ಆಳದ ತೂತು

ಪ್ರಶಾಂತ ಸೊರಟೂರ.

ವೋಯೆಜರ‍್-1 ನಮ್ಮ ನೆಲದಿಂದ ಈಗ ಸರಿಸುಮಾರು 130 ಬಾನಳತೆಯ (Astronomical Unit-AU) ದೂರದಲ್ಲಿ ಅಂದರೆ ಸುಮಾರು 1.954 x 1010 km ದೂರದಲ್ಲಿ ಸಾಗುತ್ತಿದೆ. ಇಶ್ಟು ದೂರದವರೆಗೆ ವಸ್ತುವೊಂದನ್ನು ಸಾಗಿಸಿ ಅದನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವಲ್ಲಿ ಮನುಶ್ಯರ ಅರಿವಿನ ಎಲ್ಲೆ ಚಾಚಿಕೊಂಡಿದೆ. ಆದರೆ ಈ ಬರಹದಲ್ಲಿ ನಾನು ಹೇಳಹೊರಟಿರುವುದು ವೋಯೇಜರ್ ಬಗ್ಗೆ ಅಲ್ಲ. ಬಾನಾಳದಲ್ಲಿ ಇಶ್ಟು ದೂರ ಸಾಗಬಲ್ಲೆವಾದರೂ ನಾವು ನೆಲೆ ನಿಂತಿರುವ ನೆಲದಲ್ಲಿ ಎಶ್ಟು ಆಳವನ್ನು ತಲುಪಲು ಇಲ್ಲಿಯವರೆಗೆ ಆಗಿದೆ ಅನ್ನುವುದರ ಕುರಿತು.

ನಿಮಗೆ ಬೆರಗಾಗಬಹುದು, ಮೇಲ್ಮೈಯಿಂದ ಅದರ ನಡುವಿನವರೆಗೆ ಸುಮಾರು 6378 ಕಿ.ಮೀ. ಆಳವಿರುವ ನೆಲದಲ್ಲಿ ಇಲ್ಲಿಯವರೆಗೆ ಮನುಶ್ಯರಿಗೆ ಕೊರೆಯಲು ಆದ ತೂತಿನ ಆಳ 12.26 ಕಿ.ಮೀ. ಅಶ್ಟೇ ಅಂದರೆ ನೆಲದಾಳದ ಬರೀ 0.2%. ನೆಲದಾಳದಲ್ಲಿರುವ ಬಿಸುಪು (temperature), ಒತ್ತಡ ಮನುಶ್ಯರು ಮಾಡಿದ ಸಲಕರಣೆಗಳು ತೂರಲಾಗದ ಮಟ್ಟದಲ್ಲಿದ್ದು, ಬಾನಾಳವನ್ನು ಗೆಲ್ಲುವಶ್ಟು ಸುಲಬವಾಗಿಲ್ಲ.

ನೆಲದ ಆಳಕ್ಕೆ ತೂರುವ ಕೋಲಾ ಮೀರಿದಾಳದ ಕೊರೆತ (Kola Super-deep Borehole) ಎನ್ನುವ ಹಮ್ಮುಗೆಯನ್ನು ರಶ್ಯಾ 24.05.1970 ರಲ್ಲಿ ಅರಂಬಿಸಿತು. ಈ ಹಮ್ಮುಗೆ ಶುರು ಮಾಡುವಾಗ ಸುಮಾರು 15 ಕಿ.ಮೀ. ಆಳಕ್ಕೆ ತೂತು ಕೊರೆಯುವ ಗುರಿಯನ್ನು ಇಟ್ಟುಕೊಂಡಿದ್ದ ರಶ್ಯಾ, 19 ವರುಶಗಳ ಬಳಿಕ 1989 ರಲ್ಲಿ 12.26 ಕಿ.ಮೀ. ಆಳ ತಲುಪಿ ಅಲ್ಲಿಂದ ಇನ್ನೂ ಆಳಕ್ಕೆ ಇಳಿಯಲು ತನ್ನ ಸಲಕರಣೆಗಳಿಂದ ಆಗದು ಎನ್ನುವ ತೀರ‍್ಮಾನವನ್ನು ಕೈಗೊಂಡು ಹಮ್ಮುಗೆಯನ್ನು ಕೊನೆಗೊಳಿಸಿತು.

Kola_deep_hole(ರಶ್ಯಾದ ತೂತು ಕೊರೆಯುವ ಹಮ್ಮುಗೆಯ ತಾಣ)

ಅಮೇರಿಕಾ ಅದಕ್ಕೂ ಮುಂಚೆ ಇಂತಹ ಆಳದ ತೂತು ಕೊರೆಯುವ ಕೆಲಸಕ್ಕೆ ಕೈಹಾಕಿ 9.583 ಕೀ.ಮೀ. ಆಳಕ್ಕೆ ಇಳಿಯಿತಾದರೂ, ರಶ್ಯಾ ತಲುಪಿದ ಆಳವನ್ನು ತಲುಪಲು ಅದಕ್ಕೆ ಆಗಲಿಲ್ಲ. ರಶ್ಯಾ ಕೊರೆದ ತೂತು ಮನುಶ್ಯರು ಮಾಡಿದ ಎಲ್ಲಕ್ಕಿಂತ ನೆಲದಾಳದ ತೂತು ಎಂಬ ತನ್ನ ಹಿರಿಮೆಯನ್ನು ಇಂದು ಕೂಡ ಕಾಯ್ದುಕೊಂಡಿದೆ.

ರಶ್ಯಾ ಕೈಗೊಂಡಿದ್ದ ಹಮ್ಮುಗೆಯಲ್ಲಿ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ತೊಡಕುಗಳು ಅದಕ್ಕೆ ಎದುರಾದವು. 1984 ರಲ್ಲಿ ಸುಮಾರು 12000 ಮೀ (12 ಕಿ.ಮೀ.) ಆಳ ತಲುಪಿದಾಗ ಕೊರೆತದ ಸಲಕರಣೆಯ ಸುಮಾರು 5000 ಮೀ ಉದ್ದದ ಎಳೆ ನೆಲದೊಳಗೆ ಮುರಿದುಹೋಯಿತು. ಆಗ ಆ ಆಳವನ್ನು ಬಿಟ್ಟು ಸುಮಾರು 7000 ಮೀ ಆಳದಿಂದ ಬೇರೆ ದಾರಿಯಲ್ಲಿ ತೂತು ಕೊರೆಯುವ ಕೆಲಸವನ್ನು ಮುಂದುವರೆಸಬೇಕಾಯಿತು. ಮುಂದೆ 1989 ರಲ್ಲಿ 12262 ಮೀ. ತಲುಪಿದ ಕೊರೆತ ಅದೇ ವರುಶ 13500 ಮೀ ಮತ್ತು 1990 ರಲ್ಲಿ 15000 ಮೀ ತಲುಪಲಿದೆಯೆಂದು ರಶ್ಯಾ ಅಂದುಕೊಂಡಿತ್ತು.

ಆದರೆ 12262 ಮೀ. ಆಳ ತಲುಪುತ್ತಿದ್ದಂತೆ ನೆಲದಾಳದ ಬಿಸುಪು ಸುಮಾರು 180 ಡಿಗ್ರಿ ಸೆಲ್ಸಿಯಸ್ ಇರುವುದು ಗೊತ್ತಾಯಿತು. ಈ ಮಟ್ಟದ ಬಿಸುಪು (temperature) ಮುಂದುವರೆದರೆ 15000 ಮೀ ಆಳದಲ್ಲಿ ಬಿಸುಪು ಸುಮಾರು 300 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಅಶ್ಟು ಬಿಸುಪನ್ನು ತಡೆದುಕೊಳ್ಳಲು ಕೊರೆತದ ಸಲಕರಣೆಗೆ ಆಗದೆನ್ನುವ ತೀರ‍್ಮಾನಕ್ಕೆ ರಶ್ಯಾ ಬಂದಿತು. ಹಾಗಾಗಿ 12262 ಮೀ. ಆಳವೇ ಆ ಹಮ್ಮುಗೆಯ ಕೊನೆಯಾಯಿತು.

Kola_deep_hole-2

(ತೂತು ಕೊರೆಯುವ ಹಮ್ಮುಗೆಯ ತಿಟ್ಟ)

kola_deep_hole_drill_bit

(ತೂತು ಕೊರೆಯಲು ಬಳಸಿದ ಸಲಕರಣೆ)

ತಾನು ಅಂದುಕೊಂಡಿದ್ದ ಆಳವನ್ನು ತಲುಪಲು ಆಗದಿದ್ದರೂ, ರಶ್ಯಾ ಕೈಗೊಂಡ ಈ ಹಮ್ಮುಗೆಯಲ್ಲಿ ಹಲವಾರು ಹೊಸದಾದ ವಿಶಯಗಳು ತಿಳಿದುಬಂದವು. ನೆಲದ ತೊಗಟೆಯ ಕಟ್ಟಣೆಯ ಬಗ್ಗೆ ಹಲವು ವಿಶಯಗಳು ಗೊತ್ತಾದವು. ಈ ಹಮ್ಮುಗೆಯಲ್ಲಿ ಕಂಡುಕೊಂಡ ಬೆರಗುಗೊಳಿಸಿದ ವಿಶಯಗಳೆಂದರೆ,

1. ಸುಮಾರು 7 ಕಿ.ಮೀ. ಆಳದಲ್ಲಿ ಪೆಡಸುಕಲ್ಲುಗಳ (granite) ಮೇರೆ ಕೊನೆಯಾಗಿ ಕಪ್ಪುಗಲ್ಲುಗಳ (basalt) ಹರವು ಶುರುವಾಗದಿರುವುದು. ಈ ಆಳದ ಬಳಿಕ ಪೆಡಸುಕಲ್ಲುಗಳ ಮಾರ‍್ಪಟ್ಟ ರೂಪದ ಕಲ್ಲುಗಳೇ ಮುಂದುವರೆದಿರುವುದು ಈ ಹಮ್ಮುಗೆಯಲ್ಲಿ ಕಂಡುಬಂದಿತು. ಅಶ್ಟೇ ಅಲ್ಲದೇ ಮಾರ‍್ಪಟ್ಟ ಈ ಪೆಡಸುಕಲ್ಲುಗಳಲ್ಲಿ ಬಿರುಕುಗಳಿದ್ದು, ಅಲ್ಲಿ ನೀರು ತುಂಬಿಕೊಂಡಿರುವುದು ಅರಿಮೆಗಾರರನ್ನು ಬೆರಗುಗೊಳಿಸಿತು. ಈ ನೀರು ನೆಲದ ಮೇಲ್ಮೈಯಿಂದ ಬರದೇ ನೆಲದ ಆಳದಿಂದ ಬಂದಿದ್ದೆಂದು ಅರಿಗರು ಎಣಿಸಿದ್ದಾರೆ.

2. ನೆಲದಾಳದಲ್ಲಿ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಹೈಡ್ರೋಜನ್ ಆವಿ ಕಂಡುಬಂದಿದ್ದು. ಹಮ್ಮುಗೆಯಲ್ಲಿ ಪಾಲ್ಗೊಂಡಿದ್ದ ಅರಿಗರು ಹೇಳುವಂತೆ ಆಳದ ಕೊಳವೆಯಿಂದ ಹೊಮ್ಮುತ್ತಿದ್ದ ಮಣ್ಣು ಹೈಡ್ರೋಜನ್ ಆವಿಯಿಂದ ಕುದಿಯುತ್ತಿರುವಂತೆ ಕಂಡುಬಂದಿತಂತೆ.

ನೇಸರನ ಕೂಟದಲ್ಲೇ ವಿಶೇಶವಾದ ಸುತ್ತಣವನ್ನು ಹೊಂದಿರುವ ನಮ್ಮ ನೆಲದ ಒಳರಚನೆಯನ್ನು ತಿಳಿದುಕೊಳ್ಳುವ, ಅದರ ಇಟ್ಟಳದ ಕಟ್ಟಣೆಯನ್ನು ಅರಿತುಕೊಳ್ಳುವ ಇಂತಹ ಕುತೂಹಲ ಮನುಶ್ಯರಿಗೆ ಹಿಂದಿನಿಂದಲೂ ಇರುವಂತದು. ನೆಲದ ಮೇಲ್ಮೈಯಲ್ಲಿ ಕಡಲುಗಳು ಹೇಗೆ ಉಂಟಾದವು? ಅದರ ಆಳದಲ್ಲೂ ನೀರಿದೆಯೆ? ಅದರ ಆಳದಲ್ಲಿ ಅದಿರುಗಳು, ಜಲ್ಲಿಗಳು ಯಾವ ರೂಪದಲ್ಲಿವೆ? ನೆಲದ ಒಳಪದರುಗಳ ಹಂಚಿಕೆ ಹೇಗಿದೆ? ಹೀಗೆ ಹತ್ತಾರು ಕೇಳ್ವಿಗಳು ಮಾನವರ ತಲೆಯನ್ನು ಕೊರೆಯುತ್ತ ಬಂದಿವೆ. ಆದರೆ ನೆಲದಾಳಕ್ಕೆ ತೂರಿ ಇವುಗಳನ್ನು ತಿಳಿದುಕೊಳ್ಳುವಂತಹ ಅಳವು ದಕ್ಕಿಸಿಕೊಳ್ಳಲು ಮಾತ್ರ ಇಲ್ಲಿಯವರೆಗೆ ಮನುಶ್ಯರಿಗೆ ಆಗಿಲ್ಲ.

ನೇರವಾಗಿ ಆಳಕ್ಕೆ ತೂರಿ ತಿಳಿದುಕೊಳ್ಳಲು ಆಗದಿದ್ದರೂ, ಎಂದಿನಂತೆ ಅರಿಮೆಯ ಚಳಕವನ್ನು ಬಳಸಿ ನೇರವಲ್ಲದ ದಾರಿಯಲ್ಲೇ ನೆಲದ ಇಟ್ಟಳವನ್ನು ತಕ್ಕಮಟ್ಟಿಗೆ ಕಂಡುಕೊಳ್ಳುವಲ್ಲಿ ಮಾನವರು ಮುಂದಡಿಯಿಡಬೇಕಾಯಿತು. ಅದರಂತೆ ನೆಲನಡುಕದ ಅಲೆಗಳು (seismic waves) ಸಾಗುವ ಬಗೆಯನ್ನು ಅರಿತುಕೊಂಡು ನೆಲದ ಇಟ್ಟಳವನ್ನು ಕೆಳಗಿನಂತೆ ಗುರುತಿಸಲಾಗಿದೆ.

earth_section_nela

ಹೀಗೆ ಗುರುತಿಸಿದ ಇಟ್ಟಳವು (structure) ತಕ್ಕಮಟ್ಟಿಗೆ ಸರಿಯಿದೆಯೆಂದು ಅರಿಮೆಗಾರರು ಒಪ್ಪಿದ್ದರೂ ಆಗಾಗ ಇದರಲ್ಲಿ ಹೊಸ ಕಂಡುಕೊಳ್ಳುವಿಕೆಗಳು ಹೊರಹೊಮ್ಮುತ್ತಲಿವೆ. ಮೇಲ್ಮೈಯಲ್ಲಿರುವ ಕಡಲ ನೀರಿಗಿಂತ ಹಲವು ಪಟ್ಟು ಹೆಚ್ಚಿನ ನೀರು ನೆಲದಾಳದಲ್ಲಿದೆ ಎಂಬಂತಹ ಇತ್ತೀಚಿನ ಸುದ್ದಿಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಏನೇ ಆಗಲಿ, ಮನುಶ್ಯರ ಕಸುವಿನ ಎಲ್ಲೆಗಿಂತ ಅವರ ಅರಿಮೆಯ ಹಿರಿಮೆ ಹೆಚ್ಚಿನದು. ನಮ್ಮ ನೆಲದಾಳಕ್ಕೆ ಇನ್ನೂ ಆಳದ ’ಅರಿವಿನ ತೂತು’ ಕೊರೆದು, ಒಡಲಾಳದ ತಿಳುವಳಿಕೆಯನ್ನು ತನ್ನತಾಗಿಸಿಕೊಳ್ಳುವಲ್ಲಿ ಮುಂದಿನ ದಿನಗಳಲ್ಲಿ ಇನ್ನಶ್ಟು ಗೆಲುವು ಸಿಗಬಹುದು.

(ತಿಳಿವಿನ ಮತ್ತು ತಿಟ್ಟ ಸೆಲೆಗಳು: ವಿಕಿಪೀಡಿಯಾwww.autoorb.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: