ಬೆಳೆಗೆ ಬೇಕಿರುವ ಪೊರೆತಗಳಾವವು?

ಚಯ್ತನ್ಯ ಸುಬ್ಬಣ್ಣ.

Fertilizer Application

ಕಾಳಿನ ಬೆಳೆಗಳಾದ ಬತ್ತ, ರಾಗಿ, ಜೋಳ ಅತವಾ ತರಕಾರಿಗಳು ಮುಂತಾದವನ್ನು ತಿಂಡಿ-ತಿನಿಸುಗಳಿಗಾಗಿ ಬೆಳೆಯುವುದು ಸಾಗುವಳಿ ಇಲ್ಲವೇ ಬೇಸಾಯ. ಮನುಶ್ಯ ಕಾಡು-ಮೇಡುಗಳಲ್ಲಿ ಅಂಡಲೆದು ಕಯ್ಗೆ ಸಿಕ್ಕ ಗೆಡ್ಡೆ-ಗೆಣಸುಗಳನ್ನು ತಿನ್ನುವುದು ಇಲ್ಲವೆ ತನ್ನ ಕಯ್ಯಲ್ಲಿ ಬೇಟೆಯಾಡಲು ಬರುವ ಉಸುರಿಗಳನ್ನು ಕೊಂದು ಅವುಗಳ ಬಾಡು ತಿಂದು ಬದುಕುವ ಕಾಲವೊಂದಿತ್ತು.

ಅಲೆಮಾರಿ ಬದುಕನ್ನು ಹಲವಾರು ತಲೆಮಾರುಗಳವರೆಗೂ ಸವೆಸಿದ ಮಂದಿ, ನಿದಾನವಾಗಿ ಒಂದೆಡೆ ನೆಲೆ ನಿಲ್ಲುವುದನ್ನು ರೂಡಿಸಿಕೊಂಡರು. ಕೂಳಿಗಾಗಿ ಅಲ್ಲಿಲ್ಲಿ ಅಲೆಯುವುದನ್ನು ಬಿಟ್ಟು ತಮಗೆ ಬೇಕಾದ ಬೆಳೆಗಳನ್ನು ಸಾಗುವಳಿ ಮಾಡಲು ಮೊದಲಿಟ್ಟರು. ನಮ್ಮ ಹಿರಿಯರ ಪೊಳಲಿಕೆ (civilization) ಬೆಳೆದು ಬಂದಂತೆಲ್ಲಾ ಅದರೊಟ್ಟಿಗೆ ಬೇಸಾಯವೂ ಮುಂದೆ ಸಾಗಿತು. ಬೇಸಾಯದಲ್ಲಿ ನೆರವಾಗುವ ಚಳಕಗಳನ್ನು ಒಂದೊಂದಾಗಿ ಹಳಬರು ಕಯ್ಗೂಡಿಸಿಕೊಂಡರು. ಯಾವುದರಿಂದ ಬೆಳೆಗಳ ಆರಯ್ಕೆ ಚೆನ್ನಾಗಿ ಆಗುತ್ತದೆ ಹಾಗೂ ಯಾವುದು ಅವುಗಳ ಬೆಳವಣಿಗೆಗೆ ತೊಡಕೊಡ್ಡುತ್ತದೆ ಎಂಬುದನ್ನು ಕಂಡುಕೊಂಡರು. ಒರೆಹಚ್ಚಿ ತಪ್ಪೆಸಗುವ (trial & error) ಹೊಲಬುಗಳಿಂದ ಒಕ್ಕಲುತನದ ತಿಳುವಳಿಕೆಯ ಕಣಜ ಪೀಳಿಗೆಯಿಂದ ಪೀಳಿಗೆಗೆ ಹೊಸತನ್ನು ಜೋಡಿಸಿಕೊಂಡು ಹಿಗ್ಗಿತು.

ಬೇಸಾಯದಲ್ಲಿ ಬೆಳೆಗಳ ಪೊರೆತ (nutrition) ಬಲು ಮುಕ್ಯವಾದುದು. ಬೆಳೆಗಳಿಗೆ ಮಣ್ಣು, ಪೊರೆತವನ್ನೊದಗಿಸುತ್ತದೆ ಎಂಬುದನ್ನು ಒಕ್ಕಲಿಗರು ಅರಿತಿದ್ದರೂ, ಇದರ ಹಿಂದಿನ ಗುಟ್ಟುಗಳನ್ನು ಕೆದಕಿ ನೋಡಬಲ್ಲಶ್ಟು ಅರಿಮೆಯ ಅಡಿಪಾಯ ಆಗ ಇರಲಿಲ್ಲ. ಆಕಳು ಸಗಣಿ, ತಿಪ್ಪೆಗೊಬ್ಬರ, ಬೂದಿ, ಹಿಂದಿನ ಬೆಳೆಯ ಎಲೆ, ರವದಿ ಮುಂತಾದ ಉಳಿಕೆಗಳನ್ನು ಮಣ್ಣಿಗೆ ಬೆರೆಸುವುದರಿಂದ ಬೆಳೆ ಹುಲುಸಾಗಿ ಬೆಳೆಯುತ್ತದೆ, ಒಳ್ಳೆಯ ಇಳುವರಿ ಪಡೆಯಬಹುದು ಅನ್ನುವುದು ಹಿಂದಿನವರಿಗೆ ಗೊತ್ತಿತ್ತು. ಪಲವತ್ತಾದ ಇಲ್ಲವೆ ಬರಡು ಮಣ್ಣಿನ ನಡುವಿನ ಬೇರೆತನವನ್ನು ಅವರು ತಿಳಿದಿದ್ದರು.

ಬೆಳೆಗೆ ಬೇಕಾದ ಪೊರೆತವನ್ನು ಇರ‍್ಪರಿಮೆ(chemistry)ಯ ಕಣ್ಣಿನಿಂದ ನೋಡಲು ಮುಂದಾದವರು ಯೂರೋಪಿಯನ್ನರು. ಮದ್ಯಯುಗದ ಯೂರೋಪಿನಲ್ಲಿ ಬೇಸಾಯದರಿಮೆಯ ಕುರಿತು ಆಳವಾದ ಅರಕೆಗಳು ಮೊದಲ್ಗೊಂಡವಾದರೂ 19ನೇ ನೂರೇಡಿನಿಂದಾಚೆಗೆ ಅರಿಮೆಯ ಕವಲುಗಳು ಚಿಗಿತು ಬೇಸಾಯದ ಇರ‍್ಪರಿಮೆ (agricultural chemistry)ಯ ಹರಹು ಹೆಚ್ಚಿತು. ಜೋಸೆಪ್ ಪ್ರೀಸ್ಟ್ಲೆ ಎಂಬ ಅರಿಗ ಉಸಿರ‍್ಗಾಳಿಯನ್ನು ಕಂಡುಹಿಡಿದನು. ಈ ಕಂಡುಹಿಡಿತ ಗಿಡಗಳ ಬೆಳವಣಿಗೆಯ ಕುರಿತ ಮುಂದಿನ ಅರಕೆಗಳಿಗೆ ಅಡಿಗಲ್ಲಾಯಿತು.

ತಿಯೊಡೊರ್ ಡಿ ಸಾಸ್ಸುರ್ (1804) ಮತ್ತು ಜೀನ್ ಬಾಪ್ಟಿಸ್ಟ್ ಬವ್ಸಿಂಗಾಲ್ಟ್ (1834) ತಂತಮ್ಮ ಅರಕೆಗಳಿಂದ ಅದಿರು ಬೇರಡಕ(mineral element)ದ ಕಣಗಳು ಗಿಡದ ಬೆಳವಣಿಗೆಗೆ ಪೂರಕ ಎಂಬುದನ್ನು ಸಾರಿದರು. ಬೇಸಾಯದ ಇರ‍್ಪರಿಮೆಯಲ್ಲಿ ಜರ‍್ಮನ್ ಅರಿಗ ಜಸ್ಟಸ್ ವಾನ್ ಲೀಬಿಗ್ (1840) ಹೆಸರುವಾಸಿಯಾದವರು. ಗಿಡದ ಪೊರೆತದಲ್ಲಿ ನಯ್ಟ್ರೋಜನ್ ನ ತಲೆಮೆಯನ್ನು ತಿಳಿಯಪಡಿಸಿದರು. ಆತ ತನ್ನ ಅರಕೆಗಳಿಂದ ಗಿಡಗಳು ತಮಗೆ ಬೇಕಾದ ಹಯ್ಡ್ರೋಜನ್ ಮತ್ತು ಉಸಿರ‍್ಗಾಳಿಯನ್ನು ನೀರಿನಿಂದ ಮತ್ತು ಕರಿ ಬೇರಡಕ(carbon element)ವನ್ನು ಗಾಳಿಯಿಂದಲೇ ಕಾರ‍್ಬನ್ ಡಯಾಕ್ಸಯ್ಡ್ ರೂಪದಲ್ಲಿ ಪಡೆಯುತ್ತವೆ, ಮಣ್ಣಿನಿಂದಲ್ಲ ಹಾಗೂ ಗಿಡಗಳು ಅದಿರು ಬೇರಡಕದ ಕಣಗಳನ್ನು ಮಣ್ಣಿನಿಂದ ಪಡೆಯುತ್ತವೆ ಎಂಬುದನ್ನು ಸಾದಿಸಿ ತೋರಿಸಿದರು. ಗಿಡಗಳ ಅದಿರು ಪೊರೆತ(mineral nutrition )ದ ನಂಟಿನ ಕಡು ಕಡಿಮೆಯ ಕಟ್ಟಲೆ (Law of Minimum)ಯನ್ನು ಹರಡಿದವರು ಇವರು. ಈ ಕಟ್ಟಲೆಯಂತೆ

ಗಿಡದ ಬೆಳವಣಿಗೆಯು ಅದಕ್ಕೆ ದೊರೆಯುವ ಒಟ್ಟು ಪೊರೆತದ ಅಂಕೆಗೊಳಪಟ್ಟಿಲ್ಲ, ಬದಲಿಗೆ ಉಳಿದೆಲ್ಲಾ ಪೋಶಕಾಂಶಗಳಿಗಿಂತ ಕಡಿಮೆ ಮಟ್ಟದಲ್ಲಿ ಇರುವ ಪೋಶಕಾಂಶದ ಪೂರಯ್ಕೆಯ ಅಂಕೆಗೊಳಪಟ್ಟಿರುತ್ತದೆ.

ಎಂದರೆ ಎತ್ತುಗೆಗೆ ಗಿಡಕ್ಕೆ ಉಳಿದೆಲ್ಲಾ ಬಗೆಯ ಪೊರೆತ ತಕ್ಕಮಟ್ಟಿಗೆ ದೊರೆತು ಮಣ್ಣಿನಲ್ಲಿ ಗಂದಕದ ಕೊರತೆ ಇದೆ ಎಂದಿಟ್ಟುಕೊಳ್ಳಿ, ಆಗ ಗಿಡದ ಬೆಳವಣಿಗೆ ಒಂದು ಎಲ್ಲೆಕಟ್ಟಿನೊಳಗಿರುತ್ತದೆ. ಆ ಎಲ್ಲೆಯನ್ನು ಮೀರಿ ಆ ಗಿಡ ಬೆಳೆಯಬೇಕಾದರೆ ಬೇರೆ ಪೋಶಕಾಂಶಗಳಿಗಿಂತ ಕಡಿಮೆ ಮಟ್ಟದಲ್ಲಿರುವ ಗಂದಕವನ್ನು ಪೂರಯ್ಸಬೇಕು ಎನ್ನುವುದು ಈ ಕಟ್ಟಲೆಯ ತಿರುಳು. ಬೇಸಾಯದಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆಗೆ ಈ ಕಟ್ಟಲೆಯೇ ಅಡಿಪಾಯವಾಯಿತು.

ಗಿಡದ ಪೊರೆತಕ್ಕೆ ಬೇಕಿರುವ ಬೇರಡಕಗಳು  

ಗಿಡಗಳಲ್ಲಿ 90ಕ್ಕೂ ಹೆಚ್ಚು ಬಗೆಯ ಬೇರಡಕಗಳಿದ್ದರೂ, ಒಟ್ಟು 16 ಬೇರಡಕಗಳು ಮಾತ್ರವೇ ಗಿಡದ ಬೆಳವಣಿಗೆಗೆ ಸಾಕು ಎಂದು ಅರಿಮೆ ತಿಳಿಸುತ್ತದೆ. ಅವುಗಳೆಂದರೆ ಕರಿ (C), ಹಯ್ಡ್ರೋಜನ್(H), ಉಸಿರ‍್ಗಾಳಿ(O), ನಯ್ಟ್ರೋಜನ್(N), ರಂಜಕ(P), ಪೊಟ್ಯಾಶಿಯಂ(K), ಕ್ಯಾಲ್ಶಿಯಂ(Ca), ಮೆಗ್ನೀಶಿಯಂ(Mg), ಗಂದಕ(S), ಕಬ್ಬಿಣ(Fe), ಮ್ಯಾಂಗನೀಸ್(Mn), ಜಿಂಕ್(Zn), ತಾಮ್ರ(Cu), ಮಾಲಿಬ್ಡಿನಂ(Mo), ಬೋರಾನ್(Bo), ಮತ್ತು ಕ್ಲೋರಿನ್(Cl).

ಗುಂಪಿಸುವಿಕೆ:

ಗಿಡಗಳ ಪೊರೆತಕ್ಕೆ ಬೇಕಾದ ಬೇರಡಕ(Elements)ಗಳಲ್ಲಿ ಕರಿ, ಹಯ್ಡ್ರೋಜನ್ ಮತ್ತು ಉಸಿರ‍್ಗಾಳಿ ಇವುಗಳು ಗಾಳಿ ಇಲ್ಲವೆ ನೀರಿನಿಂದ ಗಿಡಕ್ಕೆ ದೊರೆಯುತ್ತವೆ. ಇವುಗಳನ್ನು ಹೊರತುಪಡಿಸಿದ 13 ಬೇರಡಕಗಳನ್ನು ಯಾವ ಪ್ರಮಾಣದಲ್ಲಿ ಅವುಗಳ ಬೇಡಿಕೆ ಗಿಡಕ್ಕುಂಟು ಎನ್ನುವುದರ ಬುಡದ ಮೇಲೆ 2 ಗುಂಪುಗಳನ್ನಾಗಿ ಮಾಡಬಹುದು

ಹಿರಿಬೇಡಿಕೆಯ/ ಹಿರಿಪೊರೆಕಗಳು (Macro Nutrients)

ಇವು ಗಿಡಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತವೆ. ಗಿಡದ ಮಯ್ಯಿಟ್ಟಳ(body structure)ದ ಅಡಕವಾಗಿ, ಗೂಡುಕಟ್ಟಿನ (plant tissue) ಬಾಗವಾಗಿ ಇವು ಮುಕ್ಯ ಪಾತ್ರ ವಹಿಸುತ್ತವೆ. ಬತ್ತಿದ ಗಿಡದ ಟೊಂಗೆ ಮುಂತಾದ ಬಾಗಗಳ ಪ್ರತಿ ಗ್ರಾಂ ತೂಕದಲ್ಲಿ ಸುಮಾರು 1000 ಮಯ್ಕ್ರೋ ಗ್ರಾಂನಶ್ಟು ಹಿರಿಬೇಡಿಕೆಯ ಪೊರೆಕಗಳಿರುತ್ತವೆ ಎಂದು ಅರಿಗರು ಅಂದಾಜಿಸಿದ್ದಾರೆ.

ಈ ಗುಂಪಿನಲ್ಲಿ ನಯ್ಟ್ರೋಜನ್, ರಂಜಕ, ಪೊಟ್ಯಾಶಿಯಂ, ಕ್ಯಾಲ್ಶಿಯಂ, ಮೆಗ್ನೀಶಿಯಂ ಮತ್ತು ಗಂದಕ ಸೇರುತ್ತವೆ. ಕರಿ ಮತ್ತು ಉಸಿರ‍್ಗಾಳಿಗಳು ಸಾವಯವ ಕೂಡಿಕೆ (organic compounds)ಗಳ ಮುಕ್ಯ ಬಾಗವಾಗಿ ಕಂಡುಬರುತ್ತವೆ. ನಯ್ಟ್ರೋಜನ್ ಮುನ್ನು (protein) ಸೇರಿದಂತೆ ಹಲವಾರು ಸಾವಯವ ಕೂಡಿಕೆಗಳಲ್ಲಿರುತ್ತದೆ. ನೇಸರಿನ ಬೆಳಕನ್ನು ಹೀರಿಕೊಂಡು ಬೆಳಕಿನ ಒಂದುಗೆ(photosynthesis)ಯಲ್ಲಿ ನೆರವಾಗುವ ಎಲೆಹಸಿರು (Chlorophyll)ವಿನಲ್ಲಿ ನಯ್ಟ್ರೋಜನ್ ಸೇರಿರುತ್ತದೆ. ಮಾರಾಟವಾಗುವ ರಾಸಾಯನಿಕ ಗೊಬ್ಬರಗಳಲ್ಲಿ ಈ ಪೊರೆಕಗಳು ಹೆಚ್ಚಾಗಿ ಬಳಕೆಯಾಗುತ್ತವೆ. ಎತ್ತುಗೆಗೆ ಯೂರಿಯಾದಲ್ಲಿ 46% ನಯ್ಟ್ರೋಜನ್ ಇರುತ್ತದೆ.

ಕಿರುಬೇಡಿಕೆಯ/ ಕಿರಿಪೊರೆಕಗಳು (Micro Nutrients)

ಇವು ಗಿಡಗಳಿಗೆ ಸಣ್ಣ ಪ್ರಮಾಣದಲ್ಲಿ ಬೇಕಾಗುತ್ತವೆ. ಇವು ದೊಳೆಯ ಇದಿರೆಸಕ(enzymatic reactions)ದಲ್ಲಿ ಪಾಲ್ಗೊಳ್ಳುತ್ತವೆ ಹಾಗೂ ಬೆಳವಣಿಗೆಯ ಸುರಿಗೆ(growth hormones)ಗಳ ಬಾಗವಾಗಿ ಕಾಣಿಸಿಕೊಳ್ಳುತ್ತವೆ. ಗಿಡದೊಳಗೆ ಸಕ್ಕರೆ, ಗಂಜಿ (starch), ನಯ್ಟ್ರೋಜನ್, ರಂಜಕಗಳ ಸಾಗಾಣಿಕೆಯಲ್ಲೂ ಇವುಗಳ ಪಾತ್ರ ಉಂಟು. ಬತ್ತಿದ ಗಿಡದ ವಸ್ತು(plant dry matter)ವಿನ ಪ್ರತಿ ಗ್ರಾಂ ತೂಕದಲ್ಲಿ ಹೆಚ್ಚೆಂದರೆ 100 ಮಯ್ಕ್ರೋ ಗ್ರಾಂನಶ್ಟು ಕಿರುಬೇಡಿಕೆಯ ಪೊರೆಕಗಳಿರುತ್ತವೆ. ಈ ಗುಂಪಿನಲ್ಲಿ ಜಿಂಕ್, ಕಬ್ಬಿಣ, ಬೋರಾನ್, ಮಾಲಿಬ್ಡಿನಂ, ಮ್ಯಾಂಗನೀಸ್, ತಾಮ್ರ ಮತ್ತು ಕ್ಲೋರಿನ್ ಸೇರುತ್ತವೆ.

ಈ 16 ಬೇರಡಕಗಳನ್ನು ಹೊರತುಪಡಿಸಿ ಸೋಡಿಯಂ(Na), ಕೋಬಾಲ್ಟ್(Co), ವೆನೆಡಿಯಂ(Va), ನಿಕ್ಕಲ್(Ni) ಮತ್ತು ಸಿಲಿಕಾನ್(Si) ಈ ಅಯ್ದು ಬೇರಡಕಗಳು ಕೆಲವು ಗಿಡಗಳಲ್ಲಿ ಮಾತ್ರ ಅವಶ್ಯಕ ಎಂದು ತಿಳಿದುಬಂದಿದೆ.

(ಮಾಹಿತಿ ಸೆಲೆ: Principles of Agronomy – S.R.Reddy, Wikipedia)
(ತಿಟ್ಟಸೆಲೆ: thehindu.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 24/11/2014

    […] nutrients)ಗಳಲ್ಲಿ ನಯ್ಟ್ರೋಜನ್ ಒಂದೆಂದು ನಾವೀಗಾಗಲೇ ಅರಿತಿದ್ದೇವೆ. ನಯ್ಟ್ರೋಜನ್ ಬೇರಡಕವನ್ನು ಗಾಳಿಯಿಂದಲೂ […]

ಅನಿಸಿಕೆ ಬರೆಯಿರಿ:

%d bloggers like this: