ತೈಲ ಬೆಲೆ ಕುಸಿತ – ಕಾರಣಗಳೇನು?

– ಅನ್ನದಾನೇಶ ಶಿ. ಸಂಕದಾಳ.

diesel
ಕಳೆದ ಕೆಲವು ವರುಶಗಳಿಂದ ಪೆಟ್ರೋಲ್ ಮತ್ತು ಡೀಸಲ್ ದರವು ಹೆಚ್ಚಾಗಿ ಏರಿಕೆಯನ್ನೇ ಕಂಡಿತ್ತು. ಆದರೆ ಈಗೀಗ ಅವುಗಳ ಬೆಲೆ ಇಳಿಯುತ್ತಿದೆ. ಬಾರತದಲ್ಲಿ ಡೀಸಲ್ ದರವು ಸುಮಾರು 3 ರುಪಾಯಿಯಶ್ಟು ಕಡಿಮೆ ಆಗಿದೆ ಎಂಬುದು ಇತ್ತೀಚಿನ ಸುದ್ದಿ. ಈ ಬೆಳವಣಿಗೆಗಳು, ತೈಲ ಬೆಲೆ ಇಳಿಕೆಯ ಹಿಂದಿರುವ ಕಾರಣಗಳೇನು? ತೈಲವನ್ನು ಒದಗಿಸುವವರಾರು? ತೈಲ ಬೆಲೆ ಮತ್ತೆ ಹೆಚ್ಚಾಗುವುದೇ? ಎಂಬ ಕುತೂಹಲದ ಕೇಳ್ವಿಗಳನ್ನು ಹುಟ್ಟಾಕುತ್ತದೆ.

ಒಪೆಕ್ – ತೈಲ ರಪ್ತು ಮಾಡುವ ನಾಡುಗಳ ಒಕ್ಕೂಟ

1960 ರಲ್ಲಿ, ತೈಲಸಂಪನ್ಮೂಲ ಹೊಂದಿರುವ ತೆಂಕಣ-ಅಮೆರಿಕಾ (south america) ಮತ್ತು ನಡು-ಏಶ್ಯಾದ (middle east) ಐದು ನಾಡುಗಳು ಸೇರಿ ಒಕ್ಕೂಟವೊಂದನ್ನು ಮಾಡಿಕೊಂಡರು. ಅದೇ ಒಪೆಕ್ (OPEC : Organization of the Petroleum Exporting Countries) – ತೈಲ ರಪ್ತು ಮಾಡುವ ನಾಡುಗಳ ಒಕ್ಕೂಟ. ಐದು ನಾಡುಗಳು ಸೇರಿ ಹುಟ್ಟಾಕಿದ ಈ ಒಕ್ಕೂಟದಲ್ಲಿ ಇಂದು ಒಟ್ಟು 12 ಸದಸ್ಯ ನಾಡುಗಳಿರುವವು : 6 ನಡು-ಏಶ್ಯಾದ ನಾಡುಗಳು (ಇರಾನ್, ಇರಾಕ್, ಕುವೈತ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಕತಾರ್), 4 ಆಪ್ರಿಕಾದ ನಾಡುಗಳು (ಆಲ್ಜೀರಿಯಾ, ಅಂಗೋಲಾ, ಲಿಬಿಯಾ, ನೈಜೀರಿಯ) ಮತ್ತು 2 ತೆಂಕಣ ಅಮೆರಿಕಾದ ನಾಡುಗಳು (ಈಕ್ವೆಡಾರ್, ವೆನಿಜುವೆಲಾ).

ತೈಲ ಉತ್ಪನ್ನಗಳ ಕುರಿತು ಸದಸ್ಯ ನಾಡುಗಳ ನಡುವೆ ಹೊಂದಾಣಿಕೆಯ ನೀತಿಗಳನ್ನು ಮಾಡುವುದು, ಕೊಳ್ಳುಗರಿಗೆ ತೊಂದರೆಯಾಗದಂತೆ ಅವರ ಬೇಡಿಕೆಯನ್ನು ಪೂರೈಸುತ್ತಾ, ಉತ್ಪಾದಕರಿಗೆ ಸ್ತಿರವಾಗಿ ಆದಾಯ ತರುವ ಮತ್ತು ಪೆಟ್ರೋಲಿಯಂ ಉದ್ದಿಮೆಯಲ್ಲಿ ಹಣ ತೊಡಗಿಸುವವರಿಗೆ ಒಳ್ಳೆ ಲಾಬ ಬರುವಂತೆ ಜಾಗತಿಕ ತೈಲ ಮಾರುಕಟ್ಟೆಯನ್ನು ಹತೋಟಿಯಲ್ಲಿಟ್ಟುಕೊಂಡು ನಡೆಸುವುದು ಒಪೆಕ್‍ನ ಉದ್ದೇಶವಾಗಿದೆ. ಜಗತ್ತಿನ ತೈಲಸಂಪನ್ಮೂಲಗಳ ಶೇ 81 ರಶ್ಟು ಸಂಪನ್ಮೂಲ ಒಪೆಕ್‍ನ ಸದಸ್ಯ ನಾಡುಗಳಲ್ಲಿದೆ ಮತ್ತು ಆ ಶೇ 81 ರ ಶೇ 66 ರಶ್ಟು ಸಂಪನ್ಮೂಲ ಒಪೆಕ್‍ನ ನಡು-ಏಶ್ಯಾದ ನಾಡುಗಳಲ್ಲಿದೆ ಎಂದು ಹೇಳಲಾಗುತ್ತದೆ.

ತೈಲ ಉತ್ಪಾದನೆ ಮತ್ತು ಬಳಕೆ – ಅಂಕಿಅಂಶ

oil-iran 2012 ರ ಅಂಕಿ-ಅಂಶ ತಿಳಿಸುವಂತೆ ಕಚ್ಚಾತೈಲ ಉತ್ಪಾದಿಸುವ ಜಗತ್ತಿನ ಮೊದಲು 3 ಸ್ತಾನಗಳಲ್ಲಿ  ಸೌದಿ ಅರೇಬಿಯಾ, ಅಮೇರಿಕಾ ಮತ್ತು ರಶ್ಯಾ ನಾಡುಗಳಿವೆ. ಹಾಗೆ ಅದೇ ಅಂಕಿ-ಅಂಶ ಹೇಳುವಂತೆ ಹೆಚ್ಚಿನ ಮಟ್ಟದಲ್ಲಿ ತೈಲವನ್ನು ನಾನಾ ಕಾರಣಗಳಿಗೆ ಬಳಸುವ ಮೊದಲು 3 ಸ್ತಾನಗಳಲ್ಲಿ ಅಮೇರಿಕಾ, ಚೀನಾ ಮತ್ತು ಜಪಾನ್ ನಾಡುಗಳಿವೆ. ಬಾರತವು ನಾಲ್ಕನೇ ಸ್ತಾನದಲ್ಲಿದೆ. ಅಮೇರಿಕಾದ ತೈಲಬಳಕೆಯು ಅಲ್ಲಿನ ಉತ್ಪಾದನೆಗಿಂತ ತುಂಬಾ ಹೆಚ್ಚಿರುವ ಕಾರಣ ‘ಬಳಕೆದಾರರ’ ಪಟ್ಟಿಯಲ್ಲಿ ಅದು ಕಾಣಿಸಿಕೊಂಡಿದೆ.

ಒಪೆಕ್ ಸದಸ್ಯ ನಾಡುಗಳು, ತಮ್ಮ ನಾಡುಗಳಲ್ಲಿ ದೊರೆಯುವ ತೈಲವನ್ನು ಹೊರತೆಗೆದು ಕಚ್ಚಾ ತೈಲವನ್ನು (crude oil) ಜಗತ್ತಿನ ಬೇರೆ ಬೇರೆ ನಾಡುಗಳಿಗೆ ಒದಗಿಸುತ್ತವೆ. ಕಚ್ಚಾತೈಲದಿಂದ, ಬಳಸಲು ತಕ್ಕುದಾದಂತ ಪೆಟ್ರೋಲ್, ಡೀಸಲ್ ಅತವಾ ಬೇರೆ ಬೇರೆ ತೈಲ ಉತ್ಪನ್ನಗಳನ್ನು ಹೊರತರಲಾಗುತ್ತದೆ. ಒಪೆಕ್ ಒಕ್ಕೂಟದ ನಾಡುಗಳಿಂದ ಶೇ 40 ರಶ್ಟು ಕಚ್ಚಾ ತೈಲ ಉಳಿದ ನಾಡುಗಳಿಗೆ ಪೂರೈಸಲ್ಪಡುತ್ತದೆ ಎನ್ನುವ ಮಾಹಿತಿ ಇದೆ. ಜಗತ್ತಿನ ಶೇ 40 ರಶ್ಟು ಕಚ್ಚಾತೈಲದ ಪೂರೈಕೆ ಮೇಲೆ ತಿಳಿಸಿದ 12 ನಾಡುಗಳಿಂದ ಆಗುತ್ತದೆ ಎಂದರೆ, ಆ ನಾಡುಗಳಲ್ಲಿ ತುಂಬಾ ಹೆಚ್ಚು ತೈಲ ಸಂಪನ್ಮೂಲಗಳಿದ್ದು, ಅವುಗಳಿಂದ ಆ ನಾಡುಗಳಿಗೆ ಹೆಚ್ಚು ಆದಾಯ ದೊರಕುತ್ತದೆ ಎಂದು ತಿಳಿಯಬಹುದಾಗಿದೆ.

ಉತ್ಪಾದನೆ ಮತ್ತು ಬೇಡಿಕೆ

ಉತ್ಪಾದನೆ ಹೆಚ್ಚಾದಂತೆ ಬೇಡಿಕೆ ಅದರ ತಕ್ಕ ಹಾಗೆ ಇರದಿದ್ದರೆ ಉತ್ಪನ್ನದ ಬೆಲೆ ಕಡಿಮೆಯಾಗುತ್ತದೆ. ತೈಲದ ವಿಶಯದಲ್ಲೂ ಆಗಿರುವುದು ಅದೇ. ಇರಾಕ್ ಮತ್ತು ಲಿಬಿಯಾದಲ್ಲಿ ತೈಲ ಉತ್ಪಾದನೆಯಲ್ಲಿ ತುಂಬಾ ಹೆಚ್ಚಳವಾಗಿದೆ. ತೈಲ ಬಳಸುವುದರಲ್ಲಿ ಜಗತ್ತಿನ ಎರಡನೆ ಸ್ತಾನದಲ್ಲಿರುವ ಚೀನಾದಲ್ಲಿ ಬೇಡಿಕೆ ಕಡಿಮೆ ಆಗಿದೆ. ಮುಂದುವರಿದ ನಾಡಾದ ಜಪಾನ್ ಮತ್ತು ಯೂರೋಪಿನ ನಾಡುಗಳಿಂದಲೂ ಕೂಡ ಬೇಡಿಕೆ ಕಡಿಮೆ ಆಗಿದೆ. ಒಂದು ಕಾಲದಲ್ಲಿ ಒಪೆಕನ್ನೇ ಅವಲಂಬಿಸಿದ್ದ ಅಮೇರಿಕಾ ಕೂಡ ಈಗ ಅಲ್ಲಿಂದ ಕಚ್ಚಾ ತೈಲ ತಂದುಕೊಳ್ಳುವ ಪ್ರಮಾಣದಲ್ಲಿ ಅರ‍್ದಕ್ಕರ‍್ದ ಕಡಿಮೆ ಮಾಡಿದೆ ಎಂದು ವರದಿಯೊಂದು ಹೇಳುತ್ತದೆ. ಇವೆಲ್ಲಾ ತೈಲ ಬೆಲೆ ಕಡಿಮೆ ಆಗುವ ಹಾಗೆ ಮಾಡಿದೆ. ಇದನ್ನು ಸರಿದೂಗಿಸಲು ಬಳಕೆಗೆ ಬೇಕಾದ ಪ್ರಮಾಣದಶ್ಟೇ ಉತ್ಪಾದನೆಯನ್ನು ಮಾಡುವುದೊಂದು ದಾರಿ ಅಂತ ಅನಿಸುವುದು ನಿಜ. ಆದರೆ ಹಿಂದೊಮ್ಮೆ 1980 ರಲ್ಲಿ ಸೌದಿ ಅರೇಬಿಯಾದವರು ತೈಲಬೆಲೆಯನ್ನು ಏರಿಸಲು ಉತ್ಪಾದನೆ ಕಡಿಮೆ ಮಾಡಿದ್ದರು. ಆದರೆ ಪರಿಸ್ತಿತಿ ಸರಿ ಹೋದಮೇಲೆಯೂ ಮಾರುಕಟ್ಟೆಯಲ್ಲಿ ತಾವು ಮೊದಲು ಹೊಂದಿದ್ದ ಸ್ತಾನ ಪಡೆಯಲು ಸಾಕಶ್ಟು ಹರಸಾಹಸ ಮಾಡಿದ ಕಹಿ ಅನುಬವ ಹೊಂದಿದ್ದಾರೆ. ಮಾರುಕಟ್ಟೆಯಲ್ಲಿ ತಾವೇ ಮೇಲುಗೈ ಹೊಂದುವುದು ಅವರ ಗಟ್ಟಿಯಾದ ನಿಲುವಾದರಿಂದ, ತೈಲ ಬೆಲೆ ಇಳಿಕೆಗೆ ತೀರ‍್ಮಾನಿಸಿದ್ದಾರೆ.

ತೈಲಬೆಲೆ ಇಳಿಕೆಯ ಹಿಂದೆ ಕಾಣದಿರುವ ಕಾರಣಗಳು

ಸೌದಿ ಅರೇಬಿಯಾದವರು ತೈಲಬೆಲೆ ಕಡಿಮೆ ಮಾಡುವುದರ ಹಿಂದೆ ರಾಜಕೀಯ ಲೆಕ್ಕಾಚಾರಗಳೂ ಅಡಗಿವೆ. ರಶ್ಯಾವು ಕಚ್ಚಾತೈಲ ಒದಗಿಸುವುದರಲ್ಲಿ ಜಗತ್ತಿನಲ್ಲಿ ಮೂರನೆಯ ಸ್ತಾನದಲ್ಲಿದೆ. ಅದು ಉತ್ಪಾದನೆ ವಿಶಯದಲ್ಲಿ ಸೌದಿ ಅರೇಬಿಯಾಗಿಂತ ಸ್ವಲ್ಪವೇ ದೂರದಲ್ಲಿದೆ. ಹಾಗೆಯೇ, ರಶ್ಯಾವು, ಸಿರಿಯಾ ನಾಡಿಗೆ ಶಸ್ತ್ರಾಸ್ತ್ರಗಳನ್ನೂ (arms & weapons) ಪೂರೈಸುತ್ತದೆ. ಆದರೆ ಸೌದಿ ಅರೇಬಿಯಾ ಮತ್ತು ಸಿರಿಯಾ ನಡುವಣ ಸಂಬಂದ ಅಶ್ಟಾಗಿ ಸರಿ ಇಲ್ಲ. ಯುಕ್ರೇನಿನ ಆಳ್ವಿಕೆಯಿಂದ ಕ್ರೈಮಿಯಾವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡ ರಶ್ಯಾದ ಆಕ್ರಮಣ ನಡೆಗಳು, ರಶ್ಯಾ ಬಗ್ಗೆ ಅಸಮಾದಾನ ಉಂಟು ಮಾಡಿದೆ. ಆದರಿಂದ ಯುರೋಪ್, ಅಮೇರಿಕಾ ಮತ್ತು ಹಲವಾರು ನಾಡುಗಳು ರಶ್ಯಾ ಮೇಲೆ ಈಗಾಗಲೇ ಕೆಲವು ಹಣಕಾಸಿನ ಕಡಿವಾಣಗಳನ್ನು (economic sanctions) ಹಾಕಿದ್ದಾರೆ. ತೈಲಬೆಲೆ ಕಡಿತದಿಂದ ರಶ್ಯಾದ ಆದಾಯಗಳಿಕೆ ಕಡಿಮೆ ಆಗಿ, ಆ ನಾಡಿಗೆ ಹಣಕಾಸಿನ ತೊಂದರೆಯಾಗಲಿದೆ. ಬೆಲೆ ಇಳಿಕೆಯಿಂದಾಗಿ ಬೇರೆ ಬೇರೆ ನಾಡುಗಳಿಂದ ಹೂಡಿಕೆದಾರರನ್ನು ತನ್ನೆಡೆ ಸೆಳೆಯುವ ತಂತ್ರವೂ ಕೂಡ ಸೌದಿಯದಾಗಿದೆ. ಒಂದು ಕಡೆ ತೈಲ ಮಾರುಕಟ್ಟೆಯಲ್ಲಿ ರಶ್ಯಾದ ಬಲ ಕುಗ್ಗಿಸುವುದು, ಆ ಮೂಲಕ ಆ ನಾಡಿನ ಆದಾಯ ಗಳಿಕೆಗೆ ಪೆಟ್ಟು ಕೊಡುವುದಾದರೆ ಮತ್ತೊಂದು ಕಡೆ ತಾನೇ ಮಾರುಕಟ್ಟೆಯಲ್ಲಿ ಮೇಲುಗೈ ಹೊಂದುವ ಸೌದಿ ಅರೇಬಿಯಾದ ತಂತ್ರಗಳಿಂದ ತೈಲದ ಬೆಲೆ ಈಗ ಕುಸಿದಿದೆ. ಇದರಿಂದ ಬಳಕೆದಾರರ ನಾಡುಗಳಲ್ಲೂ ತೈಲದ ಬೆಲೆ ಕಡಿಮೆ ಆಗಿದೆ. ಆದರೆ ಮುಂದೆ ಏಳಿಗೆ ಹೊಂದುತ್ತಿರುವ ನಾಡುಗಳಿಂದ ತೈಲ ಬೇಡಿಕೆಯಲ್ಲಿ ಹೆಚ್ಚಳ ಕಂಡು ಬರುವ ಕಾರಣ, ತೈಲ ಬೆಲೆ ಮತ್ತೆ ಹೆಚ್ಚಾಗಲಿದೆ ಎಂದು ಬಲ್ಲವರು ಹೇಳುತ್ತಿದ್ದಾರೆ.

ಕಚ್ಚಾ ತೈಲ ಉತ್ಪಾದನೆ : ಮುಂದಿನ ದಿನಗಳಲ್ಲಿ ಅಮೇರಿಕಾ ನಂ 1?

ತೈಲ ಮಾರುಕಟ್ಟೆಯಲ್ಲಿ ಇಂದು ದೊಡ್ಡಮಟ್ಟದ ಹಿಡಿತ ಹೊಂದಿರುವ ಒಪೆಕ್ ಒಕ್ಕೂಟದ ಬೇರುಗಳು ಈಗ ಅಲ್ಲಾಡಲು ಶುರುವಾಗಿವೆ. ಇನ್ನು 10 ವರುಶದಲ್ಲಿ ಒಪೆಕ್ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಕಾರಣ ಅಮೇರಿಕಾದಲ್ಲಿ ದೊರೆಯುತ್ತಿರುವ ತೈಲ ಸಂಪನ್ಮೂಲಗಳು ಮತ್ತು ಅದನ್ನು ಹೊರ ತೆಗೆಯಲು ಅಮೇರಿಕಾದ ತೈಲಕಂಪನಿಗಳ ಮೇಲೆ ಹೆಚ್ಚುತ್ತಿರುವ ಹೂಡಿಕೆಗಳು. 2008ರಿಂದೀಚೆಗೆ ಅಮೇರಿಕಾದಲ್ಲಿ ಕಚ್ಚಾತೈಲ ಉತ್ಪಾದನೆಯಲ್ಲಿ ಶೇ 70 ರಶ್ಟು ಏರಿಕೆಯಾಗಿದ್ದು ಕಚ್ಚಾತೈಲದ ಆಮದು ಕಡಿಮೆಯಾಗುವಂತೆ ಮಾಡಿದೆ. ಇದು ಅಮೆರಿಕಾದ ತೈಲ ಉದ್ದಿಮೆ ಬೆಳೆಯುತ್ತಿರುವುದರ ಕುರುಹಾಗಿದೆ. 2020 ರ ಹೊತ್ತಿಗೆ ಅಮೇರಿಕಾವು ಕಚ್ಚಾತೈಲ ಉತ್ಪಾದನೆಯಲ್ಲಿ ಸೌದಿಯನ್ನು ಹಿಂದೆ ಸರಿಸಿ ಮೊದಲನೇ ಸ್ತಾನದಲ್ಲಿರುತ್ತದೆ ಎಂದು ಅಮೇರಿಕಾದ ಎನರ‍್ಜಿ ಇನ್ಪಾರ‍್ಮೇಶನ್ ಅಂಡ್ ಅಡ್ಮಿನಿಶ್ಟ್ರೆಶನ್ ( EIA ) ಹೇಳುತ್ತದೆ. ಅಂದರೆ ಅಮೇರಿಕಾವು ತೈಲ ಮಾರುಕಟ್ಟೆಯ ಯಜಮಾನಿಕೆಯನ್ನು ಹೊಂದುವ ದಿನಗಳು ದೂರವಿಲ್ಲ ಎಂದಂತಾಯಿತು!

( ಮಾಹಿತಿ ಸೆಲೆ: prajavani, in.reuters, economictimes, edition.cnn, opec.org, opec-wikieia.gov, economistenglish-al.akhbar )

( ಚಿತ್ರ ಸೆಲೆ: ibnlive.in.com, smh.com.au )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: