ಅಮೇರಿಕಾದಲ್ಲಿ ನಡೆಯುತ್ತಿದೆ ನಡುಗಾಲದ ಚುನಾವಣೆ

– ರತೀಶ ರತ್ನಾಕರ.

ಅಮೇರಿಕಾದಲ್ಲಿ ಈಗ ನಡುಗಾಲದ ಚುನಾವಣೆಯ(midterm election) ಬಿಸಿ. ನವೆಂಬರ್ 4, 2014 ರಂದು ಓಟಿನ ದಿನ. ಸೋಲು-ಗೆಲುವುಗಳ ಲೆಕ್ಕಾಚಾರ, ರಾಜಕೀಯ ಪಕ್ಶಗಳ ತಂತ್ರಗಳು, ಹುರಿಯಾಳುಗಳ ಪ್ರಚಾರ, ರಾಜಕೀಯ ತಿಳಿವಿಗರ ವಿಶ್ಲೇಶಣೆ ಹೀಗೆ ಎಲ್ಲವೂ ಜೋರಾಗಿಯೇ ನಡೆಯುತ್ತಿದೆ. 2016 ರಲ್ಲಿ ಅದ್ಯಕ್ಶೀಯ ಚುನಾವಣೆ ಇರುವುದರಿಂದ ಈ ನಡುಗಾಲದ ಚುನಾವಣೆ ಸಾಕಶ್ಟು ಚರ‍್ಚೆಯಲ್ಲಿದೆ.

ಏನಿದು ನಡುಗಾಲದ ಚುನಾವಣೆ?

ಅಮೇರಿಕಾದ ಸಂಸತ್ತನ್ನು ಕಾಂಗ್ರೆಸ್ ಎಂದು ಕರೆಯುವರು, ನಮ್ಮಲ್ಲಿರುವ ಮೇಲ್ಮನೆ ಹಾಗು ಕೆಳಮನೆಗಳಂತೆ ಸೆನೆಟ್ (Senate) ಹಾಗು ಹೌಸ್ ಆಪ್ ರೆಪ್ರೆಸೆಂಟೇಟಿವ್ಸ್  ಗಳು(House of Representatives – ಹೌಸ್ ಎಂದು ಚಿಕ್ಕದಾಗಿ ಕರೆಯುತ್ತಾರೆ) ಕಾಂಗ್ರೆಸ್‍ನ ಬಾಗಗಳು. ಪ್ರತಿ ರಾಜ್ಯದ ಮಂದಿಯೆಣಿಕೆಯ ಆದಾರದ ಮೇಲೆ ಹಲವು ವಲಯಗಳನ್ನಾಗಿ ಮಾಡಲಾಗಿರುತ್ತದೆ. ಹೀಗಿರುವ ಪ್ರತಿಯೊಂದು ವಲಯದಿಂದ ಹುರಿಯಾಳುಗಳು ಹೌಸ್ ಗೆ ಆಯ್ಕೆಯಾಗಿ ಬಂದಿರುತ್ತಾರೆ. ಈಗ ಅಮೇರಿಕಾದ ಸಂಸತ್ತಿನಲ್ಲಿ ಒಟ್ಟು 435 ಹೌಸ್ ಆಪ್ ರೆಪ್ರೆಸೆಂಟೇಟಿವ್ಸ್ ಇದ್ದಾರೆ. ಹೌಸ್ ಆಪ್ ರೆಪ್ರೆಸೆಂಟೇಟಿವ್ಸ್ ಅವರ ಅದಿಕಾರದ ಕಾಲಮಿತಿ ಎರೆಡು ವರುಶಗಳಾಗಿರುತ್ತದೆ.

ಇನ್ನು ಪ್ರತಿಯೊಂದು ರಾಜ್ಯದಿಂದ ಇಬ್ಬರು ಸೆನೆಟರ್ ಗಳು ಆಯ್ಕೆಯಾಗಿ ಬರುತ್ತಾರೆ, ಇದಕ್ಕೆ ಯಾವುದೇ ಮಂದಿಯೆಣಿಕೆಯ ಲೆಕ್ಕಚಾರವಿರುವುದಿಲ್ಲ, ಹಾಗಾಗಿ ಒಟ್ಟು 100 ಸೆನೆಟರ್ ಗಳು ಆಯ್ಕೆಯಾಗಿ ಇರುತ್ತಾರೆ. ಸೆನೆಟರ್ ಗಳ ಅದಿಕಾರದ ಕಾಲಮಿತಿ ಆರು ವರುಶಗಳಾಗಿರುತ್ತದೆ. ಪ್ರತಿ ಎರೆಡು ವರುಶಗಳಿಗೊಮ್ಮೆ 1/3 ರಶ್ಟು ಸೆನೆಟರ್ ಗಳ (ಒಟ್ಟು 100 ಮಂದಿ ಸೆನೆಟರ್ ಗಳಲ್ಲಿ ಸುಮಾರು 33 ಮಂದಿ) ಅದಿಕಾರದ ಕಾಲಮಿತಿ ಮುಗಿಯುತ್ತದೆ. ಹಾಗಾಗಿ ಪ್ರತಿ ಎರೆಡು ವರುಶಕ್ಕೆ 1/3 ರಶ್ಟು ಸೆನೆಟ್ ಸ್ತಾನಗಳಿಗೆ ಚುನಾವಣೆ ನಡೆಯುತ್ತದೆ. ಸೆನೆಟ್ ಹಾಗು ಹೌಸ್ ಗೆ ಅದರದ್ದೇ ಆದ ಮಂದಿಯಾಳ್ವಿಕೆಯ ಅದಿಕಾರಗಳಿವೆ.

ಇನ್ನು ಚುನಾವಣೆಯ ವಿಶಯಕ್ಕೆ ಬರೋಣ, ಅಮೇರಿಕಾದ ಅದ್ಯಕ್ಶರ ಅದಿಕಾರದ ಕಾಲಮಿತಿ ನಾಲ್ಕು ವರುಶಗಳು, ಪ್ರತಿ ನಾಲ್ಕು ವರುಶಗಳಿಗೊಮ್ಮೆ ಅದ್ಯಕ್ಶೀಯ ಚುನಾವಣೆಯು ನಡೆದು ಅದ್ಯಕ್ಶರ ಆಯ್ಕೆ ಆಗುತ್ತದೆ. ಈ ನಾಲ್ಕು ವರುಶಗಳ ನಡು ಬಾಗದಲ್ಲಿ ಅಂದರೆ ಎರೆಡು ವರುಶಕ್ಕೆ ಒಂದು ಚುನಾವಣೆ ಆಗುತ್ತದೆ ಅದನ್ನು ನಡುಗಾಲದ ಚುನಾವಣೆ ಎನ್ನಲಾಗುತ್ತದೆ. ಈ ನಡುಗಾಲದ ಚುನಾವಣೆಯಲ್ಲಿ ಅದ್ಯಕ್ಶರ ಚುನಾವಣೆ ಆಗುವುದಿಲ್ಲ.

ನಡುಗಾಲದ ಚುನಾವಣೆಯೇ ಇರಲಿ ಇಲ್ಲವೇ ನಾಲ್ಕು ವರುಶದ ಅದ್ಯಕ್ಶರ ಚುನಾವಣೆಯೇ ಇರಲಿ, ಪ್ರತಿ ಎರೆಡು ವರುಶದ ಈ ಚುನಾವಣೆಯಲ್ಲಿ ಹೌಸ್ ಆಪ್ ರೆಪ್ರೆಸೆಂಟೇಟಿವ್ಸ್ ನ ಎಲ್ಲಾ 435 ಸ್ತಾನಗಳಿಗೆ ಮತ್ತು 1/3 ರಶ್ಟು ಸೆನೆಟ್ ಸ್ತಾನಗಳಿಗೆ ಚುನಾವಣೆ ನಡೆಯುತ್ತದೆ. ಇದಲ್ಲದೇ, ಕೆಲವು ಸಂಸತ್ತಿನ ಹುದ್ದೆಗಳು ಮತ್ತು ಗವರ‍್ನರ್ ಹುದ್ದೆಗಳಿಗೆ ಇದೇ ಹೊತ್ತಿನಲ್ಲಿ ಚುನಾವಣೆ ನಡೆಯುತ್ತದೆ.

ಸದ್ಯದ ಸ್ತಾನಗಳ ಅಂಕಿಅಂಶ:

ಅಮೇರಿಕಾದಲ್ಲಿ ರಿಪಬ್ಲಿಕನ್ ಮತ್ತು ಡೆಮಾಕ್ರೆಟಿಕ್ ಎಂಬ ಎರೆಡು ಪಕ್ಶಗಳದ್ದೇ ಮೇಲುಗೈ. ಸದ್ಯ ಅದ್ಯಕ್ಶರಾಗಿರುವ ಬರಾಕ್ ಒಬಾಮಾ ಅವರು ಡೆಮಾಕ್ರೆಟಿಕ್ ಪಕ್ಶದವರಾಗಿದ್ದಾರೆ. ಸೆನೆಟ್ ಹಾಗು ಹೌಸ್ ನ ಸದ್ಯದ ಸ್ತಾನಗಳು ಈ ಕೆಳಗಿನ ಪಟ್ಟಿಯಲ್ಲಿ ಇದೆ.

Congressಸೆನೆಟ್ ಅನ್ನು ಡೆಮಾಕ್ರೆಟಿಕ್ ಆಳುತ್ತಿದ್ದರೆ ಹೌಸ್ ಅನ್ನು ರಿಪಬ್ಲಿಕನ್ ಆಳುತ್ತಿದ್ದಾರೆ.

ಈ ಚುನಾವಣೆಯ ಬಾಣಗಳು:

ಈ ಚುನಾವಣೆಯು ಹಲವಾರು ಬಿಸಿ ಬಿಸಿ ಸುದ್ದಿಗಳ ಸುತ್ತ ನಿಂತಿದೆ. ಕಳೆದ ಬಾರಿ ಬಜೆಟ್‍ನಲ್ಲಾದ ಹಣದ ಕೊರತೆ, ಒಟ್ಟಾರೆ ಆದಾಯದ ಕೊರತೆ, ಒಬಾಮಾ ಕೇರ್ ವಿಮೆ, ಹೆಂಗಸರ ಹಕ್ಕುಗಳು, ಉದ್ಯೋಗ ಸಮಸ್ಯೆ ಮತ್ತು ಹೊರಗಿನವರ ವಲಸೆಯ ಸಮಸ್ಯೆಗಳು ಮುಕ್ಯವಾಗಿ ಚರ‍್ಚೆಗೆ ಬರುತ್ತಿವೆ. ಇದಲ್ಲದೇ ಕನಿಶ್ಟ ಕೂಲಿ, ಪರಿಸರ ಮಾಲಿನ್ಯದ ಸಮಸ್ಯೆಗಳು, ರಶ್ಯಾ, ಯುಕ್ರೇನ್ ಮತ್ತು ಅರಬ್ ನಾಡುಗಳ ನಡುವಿನ ಒಪ್ಪಂದಗಳು ಕೂಡ ರಾಜಕೀಯದ ಸುದ್ದಿಗಳಾಗಿವೆ.

ಉದ್ದಿಮೆಯಲ್ಲಿ ಹೇಳಿಕೊಳ್ಳುವಂತಹ ಕೆಲವು ಏಳಿಗೆಗಳು, ಗ್ರಾಹಕರ ತನ್ನಂಬುಗೆಯಲ್ಲಿನ ಹೆಚ್ಚಳ, ಉದ್ಯೋಗ ಸಮಸ್ಯೆಗಳನ್ನು ಕಡಿಮೆಗೊಳಿಸಲು ಸರಕಾರದ ಪ್ರಯತ್ನಗಳು ಮತ್ತು ಒಬಾಮಾರವರ ಕನಸಿನ ಕೂಸಾದ ‘ಒಬಾಮಾ ಕೇರ‍್’ (Patient Protection and Affordable Care Act) ಆರೋಗ್ಯ ವಿಮೆ, ಇವುಗಳನ್ನು ಮುಂದಿಟ್ಟುಕೊಂಡು ಡೆಮಾಕ್ರೆಟಿಕ್ ಪಕ್ಶದವರು ಚುನಾವಣೆಯನ್ನು ಎದುರಿಸುತ್ತಿದ್ದಾರೆ.

ಆದಾಯದ ಕೊರತೆ, ಒಬಾಮಾ ಕೇರ್ ನಲ್ಲಿನ ಹುಳುಕು, ವಲಸೆಯ ಸಮಸ್ಯೆ ಇನ್ನಿತರ ಮೇಲೆ ಹೇಳಿದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರಿಪಬ್ಲಿಕನ್ ಪಕ್ಶದವರು ಚುನಾವಣೆಗೆ ಹೋಗುತ್ತಿದ್ದಾರೆ. ಜಿದ್ದಾಜಿದ್ದಿನ ಗುದ್ದಾಟದಲ್ಲಿ ಗೆಲುವು ಯಾರಿಗೆ ಎಂದು ನೋಡಬೇಕಿದೆ.

ಲೆಕ್ಕಾಚಾರಗಳೇನು?

ರಾಜಕೀಯ ತಿಳಿವಿಗರ ಪ್ರಕಾರ ಸಾಕಶ್ಟು ಸಮಸ್ಯೆಗಳು, ಆದಾಯದ ಕೊರತೆ, ಕಳೆದ ಬಾರಿ ಆದ ಸರಕಾರದ ಮುಚ್ಚುವಿಕೆ (shut down) ಮತ್ತು ಒಬಾಮಾ ಕೇರ್ ನಂತಹ ವಿಶಯಗಳು ಡೆಮಾಕ್ರೆಟಿಕ್ ಪಕ್ಶಕ್ಕೆ ಮುಳುವಾಗುವಂತಿದೆ. ಅಲ್ಲದೇ ಈ ಬಾರಿ ಚುನಾವಣೆಗಿರುವ 1/3 ರಶ್ಟು ಸೆನೆಟರ್ ಸ್ತಾನಗಳಲ್ಲಿ ಹೆಚ್ಚಿನವು ರಿಪಬ್ಲಿಕನ್ ಪಕ್ಶದ ಪರ ಒಲವಿರುವಂತಹ ಸ್ತಾನಗಳು. 2008 ರಲ್ಲಿ ಒಬಾಮಾರವರ ಮಂದಿಮೆಚ್ಚುಗೆ ಹೆಚ್ಚಿದ್ದರಿಂದ ಈ ಸ್ತಾನಗಳಲ್ಲಿ ಹೆಚ್ಚಿನದನ್ನು ಡೆಮಾಕ್ರೆಟಿಕ್ ಕಬಳಸಿತ್ತು, ಆದರೆ ಈಗ ಆ ಸ್ತಾನಗಳಲ್ಲಿ ಒಬಾಮಾರವರ ವರ‍್ಚಸ್ಸು ಕೆಲಸ ಮಾಡುವುದು ಕಶ್ಟವಾಗಿದೆ.

2016 ರಲ್ಲಿ ಅದ್ಯಕ್ಶೀಯ ಚುನಾವಣೆ ಇದೆ, ರಿಪಬ್ಲಿಕನ್ ಹಾಗು ಡೆಮಾಕ್ರೆಟಿಕ್ ಪಕ್ಶದವರಲ್ಲಿ ಅದ್ಯಕ್ಶ ಸ್ತಾನಕ್ಕೆ ಪೈಪೋಟಿ ನಡೆಸಲಿರುವವರ ಮಂದಿಮೆಚ್ಚುಗೆಯ ಮೇಲೂ ಈ ಚುನಾವಣೆಯ ಪಲಿತಾಂಶ ನಿಂತಿದೆ. ಮುಂದಿನ ಅದ್ಯಕ್ಶ ಸ್ತಾನಕ್ಕೆ ಯಾರು ನಿಲ್ಲುತ್ತಾರೆ ಎಂಬುದು ಎರೆಡು ಪಕ್ಶಗಳಿಂದ ಇನ್ನೂ ನಿಕ್ಕಿ ಆಗಿಲ್ಲ, ಡೆಮಾಕ್ರೆಟಿಕ್ ಪಕ್ಶದಿಂದ ಹಿಲರಿ ಕ್ಲಿಂಟನ್ ಹಾಗು ರಿಪಬ್ಲಿಕನ್ ನಿಂದ ಹಿಂದಿನ ಅದ್ಯಕ್ಶರಾದ ಜಾರ‍್ಜ ಬುಶ್ ಅವರ ತಮ್ಮ ಜೆಬ್ ಬುಶ್ ರವರು ಅದ್ಯಕ್ಶ ಸ್ತಾನಕ್ಕೆ ನಿಲ್ಲಬಲ್ಲವರ ಪಟ್ಟಿಯಲ್ಲಿ ಇದ್ದಾರೆ.

ಮುಂದೇನು?

ರಾಜಕೀಯ ತಿಳಿವಿಗರ ಲೆಕ್ಕಾಚಾರದಂತೆ ರಿಪಬ್ಲಿಕನ್ ಪಕ್ಶಕ್ಕೆ ಸೆನೆಟ್ ಮತ್ತು ಹೌಸ್ ನಲ್ಲಿ ಬಹುಮತ ಬಂದರೆ ಮುಂದಿನ ಅದ್ಯಕ್ಶೀಯ ಚುನಾವಣೆಗೆ ಅದು ಅವರಿಗೆ ತುಂಬಾ ನೆರವಾಗಲಿದೆ. ಸದ್ಯದಲ್ಲಿ ಸೆನೆಟ್ ನಲ್ಲಿ ಆಳುತ್ತಿರುವ ಡೆಮಾಕ್ರೆಟಿಕ್ ಪಕ್ಶದವರ ಹೊಸ ಯೋಜನೆಗಳು ಹಾಗು ಕಾಯಿದೆಗಳನ್ನು ತಡೆಹಿಡಿಯುವ ಸಾದ್ಯತೆಗಳಿವೆ. ಹಾಗೆಯೇ ತಮ್ಮ ಪಕ್ಶದವರ ಕಾಯಿದೆಗಳನ್ನು ಮಂಡಿಸಿ ಅನುಶ್ಟಾನಗೊಳಿಸುವ ಕೆಲಸಗಳೂ ಆಗಬಹುದು. ಆದರೆ ಡೆಮಾಕ್ರೆಟಿಕ್ ಪಕ್ಶದವರ ಎಲ್ಲಾ ಯೋಜನೆಗಳನ್ನು ರಿಪಬ್ಲಿಕನ್ ಅವರು ತಡೆ ಹಿಡಿದರೆ, ಎಲ್ಲಾ ಅಬಿವ್ರುದ್ದಿ ಕೆಲಸಗಳನ್ನು ತಡೆ ಹಿಡಿಯುತ್ತಿದ್ದಾರೆ ಎಂದು ಮಂದಿಯಲ್ಲಿ ಅನಿಸಿಕೆ ಮೂಡಿ 2016ರ ಅದ್ಯಕ್ಶೀಯ ಚುನಾವಣೆಗೆ ತೊಂದರೆಯಾಗಬಹುದು, ಇದರ ಬಗ್ಗೆ ಕೂಡ ರಿಪಬ್ಲಿಕನ್ ಪಕ್ಶದವರು ಎಚ್ಚರವಹಿಸಬೇಕಾಗುತ್ತದೆ.

ಒಂದು ವೇಳೆ ರಿಪಬ್ಲಿಕನ್ ಪಕ್ಶದವರು ಗೆದ್ದರೆ, ಡೆಮಾಕ್ರೆಟಿಕ್ ಪಕ್ಶದವರಾದ ಒಬಾಮಾರವರು ರಿಪಬ್ಲಿಕನ್ ಪಕ್ಶದ ಬಹುಮತದಲ್ಲಿ,  ಅದ್ಯಕ್ಶ ಸ್ತಾನದಲ್ಲಿ ಕೆಲಸ ಮಾಡಬೇಕಾಗುತ್ತದೆ. ರಿಪಬ್ಲಿಕನ್ ಪಕ್ಶದ ಯೋಜನೆಗಳ ನಡುವೆ ತಮ್ಮ ಯೋಜನೆಗಳನ್ನು ಮಂಡಿಸಿ ಹೌಸ್ ಹಾಗು ಸೆನೆಟರ್ ಗಳ ಒಪ್ಪಿಗೆಯನ್ನು ಪಡೆಯಲು ಒಬಾಮಾರವರು ಹೇಗೆ ಪ್ರಯತ್ನಿಸುವರು ಎಂದು ನೋಡಲು ಸಿಗಬಹುದು. ಇಂತಹ ರಾಜಕೀಯ ಪರಿಸ್ತಿತಿಯಲ್ಲಿ ಕೆಲಸ ಮಾಡುವುದು ಕಶ್ಟವೇ ಆಗಿರುತ್ತದೆ. ಒಂದು ವೇಳೆ  ಡೆಮಾಕ್ರೆಟಿಕ್ ಪಕ್ಶವು ಗೆದ್ದಲ್ಲಿ, ಡೆಮಾಕ್ರೆಟಿಕ್ ಯೋಜನೆಗಳ ಅನುಶ್ಟಾನಕ್ಕೆ ದಾರಿಯಾಗಿ ಅದು ಅದ್ಯಕ್ಶೀಯ ಚುನಾವಣೆಗೆ ನೆರವಾಗುವುದು. ಮುಂದಿನ ಎರೆಡು ವರುಶಗಳಲ್ಲಿ ಒಳ್ಳೆಯ ಮಂದಿಯಬಿಪ್ರಾಯ ಮೂಡಿಸಲು ಪ್ರಯತ್ನ ಮಾಡಬಹುದು.

ಏನೇ ಇದ್ದರು ಈ ಚುನಾವಣೆಯು ಹಲವಾರು ಬಗೆಯಲ್ಲಿ ಚರ‍್ಚೆಯಲ್ಲಿದೆ. ಯಾವುದೇ ಪಕ್ಶ ಗೆದ್ದರು ಈಗಿರುವ ಸಮಸ್ಯೆಗಳನ್ನು ಬಗೆಹರಿಸಿ ಮಂದಿಯ ಮನಗೆದ್ದರೆ ಮುಂದಿನ ಅದ್ಯಕ್ಶ ಚುನಾವಣೆಯಲ್ಲಿ ಗದ್ದುಗೆ ಹಿಡಿಯಬಹುದು. ಯಾವುದಕ್ಕೂ ಕಾದುನೋಡಬೇಕಿದೆ.

(ಚಿತ್ರ ಸೆಲೆ: outsidethebeltway.com)

(ಮಾಹಿತಿ ಸೆಲೆ: congress.gov)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications