ಯೆಮೆನ್ ನಾಡಿನ ತಿಕ್ಕಾಟದ ಹಿನ್ನೆಲೆಯೇನು?

– ಅನ್ನದಾನೇಶ ಶಿ. ಸಂಕದಾಳ.

Yemen_war_detailed_map

ಅರಬ್ ಜಗತ್ತಿನಲ್ಲಿ ನಡೆಯುತ್ತಿರುವ ನಡಾವಳಿಗಳು ಸದ್ಯಕ್ಕೆ ಎಲ್ಲರ ಗಮನವನ್ನು ಸೆಳೆದಿವೆ. ಒಂಬತ್ತು ಅರಬ್ ನಾಡುಗಳು ಒಟ್ಟುಗೂಡಿ ಯೆಮೆನ್ ನಾಡಿನ ಮೇಲೆ ನಡೆಸುತ್ತಿರುವ ದಾಳಿಗಳೇ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿರುವುದು. ಯೆಮೆನ್ ಮೇಲೆ ‘ಆಪರೇಶನ್ ಡಿಸೈಸಿವ್ ಸ್ಟಾರ‍್ಮ್’ ಎಂಬ ಹೆಸರಿನಡಿ ನಡೆಯುತ್ತಿರುವ ಈ ದಾಳಿಗಳು, ಯೆಮೆನನ್ನು ತಮ್ಮ ಹಿಡಿತಕ್ಕೆ ಪಡೆಯಲು ಪ್ರಯತ್ನಿಸುತ್ತಿರುವ ‘ಹೌತಿ’ ಎಂಬ ಗುಂಪನ್ನು ಹಿಮ್ಮೆಟ್ಟಿಸುವ ಸಲುವಾಗಿದೆ. ಈ ದಾಳಿಯಲ್ಲಿ ಈಗಾಗಲೇ ಹಲವಾರು ಮಂದಿ ಸಾವನ್ನಪ್ಪಿದ್ದಾರೆ. ಅರೇಬಿಯನ್ ಪೆನನ್ಸುಲಾದ ತೆಂಕಣ ಬಾಗವನ್ನು ‘ಅರೇಬಿಯಾ ಪೆಲಿಕ್ಸ್’ ಎಂದು ಲ್ಯಾಟಿನ್ ನುಡಿಯಲ್ಲಿ ಕರೆಯಲಾಗುತ್ತದೆ. ಅಂದರೆ ‘ನೆಮ್ಮದಿಯ ಅರೇಬಿಯಾ’ ಎಂದದರ ಹುರುಳು. ಯೆಮೆನ್ ನಾಡು ಅರೇಬಿಯನ್ ಪೆನನ್ಸುಲಾದ ತೆಂಕಣಕ್ಕೇ ಇದ್ದು, ಈಗ ನಡೆಯುತ್ತಿರುವ ದಾಳಿಗಳಿಂದ ಆ ನೆಮ್ಮದಿಯನ್ನು ಕಳೆದುಕೊಂಡಿದೆ.

ಮುಸ್ಲಿಂ ದರ‍್ಮದಲ್ಲಿನ ಎರಡು ದೊಡ್ಡ ಪಂಗಡಗಳು – ಶಿಯಾ ಮತ್ತು ಸುನ್ನಿ. ಈ ಎರಡು ಪಂಗಡಕ್ಕೆ ಸೇರಿದ ಮಂದಿಯ ನಡುವೆ ಜಗಳಗಳು ಹಿಂದಿನಿಂದಲೂ ಇವೆ. ಇದೇ ವಿಶಯವಾಗಿ ಸೌದಿ ಅರೇಬಿಯಾ ಮತ್ತು ಇರಾನ್ ನಾಡುಗಳ ನಡುವೆ ತಿಕ್ಕಾಟವೂ ಇದೆ. ಸುನ್ನಿಗಳ ಬೆಂಬಲಕ್ಕೆ ಸೌದಿಯವರಿದ್ದರೆ, ಶಿಯಾಗಳ ಬೆಂಬಲಕ್ಕೆ ಇರಾನ್ ನವರಿದ್ದಾರೆ ಎಂದು ಹೇಳಲಾಗುತ್ತದೆ. ‘ಹೌತಿ’ ಗುಂಪಿನಲ್ಲಿರುವವರು, ಶಿಯಾ ಮುಸ್ಲಿಂ ದರ‍್ಮದ ನೆಲೆ ಮೇಲೆ ಹುಟ್ಟಿದ ‘ಜೈದಿ’ ಎಂಬ ಪಂಗಡಕ್ಕೆ ಸೇರಿದವರು. “ಹೌತಿಯರಿಗೆ ಇರಾನಿನ ಕುಮ್ಮಕ್ಕು ಇರುವುದರಿಂದಲೇ, ಅವರು ಯೆಮೆನ್ ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗಿದ್ದಾರೆ” ಎಂಬುದು ಸೌದಿ ಅರೇಬಿಯಾದವರ ದೂರಾಗಿದೆ. ಆದರೆ ಯೆಮೆನ್ ನಲ್ಲಿ ಶಿಯಾ ಮತ್ತು ಸುನ್ನಿಗಳ ನಡುವಿನ ತಿಕ್ಕಾಟಗಳು ಅಶ್ಟು ಹೆಚ್ಚಾಗಿ ಕಂಡು ಬಂದಿಲ್ಲದಿರುವುದರಿಂದ, ಇರಾನ್ ಮೇಲಿನ ಆರೋಪವನ್ನು ಅಶ್ಟಾಗಿ ಒಪ್ಪಲಾಗದೆಂದೇ ಹೇಳಲಾಗುತ್ತಿದೆ.

ಹೌತಿ ಮತ್ತು ಯೆಮೆನ್ ಆಡಳಿತದ ನಡುವಿನ ತಿಕ್ಕಾಟ 2004 ರಿಂದ ಶುರುವಾಯಿತು. ಜೈದಿ ಪಂಗಡದ ಕಟ್ಟಲೆಗಳನ್ನು ತರಲೆಂದೇ yemen mapಹೌತಿಯವರು, ಆಳ್ವಿಕೆಯಲ್ಲಿರುವ ಸರಕಾರವನ್ನು ಕಿತ್ತೊಗೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಯೆಮೆನ್ ಸರಕಾರದ ಆರೋಪವಾಗಿತ್ತು. ತಮ್ಮ ಪಂಗಡವನ್ನು ಸರಿಯಾಗಿ ನಡೆಸಿಕೊಳ್ಳದೇ, ಅದನ್ನು ಹತ್ತಿಕ್ಕುವ ಕೆಲಸ ಯೆಮೆನ್ ಸರಕಾರದಿಂದಾಗುತ್ತಿದೆ ಎಂಬುದು ಹೌತಿಯವರ ನಂಬಿಕೆ. ಅದು ಅವತ್ತಿನಿಂದ ಇವತ್ತಿನವರಿಗೂ ಮುಂದುವರೆಯುತ್ತಾ ಬಂದಿದೆ. ಈ ತಿಕ್ಕಾಟದಲ್ಲಿ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 2014 ರ ಆಗಸ್ಟ್ ನಲ್ಲಿ ಉರುವಲುಗಳ ಮೇಲೆ ಕೊಡುತ್ತಿದ್ದ ಸಬ್ಸಿಡಿಯನ್ನು ಯೆಮೆನ್ ಸರಕಾರ ಹಿಂಪಡೆಯಿತು. ಜನರು ಉರುವಲುಗಳಿಗೆ ಹೆಚ್ಚು ಬೆಲೆ ಕೊಡುವ ಹಾಗೆ ಮಾಡಿದ ಸರಕಾರದ ಈ ನಡೆ ಅಲ್ಲಿನ ಮಂದಿಯನ್ನು ಕೆರಳಿಸಿತು. ಅದನ್ನೇ ಮುಂದಿಟ್ಟುಕೊಂಡು ಹೌತಿ ಗುಂಪಿನವರು ದಂಗೆಯೆದ್ದು ಸರಕಾರದ ಜೊತೆ ಜಗಳಕ್ಕಿಳಿದಿದ್ದಾರೆ. ಯೆಮೆನ್ ನ ರಾಶ್ಟ್ರಪತಿಯವರು ರಾಜೀನಾಮೆ ಕೊಡುವ ಹಾಗೆ ಮಾಡಿ ಸರಕಾರವನ್ನು ತಮ್ಮ ಹಿಡಿತಕ್ಕೆ ಪಡೆದು ಕೊಳ್ಳುವಲ್ಲೂ ಕೂಡ ತಕ್ಕ ಮಟ್ಟಿನ ಗೆಲುವನ್ನು ಕಂಡಿದ್ದಾರೆ. ಸದ್ಯಕ್ಕೆ ಯೆಮೆನ್ ನ ರಾಜದಾನಿಯಾದ ‘ಸನಾ’ ನಗರವನ್ನು ಹೌತಿಯವರು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈಗ ನಡೆಯುತ್ತಿರುವ ದಾಳಿಯಲ್ಲಿ ಸೌದಿ ಮತ್ತು ಅದರ ಗೆಳೆಯ ನಾಡುಗಳನ್ನು ಅಮೇರಿಕಾ ಬೆಂಬಲಿಸುತ್ತಿದ್ದು, ಅದಕ್ಕಾಗಿ ಎರಡು ಕಾರಣಗಳನ್ನು ನೀಡುತ್ತಿದೆ. ಮೊದಲನೆಯದಾಗಿ, ನಾಡುಗಳ ಗಡಿ ಮೀರಿ ಬೆಳೆಯುತ್ತಿರುವ ಅಲ್-ಕೈದಾ ದಿಗಿಲುಕೋರರ ಕೂಟ, ಯೆಮೆನ್ ನಲ್ಲೂ ತಮ್ಮ ಹರವು ಹೆಚ್ಚಿಸಿಕೊಳ್ಳುತ್ತಿರುವುದು. ಎರಡನೆಯದು, ಲೆಬನಾನಿನಲ್ಲಿ, ತಾವು ‘ಅಲ್ಲಾನ ಪಂಗಡ’ ವೆಂದೇ ಕರೆದುಕೊಳ್ಳುತ್ತಾ, ಕೊನೆಗೆ ರಾಜಕೀಯ ಪಂಗಡವಾಗಿ ಬೆಳೆದ ‘ಹಿಜಬುಲ್ಲಾ’ ದಿಗಿಲುಕೋರರ ಕೂಟದ ಬೆಳವಣಿಗೆ. ಇರಾನ್ ರವರಿಗೆ ಶಿಯಾ ಮುಸ್ಲಿಮರ ಮೇಲಿರುವ ಒಲವನ್ನೇ ಬಂಡವಾಳವಾಗಿಟ್ಟುಕೊಂಡು, ಹೌತಿಯವರು ಹಿಜಬುಲ್ಲಾದವರ ಹಾಗೆಯೇ ಬೆಳೆಯಬಹುದು ಎಂದು ಅಮೇರಿಕಾದವರ ಕಳವಳ.

ಸೌದಿ ಮತ್ತು ಅದರ ಗೆಳೆಯ ನಾಡುಗಳ ಕೂಟ ಸುಮಾರು ದಿನಗಳಿಂದ ನಡೆಸುತ್ತಿರುವ ಈ ದಾಳಿಯನ್ನು ಯಾವಾಗ ಕೊನೆಗೊಳಿಸುವರು ಎಂದು ಎಲ್ಲಾ ನಾಡುಗಳು ಎದುರು ನೋಡುತ್ತಿವೆ. ಈ ಜಗಳವನ್ನು ನಿಲ್ಲಿಸಿ ಒಪ್ಪಂದಕ್ಕೆ ಮುಂದಾಗುವಂತೆ ಸೌದಿ ಅರೇಬಿಯಾ ಮತ್ತು ಯೆಮೆನ್ ಮೇಲೆ ವಿಶ್ವಸಂಸ್ತೆಯಿಂದ ಒತ್ತಡ ಹೆಚ್ಚುತ್ತಿದೆ. ಸೌದಿಯ ರಾಜದಾನಿಯ ರಿಯಾದ್ ನಲ್ಲಿ, ವಿಶ್ವಸಂಸ್ತೆಯ ಮೂಲಕ ಈ ಬಗ್ಗೆ ಹೊಂದಾಣಿಕೆಯ ಮಾತುಕತೆಯಾಗಲಿ ಎಂಬ ಸೌದಿಯವರ ನೀಡಿಕೆಗೆ (proposal) ಹೌತಿ ಗುಂಪು ಒಪ್ಪುತ್ತಿಲ್ಲ. ಈ ಹಿಂದೆ ಯೆಮೆನ್ ನ ಪ್ರದಾನ ಮಂತ್ರಿಯಾಗಿದ್ದ ಕಲೀದ್-ಅಲ್-ಬಹಾ ಎಂಬುವರು ಈ ಎಲ್ಲಾ ತಿಕ್ಕಾಟಕ್ಕೆ ಕೊನೆ ಹಾಡಿ ಯೆಮೆನ್ ನನ್ನು ಮತ್ತೆ ಒಗ್ಗೂಡಿಸಬಲ್ಲರು ಎಂದು ಹೇಳಲಾಗುತ್ತಿದೆ. ಆದರೆ ಸದ್ಯಕ್ಕೆ ಮುಂದಿನ ಬೆಳವಣಿಗೆಗಳು ಪ್ರಶ್ನೆಯಾಗಿಯೇ ಉಳಿದಿವೆ. ಯೆಮೆನ್ ಮರಳಿ ಸಹಜ ಸ್ತಿತಿಗೆ ಬರಲು ಇನ್ನೆಶ್ಟು ದಿನ ಹಿಡಿಯುತ್ತದೆ ಎಂದು ಕಾದು ನೋಡಬೇಕಿದೆ.

( ಚಿತ್ರಸೆಲೆ : wikimedia.orgsocotraisland.com )

( ಮಾಹಿತಿ ಸೆಲೆ : economist.com, wiki-Houthis, wiki-Zaidiyyah, wiki-Hezbollahwiki-HouthiInsurgencywiki-militaryintervention)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 22/05/2015

    […] ಈ ನಡಾವಳಿಗಳ ಬಗ್ಗೆ ಈ ಹಿಂದೆ ಬರೆಯಲಾಗಿದೆ. ಮುಸ್ಲಿಂ ದರ‍್ಮದ ಎರಡು ದೊಡ್ಡ ಪಂಗಡಗಳಾದ […]

ಅನಿಸಿಕೆ ಬರೆಯಿರಿ: