ಕಾಪಿಬೀಜದ ಬಿತ್ತನೆ ಮತ್ತು ಆರೈಕೆ

– ರತೀಶ ರತ್ನಾಕರ.

nursery2

ಚುಮುಚುಮು ಚಳಿಯ ಹೊತ್ತಿಗೆ ಬಿಸಿ ಬಿಸಿ ಕಾಪಿಯನ್ನು ಹೀರುವಾಗ, ಇಲ್ಲವೇ ಒತ್ತಡಗಳ ನಡುವೆ ಮನಸ್ಸಿನ ಉಲ್ಲಾಸಕ್ಕೆಂದು ಕಾಪಿ ಗುಟುಕನ್ನು ಕುಡಿಯುವಾಗ, ಕಾಪಿಯು ಕಾಪಿಯಾಗಲು ಮಾಡಬೇಕಾದ ಕೆಲಸಗಳೆಶ್ಟು ಎಂಬ ಅರಿವು ಇರುವುದಿಲ್ಲ. ಇದು ಕಾಪಿಗೆ ಮಾತ್ರವಲ್ಲ, ನಾವು ತಿನ್ನುವ ಬೇಳೆ-ಕಾಳುಗಳು, ಇತರೆ ತಿನಿಸುಗಳು ಬೆಳೆದು ಬಂದ ಬಗೆ ಹೆಚ್ಚಾಗಿ ನಮಗೆ ತಿಳಿದಿರುವುದಿಲ್ಲ. ಕಾಪಿ ಬೆಳೆಯುವ ಕುಟುಂಬದಿಂದಲೇ ಬೆಳೆದು, ಕಾಪಿ ಬೆಳೆಯುವ ಬಗೆಯನ್ನು ತೀರಾ ಹತ್ತಿರದಿಂದ ಕಂಡಿರುವುದರಿಂದ ಇದರ ಬೇಸಾಯದ ಅರಿವನ್ನು ಆದಶ್ಟು ಹಂಚಿಕೊಳ್ಳುವ ನಿಟ್ಟಿನಲ್ಲಿ ಈ ಸರಣಿ ಬರಹ ಮಾಡುತ್ತಿರುವೆ. ಹಿಂದಿನ ಬರಹಗಳಲ್ಲಿ ಕಾಪಿಯ ಹುಟ್ಟು ಮತ್ತು ಹರವು ಹಾಗು ಅರಾಬಿಕಾ ಮತ್ತು ರೊಬಸ್ಟಾ ಬೆಳೆಗಳ ನಡುವಿನ ಬೇರ‍್ಮೆಯನ್ನು ತಿಳಿದೆವು. ಈ ಬರಹದಲ್ಲಿ ಕಾಪಿಯನ್ನು ಬೆಳೆಯುವ ಮೊದಲ ಹಂತವಾದ ಕಾಪಿ ಗಿಡಮನೆ (Nursery) ಮಾಡುವುದರ ಕುರಿತು ಕೊಂಚ ಅರಿಯೋಣ.

ಬೀಜಗಳ ಆಯ್ಕೆ:
ಕಾಪಿಯ ಮುಂದಿನ ತಲೆಮಾರಿಗೆ ಬೇಕಾದ ಕಾಪಿ ಬೀಜವನ್ನು ಆಯ್ದುಕೊಳ್ಳುವುದು ಒಂದು ಅರಿದಾದ ಕೆಲಸ. ತೋಟದ ನಡುವೆ ಇರುವ ಆರೋಗ್ಯಕರವಾದ, ಒಳ್ಳೆಯ ಇಳುವರಿಯನ್ನು ಕೊಡುತ್ತಿರುವ ಕಾಪಿ ಗಿಡದಿಂದ ತುಂಬಾನೇ ಚೆನ್ನಾಗಿರುವ ಹಣ್ಣುಗಳನ್ನು ಆಯ್ದುಕೊಳ್ಳಬೇಕು. ಹಣ್ಣುಗಳು ದೊಡ್ಡದಿದ್ದಶ್ಟು ಒಳ್ಳೆಯದು. ಮೊದಲೇ ತಿಳಿದಿರುವಂತೆ ನವೆಂಬರ್ ಕೊನೆಯ ವಾರದಿಂದ ಜನವರಿ ಮೊದಲ ವಾರದವರೆಗು ಕಾಪಿ ಹಣ್ಣಿನ ಕಾಲ. ಈ ಹೊತ್ತಿನಲ್ಲಿ, ಗಿಡದಲ್ಲಿರುವ ಕಾಪಿಯು ಚೆನ್ನಾಗಿ ಹಣ್ಣಾದ ಕೂಡಲೇ ಹಣ್ಣುಗಳನ್ನು ಕಿತ್ತುಕೊಂಡಿರಬೇಕು.

ಕಿತ್ತ ಕಾಪಿ ಹಣ್ಣಿನ ಸಿಪ್ಪೆಗಳನ್ನುKaapi2 ಬಿಡಿಸಿ, ಕಾಪಿ ಬೀಜಗಳನ್ನು ಆರಿಸಬೇಕು. ನೆನಪಿರಲಿ, ಒಂದು ಕಾಪಿ ಹಣ್ಣಿನಲ್ಲಿ ಎರೆಡು ಕಾಪಿ ಬೀಜಗಳಿರುತ್ತವೆ. ಒಂದು ವೇಳೆ ಕಾಪಿ ಹಣ್ಣಿನಲ್ಲಿ ಒಂದೇ ಬೀಜವಿದ್ದರೆ ಇಲ್ಲವೇ ಒಂದು ಬೀಜ ದೊಡ್ಡದಾಗಿದ್ದು ಇನ್ನೊಂದು ತುಂಬಾ ಚಿಕ್ಕದಾಗಿದ್ದರೆ ಅಂತಹ ಬೀಜಗಳನ್ನು ಮೊಳಕೆ ಬರಿಸಲು ಆಯ್ದುಕೊಳ್ಳಬಾರದು. ಹೀಗೆ ಸಿಪ್ಪೆ ಬಿಡಿಸಿದ ಬೀಜಗಳ ಮೇಲ್ಮೈನಲ್ಲಿ ಲೋಳೆಯು ಇರುತ್ತದೆ, ಈ ಲೋಳೆಯಿಂದಾಗಿ ಬೀಜಗಳು ಒಂದಕ್ಕೊಂದು ಅಂಟಿಕೊಳ್ಳುವ ಸಾದ್ಯತೆ ಹೆಚ್ಚು,  ಅಂಟಿಕೊಂಡ ಅವನ್ನು ಬಿಡಿಸಿದಾಗ ಬೀಜಗಳಿಗೆ ಗಾಯವಾಗಿ ಹಾಳಾಗುವ ಸಾದ್ಯತೆ ಹೆಚ್ಚು. ಅದಕ್ಕಾಗಿ ಕೆಲವರು ಕಾಪಿ ಹಣ್ಣನ್ನು ಬಿಡಿಸಿದ ಕೂಡಲೇ ತೊಳೆಯುತ್ತಾರೆ ಇಲ್ಲವೇ ಬೂದಿಯನ್ನು ಬೀಜಗಳಿಗೆ ಹಾಕಿ ಕಲಿಸುತ್ತಾರೆ. ಬೂದಿಯನ್ನು ಬಳಸುವುದರಿಂದ ಇನ್ನೊಂದು ಉಪಕಾರವೆಂದರೆ, ಬೂದಿಯು ಬೀಜದ ಸುತ್ತಲೂ ಅಂಟಿಕೊಳ್ಳುವುದರಿಂದ ಇರುವೆ ಇಲ್ಲವೇ ಮತ್ತಿತರ ಕೀಟಗಳಿಂದ ಬೀಜಗಳನ್ನು ಕಾಪಾಡಿಕೊಳ್ಳಬಹುದು. ಇದೇ ಕೆಲಸ ಮಾಡುವಂತಹ ಯಾವುದಾದರು ಸಾಮಾಗ್ರಿಗಳು ಮಾರುಕಟ್ಟೆಯಲ್ಲಿ ಸಿಕ್ಕರೆ ಅವನ್ನು ಕೂಡ ಬಳಸಬಹುದು. ಬೂದಿಯನ್ನು ಬಳಸುವುದು ಕೊಂಚ ಹಳೆಯ ಪದ್ದತಿ, ಬೂದಿಯನ್ನು ಬೀಜಗಳ ಜೊತೆ ಕಲೆಸುವಾಗ ಬೀಜದ ಮೇಲಿನ ಸಿಪ್ಪೆಗೆ ಗಾಯವಾಗುವ ಸಾದ್ಯತೆಗಳೂ ಇವೆ.

ಹೀಗೆ ಅಣಿಗೊಳಿಸಿದ ಬೀಜಗಳನ್ನು ಬಲೆಯಂತಿರುವ ತಟ್ಟೆಗಳು ಇಲ್ಲವೇ ಗೋಣಿಚೀಲದ ಮೇಲೆ ಹರಡಿ ನೆರಳಿನಲ್ಲಿಟ್ಟು ಎರೆಡರಿಂದ ಮೂರು ದಿನಗಳ ಕಾಲ ಆರಿಸಬೇಕು. ಹರಡಿರುವ ಬೀಜಗಳ ನಡುವೆ ಚೆನ್ನಾಗಿ ಗಾಳಿ ಓಡಾಡುವಂತಿರಬೇಕು. ಬೀಜದಲ್ಲಿರುವ ಪಸೆ (moisture) 10% ಗಿಂತ ಕಡಿಮೆ ಆಗದಂತೆ ಎಚ್ಚರ ವಹಿಸಬೇಕು. ಬಿಸಿಲಿನಲ್ಲಿ ಇಲ್ಲವೇ ಹೆಚ್ಚು ದಿನಗಳ ಕಾಲ ಒಣಗಿಸಿದರೆ ಪಸೆಯುವ್ 10% ಗಿಂತ ಕಡಿಮೆಯಾಗಬಹುದು. ಆರಿದ ಬೀಜಗಳಿಂದ ಗಾಯಗೊಂಡ ಇಲ್ಲವೇ ಚೆನ್ನಾಗಿಲ್ಲದ ಬೀಜಗಳನ್ನು ಆರಿಸಿ ತೆಗೆಯಬೇಕು. ಈಗ ನಿಮ್ಮ ಮುಂದಿನ ತಲೆಮಾರಿನ ಕಾಪಿಗಿಡಗಳಿಗೆ ಬೇಕಾದ ಬೀಜಗಳು ಸಿದ್ದವಾದಂತೆ. ಹೀಗೆ ಸಿದ್ದವಾದ ಬೀಜಗಳನ್ನು ಆದಶ್ಟು ಬೇಗ ಮೊಳಕೆಗಾಗಿ ನೆಡಬೇಕು ಇಲ್ಲವಾದರೆ ಮೊಳಕೆ ಬರುವ ಸಾದ್ಯತೆಗಳು ಕಡಿಮೆ. ಬೀಜಗಳನ್ನು ಆದಶ್ಟು ಕಡಿಮೆ ಬಿಸುಪು ಮತ್ತು ಹೆಚ್ಚು ಪಸೆಯಿರುವ ಜಾಗದಲ್ಲಿ ಕಾಪಿಟ್ಟುಕೊಳ್ಳಬೇಕು.

ಮೊಳಕೆಗೆ ಬೀಜ ಬಿತ್ತನೆ:
ಬೀಜಗಳನ್ನು ಮೊಳಕೆಗೆ ಹಾಕುವ ಮೊದಲು ಎಶ್ಟು ಗಿಡಗಳು ತಮಗೆ ಬೇಕಾಗಬಹುದು ಎಂಬ ಲೆಕ್ಕಾಚಾರವನ್ನು ಮಾಡಿಟ್ಟುಕೊಳ್ಳಬೇಕು. ಒಂದು ಕೆ.ಜಿ. ಕಾಪಿ ಬೀಜದಲ್ಲಿ ಸುಮಾರು 3000ದಿಂದ 4000 ಬೀಜಗಳು ಸಿಗುತ್ತವೆ. ಇವುಗಳಲ್ಲಿ 75% ನಶ್ಟು ಬೀಜಗಳು ಮೊಳಕೆ ಬರಬಹುದು ಎಂಬ ಲೆಕ್ಕಾಚಾರವಿದೆ. ತಮಗೆ ಎಶ್ಟು ಕಾಪಿಗಿಡಗಳು ಬೇಕಾಗಬಹುದು ಎಂದು ಎಣಿಸಿಕೊಂಡು ಮೊಳಕೆಗೆ ಅಶ್ಟು ಬೀಜಗಳನ್ನು ಅಣಿಗೊಳಿಸಬೇಕು.

ಮೊಳಕೆಗೆ ಹಾಕಲು ಮೊದಲು ಮಣ್ಣಿನ ಹಾಸಿಗೆಯನ್ನು ಅಣಿಮಾಡಬೇಕು. ಮಣ್ಣಿನ ಹಾಸಿಗೆಯು ಸುಮಾರು 1.2 ಮೀಟರ್ ಅಗಲವಾಗಿರಬೇಕು ಮತ್ತು ಸಾಕಶ್ಟು ಉದ್ದ ಅಂದರೆ ಸುಮಾರು 6 ಮೀಟರ್ ನಶ್ಟು ಇರಬೇಕು. ಮಣ್ಣಿನ ಹಾಸಿಗೆಯ ಎತ್ತರ ನೆಲದಿಂದ ಸುಮಾರು 15 ಸೆ.ಮೀ ನಶ್ಟಿರಬೇಕು. ಹಾಸಿಗೆಯಲ್ಲಿರುವ ಮಣ್ಣನ್ನು ಚೆನ್ನಾಗಿ ಅಗೆದು ಸಡಿಲಗೊಳಿಸರಬೇಕು, ಸಾಕಶ್ಟು ಸಾರವಿರುವ ಕಾಡಿನ ಮಣ್ಣನ್ನು ತಂದು ಇದರ ಜೊತೆ ಸೇರಿಸಿದರೆ ಒಳ್ಳೆಯದು. ಬೀಜಗಳಿಗೆ ಬೇಕಾದ ಗೊಬ್ಬರಕ್ಕಾಗಿ ಸಗಣಿ ಗೊಬ್ಬರವನ್ನು ಮಣ್ಣಿನ ಜೊತೆ ಬೆರೆಸಬೇಕು. ಇದರ ಜೊತೆಗೆ ಬೀಜದ ಮೊಳಕೆಗೆ ನೆರವಾಗುವಂತಹ ಪಾಸ್ಪೇಟ್ ಗೊಬ್ಬರ (ಸಾವಯವ ಇಲ್ಲವೇ ರಾಸಾಯನಿಕ ಎಂಬುದು ಬೆಳೆಗಾರರಿಗೆ ಬಿಟ್ಟದ್ದು) ವನ್ನು ಬಳಸಬೇಕು. ಸುಮಾರು 1 ಮೀ. ಉದ್ದದ ಜಾಗಕ್ಕೆ 100 ಗ್ರಾಂ ಪಾಸ್ಪೇಟ್ ಗೊಬ್ಬರ ಬೇಕಾಗುತ್ತದೆ. ಕೇವಲ ಮಣ್ಣು ಮತ್ತು ಗೊಬ್ಬರವನ್ನು ಕಲೆಸಿದಾಗ ಮಣ್ಣೇನಾದರು ಕೊಂಚ ಗಟ್ಟಿಯಾದರೆ ಇಲ್ಲವೇ ಅಂಟು ಅಂಟಾದರೆ ಮರಳನ್ನು ಸೇರಿಸಿ ಕಲೆಸಿದರೆ ಒಳ್ಳೆಯದು ಆಗ ಮಣ್ಣು ಸಡಿಲವಾಗಿ ಮೊಳಕೆ ಬರಲು ನೆರವಾಗುತ್ತದೆ. ಒಂದಕ್ಕಿಂತ ಹೆಚ್ಚಿನ ಮಣ್ಣಿನ ಹಾಸಿಗೆಯನ್ನು ಮಾಡುವುದಾದರೆ ಒಂದು ಹಾಸಿಗೆಯಿಂದ ಇನ್ನೊಂದರ ನಡುವೆ ಕಡಿಮೆ ಎಂದರೂ 60 ಸೆ.ಮೀ ಜಾಗವಿರಬೇಕು.

ಹೀಗೆ ಸಿದ್ದವಾದ ಮಣ್ಣಿನ ಹಾಸಿಗೆಯ ಮೇಲೆ ಈಗ ಬೀಜಗಳನ್ನು ನೆಡುವ ಕೆಲಸ. ಇದನ್ನು ಈ ಕೆಳಗಿನಂತೆ ಮಾಡಬಹುದು

  1. ಮೊಳಕೆಗೆ ಬೀಜ ನೆಡುವ ಮೊದಲು ಮಣ್ಣಿನ ಹಾಸಿಗೆಗೆ ಚೆನ್ನಾಗಿ ನೀರು ಹಾಕಬೇಕು.
  2. ಒಂದು ಚೂಪಾದ ಕಡ್ದಿಯಿಂದ ಮಣ್ಣಿನ ಹಾಸಿಗೆಯ ಮೇಲೆ 12 ಮಿ.ಮೀ ಆಳದ ಸಾಲುಗುಂಡಿಗಳನ್ನು ಮಾಡಬೇಕು. ಒಂದು ಸಾಲಿನ ಎರೆಡು ಗುಂಡಿಗಳ ನಡುವೆ 25 ಮಿ.ಮೀ ಜಾಗವಿರಬೇಕು.
  3. ಮಣ್ಣಿನ ಹಾಸಿಗೆಯ ಒಂದು ಸಾಲಿನಿಂದ ಇನ್ನೊಂದು ಸಾಲಿಗೆ ಸುಮಾರು 100 ಮಿ.ಮೀ ದೂರವಿರಬೇಕು.
  4. ಆರಿಸಿದ ಬೀಜಗಳನ್ನು 12 ಮಿ.ಮೀ ಗುಂಡಿಯೊಳಗೆ ಮೆದುವಾಗಿ ಊರಬೇಕು. ನೆನಪಿರಲಿ, ಬೀಜವು ಹೆಚ್ಚು ಆಳಕ್ಕೆ ಹೋಗಬಾರದು.
  5. ಕಾಪಿ ಬೀಜದ ಆಕಾರದಲ್ಲಿ ಒಂದು ಕಡೆ ಮಟ್ಟವಾಗಿದ್ದು ಇನ್ನೊಂದು ಕಡೆ ಅರೆ ಮೊಟ್ಟೆಯಾಕಾರದಲ್ಲಿರುತ್ತದೆ. ಮಟ್ಟವಾಗಿರುವ ಕಡೆಯನ್ನು ನೆಲಕ್ಕೆ ಮುಕಮಾಡಿ ಬೀಜವನ್ನು ಬಿತ್ತಬೇಕು.
  6. ಮಣ್ಣಿನ ಹಾಸಿಗೆಯಲ್ಲಿರುವ ಪಸೆಯು ಆರದಂತೆ ಮತ್ತು ಬಿಸಿಲಿನಿಂದ ಬಿತ್ತನೆಯನ್ನು ಕಾಪಾಡಲು ಒಣಗಿದ ಹುಲ್ಲು ಇಲ್ಲವೇ ಅಡಿಕೆ ಸೋಗೆಯನ್ನು ಈ ಹಾಸಿಗೆಯ ಮೇಲೆ ತೆಳುವಾಗಿ ಹರಡಬೇಕು. ಹೆಚ್ಚಿನ ಬಿಸಿಲು ಇಲ್ಲವೇ ಮಳೆಯಿದ್ದಲ್ಲಿ ಬಿತ್ತನೆಯನ್ನು ಕಾಪಾಡಲು ಮಣ್ಣಿನ ಹಾಸಿಗೆಯ ಮೇಲೆ ಸುಮಾರು ಒಂದು ಮೀಟರ್ ಎತ್ತರದ ಚಪ್ಪರವನ್ನು ಹಾಕಿ ಪ್ಲಾಸ್ಟಿಕ್ ಇಲ್ಲವೇ ಸೊಪ್ಪಿನಿಂದ ಮುಚ್ಚಬೇಕು. ಆದರೆ ಸಾಕಶ್ಟು ಗಾಳಿ ಒಡಾಡಲು ಜಾಗವಿರಬೇಕು.
  7. ಮಣ್ಣಿನ ಹಾಸಿಗೆಗೆ ಪ್ರತಿ ದಿನ ಬೆಳಗ್ಗೆ ಹಾಗು ಸಂಜೆ ನೀರುಣಿಸಬೇಕು. ನೀರುಣಿಸುವಾಗ ಮಣ್ಣು ಸರಿದು ಬೀಜವು ಮಣ್ಣಿನಿಂದ ಹೊರಗೆ ಬಾರದಂತೆ ಎಚ್ಚರವಹಿಸಬೇಕು.
  8. ಬಿತ್ತನೆಯ ಆರೈಕೆಯ ಮೇಲೆ ನಿಗಾವಹಿಸಬೇಕು. ಬಿತ್ತನೆಗೆ ತೊಂದರೆ ಕೊಡುವಂತಹ ಕೀಟಗಳು, ರೋಗ ತರುವಂತಹ ಗಿಡಗಳು ಮತ್ತು ಕಳೆಗಿಡಗಳನ್ನು ತೆಗೆಯುತ್ತಿರಬೇಕು.

kaapi1

ಬಿತ್ತಿದ ಬೀಜವು ಹೇಗೆ ಮೊಳಕೆ ಒಡೆಯುತ್ತದೆ ಎಂದು ವಿವರವಾಗಿ ನಾವು ‘ಬಿತ್ತಿದ ಬೀಜ ಮೊಳಕೆಯಾದೀತು ಹೇಗೆ?‘ ಬರಹದಲ್ಲಿ  ತಿಳಿಯಬಹುದು. ಬಿತ್ತಿದ ನಾಲ್ಕು ವಾರಗಳಲ್ಲಿ ಮೊದಲು ತಾಯಿಬೇರು (Radicle) ಬರುತ್ತದೆ, ಬಳಿಕ ಎರೆಡು ಮೊಳಕೆ ಎಲೆಗಳು (Cotyledon) ಮೂಡುತ್ತವೆ. ಈ ಮೊಳಕೆ ಎಲೆಗಳು ಮೊಟ್ಟೆಯಾಕಾರದಲ್ಲಿ ಇದ್ದು ಸುಮಾರು 20 ರಿಂದ 50 ಮಿ.ಮೀ ಅಡ್ಡಗಲವನ್ನು ಹೊಂದಿರುತ್ತದೆ. ಸುಮಾರು ಐದರಿಂದ ಆರನೇ ವಾರದಲ್ಲಿ ಮೊದಲ ಕುಡಿ ಎಲೆಗಳು (Primary leaves) ಮೂಡುತ್ತವೆ. ಇವು ಮೂಡಿದ ಬಳಿಕ ಮೊಳಕೆ ಎಲೆಗಳು ಉದುರಿ ಬೀಳುತ್ತವೆ. ಈ ಹಂತದಲ್ಲಿ ಕುಡಿ ಎಲೆಗಳು ‘ಬೆಳಕಿನ ಒಂದುಗೆ’ (Photosynthesis) ನಡೆಸಿ ಸಾಕಶ್ಟು ಊಟವನ್ನು ಗಿಡಕ್ಕೆ ನೀಡುತ್ತಾ ಹೋಗುತ್ತದೆ. ಆಗ ಗಿಡದ ಬೇರುಗಳು ಬೆಳೆದು ಗಟ್ಟಿಯಾಗುತ್ತಾ ಹೋಗುತ್ತವೆ.

kaapi3ಮಣ್ಣಿನ ಹಾಸಿಗೆಗೆ ಹರಡಿದ್ದ ಹುಲ್ಲಿನ ಮುಚ್ಚುಗೆಯನ್ನು ಬೀಜವು ಮೊಳಕೆಯೊಡದಂತೆ ಹಂತ ಹಂತವಾಗಿ ತೆಗೆಯುತ್ತಾ ಹೋಗಬೇಕಾಗುತ್ತದೆ. ಆಗ ಎಳೆಯ ಮೊಳಕೆಗೆ ಸಾಕಶ್ಟು ಗಾಳಿ ಮತ್ತು ಬೆಳಕು ಸಿಕ್ಕಿ ಬೆಳವಣಿಗೆಗೆ ನೆರವಾಗುತ್ತದೆ. ಸುಮಾರು 40 ರಿಂದ 50 ದಿನದಲ್ಲಿ ಬೀಜವು ಮೊಳಕೆಯೊಡೆದು 200 – 300 ಮಿ.ಮೀ ಬೆಳೆಯುತ್ತದೆ. ಈಗ ಈ ಮೊಳಕೆಯ ಗಿಡಗಳನ್ನು ಮಣ್ಣಿನ ಹಾಸಿಗೆಯಿಂದ ಪ್ಲಾಸ್ಟಿಕ್ ಬುಟ್ಟಿಗಳಿಗೆ ಸಾಗಿಸಲು ಸಿದ್ದವಾದಂತೆ. ಪ್ಲಾಸ್ಟಿಕ್ ಬುಟ್ಟಿಗಳಲ್ಲಿ ಗಿಡದ ಎರಡನೇ ಹಂತದ ಬೆಳವಣಿಯನ್ನು ನೋಡಿಕೊಳ್ಳಲಾಗುತ್ತದೆ. ಈ ಎರಡನೇ ಹಂತಹ ಬೆಳವಣಿಗೆಯನ್ನು ಮುಂದಿನ ಬರಹದಲ್ಲಿ ತಿಳಿಯೋಣ.

(ಮಾಹಿತಿ ಮತ್ತು ಚಿತ್ರ ಸೆಲೆ: fao.org)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. 09/10/2014

    […] ಕಾಪಿ ಬಿತ್ತನೆ ಮತ್ತು ಆರೈಕೆಯ ಬರಹದಲ್ಲಿ ಮಣ್ಣಿನ ಹಾಸಿಗೆಯನ್ನು ಬಳಸಿಕೊಂಡು ಕಾಪಿ ಬೀಜದ ಬಿತ್ತನೆ ಮಾಡಿ, ಅದನ್ನು ನೋಡಿಕೊಳ್ಳುವುದರ ಬಗ್ಗೆ ತಿಳಿದೆವು. ಮಣ್ಣಿನ ಹಾಸಿಗೆಯಲ್ಲಿ ಮೊಳಕೆಯೊಡೆದ ಕಾಪಿ ಬೀಜವು ಸುಮಾರು 40 ರಿಂದ 50 ದಿನದಲ್ಲಿ 200 – 300 ಮಿ.ಮೀ ಬೆಳೆಯುತ್ತದೆ. ಈ ಮೊಳಕೆಯ ಗಿಡಗಳನ್ನು ಮಣ್ಣಿನ ಹಾಸಿಗೆಯಿಂದ ಪ್ಲಾಸ್ಟಿಕ್ ಬುಟ್ಟಿಗಳಿಗೆ ಸಾಗಿಸಿ ಎರಡನೇ ಹಂತದ ಬೆಳವಣಿಗೆಯನ್ನು ನೋಡಿಕೊಳ್ಳಲಾಗುತ್ತದೆ. […]

  2. 12/12/2014

    […] ರತ್ನಾಕರ.ಹಿಂದಿನ ಬರಹಗಳಲ್ಲಿ ಕಾಪಿ ಬೀಜದ ಬಿತ್ತನೆ ಮತ್ತು ಪಾತಿಯ ಬುಟ್ಟಿಗಳಲ್ಲಿ ಕಾಪಿ ಗಿಡದ […]

ಅನಿಸಿಕೆ ಬರೆಯಿರಿ: