ನಗೆಬರಹ: ‘ವಾಕಿಂಗಾಯಣ’

– ಡಾ|| ಅಶೋಕ ಪಾಟೀಲ.

 

(ನನ್ನ ತೂಕ ಹೆಚ್ಚುತ್ತಿರುವುದರ ಬಗ್ಗೆ ನನಗೆ ಸುಳಿವುಕೊಟ್ಟು, ಇದನ್ನು ಕಡಿಮೆ ಮಾಡುವುದರ ಬಗ್ಗೆ, ನನ್ನ ಹೆಂಡತಿಗೆ ಪುಕ್ಕಟೆ ಸಲಹೆಗಳನ್ನಿತ್ತು ಕ್ರುತಾರ‍್ತರಾದ ಎಲ್ಲ ಮಹಾನುಬಾವರಿಗೆ ಅರ‍್ಪಿತ)

ನನ್ನಾಕೆಗೆ ತಾನು ಇಶ್ಟಪಡೋ ದೇವರು, ಅದಾಗಲೇ ಮಟ್ಟಸವಾದ, ತೆಳ್ಳನೆ ದೇಹವನ್ನು ಕೊಟ್ಟಿದ್ದರಿಂದ ವಾಕಿಂಗ್, ಜಾಗಿಂಗ್ ಎಂಬುವವು ಕೇವಲ ದಪ್ಪಗಾದವರು, ದಪ್ಪಗಾಗುತ್ತಿರುವವರು ಮಾತ್ರ ಮಾಡಬೇಕಾದ ಕೆಲಸಗಳು ಎಂದುಕೊಂಡಿದ್ದಳು. ತಾನು ಬೆಳಗ್ಗೆ ತೀರಾ ಬೇಗವಲ್ಲ, ತೀರಾ ತಡವಾಗಲ್ಲ ಎಂಬಂತಹ safe zone ಹೊತ್ತನ್ನು ಗೊತ್ತು ಮಾಡಿಕೊಂಡು ಹೆಚ್ಚುಕಡಿಮೆ ಏಳುತ್ತಿದ್ದಳು. ಆಪ್ಕೋರ‍್ಸ್, ಯಾವಾಗಲೂ ನಾನು ಏಳೋ ಮೊದಲು. ತಾನು ಎದ್ದು ಜಳಕ, ಪೂಜೆ ಮಾಡಿ ಹೊರಗೆ ಬಾಗಿಲಿಗೆ ಊದುಬತ್ತಿಯನ್ನು ಬೆಳಗಿಸಿ, ನೇಸರನಿಗೆ good morning ಹೇಳೋಕೆ ಹೊರಹೋದಾಗ ಬಾಲ್ಕನಿಯಿಂದ ಇವಳಿಗೆ ವಾಕಿಂಗ್ ಮುಗಿಸಿ ಮನೆಗೆ ವಾಪಸಾಗುತ್ತಿರುವ ಸಾದಕರು ಕಂಡುಬಿಡುತ್ತಿದ್ದರು. ನನ್ನ ಮೇಲೆ ಸಿಟ್ಟನ್ನು ಮನಸ್ಸಿಗೆ ಬರಿಸಿಕೊಂಡು ನನ್ನನ್ನು ವಾಕಿಂಗ್ ಹೋಗಲಾರದ್ದಕ್ಕೆ, ಬೇಗ ಏಳಲಾರದ್ದಕ್ಕೆ ಮೂದಲಿಸುತ್ತ ತನ್ನನ್ನು ತಾನು ಆಪೀಸಿಗೆ ಹೋಗಲು ತಯಾರುಮಾಡಿಕೊಳ್ಳುತ್ತಿದ್ದಳು. ಇವಳ ವಾಕಿಂಗ್ ಬಗೆಗಿನ ಕಂಪ್ಲೇಂಟ್ ಗಳೇ ನನಗೆ ಬೆಳಗಿನ ‘ಕೌಶಲ್ಯಾ ಸುಪ್ರಜಾ ರಾಮಪೂರ‍್ವಾ…’ ಎಂಬಂತೆ ಕಿವಿಗಳಿಗೆ ಕೇಳಿಸುತ್ತಿದ್ದವು. ಹೀಗೆ ತಿಂಗಳುಗಳು, ವರುಶಗಳು ಕಳೆದುಹೋದವು. ಆದರೆ ಎಂದೂ ನನ್ನ ದೇಹದ ತೂಕ ಸ್ವಲ್ಪವೇ ಸ್ವಲ್ಪ ಗ್ರಾಂನಶ್ಟೂ ಕಳೆದುಹೋಗಲಿಲ್ಲ. ಬದಲಿಗೆ ದಿನಕ್ಕಿಶ್ಟು ಗ್ರಾಂ, ತಿಂಗಳಿಗಿಶ್ಟು ಕಿಲೋ ಎಂಬಂತೆ, ನೌಕರಿಯಲ್ಲಿ ವರ‍್ಶಕ್ಕೆರಡು ಸಲ D.A ಹೆಚ್ಚಾದಂತೆ ನನ್ನ ದೇಹದ K.G ಯೂ, ವರುಶಕ್ಕೊಮ್ಮೆ increment ನಂತೆ ದೇಹದ ಸುತ್ತಳತೆಯೂ ಹೆಚ್ಚತೊಡಗಿತು. ನೋಡಲು ಅಶ್ಟೇನು ದಪ್ಪ ಅನಿಸದಿದ್ದರೂ, ದಪ್ಪವಾಗುತ್ತಿರುವವರ ಗುಂಪಿಗೆ ಸೇರುವ ಆಸಾಮಿಯಂತೂ ಆಗಿಹೋಗಿದ್ದೆ. ನನಗಿರಬೇಕಿದ್ದ ತೂಕಕ್ಕಿಂತ 10ಕಿಲೋ ಹೆಚ್ಚು ತೂಗುತ್ತಿದ್ದೆ. ಅಲ್ಲೇ ಎಡವಟ್ಟಾಗಿದ್ದು.

ಕಾಲೇಜಿನಲ್ಲಿ ಲೆಕ್ಚರರಾದ, ಮೊದಲೇ ಗುಂಡಗುಂಡಗಿದ್ದ ನನಗೆ ಇತ್ತೀಚೀನ ಎರಡು ಮೂರು ವರುಶಗಳಿಂದ ಇದ್ದುದರಲ್ಲಿಯೇ ಸ್ವಲ್ಪ ತೂಕ ತಿಂಗಳಿಗಿಶ್ಟಂತೆ ಹೆಚ್ಚಾಗಿದ್ದರಿಂದ ಜೊತೆಗೆಲಸದವರು ಇದರ ಬಗ್ಗೆ ಗೇಲಿ ಮಾಡಿ, ಯಾವುದೋ ಕಾರ‍್ಯಕ್ರಮದಲ್ಲಿ ಊಟ ಮಾಡುವಾಗ, ಹರಟುವಾಗ ಎಚ್ಚರಿಸತೊಡಗಿದ್ದರು. ಮಹಿಳಾ ಜೊತೆಗೆಲಸದವರೂ ಕೆಲವೊಮ್ಮೆ ಇದರ ಬಗ್ಗೆ ಅಚಾನಕ್ಕಾಗಿ ಈ ನಡುವೆ ಯಾಕೋ ಸ್ವಲ್ಪ ದಪ್ಪ ಕಾಣ್ತಿದ್ದೀರಿ ಎಂಬ ದಾಟಿಯಲ್ಲಿ ಹೇಳತೊಡಗಿದಾಗ, ಅದರಲ್ಲೂ ಕಾಲೇಜಿನ ಮುದ್ದಾದ ಹುಡುಗೀರೂ ಕೂಡ ‘ಸರ್ ತುಸು ವೇಯ್ಟ್ ಮೆಂಟೇನ್ ಮಾಡಿ’ ಎಂದಮೇಲಂತೂ ಈ ಹೇಳಿಕೆಯಲ್ಲಿ ಏನೋ ‘ತೂಕ’ವಿದೆ ಎನ್ನಿಸಿ ಸ್ವಲ್ಪ ಸಿರೀಯಸ್ ಆಗಿ ಈ ದೇಹತೂಕದ ವಿಶಯವನ್ನು ತೆಗೆದುಕೊಳ್ಳಬೇಕಾಯಿತು. ಹೆಂಡತಿಯಂತೂ ಪದೇ ಪದೇ ಎಚ್ಚರಿಸುತ್ತಿದ್ದರೂ ಡಯಟ್ ನಲ್ಲಿ ಅವಳಿಗೆ ಯಾವುದೇ ನಂಬಿಕೆ ಇರಲಿಲ್ಲ. ಬೆಣ್ಣೆ, ತುಪ್ಪ ಮತ್ತು ಸ್ವೀಟ್ ಗಳನ್ನು ತಿನ್ನದೇ ಅದ್ಯಾವ ಊಟ ಎನ್ನುವ ಲೆಕ್ಕ ಅವಳದಾಗಿತ್ತು. ಯಾವುದೇ ಡಯಟ್, ವಾಕಿಂಗ್, ಜಾಗಿಂಗ್ ಮಾಡದೆಯೇ, ಅವಳ ಮತ್ತು ಅವಳಂತೆ ಮಟ್ಟಸವಾಗಿರೋ ಇನ್ನಿತರರ ತೂಕ ಅದೇಗೆ ಹತೋಟಿಯಲ್ಲಿರುತ್ತದೋ ಎಂಬುದೇ ನನಗೆ ಯಾವಾಗಲೂ ಉತ್ತರ ಸಿಗದಿರೋ ಯಕ್ಶಪ್ರಶ್ನೆ!

ಅವಳ ಅಕ್ಕಂದಿರು, ತಂಗಿಯರೂ ಇವಳಿಗೆ ಕರೆ ಮಾಡಿ ಪೇಸ್ಬುಕ್ನಲ್ಲಿನ ನನ್ನ ಯಾವುದೋ ಸ್ಟೇಟಸ್ ನ ತಿಟ್ಟ ನೋಡಿ ‘ಮಾಮನವರಿಗೆ ಜಾಗಿಂಗ್ ಮಾಡೋಕೆ ಹೇಳಬಾರ‍್ದಾ ನೀನು? ಇಲ್ಲಾಂದ್ರೆ ಇನ್ನೊಂದೆರಡು ವರುಶಗಳಲ್ಲಿ ನಮ್ಮ ಚಂದ್ರು ಮಾಮನ ತರ ಡುಮ್ಮ ಆಗೋಗಿಬಿಡ್ತಾರೆ ನೋಡು, ಬಿಪಿ, ಶುಗರ್ ಕಾಯಿಲೆಗಳಿಗೆ ಈ ಡುಮ್ಮಂದಿರಂದ್ರೆ ಸರಕ್ಕನೆ ಬಂದು ಸೇರಿಕೊಂಡುಬಿಡ್ತಾವಂತೆ. ತುಸು ಎಚ್ಚರವಹಿಸು’ ಎಂದೆಲ್ಲ ಹೇಳಿ ಇವಳನ್ನು ನನ್ನ ಜೊತೆಗಿನ ಕಾಳಗಕ್ಕಣಿಮಾಡಿಬಿಟ್ಟರು. ಮೊದಲೇ ಈ ಬಗ್ಗೆ ಅಸಮಾದಾನ ಇದ್ದ ಇವಳಿಗೆ ಅವರ ಕಿವಿಮಾತು ಅವಳಲ್ಲಿ ಹೋರಾಟದ ಕಿಚ್ಚನ್ನ ಹೆಚ್ಚಿಸಿಬಿಟ್ಟಿತು. ಆದರೆ ವಿಪರ‍್ಯಾಸವೆಂದರೆ ಅವರು ಎಂದೂ ಡಯಟ್ ಬಗ್ಗೆ ಅವಳಲ್ಲಿ ಸೂಚಿಸಿದ್ದಿಲ್ಲ. ಹೊಟ್ಟೆಬಿರಿಯುವ ಹಾಗೆ ಊಟ ಮಾಡುವುದಕ್ಕೂ ತೂಕ ಹೆಚ್ಚುವುದಕ್ಕೂ ಸುತಾರಾಂ ನಂಟಿಲ್ಲ ಎನ್ನುವ ತತ್ವಗಳನ್ನು ಅವರ ಅಜ್ಜಿಮುತ್ತಾತಂದಿರ ಕಾಲದಿಂದ ನಂಬಿಕೊಂಡುಬಂದವರು. ಅವರೂ ಹೇಳುವುದೂ ಕರೇ ಆದ್ರೆ ಆ ರೀತಿ ಉಂಡಮೇಲೆ ಶ್ರಮವಿರುವ ಕೆಲಸಗಳನ್ನು ನಾವೆಲ್ಲ ಮಾಡೋದು ಬಿಟ್ಟು ತುಂಬಾನೇ ವರುಶಗಳಾದವಲ್ಲ?

ಇದನ್ನೆಲ್ಲ ಒಮ್ಮೆ ನನ್ನವಳಿಗೆ ತಿಳಿಸಿ ಹೇಳಿದೆ. ವಾಕಿಂಗ್, ಜಾಗಿಂಗ್ ಜೊತೆಗೆ ಊಟದಲ್ಲೂ ಪತ್ಯ ಮಾಡಿ ಡಯಟ್ ಮಾಡಿದಲ್ಲಿ ಮಾತ್ರ ತೂಕವನ್ನು ಒಂದಶ್ಟು ತಹಬದಿಗೆ ತರಬಹುದು ಎಂದು. ಆದ್ರೆ ಜಾಗಿಂಗ್ ದೆವ್ವ ಅವಳ ಹೆಗಲೇರಿ ಕುಳಿತು ನನ್ನ ಹೆಗಲೇರಲು ಇಣುಕಿ ನೋಡುತ್ತಿತ್ತು. ಏನೆಲ್ಲ ವಯ್ಗ್ನಾನಿಕವಾಗಿ ಹೇಳಹೋದರೂ ಅವೆಲ್ಲ ಅವಳಿಗೆ ನನ್ನ ಕಾಲೇಜಿನ ಲೆಕ್ಚರುಗಳಂತೆ ಅವಯ್ಗ್ನಾನಿಕ, ನಂಟಿಲ್ಲದ ಮತ್ತು ಎಸ್ಕೇಪಿಂಗ್ ಸೊಲ್ಲುಗಳೆನಿಸಿದವು. ಕೊನೆಗೂ ರಾತ್ರಿ ಬೇಗ ಮನೆಗೆ ಬಂದು ಮಲಗಿ, ಬೆಳಗ್ಗೆ ಅವಳೊಟ್ಟಿಗೆನೇ ಎದ್ದು, ಅವಳು ತನ್ನ ರೂಟೀನುಗಳನ್ನು ಮುಗಿಸಿಕೊಂಡು ಆಪೀಸಿಗೆ ರೆಡಿಯಾಗುವಶ್ಟು ಹೊತ್ತು ನಾನು ವಾಕಿಂಗ್ ಗೆ ಹೋಗಿಬರುವದೆಂದಾಯಿತು. ನನ್ನದೂ ಒಂದು ಕಂಡೀಶನ್ ಹಾಕಿದೆ. ಪುಣ್ಯಕ್ಕೆ ಅಪ್ರೂವ್ ಆಗಬೇಕೇ? ಡಯಟ್ ನ್ನೂ ವಾಕಿಂಗ್ ಜೊತೆ ಮಾಡುವುದು ಎಂದಾಯ್ತು. ಗಂಡನಿಗೆ ಊಟವಾದಮೇಲೆ ಏಳಲಿಕ್ಕೂ ಬಾರದಂತೆ ಹೊಟ್ಟೆಬಿರಿಯುವ ಹಾಗೆ ತಿನ್ನಿಸಿ ಸಮಾದಾನಗೊಳ್ಳುತ್ತಿದ್ದವಳಿಗೆ ಒಲ್ಲದ ಮನಸ್ಸಿನಿಂದ ‘ಹೂಂ’ ಎನ್ನಬೇಕಾಯ್ತು. ಅವಳ ತಲೆಯಲ್ಲಿ ಬಿಪಿ, ಶುಗರ‍್ರು ಗಳು ಒಮ್ಮೇಲೇ ಗುರ‍್ರ್ ಎಂದಿರಬೇಕು.

ಕೆಲವು ಪುಸ್ತಕಗಳನ್ನು ತಡಕಾಡಿ, ಗೂಗಲ್ಲಿನಲ್ಲಿ ಗೂಗ್ಲಿಸಿ ನನ್ನ ತೂಕವನ್ನು ಈಗಿರುವದಕ್ಕಿಂತ 10 ಕೇಜಿಯಶ್ಟು ಕಡಿಮೆಮಾಡಿಕೊಳ್ಳಲು ಡಯಟ್ ಚಾರ‍್ಟ್ ನ್ನು ಅಡುಗೆ ಮನೆಯಲ್ಲಿ ಅಂಟಿಸಿದೆ. ಅದೇ ತೆರನಾಗಿ ಅಡುಗೆ ಮಾಡಿ ಕೊಡಬೇಕೆಂದು ತಾಕೀತು ಮಾಡಿದೆ. ವಾಕಿಂಗ್ ಮೊದಲ್ಗೊಂಡಿತು. ಹೊಸ ಟ್ರ್ಯಾಕ್ ಸೂಟ್, ಶೂ ಗಳೆಲ್ಲವೂ ಬಂದವು. ಅಲೆಯುಲಿಯಲ್ಲಿ ಅಲಾರಾಮ್ ಬೇಡವೆಂದರೂ 5 ಗಂಟೆಗೆ ಬಾರಿಸತೊಡಗಿತು. ಅತೀ ಕಶ್ಟದ ಕೆಲಸವೆಂದರೆ ಸವಿನಿದ್ದೆಯಿಂದ ಏಳುವುದು ಎಂದು ಆವಾಗ ತಿಳಿಯಿತು. ಮೊದಮೊದಲು ಸ್ವಲ್ಪ ತಡವಾಗಿ ಹೋಗುತ್ತಿರುವಾಗ, ಅದಾಗಲೇ ವಾಕಿಂಗ್ ಮುಗಿಸಿ ವಾಪಸಾಗುತ್ತಿದ್ದ ಹಿರಿಯರ ಟೀಮ್ ಒಂದು ನನ್ನನ್ನೇ ಸಿಟ್ಟಿನಿಂದ ನೋಡಿದಂತೆ ಬಾಸವಾಗುತ್ತಿತ್ತು. ಅವರೆಲ್ಲ ಮಹಾನ್ ಸಾದಕರೆಂದು ಅವರೆಡೆಗೆ ಒಂದು ವಿಶೇಶ ಬೆರಗು ಮೂಡುತ್ತಿತ್ತು. ಇವರು ರಾತ್ರಿ ಮಲಗುತ್ತಾರೋ ಇಲ್ಲವೋ? ಅತವಾ ಈಗ ಹೋಗಿ ಜಳಕ, ತಿಂಡಿ ಎಲ್ಲ ಮಾಡಿ ಮಲಗಿ ಒಮ್ಮೇಲೇ ಸಂಜೆ ಎದ್ದು ಬಿಡುತ್ತಾರೋ ಏನೋ? ಎಂದೆಲ್ಲ ಅನಿಸುತ್ತಿತ್ತು. ಕೆಲವೊಮ್ಮೆ ಅವರನ್ನು ವಿಚಾರಿಸಲಾಗಿ, ಆ ವಯಸ್ಸಿನಲ್ಲಿ ನಿದ್ದೆನೇ ಬರೋದಿಲ್ಲ, ಬೇಗ ಎಚ್ಚರ ವಾಗಿಬಿಡುತ್ತೆ ಎಂದು ತಿಳಿದಾಗ ಇವರು ಬೇಗ ವಾಕಿಂಗ್ ಗೆ ಬರುವ ಮರ‍್ಮ ತಿಳಿಯಿತು.

ಒಂದೆರಡು ದಿನ ಬೇಗ ಏಳಲು ತುಂಬಾ ತ್ರಾಸದಾಯಕ ಎನಿಸಿತು. ಎಲ್ಲ ಟ್ರಿಕ್ಕುಗಳನ್ನೂ ಮಾಡಿನೋಡಿ ಸೋತು ಹೋದೆ. ಒಮ್ಮೆ ತಲೆನೋವು, ಮೈಕೈ ನೋವು ಎಂದೆ. ಕೇಳಲಿಲ್ಲ. ಮತ್ತೊಂದ್ ದಿನ ಇವತ್ತೊಂದು ದಿನ ಬಿಟ್ಟು ನಾಳೆಯಿಂದ ಹೋಗುತ್ತೇನೆಂದೆ, ಜಪ್ಪಯ್ಯ ಎಂದರೂ ಬಿಡಲಿಲ್ಲ. ಬೇಕಂತಲೇ ಅಲಾರಮ್ ಇಡದೇ ಹೋದೆ. ಅವಳೇ ‘ಅಲಾರಾಮಿಣಿ’ಯಾದಳು. ನನ್ನ ನಿದ್ದೆಯನ್ನು ಹಾಳುಗೆಡವಿ, ಅದಾವುದೋ ಹೇಳತೀರದ ಆನಂದ ಸವಿಯುತ್ತಿದ್ದಾಳೇನೋ ಎಂದೆನಿಸುತ್ತಿತ್ತು.
ನಾನು ಡಯಟ್ ಚಾರ‍್ಟ್ ನ್ನು ಪಾಲಿಸುವುದು ಅವಳಿಗೆ ನುಂಗಲಾರದ ತುತ್ತಾಗಿತ್ತು. ಕಾರಣ ನಾನು ಹಸಿಬಿಸಿ ಕಾಳು ಕಡಿ, ತಪ್ಪಲು ಸೊಪ್ಪುಗಳನ್ನೆಲ್ಲ ತಿನ್ನುವುದನ್ನು ನೋಡಿ ಅವಳಿಗೆ ಅರಗಿಸಿಕೊಳ್ಳಲಾಗುತ್ತಿರಲಿಲ್ಲ. ಈ ಮೊದಲು ನಾನು ಬಿಸಿ ಬಿಸಿ ಇಡ್ಲಿಗಳನ್ನು ಬೆಣ್ಣೆ, ಚಟ್ನಿ, ಸಾಂಬಾರಿನೊಂದಿಗೆ ಎಣಿಸದೇ ಆರಾಮವಾಗಿ ತಿನ್ನುತ್ತಿದ್ದುದು, ಒಬ್ಬಿಗಳ ಲೆಕ್ಕದಲ್ಲಿ ಪಡ್ಡುಗಳನ್ನು ಮಾಯಮಾಡುತ್ತಿದ್ದುದು, ಮೊದಲೆರಡು ಚಪಾತಿಗಳನ್ನು ತುಪ್ಪದಲ್ಲೇ ತಿಂದು ನಂತರದ ಚಪಾತಿಗಳನ್ನು ಪಲ್ಲೆಯ ಜೊತೆ ತಿನ್ನಲು ಅಣಿಯಾಗುತ್ತಿದ್ದುದು ಇವೆಲ್ಲ ಅವಳ ಕಣ್ಣಮುಂದೆ ಬಂದುಹೋದಂತಾಗಿ, ಈಗಿರುವ ಕಾಳುಕಡಿ ತೊಪ್ಪಲು, ಸೊಪ್ಪಿನ ಡಯಟ್ ಚಾರ‍್ಟ್ ನೋಡಿ ತುಂಬಾ ಸಂಕಟಪಡುತ್ತಿದ್ದಳು. ನನ್ನನ್ನು ಪ್ರಚೋದಿಸಲು ತರೇವಾರಿ ಇಶ್ಟದ ತಿನಿಸುಗಳನ್ನೆಲ್ಲ ಮಾಡಿ ನನ್ನ ಡಯಟ್ ನ್ನು ಮುರಿಯ ನೋಡಿದಳು. ಕಾಳು ಕಡಿಗಳನ್ನು ಕೊಟ್ಟು, ಒಂದೇ ಒಂದು ಬಿಸಿಬಿಸಿ ದೋಸೆ ಹಾಕಿ ಕೊಡ್ಲಾ? ಏನೂ ಆಗಲ್ಲ ತಿಂದುಬಿಡಿ ಎಂದು ಬಿಡುತ್ತಿದ್ದಳು. ಸುಮ್ಮನೆ ಸೊಪ್ಪು ತಿಂದೆನೇ ಹೊರತು ಸುತಾರಾಂ ಅವಳ ಮಾತಿಗೆ ಸೊಪ್ಪು ಹಾಕಲಿಲ್ಲ. ಅವಳು ವಾಕಿಂಗ್ ಕಳಿಸಲು ಪಣ ತೊಟ್ಟಂತೆ, ನಾನು ಬೇಕಂತಲೇ ಡಯಟ್ ಚಾರ‍್ಟ್ ಗೆ ಅಂಟಿಕೊಂಡೆ.

ಕೊನೆಗೆ ನನ್ನವಳು ಮಾಸ್ಟರ್ ಪ್ಲಾನ್ ಮಾಡಿದಳು. ನನ್ನಮ್ಮನಿಗೆ ನಾನು ಡಯಟ್ ಮಾಡ್ತಿರೋ ಕಂಪ್ಲೇಂಟ್ ಲಾಡ್ಜ್ ಮಾಡಿಬಿಟ್ಟಳು. ಗುಂಡಗುಂಡಗೆ ಇದ್ದಾಗ್ಲೇ, ನನ್ನಮ್ಮ ‘ಯಾಕೋ ತುಂಬಾ ಸೊರಗೋಗಿ ಬಿಟ್ಟಿದಾನೆ ಮಗ, ಬರೀ ಕುತ್ತಿಗೇನೇ ಕಾಣ್ತಿದೆಯಲ್ಲೋ? ಹೊತ್ತುಹೊತ್ತಿಗೆ ಸರಿಯಾಗ್ ಊಟಮಾಡ್ಬೇಕಪ್ಪಾ ಎಂದು ಸೊಸೆ ಎದುರಿಗೆ ಇನ್ ಡೈರೆಕ್ಟ್ ಆಗಿ ಸರಿಯಾಗಿ ನೋಡ್ಕೋ ಎಂಬ ಅತ್ತೆಯ ಆದೇಶಗಳನ್ನು ಕೊಟ್ಟು ಒಂದೆರಡು ದಿನ ಇದ್ದಂಗ ಮಾಡಿ, ತನ್ನವರ ನೆನಪಾಗಿ (ನಮ್ಮ ಅಪ್ಪನ) ಮತ್ತೆ ಹೋಗಿಬಿಡುತ್ತಿದ್ದಳು. ನಮ್ಮ ಸಂಸಾರದ ಪರೀಕ್ಶೆ ನಡೆಯುವಾಗ ಅಪ್ಪ, ಅಮ್ಮ ಅಚಾನಕ್ಕಾಗಿ ಪ್ಲಯಿಂಗ್ Squad ಬಗೆಯಲ್ಲಿ ಬಂದು ನಮ್ಮ ಸಂಸಾರನ Evaluation ಮಾಡಿ ಹೋಗುತ್ತಿರುತ್ತಾರೆ. ಇಂತಿಪ್ಪ ಅಮ್ಮನಿಗೆ ಇವಳು ಹೀಗೆ ಹೇಳಿದ್ದೇ ತಡ, ಕೂಡಲೇ ಊರಿಗೆ ಹೊರಟು ಬಂದು, ನಾನು ಕಾಲೇಜಿನಿಂದ ಹಿಂತಿರುಗುವಶ್ಟರಲ್ಲಿ ಅಡುಗೆ ಮನೆಲಿದ್ದ ಡಯಟ್ ಚಾರ‍್ಟ್ ನ್ನು ಹರಿದು ಹಾಕಿದ್ದಳು. ಕಾಲೇಜಿನಲ್ಲಿ 2 ಕ್ಲಾಸ್ ಮುಗಿಸಿ ಬಂದಿದ್ದ ನನಗೆ ನನ್ನಮ್ಮ ಮತ್ತೆರಡು ಕ್ಲಾಸ್ ತಗೊಂಡ್ಲು. ಸಂಜೆ ಇವಳು ಆಪೀಸಿನಿಂದ ಬಂದೊಡನೆ ಡಯಟ್ ಚಾರ‍್ಟ್ ಹರಿದಿದ್ದು ನೋಡಿ, ಅಮ್ಮ ನನಗೆ ಕ್ಲಾಸ್ ತಗೊಂಡಿದ್ದು ಕೇಳಿ ಮಹದಾನಂದ ಪಟ್ಟಳು. ಅಂದೇ ರಾತ್ರಿ ಅತ್ತೆ, ಸೊಸೆ ಸೇರಿ ರುಚಿರುಚಿಯಾದ ಅಡಿಗೆ ಮಾಡಿ ತಿನಿಸಿ ನನ್ನ ಡಯಟ್ ಗೆ ಎಳ್ಳು ನೀರು ಕರುಣಿಸಿದ್ರು. ನನ್ನಮ್ಮನಂತೂ ನಾನು ಪೂರ‍್ತಿಯಾಗಿ ಡಯಟ್ ಬಿಟ್ಟದ್ದು ನಿಕ್ಕಿ ಮಾಡಿಕೊಂಡೇ ಊರಿಗೆ ಮರಳಿದಳು. ನಾನು ಸೊರಗಿದ್ದರ ಬಗ್ಗೆ ಬಹಳಶ್ಟು ಮರುಗಿದಳು. ಅದೇನೋ ಗೊತ್ತಿಲ್ಲ, ಈಡೀ ಜಗತ್ತಿನಲ್ಲಿ, ಅವಳ ಕಣ್ಣಿಗೆ ಮಾತ್ರ ನಾನು ಯಾವಾಗಲೂ ಸೊರಗಿದಂತೆ ಕಾಣುತ್ತೇನೆ. ಇನ್ನೆಂದೂ ಡಯಟ್ ಗಿಯಟ್ ಮಾಡಬಾರದೆಂದೂ, ತಿಂದುಂಡು ಹಾಯಾಗಿರಬೇಕೆಂದು ಉಪದೇಶಿಸಿ ಹೋದಳು. ಇವಳಿಗಂತೂ ಅದೇ ಬೇಕಿತ್ತು. ಅದೇನೂ ಆಗಲ್ಲ ಬಿಡಿ ಎಂದು ಮತ್ತದೇ ಬರ‍್ಜರಿ ಊಟ ಮೊದಲ್ಗೊಂಡಿತು.

ಜೂನ್ ಎರಡನೇ ವಾರಕ್ಕೆ ನನಗಾಗೇ ಕರೆಸಿಕೊಂಡಂತೆ ಮುಂಗಾರು ಮಳೆ ಕಾಲಿಟ್ಟಿತು. ಬೆಳಗಿನ ಜಾವ ಚುಮುಚುಮು ಚಳಿಗೆ ಹನಿ ಹನಿ ನೀರಿನ ಸಿಂಚನ ವಾಗುತ್ತಿತ್ತು. ಬೆಚ್ಚಗೆ ಇವಳ ತೆಕ್ಕೆಯಲ್ಲಿ ನಾನು ಮಲಗಿದ್ದಶ್ಟೇ ಗೊತ್ತು. ನಸುಕಿನ ಜಾವ ಇವಳು ಯಾವಾಗ ಎದ್ದು ಹೋಗ್ತಾಳೋ ಗೊತ್ತೇ ಆಗ್ತಿರಲಿಲ್ಲ. ಬೆಳಗಿನ ಮಳೆ ನನಗೆ ತುಂಬಾ ಆನಂದವನ್ನುಂಟುಮಾಡುತ್ತಿತ್ತು, ಬೇರೇನೂ ಕಾರಣವಿಲ್ಲ, ಅದು ನನ್ನ ಆವತ್ತಿನ ವಾಕಿಂಗ್ ನ್ನು ತಪ್ಪಿಸಿ ಸುಕವಾಗಿ ಹಾಸಿಗೆ ಮೇಲೆ ಹೊರಳಾಡುವಂತೆ ಮಾಡುತ್ತಿತ್ತು. ವಾಕಿಂಗ್ ಮಿಸ್ ಆಗಿದ್ದೇ ಒಂದು ಹೇಳತೀರದ ಸೊಮ್ಮಿನ ಸವಿಯುಂಡಂತಾಗುತ್ತಿತ್ತು. ನಾನು ಮಳೆಯಲ್ಲಿ ಆರಾಮಾಗಿ ಎದ್ದು ಆಗಿ, ಪೇಪರ್ ಓದುತ್ತಾ, ಮಳೆಯ ಗುಣಗಾನ ಮಾಡುತ್ತ ಅವಳು ಮಾಡಿಕೊಡೋ ಬಿಸಿಬಿಸಿ ಟೀಯನ್ನು ಕುಡಿಯೋದೇ ಸಡಗರವೆನಿಸುತ್ತಿತ್ತು. ಹೀಗೆ ಒಂದು ವಾರ ಬೆಳಗಿನ ಮಳೆಯಿಂದ ವಾಕಿಂಗ್ ಆಲ್ ಮೋಸ್ಟ್ ನಿಂತುಹೋಗಿತ್ತು. ಅವಳೂ ಮಳೆಯ ಸಲುವಾಗಿ ಹೇಳಿ ಹೇಳಿ ಸುಮ್ಮನಾಗಿದ್ದಳು. ಒಂದು ದಿನ ಆರಾಮವಾಗಿ ಟೀ ಕುಡಿಯುತ್ತಿದ್ದವನನ್ನು ಕಿಟಕಿಯ ಬಳಿ ಬರುವಂತೆ ಸನ್ನೆ ಮಾಡಿದಳು. ಹೊರಗೆ ಅದೇ ಹಿರಿಯರ ಟೀಮ್ ಅಂತ ಜಿಟಿ ಜಿಟಿ ಮಳೆಯಲ್ಲೂ ಕೊಡೆಗಳನ್ನು ಹಿಡಿದುಕೊಂಡು ವಾಕಿಂಗ್ ಮುಗಿಸಿ ಮನೆಗೆ ಮರಳುತ್ತಿತ್ತು! ಎಲ್ಲರ ಕೈಯಲ್ಲೂ ಕೊಡೆಗಳು!!. ಅವಳು ಮುಗುಳ್ನಗುತ್ತ, ನನ್ನ ಕಿವಿಹಿಡಿದು ಹಾಲ್ ನಲ್ಲಿ ಇಟ್ಟ ಕೊಡೆಯ ಕಡೆ ನನ್ನ ಕರೆದೊಯ್ದಳು.

(ಚಿತ್ರಸೆಲೆ: dailymail.co.uk )

ನಿಮಗೆ ಹಿಡಿಸಬಹುದಾದ ಬರಹಗಳು

No Responses

  1. 18/05/2015

    […] –  ಡಾ|| ಅಶೋಕ ಪಾಟೀಲ. […]

ಅನಿಸಿಕೆ ಬರೆಯಿರಿ:

Enable Notifications