ಜೇನುಹುಳದ ಕುಣಿತ

– ರತೀಶ ರತ್ನಾಕರ.

“ದಾರವಾಡದ ಅಂಗಡಿಯಲ್ಲಿ ಹಾಲಿನ ಪೇಡ ತುಂಬಾ ಚೆನ್ನಾಗಿರುತ್ತೆ.” “ಬೆಂಗಳೂರಿನ ತಿಂಡಿ ಬೀದಿಯಲ್ಲಿ ಬಗೆಬಗೆಯ ತಿನಿಸು ಸಿಗುತ್ತೆ…” – ನಮಗೆ ಬೇಕಾದ ಊಟ-ತಿಂಡಿಗಳ ಬಗ್ಗೆ ಮತ್ತೊಬ್ಬರಿಗೆ ತಿಳಿಸುವಾಗ ನಾವು ಹೇಗೆಲ್ಲಾ ಮಾತನಾಡಿ ತಿಳಿಸುತ್ತೇವೆ ಅಲ್ಲವೇ? ಯಾವ ಯಾವ ಊರಿನಲ್ಲಿ, ಕೇರಿಯಲ್ಲಿ, ಅಂಗಡಿಯಲ್ಲಿ ಯಾವ ತಿನಿಸುಗಳು ಎಲ್ಲಿ ಸಿಗುತ್ತವೆ ಎಂದು ಸರಿಯಾದ ವಿಳಾಸದೊಂದಿಗೆ ನಮ್ಮ ಮಾತಿನ ಮೂಲಕವೋ ಬರಹದ ಮೂಲಕವೋ ಇನ್ನೊಬ್ಬರಿಗೆ ತಿಳಿಸುತ್ತೇವೆ. ನಮ್ಮ ಮಾತಿನದ್ದೇನೋ ಸರಿ, ಆದರೆ ಯಾವುದೋ ಹೂವಿನ ತೋಟದಲ್ಲಿ ಸಿಗುವ ಹೂ ಜೇನಿನ ದಾರಿಯನ್ನು ಒಂದು ಜೇನುಹುಳವು ಮತ್ತೊಂದು ಹುಳಕ್ಕೆ ಹೇಗೆ ತಿಳಿಸಬಹುದು? ಜೇನುಹುಳಗಳು ಒಂದಕ್ಕೊಂದು ಮಾತನಾಡುತ್ತವೆಯೇ? ಅವುಗಳ ನುಡಿ ಯಾವುದು? ಬನ್ನಿ, ಈ ಕೇಳ್ವಿಗಳಿಗೆ ಮರುನುಡಿ ಹುಡುಕುವ ಪ್ರಯತ್ನ ಮಾಡೋಣ.

ಜೇನುಹುಳಗಳ ಮೇವು ಎಂದರೆ ಅದು ಹೂವಿನ ಬಂಡು (pollen), ಜೇನು (nectar) ಹಾಗು ನೀರು. ಹೂವಿನ ಬಂಡು ಮತ್ತು ಜೇನನ್ನು ಅವು ಹೂವುಗಳಿಂದಲೇ ಹುಡುಕಿ ತರಬೇಕು. ಹಿಂದಿನ ಬರಹದಲ್ಲಿ ತಿಳಿದಂತೆ ಒಂದು ಜೇನುಗೂಡಿನಲ್ಲಿ ಸವಿಯಾದ ಜೇನನ್ನು ಕೂಡಿಡುವ ಕೆಲಸ ದುಡಿಮೆಗಾರ ಹುಳಗಳದ್ದಾಗಿರುತ್ತದೆ. ಈ ದುಡಿಮೆಗಾರ ಹುಳಗಳಲ್ಲಿ ಸುಮಾರು 5-25% ಹುಳಗಳು ಬೇಹುಗಾರ(scouts) ಹುಳಗಳಾಗಿರುತ್ತವೆ. ಅಂದರೆ, ಮೇವಿಗಾಗಿ ಸುತ್ತಮುತ್ತಲಿನ ಜಾಗದಲ್ಲಿ ಹುಡುಕಾಟವನ್ನು ನಡೆಸಿ, ಸೊಂಪಾಗಿ ಹೂವುಗಳು ಸಿಗುವ ಜಾಗವನ್ನು ಕಂಡುಹಿಡಿದು, ಗೂಡಿಗೆ ಹಿಂತಿರುಗಿ ಉಳಿದ ದುಡಿಮೆಗಾರ ಜೇನುಹುಳಗಳಿಗೆ ಹೂವುಗಳಿರುವ ಜಾಗವನ್ನು ತಿಳಿಸುವುದು ಈ ಬೇಹುಗಾರ ಹುಳಗಳ ಕೆಲಸವಾಗಿರುತ್ತದೆ.

ಹಾಗಾದರೆ ಈ ಬೇಹುಗಾರ ಹುಳಗಳು ಉಳಿದ ಜೇನುಹುಳಗಳಿಗೆ ಹೂವು ಸಿಗುವ ಜಾಗವನ್ನು ಹೇಗೆ ತಿಳಿಸುತ್ತವೆ? ಜೇನುಗೂಡಿನಿಂದ ಹೂವುಗಳು ಎಶ್ಟು ದೂರದಲ್ಲಿವೆ ಮತ್ತು ಯಾವ ದಿಕ್ಕಿನಲ್ಲಿವೆ ಎಂಬ ವಿವರವನ್ನು ಹೇಗೆ ತೋರಿಸುತ್ತವೆ? ಈ ಎಲ್ಲಾ ಕುತೂಹಲಗಳಿಗೆ ಮರುನುಡಿಯೇ ‘ಜೇನುಹುಳದ ಕುಣಿತ‘! ಹೌದು, ಬೇಹುಗಾರ ಜೇನುಹುಳಗಳು ಉಳಿದ ಜೇನುಹುಳಗಳಿಗೆ ಸೊಂಪಾಗಿ ಸಿಗುವ ಮೇವಿನ ಜಾಗದ ವಿವರವನ್ನು ಕುಣಿತದ ಮೂಲಕ ತಿಳಿಸುತ್ತವೆ. ಇದನ್ನೇ ಜೇನುಹುಳದ ಕುಣಿತ ಎನ್ನಲಾಗುತ್ತದೆ.

ಜೇನುಹುಳಗಳು ಹೇಗೆ ಮಾತನಾಡಿಕೊಳ್ಳುತ್ತವೆ ಎನ್ನುವುದನ್ನು ಅರಿಯಲು ಸಾಕಶ್ಟು ಅರಕೆಗಳನ್ನು ಮಾಡಲಾಗಿದೆ. ಬೇಹುಗಾರ ಜೇನುಹುಳಗಳು ಮೇವಿನ ಜಾಗವನ್ನು ಹುಡುಕಾಡಿ, ಅಲ್ಲಿರುವ ಹೂವಿನ ಬಂಡು ಮತ್ತು ಜೇನನ್ನು ಹೊತ್ತುಕೊಂಡು ಗೂಡಿಗೆ ಹಿಂತಿರುಗುತ್ತವೆ. ಬೇಹುಗಾರ ಜೇನುಹುಳವು ತಂದ ಬಂಡಿನ ನರುಗಂಪಿನ (odor) ಜಾಡನ್ನು ಹಿಡಿದು ಉಳಿದ ದುಡಿಮೆಗಾರ ಹುಳಗಳು ಮೇವಿನ ಜಾಗವನ್ನು ಕಂಡುಹಿಡಿಯುತ್ತವೆ ಎಂದು ಈ ಮೊದಲು ನಂಬಲಾಗಿತ್ತು. ಬಳಿಕ ನಡೆದ ಹೆಚ್ಚಿನ ಅರಕೆಗಳಲ್ಲಿ ಜೇನುಹುಳದ ಕುಣಿತವು ಬೆಳಕಿಗೆ ಬಂದಿತು. ಜರ‍್ಮನಿಯ ಅರಕೆಗಾರ ಕಾರ‍್ಲ್ ವೊನ್ ಪ್ರಿಸ್ಕ್ ಅರಕೆಯನ್ನು ನಡೆಸಿ, ಜೇನುಹುಳದ ಕುಣಿತವನ್ನು ಪರಿಚಯಿಸಿದರು, ಅದಕ್ಕಾಗಿ ಅವರು ನೊಬೆಲ್ ಪ್ರಶಸ್ತಿಯನ್ನು ಕೂಡ ಪಡೆದರು.

ಏನಿದು ಜೇನುಹುಳದ ಕುಣಿತ?
ಮೇವನ್ನು ಅರಸಿ ಗೂಡಿನಿಂದ ಹೊರಹೋದ ಬೇಹುಗಾರ ಹುಳಗಳು ಗೂಡಿನ ಯಾವುದೋ ದಿಕ್ಕಿನಲ್ಲಿರುವ, ಎಶ್ಟೋ ದೂರದಲ್ಲಿರುವ ಹೂಗಳ ರಾಶಿಯನ್ನು ಹುಡುಕುತ್ತವೆ. ಆ ಹೂವಿನಿಂದ ಸಾಕಶ್ಟು ಜೇನನ್ನು ಹೀರಿ, ಹೂವಿನ ಬಂಡನ್ನು ಕೂಡ ತೆಗೆದುಕೊಂಡು ಜೇನುಗೂಡಿಗೆ ಮರಳುತ್ತವೆ. ಜೇನುಗೂಡಿನಲ್ಲಿರುವ ಉಳಿದ ದುಡಿಮೆಗಾರ ಹುಳಗಳಿಗೆ ತಾನು ಕಂಡ ಮೇವಿನ ಜಾಗವನ್ನು ತಿಳಿಸಲು ಅದು ಗೂಡಿನ ಪಕ್ಕದಲ್ಲಿ ಕುಣಿತವನ್ನು ಮಾಡುತ್ತದೆ. ಈ ಕುಣಿತವು ಮೇವು ಸಿಗುವ ದೂರ ಮತ್ತು ದಿಕ್ಕನ್ನು ತಿಳಿಸುತ್ತದೆ! ಅದು ಹೇಗೆ ಎಂದು ಈಗ ನೋಡೋಣ.

ಮೇವು ಸಿಗುವ ದೂರ:
ಮೇವು ಜೇನುಗೂಡಿನಿಂದ 50 ಮೀಟರ್ ಗಿಂತ ಕಡಿಮೆ ದೂರದಲ್ಲಿದ್ದರೆ, ಬೇಹುಗಾರ ಹುಳವು ‘ಸುತ್ತು ಕುಣಿತ’ವನ್ನು (round dance) ಹಾಕುತ್ತದೆ. (ಕೆಳಗಿನ ಚಿತ್ರ ವನ್ನು ನೋಡಿ). ಹುಳವು ಒಂದು ಬಾರಿ ಇಲ್ಲವೇ ಗೂಡಿನ ಸುತ್ತಲೂ ಹಲವು ಬಾರಿ ಸುತ್ತು ಕುಣಿತವನ್ನು ಹಾಕಿ, ಮೇವಿನ ಜಾಗದ ಬಗ್ಗೆ ಮಾಹಿತಿಯನ್ನು ನೀಡುವುದು. ಸುತ್ತು ಕುಣಿತವನ್ನು ಹಾಕಿದ ಮೇಲೆ, ತಾನು ಹೊತ್ತು ತಂದ ಹೂವಿನ ಬಂಡು ಮತ್ತು ಜೇನನ್ನು ಗೂಡಿನಲ್ಲಿರುವ ಮತ್ತೊಂದು ಜೇನಿಗೆ ಸಾಗಿಸಿ, ಮತ್ತೊಂದು ಕಡೆ ಮೇವನ್ನು ಹುಡುಕಲು ಹೋಗುತ್ತದೆ. ಸುತ್ತು ಕುಣಿತವು ಕೇವಲ ದೂರವನ್ನು ತಿಳಿಸುತ್ತದೆ, ಗೂಡಿನಿಂದ ಕೇವಲ 50 ಮೀ ದೂರದಲ್ಲಿ ಇರುವುದರಿಂದ ದಿಕ್ಕನ್ನು ತಿಳಿಸುವ ಅವಶ್ಯಕತೆ ಇಲ್ಲ. ಸುತ್ತು ಕುಣಿತವನ್ನು ನೋಡಿದ ಉಳಿದ ದುಡಿಮೆಗಾರ ಹುಳಗಳು, ಹತ್ತಿರದಲ್ಲೇ ಹೂವು ಇದೆ ಎಂದು ಅರಿತು, ಹೂವಿನ ಕಂಪಿನ ಜಾಡನ್ನು ಹಿಡಿದು ಮೇವನ್ನು ತರಲು ಹೋರಡುತ್ತವೆ.

Sutt_kudu_kunitha

ಒಂದು ವೇಳೆ ಮೇವು ಸಿಗುವ ಜಾಗವು 50 ರಿಂದ 150 ಮೀಟರ್ ದೂರದಲ್ಲಿ ಇದ್ದರೆ ಆಗ ಬೇಹುಗಾರ ಹುಳವು ‘ಕುಡುಗೋಲು ಕುಣಿತ‘ವನ್ನು(sickle dance) ಹಾಕುತ್ತದೆ. ಹೆಸರೇ ಹೇಳುವಂತೆ ಕುಡುಗೋಲಿನ ಆಕಾರದಲ್ಲಿ ಹುಳವು ಓಡಾಡಿ ಮೇವಿನ ಜಾಗದ ಬಗ್ಗೆ ತಿಳಿಸುತ್ತದೆ. ಕುಡುಗೋಲು ಕುಣಿತವು ಕೂಡ ಕೇವಲ ದೂರವನ್ನು ತಿಳಿಸುತ್ತದೆಯೇ ಹೊರತು ದಿಕ್ಕನ್ನಲ್ಲ.

ಇನ್ನು 150 ಮೀ. ಗಿಂತ ದೂರದಲ್ಲಿರುವ ಮೇವಿನ ಮಾಹಿತಿಯನ್ನು ತಿಳಿಸಲು ಬೇಹುಗಾರ ಹುಳವು ‘ಓಲಾಟದ ಕುಣಿತ‘ವನ್ನು (waggle dance) ಮಾಡುತ್ತದೆ. ಈ ಓಲಾಟದ ಕುಣಿತವು ದೂರ ಮತ್ತು ದಿಕ್ಕು ಎರಡನ್ನೂ ತಿಳಿಸುತ್ತದೆ. ಓಲಾಟದ ಕುಣಿತಕ್ಕೆ ಚಿತ್ರ 2 ನ್ನು ನೋಡಿ. ಓಲಾಟದ ಕುಣಿತದಲ್ಲಿ ಬೇಹುಗಾರ ಹುಳವು ಒಂದಶ್ಟು ದೂರ ನೇರವಾಗಿ ಹಾರುತ್ತದೆ, ಬಳಿಕ ಬಲ/ಎಡಕ್ಕೆ ಅರೆಸುತ್ತನ್ನು ಹಾಕಿ ಹಾರಾಟವನ್ನು ಶುರುಮಾಡಿದ ಜಾಗಕ್ಕೆ ಬಂದು ತಲುಪುತ್ತದೆ, ಮತ್ತೆ ಮೊದಲು ಓಡಿದ ನೇರದಾರಿಯಲ್ಲೇ ಹಾರಿ, ತಿರುಗಿ ಎಡ/ಬಲಕ್ಕೆ ಅರೆಸುತ್ತನ್ನು ಹಾಕಿ ಹಾರಾಟವನ್ನು ಶುರುಮಾಡಿದ ಜಾಗಕ್ಕೆ ಬರುತ್ತದೆ. ಈ ಕುಣಿತದಲ್ಲಿ ಹುಳವು ನೇರದಾರಿಯಲ್ಲಿ ಹಾರುವಾಗ ತನ್ನ ಹೊಟ್ಟೆಯ ಬಾಗವನ್ನು ಅಲ್ಲಾಡಿಸಿಕೊಂಡು ಇಲ್ಲವೇ ಓಲಾಡಿಸಿಕೊಂಡು ಹಾರುತ್ತದೆ, ಇದು ಬಾಲವನ್ನು ಅಲ್ಲಾಡಿಸಿದಂತೆ ಕಾಣಿಸುತ್ತದೆ. ಆದ್ದರಿಂದ ಇದನ್ನು ಓಲಾಟದ ಕುಣಿತ ಎನ್ನುತ್ತಾರೆ. ಅಲ್ಲದೇ ನೇರದಾರಿಯಲ್ಲಿ ಹಾರುವಾಗ ‘ಜುಂಯ್’ ಎಂಬ ಸದ್ದನ್ನು ಕೂಡ ಮಾಡಿ ಹಾರುತ್ತದೆ.Olata_kunithaಓಲಾಟದ ಕುಣಿತದಲ್ಲಿ ನೇರದಾರಿಯನ್ನು ಸಾಗಲು ಹುಳವು ಎಶ್ಟು ಹೊತ್ತು ತೆಗೆದುಕೊಳ್ಳುತ್ತದೆ ಎಂಬುದರ ಮೇಲೆ ಮೇವು ಸಿಗುವ ದೂರವನ್ನು ಲೆಕ್ಕಹಾಕಲಾಗುತ್ತದೆ. ನೇರದಾರಿಯಲ್ಲಿ ಕಡಿಮೆ ಹೊತ್ತು ಹಾರಿದರೆ ಮೇವಿನ ಜಾಗವು ಕಡಿಮೆ ದೂರವೆಂದು, ಹೆಚ್ಚು ಹೊತ್ತು ಹಾರಿದರೆ ಹೆಚ್ಚು ದೂರವೆಂದು ತಿಳಿಯಲಾಗುತ್ತದೆ. ಎತ್ತುಗೆಗೆ, ನೇರದಾರಿಯಲ್ಲಿ 2 ಸೆಕೆಂಡ್ ಹಾರಿದರೆ ಮೇವಿನ ದೂರ 2000 ಮೀ. ಇದೆ ಎಂದು, 4 ಸೆಕೆಂಡ್ ಹಾರಿದರೆ ಸುಮಾರು 4400 ಮೀ. ದೂರದಲ್ಲಿ ಮೇವು ಇದೆ ಎಂದು ಅಂದಾಜಿಸಲಾಗುತ್ತದೆ. ಇದಲ್ಲದೇ, ನೇರದಾರಿಯಲ್ಲಿ ಹಾರುವಾಗ ಮಾಡುವ ಓಲಾಟದ ಉರುಬು (tempo) ಮತ್ತು ಎಶ್ಟು ಹೊತ್ತು ‘ಜಂಯ್’ ಎಂದು ಮಾಡುವ ಸದ್ದು ಮಾಡುವುದು ಎಂಬುದನ್ನು ಕೂಡ ಲೆಕ್ಕಕ್ಕೆ ತೆಗೆದುಕೊಂಡು, ಮೇವು ಇರುವ ದೂರವನ್ನು ದುಡಿಮೆಗಾರ ಹುಳಗಳು ಕಂಡುಕೊಳ್ಳುತ್ತವೆ.

ಹೀಗೆ ಮೇವಿನ ದೂರವನ್ನು ಓಲಾಟದ ಕುಣಿತದಲ್ಲಿ ಲೆಕ್ಕಹಾಕಲಾಗುತ್ತದೆ. ಮೇವಿನ ದೂರ ಮತ್ತು ನೇರದಾರಿಯಲ್ಲಿ ಹಾರುವ ಹೊತ್ತಿನ ನಡುವೆ ಇರುವ ನಂಟನ್ನು ಈ ಕೆಳಗಿನ ಮಾರ‍್ಪಾಡು ತಿಟ್ಟದಲ್ಲಿ ಕಾಣಬಹುದು.Distance_graphಮೇವು ಇರುವ ದಿಕ್ಕು ಮತ್ತು ಓಲಾಟದ ಕುಣಿತ:

ಓಲಾಟದ ಕುಣಿತದಲ್ಲಿ ಮೇವು ಇರುವ ದಿಕ್ಕು ಕಂಡುಹಿಡಿಯುವುದನ್ನು ನೋಡಿದರೆ, ಜೇನುಹುಳಗಳು ಲೆಕ್ಕದಲ್ಲಿ ಎತ್ತಿದ ಕೈ ಎನ್ನಬಹುದು. ಓಲಾಟದ ಕುಣಿತದ ನೇರದಾರಿಯಲ್ಲಿ ಜೇನುಹುಳವು ಯಾವ ದಿಕ್ಕಿನಲ್ಲಿ ಹಾರುತ್ತದೆ, ಜೇನುಗೂಡಿಗೆ ಯಾವ ಕೋನದಲ್ಲಿ ಹಾರುತ್ತಿದೆ ಮತ್ತು ನೇಸರನು ಯಾವ ದಿಕ್ಕಿನಲ್ಲಿ ಇದ್ದಾನೆ ಎಂಬುದರ ಮೇಲೆ ದಿಕ್ಕನ್ನು ಕಂಡುಕೊಳ್ಳಲಾಗುತ್ತದೆ. ಇದನ್ನು ಸುಳುವಾಗಿ ತಿಳಿಸಲು ಈ ಕೆಳಗಿನ ತಿಟ್ಟವನ್ನು ನೋಡಿ.Dikku_Mevu– ಮೇವು ಸಿಗುವ ಜಾಗವು ನೇಸರನು ಇರುವ ದಿಕ್ಕಿನ ಕಡೆ ಇದ್ದರೆ, ಕುಣಿತದ ನೇರದಾರಿಯು ಗೂಡಿಗೆ ಒಂದೇ ತೆರಪಿನಲ್ಲಿ (parallel) ಇರುತ್ತದೆ (ಅಂದರೆ 0 ಡಿಗ್ರಿ ಕೋನ) ಮತ್ತು ನೇರದಾರಿಯ ದಿಕ್ಕು ಗೂಡಿನ ಮೇಲ್ಮುಕವಾಗಿ ಇರುತ್ತದೆ.

– ಮೇವು ಸಿಗುವ ಜಾಗವು ನೇಸರನ ಎದುರು ದಿಕ್ಕಿನಲ್ಲಿ ಇದ್ದರೆ, ಕುಣಿತದ ನೇರದಾರಿಯು ಗೂಡಿಗೆ ಒಂದೇ ತೆರಪಿನಲ್ಲಿ ಇರುತ್ತದೆ ಆದರೆ ಹಾರಾಟದ ದಿಕ್ಕು ಗೂಡಿನ ಕೆಳಮುಕವಾಗಿ ಇರುತ್ತದೆ.

– ಒಂದು ವೇಳೆ ಮೇವು ಸಿಗುವ ಜಾಗವು ನೇಸರನಿಂದ ಬಲಕ್ಕೆ ಸುಮಾರು 30 ಡಿಗ್ರಿ ಕೋನದಲ್ಲಿ ಇದ್ದರೆ. ಕುಣಿತದ ನೇರದಾರಿಯ ಕೋನವು ಗೂಡಿನಿಂದ 30 ಡಿಗ್ರಿ ಬಲಕ್ಕೆ ಬಾಗಿರುತ್ತದೆ.

– ಹಾಗೆಯೇ ಮೇವು ನೇಸರನಿಂದ ಎಡಕ್ಕೆ 90 ಡಿಗ್ರಿಯಲ್ಲಿ ಇದ್ದರೆ ಕುಣಿತದ ನೇರದಾರಿಯ ಕೋನವು ಗೂಡಿಗೆ 90 ಡಿಗ್ರಿಯಲ್ಲಿ ಬಲಕ್ಕೆ ಬಾಗಿರುತ್ತದೆ.

ಈ ಓಲಾಟದ ಕುಣಿತವು ನೇಸರನ ಜಾಗದ ಮೇಲೆ ಹೆಚ್ಚು ನೆಚ್ಚಿಕೊಂಡಿರುತ್ತದೆ. ಎತ್ತುಗೆಗೆ, ಬೇಹುಗಾರ ಹುಳವು ಮೂಡಣ ದಿಕ್ಕಿನಲ್ಲಿರುವ ಮೇವಿನ ಬಗ್ಗೆ ಉಳಿದ ಹುಳಗಳಿಗೆ ತಿಳಿಸಬೇಕಿದೆ ಎಂದಿಟ್ಟುಕೊಳ್ಳೋಣ. ಒಂದು ವೇಳೆ ಬೆಳಗಿನ ಹೊತ್ತು ಆ ದಿಕ್ಕನ್ನು ತಿಳಿಸಬೇಕೆಂದರೆ ಬೇಹುಗಾರ ಹುಳವು ತನ್ನ ಕುಣಿತದ ನೇರದಾರಿಯಲ್ಲಿ ಮೇಲ್ಮುಕವಾಗಿ ಸಾಗಬೇಕು, ಏಕೆಂದರೆ ನೇಸರ ಮತ್ತು ಮೇವು ಒಂದೇ ದಿಕ್ಕಿನಲ್ಲಿವೆ. ಅದೇ ಮೂಡಣ ದಿಕ್ಕಿನಲ್ಲಿರುವ ಮೇವಿನ ಬಗ್ಗೆ ಸಂಜೆಯ ಹೊತ್ತು ತಿಳಿಸಬೇಕೆಂದರೆ ಹುಳವು ಕುಣಿತದ ನೇರದಾರಿಯಲ್ಲಿ ಕೆಳಮುಕವಾಗಿ ಸಾಗಬೇಕು. ಏಕೆಂದರೆ ನೇಸರನು ಈಗ ಪಡುವಣ ದಿಕ್ಕಿನಲ್ಲಿ ಇದ್ದಾನೆ ಮತ್ತು ಮೇವು ನೇಸರನ ಎದುರು ದಿಕ್ಕಿನಲ್ಲಿದೆ.

ನೇಲದ ಬೇರೆ ಬೇರೆ ಜಾಗಗಳಲ್ಲಿ ಇರುವ ಜೇನುಹುಳಗಳು ತನ್ನ ಮೇವು ಇರುವ ದಿಕ್ಕು ಮತ್ತು ದೂರವನ್ನು ಓಲಾಟದ ಕುಣಿತದ ಮೂಲಕ ಹೇಗೆ ತೋರಿಸಬಹುದು ಎಂಬುದನ್ನು ಹೆಚ್ಚು ತಿಳಿಯಲು ಈ ಕೊಂಡಿಯನ್ನು ನೋಡಿ – ಓಲಾಟದ ಕುಣಿತದ ದಿಕ್ಕು ಮತ್ತು ದೂರ.

ಇದು ಬೇಹುಗಾರ ಹುಳಗಳು ತಮ್ಮದೇ ಆದ ಕುಣಿತದ ಮೂಲಕ ಗೂಡಿನ ಉಳಿದ ಹುಳಗಳಿಗೆ ಮೇವು ಸಿಗುವ ದೂರ ಮತ್ತು ದಿಕ್ಕನ್ನು ತಿಳಿಸುವ ಬಗೆ. ಈ ಕುಣಿತವಶ್ಟೇ ಅಲ್ಲದೆ ಬೇಹುಗಾರ ಹುಳಗಳು ಹೊತ್ತು ತರುವ ಹೂವಿನ ಬಂಡು ಮತ್ತು ಜೇನಿನ ನರುಗಂಪಿನ ನೆರವನ್ನು ಪಡೆದುಕೊಂಡು, ದುಡಿಮೆಗಾರ ಹುಳಗಳು ಹೂವು ಸಿಗುವ ಜಾಗವನ್ನು ಕಂಡುಹಿಡಿಯುತ್ತವೆ. ಬಳಿಕ ಗೂಡಿಗೆ ಬೇಕಾದ ಜೇನನ್ನು ಹೊತ್ತು ತಂದು ಕೂಡಿಕೊಳ್ಳುತ್ತವೆ.

ಹೆಚ್ಚಿನ ಮಾಹಿತಿಗಾಗಿ ಯೂಟ್ಯೂಬಿನಲ್ಲಿರುವ ಕೆಲವು ಓಡುತಿಟ್ಟಗಳು:

(ಮಾಹಿತಿ ಮತ್ತು ಚಿತ್ರ ಸೆಲೆ: cals.ncsu, users.rcn.com, westmtnapairy, pinterest.com)

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. 09/03/2015

    […] ಆ ಹುಳಗಳು ಹೊಸ ಜಾಗದ ಮಾಹಿತಿಯನ್ನು ‘ಜೇನುಹುಳದ ಕುಣಿತ‘ದ ಮೂಲಕ ಇತರೆ ಬೇಹುಗಾರ ಹುಳಗಳಿಗೆ […]

  2. 30/03/2015

    […] ಗೂಡಿನಲ್ಲಿ ಉಳಿದ ಜೇನುಹುಳಗಳಿಗೆ ‘ಜೇನುಹುಳದ ಕುಣಿತ‘ದ ಮೂಲಕ ಮೇವು ಸಿಗುವ ಜಾಗವನ್ನು […]

  3. 27/04/2015

    […] ಮತ್ತು ಇತರೆ ಮೈಬಾಗಗಳನ್ನು ಬಳಸುತ್ತವೆ. ಜೇನುಹುಳದ ಕುಣಿತವು ಹುಳಗಳ ಒಂದು ಬಗೆಯ ಮಾತುಕತೆಯಾದರೆ ಈ […]

ಅನಿಸಿಕೆ ಬರೆಯಿರಿ: