುಲದ ವಿರುದ್ದವೇ? ಈ ಪ್ರಕ್ರುತಿಯ ವಿರುದ್ದವೇ? ಜೀವಿ ಹಾಗೂ ಪ್ರಕ್ರುತಿಯನ್ನು ಹೊತ್ತ ಬೂಮಂಡಳದ ವಿರುದ್ದವೇ? ಬೂಮಿಯ ಅಸ್ತಿತ್ವದ ಆದಾರವಾಗಿರುವ ಸೂರ‍್ಯನ ವಿರುದ್ದವೇ? ಅದಕ್ಕೂ ಮೀರಿ ಇಡೀ ವಿಶ್ವದ ವಿರುದ್ದವೇ? ಸುತ್ತಲೂ ಗೆರೆಯೊಂದನ್ನು ಗೀಚಿ, ಮೀರಿ ನಡೆದರೆ ಶಿಕ್ಶಿಸಲು ಬ್ರಮೆಯೊಂದನ್ನು ಹುಟ್ಟಿಸಿ ಹತ್ತು ಹಲವು ನಿಶೇದಗಳನ್ನು ತಾವೇ ಹೇರಿಕೊಂಡು, ತಿನ್ನಲೊಂದು ನಿಯಮ, ತೇಗಲೊಂದು ನಿಯಮಗಳನ್ನು ಹಾಕಿಕೊಂಡು ಬಾಳುವ ಬದುಕಿನ ಸಾರ‍್ತಕ್ಯವಾದರೂ ಏನು?

ಡಾ.ಯು.ಆರ್‍. ಅನಂತಮೂರ‍್ತಿಯವರ ಸಂಸ್ಕಾರ ಕಾದಂಬರಿಯ ಒಟ್ಟು ಸಾರಾಂಶ ಸಹಾ ಇದೇ ಆಗಿದೆ. ಅರ‍್ತವಿಲ್ಲದ ಆಚಾರಗಳನ್ನು, ತರ‍್ಕಹೀನ ಸಂಪ್ರದಾಯಗಳನ್ನು ಕಡೆಗಣಿಸಿ ಬದುಕಿನ ನೆಲೆಯನ್ನು ವಿಸ್ತರಿಸಿ ಅರಿಯುವ ಪ್ರಯತ್ನ ಈ ಕಾದಂಬರಿಯಲ್ಲಿ ಕಂಡು ಬರುತ್ತದೆ. ಹಲವು ವಿವಾದಗಳನ್ನೂ ಮೀರಿ ಉನ್ನತ ವೈಚಾರಿಕ ಚಿಂತನೆಯ ಹರಿವಿನೊಂದಿಗೆ ಡಾ. ಯು.ಆರ್‍. ಅನಂತಮೂರ‍್ತಿಯವರ ಬರಹಗಳು ಪ್ರಿಯವೆನಿಸುತ್ತದೆ.

ಕೇವಲ ದಾರ‍್ಮಿಕ ಹಾದಿಯ ಮುಕ್ತಿಯ ಬ್ರಮೆಯಲ್ಲಿ, ಆಚಾರ-ಸಂಪ್ರದಾಯಗಳ ಸರಪಳಿಗಳ ಬಂದನದಲ್ಲಿ ಮಾನವ ಎಂದಿಗೂ ಸಹಾ ಮುಕ್ತವಾಗಲು ಸಾದ್ಯವೇ ಇಲ್ಲ. ಮುಕ್ತನಾಗದ ಹೊರತು ಉನ್ನತಿಯ ಹಾದಿಯು ಮರೀಚಿಕೆಯೇ ಆಗಿರುತ್ತದೆ. ಬೌದ್ದಿಕ ಉನ್ನತಿಯಿಂದ ಮಾತ್ರ ಮನುಕುಲದ ವಿಕಾಸ ಸಾದ್ಯವಾಗುತ್ತದೆ. ಆದರೆ ಇಂದು “ಮುಕ್ತಿ” ಯ ಹಾದಿಯನ್ನು ತೋರಿಸಲು ನಮ್ಮಲ್ಲೇ ಹತ್ತು ಹಲವು ಮಾರ‍್ಗದರ‍್ಶಕರಿದ್ದಾರೆ. ಒಬ್ಬೊಬ್ಬರದೂ ಒಂದೊಂದು ಹಾದಿ ನನ್ನ ಹಾದಿಯೇ ಸರಿ ಎಂಬುದು ಎಲ್ಲರ ಸಮರ‍್ತನೆ. ಎಲ್ಲರೂ ಹೇಳುವ ಗಮ್ಯ ಒಂದೇ ಆಗಿದ್ದರೂ ಸಹ ಇದಕ್ಕಾಗಿ ಕ್ರಮಿಸುವ ಹಾದಿ ಮಾತ್ರ ಬೇರೆ ಬೇರೆ. ಎಶ್ಟೇ ವೈಜ್ನಾನಿಕ ಅನ್ವೇಶಣೆಗಳ ನಂತರವೂ ಶನಿ ಕಾಟಕ್ಕೆ ಪರಿಹಾರ ಹೇಳುವವರು ಇಲ್ಲಿ ನೂರು ಮಂದಿ ಸಿಗುತ್ತಾರೆ. ಯಾವುದೇ ಜಾತಿ ಬೇದ ಇಲ್ಲದೇ ಶುದ್ದ ಬಕ್ತಿಗೆ ಒಲಿದ ದೇವರು ಶತನಾಮಾವಳಿ, ಅಶ್ಟೋತ್ತರ, ಮಂತ್ರಪುಶ್ಪಗಳನ್ನು ಬಿಟ್ಟು, ದೂಪ-ದೀಪ-ನೈವೇದ್ಯಗಳನ್ನು ಕಡೆಗಣಿಸಿ ತಾನೇ ವಿರುದ್ದ ದಿಕ್ಕಿಗೆ ಮುಕ ಮಾಡಿರುವ ಪುರಾಣದ ಕತೆ ಎಲ್ಲರಿಗೂ ತಿಳಿದೇ ಇದೆ. ಇದರ ನಿದರ‍್ಶನವೇ ಆಗಿರುವ ಉಡುಪಿಯ ಕನಕನಕಿಂಡಿ ಇಂದಿಗೂ ಹಾಗೇ ಇದೆ. ಆದರೆ ಇದೇ ಉಡುಪಿಯಲ್ಲಿ ಮಡಿವಂತಿಕೆ ಇನ್ನೂ ಜೀವಂತವಾಗಿದೆ. ಬ್ರಾಹ್ಮಣರೊಡನೆ ಇತರರ ಬೋಜನ ಇಲ್ಲಿ ನಿಶಿದ್ದ. ಬ್ರಾಹ್ಮಣ ಕುಲದಲ್ಲಿಯೇ ಮಾದ್ವ, ಸ್ಪಾರ‍್ತರ ನಡುವೆ ಮಡಿ ತಾರತಮ್ಯ. ಇದಕ್ಕೂ ಅಚ್ಚರಿ ಹಾಗೂ ಅಸಹ್ಯ ಹುಟ್ಟಿಸುವ ವಿಶಯವೆಂದರೆ ನಿರ‍್ಮಲ ಬಕ್ತಿಯ ಹರಿಕಾರ ಕನಕದಾಸರನ್ನು ಒಂದು ಜಾತಿಗೆ ಸೀಮಿತಗೊಳಿಸಲಾಗುತ್ತಿದೆ. ಹೀಗಿರುವಾಗ ಪುರಾಣ ಕತೆಗಳ ಅರ‍್ತವಾದರೂ ಏನು? ಈ ಕತೆಗಳು ಹರಿಕತೆ ಹೇಳಲು ಮಾತ್ರ ಸೀಮಿತವೇ? ಅತವಾ ನೀತಿ ತಾತ್ಪರ‍್ಯಗಳನ್ನು ಸಾರುವ ಪೌರಾಣಿಕ ಕತೆಗಳು ಕೇವಲ ಕಲ್ಪಿತವೇ?

ನೂರು ದೇವರನೆಲ್ಲಾ ನೂಕಾಚೆ ದೂರ” ಎಂದು ಹಾಗೂ “ಮನು ನಿನಗೆ ನೀನು.. ಮನು ನಿನಗೆ ನೀನು” ಎಂದು ಹೇಳಿರುವ ರಾಶ್ಟ್ರಕವಿ ಕುವೆಂಪುರವರೂ ಮಾನವಕುಲದಲ್ಲಿ ವೈಚಾರಿಕ ದ್ರುಶ್ಟಿಯ ಅಗತ್ಯವನ್ನು ಒತ್ತಿ ಸಾರಿದ್ದಾರೆ. ನಿಗೂಡ ಸ್ರುಶ್ಟಿಯೊಂದಿಗೆ ಅತ್ಯಂತ ಸರಳವಾದ, ಸುಂದರವಾದ, ರಸವತ್ತಾದ ಜೀವನವನ್ನು ಅನುಬವಿಸಬೇಕಾಗಿರುವ ಮನುಕುಲಕ್ಕೆ ವೈರಾಗ್ಯವೆಂಬ ಹಾಗೂ ಮುಕ್ತಿಗೆ ವೈರಾಗ್ಯ ಅನಿವಾರ‍್ಯವೆಂಬ ಅರ‍್ತಹೀನ ಬ್ರಮೆಯನ್ನು ಹುಟ್ಟಿಸಲಾಗುತ್ತಿದೆ. ಕೆಲವು ನೀತಿಗಳು ವೈರಾಗ್ಯದ ಹಾದಿಯನ್ನು ನೇರವಾಗಿಯೇ ಹೇಳಿದರೆ ಮತ್ತೆ ಕೆಲವು ಸುತ್ತು ಬಳಸಿ ಹೇಳುತ್ತಿವೆ. ಈ ದೇಹವೇ ನಿನ್ನದಲ್ಲ ಎಂಬುದೂ ಸಹಾ ಅರ‍್ತ ಹೀನ ವೈರಾಗ್ಯದ ಪ್ರತಮ ಹೆಜ್ಜೆಯೇ ಆಗಿದೆ. ಈ ರೀತಿ ಸಾರುವ ಪಂತದ ಕಲ್ಪಿತ ವಿಚಾರಗಳಿಗೆ ಅವರದೇ ಆದ ತರ‍್ಕದ ಬುನಾದಿ ಸಹಾ ಹಾಕಲಾಗಿದೆ. ಇಂತಹ ದಾರ‍್ಮಿಕ ನೀತಿಗಳು ಮಾನವ ಕುಲದ ಬೌದ್ದಿಕ ಉನ್ನತಿಗೆ ಅಡ್ಡಗಾಲು ಹಾಕುತ್ತಿವೆ. ತನ್ಮೂಲಕ ಮಾನವನ ಮನಸ್ಸು ಸಂಕುಚಿತವಾಗುತ್ತಾ ಸಾಗಿದೆ. ಕುವೆಂಪು ರವರಾಗಲೀ ಅನಂತ ಮೂರ‍್ತಿಯವರಾಗಲೀ ಅತವಾ ವೈಚಾರಿಕ ಚಿಂತನೆಯ ಹರಿವಿನ ಸಾಹಿತಿಗಳು, ಬುದ್ದಿಜೀವಿಗಳು ತಮ್ಮ ವೈಚಾರಿಕ ನಿಲುವನ್ನು ಪ್ರಕಟಿಸುವ ಮೂಲಕ ಮನುಕುಲದ ಬೌದ್ದಿಕ ಉನ್ನತಿಗೆ ಉತ್ತಮವಾದ ಕೊಡುಗೆಯನ್ನು ನೀಡಿದ್ದಾರೆಂಬುದರಲ್ಲಿ ಯಾವುದೇ ಸಂದೇಹವಿಲ್ಲ, ಆದರೆ..

ಬೌದ್ದಿಕ ಉನ್ನತಿಗೆ ಅಡ್ಡಿಯಾಗಿರುವ ಇಂತಹ ದಾರ‍್ಮಿಕ ನೀತಿ ನಿಯಮಗಳು ರುಣಾತ್ಮಕವಾದ ಶಕ್ತಿಯನ್ನು ತುಂಬತೊಡಗಿದರೆ, ಮನುಕುಲದ ನಾಶವನ್ನೇ ಸಾರುವ ಉಗ್ರ ಪಂತವಾದಗಳು ಮತ್ತಶ್ಟು ಬೀತಿಯನ್ನು ಹುಟ್ಟಿಸುತ್ತಾ ಸಮಾಜಕ್ಕೆ ಮಾರಕವಾಗಿದೆ. ಇಂದು ದಾರ‍್ಮಿಕ ಉಗ್ರವಾದ ಜಗತ್ತಿಗೆ ಮಾರಕವಾಗಿರುವ ಸಂಗತಿಯಾಗಿದೆ. ತಮ್ಮ ದರ‍್ಮದ ನೀತಿಯನ್ನು ಇಲ್ಲಿ ಅನುಯಾಯಿಗಳ ಮೇಲೆ ಹೇರಲಾಗುತ್ತದೆ. ಇತರ ದರ‍್ಮದವರನ್ನು ಕೊಂದರೂ ಇಲ್ಲಿ ಸ್ವರ‍್ಗ ಪ್ರಾಪ್ತಿಯಂತೆ. ದರ‍್ಮ ವಿರೋದಿಗಳ ಕೊಂದು ಅತವಾ ಈ ಯತ್ನದಲ್ಲಿ ವೀರಮರಣ (!!??) ಹೊಂದಿದಲ್ಲಿ ಅಪ್ಸರೆಗಿಂತಲೂ ಸುಂದರ ಕನ್ಯೆಯರು ಸ್ವರ‍್ಗದಲ್ಲಿ ಜೊತೆಗೂಡುವರೆಂದು ಹಿಂಸೆಗೆ ಪ್ರೇರೇಪಿಸುವ ಸಿದ್ದಾಂತ!! ಇಂತಹ ನೀತಿಯನ್ನು ಕಂಡಿಸುವುದೂ ಸಹಾ ಮನುಕುಲಕ್ಕೆ ಮಾಡುವ ಉಪಕಾರವೇ ಅಲ್ಲವೇ? ಆದರೆ ಈಗ ಆಗುತ್ತಿರುವುದಾದರೂ ಏನು? ಒಂದು ದರ‍್ಮದ ನ್ಯೂನ್ಯತೆಗಳನ್ನು ಎತ್ತಿ ತೋರಿಸಿ, ಅಂದ ಆಚರಣೆ ಸಂಪ್ರದಾಯಗಳನ್ನು ವಿರೋದಿಸಿದರೆ ಬುದ್ದಿಜೀವಿಗಳು, ವೈಚಾರಿಕ ಸಾಹಿತ್ಯ ಎಂಬ ಹಣೆ ಪಟ್ಟಿ ದೊರೆತರೆ ಅದೇ ಮತ್ತೊಂದು ದರ‍್ಮದ ಉಗ್ರ, ಹಿಂಸಾ ನೀತಿಯನ್ನು ವಿರೋದಿಸುವ ದೈರ‍್ಯವನ್ನು ತೋರುವವರಿಗೆ ದೊರೆಯುವ ಹಣೆ ಪಟ್ಟಿ ಬಲಪಂತೀಯ ಲೇಕಕ ಅತವಾ ಕೋಮುವಾದ ಪ್ರಚೋದನಾ ಸಾಹಿತ್ಯ ಎಂಬುದು ಎಶ್ಟರ ಮಟ್ಟಿಗೆ ಸರಿ? ವೈಚಾರಿಕ ನಿಲುವಿಗೆ ದರ‍್ಮ ಅತವಾ ಜಾತಿಯ ಆದಾರವಿಹುದೇ? ನಿಜವಾಗಿಯೂ ಯೋಚಿಸತಕ್ಕ ವಿಚಾರವೇ ಅಲ್ಲವೇ ಇದು!

ಒಬ್ಬ ಲೇಕಕ, ಚಿಂತಕ ಅತವಾ ಯಾವುದೇ ಸಾಮಾನ್ಯ ವ್ಯಕ್ತಿಯೇ ಆಗಲೀ ತನ್ನದೇ ಜಾತಿಯ ಅತವಾ ತನ್ನದೇ ದರ‍್ಮದ ನೀತಿ ನಿರೂಪಣೆಗಳನ್ನು ಕಂಡಿಸಿ ಅದರ ವಿಮುಕವಾಗಿ ನಡೆದಾಗ ಸಹಜವಾಗಿಯೇ ಆತನ ಚಿಂತನೆಗಳು ಹೆಚ್ಚು ಪ್ರಚಲಿತವಾಗುತ್ತವೆ. ಆದರೆ ಯಾವುದೇ ಪ್ರಕಾರದ ವೈಚಾರಿಕ ಸಾಹಿತ್ಯ ಎಲ್ಲಾ ದರ‍್ಮಗಳಿಗೂ ಅತೀತವಾಗಿರುತ್ತದೆ ಎಂಬುದನ್ನು ಅರ‍್ತ ಮಾಡಿಕೊಳ್ಳಬೇಕಾಗಿದೆ. ಮನುಕುಲದ ಉನ್ನತಿಗೆ, ಮಾನವ ಪ್ರೀತಿಗೆ ದರ‍್ಮನಿಶ್ಟೆಯ ಬಣ್ಣ ಬಳಿಯಬಾರದು. ಮೌಡ್ಯ, ಕಂದಾಚಾರಗಳಿರಬಹುದು, ಜಿಹಾದ್ ಉಗ್ರವಾದಗಳಿರಬಹುದು – ಇಂತಹ ನೀತಿಗಳೆಲ್ಲವೂ ಸಮಾಜಕ್ಕೆ ಅಂಟಿರುವ ಕೊಳಕುಗಳಾಗಿವೆ. ಆರೋಗ್ಯಕರವಾದ, ಚಿಂತನೆಗೆ ಪ್ರೇರೇಪಿಸುವ ಸಾಹಿತ್ಯ ಬಂದಲ್ಲಿ ಅದನ್ನು ಇನ್ನೊಂದು ದ್ರುಶ್ಟಿಯಿಂದ ಎಂದಿಗೂ ನೋಡಬಾರದು. ಇಶ್ಟಕ್ಕೂ ಒಬ್ಬ ಲೇಕಕ ರಚಿಸುವ ಸಾಹಿತ್ಯವು ಅವರ ವ್ಯಕ್ತಿತ್ವ, ಅನುಬವಗಳು, ಯೋಚನಾ ಲಹರಿಗಳು, ನಿಲುವುಗಳು – ಇವುಗಳ ಆದಾರದ ಮೇಲೆ ಒಂದು ಕತಾವಸ್ತುವಿನ ಸುತ್ತಾ ಹೆಣೆಯಲ್ಪಟ್ಟಿರುತ್ತವೆ. ನಮ್ಮದೇ ತರ‍್ಕವನ್ನು ಬುದ್ದಿಯನ್ನು ಅನುಬವದ ಸಾಣೆಗೆ ಹಿಡಿದು ತೂಗಿ ನೋಡಿ ಸ್ವೀಕರಿಸಲರ‍್ಹವಾದ ಅಂಶಗಳನ್ನು ಸ್ವೀಕರಿಸಿ ಉಳಿದುವನ್ನು ತ್ಯಜಿಸಲು ಯಾವ ಅಡ್ಡಿಯೂ ಇಲ್ಲವಲ್ಲ.

ಹಲವಾರು ವೈಚಾರಿಕ ಚಿಂತನೆಗಳು ತುಂಬಿದ ಅರ‍್ತಪೂರ‍್ಣ ಸಾಹಿತ್ಯವನ್ನು ಕನ್ನಡಕ್ಕೆ ಕೊಟ್ಟಿರುವ ಡಾ. ಯು.ಆರ್‍.ಅನಂತಮೂರ‍್ತಿ ಯವರು ಈ ಜಗತ್ತನ್ನು ಅಗಲಿ ತೆರಳಿದ್ದಾರೆ. ಇವರ ಸಾಹಿತ್ಯದ ವೈಚಾರಿಕ ವಸ್ತುವಿನದ್ದೇ ಒಂದು ತೂಕವಾದರೆ ಕತೆ ಕಾದಂಬರಿಗಳ ಶೈಲಿ, ಪಾತ್ರಗಳ ತೂಕ, ಅದ್ಬುತ ವರ‍್ಣನೆಗಳದ್ದೇ ಮತ್ತೊಂದು ತೂಕ. ಇವರ ಅಗಲಿಕೆ ನಿಜಕ್ಕೂ ಕನ್ನಡ ಸಾಹಿತ್ಯಕ್ಕೆ ನಶ್ಟವೇ ಸರಿ. ದೇವಸ್ತಾನದಲ್ಲಿ ಕೊಟ್ಟ ಪ್ರಸಾದದಂತೆ ಇವರು ತಮ್ಮ ಜೀವನವನ್ನು ಸ್ವೀಕರಿಸಿ ಆರೋಗ್ಯಕರ ವಿಮರ‍್ಶೆ, ಚಿಂತನೆಗಳನ್ನು ಪಸರಿಸಿ ವಿದಿಯಲ್ಲಿ ಲೀನವಾಗಿದ್ದಾರೆ. ಆದರೆ ಅವರ ಸಾಹಿತ್ಯ ಮಾತ್ರ ಮನುಕುಲದ ಅಸ್ತಿತ್ವ ಈ ಸ್ರುಶ್ಟಿಯಲ್ಲಿ ಇರುವವರೆಗೂ ನಿಸ್ಸಂದೇಹವಾಗಿ ಉಳಿಯುವುದು.

ಮರಳಿ ಬಾರದ ಲೋಕಕ್ಕೆ ತೆರಳಿದ ಡಾ. ಯು.ಆರ್‍. ಅನಂತಮೂರ‍್ತಿ ಯವರಿಗೆ ಈ ಕವನ ಅರ‍್ಪಣೆ.

ಹೀಗೊಂದು ಕನಸು

ಕಂದಾಚಾರಗಳನ್ನು ಚಿತೆಗೆ ಹಾಕಿ,
ಹೊತ್ತುರಿಯಲಿ ಚಿತಾ ಬಸ್ಮ;
ಅನರ‍್ತ ಆಚರಣೆಗಳಿಗೆ ಅಶ್ಟ ದಿಗ್ಬಂದನ,
ಬೆಳಗಲಿ ಜ್ನಾನದೀವಿಗೆ ಮನದ ತುಂಬ.

ಹಳಸು ಚಿಂತನೆಗಳನ್ನು ಹೊಸಕಿ ಹಾಕಿ,
ಹಬ್ಬಿ ಬರಲಿ ತುಂಬು ಪ್ರೀತಿ ನಿತ್ಯ ನಿರಂತರ;
ಮೇಲು-ಕೀಳೆಂಬ ಬಾವಕ್ಕೆ ಬಿಡಿ ರಾಮ ಬಾಣ,
ಮೂಳೆ-ಮಾಂಸದ ಮಾನವರು ನಾವು ಇದೆಂತಹ ಅಂತರ.

ಮಡಿ-ಮೈಲಿಗೆ ಮುಳ್ಳಾಗಿದೆ ಮನುಕುಲಕೆ,
ನಡೆಯಲಿ ಇನ್ನು ಅಂತ್ಯ ಸಂಸ್ಕಾರ;
ಮನ-ಮನಗಳಲ್ಲಿ ಮೊಳೆಯಲಿ ಪ್ರೀತಿ,
ಮಾನವೀಯತೆಗೆ ಹಾಕೋಣವಿನ್ನು ಜೈಕಾರ.

ಇಂದಿದ್ದು ನಾಳೆ ಹೋಗುವ ಬದುಕಾಗಲಿ ಸೊಗಸು,
ಮನದಲ್ಲಿ ಪ್ರೀತಿಯ ದಾರೆಯ ನೀ ಹರಿಸು;
ಕಾಣದ ಕೈಗಳ ಹಿಡಿತದಿಂದ ಮುಕ್ತವಾಗಲಿ ಮನಸು,
ನನಸಾಗಲಿ ಮಾನವ ಪ್ರೀತಿ ಬರಿತ ಕನಸು.

( ಚಿತ್ರಸೆಲೆ: pisciculturaglobal.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

ಅನಿಸಿಕೆ ಬರೆಯಿರಿ:

%d bloggers like this: