ಮುಗಿಲೆತ್ತರ ಕಟ್ಟಡಗಳ ಶಾಪ!

– ಅನ್ನದಾನೇಶ ಶಿ. ಸಂಕದಾಳ.

skyscrapper-curse

ಇತ್ತೀಚಿನ ವರುಶಗಳಲ್ಲಿ ಮುಗಿಲೆತ್ತರದ ಕಟ್ಟಡಗಳನ್ನು (skyscraper) ಕಟ್ಟುವ ಸುಗ್ಗಿ ಎಲ್ಲೆಡೆ ಕಾಣಿಸುತ್ತಿದ್ದು, ಕಳೆದ ವರುಶವೊಂದರಲ್ಲೇ 200 ಮೀಟರ್ ಗಿಂತ ಹೆಚ್ಚು ಎತ್ತರದ 100 ಕಟ್ಟಡಗಳನ್ನುಕಟ್ಟಲಾಗಿದೆ ಎಂದು ಹೇಳಲಾಗುತ್ತಿದೆ. ಈ ವರುಶ ಚೀನಾದಲ್ಲಿ ಜಗತ್ತಿನ ಎರಡನೇ ಅತಿ ದೊಡ್ಡ ಕಟ್ಟಡವೊಂದು ತಲೆ ಎತ್ತಲಿದೆ, ಸೌದಿ ಅರೇಬಿಯಾದವರು ನ್ಯೂಯಾರ‍್ಕ್ ನ ‘ವರ‍್ಲ್ಡ್ ಟ್ರೇಡ್ ಸೆಂಟರ‍್’ ಗಿಂತ ಎರಡು ಪಟ್ಟು ಎತ್ತರವಿರುವ ಕಟ್ಟಡವನ್ನು ಕಟ್ಟುವರು ಎಂಬ ಸುದ್ದಿಗಳಿವೆ. ಮುಗಿಲೆತ್ತರದ ಕಟ್ಟಡಗಳನ್ನು ಹೊಂದುವುದು ತಕ್ಕಮೆಯ (prestige) ವಿಶಯ ಎಂದು ಹಲವಾರು ನಾಡುಗಳ ಅನಿಸಿಕೆಯಾಗಿದೆ. ಅಂತ ಎತ್ತರದ ಕಟ್ಟಡಗಳನ್ನು ಹೊಂದುವುದರಿಂದ ಹಣಕಾಸು ವಹಿವಾಟುಗಳಲ್ಲಿ ಹೆಚ್ಚಳವಾಗಿ, ಹೆಚ್ಚಿನ ಆದಾಯ ಗಳಿಕೆಯಾಗುತ್ತದೆ ಎಂಬ ಅನಿಸಿಕೆಗಳು ಒಂದು ಕಡೆಯಾದರೆ, “ನಾಡಿನ ಅತವಾ ಜಗತ್ತಿನ ಹಣಕಾಸಿನ ಸ್ತಿತಿಗೆ ಕೇಡೊದಗುವ” ಮುನ್ಸೂಚನೆ, ಅಂತಹ ಕಟ್ಟಡಗಳು ಎಂಬ ವಾದಗಳಿವೆ. ಅದನ್ನು ‘ಮುಗಿಲೆತ್ತರ ಕಟ್ಟಡಗಳ ಶಾಪ‘ ಎಂದೇ ಕರೆಯಲಾಗುತ್ತದೆ (skyscraper curse)!

‘ಮುಗಿಲೆತ್ತರ ಕಟ್ಟಡಗಳ ಶಾಪ’ ಎಂಬ ನಂಬಿಕೆಗೆ, ಅರಿಮೆಯ ನೆಲೆಗಟ್ಟಿನ ಮೇಲೆ ಯಾವುದೇ ಪುರಾವೆಗಳಿಲ್ಲದಿದ್ದರೂ (scientific proof), ಆ ನಂಬಿಕೆ ಸರಿಯೇನೋ ಎಂದು ತೋರಿಸುವ ಆಗುಹಗಳು ಹಿಂದೆ ನಡೆದಿವೆ. 1908 ಮತ್ತು 1909ರಲ್ಲಿ ನ್ಯೂಯಾರ‍್ಕ್ ನ ಎತ್ತರದ ಕಟ್ಟಡಗಳಾದ ‘ಸಿಂಗರ‍್’ ಮತ್ತು ‘ಮೆಟ್ರೋಪಾಲಿಟನ್ ಲೈಪ್ ಟವರ‍್’ ಬಳಕೆಗೆ ತೆರೆದುಕೊಂಡವು. ಆದರೆ ಹೆಚ್ಚು ಕಡಿಮೆ ಅದೇ ಸಮಯದಲ್ಲಿ ಅಮೆರಿಕಾ ಹಣಕಾಸಿನ ಮುಗ್ಗಟ್ಟನ್ನು ಎದುರಿಸುವಂತಾಯಿತು. 1931ರಲ್ಲಿ ಎತ್ತರದ ಕಟ್ಟಡವಾದ ‘ಎಂಪೈರ್ ಸ್ಟೇಟ್ ಬಿಲ್ಡಿಂಗ್’ ಬಳಕೆಗೆ ಬಂದಾಗ, ‘ಗ್ರೇಟ್ ಡಿಪ್ರೆಶನ್’ ಎಂಬ ಬಿಕ್ಕಟ್ಟಿಗೆ ಜಗತ್ತಿನ ಬೇರೆ ಬೇರೆ ನಾಡುಗಳು ಒಳಗಾಗಿದ್ದವು. ಈ ಕಾರಣದಿಂದ ‘ಎಂಪೈರ್ ಸ್ಟೇಟ್ ಬಿಲ್ಡಿಂಗ್’ ಅನ್ನು ‘ಎಮ್ಪ್ಟಿ(ಕಾಲಿ) ಸ್ಟೇಟ್ ಬಿಲ್ಡಿಂಗ್’ ಎಂದೂ ಕರೆಯುತ್ತಿದ್ದರಂತೆ! 1996 ರಲ್ಲಿ ಆ ಹೊತ್ತಿನ ಎತ್ತರದ ಕಟ್ಟಡ ಎಂದು ಹೆಸರುಗಳಿಸಿದ್ದ ಮಲೇಶಿಯಾದ ‘ಪೆಟ್ರೋನಾಸ್’, ಏಶ್ಯ ಬಿಕ್ಕಟ್ಟು (asian crisis) ಶುರುವಾಗುವ ಸ್ವಲ್ಪ ದಿನದ ಮುಂಚೆ ತೆರೆದುಕೊಂಡಿತು. ಈಗ ಜಗತ್ತಿನ ಅತಿ ಎತ್ತರದ ಕಟ್ಟಡವೆಂದೇ ಹೇಳಲಾಗುತ್ತಿರುವ ದುಬೈ ನ ‘ಬುರ‍್ಜ್ ಕಲೀಪಾ’ ಕಟ್ಟಡ 2010 ರಲ್ಲಿ ತೆರೆದುಕೊಂಡಿತು. ಆದರೆ ಆ ಹೊತ್ತಿನಲ್ಲಿ ಅರಬ್ ನಾಡುಗಳು ಸೇರಿದಂತೆ, ಜಗತ್ತಿನ ಹಲವಾರು ನಾಡುಗಳು ಹಿಂಜರಿತವನ್ನು (recession) ಎದುರಿಸುತ್ತಿದ್ದವು! ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿ, ತಮ್ಮ ಗಮನಿಕೆಯನ್ನು (observation) ಹಣಕಾಸಿನ ಜಗತ್ತಿನ ಮುಂದೆ ಮೊದಲು ಇಟ್ಟದ್ದು ಆಂಡ್ರ್ಯೂ ಲಾರೆನ್ಸ್ ಎಂಬುವರು. ಅದೇ ಮುಂದೆ ‘ಮುಗಿಲೆತ್ತರ ಕಟ್ಟಡಗಳ ಶಾಪ’ ಎಂಬ ಹೆಸರು ಪಡೆಯಿತು.

ಮುಗಿಲೆತ್ತರ ಕಟ್ಟಡಗಳನ್ನು ಕಟ್ಟುವ ಹಿಂದೆ ಲೆಕ್ಕಾಚಾರವೂ ಇದೆ. ಮೇಲ್ಮುಕವಾಗಿ ಉದ್ದವಾಗಿ ಕಟ್ಟಲ್ಪಡುವ ಇಂತ ಕಟ್ಟಡಗಳಿಗೆ ಸುತ್ತಳದ ಜಾಗskyscraper-curse1 (area) ಹೆಚ್ಚಿರದಿದ್ದರೂ ನಡೆಯುತ್ತದೆ. ಸಿಗುವ ಜಾಗದಲ್ಲಿ ಹೆಚ್ಚಿನ ಅಂತಸ್ತುಗಳನ್ನು ಕಟ್ಟುವ ಮೂಲಕ ಹೆಚ್ಚು ವ್ಯಾಪಾರಿಗಳನ್ನು ಸೆಳೆದು, ಮಹಡಿಗಳ ಜಾಗವನ್ನು ಮಾರಿ ಅತವಾ ಬಾಡಿಗೆಗೆ ನೀಡಿ ಹೆಚ್ಚು ಹಣ ಪಡೆಯಬಹುದು ಎನ್ನುವುದೇ ಆ ಲೆಕ್ಕಾಚಾರ. ಆದರೆ ಒಂದು ಮಟ್ಟ ದಾಟಿದ ಮೇಲೆ, ಹೆಚ್ಚಿನ ಅಂತಸ್ತುಗಳು ಕಟ್ಟುವುದಕ್ಕೆ ತಗಲುವ ವೆಚ್ಚ [ಸಿಮೆಂಟ್, ಸ್ಟೀಲ್, ಎತ್ತುಕ(lift)] ಲಾಬವನ್ನು ಕಡಿಮೆ ಮಾಡುವವು ಎಂಬುದು ಬಲ್ಲವರ ಅನಿಸಿಕೆ. ಈ ಹಿನ್ನೆಲೆಯಲ್ಲಿ, ಮಾಡುವ ಕರ‍್ಚಿಗೆ ಹೆಚ್ಚು ಲಾಬವನ್ನು ತಂದು ಕೊಡಬಹುದಾದ ಎತ್ತರ ಎಂದರೆ 63 ಮಹಡಿಗಳು ಎಂದು ಹೇಳಲಾಗುತ್ತದೆ. ಜಗತ್ತಿನ ಅತಿ ಎತ್ತರದ ಕಟ್ಟಡ ಕಟ್ಟುವವರು ಮತ್ತು ಕಟ್ಟುತ್ತಿರುವವರು, ಹೂಡಿದ ಹಣದ ಮೇಲೆ ಬರುವ ಲಾಬವನ್ನು ಸರಿಯಾಗಿ ಅಂದಾಜಿಸಿದೇ ದುಡುಕುತ್ತಿದ್ದಾರೆ ಎಂಬ ಮಾತುಗಳೂ ಇವೆ. ಇಂತ ದೊಡ್ಡ ಕಟ್ಟಡಗಳು ಹಣಕಾಸಿನ ಆಯಾಮದಿಂದ ಕೆಲವೊಮ್ಮೆ ಗಳಿಕೆಯಲ್ಲಿ ಹಿಂದೆ ಬೀಳುತ್ತಿದ್ದರೂ, ಎತ್ತರದ ಕಟ್ಟಡ ನಮ್ಮದಾಗಲಿ ಎಂಬ ಹೆಗ್ಗಳಿಕೆಗೋಸ್ಕರ ಕಟ್ಟಿರುವುದೂ ಇದೆಯಂತೆ!

“ಮೊದಲಿಗೆ, ವಹಿವಾಟುಗಳ ಹಿಗ್ಗನ್ನು ಅತವಾ ಉಬ್ಬರವನ್ನು (boom) ತೋರಿದರೂ, ಅದನ್ನು ದೊಡ್ಡ ಮಟ್ಟದ ಹಿಂಜರಿತ ಅತವಾ ಮುಗ್ಗಟ್ಟಿನೊಂದಿಗೆ ಕೊನೆಗೊಳಿಸುವವು ಈ ಕಟ್ಟಡಗಳು” ಎಂಬ ಕಳಂಕ ಎತ್ತರದ ಕಟ್ಟಡಗಳಿಗಿದೆ. ಉಬ್ಬರ ಮತ್ತು ಹಿಂಜರಿತದ ಸುತ್ತಿನ(cycle) ಮೊದಲನ್ನು ಈ ಎತ್ತರದ ಕಟ್ಟಡಗಳು ತೋರುತ್ತವೆ ಎಂದು ಹೇಳಲಾಗುತ್ತದೆ. ಇದುವರೆಗೂ ಈ ವಾದವನ್ನು ಸರಿಯಾಗಿ ಒರೆಗೆ ಹಚ್ಚಿ ನೋಡುವ ಕೆಲಸವಾಗಿರಲಿಲ್ಲ. ಅಮೆರಿಕಾದ ರಟ್ಜರ್ ಯುನಿವರ‍್ಸಿಟಿಯ ಬಾರ್, ಬ್ರೂಸ್ ಮಿಜ್ರಾಚ್ ಮತ್ತು ಕುಸುಮ್ ಮುಂದ್ರಾ ಎಂಬ ಪ್ರೊಪೆಸರ್ ಗಳು, ಲಾರೆನ್ಸ್ ಅವರ ಗಮನಿಕೆಗಳನ್ನು ಒರೆಗೆ ಹಚ್ಚುವ ಕೆಲಸ ಮಾಡಿದ್ದಾರೆ. ಅದಕ್ಕಾಗಿ ಬೇರೆ ಬೇರೆ ನಾಡುಗಳಲ್ಲಿ ಕಟ್ಟಿದ್ದ 311 ಎತ್ತರದ ಕಟ್ಟಡಗಳ ಕಟ್ಟುವಿಕೆಯ ಬಗ್ಗೆ ಮಾಹಿತಿ ಕಲೆ ಹಾಕಿ ಕೆಲವು ಅಂಶಗಳನ್ನು ಕಂಡುಕೊಂಡಿದ್ದಾರೆ. ಅವೇನೆಂದರೆ, ಕಟ್ಟಡಗಳನ್ನು ಕಟ್ಟುವ ಹಮ್ಮುಗೆಗಳು ಹಣಕಾಸಿನ ಸನ್ನಿವೇಶಗಳು ಚೆನ್ನಾಗಿರುವಾಗ ಹಾಕಿಕೊಂಡು ಶುರು ಮಾಡಿರುವ ಕೆಲಸಗಳಾಗಿರುತ್ತವೆ. ಆದರೆ ಅತಿ ಎತ್ತರದ ಕಟ್ಟಡಗಳನ್ನು ಕಟ್ಟಲು ಕಡಿಮೆ ಎಂದರೂ ಐದಾರು ವರುಶಗಳು ತಗಲುತ್ತವೆ. ಐದಾರು ವರುಶ ಎಂದರೆ ಕಡಿಮೆ ಸಮಯವಲ್ಲದಾಗಿರುವುದರಿಂದ, ಮಾರುಕಟ್ಟೆಯಲ್ಲಿ ಹೊಸ ಹೊಸ ಬೆಳವಣಿಗೆಗಳು ಆಗುವ ಸಾದ್ಯತೆಯೇ ಹೆಚ್ಚಿರುತ್ತದೆ. ಮುಗಿಲೆತ್ತರದ ಕಟ್ಟಡಗಳ ಕಟ್ಟುವಿಕೆ ಮುಗಿಯುವ ಹೊತ್ತಿಗೆ ಬದಲಾದ ಸನ್ನಿವೇಶಗಳು, ಹಿಂಜರಿತ ಅತವಾ ಮುಗ್ಗಟ್ಟಿನ ಕಳಂಕವನ್ನು ಎತ್ತರದ ಕಟ್ಟಡಗಳಿಗೆ ದಾಟಿಸುವವು ಎಂಬುದು ಅವರು ತಮ್ಮ ಅರಕೆಯಲ್ಲಿ ಕಂಡುಕೊಂಡಿದ್ದಾರೆ. ಆದರಿಂದ ಎತ್ತರದ ಕಟ್ಟಡಗಳನ್ನು ಕಟ್ಟುವುದು ಹಣಕಾಸಿನ ಸ್ತಿತಿಗೆ ಕೇಡು ಮಾಡುವವು ಎಂಬ ವಾದದಲ್ಲಿ ಅಶ್ಟೊಂದು ಹುರಳಿಲ್ಲ ಎಂಬ ಅನಿಸಿಕೆ ಆ ಪ್ರೊಪೆಸರ್ ಗಳದ್ದು.

( ಚಿತ್ರಸೆಲೆ : edition.cnn.com, economist.com )

( ಮಾಹಿತಿ ಸೆಲೆ : csmonitor.comeconomist.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: