ನೇಸರನ ದಿಟ್ಟವಾದ ತಿಟ್ಟ ತೆಗೆದ ನುಸ್ಟಾರ್

ಪ್ರಶಾಂತ ಸೊರಟೂರ.

ಕಳೆದ ವಾರ ಡಿಸೆಂಬರ್, 22 ರಂದು ಅಮೇರಿಕಾದ ನಾಸಾ ಕೂಟದ ನುಸ್ಟಾರ್ (NuSTAR) ದೂರತೋರುಕ (telescope) ನೇಸರನ ತಿಟ್ಟವೊಂದನ್ನು ಸೆರೆಹಿಡಿಯಿತು. ಅದು ಸೆರೆಹಿಡಿದ ತಿಟ್ಟ ಇಲ್ಲಿಯವರೆಗೆ ಸೆರೆಹಿಡಿಯಲಾದ ನೇಸರನ ತಿಟ್ಟಗಳಲ್ಲೇ ಎಲ್ಲಕ್ಕಿಂತ ಮೇಲು ಮಟ್ಟದ್ದು ಎಂದೆಣಿಸಲಾಗುತ್ತಿದೆ. ಈ ತಿಟ್ಟ ಬಾನರಿಮೆಯ ಜಗತ್ತಿನಲ್ಲಿ ಇಂದು ಬಿಸಿ-ಬಿಸಿ ಸುದ್ದಿಯಾಗಿದೆ.

nustar_image_2

ನುಸ್ಟಾರ್ ನೆಲದಿಂದ ಸುಮಾರು 550 ಕಿ.ಮೀ. ಎತ್ತರದಲ್ಲಿ ಅಣಿಗೊಂಡಿರುವ ದೂರತೋರುಕ. ಇದು ಕಾಣುವ ಬೆಳಕಿನ (visible light) ಅಲೆಗಳನ್ನು ಗುರುತಿಸುವ ಸಾಮಾನ್ಯ ದೂರತೋರುಕಗಳಿಗಿಂತ ಬೇರೆಯಾಗಿದ್ದು, ಸೀಳ್ಕದಿರಿನ (X-ray) ಅಲೆಗಳನ್ನಶ್ಟೇ ಗುರುತಿಸುವಂತೆ ಅಣಿಗೊಳಿಸಲಾಗಿದೆ.

ಮುಕ್ಯವಾಗಿ ಬಾನಾಳಾದಲ್ಲಿ ನೇಸರನಗಿಂತಲೂ ಹಲವು ಸಾವಿರಪಟ್ಟು ದೊಡ್ಡವಿರಬಹುದಾದ ಕಪ್ಪುಕುಳಿಗಳ ಬಗ್ಗೆ ಮಾಹಿತಿ ಕಲೆಹಾಕಲು 13.07.2012 ರಂದು ಇದನ್ನು ಬಾನಿಗೆ ಏರಿಸಲಾಗಿತ್ತು. ನುಸ್ಟಾರ್ ಇಲ್ಲಿಯವರೆಗೆ ಕಪ್ಪುಕುಳಿಗಳ ಕುರಿತಾದ ಹಲವು ತಿಟ್ಟಗಳನ್ನು ಸೆರೆಹಿಡಿದಿದ್ದು, ಎರಡು ವರುಶದ ಕೆಲಸಕ್ಕಶ್ಟೇ ಬಾನಿಗೆ ಏರಿಸಿದ್ದ ಇದರ ಗಡುವನ್ನು ಅದರ ಗುಣಮಟ್ಟದಿಂದಾಗಿ ಇನ್ನೂ ಎರಡು ವರುಶ ಹೆಚ್ಚಿಸಲಾಗಿದೆ.

nustar_image_1

ನುಸ್ಟಾರ್ ಈಗ ಸೆರೆಹಿಡಿದಿರುವ ನೇಸರನ ಸೀಳ್ಕದಿರಿನ ತಿಟ್ಟದಿಂದ ಇಲ್ಲಿಯವರೆಗೆ ಕಗ್ಗಂಟಾಗೇ ಉಳಿದಿರುವ ಹಲವು ಕೇಳ್ವಿಗಳಿಗೆ ತಕ್ಕುದಾದ ಉತ್ತರಗಳನ್ನು ನೀಡಬಹುದಾಗಿದೆ ಎಂದು ಬಾನರಿಗರು ಹೇಳುತ್ತಿದ್ದಾರೆ.

ಇಂತಹ ಕಗ್ಗಂಟಿನ ಕೇಳ್ವಿಗಳಲ್ಲಿ ಮುಕ್ಯವಾದುದೆಂದರೆ ನೇಸರನ ಮೇಲ್ಮೈಯಲ್ಲಿ ಇರುವ ಬಿಸುಪಿಗಿಂತ (temperature) ಅದರ ಸುತ್ತಲಿನ ಹೊರಪದರದಲ್ಲಿ ಬಿಸುಪು ಹೆಚ್ಚಿರುವ ಕುರಿತಾದದ್ದು. ನೇಸರನ ಮೇಲ್ಮೈಯಲ್ಲಿ ಸುಮಾರು 6000 ಡಿ.ಸೆಲ್ಸಿಯಸ್ ಬಿಸುಪಿದ್ದರೆ, ಅದರ ಸುತ್ತಣದ ಹೊರಪದರಾದ ಕರೋನಾದಲ್ಲಿ ಸುಮಾರು 1,00,000 ಡಿ.ಸೆಲ್ಸಿಯಸ್ ಬಿಸುಪಿರುವುದು ಗೊತ್ತಾಗಿದೆ.

ಕರೋನಾದಲ್ಲಿರುವ ಇಂತಹ ಕಡುಬಿಸುಪಿಗೆ ನೇಸರನ ಹೊರಪದರದಲ್ಲಿರುವ ಕಿರುಗಿಚ್ಚುಗಳು (Nanoflares) ಕಾರಣವೆಂದು ಊಹಿಸಲಾಗಿದೆ. ಈ ಊಹೆಯತ್ತ ನುಸ್ಟಾರ್ ಕಳಿಸಿದ ತಿಟ್ಟ ಮುಂದಿನ ದಿನಗಳಲ್ಲಿ ಬೆಳಕು ಚೆಲ್ಲಲಿದೆ.

(ತಿಳಿವು ಮತ್ತು ತಿಟ್ಟ ಸೆಲೆಗಳು: 1. nustar.caltech.edu, 2. discovermagazine.com, 3. wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: