ಕಿಟಕಿ

ಪ್ರಿಯದರ‍್ಶಿನಿ ಶೆಟ್ಟರ್.

kitaki

ಕಿಟಕಿ – ಒಂದು ಕೋಣೆಯಿಂದ ಮತ್ತೊಂದು ಕೋಣೆಗೆ ಇಣುಕಲು, ಮನೆ ಒಳಗಿದ್ದೇ ಹೊರಗಿನವರೊಂದಿಗೆ ಸಂಬಾಶಣೆ ನಡೆಸಲು ನಾವು ದಿನನಿತ್ಯ ಬಳಸುವ ಸರಳವಾದ ಸಾದನ. ಒಂದೇ ಮನೆಯಲ್ಲಿ ಹಲವಾರು ಗಾತ್ರದ ಕಿಟಕಿಗಳು ಕಾಣಸಿಗುತ್ತವೆ. ಉದಾಹರಣೆಗೆ ಪಡಸಾಲೆಯ ಕಿಟಕಿಗೂ ಅಡುಗೆಮನೆಯ ಕಿಟಕಿಗೂ ವ್ಯತ್ಯಾಸವಿದೆ. ಇಡೀ ಮನೆಯನ್ನು ಸ್ವಚ್ಚಗೊಳಿಸಲು ಬೇಕಾಗುವ ಸಮಯದಲ್ಲಿ ಅರ‍್ದ ಸಮಯ ಕಿಟಕಿಗಳನ್ನು ಸ್ವಚ್ಚ ಮಾಡಲು ಬೇಕಾಗುತ್ತದೆ. ಅದರ ಚೌಕಟ್ಟಿಗೆ ಹಾಕಲಾದ ಲೋಹದ ಸಲಾಕೆಗಳು, ಪಡಕಕ್ಕೆ ಜೋಡಿಸಲಾದ ಬೋಲ್ಟುಗಳು, ಗಾಜು- ಇವುಗಳಲ್ಲಿ ಸೇರಿಕೊಂಡ ದೂಳು, ಅಡುಗೆಮನೆಯ ಕಿಡಕಿಗೆ ಮೆತ್ತಿಕೊಂಡ ಎಣ್ಣೆ, ಒಗ್ಗರಣೆಯ ಜಿಗಟು, ಕಿಟಕಿ ಅಶ್ಟೇ ಅಲ್ಲದೇ ಅದಕ್ಕೆ ಹಾಕಲಾದ ಕರ‍್ಟನ್, ಈ ಕರ‍್ಟನ್‍ಗೆ ಅಂಟಿದ ಜೇಡರ ಬಲೆ- ಇವನ್ನೆಲ್ಲ ಸ್ವಚ್ಚ ಮಾಡಿದ ಅನುಬವ ಇದ್ದವರು ಕಿಟಕಿಗಳನ್ನು ಶುಚಿಗೊಳಿಸಲು ಶುರುಮಾಡಿ ಅನೇಕ ಸಲ ಅರ‍್ದಕ್ಕೆ ಬಿಡುವ ಯೋಚನೆಯನ್ನೂ ಮಾಡಿರುತ್ತಾರೆ!

ನಮ್ಮ ಮನೆಯಲ್ಲಿ ಎಲ್ಲ ಗಾತ್ರದ ಕಿಟಕಿಗಳೂ ಸೇರಿ ಒಟ್ಟು 24 ಕಿಟಕಿಗಳಾಗುತ್ತವೆ. ಕೆಲವು ಕಿಟಕಿಗಳಿಗೆ ಗವಾಕ್ಶಿಗಳೂ ಇವೆ. ಒಂದೇ ವ್ಯತ್ಯಾಸವೆಂದರೆ ಗವಾಕ್ಶಿಗಳು ಸುಲಬವಾಗಿ ಕೈಗೆಟಕುವುದಿಲ್ಲ. ಕಿಟಕಿಯ ಉಪಯೋಗ ಅಶ್ಟಿಶ್ಟಲ್ಲ. ಬಾಗಿಲನ್ನು ತೆರೆದು ಅದರೆಡೆಯೇ ಒಂದು ಕಣ್ಣಿಡಬೇಕಾದ ಅವಶ್ಯಕತೆ ಕಿಟಕಿಗಳನ್ನು ತೆರೆದಾಗ ಇರುವುದಿಲ್ಲ. ಕೆಲವು ಸಂದರ‍್ಬಗಳಲ್ಲಿ ಅಪರಿಚಿತರೊಂದಿಗೆ ಕಿಟಕಿ ಮೂಲಕವೇ ಉತ್ತರಿಸುವುದು ಸುರಕ್ಶತೆಯ ಮಾರ‍್ಗವೂ ಹೌದು. ಅಶ್ಟೇ ಅಲ್ಲದೇ ಕೆಲವೊಮ್ಮೆ ಒಂದು ಕಿಟಕಿಯಿಂದ ಇನ್ನೊಂದಕ್ಕೆ ಹಗ್ಗ ಕಟ್ಟಿ ಬಟ್ಟೆ ಒಣಗಿಸಲು, ಚತ್ರಿ ಇಳಿಬಿಡಲು, ಕ್ಯಾಲೆಂಡರ್ ಹಾಕಲು, ವೈರ್ ದಾಟಿಸಲು- ಹೀಗೆ ಚಿಕ್ಕಪುಟ್ಟ ಕಾರಣಕ್ಕೂ ನಾವು ಕಿಟಕಿಯನ್ನು ಬಳಸುತ್ತೇವೆ.

ಈಗೀಗ ಡ್ರಾಯಿಂಗ್ ರೂಮ್‍ಗಳಲ್ಲಿ ‘ಬೇ ವಿಂಡೊ’ ರೂಪಿಸುವುದು ಕೂಡ ಅಬಿರುಚಿಯಾಗಿದೆ. ನಾನು ಕೆಲವು ಚರ‍್ಚಗಳಲ್ಲಿ ನೋಡಿರುವಂತೆ ಎತ್ತರೆತ್ತರದ ಕಿಟಕಿಗಳನ್ನು ನಿರ‍್ಮಿಸಿ ಅವುಗಳಲ್ಲಿ ಬಹುವರ‍್ಣದ ಅಂದದ ಗಾಜುಗಳನ್ನು ಜೋಡಿಸಿರುತ್ತಾರೆ. ಕಿಟಕಿಗಳು ಗಾಳಿ, ಬೆಳಕನ್ನು ಕಟ್ಟಡದೊಳಗೆ ಬಿಟ್ಟು ಅದರ ಸೌಂದರ‍್ಯವನ್ನು ಹೆಚ್ಚಿಸುತ್ತವೆ.

(ಚಿತ್ರ ಸೆಲೆ: goodlifer.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: