ಸ್ನೂಕರ್: ಕಿರುನೋಟ -2

ಬಾಬು ಅಜಯ್.

ಹಿಂದಿನ ಬರಹದಲ್ಲಿ ನಿಡುಗೋಲಾಟದ (snooker) ಬಗ್ಗೆ ತಿಳಿದುಕೊಂಡಿದ್ದೆವು. ಈ ಬರಹದಲ್ಲಿ ಸ್ನೂಕರ್‌ನಲ್ಲಿ ಬಹಳ ಹೆಸರುವಾಸಿಯಾದ ಆಟಗಾರರ ಬಗ್ಗೆ ತಿಳಿದುಕೊಳ್ಳೋಣ. ಇಲ್ಲಿ ಬಹಳ ಹೆಸರುವಾಸಿಯಾದ 4 ಆಟಗಾರರ ಪರಿಚಯ ಮಾಡಿಸುತ್ತೇನೆ.

1) ರೊನ್ನಿ ‘ ಓ ಸುಲ್ಲಿವಾನ್ (Ronnie’O Sullivan)
2) ಅಲೆಕ್ಸ್ ಹಿಗ್ಗಿನ್ಸ್ ( Alex Higgins)
3) ಸ್ಟೀಪನ್ ಹೆಂಡ್ರಿ ( Stephen Hendry)
4) ಸ್ಟೀವ್ ಡೇವಿಸ್ ( Steve Davis)

1) ರೊನ್ನಿ ಓ ಸುಲ್ಲಿವಾನ್

ಇವರು ಒಬ್ಬ ಬರ‍್ದುಗ(professional) ಸ್ನೂಕರ್ ಆಟಗಾರ. ತಮ್ಮ ಬಿರುಸಿನಾಟಕ್ಕೆ ಬಹಳ ಹೆಸರುವಾಸಿಯಾದ ಆಟಗಾರ. ಇವರ ಬಿರುಸಿನಾಟ ನೋಡಿಯೇ ಇವರಿಗೆ “ರಾಕೆಟ್ ” ಎಂಬ ಅಡ್ಡ ಹೆಸರು ಬಂತು. ಇವರು 1975ರಲ್ಲಿ ಇಂಗ್ಲೆಂಡ್‌ನ ಎಸೆಕ್ಸ್‌ನಲ್ಲಿ ಹುಟ್ಟಿದ್ದು. ತಮ್ಮ ಹದಿನೇಳನೆಯ ವಯಸ್ಸಿನಲ್ಲೇ ಇವರು ಒಬ್ಬ ಬರ‍್ದುಗ ಆಟಗಾರನಾದರು. 1993ರ ಯು. ಕೆ. ಚಾಂಪಿಯನ್‌ಶಿಪ್ ಗೆದ್ದ ಅತಿ ಎಳೆಯ ವಯಸ್ಸಿನ ಬರ‍್ದುಗ ಆಟಗರನಾಗಿದ್ದು, ಅದು ದಾಕಲೆಯಾಗಿಯೇ ಉಳಿದಿದೆ. ಇವರು ಇದುವರೆಗೂ ಅಯ್ದು ಬಾರಿ ಸ್ನೂಕರ್ ವರ‍್ಲ್ಡ್ ಚಾಂಪಿಯನ್ ಆಗಿದ್ದಾರೆ (2001, 2004, 2008, 2012, 2013). ಮತ್ತು 2014ರ ಸ್ನೂಕರ್ ವರ‍್ಲ್ಡ್ ಚಾಂಪಿಯನ್‌ಶಿಪ್ ರನ್ನರ್ ಅಪ್ ಆಗಿದ್ದಾರೆ. ಇವರು ಇದುವರೆಗೂ 13 ಬಾರಿ ಗರಿಶ್ಟ (147 ಪಾಯಿಂಟ್ಸ್ ಗಳನ್ನ) ಬ್ರೇಕ್ ಮಾಡಿದ್ದು, ಇದು ಸ್ನೂಕರ್ ಇತಿಹಾಸದಲ್ಲೇ ದಾಕಲೆಯಾಗಿದೆ. ಇವರು 1997ರಲ್ಲಿ ಕೇವಲ 5 ನಿಮಿಶ, 20 ಸೆಕೆಂಡ್‌ಗಳಲ್ಲಿ ಗರಿಶ್ಟ (147 ಪಾಯಿಂಟ್ಸ್ ಗಳನ್ನ) ಬ್ರೇಕ್ ಮಾಡಿದ್ದು ಕೂಡ ಸ್ನೂಕರ್ ಇತಿಹಾಸದಲ್ಲಿ ದಾಕಲೆಯಾಗಿದೆ.

2) ಅಲೆಕ್ಸಾಂಡರ್ ಗಾರ‍್ಡನ್ “ಅಲೆಕ್ಸ್” ಹಿಗ್ಗಿನ್ಸ್

ಇವರು ಬಡಗಣದ ಅಯರ‍್ಲ್ಯಾಂಡ್ (Ireland)ನ ಒಬ್ಬ ಬರ‍್ದುಗ ಸ್ನೂಕರ್ ಆಟಗಾರ. ಇವರ ಅತಿವೇಗದ ಆಟವನ್ನ ನೋಡಿ ‘ಹರಿಕೇನ್ ಹಿಗ್ಗಿನ್ಸ್’ ಎಂಬ ಅಡ್ಡಹೆಸರಿಡಲಾಗಿತ್ತು. ಇವರು ಎರಡು ಬಾರಿ 1972 ಮತ್ತು 1982ರಲ್ಲಿ ಸ್ನೂಕರ್ ವರ‍್ಲ್ಡ್ ಚಾಂಪಿಯನ್ ಆಗಿದ್ದರು ಮತ್ತು 1976 and 1980ರ ಸ್ನೂಕರ್ ವರ‍್ಲ್ಡ್ ಚಾಂಪಿಯನ್ ಶಿಪ್ ರನ್ನರ್ ಅಪ್ ಆಗಿದ್ದರು. ಇವರ ಆಟದ ಶೈಲಿ ಬಹಳಶ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದ್ದು, ಇವರನ್ನ ಮಂದಿ ಮೆಚ್ಚಿದ (People’s Champion) ಆಟಗಾರ ಎಂದು ಕರೆಯಲಾಗುತ್ತಿತ್ತು. ಇವರು ಹುಟ್ಟಿದ್ದು 1949ರಲ್ಲಿ ಮತ್ತು 2010ರಲ್ಲಿ ಸಾವನ್ನಪ್ಪಿದರು.

3) ಸ್ಟೀಪನ್ ಹೆಂಡ್ರಿ (1969 ಜನವರಿ 13 ಜನನ)

ಇವರು ಸ್ಕಾಟ್ಲೆಂಡಿನ ಮಾಜಿ ಬರ‍್ದುಗ ಸ್ನೂಕರ್ ಆಟಗಾರ. ಇವರನ್ನು ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಸ್ನೂಕರ್ ಆಟಗಾರ ಮತ್ತು ಸಾಮಾನ್ಯವಾಗಿ ಸಾರ‍್ವಕಾಲಿಕ ಶ್ರೇಶ್ಟ ಆಟಗಾರನೆಂದು ಹೆಸರು ಮಾಡಿದ್ದಾರೆ. ಇವರು 1990ರಲ್ಲಿ 21ನೇ ವಯಸ್ಸಿನಲ್ಲೇ ಅತಿ ಎಳೆಯ ವರ‍್ಲ್ಡ್ ಸ್ನೂಕರ್ ಚಾಂಪಿಯನ್ ಆದರು. ಇದುವರೆಗೂ ಏಳು ಬಾರಿ ಇವರು ವರ‍್ಲ್ಡ್ ಸ್ನೂಕರ್ ಚಾಂಪಿಯನ್ ಆಗಿದ್ದು (1990, 1992, 1993, 1994, 1995, 1996, 1999) ಇದು ಸ್ನೂಕರ್‌ನಲ್ಲೇ ಬಹುದೊಡ್ಡ ದಾಕಲೆ. ಇವರು ತಮ್ಮ ಕೆಲಸದಾರಿ(career)ಯಲ್ಲಿ 775 ಬಾರಿ ಸೆಂಚುರಿ(100) ಬ್ರೇಕ್ ಮಾಡಿದ್ದು ಇದು ಕೂಡ ದಾಕಲೆಯಾಗಿದೆ. 770 ಸೆಂಚುರಿ(100) ಬ್ರೇಕ್ ಮಾಡಿರುವ ರೊನ್ನಿ ‘ಓ ಸುಲ್ಲಿವಾನ್ ಅವರು ಎರಡನೆಯ ಸ್ತಾನದಲ್ಲಿದ್ದಾರೆ. 2012ರಲ್ಲಿ ಸ್ಟೀಪನ್ ಅವರು ಮ್ಯಾಗ್ವೀರ್‌ಗೆ 2- 13 ಪ್ರೇಮ್‌ಗಳಲ್ಲಿ ಸೋಲುವ ಮೂಲಕ ತಮ್ಮ ಸ್ನೂಕರ್ ಜೀವನಕ್ಕೆ ವಿದಾಯ ಹೇಳಿದರು.

4) ಸ್ಟೀವ್ ಡೇವಿಸ್

ಇವರು ಹುಟ್ಟಿದ್ದು 22 ಆಗಸ್ಟ್ 1957ರಲ್ಲಿ, ಇವರು ಲಂಡನ್ನಿನ ಮಾಜಿ ಬರ‍್ದುಗ ಸ್ನೂಕರ್ ಆಟಗಾರ. ಇವರನ್ನು ಜನ ಹೆಚ್ಚಾಗಿ 1985ರ ವರ‍್ಲ್ಡ್ ಸ್ನೂಕರ್ ಚಾಂಪಿಯನ್ಶಿಪ್ ಪೈನಲ್ ಪ್ರೇಮ್‌ನಲ್ಲಿ ಡೆನ್ನಿಸ್ ಟೇಲರ್ (Dennis Taylor) ಜೊತೆ ಬ್ಲಾಕ್ ಬಾಲ್‌ನ ಸೆಣಸಾಟಕ್ಕಾಗಿ ನೆನೆಯುತ್ತಾರೆ, ಇದುವರೆಗೂ ಇವರು ಆರು ಬಾರಿ ವರ‍್ಲ್ಡ್ ಸ್ನೂಕರ್ ಚಾಂಪಿಯನ್(1981, 1983, 1984, 1987, 1988, 1989) ಆಗಿದ್ದು, 1980-1990ರ ವರೆಗೆ ಸ್ನೂಕರ್ ಆಟದಲ್ಲಿ ಮೇಲುಗೈ ಸಾದಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಒಂದೇ ಸೀಸನ್‌ನಲ್ಲಿ ಸ್ನೂಕರ್‌ನ ಟ್ರಿಪಲ್ ಕ್ರೌನ್ (Triple Crown) ಆದ ಯುಕೆ ಚಾಂಪಿಯನ್ಶಿಪ್, ಮಾಸ್ಟರ‍್ಸ್, ಮತ್ತು ವಿಶ್ವ ಚಾಂಪಿಯನ್ಶಿಪ್ ಗೆದ್ದ ಮೊದಲ ಆಟಗಾರ.

ಈಗಲೂ ತಮ್ಮ 39 ನೇ ವಯಸ್ಸಿನಲ್ಲಿ ಆಡುತ್ತಿರುವ ರೊನ್ನಿ ಓ ಸುಲ್ಲಿವಾನ್ ಅವರು 2000 ಇಸವಿಯ ಈಚೆಗೆ ಸ್ನೂಕರ್ ಆಟಕ್ಕೆ ಒಂದು ಹೊಸ ಕಲೆ ತಂದವರು, ಸ್ವಲ್ಪ ನಿದಾನವಾಗಿ ತುಂಬಾ ಯೋಚನೆ ಮಾಡಿ ಆಡುವ ಈ ಆಟಕ್ಕೆ ತಮ್ಮ ಬಿರುಸಿನಾಟದಿಂದ ಹೊಸ ನೋಟ ಮತ್ತು ಹೊಸ ಅಲೆಯನ್ನೇ ಎಬ್ಬಿಸಿ ಈ ಆಟದಲ್ಲಿ ಬಹಳಶ್ಟು ಆಸಕ್ತಿ ಮೂಡಿಸಿದವರು. ಈಗಲೂ ಬಹಳಶ್ಟು ಬರ‍್ದುಗ ಆಟಗಾರರು ರೊನ್ನಿ ಅವರನ್ನೇ ತಮ್ಮ ಸ್ನೂಕರ್ ಗುರುವೆಂದು ಬಾವಿಸುತ್ತಾರೆ.

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 23/12/2014

    […] ಹಿಂದಿನ ಬರಹದಲ್ಲಿ ಬಹಳ ಹೆಸರುವಾಸಿಯಾದ ನಿಡುಗೊಲಾಟ(snooker)ದ ಆಟಗಾರರ ಬಗ್ಗೆ ತಿಳಿದುಕೊಂಡಿದ್ದೆವು. ಈ ಬರಹದಲ್ಲಿ ಬಹಳ ಹೆಸರುವಾಸಿಯಾದ ‘ರಾಕೆಟ್‘ ಎಂಬ ಅಡ್ಡಹೆಸರಿನಿಂದ ಕರೆಯಲ್ಪಡುವ ರೊನ್ನಿ ಓ ಸುಲ್ಲಿವಾನ್ (Ronnie ‘O Sullivan) ಅವರ ಜೊತೆ 1996ರಲ್ಲಿ ನಡೆದ ಬಹಳ ಕುತೂಹಲ ಕೆರಳಿಸುವ ಒಂದು ಗಟನೆ ಬಗ್ಗೆ ತಿಳಿಯೋಣ. […]

ಅನಿಸಿಕೆ ಬರೆಯಿರಿ:

%d bloggers like this: