ಡೀಸೆಲ್ ಕಾರ್ ಒಳ್ಳೆಯದಾ ಇಲ್ಲಾ ಪೆಟ್ರ‍ೋಲ್ ಕಾರ್?

 – ಜಯತೀರ‍್ತ ನಾಡಗವ್ಡ.

diesel_petrol

ಈಗಂತೂ ಈ-ಕಾಮರ‍್ಸ್ ನ ಕಾಲ. ಎಲ್ಲವೂ ಮನೆಯಲ್ಲಿ ಕುಳಿತುಕೊಂಡು ಕೊಳ್ಳಬಹುದು. ಇಂದಿನ ದಿನಗಳಲ್ಲಿ ಯಾವುದೇ ವಸ್ತು ಕೊಳ್ಳಲು ಮಾರುಕಟ್ಟೆಗೆ ಹೋದರೆ ಹತ್ತಾರು ಆಯ್ಕೆಗಳು ನಮ್ಮ ಮುಂದೆ ಬರುತ್ತವೆ. ಹಲ್ಲುಜ್ಜುವ ಬ್ರಶ್ ನಿಂದ ಹಿಡಿದು ಹಾರಾಡುವ ಬಾನೋಡಗಳವರೆಗೆ ಆಯ್ಕೆಗಳು ಸಾಕಶ್ಟು. ಕಾರು ಮಾರುಕಟ್ಟೆ ಇದಕ್ಕಿಂತ ಬೇರೆಯಾಗಿಲ್ಲ. ವಿವಿದ ಗಾತ್ರ, ಆಕಾರ, ಬಣ್ಣಗಳಲ್ಲಿ ಬರುವ ಬಂಡಿಗಳಲ್ಲಿ ಹಲವು ಬಗೆಯ ಆಯ್ಕೆಗಳಿರುತ್ತವೆ.

ಆಯ್ಕೆಗಳು ಹೆಚ್ಚಿದಶ್ಟು ಯಾವುದನ್ನು ಕೊಂಡುಕೊಳ್ಳಬೇಕು ಎಂಬ ತಲೆನೋವು ಅಶ್ಟೆ ಹೆಚ್ಚುತ್ತದೆ. ಇಂತ ಹೊತ್ತಿನಲ್ಲಿ ನಮ್ಮ ಬಳಕೆ, ನಾವು ಕೊಡುವ ಬೆಲೆಗೆ ತಕ್ಕಂತೆ ಕಾರನ್ನು ಆಯ್ದುಕೊಳ್ಳಬೇಕಾಗುತ್ತದೆ. ಇನ್ನೂ ಹೆಚ್ಚಿನ ಮಂದಿಗೆ ತಲೆನೋವೆಂದರೆ ಡೀಸೆಲ್ ಬಿಣಿಗೆಯ (engine) ಕಾರು ಕೊಳ್ಳಬೇಕೆ ಇಲ್ಲವೇ ಪೆಟ್ರೋಲ್ ಬಿಣಿಗೆಯದ್ದೇ? ನಮ್ಮ ನಾಡಿನಲ್ಲಿ ಕಾರುಕೊಳ್ಳುಗರ ಮನದಲ್ಲಿ ಉಂಟಾಗುವ ಮೊದಲ ಕೇಳ್ವಿಯೇ ಇದು ಎಂದರೆ ತಪ್ಪಲ್ಲ. ಅವರಿವರ ಮಾತುಕೇಳಿ ಕಾರು ಕೊಂಡ ಮೇಲೆ ಇದು ನನ್ನ ಬೇಡಿಕೆಗೆ ತಕ್ಕಂತಿಲ್ಲ, ಯಾಕಾದರೂ ಇದನ್ನು ಕೊಂಡೇ ಎನ್ನುವ ಗೊಂದಲ ಹಲವರಿಗೆ ಆಗಿರಬಹುದು. ಡೀಸೆಲ್ ಇಲ್ಲವೇ ಪೆಟ್ರೋಲ್ ಬಂಡಿ ಎರಡರಲ್ಲಿ ಯಾವುದು ಸರಿ? ಯಾವುದು ನಮ್ಮ ಬಳಕೆಗೆ ತಕ್ಕುದಾಗಿದೆ? ಈ ಕೇಳ್ವಿಗಳಿಗೆ ಹೇಳ್ವಿಗಳನ್ನು ನೀಡುತ್ತ ನಿಮ್ಮ ಆಯ್ಕೆ ಸರಳಗೊಳಿಸಲು ಈ ಬರಹ.

ಡೀಸೆಲ್ ಹಾಗೂ ಪೆಟ್ರೋಲ್ ಬಿಣಿಗೆಗಳಲ್ಲಿ ಹಲವು  ಬೇರ‍್ಮೆಗಳಿವೆ. ಕೆಲಸ ಮಾಡುವ ಬಗೆಗೆ ತಕ್ಕಂತೆ ಡೀಸೆಲ್-ಪೆಟ್ರೋಲ್ ಬಿಣಿಗೆಗಳು ಕೆಲವು ಅನುಕೂಲ ನೀಡಿದರೆ ಕೆಲವು ಕೊರತೆಗಳನ್ನು ಹೊಂದಿವೆ. ಈ ನಿಟ್ಟಿನಲ್ಲಿ ಡೀಸೆಲ್ ಹಾಗೂ ಪೆಟ್ರೋಲ್ ಬಿಣಿಗೆಗಳ ನಡುವಣ ಬೇರ‍್ಮೆಯನ್ನು ಮೊದಲು ತಿಳಿದುಕೊಳ್ಳುವುದು ಒಳ್ಳೆಯದು. ಈ ಕೆಳಗೆ ಬೇರ‍್ಮೆಗಳನ್ನು ಪಟ್ಟಿ ಮಾಡಲಾಗಿದೆ.

Engine_diesel_petrol_comparision

ಮೇಲ್ನೋಟಕ್ಕೆ ಪೆಟ್ರೋಲ್ ಬಂಡಿಗಳು ಬಲು ಅಗ್ಗ. ಕಾರಣ ಅದರ ಬಿಣಿಗೆ ಅಗ್ಗ, ಇದರಲ್ಲಿ ತೊಡಕಿನ ಉರುವಲು ಚಿಮ್ಮುವ ಏರ‍್ಪಾಟು (fuel injection system) ಬೇಕಾಗಿಲ್ಲ. ಪೆಟ್ರೋಲ್ ಉರುವಲಿಗೆ ಹೋಲಿಸಿದಾಗ ಡೀಸೆಲ್ ಉರುವಲು ಕಡಿಮೆ ಕುಗ್ಗುವಿಕೆಯ ಬಲ ಹೊಂದಿದೆ. ಹಾಗಾಗಿ ಡೀಸೆಲ್ ಉರುವಲು ತನ್ನಿಂದ ತಾನಾಗಿ ಕುಗ್ಗಿಸಲ್ಪಟ್ಟು ಹೊತ್ತಿಯುರಿದು ಬಿಣಿಗೆಗೆ ಬಲ ನೀಡಿದರೆ ಪೆಟ್ರೋಲ್ ಕಿಡಿಬೆಣೆಯ ಮೂಲಕ ಹೊತ್ತಿಯುರಿದು ಬಲ ನೀಡುತ್ತದೆ. ಹಾಗಾಗಿ ಡೀಸೆಲ್ ಬಿಣಿಗೆಗಳಿಗೆ ತೊಡಕಿನ ಉರುವಲು ಚಿಮ್ಮುವ ಏರ‍್ಪಾಟಿನ ಅಗತ್ಯವಿರುತ್ತದೆ. ಇದು ಡೀಸೆಲ್ ಬಿಣಿಗೆಗಳ ಬೆಲೆ ಹೆಚ್ಚಿರಲು ಕಾರಣಗಳಲ್ಲೊಂದು.

ನಮ್ಮ ಹೋಲಿಕೆಯನ್ನು ಮತ್ತಶ್ಟು ತಿಳಿಗೊಳಿಸಲು ಈ ಎತ್ತುಗೆ ನೋಡೊಣ. ನೀವು 1.5 ಲೀಟರ್ 4 ಉರುಳೆಗಳ ಡೀಸೆಲ್ ಬಿಣಿಗೆಯ ಕಾರೊಂದನ್ನು ಹೆಚ್ಚು ಕಡಿಮೆ ಅದೇ ಅಳತೆಯ ಪೆಟ್ರೋಲ್ ಕಾರಿಗೆ ಹೋಲಿಸಿದಿರಿ ಎನ್ನೋಣ. ಸಾಮಾನ್ಯವಾಗಿ ಪೆಟ್ರೋಲ್ ಮಾದರಿ ನಿಮಗೆ 5 ರಿಂದ 5.2 ಲಕ್ಶ ಬೆಲೆಗೆ ದೊರೆತರೆ, ಅದೇ ಡೀಸೆಲ್ ಮಾದರಿ ಸುಮಾರು 6.5 ರಿಂದ 6.8 ಲಕ್ಶ ಬೆಲೆ ಹೊಂದಿರುತ್ತದೆ. ವರುಶಕ್ಕೆ ನೀವು ಸುಮಾರು 10 ಸಾವಿರ ಕಿಲೋಮೀಟರ್ ಓಡಾಡುತ್ತಿರಿ ಅಂದುಕೊಳ್ಳಿ. ಡೀಸೆಲ್ ಕಾರು ಪ್ರತಿ ಲೀಟರ್ ಉರುವಲಿಗೆ 15 ಕಿ.ಮೀ ಓಡುತ್ತದೆ, ಅದೇ ಪೆಟ್ರೋಲ್ ಕಾರು 12 ಕಿ.ಮೀ ಓಡುತ್ತದೆ ಎಂದಿಟ್ಟುಕೊಳ್ಳಿ.

ಪ್ರತಿ ವರುಶ ನಿಮಗೆ 10000/15=667 ಲೀಟರ್ ಡೀಸೆಲ್ ಉರುವಲು ಬೇಕು, ಪೆಟ್ರೋಲ್ ಬಿಣಿಗೆ ಕೊಂಡರೆ 10000/12=833 ಲೀಟರ್ ಪೆಟ್ರೋಲ್ ತಗುಲುತ್ತದೆ.

ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಗೆ ತಕ್ಕಂತೆ ಒಂದು ವರುಶಕ್ಕೆ ನೀವು (667*52=34684) ಸುಮಾರು 35000 ರೂಪಾಯಿಗಳು ಡೀಸೆಲ್ ಗಾಗಿ ಮತ್ತು (833*66=54978) ಸುಮಾರು 55000 ರೂಪಾಯಿಗಳು ಪೆಟ್ರೋಲ್ ಗಾಗಿ ಕರ‍್ಚು ಮಾಡುವಿರಿ.

ನೀವು ಕೊಂಡುಕೊಂಡ ಕಾರು 8 ವರುಶಗಳವರೆಗೆ ಬಳಸಿದರೆ ಉರುವಲಿಗೆಂದೆ ತಗಲುವ ವೆಚ್ಚ ಇಂತಿರುತ್ತದೆ,

35000*8=280000 ರೂ.ಗಳು (ಡೀಸೆಲ್)
55000*8=440000 ರೂ.ಗಳು (ಪೆಟ್ರೋಲ್)

ಈ ಮೇಲೆ ತಿಳಿಸಿದಂತೆ ಡೀಸೆಲ್ ಕಾರಿನ ಬೆಲೆ ಪೆಟ್ರೋಲ್ ಮಾದರಿಗಿಂತ ಒಂದುವರೆ, ಒಂದು ಕಾಲು ಲಕ್ಶ ಹೆಚ್ಚಾಗಿದ್ದರೂ ಉರುವಲಿಗೆ ತಗಲುವ ವೆಚ್ಚ ಹೋಲಿಸಿದರೆ ಯಾವುದೇ ಅಂತರ ಕಂಡು ಬರುವುದಿಲ್ಲ. ಹೀಗಾಗಿ ಡೀಸೆಲ್ ಕಾರಿನ ಬೆಲೆ ಪೆಟ್ರೋಲ್ ಗಿಂತ ಹೆಚ್ಚೆನಿಸದರೂ ಬಳಸುವ ವೆಚ್ಚದಲ್ಲಿ ಅದು ಕಡಿಮೆಯಾಗಿ ಲೆಕ್ಕಾಚಾರ ಸಮವಾಗಿರುತ್ತದೆ.

ಮತ್ತೊಂದು ಪ್ರಮುಕ ಬೇರ‍್ಮೆ ಎಂದರೆ ಡೀಸೆಲ್ ಬಿಣಿಗೆ ಪ್ರತಿ ಲೀಟರ್ ಡೀಸೆಲ್ ಗೆ ಹೆಚ್ಚಿನ ಮಯ್ಲಿ ಓಡುತ್ತದೆ. ಇದರಿಂದ ಡೀಸೆಲ್ ಬಿಣಿಗೆಯ ಕಾರುಗಳು ಹಲವರಿಗೆ ಮೆಚ್ಚುಗೆ ಎನಿಸುತ್ತವೆ. ಪ್ರತಿ ಲೀಟರ್ ಉರುವಲಿಗೆ ಡೀಸೆಲ್ ಕಾರು ಓಡುವ ಮಯ್ಲಿ ಹೆಚ್ಚಿದ್ದರೂ ಕಾರಿನ ಬೆಲೆ ಅದನ್ನು ಸರಿದೂಗಿಸುತ್ತದೆ ಎಂಬುದು ಮೇಲಿನ ಎತ್ತುಗೆಯಲ್ಲಿ ನೋಡಬಹುದು. ಕಲಬುರಗಿ, ಬೆಳಗಾವಿ, ಮಂಗಳೂರು, ಬೆಂಗಳೂರು ಮುಂತಾದ ದೊಡ್ಡ ಊರುಗಳಲ್ಲಿ ದಿನದ ಕೆಲಸಕ್ಕಾಗಿ ಓಡಾಡಲು ಬಳಕೆ ಮಾಡುವವರಿದ್ದರೆ ಕಡಿಮೆ ಸದ್ದಿನ ಪೆಟ್ರೋಲ್ ಕಾರು ತಕ್ಕದು ಎನ್ನಿಸಬಹುದು. ಯಾಕೆಂದರೆ ನಿಮ್ಮ ಓಡಾಟ ಒಂದೇ ಊರಿನಲ್ಲಿ ಹೆಚ್ಚಿರುತ್ತದೆ ಅಲ್ಲದೇ ದೊಡ್ಡ ಊರುಗಳಲ್ಲಿ ಒಯ್ಯಾಟದ ದಟ್ಟಣೆಯೂ ಇರುವುದರಿಂದ ಪೆಟ್ರೋಲ್ ಕಾರಿನ ಬಳಕೆ ಇಲ್ಲಿ ಸುಲಬ. ದೊಡ್ಡ ಊರುಗಳಲ್ಲಿ ಪ್ರಮುಕ ಕಾರು ಕೂಟಗಳ ನೆರವುತಾಣಗಳೂ ಎಲ್ಲೆಡೆ ಹರಡಿಕೊಂಡಿರುವುದರಿಂದ ಕಾರು ಕೆಟ್ಟು ನಿಂತಾಗ ಇಲ್ಲವೇ ಯಾವುದೇ ನೆರವು ಬೇಕೆಂದಾಗ ಸಾಕಶ್ಟು ದೂರ ಹೋಗಬೇಕಿಲ್ಲ.

ಇನ್ನು ನೀವು ಚಿಕ್ಕ ಪುಟ್ಟ ಊರುಗಳಲ್ಲಿ ನೆಲೆಗೊಂಡು ದಿನದ ಓಡಾಟಕ್ಕೆ, ಹೊಲಗದ್ದೆ ತೋಟಕ್ಕೆ ಇಲ್ಲವೇ ತಗ್ಗು ದಿನ್ನೆಗಳಿಂದ ಕೂಡಿರುವ ಒರಟು ರಸ್ತೆಗಳಲ್ಲಿ ಹೆಚ್ಚಾಗಿ ಸುತ್ತಾಡುತ್ತಿದ್ದರೆ ಡೀಸೆಲ್ ಕಾರು ತಕ್ಕದು. ಹೆಚ್ಚಿನ ತಿರುಗುಬಲ (torque) ಹೊಂದಿರುವ ಡೀಸೆಲ್ ಬಂಡಿ ಕಡಿದಾದ, ಸಾದಾರಣ ಮಟ್ಟದ ಬೀದಿಗಳಲ್ಲಿ ಸಾಗಲು ನೆರವಾಗುತ್ತದೆ. ಅಲ್ಲದೇ ಹೆಚ್ಚಿನ ಮಯ್ಲೇಜ್ ನೀಡುವ ಡೀಸೆಲ್ ದಿನದ 50 ಕಿ.ಮೀ.ಗಿಂತಲೂ ಹೆಚ್ಚಿನ ಓಡಾಟಗಳಿಗೆ ಒಳ್ಳೆಯದು. ಬಾಳಿಕೆಯಲ್ಲಿ ಒಳ್ಳೆಯ ಗುಣಮಟ್ಟ ಹೊಂದಿರುವ ಡೀಸೆಲ್ ಬಂಡಿಗಳು ಇಂತ ಒರಟು ಬಳಕೆಗೆ ಹೇಳಿ ಮಾಡಿಸಿದಂತಿವೆ. ಡೀಸೆಲ್ ಬಿಣಿಗೆಯ ಕಾರುಗಳು ಪದೇ ಪದೇ ನೆರವುತಾಣಗಳಿಗೆ ಕೊಂಡೊಯ್ಯಬೇಕಿಲ್ಲ. ಪೆಟ್ರೋಲ್ ಕಾರ‍್ಬಂಡಿಗಳಲ್ಲಿರುವ ಈ ಕೊರತೆ ನೀಗಿಸುತ್ತವೆ ಡೀಸೆಲ್ ಬಂಡಿಗಳು.

ಇಶ್ಟೆಲ್ಲ ತಿಳಿದರೂ ನಮ್ಮಲ್ಲಿ ಕೆಲವರು ಕಾರು ಕೊಂಡುಕೊಳ್ಳುವಲ್ಲಿ ಎಡುವುತ್ತಾರೆ, ಇಂತ ಸಂದರ‍್ಬದಲ್ಲಿ ನಮ್ಮ ಬಳಕೆ ಬಗ್ಗೆ ಒಂದು ಚಿಕ್ಕ ಹೊಂದಿಕೆಪಟ್ಟಿ(Check-list) ಮಾಡಿಕೊಂಡರೆ ಕೊಳ್ಳುವಿಕೆಗೆ ನೆರವಾಗುತ್ತದೆ.

1. ನಿಮ್ಮ ಓಡಾಟ ಹೇಗೆ ಎತ್ತ? ವರುಶಕ್ಕೆ ಎಶ್ಟು ಕಿ.ಮೀ ಸುತ್ತಾಡುವಿರಿ ಎಂಬ ಬಗ್ಗೆ ಒಂದು ಪುಟ್ಟ ಲೆಕ್ಕಾಚಾರ ಮಾಡಿಟ್ಟುಕೊಳ್ಳಿ. ದೊಡ್ಡ ಊರುಗಳಲ್ಲೇ ನಿಮ್ಮ ಸುತ್ತಾಟವೇ ಇಲ್ಲ ತಾಲೂಕು ಹಳ್ಳಿಗಳಲ್ಲಿ ನಿಮ್ಮ ಕಾರನ್ನು ಕೊಂಡೊಯ್ಯುವಿರೇ? ದೊಡ್ಡ ಊರುಗಳಿಗೆ ಪೆಟ್ರೋಲ್, ಚಿಕ್ಕ ಊರು, ಹಳ್ಳಿಗಳಿಗೆ ಡೀಸೆಲ್ ಹೆಚ್ಚು ಒಗ್ಗಿಕೊಳ್ಳುತ್ತವೆ ಅನ್ನಬಹುದು.

2. ನೀವು ಹೆಚ್ಚಿನ ಕಸುವುಳ್ಳ ಬಿಣಿಗೆಯ ಕಾರು ಓಡಿಸಲು ಇಶ್ಟ ಪಡುವಿರೇ ಇಲ್ಲವೇ ಹೆಚ್ಚಿನ ತಿರುಗುಬಲದ ಕಾರುಗಳತ್ತ ಒಲವೇ? ಹೆಚ್ಚಿನ ವೇಗ ಬೇಕೆಂದರೆ ಪೆಟ್ರೋಲ್, ಹೆಚ್ಚಿನ ತಿರುಗುಬಲ ಬೇಕೆಂದರೆ ಡೀಸೆಲ್ ಒಳ್ಳೆಯ ಆಯ್ಕೆಗಳು.

3. ನಿಮ್ಮ ಕಾರ‍್ಬಂಡಿ ನಿಮ್ಮ ಮನೆಯಲ್ಲಿ ಎಶ್ಟು ಜನ ಬಳಸುವರು? ಇದನ್ನು ಗಮನದಲ್ಲಿಡಿ. ಹೆಚ್ಚು ಮಂದಿಗಾಗಿ ಇರುವ ಬಂಡಿ ಬೇಕೆಂದರೆ ಡೀಸೆಲ್ ಒಳ್ಳೆಯದು.

4. ನೀವು ಕೊಂಡುಕೊಳ್ಳುವ ಕಾರಿನ ಬಿಣಿಗೆಯ ಅಳತೆ ಬಗ್ಗೆಯೂ ತಿಳಿದಿರಿ. ಬಿಣಿಗೆ ಅಳತೆ, ಆಕಾರಗಳಿಗೆ ತಕ್ಕಂತೆ ತೆರಿಗೆ ಮತ್ತು ಮುನ್ಗಾಪಿನ(Insurance) ಬೆಲೆ ನಿಗದಿಪಡಿಸಲಾಗಿರುತ್ತದೆ.

5. ಎಲ್ಲ ಕಾರು ಕೂಟದವರು ತಮ್ಮ ಕಾರು ಮಾದರಿಗಳ ಬಗ್ಗೆ ಮಿಂದಾಣದಲ್ಲಿ ವಿವರವಾಗಿ ನೀಡಿರುತ್ತಾರೆ. ಮಿಂದಾಣಕ್ಕೆ ಬೇಟಿ ನೀಡಿ ಅಗತ್ಯ ಮಾಹಿತಿ ತಿಳಿದುಕೊಳ್ಳಿ.

ಈ ಹೊಂದಿಕೆಪಟ್ಟಿ ಅಣಿಯಾದ ಮೇಲೆ ನಿಮ್ಮ ಆಯ್ಕೆಗೆ ತಕ್ಕ 3-4 ಮಾದರಿಗಳನ್ನು ವಿಚಾರಿಸಿ. ಈಗಂತೂ ಎಲ್ಲ ಬಂಡಿ ಮಾರಾಳಿಗರು ಕೊಳ್ಳುಗರಿಗೆ ಅನುವಾಗುವಂತೆ ಟೆಸ್ಟ್ ಡ್ರೈವ್ (Test drive) ಬಂಡಿ ನೀಡುತ್ತಿದ್ದು, ಕೊಳ್ಳುಗರು ಕಾರು ಓಡಿಸಿ ನೋಡಿ ನಂತರ ಕೊಳ್ಳಬಹುದು. ನೀವು ಆಯ್ಕೆ ಮಾಡಿದ 3-4 ಮಾದರಿಗಳ ಟೆಸ್ಟ್ ಡ್ರೈವ್ ಅನುಬವಿಸಿ ಸರಿಯಾದುದನ್ನು ಕೊಳ್ಳಬಹುದು.

ನೀವು ಪರಿಸರದ ಬಗ್ಗೆ ಕಾಳಜಿ ಹೊಂದಿದ್ದರೆ ನೀವು ಎಲ್.ಪಿ.ಜಿ. ಉರುವಲಿಂದ ಓಡಾಡುವ ಕಾರು ಕೊಳ್ಳಬಹುದು ಇವುಗಳು ಕಡಿಮೆ ಕೆಡುಗಾಳಿ (pollutants) ಉಗುಳುವುದರಿಂದ ವಾತಾವರಣ ಹಸನಾಗಿಡುತ್ತವೆ. ಸಿ.ಎನ್.ಜಿ. ಉರುವಲಿನ ಏರ‍್ಪಾಟು ಕರ‍್ನಾಟಕದಲ್ಲಿ ಸದ್ಯ ಪೂರ‍್ತಿಗೊಂಡಿಲ್ಲ ಹಾಗಾಗಿ ಇಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳ ಬಗ್ಗೆಯೇ ಹೆಚ್ಚಿನ ಮಾತುಕತೆ ನಡೆಸಲಾಗಿದೆ.

ಕೊನೆಯದಾಗಿ ಹೇಳಬೇಕೆಂದರೆ ಇತರ ಸಲಹೆ ಅನುಬವ ತಿಳಿಯುವುದು ತಪ್ಪೇನಿಲ್ಲ ಆದರೆ ನಿಮ್ಮ ಅನುಕೂಲ ಬಳಕೆ ಬಗ್ಗೆ ಯೋಚಿಸಿ ಮುಂದುವರೆದರೆ ಒಳ್ಳೆಯ ಕಾರೊಂದರ ಒಡೆಯ ನೀವಾಗುವುದರಲ್ಲಿ ಎರಡು ಮಾತಿಲ್ಲ.

(ತಿಟ್ಟ ಸೆಲೆಗಳು: distantdrumlin.wordpress.com, www.honestjohn.co.uk)

 

ನಿಮಗೆ ಹಿಡಿಸಬಹುದಾದ ಬರಹಗಳು

4 Responses

  1. ಬಹಳ ಚೆನ್ನಾಗಿ ಮೂಡಿಬಂದಿದೆ ನಿಮ್ಮ ಅಂಕಣ 🙂

  2. ಸಕತ್ ಬರಹ ಜಯತೀರ್ತ

  3. ನಿಮ್ಮ ಮೆಚ್ಚುಗೆಗೆ ನನ್ನಿ.@praveenthewriterinme & @kannadamaadhyama

  4. ನಿಮ್ಮ ಮೆಚ್ಚುಗೆಗೆ ನನ್ನಿ.

ಅನಿಸಿಕೆ ಬರೆಯಿರಿ:

%d bloggers like this: