ಕ್ರಿಕೆಟ್ ವಿಶ್ವಕಪ್: ಒಂದು ಕಿರುನೋಟ

– ಹರ‍್ಶಿತ್ ಮಂಜುನಾತ್.Cricket-World-Cup-2015 images

ಅಯ್.ಸಿ.ಸಿ ದಾಂಡಾಟ(ಕ್ರಿಕೆಟ್)ದ ವಿಶ್ವಕಪ್, ಜಗತ್ತಿನ ಹೆಸರಾಂತ ಒಂದು ದಿನದ ನಾಡುನಡು(International)ವಿನ ದಾಂಡಾಟದ ಕೂಟವಾಗಿದೆ. ಸುಮಾರು ನಾಲ್ಕು ವರುಶಗಳಿಗೊಮ್ಮೆ ನಡೆಯುವ ಈ ಕೂಟವನ್ನು ಅಯ್.ಸಿ.ಸಿ ತನ್ನ ಮುಂದಾಳ್ತನದಲ್ಲಿ ನಡೆಸಿಕೊಡುತ್ತದೆ. ದಾಂಡಾಟದ ಪಾಲಿಗೆ ವಿಶ್ವಕಪ್ ಎನ್ನುವುದು ಅತ್ಯಂತ ಹೆಚ್ಚುಗಾರಿಕೆಯ ಮತ್ತು ದಾಂಡಾಟದಲ್ಲಿಯೇ ಒಂದು ಮಯ್ಲಿಗಲ್ಲಿದ್ದಂತೆ. ಈ ಕಾರಣಕ್ಕೆ ಪೋಟಿಗಾರರು ವಿಶ್ವಕಪ್ ಕೂಟವನ್ನು ತುಂಬಾ ಎಚ್ಚರವಹಿಸಿ ಆಡುತ್ತಾರೆ. ಟೆಸ್ಟ್ ಆಡುವ ತಂಡಗಳು, ಒಂದು ದಿನದ ನಾಡುನಡುವಿನ ಮಟ್ಟದ ದಾಂಡಾಟದಲ್ಲಿ ಪಾಲ್ಗೊಳ್ಳುವ ತಂಡಗಳು ಮತ್ತು ವಿಶ್ವಕಪ್ ಅರ‍್ಹತೆಯ ಸುತ್ತಿನ ಪಯ್ಪೋಟಿಗಳಲ್ಲಿ ಅರ‍್ಹತೆ ಪಡೆದಿರುವ ತಂಡಗಳು ವಿಶ್ವಕಪ್‍ನಲ್ಲಿ ಪಯ್ಪೋಟಿ ನಡೆಸುತ್ತವೆ. ಇದು ವಿಶ್ವಕಪ್-2015 ನ ಹೊತ್ತು. ಈ ಬಾರಿಯ ವಿಶ್ವಕಪ್ ಕುರಿತು ಈಗಾಗಲೇ ಬಿಸಿ ಬಿಸಿಯಾಗಿ ಮಾತುಕತೆಗಳು ಮಂದಿಯ ನಡುವೆ ನಡೆಯುತ್ತಿದೆ. ಈ ಹೊತ್ತಿನಲ್ಲಿ ವಿಶ್ವಕಪ್ ಎಂಬ ದೊಡ್ಡಾಟ ಹುಟ್ಟಿ ಬೆಳೆದು ಬಂದ ದಾರಿಯೆಡೆಗೆ ಬೆಳಕು ಚೆಲ್ಲುವ ಪ್ರಯತ್ನವೇ ಈ ಬರಹ.

ಜಗತ್ತು ಪಯ್ಪೋಟಿಯನ್ನು ತನ್ನ ಪ್ರತಿದಿನದ ಮನರಂಜನೆಗಾಗಿ ಬಳಸಿಕೊಳ್ಳಲು ಶುರುವಿಟ್ಟಿದ್ದ ಹೊತ್ತಿನಲ್ಲಿ ಮಂದಿಯನ್ನು ಹೆಚ್ಚಾಗಿ ಸೆಳೆದದ್ದು ದಾಂಡಾಟ. ಈ ಆಟ ಮೊದಲು ಹುಟ್ಟಿದ್ದು ಇಂಗ್ಲೆಂಡ್ ನಾಡಲ್ಲೇ ಆದರೂ ಮುಂದೆ ಇಂಗ್ಲೆಂಡ್ ನ ಗಡಿ ದಾಟಿ ಬೇರೆ ನಾಡುಗಳತ್ತಲೂ ಮುಕ ಮಾಡಿತು. ಅದರಲ್ಲಿಯೂ ಅಮೇರಿಕಾ ನಾಡಿನ ಮಂದಿಯನ್ನು ದಾಂಡಾಟ ಬಹುವಾಗಿಯೇ ಸೆಳೆದಿತ್ತು. ಇದರಿಂದ ಇಂಗ್ಲೆಂಡ್ ನಾಡನ್ನು ಹೊರತುಪಡಿಸಿ ಬೇರೊಂದು ಸ್ವಂತಂತ್ರ ನಾಡಿನಲ್ಲಿಯೂ ದಾಂಡಾಟ ಗಟ್ಟಿಯಾಗಿ ಬೇರೂರತೊಡಗಿತ್ತು. ಆ ಹೊತ್ತಿನಲ್ಲಿ ದಾಂಡಾಟವನ್ನೇ ಹೋಲುವ ಬೇರೊಂದು ಆಟವನ್ನು ಅಮೇರಿಕನ್ನರು ಕಂಡುಕೊಂಡರು ಮತ್ತು ತಮ್ಮ ನಾಡಿನಲ್ಲಿ ಹುಟ್ಟಿದ ಆ ಆಟಕ್ಕೆ ಬಹುವಾಗಿ ಬೆಂಬಲಿಸಿದರು. ಆ ಮೂಲಕ ಅಮೇರಿಕನ್ನರ ಮನೆಮಾತಾದದ್ದೇ ’ಬೇಸ್‍ಬಾಲ್’ ಪಯ್ಪೋಟಿ.

ದಾಂಡಾಟದ ಟೆಸ್ಟ್ ಪಯ್ಪೋಟಿಯಿಂದ ಬೇಸತ್ತಿದ್ದ ಮಂದಿ ಹೊಸದೊಂದು ಬದಲಾವಣೆಗೆ ಹವಣಿಸತೊಡಗಿದ್ದರು. ಆಗ ತಾನೆ ಬೆಳೆಯುತ್ತಿದ್ದ ಬೇಸ್‍ಬಾಲ್ ಆಟ ಮಂದಿಯನ್ನು ದಾಂಡಾಟದಿಂದ ತನ್ನತ್ತ ಸೆಳೆಯತೊಡಗಿತು. ಒಂದು ಕಡೆ ‘ಬೇಸ್‍ಬಾಲ್’ ದೊಡ್ಡಾಟ ಎಂದು ಕರೆಸಿಕೊಳ್ಳುವ ಹೊತ್ತಿಗೆ ದಾಂಡಾಟದ ನಿಲುವು ಅಮೇರಿಕಾದಲ್ಲಿ ಅಲುಗಾಡ ತೊಡಗಿತ್ತು. ಆದರೂ ದಾಂಡಾಟವು ಅದಾಗಲೇ ಆಸ್ಟ್ರೇಲಿಯಾ, ಇಂಡಿಯಾ ನಾಡುಗಳಲ್ಲಿ ತನ್ನ ಬೇರನ್ನು ಗಟ್ಟಿಗೊಳಿಸಿಕೊಳ್ಳುತ್ತಿತ್ತು. ತನ್ನ ನಿಯಮಗಳಲ್ಲಿ ತುಸು ಬದಲಾವಣೆಗಳನ್ನು ಮಾಡಿಕೊಂಡು ಮಾರ‍್ಪಾಡಾಗ ತೊಡಗಿತ್ತು. ಆಗ ಹಟ್ಟಿದ್ದೇ ವಿಶ್ವಕಪ್ ಎಂಬ ದೊಡ್ಡಕೂಟ. ಇದು ಜಗತ್ತಿನಾದ್ಯಂತ ಬಾರಿ ಸದ್ದನ್ನು ಮಾಡಿದ್ದಲ್ಲದೇ, ದಾಂಡಾಟ ತನ್ನ ಹಳೆಯ ಹಿರಿಮೆಯನ್ನು ಮರಳಿ ಪಡೆದುಕೊಳ್ಳುವಲ್ಲಿ ದೊಡ್ಡ ಪಾಲು ಪಡೆದುಕೊಂಡಿತು.

ಮೊಟ್ಟಮೊದಲ ನಾಡುನಡುವಿನ ದಾಂಡಾಟದ ಪಯ್ಪೋಟಿಯು 1844 ರಲ್ಲಿ ನ್ಯೂಯಾರ‍್ಕ್, ಕೆನಡಾ ಮತ್ತು ಅಮೆರಿಕಾ ನಾಡುಗಳ ನಡುವೆ ನಡೆಯಿತು. 1877ರಿಂದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಾಡುಗಳ ನಡುವೆ ಬಹಳಶ್ಟು ಟೆಸ್ಟ್ ಪಯ್ಪೋಟಿಗಳು ಏರ‍್ಪಟ್ಟವು. ದಕ್ಶಿಣ ಆಪ್ರಿಕಾ, ಟೆಸ್ಟ್ ಪಯ್ಪೋಟಿ ನಡೆಸುವ ನಾಡುಗಳ ಪಟ್ಟಿಗೆ 1889ರಲ್ಲಿ ಸೇರಿಕೊಂಡಿತು. ಇದು ಹೆಚ್ಚಿನ ಟೆಸ್ಟ್ ಕೂಟಗಳು ನಡೆಯಲು ಕಾರಣವಾಯಿತು. 1900ರಲ್ಲಿ ನಡೆದ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂದಲ್ಲಿ ದಾಂಡಾಟವನ್ನೂ ಸೇರಿಸಿಕೊಳ್ಳಲಾಯಿತು. ಇದರ ಕೊನೆಯ ಹಂತದ ಪಯ್ಪೋಟಿಯಲ್ಲಿ ಗ್ರೇಟ್ ಬ್ರಿಟನ್ ತಂಡವು ಪ್ರಾನ್ಸ್ ತಂಡವನ್ನು ಸೋಲಿಸಿ ಚಿನ್ನದ ಪದಕ ಗೆದ್ದುಕೊಂಡಿತು. ದಾಂಡಾಟವು ಒಲಿಂಪಿಕ್ ಕೂಟದ ಅಂಗವಾಗಿದ್ದು ಇದೇ ಮೊದಲು ಹಾಗೂ ಕೊನೆಯ ಬಾರಿ. ಬಳಿಕ ದಾಂಡಾಟಕ್ಕೆ ಒಲಂಪಿಕ್‍ನಲ್ಲಿ ಅವಕಾಶವನ್ನು ಕೊಡಲಿಲ್ಲ.

ಒಲಂಪಿಕ್‍ನಲ್ಲಿ ಮೊದಲು ಪಾಲ್ಗೊಳ್ಳುವ ಮೂಲಕ ದಾಂಡಾಟವು ಲಾಬವೆತ್ತಿಕೊಂಡಿತು. ಒಲಂಪಿಕ್‍ನ ಗೆಲುವು ದಾಂಡಾಟದ ದೊಡ್ಡ ಮಟ್ಟದ ಕೂಟಗಳನ್ನು ನಡೆಸುವ ಕನಸುಗಳಿಗೆ ರೆಕ್ಕೆ ಮೂಡಿಸಿತು. ಈ ಕಾರಣಕ್ಕೆ 1912ರಲ್ಲಿ ನಾಡುನಡುವಿನ ಮಟ್ಟದಲ್ಲಿ ಮೊಟ್ಟಮೊದಲ ಮೂರು ತಂಡಗಳನ್ನೊಳಗೊಂಡ ತ್ರಿಕೋನ ಟೆಸ್ಟ್ ಕೂಟವನ್ನು ಏರ‍್ಪಡಿಸಲಾಯಿತು. ಆ ಹೊತ್ತಿನಲ್ಲಿ ಟೆಸ್ಟ್ ಕ್ರಿಕೆಟ್ ಆಡುತ್ತಿದ್ದ ಎಲ್ಲಾ ಮೂರೂ ತಂಡಗಳಾದ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಶಿಣ ಆಪ್ರಿಕಾ ತಂಡಗಳು ಪಾಲ್ಗೊಂಡವು. ಆದರೆ ನೋಡುಗರನ್ನು ಸೆಳೆಯುವಲ್ಲಿ ಈ ಕೂಟ ಸೋತಿತು. ಹಾಗಾಗಿ ಕೂಟವು ನಾಡುನಡುವಿನ ಮಟ್ಟದಲ್ಲಿ ಅಂತಹ ಹೆಸರು ಮಾಡಲಿಲ್ಲ. ಕೂಟದ ಈ ಸೋಲು ಹೆಚ್ಚು ತಂಡಗಳನ್ನು ಸೇರಿಸಿ ಕೂಟವೊಂದನ್ನು ಏರ‍್ಪಡಿಸುವುದರಿಂದ ದೂರವಿರುವಂತೆ ಮಾಡಿತು. ಆದರೆ ಈ ಹೊತ್ತಿನಲ್ಲಿ ಎರಡು ತಂಡಗಳ ನಡುವೆ ಸತತವಾಗಿ ಟೆಸ್ಟ್ ಪಯ್ಪೋಟಿಗಳು ನಡೆಯುತ್ತಾ ಹೋದವು. ಅಲ್ಲದೇ ಮುಂದೆ ಟೆಸ್ಟ್ ಆಡುವ ನಾಡುಗಳ ಎಣಿಕೆಯು ಹಂತ ಹಂತವಾಗಿ ಹೆಚ್ಚುತ್ತಾ ಹೋಯಿತು. 1928ರಲ್ಲಿ ವೆಸ್ಟ್ ಇಂಡೀಸ್, 1930ರಲ್ಲಿ ನ್ಯೂಜಿಲೆಂಡ್, 1932ರಲ್ಲಿ ಇಂಡಿಯಾ ಮತ್ತು 1952ರಲ್ಲಿ ಪಾಕಿಸ್ತಾನ ನಾಡುಗಳನ್ನು ಅಯ್.ಸಿ.ಸಿ ಟೆಸ್ಟ್ ಆಡುವ ನಾಡುಗಳ ಪಟ್ಟಿಗೆ ಸೇರಿಸಲಾಯಿತು. ಆದರೆ ದಾಂಡಾಟ ಇದರಿಂದ ಅಂತಹ ಮಾರ‍್ಪಾಡುಗಳನ್ನೇನೂ ಕಂಡುಕೊಳ್ಳಲಿಲ್ಲ. ಟೆಸ್ಟ್ ಪಯ್ಪೋಟಿಗಳು ಮೊದಲಿನಂತೆ ಮೂರು, ನಾಲ್ಕು ಅತವಾ ಅಯ್ದು ದಿನಗಳವರೆಗೆ ನಡೆಯುವ ಟೆಸ್ಟ್ ಪಯ್ಪೋಟಿಯಾಗಿಯೇ ಮುಂದುವರೆದವು.

ಸುಮಾರು 1960ರ ಹೊತ್ತಿನಲ್ಲಿ ಇಂಗ್ಲಿಶ್ ಕೌಂಟಿ ತಂಡಗಳು ಕೇವಲ ಒಂದು ದಿನದಲ್ಲಿ ನಡೆದು ಕೊನೆಗೊಳ್ಳುವಂತಹ ದಾಂಡಾಟದ ಪಯ್ಪೋಟಿಗಳಲ್ಲಿ ಆಡಿದವು. ಇದಕ್ಕೆ ಮಿಡ್ಲೆಂಡ್ಸ್ ನಾಕೌಟ್ ಕಪ್ ಎನ್ನಲಾಗುತ್ತಿತ್ತು. ಅಲ್ಲದೇ ಈ ಕೌಂಟಿ ಪಯ್ಪೋಟಿಗಳು ಇಂದಿಗೂ ನಡೆಯುತ್ತವೆ. ಇದು ಮುಂದೆ ಬೆಳೆದು 1963ರಲ್ಲಿ ಜಿಲೆಟ್ ಕಪ್ ಕೂಟದೊಂದಿಗೆ ಒಂದು ದಿನದ ದಾಂಡಾಟದ ಕೂಟಗಳು ಮೊದಲ್ಗೊಂಡವು. ಆ ಮೂಲಕ ದಾಂಡಾಟದ ಹುಟ್ಟಿಗೆ ಕಾರಣವಾದ ಇಂಗ್ಲೆಂಡ್ ನಾಡು, ಒಂದು ದಿನದ ದಾಂಡಾಟವನ್ನು ಕಂಡು ಹಿಡಿಯುವ ಮೂಲಕ ಜಗತ್ತಿನಾದ್ಯಂತ ಸದ್ದು ಮಾಡಿತ್ತು. ಅದಾಗಲೇ ಬೇಸ್‍ಬಾಲ್ ಗೆ ಮಾರು ಹೋಗುತ್ತಿದ್ದ ಪಡುವಣದ ಮಂದಿಯ ನಡುವೆ ದಾಂಡಾಟವು ಮತ್ತೆ ಎದ್ದು ನಿಂತಂತೆ ಕಂಡಿತು. ಅದಕ್ಕೆ ಸರಿಯಾಗಿ ಮಂದಿಯೂ ದಾಂಡಾಟದೆಡೆಗೆ ತುಸು ಆಸಕ್ತಿ ವಹಿಸತೊಡಗಿದರು. ಒಂದು ದಿನದಾಟದ ಕೂಟವು ಹೆಸರುವಾಸಿಯಾಗುತ್ತಾ ಹೋಯಿತು.

ಮೊಟ್ಟಮೊದಲ ಒಂದು ದಿನದಾಟದ ಪಯ್ಪೋಟಿಯು 1971ರಲ್ಲಿ ನಡೆಯಿತು. ಆ ವರುಶ ಮೆಲ್ಬೋರ‍್ನ್ ನಲ್ಲಿ ನಡೆಯಬೇಕಿದ್ದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳ ನಡುವಣ ಟೆಸ್ಟ್ ಮಳೆಯಿಂದಾಗಿ ರದ್ದಾಗಿತ್ತು. ಆದರೆ ನೋಡುಗರಿಗೆ ನಶ್ಟವಾಗಬಾರದೆಂಬ ನಿಟ್ಟಿನಲ್ಲಿ ಅದೇ ಟೆಸ್ಟ್ ನ ಅಯ್ದನೇ ದಿನ ಒಂದು ದಿನದಾಟದ ಪಯ್ಪೋಟಿಯನ್ನು ನಡೆಸಲಾಯಿತು. ಕೇವಲ ನಲವತ್ತು ಎಸೆತಗಟ್ಟು(Overs)ಗಳಿಗೆ ಸೀಮಿತವಾಗಿದ್ದ ಆ ಪಯ್ಪೋಟಿಯಲ್ಲಿ, ಒಂದು ಎಸೆತಗಟ್ಟಿಗೆ ಎಂಟು ಎಸೆತಗಳಿದ್ದವು. ಟೆಸ್ಟ್ ಗಿಂತಲೂ ಒಂದು ದಿನದಾಟದ ಪಯ್ಪೋಟಿಯಲ್ಲಿ ಮಂದಿಗೆ ಹೆಚ್ಚಿನ ಆಸಕ್ತಿಯಿರುವುದನ್ನು ಈ ಆಟವು ತೋರಿಸಿಕೊಟ್ಟಿತು. ಬಳಿಕ ಸತತವಾಗಿ ಒಂದು ದಿನದಾಟದ ಪಯ್ಪೋಟಿಗಳು ಏರ‍್ಪಟ್ಟವು. ಅಂತೆಯೇ ಮಂದಿಯೂ ಇದರೆಡೆಗೆ ಹೆಚ್ಚಿನ ಒಲವು ತೋರಿದರು. ಈ ಗೆಲುವು ಮತ್ತೆ ಅಯ್.ಸಿ.ಸಿ ಯ ಕನಸನ್ನು ಬಿಚ್ಚಿಟ್ಟಿತು. ಅದರಂತೆಯೇ ಮೊಟ್ಟಮೊದಲ ಬಾರಿಗೆ ದಾಂಡಾಟದ ವಿಶ್ವಕಪ್ ಕೂಟವನ್ನು 1975ರಲ್ಲಿ ಇಂಗ್ಲೆಂಡ್ ನಾಡಿನಲ್ಲಿ ನಡೆಸಿಕೊಡಲಾಯಿತು.

ವಿಶ್ವಕಪ್ ದಾಂಟಾಟ:

  • ಮೊದಲ ವಿಶ್ವಕಪ್ ಕೂಟದಲ್ಲಿ ಒಟ್ಟು ಎಂಟು ತಂಡಗಳು ಪಯ್ಪೋಟಿಗಿಳಿದಿದ್ದವು.
    – ಎಂಟು ತಂಡಗಳನ್ನು ಎರಡು ಗುಂಪುಗಳಾಗಿ ಮಾಡಿ, ಪ್ರತಿ ಗುಂಪಿನಲ್ಲಿಯೂ ತಲಾ ನಾಲ್ಕು ತಂಡಗಳನ್ನು ಮಾಡಲಾಯಿತು.
    – ಮೊದಲು ಗುಂಪಿನ ಹಂತ(Group Stage)ಗಳು ನಡೆದು, ಅದರಲ್ಲಿ ಪ್ರತಿ ಗುಂಪಿನ ನಾಲ್ಕೂ ತಂಡಗಳು ಪರಸ್ಪರ ಸೆಣೆಸಾಡುತ್ತಿದ್ದವು.
    – ಪ್ರತಿ ಗುಂಪಿನಿಂದ ಗೆದ್ದ ಎರಡು ತಂಡಗಳನ್ನು ನಾಲ್ಕರ ಗಟ್ಟ(Sami final)ದಲ್ಲಿ ಆಡಿಸಲಾಗುತ್ತದೆ. ಬಳಿಕ ಕೊನೆಯ ಹಂತ(Final)ದ ಪಯ್ಪೋಟಿಗಳು ನಡೆಯುತ್ತದೆ. ಸತತವಾಗಿ ನಾಲ್ಕು ವಿಶ್ವಕಪ್ ವರೆಗೆ ಎಂಟು ತಂಡಗಳು ಪಯ್ಪೋಟಿಗಿಳಿದಿದ್ದವು.
  • ರಾಜಕೀಯ ತೊಂದರೆಗಳಿಂದಾಗಿ ಕೆಲ ವಿಶ್ವಕಪ್ ಕೂಟವನ್ನು ತಪ್ಪಿಸಿಕೊಂಡಿದ್ದ ಆಪ್ರಿಕಾ ತಂಡ ಮತ್ತೆ 1992ರಲ್ಲಿ ಹಿಂದಿರುಗಿತು. ಹಾಗಾಗಿ ಆ ವರುಶದ ಕೂಟದಲ್ಲಿ ಗುಂಪು ಹಂತದಲ್ಲಿ, ಒಂಬತ್ತು ತಂಡಗಳು ಪರಸ್ಪರ ಮೊದಲ ಬಾರಿಗೆ ಪಯ್ಪೋಟಿ ನಡೆಸಿದ್ದವು.
  • 1996ರಲ್ಲಿ ಇನ್ನಶ್ಟು ತಂಡಗಳು ವಿಶ್ವಕಪ್ ಗೆ ಕಾಲಿರಿಸಿದವು. ಆ ಹೊತ್ತಿನಲ್ಲಿ ಎರಡು ಗುಂಪುಗಳಿದ್ದು, ಪ್ರತಿ ಗುಂಪಿನಲ್ಲಿ ತಲಾ ಆರು ತಂಡಗಳಿದ್ದವು. ಪ್ರತಿ ಗುಂಪಿನಿಂದ ಮೊದಲ ನಾಲ್ಕು ತಂಡಗಳು ಎಂಟರ ಗಟ್ಟ(Quater final) ಮತ್ತು ಅಲ್ಲಿಂದ ನಾಲ್ಕರ ಗಟ್ಟಕ್ಕೆ ಮುನ್ನಡೆದವು.
  • 1999 ಮತ್ತು 2003 ವಿಶ್ವಕಪ್ ಕೂಟಗಳಲ್ಲಿ ಹೊಸ ಬದಲಾವಣೆಗಳನ್ನು ಮಾಡಲಾಯಿತು. ತಂಡಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಯಿತು. ಪ್ರತಿ ಗುಂಪಿನಿಂದ ಮೊದಲ ಮೂರು ತಂಡಗಳು ಆರರ ಗಟ್ಟ(Super six)ಕ್ಕೆ ಮುನ್ನಡೆದವು. ಆರರ ಗಟ್ಟದಲ್ಲಿ ಒಳ್ಳೆಯ ಪಯ್ಪೋಟಿ ನಡೆಸುವ ನಾಲ್ಕು ತಂಡಗಳು ನಾಲ್ಕರ ಗಟ್ಟವೇರುತ್ತವೆ. ಸೋತ ಎರಡು ತಂಡಗಳು ಕೂಟದಿಂದ ಹೊರನಡೆಯುತ್ತವೆ. ನಾಲ್ಕರ ಗಟ್ಟದ ಬಳಿಕ ಕೊನೆಯ ಹಂತದ ಪಯ್ಪೋಟಿಗಳು ನಡೆಯುತ್ತಿದ್ದವು.
  • 2007ರ ವಿಶ್ವಕಪ್ ಕೂಟದಲ್ಲಿ 16 ತಂಡಗಳಿದ್ದ ಕಾರಣ ತಂಡಗಳನ್ನು ನಾಲ್ಕು ಗುಂಪುಗಳಾಗಿ ಮಾಡಿ, ಪ್ರತಿಯೊಂದು ಗುಂಪಿನಲ್ಲಿ ಒಳ್ಳೆಯ ಪಯ್ಪೋಟಿ ನಡೆಸುವ ಎರಡು ತಂಡಗಳಿಂದ ಎಂಟರ ಗಟ್ಟ(Super eight)ವನ್ನು ಮಾಡಲಾಯಿತು. ಇಲ್ಲಿ ಗೆಲ್ಲುವ ನಾಲ್ಕು ತಂಡಗಳು ನಾಲ್ಕರ ಗಟ್ಟಕ್ಕೆ ಬಂದು ಮುಂದೆ ಕೊನೆಯ ಹಂತದ ಪಯ್ಪೋಟಿಯೊಂದಿಗೆ ಕೂಟವು ಕೊನೆಗೊಂಡಿತ್ತು.
  • 2011ರ ವಿಶ್ವಕಪ್ ಕೂಟದಲ್ಲಿ ಒಟ್ಟು 14 ತಂಡಗಳು ಪಾಲ್ಗೊಂಡಿದ್ದವು. ಪ್ರತಿ ಗುಂಪಿಗೆ ಏಳು ತಂಡಗಳು ಮಾಡಿ, ಅಲ್ಲಿ ಗೆದ್ದವರಿಗೆ ಕ್ರಮವಾಗಿ ಎಂಟರ ಗಟ್ಟ, ನಾಲ್ಕರ ಗಟ್ಟ ಮತ್ತು ಕೊನೆಯ ಹಂತವನ್ನು ಮಾಡಲಾಗಿತ್ತು.
  • 2015ರ ವಿಶ್ವಕಪ್ ಕೂಟವು ಕೂಟ 2011ರಂತೆಯೇ ನಡೆಯಲಿದೆ.

Cricket(ಮಾಹಿತಿ ಸೆಲೆ: wikipedia)

(ಚಿತ್ರ ಸೆಲೆ: goodwallpaper.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: