ಆದುನಿಕತೆ

ಪ್ರಿಯದರ‍್ಶಿನಿ ಶೆಟ್ಟರ್.

hasiru-baLe

ಮನೆಯ ಹೊರಗೆ ನನ್ನ ತಂಗಿ ಆಕೆಯ ಗೆಳತಿಯರೊಡನೆ ಆಟವಾಡುತ್ತಿದ್ದಳು. ಚೌಕಾಬಾರದ ಕವಡೆಯ ಸದ್ದಿನೊಡನೆ ಗಾಜಿನ ಬಳೆಗಳ ನಾದ ಕೇಳುತ್ತಿತ್ತು. ಹೊರಗೆ ಹೋಗಿ ನೋಡಿದರೆ ಜೀನ್ಸ್ ಪ್ಯಾಂಟ್, ಸ್ಕರ‍್ಟ್, ಟಿ-ಶರ‍್ಟ್ ದರಿಸಿರುವ ಹುಡುಗಿಯರ ಕೈಯಲ್ಲಿ ಹಸಿರು ಗಾಜಿನ ಬಳೆಗಳು!!! ಬಳೆಗಳನ್ನು ಯಾರು ಹಾಕಿದರೆಂದು ಕೇಳಿದೆ. ನನ್ನ ಗೆಳತಿಯ ಅಕ್ಕನ ಮದುವೆ ಇರುವುದು ತಿಳಿದೇ ಇತ್ತು. ಅವರ ಮನೆಯಲ್ಲೇ ಎಲ್ಲರಿಗೂ ಬಳೆ ಇಡಿಸಿದರೆಂದು ಹೇಳಿದಳು ಅವರಲ್ಲೊಬ್ಬಳು. ಮರುದಿನ ನನಗೂ ಬಳೆ ಇಡಿಸಿಕೊಳ್ಳಲು ಬರಬೇಕೆಂದು ಹೇಳಿ ಕಳಿಸಿದ್ದರು. ಅಲ್ಲಿ ಹೋಗಿ ಬಳೆ-ಕುಂಕುಮ ಇಡಿಸಿಕೊಂಡು ಮರಳಿದೆ. ಮತ್ತೆ ಅವೇ ಹುಡುಗಿಯರು ಆಟವಾಡುತ್ತಿದ್ದರು. ಒಬ್ಬರ ಕೈಯಲ್ಲೂ ಬಳೆಗಳೇ ಇರಲಿಲ್ಲ!!

“ಬಳೆಗಳು ಎಲ್ಲಿ?” ಎಂದು ಕೇಳಿದೆ.

“ಶೆಲ್ಪನಲ್ಲಿ ಗಾಜಿನ ಬಳೆ ಇಡುವ ಜಾಗ ಸೇರಿವೆ” ಎಂದಳು ನನ್ನ ತಂಗಿ.

ಬಳೆಗಳನ್ನೇಕೆ ತೆಗೆದಿರೆಂಬ ನನ್ನ ಪ್ರಶ್ನೆಗೆ ಬಗೆಬಗೆಯ ಉತ್ತರಗಳು! ಒಬ್ಬಳು ಚಿತ್ರಬಿಡಿಸುವಾಗ ಬಳೆಗಳು ತೊಂದರೆ ಮಾಡುತ್ತವೆ ಎಂದರೆ, ಇನ್ನೊಬ್ಬಳು ಆಟ ಆಡುವಾಗ ಬಳೆಗಳಿಗೆ ಏನಾದರೂ ಆದೀತೆಂದಳು! ಮತ್ತೊಬ್ಬ ಸಣ್ಣ ಹುಡುಗಿ ಹೇಳಿದಳು ಆಕೆಗೆ ನೀರಾಟವಾಡಲು ಹಿಂಜರಿಕೆ!ಇವುಗಳ ಪೈಕಿ ಒಂದು ಉತ್ತರವೇನೆಂದರೆ “ಶಾಲೆಯಲ್ಲಿ ಸಮವಸ್ತ್ರದೊಡನೆ ಬಳೆಗಳನ್ನು ಹಾಕಿಕೊಂಡರೆ ಶಿಕ್ಶಕಿ ಬಯ್ಯುತ್ತಾರೆ”. ಸಣ್ಣದಾಗಿ ಹಚ್ಚಿದ ಕೆಂಪು ಕುಂಕುಮ, ಒಂದು ಮಲ್ಲಿಗೆ ಹೂವು ಹಾಕಿಕೊಂಡಾಗಲೇ ‘ದಂಡ’ ಹಾಕುವ ಶಿಕ್ಶಕಿ, ಒಂದು ಡಜನ್ ಬಳೆ ಹಾಕಿದ್ದಕ್ಕೆ ದಂಡ ಹಾಕದೇ ಇರುವರೇ?

ಒಂದು ದ್ರುಶ್ಟಿಯಿಂದ ಅವರ ವಾದವೂ ಸರಿ. ಬೇಸಿಗೆ ರಜೆಯಲ್ಲಿ ಮಾವಿನ ಹಣ್ಣು ತಿನ್ನುವಾಗ ಅದರ ರಸ ಕೈಬೆರಳಿಂದ ಅಂಗೈಗಿಳಿದು, ಮುಂಗೈಗೆ ಬಂದು ಬಳೆಗಳಲ್ಲಿ ನುಸುಳಿದರೆ, ನೆಕ್ಕುವುದಾದರೂ ಹೇಗೆ?! ಹಿಂದೆ ಸರಿಸಿದರೆ ಮುಂದೆ ಬರಿಸುವ ಅತವಾ ಮುಂದೆ ಇದ್ದರೆ ಹಿಂದೆ ಸರಿಸಿಕೊಳ್ಳಬೇಕೆನ್ನಿಸುವ ಈ ಬಳೆಗಳು ಹದಿಹರೆಯದ ಬಾಲಿಕೆಯರ ಕೈಯಲ್ಲಿ ಎಶ್ಟು ದಿನ ಇದ್ದಾವು?

(ಚಿತ್ರ ಸೆಲೆ: etsy.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: