ಕಂಬಳ – ಮಾಯವಾಗದಿರಲಿ ನಮ್ಮ ನಡೆನುಡಿ

ಹರ‍್ಶಿತ್ ಮಂಜುನಾತ್.

kambala

ಹಿಂದೊಮ್ಮೆ ಹೊನಲಿನಲ್ಲಿ ಮೂಡಿಬಂದಿದ್ದ ಕರುನಾಡ ಕಲೆ ಕಂಬಳ(ಕಂಬುಲ) ಎಂಬ ಬರಹದಲ್ಲಿ, ನಮ್ಮ ನಾಡ ವಿಶಿಶ್ಟ ನಡೆನುಡಿಯ ಬಗ್ಗೆ ಹೆಮ್ಮೆಯಿಂದ ಬೀಗಿದ್ದ ನಾವು, ಇಂದು ಅದು ನಮ್ಮಿಂದ ದೂರವಾಗಿ ಬಿಡಬಹುದೆಂಬ ಆತಂಕದಲ್ಲಿದ್ದೇವೆ. ಕಂಬಳ ಕರ‍್ನಾಟಕದ ಕರಾವಳಿಯ ಜನಪದ ಕ್ರೀಡೆಗಳಲ್ಲಿ ಒಂದು. ಪರಶುರಾಮ ಸ್ರುಶ್ಟಿಯೆಂದೇ ಕರೆಯಲ್ಪಡುವ ತುಳು ನಾಡ ಹಲತನದ ಆಚರಣೆ ನಂಬಿಕೆಗಳಲ್ಲಿ ಹೆಚ್ಚು ಹೆಸರುವಾಸಿಯಾಗಿರುವ ನಿಟ್ಟಿನಲ್ಲಿ ಮೊದಲ ಸ್ತಾನದಲ್ಲಿ ನಿಲ್ಲುವುದೇ ಕಂಬಳ ಎಂಬ ವಿಶಿಶ್ಟ ನಡೆನುಡಿ.

ಅಶ್ಟಕ್ಕೂ ಕಂಬಳ ಎಂಬುವುದು ನಿನ್ನೆ ಮೊನ್ನೆ ಹುಟ್ಟಿಕೊಂಡ ಆಚರಣೆಯೇನಲ್ಲ. ಇದಕ್ಕೆ ಸುದೀರ‍್ಗವಾದ 800 ವರುಶಗಳ ಹಳಮೆಯಿದೆ. ಎಲ್ಲಾ ಕಡೆಗಳಂತೆ ಇಲ್ಲಿಯೂ ಸಹ ಇಲ್ಲಿನ ಪ್ರಾದೇಶಿಕ ನಡೆನುಡಿಗಳ ಆಚರಣೆಗಳು ಮಾಯವಾಗಿ ಪರದೆ ಹಿಂದೆ ಜಾರುತ್ತಿರುವ ಹೊತ್ತಲ್ಲಿ, ಕೆಲವು ಜಾನಪದ ನಡೆನುಡಿಗಳು ತಮ್ಮ ಮಣ್ಣಿನ ಸೊಗಡನ್ನು ಉಳಿಸಿಕೊಂಡು ಮುನ್ನಡೆಯುತ್ತಿವೆ. ಇದರಿಂದ ಕಂಬಳವೇನೂ ಹೊರತಾಗಿಲ್ಲ. ಅಂದಿನಿಂದ ಇಂದಿನ ವರೆಗೂ ಕರಾವಳಿಯ ದಾರ‍್ಮಿಕ ಮತ್ತು ಸಂಸ್ಕ್ರುತಿಕ ಆಚರಣೆಯ ಕಯ್‍ಗನ್ನಡಿಯಾಗಿ ನಡೆದು ಬಂದಿರುವುದು ಕಂಬಳದ ಹಿರಿಮೆ.

ಹೀಗೆ ಶತಮಾನಗಳ ಹಿರಿಮೆಯನ್ನು ಬೆನ್ನಿಗೆ ಕಟ್ಟಿಕೊಂಡು ಕರಾವಳಿ ಕರ‍್ನಾಟಕದ ನಡೆನುಡಿಯ ಮಂದಾಳತ್ವ ವಹಿಸಿಕೊಂಡು ಬಂದಿರುವ ಕಂಬಳವೆಂಬ ಜಾನಪದ ಕ್ರೀಡೆಗೆ ಈಗ ಕಂಟಕ ಎದುರಾಗಿದೆ. ಪ್ರಾಣಿಗಳನ್ನು ಹಿಂಸಾತ್ಮಕವಾಗಿ  ನಡೆಸಿಕೊಳ್ಳಲಾಗುತ್ತಿದೆ ಎಂಬ ಕಾರಣದಿಂದ ತಮಿಳುನಾಡಿನ ಜಲ್ಲಿಕಟ್ಟು ಹಾಗೂ ಮಹಾರಾಶ್ಟದ ಎತ್ತಿನಗಾಡಿ ಪೈಪೋಟಿಗಳನ್ನು ನಿಶೇದಿಸಿ ಸುಪ್ರೀಮ್ ಕೊರ‍್ಟ್ 2014 ಮೇ 7ರಂದು ಆದೇಶವೊಂದನ್ನು ಹೊರಡಿಸಿತ್ತು. ‘ಪ್ರಾಣಿಗಳನ್ನು ಮನರಂಜನೆಗೆ ಹಿಂಸೆ ನೀಡಿ ನಡೆಸಿಕೊಳ್ಳಬಾರದು’ ಎಂಬುದು ಈ ತೀರ‍್ಪಿನ ನಿಲುವಾಗಿತ್ತು. ಆದರೆ ಈಗ ಈ ತೀರ‍್ಪನ್ನು ನೆನಪಾಗಿಸಿಕೊಂಡು ಬಾರತೀಯ ಪ್ರಾಣಿಗಳ ಕಲ್ಯಾಣ ಮಂಡಳಿ ರಾಜ್ಯದ ಮುಕ್ಯ ಕಾರ‍್ಯದರ‍್ಶಿಗಳಿಗೆ ಪತ್ರ ಬರೆದು ‘ಕಂಬಳದಲ್ಲೂ ಕೋಣಗಳನ್ನು ಹಿಂಸಿಸಲಾಗುತ್ತಿದೆ. ಇದು ಸ್ಪರ‍್ದಾತ್ಮಕ ಕ್ರೀಡೆಯಶ್ಟೆ. ಆದ್ದರಿಂದ ಕಂಬಳಗಳನ್ನು ನಡೆಸಬಾರದು’ ಎಂದು ಪತ್ರ ಬರೆದಿತ್ತು. ಇದರಿಂದ ಕರ‍್ನಾಟಕ ಸರ‍್ಕಾರ ಕಂಬಳ ಆಚರಣೆಯನ್ನು ನಡೆಸದಂತೆ ಕಡಿವಾಣ ಹಾಕಲು ಹೊರಟಿದೆ.

ಸುಪ್ರೀಂ ಕೋರ‍್ಟಿನ ತೀರ‍್ಪನ್ನು  ಹಿನ್ನಲೆಯಾಗಿಟ್ಟುಕೊಂಡು ಮರು ಅವಲೋಕಿಸಿದಾಗ, ಕಂಬಳವು ಜಲ್ಲಿಕಟ್ಟು ಪೈಪೋಟಿಯಿಂದ ಬಹಳಶ್ಟು ಬಿನ್ನವಾಗಿದೆ. ಅಶ್ಟಕ್ಕೂ ಜಲ್ಲಿಕಟ್ಟಿನಲ್ಲಿ ಬಹಳಶ್ಟು ಸಾವು ನೋವುಗಳಾಗಿವೆ. ಆದರೆ ಕಂಬಳದ ವಿಚಾರದಲ್ಲಿ ಇದುವರೆಗೂ ಅಂತಹ ಗಟನೆಗಳು ನಡೆದ ನಿದರ‍್ಶನವಿಲ್ಲ. ಕಾರಣ ಇಲ್ಲಿ ಕೋಣಗಳನ್ನು ಹಿಂಸೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಕ್ರುಶಿ ಪ್ರದಾನ ಊರುಗಳಲ್ಲಿ ಪ್ರಾಣಿಗಳನ್ನು ಸಾಕುವುದು ಹೊಸತೇನಲ್ಲ. ಅಂತಹ ಪ್ರಾಣಿಗಳನ್ನು ಕ್ರೀಡೆಗೆ ಬಳಸಿಕೊಂಡು ತಮ್ಮ ಕ್ರುಶಿ ಬದುಕನ್ನು ಸಂಬ್ರಮಿಸುವುದೂ ಸಹಜವೇ. ಕ್ರುಶಿಗೆ ಬಳಸುವ ಕೋಣಗಳನ್ನು ಕಂಬಳದಲ್ಲಿ ಬಳಸಿ ಕೋಣಗಳನ್ನು ಮತ್ತಶ್ಟು ಪರಿಣಿತಗೊಳಿಸುವ ಹಾಗೆ  ನೋಡಿಕೊಳ್ಳಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಂಬಳಕ್ಕೆ ಬಳಸುವ ಕೋಣಗಳನ್ನು ಬೇರೆ ಯಾವ ಕೆಲಸಕ್ಕೂ ಬಳಸುವುದಿಲ್ಲ.

ಕೋಣಗಳ ಸಾಕಣೆ ಮತ್ತು ಚಟುವಟಿಕೆ

ಒಂದು ಜೋಡಿ ಕಂಬಳದ ಕೋಣಗಳನ್ನು ಸಾಕಲು ವರುಶಕ್ಕೆ ಕಡಿಮೆ ಎಂದರೂ ಸಾಕಣೆ ವೆಚ್ಚವಾಗಿ 3 ಲಕ್ಶ ರೂಪಾಯಿಶ್ಟು ಹಣ ಬೇಕಾಗುತ್ತದೆ. ಅಂದಮಾತ್ರಕ್ಕೆ ಕೋಣಗಳನ್ನು ಸಾಕುವುದು ಅಶ್ಟು ಸುಲಬದ ಮಾತಲ್ಲ. ಅವುಗಳನ್ನು ಮಕ್ಕಳನ್ನು ನೋಡಿಕೊಂಡಶ್ಟೇ ನಯವಾಗಿ ಉಪಚರಿಸಬೇಕು. ಅಲ್ಲದೇ ರಾಜ ಮರ‍್ಯಾದೆಯಲ್ಲಿ ಸಾಕಿ ಪ್ರತಿದಿನ ತರಬೇತಿಯನ್ನು ಕೊಡಬೇಕಾಗುತ್ತದೆ. ಕಂಬಳದಲ್ಲಿ ಬಳಸುವ ಕೋಣಗಳಿಗೆ ಪ್ರತಿದಿನ ಎಣ್ಣೆಯ ಸ್ನಾನ ಬೇಕೇ ಬೇಕು. ಇಂತಹ ಪ್ರತಿನಿತ್ಯದ ಕೆಲವು ಕೆಲಸಗಳಿಗೆಂದೇ ಒಂದು ಜೋಡಿಗೆ ಮೂರು ಮಂದಿ ಕೆಲಸಗಾರರನ್ನು ನೇಮಿಸಲಾಗುತ್ತದೆ. ಇವರ ವೇತನ ಹದಿನೈದು ಸಾವಿರಕ್ಕೂ ಹೆಚ್ಚು .

ಕಂಬಳದ ಸಮಯದಲ್ಲಿ ಕೋಣಗಳ ವೇಗಕ್ಕೆ ಓಡುವುದು ಸವಾಲಿನ ಸಂಗತಿ. ಅಲ್ಲದೇ ಇಲ್ಲಿ ಕೋಣಗಳ ಜೊತೆಗೆ ಕೋಣ ಓಡಿಸುವವನ ಸಾಮರ‍್ತ್ಯವನ್ನು ಪಣಕ್ಕಿಡಲಾಗತ್ತದೆ. ಇಲ್ಲೊಂದು  ವಿಶೇಶವೇನೆಂದರೆ, ಪ್ರಾಣಿಗಳ ಕಲ್ಯಾಣ ಮಂಡಳಿಯವರು ಬರೆದ ಪತ್ರದಲ್ಲಿ, ‘ಕೋಣಗಳು ವೇಗವಾಗಿ ಓಡಲು ಯೋಗ್ಯವಾದವಲ್ಲ. ಆದರೆ ಅವುಗಳನ್ನು ಓಡಿಸುವ ಚಟುವಟಿಕೆಯಲ್ಲಿ ಬಳಸಲಾಗುತ್ತಿದೆ’ ಎಂಬ ಕಾರಣವನ್ನು ನೀಡಿತ್ತು. ಆದರೆ, ಕೋಣಗಳು ನೂರು ಮೀಟರ್ ದೂರವನ್ನು ಕೇವಲ 9.14 ಸೆಕೆಂಡ್‍ಗಳಲ್ಲಿ ಕ್ರಮಿಸಿದ ದಾಕಲೆ ಕಂಬಳದಲ್ಲಿದೆ. ಅದೂ ಕೂಡ ಕೆಸರು ಮತ್ತು ನೀರು ತುಂಬಿದ ಗದ್ದೆಯಲ್ಲಿ.  ಆದರೆ ಗಟ್ಟಿ ನೆಲದ ಮೇಲೆ ಓಡುವ ಮತ್ತು ಓಟಕ್ಕೆಂದೇ ಹೆಸರು ವಾಸಿಯಾಗಿರುವ ಕುದುರೆಗಳು ಕೂಡ ಓಟದ ಪಯ್ಪೋಟಿಯಲ್ಲಿ ಇಶ್ಟು ವೇಗವಾಗಿ ಓಡಿದ ನಿದರ‍್ಶನಗಳಿಲ್ಲ. ಜಮಯ್ಕಾದ ಮಿಂಚಿನ ಓಟಗಾರ ಉಸೈನ್ ಬೋಲ್ಟ್ 100 ಮೀಟರ್ ಕ್ರಮಿಲು 9.58 ಸೆಕೆಂಡ್‍ಗಳನ್ನು ತೆಗೆದುಕೊಂಡಿದ್ದರು ಎಂಬುವುದು ಇಲ್ಲಿ ಹೇಳಲೇಬೇಕಾದ ವಿಚಾರ. ಹೀಗಿರುವಾಗ ಕೆಸರುಗದ್ದೆಯಲ್ಲಿ ಕೋಣಗಳ ಜೊತೆಗೆ ವೇಗ ಪಡೆಕೊಳ್ಳುವ ಕೋಣ ಓಡಿಸುವವನ ಸಾಮರ‍್ತ್ಯವನ್ನು ಮೆಚ್ಚಲೇಬೇಕು.

ಕೋಣ ಓಡಿಸುವವರನ್ನೂ ಗುತ್ತಿಗೆಯ ಆದಾರ ಮೇಲೆ ಆರಿಸಲಾಗುತ್ತದೆ. ಆತನ ಚಟುವಟಿಕೆ, ಕೋಣಗಳ ಮೇಲಿನ ಹಿಡಿತ, ಕೋಣಗಳನ್ನು ಸಂಬಾಳಿಸುವ ತಾಕತ್ತು ಮತ್ತು ವರುಶವೊಂದಕ್ಕೆ ಗೆಲ್ಲುವ ಪದಕಗಳ ಮೇಲೆ ಆತನ ಸಂಬಳವನ್ನು ತೀರ‍್ಮಾನಿಸಲಾಗುವುದು. ಸದ್ಯಕ್ಕೆ ಕರಾವಳಿ ಕರ‍್ನಾಟಕದ ಸುಮಾರು ಮೂವತ್ತಕ್ಕಿಂತಲೂ ಹೆಚ್ಚು ಕಡೆಗಳಲ್ಲಿ ಕಂಬಳಗಳು ನಡೆಯುತ್ತವೆ. ಇಲ್ಲಿ ಕೋಣಗಳ ಸೋಲು-ಗೆಲುವಿಗಿಂತಲೂ ಇದು ಕೋಣ ಸಾಕುವವರ ಪ್ರತಿಶ್ಟೆಯ ಪ್ರಶ್ನೆ. ಆದರೆ ಇಂತಹ ನಿಲುವನ್ನು ತಪ್ಪಾಗಿ ಹರಡಲಾಗುತ್ತಿದೆ ಅಶ್ಟೆ. ಇದರಿಂದಲೇ ಇಂದು ಕಂಬಳವನ್ನು ಕೇವಲ ವ್ಯಾವಹಾರಿಕ ಆಯಮದಿಂದ ಮಾತ್ರ  ನೋಡಲಾಗುತ್ತಿದೆ. ಇಂತಹ ಅತಿರೇಕದ ಬಾವನೆಗಳು ಕಂಬಳದಂತಹ ನಡೆನುಡಿಗೆ ದಕ್ಕೆತರುತ್ತಿರುವ ಹೊತ್ತಲ್ಲಿ, ನಿಶೇದದಂತಹ ನಿಲುವುಗಳಲು ಗಾಯದ ಮೇಲೆ ಬರೆ ಎಳೆದಂತಾಗಿವೆ.

ಕೆಲದಿನಗಳ ಹಿಂದೆಯಶ್ಟೇ ಸುಮಾರು ಮೂನ್ನೂರು ಜೋಡಿ ಕೋಣಗಳೊಂದಿಗೆ ಬೀದಿಗೀಳಿದು ಪ್ರತಿರೋದವನ್ನು ಒಡ್ಡಲಾಗಿದೆ. ಅಲ್ಲದೇ ಬೆತ್ತವನ್ನೂ ಬಳಸದೇ ಕೋಣಗಳನ್ನು ಓಡಿಸಿ ಕಂಬಳ ನಡೆಸಬಹುದು ಎಂಬುವುದನ್ನು ಸಾದಿಸಿ ತೋರಿಸಿಯಾಗಿದೆ. ಇಶ್ಟಾದರೂ ಇಂತಹ ಒಂದು ವಿಶಿಶ್ಟ  ನಡೆನುಡಿಯನ್ನು ನೆನೆಗುದಿಗೆ ತಳ್ಳಹೊರಟಿರುವುದು ನಿಜಕ್ಕೂ ನೋವಿನ ಸಂಗತಿ.  ಕೆಲ ಶರತ್ತುಗಳ ಮೇಲೆ ರಾಜ್ಯದ ಮೇಲು ತೀರ‍್ಪುಮನೆ (ಹಯ್ ಕೋರ‍್ಟ್) ಸದ್ಯಕ್ಕೆ ಕಂಬಳ ನಡೆಸಲು ಒಪ್ಪಿಗೆ ನೀಡಿರುವುದು ಕೊಂಚ ಸಮಾದಾನ ತಂದಿರುವ ಸಂಗತಿ. ಆದರೆ ಇಂತಹ ತೀರ‍್ಮಾನಗಳು ನೆಲ ಮಟ್ಟದಲ್ಲಿ ತಮಗೂ ಜನರಿಗೂ ನಂಟೇ ಇಲ್ಲದಂತೆ ನಡೆದುಕೊಳ್ಳುವ ಕೇಂದ್ರ ಸಮಿತಿಗಳು ಮತ್ತು ತೀರ‍್ಪುಮನೆಗಳ ಕಯ್ಯಲ್ಲಿರುವುದರಿಂದ ಆತಂಕವಿದ್ದೇ ಇರುತ್ತದೆ. ಹಾಗೊಂದು ವೇಳೆ ಕಂಬಳವು ನಿಶೇದವಾದಲ್ಲಿ ಕರ‍್ನಾಟಕವು ಸಂಸ್ಕ್ರುತಿಕ ಹಿರಿಮೆಯೊಂದನ್ನು ಕಳೆದುಕೊಳ್ಳಲಿದೆ. ಆದರೆ ಕಂಬಳದಂತಹ ನಡೆನುಡಿ ಮರೆಯಾಗುವಂತಹ ದಿನಗಳು ಬಾರದಿರಲಿ ಎಂಬುದೇ ಮಂದಿಯ ಬಯಕೆ.

(ಚಿತ್ರ ಸೆಲೆ: kannada.oneinda.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: