ಅಣು ಕೂಡಿಕೆಯಿಂದ ಮಿಂಚು – ಸವಾಲುಗಳೇನು?

– ರಗುನಂದನ್.

ಹಿಂದಿನ ಬರಹದಲ್ಲಿ ಅಣುಕೂಡಿಕೆಯಿಂದ ಮಿಂಚನ್ನು ಪಡೆಯುವ ಬಗೆಯನ್ನು ತಿಳಿದೆವು. ಅಣು ಕೂಡಿಕೆಯ ಹೊಲಬಿನಿಂದ ಸುತ್ತಮುತ್ತಲಿನ ಪರಿಸರಕ್ಕೆ ಯಾವುದೇ ತೊಂದರೆಯಿಲ್ಲ(environmental friendly). ಬೂದಿ(ash), ಕರ‍್ಪು(carbon), ಹೊಗೆ(smoke), ಕೊಳಕು ನೀರು(polluted water) ಮತ್ತು ಕೆಟ್ಟಗಾಳಿ ಇಂತಹ ಯಾವುದೇ ಹಾನಿಯಿಲ್ಲ, ಆದರೂ ಅಣು ಕೂಡಿಕೆಯಿಂದ ನಾವು ಮಿಂಚನ್ನು ಯಾಕೆ ಬಳಸುತ್ತಿಲ್ಲ ಎಂಬುದನ್ನು ಈ ಬರಹದಲ್ಲಿ ತಿಳಿಯೋಣ.

ಅಣು ಕೂಡಿಕೆಯನ್ನು ಯಾಕೆ ನಾವು ಯಾಕೆ ಬಳಸುತ್ತಿಲ್ಲ?

1. ಅಣು ಕೂಡಿಕೆಯಲ್ಲಿ ಡ್ಯೂಟಿರಿಯಮ್-ಟ್ರೈಶಿಯಮ್ ಅಣುಗಳು ಒಂದಕ್ಕೊಂದು ಕೂಡಬೇಕಾದರೆ ಕಡುಹೆಚ್ಚು ಕಾವಳತೆ ಬೇಕಾಗುತ್ತದೆ, ಅಂದರೆ 100 ಮಿಲಿಯ ಡಿಗ್ರಿಗಳಶ್ಟು(100 million degree centigrade). ಹೆಚ್ಚು ಹರವು ಮತ್ತು ಕಾಲದಲ್ಲಿ ಅಶ್ಟು ಕಾವಳತೆ ಹೇಗೆ ಉಂಟು ಮಾಡಬಹುದೆಂಬುದು ಇನ್ನೂ ಗೊತ್ತಿಲ್ಲ. ನೇಸರನಲ್ಲಿ ಈ ಮಟ್ಟದ ಕಾವಳತೆ ಕಾಣಬಹುದು. ಅಲ್ಲಿ ಕೂಡ ಇದೇ ಅಣು ಕೂಡಿಕೆ ನಡೆಯುತ್ತಿದ್ದು ನಮಗೆ ದಿನಾಲು ಬೆಳಕು ಮತ್ತು ಹುರುಪು ನೇಸರನಿಂದ ದೊರಕುತ್ತಿರುವುದು ಇದೇ ಮಾದರಿಯಲ್ಲಿ. ಅದರಿಂದ ಗಿಡ ಮರಗಳು ಬೆಳೆಯುತ್ತಿವೆ. ನಾವು ಬೆಳೆಗಳನ್ನು ಬೆಳೆಯುತ್ತಿದ್ದೇವೆ. ಅದೇ ಮನುಶ್ಯರಿಗೆ ಊಟ ದೊರಕಿಸುತ್ತಿದೆ. ಈ ಬೂಮಿಯ ಮೇಲೆ ಉಸಿರಿಗಳು ಇರುವುದೇ ಅಣು ಕೂಡಿಕೆಯಿಂದ ಬರುವ ಬೆಳಕು ಮತ್ತು ಹುರುಪಿನಿಂದ ಎಂದು ಹೇಳಬಹುದು.

2. ಅಶ್ಟು ಕಾವಳತೆಯನ್ನು ಉಂಟುಮಾಡಿದೆವು ಎಂದು ಇಟ್ಟುಕೊಳ್ಳೋಣ. ಆಗ ಅದನ್ನು ಹಿಡಿದಿಟ್ಟುಕೊಳ್ಳಬಹುದಾದ ವಸ್ತು ಯಾವುದಾದರು ಇದೆಯೇ? ಏಕೆಂದರೆ ಬರಿಯ ಮೂರು ಸಾವಿರ ಡಿಗ್ರಿಗಳಿಗಶ್ಟೆ ಎಲ್ಲಾ ಗೊತ್ತಿರುವ ವಸ್ತುಗಳು ಕರಗಿ ಹೋಗುತ್ತವೆ. ಇದಕ್ಕೆ ಬಗೆಹರಿಕೆ ಎಂದರೆ ದ್ಯೂಟಿರಿಯಮ್-ಟ್ರೈಶಿಯಮ್ ಬೆರಕೆಯನ್ನು ಸೆಳೆ-ಸುರುಳಿಗಳ(magnetic coils) ಮೂಲಕ ಎರಕದ ಇರವಿನಲ್ಲಿ ಇರಿಸಬಹುದೇ ಎಂದು ಅರಿಗರು ಯೋಚಿಸುತ್ತಿದ್ದಾರೆ. ಹಾಗಾದಾಗ ಹೆಚ್ಚು ಕಾವಳತೆಯ ಬಾಗಗಳು ಸುತ್ತಲಿನ ವಸ್ತುವಿಗೆ ತಾಕದಂತೆ ನೋಡಿಕೊಳ್ಳಬಹುದು. ಈ ಬಗೆಯ ಏರ‍್ಪಾಟಿಗೆ ಟೋಕಾಮಾಕ್ ಎನ್ನುತ್ತಾರೆ. ಟೋಕಾಮಾಕಿನಲ್ಲಿ ಬಿಡಿ ಎಲೆಕ್ಟ್ರಾನ್ಗಳು ಮತ್ತು ಅಣುಗಳು ಪ್ಲಾಸ್ಮಾ/ಎರಕದ ಇರವಿನಲ್ಲಿ(molten state/plasma) ಇರುವುದರಿಂದ ಒಂದಕ್ಕೊಂದು ಡಿಕ್ಕಿ ಹೊಡೆದಾಗ ಹೀಲಿಯಮ್ ರೂಪುಗೊಳ್ಳುತ್ತದೆ. ಅದರಿಂದ ಉಂಟಾಗುವ ಬಿಸಿ ಕಾವಿನಿಂದ ಮಿನ್ಕೆಯನ್ನು ಹುಟ್ಟುಹಾಕಬಹುದು.

ಇತ್ತೀಚಿಗೆ ಅಮೇರಿಕಾದ ದೊಡ್ಡ ಕಂಪೆನಿಗಳಲ್ಲಿ ಒಂದಾದ ಲಾಕ್‌ಹೀಡ್ ಮಾರ‍್ಟಿನ್(Lockheed Martin) ಅಣು ಕೂಡಿಕೆಯ ಕುರಿತಾಗಿ ಸುದ್ದಿಯೊಂದನ್ನು ಬಿಡುಗಡೆ ಮಾಡಿದೆ. ಲಾಕ್‌ಹೀಡ್ ಮಾರ‍್ಟಿನಿನ ತಾಮಸ್ ಮೆಗ್ವೈರ್ ಕಳೆದ ತಿಂಗಳಿನ ಸುದ್ದಿಕೂಟದಲ್ಲಿ ಹೀಗೆ ಹೇಳಿದ್ದಾರೆ –

ಹೊಸ ಅಣುವಿನ ಶಕೆಯೊಂದನ್ನು ಮೊದಲು ಮಾಡೋಣ. ಪ್ರಪಂಚಕ್ಕೆ ಹಸನಾದ ಹುರುಪನ್ನು ಕೊಡುವುದು ನಮ್ಮ ಮುಂದಿನ ಗುರಿಯಾಗಿದೆ.

ಇನ್ನು ಹತ್ತು ವರುಶಗಳಲ್ಲಿ ಈ ಚಳಕದರಿಮೆಯ ಮೂಲಕ ಮಿನ್ಕೆಯನ್ನು ತಯಾರಿಸಲಾಗುತ್ತದೆ ಎಂದು ಲಾಕ್‌ಹೀಡ್ ಮಾರ‍್ಟಿನ್ ಹೇಳಿಕೊಂಡಿದೆ. ಇದರಿಂದಾಗಿ ಅರಿಮೆಯ ಕೂಟಗಳಲ್ಲಿ (scientific circles) ಈ ಸುದ್ದಿ ಸಾಕಶ್ಟು ಚರ‍್ಚೆಗಳನ್ನು ಹುಟ್ಟುಹಾಕಿದೆ. ತಾಮಸ್ ಮೆಗ್ವೈರ್ ಪ್ರಕಾರ ಟೋಕಾಮಾಕ್‌ಗಳ ಒಳಗೆ ಇರುವ ಪ್ಲಾಸ್ಮಾ/ಎರಕದ ಒತ್ತಡ ಹೆಚ್ಚಾದರೆ ಅದರ ಸುತ್ತಲಿನ ವಸ್ತುವಿಗೆ ತೊಂದರೆಯಾಗುತ್ತದೆ. ಅದರ ಬದಲು ಒತ್ತಡವನ್ನು ಕಡಿಮೆ ಇಟ್ಟಲ್ಲಿ ಅಣುಗಳು ಒಂದಕ್ಕೊಂದು ಡಿಕ್ಕಿ ಹೊಡೆಯುವ ಸಲದೆಣಿಕೆ ಕಡಿಮೆಯಾಗುತ್ತದೆ ಮತ್ತು ಟೋಕಾಮಾಕ್ ಗಳನ್ನು ತಯಾರಿಸಿದ ವಸ್ತುವಿನ ಮೇಲೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಈ ಬಗೆಯಲ್ಲಿ ಮಾಡಿದರೆ, ಹಣಕಾಸಿನ ನೋಟದಿಂದ ನೋಡಿದರೆ ಅಶ್ಟು ಗಿಟ್ಟುವ ಏರ‍್ಪಾಟು(profitable venture) ಎನಿಸುವುದಿಲ್ಲ. ಅದಕ್ಕಾಗಿ ಲಾಕ್‌ಹೀಡ್ ಅವರು ಮೊಗೆಸಿರುವ ಟೋಕಾಮಾಕಿನಲ್ಲಿ ಪ್ಲಾಸ್ಮಾವು ಗೋಡೆಯ ಹತ್ತಿರ ಬರುತ್ತಿದ್ದಂತೆ ಸೆಳೆ-ಸುರುಳಿಗಳ ಹರಹು ಹೆಚ್ಚಾಗುತ್ತಾ ಹೋಗುತ್ತದೆ. ಹಾಗಾಗಿ ಆ ಎಡೆಯಲ್ಲಿ ಒತ್ತಡ ಹೆಚ್ಚಾಗಿರುತ್ತದೆ. ಮತ್ತು ಆ ಬಾಗದಲ್ಲಿ ಹೆಚ್ಚು ಮರುಎಸಕಗಳು ಆಗುತ್ತವೆ. ಹೆಚ್ಚು ಹುರುಪು ದೊರೆಯುತ್ತದೆ.

ತಾಮಸ್ ಮೆಗ್ವೈರ್ ತಂಡವು ತಯಾರಿಸುತ್ತಿರುವ ಟೋಕಾಮಾಕ್‍ಗಳು ಎಶ್ಟು ಚಿಕ್ಕದಾಗಿ ಇರುತ್ತವೆಯೆಂದರೆ ಅದನ್ನು ಒಂದು ಟ್ರಕ್ ಇಲ್ಲವೇ ಲಾರಿಯ ಹಿಂದೆ ಅಳವಡಿಸಬಹುದು, ಹೀಗೆ ಮಾಡುವುದು ಸುಲಬದ ಮಾತಲ್ಲ ಎಂದು ಜಗತ್ತಿನ ಅರಿಗರ ಅನಿಸಿಕೆ. ಈ ಹಮ್ಮುಗೆಯ ವಿಶಯವಾಗಿ ಲಾಕ್‌ಹೀಡ್ ಯಾವುದೇ ಗುಟ್ಟುಗಳನ್ನು ಹೊರಹಾಕಿಲ್ಲ. ಈ ಹಮ್ಮುಗೆ ಗೆಲುವು ಕಂಡಲ್ಲಿ ಜಗತ್ತು ಎದುರಿಸುತ್ತಿರುವ ಹುರುಪು ತೊಂದರೆ ಕೊನೆಗೊಳ್ಳಬಹುದು. ಇನ್ನೂ ಹತ್ತು ವರುಶ ಕಾದುನೋಡಬೇಕಿದೆ. ಇದರ ಕುರಿತಾಗಿ ಲಾಕ್‌ಹೀಡ್ ಮಾರ‍್ಟಿನ್ ಅಕ್ಟೋಬರ್ ಹದಿನಾಲ್ಕರಂದು ಬಿಡುಗಡೆ ಮಾಡಿರುವ ಓಡುತಿಟ್ಟ(video) ಈ ಕೆಳಗಿದೆ.

(ಚಿತ್ರ ಸೆಲೆ: chenected.iche, wikipedia, wired.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: