ಹೊಸ ಅಲೆಯ ತರಲಿರುವ ಚಿತ್ರ – ಅಬಿಮ”ನ್ಯು”

ವಲ್ಲೀಶ್ ಕುಮಾರ್.

arjun_sarja
ಸಿನೆಮ ಅನ್ನುವುದು ಕೂಡಣಕ್ಕೆ ಹಿಡಿದ ಕನ್ನಡಿಯೇ ಸರಿ. ಒಂದು ಕೂಡಣದ ಆಗುಹಗಳು, ಅಲ್ಲಿ ಹೆಚ್ಚಾಗಿ ಕಾಡುತ್ತಿರುವ ತೊಂದರೆಗಳು/ಗೊಂದಲಗಳು ಒಂದು ಅಳತೆ ಮೀರಿ ಬೆಳೆದ ನಂತರ ಸಿನೆಮ ವಿಶಯಗಳಾಗುತ್ತವೆ. ಇದಕ್ಕೆ ಎತ್ತುಗೆ ಎಂದರೆ ಸುಮಾರು ಮೂವತ್ತು ವರ‍್ಶಗಳ ಹಿಂದೆ ವರದಕ್ಶಿಣೆ, ನಿರುದ್ಯೋಗ ಸೇರಿದಂತೆ ಆಗಿನ ಕೂಡಣದಲ್ಲಿ ಹೆಚ್ಚು ಮಂದಿಯನ್ನು ಕಾಡಿದ ತೊಂದರೆಗಳನ್ನು ಸಿನೆಮಾಗಳಲ್ಲಿ ಕಾಣುತ್ತಿದ್ದೆವು. ಈಗಿನ ಕೂಡಣದಲ್ಲಿ ಹೆಚ್ಚು ಮಂದಿಯನ್ನು ಕಾಡುತ್ತಿರುವ ವಿಶಯಗಳಲ್ಲಿ ಮಕ್ಕಳ ಶಾಲಾ ಕಲಿಕೆಯ ಗೊಂದಲವೂ ಒಂದಾಗಿದೆ.

ಈ ವಿಶಯ ಸಿನೆಮ ಆಗುವ ಮಟ್ಟಿಗೆ ಬೆಳೆದಿದೆ ಅನ್ನುವುದನ್ನು ಈ ಸಿನೆಮ ತೋರಿಸಿಕೊಟ್ಟಿದೆ. ಕಲಿಕೆಯೆನ್ನುವುದನ್ನು ಕೇವಲ ಉಳ್ಳವರ ಕೈಗೆಟುಕುವಂತೆ ಮಾಡುವ ಮತ್ತು ಕೂಡಣದ ಬಹುತೇಕರಿಂದ ದೂರವಾಗಿಸುವ ವ್ಯಾಪಾರೀಕರಣದ ಹಾದಿಯನ್ನು ಹಿಡಿದಿರುವ ಕಲಿಕೆ ಏರ‍್ಪಾಡು ಬಡ ಕುಟುಂಬದ ತಾಯ್ತಂದೆಯರ ನಿದ್ದೆಗೆಡಿಸಿದೆ. ಈ ಎಳೆಯನ್ನೇ ಹಿಡಿದು ಸೊಗಸಾದ ಸಿನೆಮಾ ಹೆಣೆದಿದ್ದಾರೆ ಅರ‍್ಜುನ್ ಸರ‍್ಜಾ ಅವರು. ಕಲಿಕೆಯ ಸುತ್ತ ಗೊಂದಲಗಳು ಹಣ್ಣಾಗಿ ನಿಂತಿರುವ ಈ ಹೊತ್ತಿನಲ್ಲಿ ಈ ವಿಶಯದ ಸುತ್ತ ಸಿನೆಮ ಮಾಡುವ ಮೂಲಕ ಇದರ ಇಂಬನ್ನು ಎತ್ತಿ ಹಿಡಿದಿರುವ ಹೆಗ್ಗಳಿಗೆ ಇವರದು.

ತಮ್ಮ ಮಗುವನ್ನು ದೊಡ್ಡ ಶಾಲೆಯೊಂದಕ್ಕೆ ಸೇರಿಸುವ ಕನಸನ್ನು ಕಾಣುವ ಬಡಗಿಯೊಬ್ಬನ ಕುಟುಂಬ; ಪವಾಡವೇನೋ ಎಂಬಂತೆ ದೊಡ್ಡ ಶಾಲೆಯೊಂದರಲ್ಲಿ ಸೀಟೂ ಸಿಕ್ಕಾಗ ಆ ಕುಟುಂಬದ ಸಡಗರಕ್ಕೆ ಪಾರವೇ ಇಲ್ಲ. ಆದರೆ ಶಾಲೆಯ ಶುಲ್ಕ ಒಂದೂವರೆ ಲಕ್ಶ ರೂಪಾಯಿ ಕಟ್ಟಬೇಕಾಗುತ್ತದೆ. ಹರಸಾಹಸಗಳ ಮಾಡಿದರೂ ಅರ‍್ದ ಹಣವನ್ನೂ ಕಟ್ಟಲು ಆಗದಿರುವಾಗ ಅವರ ಮಗುವನ್ನು ಶಾಲೆಯಿಂದ ಹೊರಹಾಕಲಾಗುತ್ತದೆ. ದುಡ್ಡು ಕಟ್ಟಿ ಓದುಸಲೂ ಆಗದೆ, ಸರ‍್ಕಾರಿ ಶಾಲೆಗೆ ಮಗುವನ್ನು ಸೇರಿಸಲು ಮನಸೊಪ್ಪದೆ, ನೋವು ತಾಳಲಾರದೆ ತಾಯ್ತಂದೆಯರು ಮಗುವನ್ನು ಕೊಂದು ತಾವೂ ನೇಣು ಹಾಕಿಕೊಳ್ಳುತ್ತಾರೆ. ಇದರಿಂದ ರೋಸಿದ ನಾಯಕ ಶಾಲೆಗಳ ವ್ಯಾಪಾರೀಕರಣದ ಎದುರಾಗಿ ಹೋರಾಡುತ್ತಾ ಸರ‍್ಕಾರವೇ ಎಲ್ಲಾ ಶಾಲೆಗಳನ್ನೂ ಮುಟ್ಟುಗೋಲು ಹಾಕಿಕೊಂಡು ಗುಣಮಟ್ಟದ ಕಲಿಕೆ ಎಲ್ಲರಿಗೂ ದೊರಕುವಂತೆ ಮಾಡಬೇಕು ಅನ್ನುವ ಸಲಹೆಯನ್ನು ನೀಡುತ್ತಾನೆ. ಅದರ ಸಾದನೆಗೆ ಹೋರಾಡುತ್ತಾನೆ.

ಬಡವರಿಗೆ ಕೈಗೆಟುಕದ ಮಟ್ಟಿಗೆ ಹೆಚ್ಚಿರುವ ಕಲಿಕೆಯ ವ್ಯಾಪಾರೀಕರಣ, ಹದಗೆಟ್ಟಿರುವ ಸರ‍್ಕಾರಿ ಶಾಲೆಗಳು ಬಡವರ ಮಕ್ಕಳಿಗೆ ಗುಣಮಟ್ಟದ ಕಲಿಕೆ ಸಿಗದಂತೆ ಮಾಡಿರುವುದು ಸುಳ್ಳಲ್ಲ. ದೊಡ್ಡ ಇಂಟರ್ ನ್ಯಾಶನಲ್ ಶಾಲೆಗಳಲ್ಲಿ ಕಲಿಯದಿದ್ದರೆ ಅದು ಕಲಿಕೆಯೇ ಅಲ್ಲ ಅನ್ನುವ ಮಟ್ಟಿನ ತಪ್ಪು ನಂಬಿಕೆಗಳನ್ನು ತಾಯ್ತಂದೆಯರು ಬೆಳೆಸಿಕೊಂಡಿರುವುದು ಈ ಮುಳ್ಳುಗಿಡಕ್ಕೆ ನೀರೆರೆದಂತಾಗಿದೆ. ಒಳ್ಳೆಯ ಗುಣಮಟ್ಟದ ಕಲಿಕೆ ಕೂಡಣದ ಎಲ್ಲಾ ಮಂದಿಗೂ ಸಮನಾಗಿ ಸಿಗುವಂತೆ ಮಾಡತಕ್ಕದ್ದು ಸರ‍್ಕಾರದ ಹೊಣೆಯೇ ಆಗಿರುತ್ತದೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಇದರ ಜೊತೆಗೆ ಒಳ್ಳೆಯ ಗುಣಮಟ್ಟದ ಕಲಿಕೆಯೆಂದರೆ ಏನು ಎನ್ನುವುದರ ಕುರಿತು ತಾಯ್ತಂದೆಯರಲ್ಲಿ ಅರಿವು ಮೂಡಿಸುವ ಕೆಲಸವೂ ಆಗಬೇಕಿದೆ. ಇದೆಲ್ಲದರ ಕೊರತೆಯಿಂದ ಒಂದಿಡೀ ತಲೆಮಾರು ಗುಣಮಟ್ಟದ ಕಲಿಕೆಯಿಂದ ದೂರವಾಗಿದೆ.

ಚಿತ್ರದಲ್ಲಿ ನಾಯಕನೇ ಹೇಳುವಂತೆ ಸರ‍್ಕಾರವೇ ಎಲ್ಲರಿಗೂ ಅಚ್ಚುಕಟ್ಟಾದ ಕಲಿಕೆ ವ್ಯವಸ್ತೆ ಮಾಡಬೇಕು ಅನ್ನುವುದು ಹೊಸ ಹೊಳಹು ಏನಲ್ಲ. ಮುಂದುವರಿದ ನಾಡುಗಳಲ್ಲಿ ಸರ‍್ಕಾರ ಒಳ್ಳೆಯ ಗುಣಮಟ್ಟದ ಕಲಿಕೆ ನೀಡುತ್ತಿದೆ. ನೆದರ‍್ಲ್ಯಾಂಡ್ಸ್ ಎಂಬ ನಾಡಿನಲ್ಲಿ ಅಲ್ಲಿನ ಅರಸು ಮನೆತನದವರೂ ತಮ್ಮ ಮಕ್ಕಳನ್ನು ಸರ‍್ಕಾರಿ ಶಾಲೆಗೇ ಸೇರಿಸುತ್ತಾರೆ ಎಂದರೆ ಅಲ್ಲಿನ ಕಲಿಕೆಯ ಗುಣಮಟ್ಟವನ್ನು ನಾವು ಊಹಿಸಿಕೊಳ್ಳಬಹುದು. ಸರ‍್ಕಾರದ ಶಾಲೆಗಳಲ್ಲಿ ಕಲಿಕೆಯ ಏರ‍್ಪಾಡು ಈ ರೀತಿ ಗುಣಮಟ್ಟದಿಂದ ಕೂಡಿದ್ದಾಗ ಬಡವರಿಗೂ, ಉಳ್ಳವರಿಗೂ ಒಂದೇ ಸಮನಾದ ಗುಣಮಟ್ಟದ ಕಲಿಕೆ ಸಿಗಲಾಗಿ ನಾಡಿನ ಏಳಿಗೆ ಆಗುತ್ತದೆ, ಅಲ್ಲದೆ ಕೂಡಣದಲ್ಲಿ ಮೇಲು-ಕೀಳೆಂಬುದು ಅಳಿಯುತ್ತದೆ.

ಸರ‍್ಕಾರ ಕೈಗೆತ್ತಿಕೊಳ್ಳಬೇಕಿರುವ ಮತ್ತೊಂದು ಕೆಲಸವೆಂದರೆ, ‘ಒಳ್ಳೆಯ ಕಲಿಕೆ’ ಎಂದರೇನು ಅನ್ನುವುದರ ಬಗ್ಗೆ ತಾಯ್ತಂದೆಯರಲ್ಲಿ ಅರಿವು ಮೂಡಿಸಬೇಕಿದೆ. ಒಳ್ಳೆಯ ಗುಣಮಟ್ಟದ ಕಲಿಕೆ ಎಂದರೆ ಏನು ಅನ್ನುವ ಅರಿವಿಲ್ಲದ ಎಶ್ಟೋ ತಾಯ್ತಂದೆಯರು ದೊಡ್ಡ ದೊಡ್ಡ ಶಾಲೆಗಳ ಬಣ್ಣಬಣ್ಣದ ಬಯಲರಿಕೆಗಳಿಗೆ ಮರುಳಾಗುತ್ತಾರೆ. ಈ ಸಿನೆಮಾದಲ್ಲಿ ತೋರಿಸಿರುವಂತೆ “ದೊಡ್ಡ ಇಂಟರ್ ನ್ಯಾಶನಲ್ ಶಾಲೆಯಲ್ಲಿ ಓದದಿದ್ದರೆ ಅದು ಓದೇ ಅಲ್ಲ” ಅನ್ನುವಶ್ಟು ಆಳವಾಗಿ ತಾಯ್ತಂದೆಯರ ಮನಸಲ್ಲಿ ಬೇರೂರಿದೆ ಇಂಟರ್ ನ್ಯಾಶನಲ್ ಶಾಲೆಗಳ ಸೆಳೆತ!

ಒಳ್ಳೆಯ ಕಲಿಕೆ ನೀಡುತ್ತೇವೆ ಅನ್ನುತ್ತಾ ಲಕ್ಶಾಂತರ ರೂಪಾಯಿ ಹಣ ಕಟ್ಟಿಸಿಕೊಳ್ಳುವ ಈ ಶಾಲೆಗಳಲ್ಲಿ ಮಕ್ಕಳಿಗೆ ಕೊನೆಯ ಪಕ್ಶ ತಮ್ಮ ತಾಯ್ನುಡಿಯಲ್ಲಿ ಕಲಿಸುವ ಪದ್ದತಿಯೂ ಇರುವುದಿಲ್ಲ. ಇಂತಹ ಇಂಗ್ಲಿಶ್ ಮಾದ್ಯಮ ಶಾಲೆಗಳ ಕಲಿಕೆಯೇ ಉತ್ತಮ ಎಂದು ನಂಬಿರುವ ನಮ್ಮ ಕೂಡಣಕ್ಕೆ ತಿಳಿಹೇಳಬೇಕಿದೆ. ಮಕ್ಕಳು ಎಳೆವೆಯಲ್ಲಿ ತಮಗೆ ಗೊತ್ತಿಲ್ಲದ ಇಂಗ್ಲಿಶ್ ನುಡಿಯಲ್ಲಿ ವಿಶಯಗಳನ್ನು ಕಲಿಯಲು ಆಗುವುದಿಲ್ಲ. ಎಲ್ಲೋ ನೂರಕ್ಕೆ ಹತ್ತು ಮಂದಿ, ಮನೆಯಲ್ಲಿ ಇಂಗ್ಲಿಶ್ ಬಲ್ಲವರ ನೆರವು ಮತ್ತು ಟ್ಯೂಶನ್ ಕಲಿಕೆಗಳಿಂದ ಸ್ವಲ್ಪ ಮಟ್ಟಿಗೆ ಕಲಿಯಲೂಬಹುದು. ಆದರೆ ಇದೇ ಮಾದರಿಯನ್ನು ಕೂಡಣದ ಎಲ್ಲಾ ಮಂದಿಗೆ ಅನುಸರಿಸಲಾಗುವುದೇ?

ಎಲ್ಲಾ ಮುಂದುವರಿದ ನಾಡುಗಳಲ್ಲೂ ಕಲಿಕೆಯೆಂಬುದು ಅಲ್ಲಿನ ಪರಿಸರದ ನುಡಿಗಳಲ್ಲೇ ಇರುವುದು ಗಮನಿಸಬೇಕಾದ ವಿಶಯ. ಇದರಿಂದ ಕಲಿಕೆಗೆ ಸುಲಬವಾಗುತ್ತದೆ ಎನ್ನುವುದನ್ನು ಆ ನಾಡುಗಳು ಕಂಡುಕೊಂಡಿರುವುದೇ ಅವರ ಗೆಲುವಿನ ಗುಟ್ಟು ಎಂದರೆ ತಪ್ಪಾಗಲಾರದು. ಈ ಕುರಿತು ಅರಿವುಳ್ಳವರು ಚಿಂತನೆ ನಡೆಸಿ ಹೆಚ್ಚಿನ ಮಂದಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು.

ಯಾವುದೇ ವಿಶಯ ಹೆಚ್ಚಿನ ವಲಯಗಳಲ್ಲಿ ಚರ‍್ಚೆಯಾಗುವಂತೆ ಮಾಡಲು ಸಿನೆಮ ಮಾದ್ಯಮ ಒಂದು ಚಿಮ್ಮು ಹಲಗೆ ಅಂದರೆ ತಪ್ಪಾಗಲಾರದು. ಈಗ ಕಲಿಕೆಯ ವಿಶಯವನ್ನು ಚಿಮ್ಮಿಸುವ ಮೂಲಕ “ಅಬಿಮನ್ಯು” ಸಿನೆಮ ಈ ವಿಶಯದ ಇಂಬನ್ನು ಎತ್ತಿ ಹಿಡಿದಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಚಿಂತನೆ ಆಗಬೇಕಿದೆ. ಅಲ್ಲದೆ ಬರುವ ದಿನಗಳಲ್ಲಿ ನಮ್ಮ ನಾಡಿನಲ್ಲಿ ಒಳ್ಳೆಯ ಕಲಿಕೆ ಏರ‍್ಪಾಡು ತರಲು ಆಗಬೇಕಿರುವ ಕೆಲಸಗಳಲ್ಲಿ ತೊಡಗಿಕೊಳ್ಳುವ ಮೂಲಕ ಈ ವಿಶಯವನ್ನು ಮುಂದಿನ ಹಂತಕ್ಕೆ ಒಯ್ಯುವುದು ನಮ್ಮೆಲ್ಲರ ಹೊಣೆಯಾಗಿದೆ. ಏನೇ ಆಗಲಿ ಚಿಂತಕರ ವಲಯದಲ್ಲಿ ಈ ಚಿತ್ರ ಹೊಸ ಚಿಂತನೆಯ ಅಲೆಯೊಂದನ್ನು ಎಬ್ಬಿಸುವಂತೆ ಕಾಣಿಸುತ್ತಿದೆ. ಅರ‍್ಜುನ್ ಸರ‍್ಜಾ ಅವರಿಗೆ “ನನ್ನಿ” ಅನ್ನೋಣ.

(ಚಿತ್ರ ಸೆಲೆ: bangalorewishesh.com)

ನಿಮಗೆ ಹಿಡಿಸಬಹುದಾದ ಬರಹಗಳು

No Responses

  1. Pushpalatha J says:

    ಅರ್ತಪುರ್ಣ ಬರಹ . ಆಶಯ ವಾಸ್ತವಾಗಬೇಕು

ಅನಿಸಿಕೆ ಬರೆಯಿರಿ: