ನಮ್ಮ ನೆಲದ ಮೇಲ್ಮೈ

ಕಿರಣ್ ಮಲೆನಾಡು.

ನಾವೀಗ ನೆಲದ ಮೇಲಿದ್ದೇವೆ! ಹೌದು! ನಾವ್ ಕಾಣುವ ಬೆಟ್ಟ, ಗುಡ್ಡ, ಹೊಳೆ, ಕಡಲು, ಕಡಲಿನ ದಡ, ನೀರಗಡ್ಡೆ, ಕಾಡು, ಕಂದಕ, ಹಕ್ಕಿಗಳು, ಪ್ರಾಣಿಗಳು ಮತ್ತು ನಾವಿರುವ ತಾಣವೇ ನೆಲದ ಮೇಲ್ಮೈ

earth_pic
ನೆಲದ ಹುಟ್ಟಿನ ಕಿರುಪರಿಚಯ:

4.5 ನೂರ‍್ಕೋಟಿ ವರುಶಗಳ ಹಿಂದೆ ನೇಸರನ ಸುತ್ತ ತಟ್ಟೆ ರೀತಿಯ ಆವಿಮೋಡದ ಅಡಕಗಳು (elements of disc-shaped nebula) ಸುತ್ತುತ್ತ ಒಂದಕ್ಕೊಂದು ಸೆಳೆದೆಕೊಳ್ಳುತ್ತ ನೆರೆ-ಅಂಟಿಕೆಯಾಗಿ (accretion), ನೆಲವು (Earth) ಗುಂಡಗಾಗುತ್ತಾ ಬಾನಮೈಯಾಗಿ (Celestial body) ಮಾರ‍್ಪಾಟು ಹೊಂದಿತು. ಮುಂದುವರೆಯುತ್ತಾ ನೆಲವು ತನ್ನದೇ ನೆಲಸೆಳೆತವನ್ನು (Gravitation) ಪಡೆದುಕೊಂಡಿತು. ನೆಲದೊಳಗಿನ ಉರಿಯಡಕಗಳ ಚಟುವಟಿಕೆಗಳಿಂದಾಗಿ (Volcanic activities) ಹೊರಸೂಸಿದ ಆವಿಯಡಕಗಳು (gaseous materials) ನೆಲದ ಸುತ್ತಲಿರುವ ಗಾಳಿಹೊದಿಕೆಯ (Atmosphere) ಬದಲಾವಣೆಗೆ ಕಾರಣವಾದವು.

ಈ ಆವಿಗಳಲ್ಲಿನ ಉಸಿರುಗಾಳಿ, ನೀರುಹುಟ್ಟುಕದ ಅಡಕಗಳು ತಣ್ಣಗಾಗುತ್ತ 3.8 ಕೋಟಿ ವರುಶಗಳ ಹಿಂದೆ ಪೆರ‍್ನಲೆದ (Continental) ತೊಗಟೆಯ ಮೇಲೆ ನೀರಾಗಿ ತುಂಬಿಕೊಂಡಿತು. ಉಸಿರಿಯಿಲ್ಲದ-ಹುಟ್ಟುವಿಕೆಯಿಂದ (Abiogenesis) ಗಿಡ, ಮರಗಳಾಗಿ ಮತ್ತು ಉಸುರಿಗಳಾಗಿ (Living Beings) ಮಾರ‍್ಪಟ್ಟವು. ಹೀಗೆ ಮೈದಾಳಿದ ನೆಲವು ತನ್ನೊಡಲಲ್ಲಿ ಹಲವು ಬೆರೆಗುಗೊಳಿಸುವ ವಿಶಯಗಳನ್ನು ಅಡಗಿಸಿಕೊಂಡಿದೆ. ನೆಲದ ಮೇಲ್ಮೈಯ (Earths Surface) ಇಟ್ಟಳವೂ ಅದರಲ್ಲೊಂದು. ನಾವು ನೆಲೆ ನಿಂತಿರುವ ನೆಲದ ಮೇಲ್ಮೈ ಬಗ್ಗೆ ಈ ಬರಹದಲ್ಲಿ ತಿಳಿದುಕೊಳ್ಳೋಣ.

ನೆಲದ ಮೇಲ್ಮೈಯ ಇಟ್ಟಳ (Structure of earth surface):

ಸುಮಾರು 71% ಮೇಲ್ಮೈಯು ನೀರಿನಿಂದ ಕೂಡಿದೆ, ನೀರಿನಿಂದ ಹೊರತಾದ 29% ಬಾಗವು ಪೆರ‍್ನೆಲ (Continental) ಮತ್ತು ಪೆರ‍್ನೆಲದ ಅರೆಗಳಿಂದ (Continental Shelves) ಕೂಡಿದೆ. ತೊಗಟೆಯ (Crust) ಮೇಲ್ಬಾಗವೇ ನೆಲದ ಹೊರಮೈ(Earth Surface). ನೆಲದ ಇಟ್ಟಳವು ಹಲವು ಬಾಗಗಳಿಂದ ಕೂಡಿದೆ. ತೊಗಟೆ ನೆಲದ ಹೊರಬಾಗವಾದರೂ ತೊಗಟೆಯ ಹೊರಮೈಯನ್ನು ನೆಲದರಿಗರು ಇನ್ನೊಂದು ಬಾಗವಾಗಿ ಕಾಣಿಸುವುದುಂಟು. ಅದೇ ರೀತಿಯಲ್ಲಿ ಕೊನೆಯ ಹೊದಿಕೆ (Uppermost Mantle) ಮತ್ತು ತೊಗಟೆಯನ್ನು (Crust) ಕೂಡಿಸಿ ನೆಲದರಿಗರು ಗಟ್ಟಿತೆರಳೆ (Lithosphere) ಎಂದು ಬೇರೆ ತುಣುಕಾಗಿ ಕರೆಯುವುದುಂಟು. ಗಟ್ಟಿತೆರಳೆಯ ಕೆಳಬಾಗವನ್ನು ಮೆದುತೆರಳೆ (Asthenosphere) ಎಂದು ಕರೆಯುತ್ತಾರೆ.

earth_structure_crust

1. ಪೆರ‍್ನೆಲದ ತೊಗಟೆ (Continental Crust):

ಕಿಚ್ಚುಗಲ್ಲು (Ignatius Rocks), ಗೋಡುಮಣ್ಣುಗಲ್ಲು (Sedimentary Rocks), ಪಾಂಗುಮಾರ‍್ಪುಗಲ್ಲುಗಳು (Metamorphic Rocks) ಮತ್ತು ಇವುಗಳಿಂದಾದ ಮಣ್ಣು, ಪೆರ‍್ನೆಲ ಮತ್ತು ಕಡಲಬದಿಯ ಪೆರ‍್ನೆಲದ ಅರೆಯನ್ನಾಗಿ ಮಾರ‍್ಪಡಿಸಿವೆ. ಪೆರ‍್ನೆಲದ ಏರು ಮತ್ತು ಇಳಿಜಾರು (Continental Rise and Slope) ಪೆರ‍್ನೆಲದ ತೊಗಟೆಯನ್ನು ಹಿರಿಗಡಲ ತೊಗಟೆಯಿಂದ (Continental Crust) ಬೇರ‍್ಪಡಿಸಿವೆ.

ಬರೀ ಗಟ್ಟಿಗಲ್ಲುಗಳಿಂದ ಕೂಡಿದ ಈ ಮಡಿಕೆಯನ್ನು ಸಿಯಾಲ್ (Sial) ಎಂದು ಕರೆಯುವುದುಂಟು. ಈ ತೊಗಟೆಯ ದಟ್ಟಣೆಯು ಹೊದಿಕೆಯ (Mantle) ಹಾಗು ಹಿರಿಗಡಲ ತೊಗಟೆಯ ದಟ್ಟಣೆಗಿಂತ ಕಡಿಮೆ ಇದೆ. ಸರಾಸರಿಯಾಗಿ ಈ ತೊಗಟೆಯ ದಪ್ಪ 35-40 ಕಿ.ಮಿ ಆಗಿದೆ. ತೊಗಟೆಯ ಮೇಲ್ಮೈ ಅಂದರೆ ನೆಲದ ಮೇಲ್ಮೈ ಏಳು ಬೇರೆ ಬೇರೆ ಪೆರ‍್ನೆಲಗಳಾಗಿ (Continents) ಮಾರ‍್ಪಟ್ಟಿದೆ. ಅವುಗಳೆಂದರೆ ಏಶ್ಯ, ಆಪ್ರಿಕಾ, ಬಡಗಣ ಅಮೇರಿಕಾ, ತೆಂಕಣ ಅಮೇರಿಕಾ, ಯುರೋಪ್, ಆಸ್ಟ್ರೇಲಿಯಾ, ಅಂಟಾರ‍್ಟಿಕಾ ಪೆರ‍್ನೆಲಗಳು ಜೊತೆಗೆ ಗ್ರೀನ್ ಲ್ಯಾಂಡ್ ನಂತಹ ದೊಡ್ಡ ದೊಡ್ಡ ನಡುಗಡ್ದೆಗಳನ್ನು ಹುಟ್ಟುಹಾಕಿದೆ.

ಈ ಪೆರ‍್ನೆಲಗಳನ್ನು ಗಟ್ಟಿತೆರಳೆಯ ತಗಡುಗಳು (Tectonic Plates) ಎಂದು ಕರೆಯುವುದುಂಟು, ಹಲಕೋಟಿ ವರುಶಗಳ ಹಿಂದಿನಿಂದಲೂ ಈ ತಗಡುಗಳು ತೇಲುತ್ತಿವೆ ಮತ್ತು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡು ಕೂಡಿಕೊಂಡಿವೆ ಎಂದು ನೆಲದರಿಗರಾದ ‘ಅಲ್ಪ್ರೆಡ್ ವೆಜಿನರ‍್’ ತೋರಿಸಿಕೊಟ್ಟಿದ್ದಾರೆ. ಇದನ್ನು ಪೆರ‍್ನೆಲಗಳ ಅಲೆತ (Continental Drift) ಎಂದು ಕರೆಯುತ್ತಾರೆ.

ಹೌದು! ಪ್ರೋಟೆರೋಜೋಯಿಕ್ ಹೊತ್ತಿನಲ್ಲಿ (Proterozoic Era) ಅಂದರೆ ಸುಮಾರು 2.5-5 ನೂರ‍್ಕೋಟಿ ವರುಶಗಳ ಹಿಂದೆ ಕಿಚ್ಚುಗಲ್ಲು (Igneous Rocks) ಮತ್ತು ಇನ್ನಿತರ ಕಲ್ಲುಗಳಿಂದ ಮಾರ‍್ಪಾಟಾದ ಚಿಕ್ಕ ಚಿಕ್ಕ ನೆಲದ ತೊಗಟೆಯ ತುಣುಕುಗಳು ನೆಲದ ಹೊದಿಕೆಯ (Mantle) ಮೇಲೆ ತೇಲಾಡುತ್ತಿದ್ದವು ಒಂದಕ್ಕೊಂದು ಡಿಕ್ಕಿ ಹೊಡೆಯುವಾಗ, ಅವುಗಳ ಕೂಡುವ ಜಾಗದಲ್ಲಿ ಹೆಚ್ಚಿನ ಒತ್ತಡದಿಂದ ಉರಿಬೆಟ್ಟಗಳೆದ್ದು (Volcanic Mountain) ಒಂದಕ್ಕೊಂದು ಬೆಸೆದುಕೊಂಡು ಕಾಪುನೆಲಗಳಾದವು ಮತ್ತು ಇವುಗಳ ಮುಂದುವರಿದ ಬಾಗವಾಗಿ ಹಲವು ಪೆರ‍್ನೆಲಗಳು ಮಾರ‍್ಪಟ್ಟವು. ಇದೆ ಪೆರ‍್ನೆಲಗಳ ಮೇಲೆ ನಾವಿಂದು ಬದುಕುತ್ತಿರುವುದು, ನಮ್ಮೊಡನೆ ಕಾಡು, ಬೆಟ್ಟಗಳೂ ನೆಲೆಸಿರುವುದು.

ನೀರಿನ ಉಸುರಿಗಳು (Living beings) ಹಲವು ಕೋಟಿ ವರುಶಗಳ ಹಿಂದೆ ಪೆರ‍್ನೆಲಕ್ಕೆ ವಲಸೆ ಬಂದು ಬೇರೆ ಬೇರೆ ರೀತಿಯ ಜೀವಿಗಳಾಗಿ ಮಾರ‍್ಪಟ್ಟವು. ಹಾಗೆಯೇ ಕೆಲವು ಪೆರ‍್ನೆಲಗಳ (Continents i.e. Tectonic Plates) ಕೆಳ-ಕದಲಿಕೆಯಾಗಿ (Subduction) ಹಲವು ಕೋಟಿ ವರುಶಗಳ ನಂತರ ಮರಳಿ ಹೊದಿಕೆಗೆ (Mantle) ಸೇರಿದವು. ಬೆಟ್ಟ ಗುಡ್ದಗಳೆತ್ತರವೂ ತೊಗಟೆಯ ಬಾಗಕ್ಕೆ ಸೇರಿದಂತಹವು.

2. ಹಿರಿಗಡಲ ತೊಗಟೆ (Oceanic crust):

ಪೆರ‍್ನೆಲದ ತೊಗಟೆಯ ಮೇಲ್ಮೈಯಲ್ಲಿ ಗಾಳಿ, ಬೆಟ್ಟ, ಗುಡ್ಡ, ಉಸುರಿಗಳಿರುವಂತೆ, ಹಿರಿಗಡಲ ತೊಗಟೆಯ ಮೇಲ್ಮೈಯು ನೀರಿನ ಹಿರಿಗಡಲುಗಳು, ನಡುಗಡ್ಡೆಗಳು, ಉರಿಬೆಟ್ಟಗಳು, ನೀರ‍್ಗಡ್ದೆಗಳು (Islands) ಹಾಗು ನೀರಿನಲ್ಲಿ ಬದುಕುವ ಉಸುರಿಗಳಿಂದ ತುಂಬಿದೆ. ಈ ತೊಗಟೆಯು ಪೆರ‍್ನೆಲದ ತೊಗಟೆಗಿಂತ ತೆಳುವಾಗಿದ್ದು, ಹೆಚ್ಚಿನ ದಟ್ಟಣೆ (Density) ಹೊಂದಿದೆ ಮತ್ತು ಗಟ್ಟಿಯಾಗಿದೆ. ಈ ತೊಗಟೆಯು ಮರಳುಗೆ (Silicon), ಉರಿಹೊನ್ನು(Magnesium), ಕಬ್ಬಿಣದ ಬೇರಡಕಗಳು, ಉರಿಗಲ್ಲುಗಳು (Igneous Rocks), ಮಣ್ಣು ಮತ್ತು ಇನ್ನಿತರ ಅಡಕಗಳಿಂದಾದ ಕಲ್ಲು ಮರಳುಗೆಯ ಕಲ್ಲಿನಿಂದ (Mafic) ಉಂಟಾಗಿದೆ.

ಹಿರಿಗಡಲ ತೊಗಟೆಯನ್ನು ಮೂರು ಮಡಿಕೆಗಳಾಗಿ (Layers) ಬೇರ‍್ಪಡಿಸಲಾಗಿದೆ. ಮೊದಲನೆಯ ಮಡಿಕೆಯು 0.4 ಕಿ.ಮಿ ಅಶ್ಟು ದಪ್ಪವಾಗಿದ್ದು, ಅರೆ ಗೋಡಿಮಣ್ಣಿನಿಂದ (Sediments) ತುಂಬಿಕೊಂಡಿದೆ. ಕಡಲಾಳದ ಬೆಟ್ಟ ಗುಡ್ಡಗಳಿಂದ ದೂರ ಹೋದಂತೆ ಈ ಮಡಿಕೆಯು ದಪ್ಪವಾಗುತ್ತಾ ಹೋಗುತ್ತದೆ. ನಂತರದ ಮಡಿಕೆಯು ಗಾಜಿನಂತೆ ಇದ್ದು ಇವುಗಳು ಕರಿ ಕಿಚ್ಚುಗಲ್ಲಿನಿಂದಲೂ, ಉರಿಹೊನ್ನಿನಿಂದ ಮತ್ತು ಮರುಳುಗೆಯಿಂದ ಮಾಡಲ್ಪಟ್ಟಿದೆ. ಇವುಗಳ ಸರಾಸರಿ ದಪ್ಪ 2 ಕಿ.ಮಿ. ಕೊನೆಯ ಮಡಿಕೆಯು ತಣ್ಣಗಾಗುತ್ತಿರುವ ಕರಗಿದಡಕದಿಂದ (Magma), ತಂಪುಗಟ್ಟಿಕಲ್ಲಿನಿಂದ (Gabbros) ಮತ್ತು ಪಾಂಗುಮಾರ‍್ಪುನಗಲ್ಲಿನಿಂದ ಮಾರ‍್ಪಟ್ಟಿದೆ.

ಪೆರ‍್ನೆಲದ ತೊಗಟೆಯ ಪುಡಿಗಲ್ಲು ಮತ್ತು ಮಣ್ಣು, ಕಡಲ ಸೇರುವೆಡೆ ಗೋಡುಮಣ್ಣಾಗಿವಿಕೆಯಾಗಿ (Sedimentation) ಹಿರಿಗಡಲ ತೊಗಟೆಗೆ (Oceanic Crust) ಸೇರುತ್ತದೆ. ಗಟ್ಟಿತೆರಳೆಯ ತಗಡುಗಳ ತೇಲಾಡುವಿಕೆಯಿಂದ ಕಡಲಾಳದ ಗಟ್ಟಿತೆರಳೆಯ ಹಲವೆಡೆ ಬಿಸಿ ಮತ್ತು ಒತ್ತಡ ಉಂಟಾಗಿ ಹಿರಿಗಡಲ ತೊಗಟೆಯ ಅಡಕಗಳು ಕರಗುತ್ತವೆ ಹೀಗೆ ಕರಗಿದಡಕಗಳು (Magma) ಹರಿಯುತ್ತಾ ಪೆರ‍್ನೆಲ ಮತ್ತು ಹಿರಿಗಡಲುಗಳು ಸೇರುವೆಡೆ ಮೇಲ್ಗಡೆ ಉಕ್ಕಿಹರಿದು ಉರಿಬೆಟ್ಟಗಳನ್ನು(Volcanoes) ಉಂಟುಮಾಡುತ್ತವೆ.

ಈ ರೀತಿಯ ಉರಿಬೆಟ್ಟಗಳು ಪೆರ‍್ನೆಲದ ಮೇಲೆ, ಎರಡು ಪೆರ‍್ನೆಲದ ಗಟ್ಟಿತೆರಳೆಯ ತಟ್ಟೆಗಳ (Tectonic Plate w.r.t Continents) ಡಿಕ್ಕಿಯಿಂದಲೂ ಉಂಟಾಗುತ್ತವೆ ಹಾಗು ಪೆರ‍್ನೆಲ ಸೇರುವೆಡೆಯಲ್ಲದೆ ನಡುಗಡ್ಡೆಗಳ ಮೇಲೂ (Islands above Oceanic Crusts) ಉರಿಬೆಟ್ಟಗಳನ್ನು ಉಂಟುಮಾಡುತ್ತವೆ. ಕಡಲತಳದಲ್ಲಿ ಗಟ್ಟಿತೆರಳೆಯ ತಗಡುಗಳು ಬೇರ‍್ಪಡುವೆಡೆ ಕರಗಿದಡಕಗಳು ಮೇಲುಕ್ಕಿ ಬದುಗಳನ್ನು(Ridges) ಉಂಟುಮಾಡುತ್ತವೆ. ಈ ಬದುಗಳಿಂದ ದೂರಹೋದಂತೆ ಕಡಲಾಳದ ಗಟ್ಟಿತೆರಳೆಯು ತಣ್ಣಗಾಗುತ್ತ ಮತ್ತು ಗಟ್ಟಿಯಾಗುತ್ತಾ ಹೋಗುತ್ತದೆ ಹಾಗು ಇದರ ಮೇಲೆ ಗೋಡುಮಣ್ಣಿನ ಸವರಿಕೆಯಾಗುತ್ತಾ(Sedimentary deposits) ಬರುತ್ತದೆ.

ಈ ಬಗೆಯ ವಿಶೇಶವಾದ ಇಟ್ಟಳವನ್ನು ಹೊಂದಿದ ನಮ್ಮ ನೆಲದ ಪರಿಚೆಯು ಈ ಕೆಳಗಿನಂತಿದೆ.

earth_feature_table

ಮೇಲಿನ ಸಂಗತಿಗಳಿಂದ ನಾವು ನೆಲೆಸಿರುವ ನೆಲದ ಮೇಲ್ಮೈ(Earths Surface) ಹೇಗೆ ಮಾರ‍್ಪಟ್ಟಿತು ಎಂದು ತಿಳಿದೆವು. ಮುಂದಿನ ಬರಹಗಳಲ್ಲಿ ಕಾಡುಗಳು, ಉಸುರಿಗಳು (Living beings), ಬೆಟ್ಟ-ಗುಡ್ಡಗಳು, ನಡುಗಡ್ಡೆಗಳು(Islands), ನೀರ‍್ಗಡ್ದೆಗಳು(icebergs), ನೀರು ಮತ್ತು ಗಾಳಿಹೊದಿಕೆ (Atmosphere) ಇವುಗಳು ಮಾರ‍್ಪಟ್ಟ ಬಗೆಯನ್ನು ತಿಳಿದುಕೊಳ್ಳೋಣ.

(ತಿಟ್ಟಸೆಲೆಗಳು: physicalgeography.net, solstation.com)
(ಮಾಹಿತಿ ಸೆಲೆಗಳು: physicalgeography.netWikipediauniversetoday.combbc.co.uk/science/earth)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks