ಕಳೆಮದ್ದು ಕಳೆಯದಿರಲಿ ಮಣ್ಣಿನ ಹುರುಪು

– ಚಯ್ತನ್ಯ ಸುಬ್ಬಣ್ಣ.

man-spraying-herbicide-on-corn

ಬೆಳೆಯ ಸಾಗುವಳಿಯಲ್ಲಿ ಒಕ್ಕಲಿಗ ಹಲವಾರು ತೊಡಕುಗಳನ್ನು ಎದುರುಗೊಳ್ಳಬೇಕಾಗುತ್ತದೆ. ಕ್ರುಶಿ ಬೂಮಿಯಲ್ಲಿ ರಯ್ತ ಬೆಳೆಯುವ ಬೆಳೆಯ ಜೊತೆಜೊತೆಯಲ್ಲೇ ಬದುಕು ಸಾಗಿಸುವ ಹಲವಾರು ಉಸುರಿಗಳಿವೆ. ಅವುಗಳಲ್ಲಿ ಕೆಲವು ಬೆಳೆಗೆ ಕೆಡುಕಾಗದಂತೆ ಗಿಡಗಳೊಂದಿಗೆ ಹೊಂದಾಣಿಕೆಯಲ್ಲಿ ಸಾಗಿದರೆ, ಇನ್ನು ಕೆಲವು ಗಿಡಗಳ ಬೆಳವಣಿಗೆಗೆ ಅಡ್ಡಿಯಾಗುತ್ತವೆ. ಅಂತಹ ಉಸುರಿಗಳಲ್ಲಿ ಕಳೆಗಳ ಪಾತ್ರ ಮುಕ್ಯವಾದುದು.

ರಯ್ತನ ಕಯ್ವಾಡವಿಲ್ಲದೆ ಕ್ರುಶಿ ಬೂಮಿಯಲ್ಲಿ ಬೆಳೆಯುವ ಬೇಡದ ಗಿಡಗಳನ್ನು ಕಳೆಗಳು (Weeds) ಎನ್ನಬಹುದು. ಕಳೆಗಳು ಉಪಯುಕ್ತ ಬೆಳೆಗಳಾದ ಬತ್ತ, ರಾಗಿ, ಜೋಳ ಮುಂತಾದವುಗಳೊಂದಿಗೆ ಅವಶ್ಯವಾಗಿ ಬೇಕಿರುವ ಬೆಳಕು, ನೀರು, ಗೊಬ್ಬರಕ್ಕಾಗಿ ಪಯ್ಪೋಟಿ ನಡೆಸುತ್ತವೆ. ಬೇಸಾಯ ಮಾಡುವ ರಯ್ತ ಒಳ್ಳೆಯ ಇಳುವರಿ ಪಡೆಯಲು ಈ ಕಳೆಗಳನ್ನು ಹತೋಟಿಯಲ್ಲಿ ಇಡಬೇಕಾಗುತ್ತದೆ.

ಹಿಂದೆಲ್ಲಾ ಕಳೆ ತೆಗೆಯುವ ಕೆಲಸವನ್ನು ಕಯ್ಯಿಂದ ಕೀಳುವುದು, ಇಲ್ಲವೆ ಕುಂಟೆ ಹೊಡೆಯುವುದು ಮುಂತಾದ ಹೊಲಬುಗಳಿಂದಲೇ ಮಾಡಲಾಗುತ್ತಿತ್ತು. 20 ನೆಯ ನೂರೇಡಿನಿಂದ ಕಳೆಗಳನ್ನು ತೆಗೆಯಲು ರಾಸಾಯನಿಕಗಳ ಬಳಕೆ ಹೆಚ್ಚಾಗಿದೆ. ಏರುತ್ತಿರುವ ಬೇಸಾಯದ ಕರ‍್ಚು, ಆಳುಗಳ ಕೊರತೆ, ಕಳೆಮದ್ದಿನಲ್ಲಿರುವ ಕಳೆಗಳನ್ನು ಸುಲಬವಾಗಿ ಕೊಲ್ಲುವ ಇಲ್ಲವೆ ಹೆಚ್ಚು ಹೊತ್ತು ಹತೋಟಿಯಲ್ಲಿಡುವ ಅಳವು, ಇವೆಲ್ಲಾ ಕ್ರುಶಿಯಲ್ಲಿ ಕಳೆಮದ್ದಿನ ಬಳಕೆಗೆ ರಯ್ತನ ಮನವೊಲಿಸುವಲ್ಲಿ ಕಾರಣವಾಗಿವೆ. ದಿನಗಳೆದಂತೆಲ್ಲಾ ಕಳೆಮದ್ದಿನ ಬಳಕೆ ಹೊಲದಲ್ಲಿ ಇಮ್ಮಡಿಸುತ್ತಿದೆ.

ಈಗ ನಮ್ಮಲ್ಲೊಂದು ಕೇಳ್ವಿ ಮೂಡುತ್ತದೆ; ಇಶ್ಟೊಂದು ಹೆಚ್ಚಿನ ಪ್ರಮಾಣದಲ್ಲಿ ಹೊಲಕ್ಕೆ ಹಾಕಿದ ಕಳೆಮದ್ದಿನ ಮುಂದಿನ ಗತಿ ಏನು? ಕಳೆತೆಗೆಯಲು ಕಳೆಮದ್ದನ್ನು ನೇರವಾಗಿ ಮಣ್ಣಿಗೆ ಹಾಕಿದರೂ, ಇಲ್ಲವೆ ಗಿಡಗಳಿಗೆ ಸಿಂಪಡಿಸಿದರೂ, ಕೊನೆಗೆ ಅದು ಸೇರುವುದು ಮಣ್ಣನ್ನೇ. ಪ್ರತಿ ಸಾರಿ ಬೆಳೆ ಬೆಳೆದಾಗಲೂ ಒಂದಶ್ಟು ಕಳೆಮದ್ದು ಮಣ್ಣಿಗೆ ಸೇರುತ್ತದೆ. ಹೀಗೆ ಕಳೆಮದ್ದು ಮಣ್ಣಿನಲ್ಲಿ ಕೂಡಿಕೊಳ್ಳುತ್ತಾ ಹೋದರೆ ಮುಂದೆ ಮಣ್ಣು ಸರಿಪಡಿಸಲಾಗದಶ್ಟು ಕೆಟ್ಟುಹೋಗುವುದಲ್ಲವೇ? ಅದಕ್ಕೆ ಹೇಳ್ವಿಯನ್ನು ಈ ಬರಹದಲ್ಲಿ ತಿಳಿಯೋಣ.

ಮಣ್ಣಿನಲ್ಲಿ ಕಳೆಮದ್ದು (Herbicide) 2 ಬಗೆಯಲ್ಲಿ ಕಳೆದುಹೋಗುತ್ತದೆ ಎಂದು ಅರಿಗರು ಕಂಡುಕೊಂಡಿದ್ದಾರೆ. ಅವುಗಳೆಂದರೆ;

1. ಮಾರೆಡೆಗೊಳ್ಳುವಿಕೆ (Transfer)
2. ಇಟ್ಟಳದೊಡೆತ/ಕೊಳೆಯುವಿಕೆ (Decomposition) – ಇದರಲ್ಲಿ ಮೂರು ಬಗೆ:

ಅ. ರಾಸಾಯನಿಕ ಇಟ್ಟಳದೊಡೆತ (Chemical decomposition)
ಆ. ಸೀರುಗಗಳಿಂದಾಗುವ ಇಟ್ಟಳದೊಡೆತ (Microbial decomposition)
ಇ. ಬೆಳಕಿನಿಂದಾಗುವ ಇಟ್ಟಳದೊಡೆತ (Photodecomposition)

1. ಮಾರೆಡೆಗೊಳ್ಳುವಿಕೆ

ಈ ಬಗೆಯಲ್ಲಿ ಕಳೆಮದ್ದಿನ ಅಣುಕೂಟದ ಇಟ್ಟಳ(Molecular structure)ದಲ್ಲಿ ಯಾವುದೇ ಮಾರ‍್ಪಾಟಿಲ್ಲದೆ ಗಿಡಗಳ ಬೇರಿನ ಹರಹಿನಿಂದ (Root zone) ಕಳೆದುಹೋಗುತ್ತದೆ. ಇದರಲ್ಲಿಯೂ ನಾಲ್ಕು ತರದ ಮಾರೆಡೆಗೊಳ್ಳುವ ಹೊಲಬುಗಳಿವೆ.

  1. ಕಳೆಮದ್ದು ಮಣ್ಣಿನಲ್ಲಿ ಹರಡಿಕೊಂಡಿರುವ(Colloidal particles) ಕಿರುತುಣುಕುಗಳಿಗೆ ಹಿಂತಿರುಗದ ಬಗೆಯಲ್ಲಿ ಗಟ್ಟಿಯಾಗಿ ಅಂಟಿಕೊಳ್ಳುವುದು.
  2. ನೀರು ಮಣ್ಣಿನಲ್ಲಿ ಆಳಕ್ಕೆ ಇಂಗುತ್ತಾ ಹೋದಂತೆ ನೀರಿನಲ್ಲಿ ಬೆರೆತಿರುವ ಕಳೆಮದ್ದು ಕೂಡ ಅದರೊಟ್ಟಿಗೆ ಬೇರಿನ ಹರಹಿನಿಂದ ಕಳೆದುಹೋಗುವುದು.
  3. ಮಣ್ಣಿನ ಮೇಲ್ಮಯ್ಯಲ್ಲಿ ಹರಿಯುತ್ತಿರುವ ನೀರಿನೊಟ್ಟಿಗೆ ಕೊಚ್ಚಿಹೋಗುವುದು ಅತವಾ ಗಾಳಿಯಲ್ಲಿ ಆವಿಯಾಗುವುದು.
  4. ಗಿಡ ಇಲ್ಲವೇ ಕಳೆಗಳು ಕಳೆಮದ್ದನ್ನು ತುಸುಹೊತ್ತಿನವರೆಗೆ ಹೀರಿಕೊಳ್ಳುವುದು. ಗಿಡದೊಳಗೆ ಕೊಂಚಮಟ್ಟಿಗೆ ಕಳೆಮದ್ದಿನ ಅಣುಕೂಟದ ಇಟ್ಟಳದೊಡೆತ (Molecular decomposition) ಆದರೂ ಆಗಬಹುದು.

2.ಇಟ್ಟಳದೊಡೆತ(ಕೊಳೆಯುವಿಕೆ)

ಇಲ್ಲಿ ಕಳೆಮದ್ದಿನ ಅಣುಕೂಟದ ಇಟ್ಟಳ ಒಡೆತಕ್ಕೆ ಗುರಿಯಾಗಿ ಕಳೆಮದ್ದು ಗಿಡಕ್ಕೆ ಕೇಡುಂಟು ಮಾಡದ ವಸ್ತುಗಳಾಗಿ ಮಾರ‍್ಪಡುತ್ತದೆ ಹಾಗೂ ತಮ್ಮ ನಂಜಿನ ಗುಣವನ್ನು ಕಳೆದುಕೊಳ್ಳುತ್ತದೆ. ಕೊಳೆಯುವಿಕೆಯಲ್ಲಿ ಕಳೆಮದ್ದಿನ ಕಳೆದುಹೋಗುವಿಕೆ ಮತ್ತೆಂದೂ ಮಾರ‍್ಪಡದ ರೀತಿಯಲ್ಲಿ ನೆಲೆನಿಲ್ಲುವುದರಿಂದ ಈ ಬಗೆಯ ಕಳೆದುಹೋಗುವಿಕೆ ಹೆಚ್ಚು ಅರಿದಾದುದು. ಇದರಲ್ಲಿ ಮೊದಲೇ ತಿಳಿಸಿದಂತೆ 3 ಬಗೆಗಳಿವೆ.

ಅ. ರಾಸಾಯನಿಕ ಇಟ್ಟಳದೊಡೆತ
ಹಲವು ಬಗೆಯ ರಾಸಾಯನಿಕ ಕ್ರಿಯೆಗಳಿಂದ ಕಳೆಮದ್ದಿನ ಅಣುಕೂಟವು ತನ್ನಿಂತಾನೇ ಇಟ್ಟಳದೊಡೆತಕ್ಕೆ ಈಡಾಗಿ ಗಿಡಕ್ಕೆ ಕೇಡುಂಟು ಮಾಡದ ವಸ್ತುಗಳಾಗುವುದನ್ನು ಇಲ್ಲಿ ಕಾಣಬಹುದು. ರಾಸಾಯನಿಕ ಇಟ್ಟಳದೊಡೆತವು ಮಣ್ಣಿನ ಹುಳಿಯಳತೆ (Soil pH), ತೇವಾಂಶ, ಬಿಸುಪು ಹಾಗೂ ಗಾಳಿಯಾಡುವಿಕೆಯಂತಹ ಅಂಶಗಳ ಅಂಕೆಗೊಳಪಟ್ಟಿರುತ್ತದೆ. ಎತ್ತುಗೆಗೆ ಮಣ್ಣಿನಲ್ಲಿ ಬಿಸಿ ಹೆಚ್ಚಿರುವೆಡೆ ಅತವಾ ಹುಳಿಯಳತೆ 7.0 ಕ್ಕಿಂತ ಕಡಿಮೆಯಿದ್ದಾಗ ಈ ಎಸಕ ಬೇಗ ನಡೆಯುವುದು.

ಆ. ಸೀರುಗಗಳಿಂದಾಗುವ ಇಟ್ಟಳದೊಡೆತ
ಕೆಲವು ಬಗೆಯ ಸೀರುಗಗಳು(Microbes) ಕಳೆಮದ್ದಿನ ಇಟ್ಟಳದೊಡೆತಕ್ಕೆ ಕಾರಣವಾಗುತ್ತವೆ ಎಂಬುದು ನಮಗೀಗ ತಿಳಿದುಬಂದಿದೆ. ಒಂದು ತೆರನಾದ ಕಳೆಮದ್ದನ್ನು ಪದೇ ಪದೇ ಬಳಸುತ್ತಿದ್ದಲ್ಲಿ, ಮಣ್ಣಿನಲ್ಲಿ ಅದನ್ನು ಒಡೆಯಬಲ್ಲ/ಕೊಳೆಸಬಲ್ಲ ಸೀರುಗಗಳ ಎಣಿಕೆ ಹೆಚ್ಚುತ್ತದೆ. ಸೀರುಗಗಳ ಎಣಿಕೆ ಹೆಚ್ಚಿದಂತೆ ಕೊಳೆಯುವಿಕೆ ಹೆಚ್ಚಾಗುತ್ತದೆ. ಕಳೆಮದ್ದಿನ ಇಟ್ಟಳದೊಡೆತದ ಕೊನೆಯುಳಿಕೆಗಳಾಗಿ ಕಾರ‍್ಬನ್ ಡಯಾಕ್ಸಯ್ಡ್, ಅಮ್ಮೋನಿಯಾ, ಕ್ಲೋರಿನ್ ಮುಂತಾದ ರಾಸಾಯನಿಕಗಳು ಹೊರಬರುತ್ತವೆ.

ಇ. ಬೆಳಕಿನಿಂದಾಗುವ ಇಟ್ಟಳದೊಡೆತ
ನೇಸರಿನ ಬೆಳಕಿನಲ್ಲಿರುವ ಕಸುವನ್ನು ಬಳಸಿಕೊಂಡು ತಮ್ಮಶ್ಟಕ್ಕೆ ತಾವೇ ಒಡೆದುಕೊಳ್ಳಬಲ್ಲ ಕಳೆಮದ್ದಿನ ಕೆಲ ಅಣುಕೂಟಗಳಿವೆ. ಬೆಳಕಿನಲ್ಲಿರುವ ಕಡುನೀಲಿ ಕದಿರುಗಳು (Ultra violet rays) ಚುರುಕಾಗಿ ಈ ಕೆಲಸದಲ್ಲಿ ನೆರವಾಗುತ್ತವೆ ಎಂದು ಕಂಡುಬಂದಿದೆ.

ಈ ಎಲ್ಲಾ ತೆರನ ಹೊಲಬುಗಳಲ್ಲಿ ಕಳೆಮದ್ದು ಪರಿಸರಕ್ಕೆ ಹೆಚ್ಚು ಹಾಳಾಗದಂತೆ ಕಳೆದುಹೋಗುತ್ತದೆ ಎನ್ನುವುದು ದಿಟವಾದರೂ, ಇದರ ಹುರುಳು ಕಳೆಮದ್ದನ್ನು ನಾವು ಹೊಲದಲ್ಲಿ ಬೇಕಾಬಿಟ್ಟಿ ಬಳಸಬಹುದು ಎಂದಲ್ಲ. ಹೊಲದಲ್ಲಿ ಬೆಳೆದ ಬೆಳೆ ಕೊನೆಗೆ ಸೇರುವುದು ನಮ್ಮ ಹೊಟ್ಟೆಗೇ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಕಳೆಮದ್ದನ್ನೇ ಆಗಲಿ, ಇನ್ನಾವುದೇ ಕ್ರುಶಿ ರಾಸಾಯನಿಕವನ್ನೇ ಆಗಲಿ, ಹಳ್ಳಿಗಾಡಿನ ರಯ್ತರು ಹದವರಿತು ಎಚ್ಚರಿಕೆಯಿಂದ ಬಳಸಿದಲ್ಲಿ ಮಾತ್ರ ಅದರಿಂದ ಲಾಬ ಪಡೆಯಬಲ್ಲರು ಮತ್ತು ತಮ್ಮ ಸುತ್ತಲಿನ ಪರಿಸರವನ್ನೂ ಚೊಕ್ಕವಾಗಿಡಬಲ್ಲರು.

(ಮಾಹಿತಿ ಸೆಲೆ: Weed management principles and practices – O.P.Gupta)

(ಚಿತ್ರ ಸೆಲೆ: wisegeek.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: