‘ಚಿತ್ರ’ ಕಂಡು ಹುಟ್ಟಿದ ಪದಗಳು

– ರತೀಶ ರತ್ನಾಕರ.

navilu

(ಈ ಮೇಲಿನ ಚಿತ್ರ ಪ್ರೇಮ ಯಶವಂತ್ ಅವರ ಕೈಚಳಕ. ಚಿತ್ರ ಬರೆದ ಕೆಲವೇ ಹೊತ್ತಿನಲ್ಲಿ ಇದನ್ನು ಹಂಚಿಕೊಂಡರು. ಆ ಚಿತ್ರವನ್ನು ನೋಡಿ ಈ ಕೆಳಗಿನ ಸಾಲುಗಳು ಹುಟ್ಟಿದವು. ಸಾಲುಗಳು ಚೆನ್ನಾಗಿವೆ ಎನಿಸಿದರೆ ಅದಕ್ಕೆ ಆ ಚಿತ್ರವೇ ಕಾರಣ, ಇನ್ನು ಸಾಲುಗಳು ಚೆನ್ನಾಗಿಲ್ಲವೆನಿಸಿದರೆ, ಅದನ್ನು ಸರಿಯಾಗಿ ಮೂಡಿಸಲಾಗದ ನನ್ನ ಅಳವಿನ ಕೊರತೆಯೇ ಕಾರಣ.)

ಗರಿಯ ಚೆಲುವಿಗೆ ನವಿಲೇ ಮಾರುಹೋಗಿದೆ
ಕುಂಚದ ಕಲೆಗೆ ಕಣ್ಣು ಸೂರೆಗೊಂಡಿದೆ
ಗೆರೆಗಳ ನಡುವೆ ತುಂಬಿದ ಬಣ್ಣದ ಮಾಯೆಯೋ
ಇದು, ಬೆರಳನಾಡಿಸಿ ತೀಡಿದ ಕೈಗಳ ಚಳಕವೋ|

ಅನಿಸು ಮನಸುಗಳು ಸೇರಿ ಎದೆಯೊಳೆಗೆ ಬಸಿರಾಯ್ತು
ಬೆರೆಳದನು ಹೆರಲು ತಿಟ್ಟಗಳು ಹುಟ್ಟಾಯ್ತು
ಎದೆಯೊಳಗೆ ಹೊಳೆದದ್ದು ಹಾಳೆಯಲಿ ಬೆಳಗಿತು
ಈ ಬಣ್ಣದಾಟದ ಸೊಬಗ ಹಾಡಿ ಬಣ್ಣಿಸಲೆನಿತು?

ಬಣ್ಣ ಬಿಚ್ಚಿಟ್ಟು ಬಿಳಿಯ ಬೆತ್ತಲು ಮಾಡಿದರು
ಗೀಟನೆಳೆದು ಹೊಳೆವ ತಿಟ್ಟ ಕಟ್ಟಿದರು
ಕಣ್ಣಿಗಿಂದು ಹಬ್ಬ, ಮನಕೆ ಹೋಳಿಗೆ ಊಟ
ಕೊರೆದ ಕೈಗಳಿಗೆ ಕಟ್ಟಿ ಹೊನ್ನ ಗಟ್ಟಿಯ ಪಟ್ಟ|

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: