ಸ್ಕಾಟ್‍ಲ್ಯಾಂಡಿನಲ್ಲಿ ನಿಜಕ್ಕೂ ಆಗಿದ್ದೇನು

ಗಿರೀಶ್ ಕಾರ‍್ಗದ್ದೆ.

scott

ಸ್ಕಾಟ್ ಲ್ಯಾಂಡಿನಲ್ಲಿ ಇತ್ತೀಚೆಗೆ ನಡೆದ ಪ್ರತ್ಯೇಕತೆಯ ಚುನಾವಣೆಯ ರಿಸಲ್ಟುಗಳು ಹೊರಬಿದ್ದು ಸ್ಕಾಟ್ ಲ್ಯಾಂಡ್ ಸದ್ಯಕ್ಕೆ ಯುಕೆಯಲ್ಲಿಯೇ ಮುಂದುವರೆಯಲಿದೆ. ಹಾಗೆ ನೋಡಿದರೆ ಇದರ ಹಿಂದೆ ವರ‍್ಶಗಳ ಇತಿಹಾಸವಿದೆ. ಸುಮಾರು ಎಂಟನೆಯ ಶತಮಾನದಲ್ಲಿ ಸ್ಕಾಟ್ಲೆಂಡ್ ನಾಡು ಹುಟ್ಟಿಕೊಂಡಿತು ಎನ್ನಲಾಗುತ್ತದೆ. ಬಹಳ ಸೊಬಗಿನಿಂದ ಕೂಡಿದ ಈ ನಾಡು ಹಲವು ರಾಜರುಗಳ ಆಳ್ವಿಕೆಗೆ ಒಳಪಟ್ಟಿತ್ತು, ಇಲ್ಲಿರುವ ಆಚಾರವಿಚಾರಗಳು ಹಾಗೂ ವಾತಾವರಣ ವಿಶೇಶವಾಗಿವೆ. ಈ ನಾಡು ಸುಮಾರು 1707ನೇ ವರ‍್ಶದ ಸುಮಾರಿಗೆ ಯುನೈಟೆಡ್ ಕಿಂಗ್ಡ್ಂ ಒಕ್ಕೂಟದ ಬಾಗವಾಯಿತು. ರಾಜಕೀಯವಾಗಿ ಯುಕೆಯ ಬಾಗವಾಗಿದ್ದರೂ ಸಹ ಸಾಂಸ್ಕ್ರುತಿಕ ಅದಿಕಾರವು ಸ್ಕಾಟ್ಲೆಂಡಿನ ಕೈಯಲ್ಲೇ ಇತ್ತು, ಇದರಿಂದಾಗಿಯೇ ಈ ನಾಡು ತನ್ನ ಪರಂಪರೆ ಹಾಗೂ ನಡೆನುಡಿಯನ್ನು ಹಾಗೆಯೇ ಕಾಯ್ದುಕೊಂಡು ಬರಲು ಸಾದ್ಯವಾಯಿತು.

ನಂತರದ ದಿನಗಳಲ್ಲಿ ಆದ ಬೆಳವಣಿಗೆಗಳಿಂದಾಗಿ ಸ್ಕಾಂಟ್ಲೆಂಡಿನಲ್ಲಿ ರಾಜಕೀಯ ಸ್ವಾಯತ್ತತೆಯ ಕೂಗು ಬಲವಾಗಿ ಕೇಳಿ ಬರಲಾರಂಬಿಸಿತು. ಜನರ ಅಬಿಪ್ರಾಯಗಳನ್ನು ಆಲಿಸುವ, ಜನರಿಗೆ ಬೇರೆ ದೇಶವಾಗುವುದರ ಬಗೆಗಿನ ಒಳಿತು ಕೆಡುಕನ್ನು ಮನವರಿಕೆ ಮಾಡಿಕೊಡುವ ಹೋರಾಟಗಳು ವೇಗ ಪಡೆದುಕೊಂಡವು. ಪ್ರತಿಬಾರಿಯೂ ಇದಕ್ಕೆ ಜನರ ಅಬಿಪ್ರಾಯವನ್ನು ಕೇಳುವ, ಜನರ ನಿರ‍್ದಾರವೇ ಅಂತಿಮ ಅನ್ನುವ ಶುದ್ದ ಮಂದಿಯಾಳ್ವಿಕೆಯ ನಡೆಗಳನ್ನು ಈ ನಾಡಿನ ನಾಯಕರು ಪಾಲಿಸಿಕೊಂಡು ಬಂದಿದ್ದಾರೆ.

ಹೀಗೆ ಜನರ ಅಬಿಪ್ರಾಯವನ್ನು ಸಂಗ್ರಹಿಸುವುದಕ್ಕಾಗಿ ರೆಪರಂಡಂ ಅನ್ನು ಮಾಡಿ ಅದರ ಬಗ್ಗೆ ಜನರು ಮತ ಹಾಕುವಂತೆ ಕೇಳಿಕೊಳ್ಳಲಾಗುತ್ತದೆ. ಬೇರೆ ದೇಶ ಬೇಕೆನ್ನುವವರದ್ದು ಒಂದು ಗುಂಪು, ಬೇಡ, ಯುಕೆಯಲ್ಲಿಯೇ ಮುಂದುವರೆಯೋಣ ಅನ್ನುವವರದ್ದು ಒಂದು ಗುಂಪಾಗಿ ಜನರ ಓಲೈಕೆಗೆ ಇಳಿಯುತ್ತಾರೆ. ಪರವಿರೋದದ ವಾದಗಳಿಗೆ ದೊಡ್ಡ ಮಟ್ಟದ ಪ್ರಚಾರವನ್ನು ಕೊಡಲಾಗುತ್ತದೆ. ಈ ಬಾರಿ ನಡೆದದ್ದು ಮೂರನೆಯ ಬಾರಿಯ ಚುನಾವಣೆಯಾಗಿದ್ದು, ಈ ಹಿಂದೆ 1979 ಮತ್ತು 1997ರ ಇಸವಿಗಳಲ್ಲಿ ಇಂತಹದ್ದೇ ಚುನಾವಣೆ ನಡೆದಿತ್ತು. ಪ್ರತಿಬಾರಿ ಇಂತಹ ಪ್ರತಿರೋದ ಬಂದಾಗಲೆಲ್ಲಾ ಸ್ಕಾಂಟ್ಲೆಂಡಿಗೆ ಸ್ವಲ್ಪ ಹೆಚ್ಚಿನ ಸ್ವಾಯತ್ತತ್ತೆ ದೊರೆಯುತ್ತಾ ಹೋಗಿರುವುದನ್ನು ಮತ್ತು ಇದರಿಂದಾಗಿ ಪ್ರತ್ಯೇಕತೆಯ ಕಾವು ಕೆಲಕಾಲ ಇಳಿದಿುವುದನ್ನು ನಾವು ಗಮನಿಸಬಹುದು. ಆದರೆ ಈ ಬಾರಿ ನಡೆದ ಚುನಾವಣೆಯು ಸಂಪರ‍್ಕಮಾದ್ಯಮಗಳಲ್ಲಿ ನಡೆದಿರುವ ಬೆಳವಣಿಗೆ ಮತ್ತು ಸಾಮಾಜಿಕ ತಾಣಗಳ ಕಾರಣಗಳಿಂದಾಗಿ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಗಮನವನ್ನು ಸೆಳೆಯಿತು.

ಈ ಬಾರಿಯೂ ಸಹ ಜನಾಬಿಪ್ರಾಯವು ಬೇರೆ ದೇಶವಾಗಬೇಕು ಅನ್ನುವ ನಿಲುವಿಗೆ ವಿರುದ್ದವಾಗಿದ್ದು, ಯುಕೆ ಒಕ್ಕೂಟದಲ್ಲಿ ಒಂದು ನಾಡಾಗಿಯೇ ಸ್ಕಾಟ್ಲೆಂಡ್ ಮುಂದುವರೆಯಲಿದೆ. ಆದರೆ ಜಾಗತಿಕ ಮಟ್ಟದಲ್ಲಿ ಈ ಚುನಾವಣೆಯು ಹೆಚ್ಚಿನ ಪರಿಣಾಮವನ್ನು ಬೀರಿದೆ, ಇದರಿಂದಾಗಿ ಜಗತ್ತಿನ ಬೇರೆ ಬೇರೆ ಕಡೆಯಲ್ಲಿ ನಡೆಯುತ್ತಿರುವ ಪ್ರತ್ಯೇಕತಾ ಹೋರಾಟಗಳು ಹೆಚ್ಚಿನ ವೇಗವನ್ನು ಪಡೆಯುವಂತೆ ಮಾಡಿದೆ.

ಕೆನಡದಲ್ಲಿರುವ ಕ್ಯೂಬೆಕ್ ಪ್ರದೇಶವು ಮೊದಲಿನಿಂದಲೂ ಬೇರೆ ದೇಶವಾಗಬೇಕೆನ್ನುವ ಹೋರಾಟವನ್ನು ನಡೆಸಿಕೊಂಡು ಬಂದಿದೆ. ಈ ಹಿಂದೆ ಅಲ್ಲಿ ಎರಡು ಬಾರಿ ಜನಾಬಿಪ್ರಾಯವನ್ನು ನಡೆಸಲಾಗಿತ್ತು, 1980 ಮತ್ತು 1995ರಲ್ಲಿ ಈ ಚುನಾವಣೆಗಳು ನಡೆದಿದ್ದವು. ಎರಡನೆಯ ಚುನಾವಣೆಯಲ್ಲಿ ಕೂದಲೆಳೆಯ ಅಂತರದಲ್ಲಿ ಬೇರೆ ದೇಶದ ಪರವಿರುವ ಗುಂಪಿಗೆ ಸೋಲಾಗಿತ್ತು. ಸ್ಕಾಟ್ಲೆಂಡಿನಲ್ಲಿ ನಡೆದ ಬೆಳವಣಿಗೆಯ ಹಿನ್ನಲೆಯಲ್ಲಿ ಮತ್ತೊಮ್ಮೆ ಇಲ್ಲಿನ ರಾಜಕೀಯ ನಡೆಗಳು ಕುತೂಹಲ ಮೂಡಿಸಿವೆ. ಅಮೇರಿಕದಲ್ಲಿರುವ ಟೆಕ್ಸಾಸ್ ರಾಜ್ಯವೂ ಸಹ ತಾನು ಬೇರೆ ದೇಶವಾಗಬೇಕೆಂಬ ಬೇಡಿಕೆಯನ್ನು ಮತ್ತೊಮ್ಮೆ ಹೇಳಿದೆ. ಸ್ಪೇನಿನಲ್ಲಿರುವ ಪ್ರದೇಶಗಳಲ್ಲಿಯೇ ಅತಿ ಶ್ರೀಮಂತ ಪ್ರದೇಶವಾಗಿರುವ ಕ್ಯಾಟಲನ್ ಪ್ರದೇಶದಲ್ಲಿಯೂ ಪ್ರತ್ಯೇಕತೆಯ ಬೇಡಿಕೆಯಿದೆ. ಹಾಂಗ್ ಕಾಂಗಿನಲ್ಲಿಯೂ ಇತರೆ ಕೂಗುಗಳಂತೆಯೇ ತನ್ನಾಳ್ವಿಕೆಗೆ ಒತ್ತಾಯ ಮಾಡುವ ಕೂಗು ಹುಟ್ಟಿದೆ.

ಹೀಗೆ ಇತ್ತೀಚೆಗೆ ತನ್ನಾಳ್ವಿಕೆಯ ಕೂಗು ಕೇಳಿಬರುತ್ತಿರುವ ದೇಶಗಳೆಲ್ಲವೂ ಹುಲುಸಾದ ನಾಡುಗಳೇ ಆಗಿವೆ, ಜನಜೀವನದ ಮಟ್ಟವೂ ಸಹ ಮೇಲಿದೆ. ಹೀಗಿದ್ದೂ ಸಹ ಇಲ್ಲಿ ತನ್ನಾಳ್ವಿಕೆಯ ಕೂಗಿದೆಯೆಂದರೆ ಹಸನಾದ ಬದುಕಿಗಿಂತ ಜನರಿಗೆ ಸಮಾನತೆ ಮತ್ತು ಸ್ವಾಂತಂತ್ರ್ಯದ ಕಡೆಗಿರುವ ತುಡಿತವೇ ಹೆಚ್ಚಿನದ್ದು ಎಂಬುದು ಕಂಡುಬರುತ್ತದೆ. ಹಾಗಾಗಿ ಬಾರತವೂ ಸೇರಿದಂತೆ ಜಗತ್ತಿನ್ನೆಲ್ಲೆಡೆಯಿರುವ ಒಕ್ಕೂಟ ರಾಶ್ಟ್ರಗಳು ಎಚ್ಚರಿಕೆಯ ಹೆಜ್ಜೆ ಇರಿಸಬೇಕಿದೆ. ವೈವಿದ್ಯತೆಯನ್ನು ಅರಿತು ಎಲ್ಲ ನಾಗರೀಕರಿಗೂ ಸಮಾನ ಗೌರವದ ಬದುಕನ್ನು ಕಟ್ಟಿಕೊಡುವ ವ್ಯವಸ್ತೆಯನ್ನು ಮಾಡಲೇಬೇಕಿದೆ.

ಆದರೆ ಬಾರತದಲ್ಲಿ ಹಿಂದಿ ಹೇರಿಕೆಯ ವಿಚಾರದಲ್ಲಿ ಕೇಂದ್ರ ಸರ‍್ಕಾರವು ಇಡುತ್ತಿರುವ ಹೆಜ್ಜೆಗಳು ಈ ಮಣ್ಣಿನಲ್ಲಿ ಸಹಜವಾಗಿರುವ ಹಲತನವನ್ನು ಹಾಳುಮಾಡಿ, ನಮ್ಮನ್ನು ಎರಡನೆಯ ದರ‍್ಜೆಯ ನಾಗರೀಕರನ್ನಾಗಿ ಮಾಡುತ್ತಿವೆ ಎಂಬ ಬಾವನೆ ಹಿಂದಿಯೇತರ ಜನರಲ್ಲಿ ಮೂಡುತ್ತಿರುವುದು ಆತಂಕ ಹುಟ್ಟಿಸುತ್ತಿವೆ. ಹೀಗಾಗಿ ಇಂತಹ ಕಹಿ ಬಾವನೆಗಳು ಜನರಲ್ಲಿ ಬಾರದಂತೆ, ಒಕ್ಕೂಟವು ಬಲಗೊಳ್ಳುವಂತೆ ಸರಿಯಾದ ಅದಿಕಾರದ ವಿಕೇಂದ್ರೀಕರಣ ಮತ್ತು ಸಮಾನ ಗೌರವದ ನುಡಿನೀತಿಯನ್ನು ರೂಪಿಸಿಕೊಳ್ಳುವ ಮೂಲಕ, ಬೇರೆಯಾಗುವ ಕೂಗುಗಳು ಹುಟ್ಟದಂತೆ ಕಾಯ್ದುಕೊಳ್ಳಬಹುದಾಗಿದೆ.

(ಚಿತ್ರ ಸೆಲೆ: presstv)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: