ಮಳೆಯ ನರುಗಂಪಿಗೆ ಕಾರಣವೇನು?

ಸಂದೀಪ್ ಕಂಬಿ.

mannu_smell_1

ಮಳೆ ಬಂದಾಗ ಏಳುವ ಆ ನರುಗಂಪಿಗೆ ಮನಸೋಲದವರಿಲ್ಲ. ಹಲವು ದಿನಗಳ ಬಳಿಕ ಬರುವ ಮೊದಲ ಮಳೆಯಲ್ಲಂತೂ ಈ ಕಂಪು ತುಂಬಾ ಗಟ್ಟಿಯಾಗಿರುತ್ತದೆ. ಕೆಲವೊಮ್ಮೆ ಮಳೆ ಬರುವ ಕೊಂಚ ಹೊತ್ತು ಮೊದಲೇ ಬರುವ ಈ ಗಮ, ಮಳೆಯ ಹನಿಗಳು ಮೊದಲು ಮಣ್ಣನ್ನು ಮುಟ್ಟುತ್ತಿದ್ದಂತೆಯೇ ಗಟ್ಟಿಯಾಗುತ್ತ ಹೋಗುತ್ತದೆ. ಆದರೆ ಈ ಕಂಪು ಹೇಗೆ ಉಂಟಾಗುತ್ತದೆ ಎಂದು ನೀವು ಬಲ್ಲಿರಾ? ಬನ್ನಿ ಈ ಕಂಪಿಗೆ ಕಾರಣವೇನೆಂದು ತಿಳಿಯೋಣ.

ಮಳೆ ಬಂದಾಗ ಕಾಣಿಸಿಕೊಳ್ಳುವ ಕಂಪು, ಒಂದೇ ಬಗೆಯದ್ದಲ್ಲ. ಇದರ ಒಳ ಹೊಕ್ಕು ನೋಡಿದರೆ ಇದರಲ್ಲಿ ಮೂರು ಬಗೆಯ ಕಂಪುಗಳು ಇರುತ್ತವೆ ಎಂದು ತಿಳಿಯಬಹುದು.

ಮೊದಲನೆಯದು ಮಿಂಚಿನಿಂದ ಉಂಟಾಗುತ್ತದೆ. ಈ ಬಗೆಯ ಕಂಪು ಸಾಮಾನ್ಯವಾಗಿ ಗುಡುಗು-ಮಿಂಚಿನಿಂದ ಕೂಡಿದ ಮಳೆ ಬರುವ ಮುಂಚೆ ಕಾಣಿಸಿಕೊಳ್ಳುತ್ತದೆ. ಮಿಂಚು ಹೊಡೆದಾಗ ಗಾಳಿಹೊದಿಕೆಯಲ್ಲಿ ತೂರಿ ಹೋಗುವ ಸಿಡಿಲಿನಲ್ಲಿರುವ ಮಿಂಚಿನ ಹುರುಪುಗಳು (electrical charges) ಉಸಿರುಗಾಳಿಯ ಕೆಲವು ಸೀರಕೂಟಗಳನ್ನು (oxygen molecules) ಒಡೆಯುತ್ತವೆ.  ಹೀಗೆ ಬೇರೆಯಾದ ಉಸಿರುಗಾಳಿಯ ಸೀರಗಳು (atoms), ಇರುವ ಉಸಿರುಗಾಳಿಯ ಸೀರಕೂಟಗಳೊಂದಿಗೆ (O2) ಬೆರೆತು ಓಜೋನ್ (O3) ಆಗುತ್ತದೆ. ಬೀಸುವ ಗಾಳಿ ಇದನ್ನು ಗಾಳಿಹೊದಿಕೆಯ ಮೇಲು ಪದರಗಳಿಂದ ಎಲ್ಲ ಕಡೆಗೆ ಪಸರಿಸುತ್ತದೆ.

mannu_smell_2

ಹೀಗೆ ಉಂಟಾದ ಓಜೋನ್ ಪ್ರಮಾಣ ತೀರಾ ಹೆಚ್ಚೇನೂ ಇರುವುದಿಲ್ಲ. ಗಾಳಿಯಲ್ಲಿ ಇದರ ಮಟ್ಟ ತೀರಾ ಕಡಿಮೆಯೇ ಇರುತ್ತದೆ. ಆದರೆ ಓಜೋನ್ ತುಂಬಾ ಗಾಟಿರುವ ವಸ್ತು. ನಾವು ಮನೆಯಲ್ಲಿ ಬಳಸುವ ಬಿಳಿಚಿಸುವ ಪುಡಿಯಿಂದ (bleaching powder) ಹೊಮ್ಮುವ ಕ್ಲೋರಿನ್ನಿನ ಗಾಟಿದ್ದಂತೆ. ಇದು ಗಾಳಿಯಲ್ಲಿ ತೀರಾ ಕಡಿಮೆ ಪ್ರಮಾಣದಲ್ಲಿದ್ದರೂ ಮೂಗಿಗೆ ಇದರ ಗಾಟು ಹೊಡೆಯದೆ ಇರುವುದಿಲ್ಲ. ಈ ಕಡಿಮೆ ಪ್ರಮಾಣದ ಓಜೋನಿನ ಗಾಟೇ ಕಂಪಿಗೆ ಕಾರಣವಾಗುತ್ತದೆ. ಹಾಗಾಗಿ, ಮುಂದೆ ಬರಲಿರುವ ಸಿಡಿಲಿನಿಂದ ಕೂಡಿದ ಬಾರೀ ಮಳೆಯ ಮುನ್ನರಿವನ್ನೂ ಇದು ನೀಡಬಲ್ಲುದು.

ಎರಡನೇ ಬಗೆಯ ಕಂಪು, ಮಣ್ಣಲ್ಲಿರುವ ಒಂದು ಬಗೆಯ ಬ್ಯಾಕ್ಟೀರಿಯಾಗಳು ಉಂಟುಮಾಡುವ ಬಿತ್ತುಗಳಿಂದ (spores) ಉಂಟಾಗುತ್ತದೆ. ಬ್ಯಾಕ್ಟೀರಿಯಾಗಳು ಕಟುವಾದ ಪರಿಸರದಲ್ಲಿ ತಮ್ಮನ್ನು ತಾವು ಕಾಪಾಡಿಕೊಂಡು, ಬದುಕಿ ಉಳಿಯಲು ಈ ಬಿತ್ತುಗಳನ್ನು ಉಂಟು ಮಾಡುತ್ತವೆ.

ಆದರೆ ಕಂಪು ನೇರವಾಗಿ ಈ ಬಿತ್ತುಗಳಿಂದಲೇ ಉಂಟಾಗುವುದಿಲ್ಲ. ಬಿತ್ತುಗಳನ್ನು ಉಂಟುಮಾಡುವಾಗ  ಬ್ಯಾಕ್ಟೀರಿಯಾಗಳು ಜಿಯೋಸ್ಮಿನ್ (Geosmin) ಎಂಬ ವಸ್ತುವನ್ನು ಉಂಟು ಮಾಡುತ್ತವೆ. ಇದನ್ನು ಕನ್ನಡದಲ್ಲಿ ಮಣ್ಣುಗಂಪು ಎಂದು ಕರೆಯಬಹುದು. ಈ ಮಣ್ಣುಗಂಪಿಗೆ, ಇದರ ಹೆಸರೇ ತಿಳಿಸುವಂತೆ, ಗಟ್ಟಿಯಾದ ಮಣ್ಣಿನಂತಹ ಕಂಪು ಇರುತ್ತದೆ. ಬೀಟ್ ರೂಟ್ ಮುಂತಾದ ನೆಲದೊಳಗೆ ಬೆಳೆಯುವ ಬೇರುಗಳಲ್ಲೂ ಈ ಮಣ್ಣುಗಂಪು ಇರುತ್ತದೆ. ಕೆಲವು ಕೆರೆ-ಹಳ್ಳಗಳಲ್ಲಿನ ಮೀನುಗಳಲ್ಲಿಯೂ ಈ ಮಣ್ಣಿನಂತಹ ಕಂಪು ಕಾಣಿಸಿಕೊಳ್ಳುತ್ತದೆ. ಹಾಗೆಯೇ, ಇಂತಹ ಕೆರೆ-ಹಳ್ಳಗಳ ನೀರೂ ಕೂಡ ಕೆಲವೊಮ್ಮೆ ಕಟುವಾದ ರುಚಿಯನ್ನು ಪಡೆದುಕೊಳ್ಳುತ್ತದೆ. ಇದೆಲ್ಲದಕ್ಕೂ ಈ ಮಣ್ಣುಗಂಪೆಂಬ ವಸ್ತುವೇ ಕಾರಣ.

 

mannu_smell_3_geosmin_structure

(ಮಣ್ಣುಗಂಪು/Geosmin – ಇದರ ಇಟ್ಟಳ)

ಮಣ್ಣಿನಲ್ಲಿ ಅಡಗಿಕೊಂಡಿರುವ ಈ ವಸ್ತು ಮಳೆಹನಿಗಳು ಮಣ್ಣಿನ ಮೇಲೆ ಬಿದ್ದಾಗ ಚದುರಿ ಗಾಳಿಯಲ್ಲೆಲ್ಲ ಹರಡುತ್ತದೆ. ಗಾಳಿಯಲ್ಲಿ ಇದರ ಪ್ರಮಾಣ ತೀರಾ ಕಡಿಮೆ ಇದ್ದರೂ ಸಾಕು, ಇದರ ಗಾಟು ಮೂಗಿಗೆ ತಗುಲುತ್ತದೆ. ಹಾಗಾಗಿ ಮಳೆಯ ಕಂಪಿಗೆ ಕಾರಣವಾಗುತ್ತದೆ.

ಮಳೆಯ ನರುಗಂಪಿಗೆ ಮೂರನೆಯ ಕಾರಣ ಗಿಡಗಳಿಂದ ಒಸರುವ ಕೆಲವು ಎಣ್ಣೆಗಳು. ಗಿಡಗಳಿಂದ ಒಸರುವ ಈ ಎಣ್ಣೆಗಳು ನೆಲದ ಮೇಲೆ, ಅಂದರೆ ಕಲ್ಲು, ಮಣ್ಣುಗಳಲ್ಲಿ ಒಟ್ಟಾಗುತ್ತ ಹೋಗುತ್ತವೆ. ಮಳೆ ಬಂದು ಇವುಗಳಿಗೆ ನೀರು ಸೋಕಿದಾಗ ಇವುಗಳಲ್ಲಿ ಅಡಕವಾಗಿರುವ ಕೆಲವು ವಸ್ತುಗಳು ಒಡೆದು ಆವಿಯಾಗಿ ಗಾಳಿಗೆ ಸೇರುತ್ತವೆ. ಈ ವಸ್ತುಗಳೂ ಮಣ್ಣುಗಂಪಿನಂತೆ ತಮ್ಮದೇ ಆದ ಕಂಪನ್ನು ಹೊಂದಿರುತ್ತವೆ. ಹೆಚ್ಚು ಕಾಲ ಮಳೆ ಬರದೆ ಒಣ ಮಣ್ಣಿದ್ದರೆ ಅಂತಹ ಮಣ್ಣಿನಲ್ಲಿ ಈ ಎಣ್ಣೆಗಳು ಹೆಚ್ಚಾಗಿ ಕೂಡಿರುತ್ತವೆ. ಹಾಗಾಗಿ ಹಲ ಕಾಲದ ಬಳಿಕ ಬರುವ ಮಳೆಯಲ್ಲಿ ಕಂಪು ಕೂಡ ಗಟ್ಟಿಯಾಗಿರುತ್ತದೆ.

ಇನ್ನೊಂದು ಗಮನಿಸಬೇಕಾದ ವಿಶಯವೇನೆಂದರೆ ಈ ಎಣ್ಣೆಗಳಲ್ಲಿರುವ ವಸ್ತುಗಳು ಗಿಡಗಳ ಬೆಳವಣಿಗೆಯನ್ನು ಕುಂದಿಸುತ್ತವಂತೆ. ಮಣ್ಣಿನಲ್ಲಿ ನೀರು ಕಡಿಮೆಯಿದ್ದಾಗ ಗಿಡಗಳು ದೊಡ್ಡದಾಗಿ ಬೆಳೆದರೆ, ತಮ್ಮ ದೊಡ್ಡ ಮೈಗಳಿಗೆ ಹೆಚ್ಚು ನೀರು ಒದಗಿಸಿಕೊಳ್ಳುವುದು ತೊಂದರೆಯೇ ಸರಿ. ಹಾಗಾಗಿ ಒಣಗಾಲಗಳಲ್ಲಿ ತಮ್ಮ ನೀರಿನ ಬೇಡಿಕೆಯನ್ನು ಕಡಿಮೆ ಮಾಡಿಕೊಳ್ಳಲು ತಮ್ಮ ಬೆಳವಣಿಗೆಯನ್ನೇ ಮೊಟಕುಗೊಳಿಸುವಂತಹ ಉಪಾಯವನ್ನು ಗಿಡಗಳು ಈ ಮೂಲಕ ಕಂಡುಕೊಂಡಿವೆ.

(ಚಿತ್ರ ಸೆಲೆಗಳು: 1. mysouthernheart.com  2. theozonehole.com, 3. Wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: