ವಿಶ್ವ ತಾಯ್ನುಡಿ ದಿನ ಮತ್ತು ಇಂಡಿಯಾದಲ್ಲಿ ನುಡಿ ಅಳಿಸುವಿಕೆ

ಬಾಬು ಅಜಯ್.mother-language

ವಿಶ್ವಸಂಸ್ತೆಯು ಪ್ರತಿ ವರುಶ ಪೆಬ್ರವರಿ 21 ರಂದು ವಿಶ್ವ ತಾಯ್ನುಡಿ ದಿನವನ್ನು ಆಚರಿಸುತ್ತ ಬಂದಿದೆ. ಈ ದಿನದ ಉದ್ದೇಶವೇ ಜಗತ್ತಿನ ಎಲ್ಲ ನುಡಿಗಳು ಉಳಿಯಬೇಕು, ಆಯಾ ಪ್ರದೇಶದ ನುಡಿಯಲ್ಲೇ ಜನರ ಕಲಿಕೆ ನಡೆಯಬೇಕು ಎಂಬುದು. ಈಗಾಗಲೇ ನೂರಾರು ನುಡಿಗಳು ಜನರ ಕಲಿಕೆಯಿಂದ ದೂರವಿದ್ದ ಕಾರಣ ಆ ನುಡಿ ಮಾತಾಡುವ ಜನರೇ ಇಲ್ಲದಂತಾಗಿದೆ. ಈ ಹೊತ್ತಿನಲ್ಲಿ ಟೈಮ್ಸ್ ಆಪ್ ಇಂಡಿಯಾ ಸುದ್ದಿಹಾಳೆಯಲ್ಲಿ ಬಂದ ಸುದ್ದಿ ಗಮನ ಸೆಳೆಯಿತು.

ಉತ್ತರಪ್ರದೇಶದಲ್ಲಿ ಬಳಕೆಯಲ್ಲಿದ್ದ ನಾಲ್ಕು ಉಪನುಡಿಗಳಾದ ಜಟು, ಗುರ‍್ಜರಿ, ಅಹಿರಿ ಮತ್ತು ಬ್ರಜ್ ಮರೆಯಾಗುತ್ತಿದೆ. ಕಾರಣ ಈ ಪ್ರದೇಶದಲ್ಲಿ ಈಗ “ಹಿಂದುಸ್ತಾನಿ” ಎಂಬ ನುಡಿಯು ಬಳಕೆಯಲ್ಲಿರುವುದು. ಬಳಕೆಯಲ್ಲಿದ್ದ ಈ ನುಡಿಗಳು ಅಳಿಸಿ ಹೋಗಲು ಸಾಕಶ್ಟು ಕಾರಣಗಳಿದ್ದು, ಆದರೆ ನುಡಿಯರಿಗರ ಪ್ರಕಾರ ಕೆಲವು ಸ್ತಳೀಯ ನುಡಿಗಳ ಜೊತೆ ಹಿಂದಿ ಮತ್ತು ಉರ‍್ದು ಕಲಸಿಕೊಂಡು ಹುಟ್ಟಿಕೊಂಡ ‘ಹಿಂದುಸ್ತಾನಿ’ ನುಡಿ ಇದಕ್ಕೆ ಮೂಲ ಕಾರಣ ಎಂದು ಹೇಳುತ್ತಾರೆ. ಇದಲ್ಲದೇ ಸ್ವಾತಂತ್ರ್ಯದ ಬಳಿಕ ಹೆಚ್ಚಾದ ಬಾಲಿವುಡ್(ಹಿಂದಿ) ಚಿತ್ರಗಳು, ಸುದ್ದಿಹಾಳೆಗಳಲ್ಲಿ ಹಾಗು ಟಿವಿ ಮಾದ್ಯಮಗಳಲ್ಲಿ ಹಿಂದುಸ್ತಾನಿ ನುಡಿಯ ಬಳಸುವಿಕೆ ಹೆಚ್ಚಾಗಿ, ಹಿಂದುಸ್ತಾನಿ ನುಡಿ ಆಡು ಮಾತಿನಲ್ಲೂ ಶುರುವಾಯಿತು ಎಂದು ಬಲ್ಲವರು ಹೇಳುತ್ತಾರೆ.

ರಾಜ್ಯ ಸರ‍್ಕಾರ ಕೂಡ ತನ್ನ ಆಡಳಿತದಲ್ಲಿ ಆ ನಾಡಿನ ನುಡಿಗಳ ಬಳಕೆ ಮಾಡದೇ ಇರುವುದು, ಕೇಂದ್ರ ಸರ‍್ಕಾರ ದೇಶಕ್ಕೊಂದು ನುಡಿ ಎಂಬಂತೆ ಹಿಂದಿಯನ್ನು ಎಲ್ಲಕಡೆ ಹರಡುವ ಆತುರದಲ್ಲಿ, ಆಯಾ ಜಾಗದ ನಡೆನುಡಿ ಅಳಿಸುವಿಕೆಗೆ ಕಾರಣವಾಗಿದೆ. ಹೊಸ ಪೀಳಿಗೆ ಬಂದಂತೆ ಈ ಉಪನುಡಿಗಳ ಬಳಕೆ ಕಡಿಮೆಯಾಗುತ್ತಿದ್ದು, ಇದು ಮುಂದುವರಿದರೆ ಮುಂದಿನ ದಿನಗಳಲ್ಲಿ ಈ ಉಪನುಡಿಗಳು ತಮ್ಮ ಇರುವಿಕೆ ಕಳೆದುಕೊಂಡು ಹಳಮೆಯ ಪುಟ ಸೇರುವ ಸಾದ್ಯತೆಗಳು ಹೆಚ್ಚಾಗಿ ಕಾಣಿಸುತ್ತಿದೆ.

ಕೇಂದ್ರ ಸರ‍್ಕಾರವು ಹಿಂದಿ ಹರಡುವಿಕೆಗೆ ಏಕೆ ಇಶ್ಟು ಒತ್ತು ಕೊಡುತ್ತೆ ಎಂದು ನೋಡಿದಾಗ ನಮ್ಮ ಸಂವಿದಾನದ ವಿದಿ 343-351 ರ ಪ್ರಕಾರ ಹಿಂದಿಯನ್ನು ಅದಿಕ್ರುತ ನುಡಿ ಎಂದು ಹೇಳಿ, ಅದರ ಬಳಕೆಯನ್ನು ಹೆಚ್ಚು ಮಾಡಬೇಕೆಂಬುದು. ಈ ವಿದಿಯಿಂದಲೇ ಕೇಂದ್ರ ಸರ‍್ಕಾರ ಕೇವಲ ಹಿಂದಿ ನುಡಿ ಬಳಕೆಯನ್ನು ಹೆಚ್ಚಿಸುತ್ತ ಬೇರೆ ನುಡಿಗಳು ಅಳಿಸಿಹೋಗುವುದಕ್ಕೆ ಕಾರಣವಾಗಿದೆ. ಈ ಸಮಸ್ಯೆ ಕೇವಲ ಉತ್ತರಪ್ರದೇಶಕ್ಕೆ ಸೀಮಿತವಾಗಿಲ್ಲ, ಕೇಂದ್ರ ಸರ‍್ಕಾರದ ಈ ಹುಳುಕು ಬಾಶಾನೀತಿಯಿಂದಾಗಿ ರಾಜಸ್ತಾನ , ಬಿಹಾರ, ಮಹಾರಾಶ್ಟ್ರ ಇತ್ಯಾದಿ ರಾಜ್ಯಗಳಲ್ಲೂ ಹಿಂದಿ ಎಲ್ಲೆಡೆ ಹರಡಿ, ಆ ನಾಡಿನ ನುಡಿಗಳು ಜನರ ಬಳಕೆಯಿಂದ ಮೆಲ್ಲನೆ ಹೊರಟುಹೋಗುತ್ತಿದೆ. ಹಿಂದಿಯ ಯಾವ ಸೋಂಕು ಇಲ್ಲದ ಕರ‍್ನಾಟಕದಲ್ಲೂ ಹಿಂದಿ ಬಳಕೆ ಮೆಲ್ಲನೆ ಬರುತ್ತಿರುವುದು ಬಹಳ ಅಪಾಯಕಾರಿಯಾಗಿದ್ದು, ಕನ್ನಡಿಗರು ಬಹಳ ಗಂಬೀರವಾಗಿ ತೆಗೆದುಕೊಳ್ಳಬೇಕಾದ ವಿಶಯ. ಇದು ಹೀಗೆ ಮುಂದುವರೆದರೆ, ಒಂದು ನುಡಿ ಮಾತಾಡುವ ಜನಾಂಗವೇ ಹಳಮೆಯ ಪುಟ ಸೇರುವ ಕಾಲ ದೂರವಿಲ್ಲ.

ಯು.ಎಸ್.ಎಸ್.ಆರ್ ಏಕೆ ಚೂರು ಚೂರಾಯಿತು, ಹೇಗೆ ಬಾಂಗ್ಲಾದೇಶ ಹುಟ್ಟಿಕೊಂಡಿತು ಎಂದು ನೋಡಿದರೆ ನಮಗೆ ಉತ್ತರ ಸಿಗುವುದೇ ಒಂದು ಬಾಶಿಕ ಜನಾಂಗ ಮತ್ತೊಂದು ಬಾಶಿಕ ಜನಾಂಗದ ಮೇಲೆ ತಮ್ಮ ನುಡಿಯನ್ನು ಹೇರಿದಾಗ. ಇದನ್ನು ನೋಡಿಯಾದರೂ ಕೇಂದ್ರ ಸರ‍್ಕಾರ ಇಂಡಿಯಾದ ಬಾಶನೀತಿಯನ್ನು ಬದಲಿಸಿ ಎಲ್ಲ ನುಡಿಗಳಿಗೆ ಸಮಾನ ಗವ್ರವ ಸ್ತಾನ ನೀಡಲಿಕ್ಕೆ ಬೇಕಾದ ಸಾಂವಿದಾನಿಕ ತಿದ್ದುಪಡಿ ತರುವುದು ಒಂದಾದರೆ, ಜನರು ತಮ್ಮ ಕಲಿಕೆ ದುಡಿಮೆಯಲ್ಲೂ ತಮ್ಮ ನುಡಿಗಳನ್ನು ಬಳಸುವುದರಿಂದ ಮಾತ್ರ ನುಡಿಗಳ ಇರುವಿಕೆ ಉಳಿಸಲು ಸಾದ್ಯ ಎಂದು ಮನಗಾಣಬೇಕಿದೆ.

(ಚಿತ್ರ ಸೆಲೆ: unesco)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications