ಬಾರತ ಜನನಿಯ ತನುಜಾತೆ: ಕೆಲವು ಅನಿಸಿಕೆಗಳು

ಕಿರಣ್ ಬಾಟ್ನಿ.31-kannada-flag600ಕನ್ನಡದ ಹಿರಿಗಬ್ಬಿಗರಲ್ಲಿ ಒಬ್ಬರಾದ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರ “ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ‍್ನಾಟಕ ಮಾತೆ” ಎಂಬ ಹಾಡನ್ನು ನಾಡಗೀತೆಯೆಂದು ಕರೆಯಲಾಗುವುದು ಎಲ್ಲರಿಗೂ ಗೊತ್ತಿರುವ ಮಾತೇ. ಆದರೆ ಕುವೆಂಪುರವರು ಈ ಮಾತನ್ನು ಯಾವ ಹುರುಳಿನಲ್ಲಿ ಹೇಳಿದರು? ಕರ‍್ನಾಟಕ ಮತ್ತು ಬಾರತಗಳನ್ನು ಇಬ್ಬರು ತಾಯಂದಿರಾಗಿ ಕಲ್ಪಿಸಿಕೊಂಡು, ಅದರಲ್ಲಿ ಒಬ್ಬಾಕೆಯನ್ನು ಇನ್ನೊಬ್ಬಾಕೆಯ ಮಗಳಾಗಿ ಕವಿ ಕಂಡಿರುವುದಕ್ಕೂ ರಾಜಕೀಯಕ್ಕೂ ನಂಟಿದೆಯೇ? ರಾಜಕೀಯದ ನೆಲೆಯಲ್ಲಿ ನಿಂತು ಕುವೆಂಪುರವರು ಕರ‍್ನಾಟಕ ಮಾತೆಯನ್ನು ಬಾರತಮಾತೆಯ ಮಗಳಾಗಿ ಕಂಡಿದ್ದಾರೆಯೇ?

ಈ ಹಾಡಿನಲ್ಲಿ ಕುವೆಂಪುರವರು ಈ ಐದನ್ನು ಕೊಂಡಾಡುತ್ತಾರೆ: (1) ಕರ‍್ನಾಟಕದ ಅಂದ-ಚಂದ, (2) ಕನ್ನಡ ರಾಜಮನೆತನಗಳು, (3) ಕನ್ನಡದ ಕವಿಗಳು, ಸಂತರು, ಮತ್ತು ಶಿಲ್ಪಿಗಳು, ಮತ್ತು (4) ಬಡಗಣದಿಂದ ಬಾರತದಲ್ಲೆಲ್ಲ ಹರಡಿದ ದರ‍್ಮ, ನಡೆನುಡಿ ಮತ್ತು ಅವುಗಳನ್ನು ಪ್ರತಿನಿದಿಸುವವರು, ಮತ್ತು (5) ಎಲ್ಲ ದರ‍್ಮಗಳ ಸಹಬಾಳ್ವೆ. ಈ ಐದರಲ್ಲಿ ಎರಡನೆಯದಕ್ಕೆ ರಾಜಕೀಯದ ನಂಟಿರುವುದೇನೋ ನಿಜ. ಆದರೆ ಬರೇ ’ತೈಲಪ’ ಮತ್ತು ’ಹೊಯ್ಸಳ’ ಎಂಬ ಎರಡು ಪದಗಳಲ್ಲಿ ಮಾತು ಮುಗಿಸಿರುವುದರಿಂದ ರಾಜಕೀಯಕ್ಕೆ ಒಟ್ಟಾರೆಯಾಗಿ ಬಲುದೊಡ್ಡ ಮಣೆಯನ್ನೇನು ಕುವೆಂಪುರವರು ಹಾಕಿಲ್ಲವೆನ್ನಬಹುದು. ಇದರ ಹೋಲಿಕೆಯಲ್ಲಿ ಕರ‍್ನಾಟಕದ ಹೊರಗಿನ ಮತ್ತು ದರ‍್ಮ-ನಡೆನುಡಿಗಂಟಿದ ಹೆಸರುಗಳೇ ಹದಿನಾಲ್ಕಿವೆ (ರಾಗವ, ಮದುಸೂದನ, ಕಪಿಲ, ಪತಂಜಲ, ಗೌತಮ, ಜಿನನುತ, ಶಂಕರ, ರಾಮಾನುಜ, ನಾನಕ, ರಾಮಾನಂದ, ಕಬೀರ, ಚೈತನ್ಯ, ಪರಮಹಂಸ, ವಿವೇಕಾನಂದ) ಎಂದು ಮನಗಂಡಾಗ ಇದು ಇನ್ನೂ ಗಟ್ಟಿಯಾಗುತ್ತದೆ.

ಕುವೆಂಪುರವರಿಗೆ ರಾಮಕ್ರಿಶ್ಣರು ಮತ್ತು ವಿವೇಕಾನಂದರ ಬಗ್ಗೆ ಬಹಳ ಗೌರವವಿತ್ತು. ಇವರೀರ‍್ವರ ದರ‍್ಮದ ವಿಶಯದಲ್ಲಿ ಕರ‍್ನಾಟಕವು ಬಾರತದ ಮಗಳ ಸ್ತಾನದಲ್ಲಿರುವುದು ನಿಜವೇ. ವೈದಿಕ, ಜೈನ, ಮತ್ತು ಬೌದ್ದ – ಇವುಗಳಲ್ಲಿ ಯಾವ ದರ‍್ಮವೂ ಕರ‍್ನಾಟಕದಲ್ಲಿ ಹುಟ್ಟಿದ್ದಲ್ಲ; ಬಡಗಣದಿಂದ ಬಂದಿದ್ದು. ಈ ನಿಟ್ಟಿನಲ್ಲಿ ಕರ‍್ನಾಟಕಮಾತೆ ಕುವೆಂಪುರವರಿಗೆ ಬಾರತಮಾತೆಯ ಮಗಳೆಂದು ಕಂಡಿತವಾಗಿಯೂ ಅನ್ನಿಸಿರಲು ಸಾಕು. ಅವರು ಹೆಚ್ಚು ಗಮನವನ್ನೇ ಹರಿಸದ ರಾಜಕೀಯದ ವಿಶಯದಲ್ಲಿ ತೈಲಪ-ಹೊಯ್ಸಳರನ್ನು ಬಾರತದ ಇಂತಹ ಅರಸರ ತನುಜಾತರೆಂದೇನು, ಇಲ್ಲವೇ ಸಾಮಂತರೆಂದೇನು, ಅವರು ಹೇಳಿಲ್ಲ; ಇಂದಿನ ಕರ‍್ನಾಟಕ ಸರ‍್ಕಾರ ಬಾರತ ಸರ‍್ಕಾರಕ್ಕೆ ಸಲೀಟು ಹೊಡೆದುಕೊಂಡಿರಬೇಕೆಂದು ಸೂಚಿಸುವಂತೆಯೂ ಅವರು ಹೇಳಿಲ್ಲ. ಆದರೂ ರಾಜಕೀಯದ ನೆರಳು ಈ ಪದ್ಯದ ಮೇಲೆ ಬೀಳದೆ ಇಲ್ಲವೆನ್ನಬಹುದು. ಇಲ್ಲದಿದ್ದರೆ ಬಾರತದ ಮಾತೇಕೆ ಬರುತ್ತಿತ್ತು?

ಕುವೆಂಪುರವರಿಗಿಂತ ಸಾವಿರಕ್ಕೂ ಹೆಚ್ಚು ವರುಶಗಳ ಹಿಂದೆಯೇ ಕನ್ನಡನಾಡನ್ನು ಬಾರತದ ಇಲ್ಲವೇ ಮತ್ತೊಂದು ಸಾಮ್ರಾಜ್ಯದ ಅಡಿಯಲ್ಲಿಡದೆ ತನ್ನ ಕಾಲಮೇಲೆ ತಾನು ನಿಂತ ನಾಡಾಗಿ ಬಣ್ಣಿಸಿರುವ ಎತ್ತುಗೆಯೊಂದು ಬಹಳ ಹೆಸರುವಾಸಿಯಾಗಿದೆ. ಅದೇ ಒಂಬತ್ತನೆಯ ಶತಮಾನದ ಕವಿರಾಜಮಾರ‍್ಗದಲ್ಲಿ ರಾಶ್ಟ್ರಕೂಟರ ಅಗ್ಗಳಿಕೆಯನ್ನು ನೆಲೆನಿಲ್ಲಿಸಲು ಹೊರಟ ಶ್ರೀವಿಜಯನು ಕನ್ನಡನಾಡನ್ನು “ವಸುಧಾ ವಲಯ ವಿಲೀನ ವಿಶದ ವಿಷಯ ವಿಶೇಷಂ” ಎಂದು ಬಣ್ಣಿಸಿರುವುದು. ಇದರಲ್ಲಿ ಕವಿ ಕಂಡ ಕನ್ನಡನಾಡು ನೇರವಾಗಿ ಬೂಮಿಯೊಳಗೊಂದು ನಾಡು; ಎರಡರ ನಡುವೆ ಬಾರತವಾಗಲಿ ಮಣ್ಣಾಗಲಿ ಮಸಿಯಾಗಲಿ ಬಂದಿಲ್ಲವೆಂಬುದು ಗಮನಿಸತಕ್ಕದ್ದು.

ಇದಕ್ಕೆದುರಾಗಿ ಕುವೆಂಪುರವರ ಪದ್ಯದಲ್ಲಿ ಬೂಮಿಗೆ ಜಾಗವಿಲ್ಲ; ಪ್ರಾಕ್ರುತಿಕ ಸೌಂದರ‍್ಯವಿದೆ, ಆದರೆ ಕರ‍್ನಾಟಕದ ನಂಟು ನೇರವಾಗಿ ಬೂಮಿಯೊಡನೆಯಾಗಿರದೆ ತಾಯಿಯೊಬ್ಬಳೊಡನೆ. ಅವಳೇ ಬಾರತ ಜನನಿ. ತಮ್ಮ ಕಾಲದ ರಾಜಕೀಯದ ನೆರಳಿನಲ್ಲಿ ನಿಂತು ಕುವೆಂಪುರವರು ಶ್ರೀವಿಜಯನ ಮಾತನ್ನು ಮೀರಿ ಕನ್ನಡನಾಡನ್ನು ಬೂಮಿಯಲ್ಲಲ್ಲದೆ ಬಾರತದಲ್ಲಿ ’ವಿಲೀನ’ಗೊಳಿಸಿರುವುದು ಕಟುಸತ್ಯ. ಶ್ರೀವಿಜಯನಿಗೆ ಕನ್ನಡತಾಯಿ ಬೂಮಿಯ ತನುಜಾತೆಯಾದರೆ ಕುವೆಂಪುರವರಿಗೆ ಬಾರತಮಾತೆಯ ತನುಜಾತೆಯಾಗಿ ಹೋಗಿರುವುದು ಸ್ಪಶ್ಟ. ಆದರೂ ಕುವೆಂಪುರವರು ರಾಜಕೀಯದ ನೆಲೆಯಲ್ಲಿ ನಿಂತು ಈ ಹಾಡನ್ನು ಬರೆದಿದ್ದಾರೆ ಎನ್ನುವುದು ತಪ್ಪಾದೀತು. ಅವರಿಗೆ ಬೇಡದೆ ಹೋದರೂ ಅವರ ಪದ್ಯಕ್ಕೆ ರಾಜಕೀಯದ ಅಂಟಿದೆ – ಈ ರೀತಿಯ ಅಂಟುಗಳನ್ನು ಮೀರುವವರು ಯಾರೂ ಇಲ್ಲ – ಆದರೆ ರಾಜಕೀಯವೇ ಅವರ ಪದ್ಯದ ನೆಲೆಯೆನ್ನುವುದು ದೊಡ್ಡ ತಪ್ಪಾದೀತು.

ತೊಂದರೆಯೇನೆಂದರೆ, ಕುವೆಂಪುರವರು ಯಾವ ಕಾರಣಕ್ಕೆ ಈ ಪದ್ಯವನ್ನು ಬರೆದರೋ ಆ ಕಾರಣಕ್ಕಾಗಿಯೇ ಅದನ್ನು ಇಂದು ಬಳಸಿಕೊಳ್ಳಲಾಗುತ್ತಿಲ್ಲ (ಪದ್ಯಗಳ ಪಾಡೇ ಇದು ಎನ್ನಬಹುದು). ಕನ್ನಡವು ಬಡಗಣದ ನುಡಿಗಳಾದ ಸಂಸ್ಕ್ರುತ ಮತ್ತು ಹಿಂದಿಗಳಿಗಿಂತ ಕೀಳೆಂಬ ಎಣಿಕೆಗೆ, ಕರ‍್ನಾಟಕವು ಬಾರತಕ್ಕಿಂತ ಕೆಳಮಟ್ಟದ್ದೆಂಬ ಅನಿಸಿಕೆಗೆ, ಕರ‍್ನಾಟಕ ಸರ‍್ಕಾರವು ಬಾರತ ಸರ‍್ಕಾರ ಹೇಳಿದಂತೆ ಕೇಳಿಕೊಂಡಿರಬೇಕೆಂಬ ಚಿಂತನೆಗೆ, ಇವೆಲ್ಲದರಿಂದ ಕನ್ನಡಿಗರು ಬಾರತದಲ್ಲಿ ಎರಡನೇ ದರ‍್ಜೆಯ ನಾಗರೀಕರಾಗಿ ಮುಂದುವರೆಯುವುದೇ ಸರಿಯೆಂಬ ಚಿಂತನೆಗೆ, ಇಂದು ಕುವೆಂಪುರವರ ಈ ಹಾಡನ್ನು ಬಳಸಿಕೊಳ್ಳಬಹುದಾಗಿದೆ. ಈ ಅನ್ಯಾಯಗಳ ಎದುರಾಗಿ ಕನ್ನಡಿಗರು ದನಿಯೆತ್ತಿದರೆ “ನೋಡಿ, ನಿಮ್ಮ ನಾಡಗೀತೆಯಲ್ಲೇ ನೀವು ತೆಪ್ಪಗಿರಬೇಕೆಂದಿದೆ” ಎನ್ನುವವರು ನಮ್ಮ ನಡುವೆಯೇ ಇದ್ದಾರೆ. ದರ‍್ಮದ ವಿಶಯದಲ್ಲಿ ತನುಜಾತೆಯೆಂದ ಮೇಲೆ ಎಲ್ಲ ವಿಶಯದಲ್ಲೂ ಕನ್ನಡತಾಯಿ ತನುಜಾತೆಯೆಂದು ತೀರ‍್ಮಾನಿಸುವುದು ಇಂತವರಿಗೆ ಬಹಳ ಸುಲಬವೇ ಇರಬೇಕು.

(ಚಿತ್ರ ಸೆಲೆ: kannada.oneindia)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Vinay KH says:

    seems you completely forgot the situation when the poem was written by kuvempu….its not only for praising Karnataka ,during freedom movement this was written in remembering greatness of Karnataka by associating with India during freedom struggle movement

  2. ಕುವೆಂಪುರವರ ಕೃತಿಗಳಿನ ಶಬ್ದಗಳನ್ನು ಬರೆಯುವಾಗ ಮಹಪ್ರಾಣಗಳನ್ನು ತೆಗೆದು ಬರೆಯುವ ಕಷ್ಟ ಪಟ್ಟಿದ್ದೀರಿ (ರಾಗವ, ಮದುಸೂದನ) ಅದರೆ ಕವಿರಾಜಮಾರ್ಗದೊಳಗಿನ ಶಬ್ದಗಳನ್ನು ಬರೆಯುವಾಗ ಈ ಕಷ್ಟಪಡದೆ ಇರುವುದಕ್ಕೆ (ವಸುಧಾ, ವಿಷಯ ವಿಶೇಷಂ) ವಿಶೇಷ ಕಾರಣವಿದೆಯೇ?

ಅನಿಸಿಕೆ ಬರೆಯಿರಿ: