ನುಡಿಸಮುದಾಯಗಳ ಏಳಿಗೆಯಲ್ಲೇ ಇಂಡಿಯಾದ ಏಳಿಗೆ ಇರುವುದು

ವಲ್ಲೀಶ್ ಕುಮಾರ್ ಎಸ್.index1

ಕಳೆದ ವಾರ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ಪ್ರದಾನಿ ಮೋದಿಯವರು “ನಮ್ಮ ಕಲಿಕೆ ಏರ್‍ಪಾಡು ಕೇವಲ ರೋಬೋಟುಗಳನ್ನು ತಯಾರಿಸುವ ಏರ‍್ಪಾಡು ಆಗಬಾರದು. ಒಳ್ಳೆಯ ಕಲಿಕೆಗೆ ಒಳ್ಳೆಯ ಕಲಿಸುಗರನ್ನು ತಯಾರಿಸಬೇಕು” ಅನ್ನುವ ಮಾತುಗಳನ್ನು ಆಡಿದ್ದಾರೆ. ನಮ್ಮ ದೇಶದ ಕಲಿಕೆಯನ್ನು ಗಟ್ಟಿಗೊಳಿಸಬೇಕೆಂಬ ಇವರ ಕಾಳಜಿ ಒಪ್ಪುವಂತದ್ದು. ಆದರೆ ಕಲಿಕೆಯನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಕೇವಲ ಕಲಿಸುಗರ ಗುಣಮಟ್ಟ ಹೆಚ್ಚಿಸುವುದರಿಂದ ಆಗುವುದಿಲ್ಲ. ಒಳ್ಳೆಯ ಕಲಿಕೆಯೇರ‍್ಪಾಡನ್ನು  ಕಟ್ಟುವತ್ತ ನಾವು ನಡೆಯಬೇಕಾದರೆ ಈ ನಿಟ್ಟಿನಲ್ಲಿ ಗೆದ್ದಿರುವ ನಾಡುಗಳ ಎತ್ತುಗೆಗಳನ್ನು ಗಮನಿಸಬೇಕು – ಅವರ ನಡೆಯನ್ನೇ ಮೈಗೂಡಿಸಿಕೊಳ್ಳಬೇಕು. ಇದರ ಕುರಿತು ಒಂದು ಸೀಳುನೋಟ ಇಲ್ಲಿದೆ.

ಜಗತ್ತಿನಲ್ಲಿ ಒಳ್ಳೆಯ ಗುಣಮಟ್ಟದ ಕಲಿಕೆಯೇರ‍್ಪಾಡನ್ನು ಗುರುತಿಸುವಲ್ಲಿ OECD ಎನ್ನುವ ಸಂಸ್ತೆ ನಡೆಸುವ PISA (Program for International Students Assessment) ವರದಿ ಒಂದೊಳ್ಳೆ ಅಳತೆಗೋಲು ಎಂದು ಕಾಣಲಾಗುತ್ತದೆ. ಈ ಪಟ್ಟಿಯಲ್ಲಿ ಪಿನ್ಲ್ಯಾಂಡ್, ಜರ‍್ಮನಿ, ಜಪಾನ್, ದಕ್ಶಿಣ ಕೊರಿಯಾ, ಚೀನಾ, ಕೆನಡಾ, ಸ್ಪೇನ್ ಮುಂತಾದ ನಾಡುಗಳು ಮುಂಚೂಣಿಯಲ್ಲಿರುತ್ತವೆ. ಅಲ್ಲದೆ ತಂತ್ರಗ್ನಾನದ ಬಳಕೆ ಮತ್ತು ಸಂಶೋದನೆಯಲ್ಲಿಯೂ ಈ ನಾಡುಗಳು ಮುಂದಿವೆ. ಜರ‍್ಮನಿಯಲ್ಲಿ ಆಡಿ, ಪೋಕ್ಸ್ ವ್ಯಾಗನ್ನಂತಹ ಹೆಸರುವಾಸಿ ಕಾರುಗಳು ತಯಾರಾದರೆ, ಕೊರಿಯಾ ದೇಶದಲ್ಲಿ ಸ್ಯಾಮ್ಸಂಗ್ ಹುಟ್ಟಿತು. ಪಿನ್ಲ್ಯಾಂಡ್ “ನೋಕಿಯಾ” ಸಂಸ್ತೆಯ ನೆಲೆಯಾದರೆ, ಜಪಾನ್ ಹೋಂಡಾ, ಸುಜುಕಿಗಳ ತವರುಮನೆ. ಈ ಸಾಲಿನ ಅರಿಮೆಯ ಹರವಿನಲ್ಲಿ ನೊಬೆಲ್ ಪ್ರಶಸ್ತಿಗಳನ್ನು ಪಡೆದವರಲ್ಲಿ ಜಪಾನ್ ಮತ್ತು ನಾರ‍್ವೆ ದೇಶದ ವಿಗ್ನಾನಿಗಳೂ ಇದ್ದಾರೆ. ಮೇಲೆ ಹೇಳಿದ ನಾಡುಗಳು ಅತ್ಯುತ್ತಮ ಕಲಿಕೆಯೆರ‍್ಪಾಡಿನ ನೆರವಿನಿಂದಲೇ ಇಂತಹ ವೈಗ್ನಾನಿಕ ಸಾದನೆಗಳನ್ನು ಮಾಡಿದ್ದಾರೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಈ ಎಲ್ಲಾ ನಾಡುಗಳಲ್ಲೂ ಕಾಣುವ ಒಂದು ಬಗೆಯೆಂದರೆ ಅಲ್ಲಿನ ಕಲಿಕೆ ಏರ‍್ಪಾಡು ಆ ನಾಡಿನ ನುಡಿಯಲ್ಲೇ ಇರುವುದು.

ಮೊದಲ ಹಂತದ ಕಲಿಕೆಯಲ್ಲಿ ಪರಿಸರದ ನುಡಿಯ ಪಾತ್ರವನ್ನು ಬಣ್ಣಿಸಲು ಹಲವಾರು ವೈಗ್ನಾನಿಕ ವರದಿಗಳಿವೆ ಅಲ್ಲದೆ ಯುನೆಸ್ಕೋ ಮಕ್ಕಳ ತಾಯ್ನುಡಿ (ಅತವಾ ಪರಿಸರದ ನುಡಿ)ಯಲ್ಲಿ ಕಲಿಯುವುದನ್ನು ಬಲವಾಗಿ ಬೆಂಬಲಿಸುತ್ತದೆ. ಮಕ್ಕಳಿಗೆ ಎಳವೆಯಲ್ಲಿ ವೈಗ್ನಾನಿಕ ವಿಶಯಗಳ ತಿರುಳು ಚನ್ನಾಗಿ ತಿಳಿಯಬೇಕಾದರೆ ಅದು ಮಗುವಿನ ತಾಯ್ನುಡಿ ಅತವಾ ಪರಿಸರದ ನುಡಿಯಲ್ಲಿ ಕಲಿಸಿದಾಗ ಮಾತ್ರ ಪರಿಣಾಮಕಾರಿಯಾಗುತ್ತದೆ ಎನ್ನುವುದನ್ನು ಹಲವಾರು ಸಂಶೋದನೆಗಳು ತೋರಿಸಿಕೊಟ್ಟಿವೆ. ಬಾರತ ರತ್ನ ಪ್ರಶಸ್ತಿ ಪಡೆದ ವಿಗ್ನಾ ನಿಗಳಾದ ಪ್ರೊ. ಸಿ. ಎನ್. ಆರ್. ರಾವ್, ಡಾ. ಎ. ಪಿ. ಜೆ. ಅಬ್ದುಲ್ ಕಲಾಮ್ ಅವರುಗಳೂ ತಮ್ಮ ಗೆಲುವಿಗೆ ತಮ್ಮ ತಾಯ್ನುಡಿಯಲ್ಲಿ ಕಲಿತಿರುವುದು ನೆರವಾಗಿರುವುದಾಗಿ ಸಾರಿದ್ದಾರೆ. ಈ ಎಲ್ಲಾ ಅಂಶಗಳೂ ತೋರುವ ದಿಕ್ಕು ಯಾವುದೆಂದರೆ ತಾಯ್ನುಡಿಯಲ್ಲಿಯೇ ಉತ್ತಮ ಗುಣಮಟ್ಟದ ಕಲಿಕೆ ಏರ‍್ಪಡಿಸಬೇಕೆನ್ನುವುದು. ಅದರಿಂದ ಮಕ್ಕಳು ವಿಶಯಗಳನ್ನು ಚನ್ನಾಗಿ ಕಲಿತು ಮುಂದಿನ ದಿನಗಳಲ್ಲಿ ಹೆಚ್ಚಿನ ವೈಗ್ನಾನಿಕ ಕಲಿಕೆ ನಡೆಸಲು ನೆರವಾಗುತ್ತದೆ.

ಕಲಿಕೆ ಏರ‍್ಪಾಡು ಚನ್ನಾಗಿ ಕಟ್ಟಿಕೊಂಡಿರುವ ನಾಡುಗಳ ಎತ್ತುಗೆ ಕೊಟ್ಟಾಗ ಹಲವರಲ್ಲಿ ಒಂದು ಗೊಂದಲ ಮೂಡುವುದು ಸಹಜ; ಅದೇನೆಂದರೆ ಇಂಡಿಯಾದಲ್ಲಿ ಹಲವಾರು  ನುಡಿಗಳಿವೆ, ಹೀಗಿರುವಾಗ ಯಾವ ನುಡಿಯಲ್ಲಿ ನಮ್ಮ ಮಕ್ಕಳು ಕಲಿಯಬೇಕು ಎಂಬುದು. ಇಂತಹ ಬಗೆ ಇರುವುದು ಇಂಡಿಯಾದಲ್ಲಿ ಮಾತ್ರವಲ್ಲ. ಮಲೇಶ್ಯಾದಲ್ಲೂ ಹಲ ನುಡಿಗಳ ಮಂದಿ ಒಟ್ಟಿಗೆ ಬಾಳುತ್ತಿದ್ದಾರೆ. ಮಲೇಶಿಯಾದಲ್ಲಿ ಮಲೇಶಿಯನ್ನರು ಮಲೈ ನುಡಿಯಲ್ಲೂ, ಚೀನೀಯರು ಚೀನೀ ನುಡಿಯಲ್ಲೂ,ತಮಿಳರು ತಮಿಳು ನುಡಿಯಲ್ಲೂ ಕಲಿಕೆ ನಡೆಸುತ್ತಿರುವುದನ್ನು ಕಾಣಬಹುದು. ಮಲೇಶಿಯಾದ ತಮಿಳು ಮಾದ್ಯಮ ಶಾಲೆಯಲ್ಲಿ ಕಲಿತ ಮಕ್ಕಳು 2014ನೇ ಸಾಲಿನ ‘ಬ್ರಿಟಿಶ್ ಇನ್ವೆನ್ಶನ್ ಶೋ’ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ – ಆ ಮೂಲಕ ತಾಯ್ನುಡಿಯಲ್ಲಿ ಕಲಿಯುವುದರ ಒಳಿತನ್ನು ಕಂಡವರಾಗಿದ್ದಾರೆ.

ಇಂಡಿಯಾದಲ್ಲಿ ಹಲವಾರು ನುಡಿಗಳಿವೆ, ಅಂತೆಯೇ ಒಂದೇ ನುಡಿಯಾಡುವ ಮಂದಿ ಒಟ್ಟಿಗಿದ್ದು ಕಟ್ಟಿಕೊಂಡ ನುಡಿವಾರು ರಾಜ್ಯಗಳಿವೆ. ಈ ಪ್ರದೇಶಗಳಲ್ಲಿ ಆ ರಾಜ್ಯದ ಅದಿಕ್ರುತ ನುಡಿಯು ಬಹುತೇಕರಿಗೆ ತಿಳಿದಿದ್ದು, ಅಲ್ಲಿನ ಪರಿಸರದ ನುಡಿಯೂ ಆಗಿರುತ್ತದೆ. ಎತ್ತುಗೆಗೆ ಕರ‍್ನಾಟಕದಲ್ಲಿ ಕನ್ನಡ ನುಡಿಯು ಬಹುತೇಕರಿಗೆ ಹತ್ತಿರವಾದುದು ಅಲ್ಲದೆ ನಮ್ಮ ಪರಿಸರದ ನುಡಿಯೂ ಆಗಿದೆ. ಹೀಗಿರುವಾಗ ಕರ‍್ನಾಟಕದಲ್ಲಿ ಕನ್ನಡ ಮಾದ್ಯಮದಲ್ಲಿ ಕಲಿಕೆ ಒದಗಿಸುವುದು ಹೆಚ್ಚಿನ ಮಂದಿಗೆ ತಲುಪುತ್ತದೆ.

ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಜರ‍್ಮನಿ ಅತವಾ ಜಪಾನ್ ನಾಡುಗಳು ಉದ್ದಗಲ ಅತವಾ ಮಂದಿಯೆಣಿಕೆಯಲ್ಲಿ ಇಂಡಿಯಾಕ್ಕೆ ಸಮನಾದವಲ್ಲ. ಹಾಗಾಗಿ ಅವುಗಳನ್ನು ದೇಶವೆಂದು ನೋಡುತ್ತಾ ಇಂಡಿಯಾದೊಂದಿಗೆ ಹೋಲಿಸುವ ಬದಲು ನುಡಿಸಮುದಾಯಗಳಾಗಿ ಕಾಣುವುದರಿಂದ ಹೋಲಿಕೆಗೆ ಸರಿಹೊಂದುತ್ತದೆ. ಜರ‍್ಮನ್ನರು, ಜಪಾನೀಯರು, ಪಿನ್ನಿಶರು ತಮ್ಮ ತಮ್ಮ ನುಡಿಯಲ್ಲೇ ಕಲಿತು ಗೆಲುವು ಕಂಡಂತೆ ಕನ್ನಡಿಗರೂ, ಮರಾಟಿಗರೂ, ತಮಿಳರೂ ತಮ್ಮ ತಮ್ಮ ನುಡಿಯಲ್ಲೇ ಕಲಿತು ಏಳಿಗೆ ಹೊಂದಬೇಕು. ಜಗತ್ತಿನ ಯಾವುದೇ ನಾಡಿಗೆ ಸರಿಸಮನಾಗಿ ತನ್ನ ಮಂದಿಯನ್ನು ಬೆಳೆಸಬಲ್ಲ ಕಲಿಕೆ ಏರ‍್ಪಾಡು ನಮ್ಮಲ್ಲಿ ಕಟ್ಟಬೇಕು. ಕೇವಲ ಬಾಯ್ಪಾಟ ಒಪ್ಪಿಸುವ ರೋಬೋಟುಗಳನ್ನು ತಯಾರಿಸದೇ ವಿಚಾರಶೀಲ, ಉದ್ಯಮಶೀಲ ತಲೆಮಾರೊಂದನ್ನು ತಯಾರಿಸಲು ಕಲಿಕೆಯೆಂಬುದು ತಾಯ್ನುಡಿಯಲ್ಲಿ ನಡೆಸಿದರೆ ಮಾತ್ರ ಆಗುತ್ತದೆ ಅನ್ನುವುದು ವೈಗ್ನಾನಿಕವಾಗಿ ಸಾಬೀತಾಗಿರುವುದಲ್ಲದೆ, ಯುನೆಸ್ಕೋ ತನ್ನ ವರದಿಯಲ್ಲಿ ಹೇಳುವಂತೆ – ‘ಕಣ್ಣಿಗೆ ಕಾಣುವ ದಿಟವಾಗಿದೆ’.

(ಚಿತ್ರ ಸೆಲೆ: bhu.ac.in)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: