ಬೇಸಿಗೆ ರಜೆಯ ಹೊತ್ತು

– ಬಸವರಾಜ್ ಕಂಟಿ.

The-Best-Summer-Desktop

ಬೇಸಿಗೆಯ ಮಳೆಗೆ ಅರಳಿ ನಿಂತಿದೆ ಮನವು,
ಮಯ್ತೊಳೆದು ಹೊಸದಾಗಿವೆ ಹಳೆಯ ನೆನಪು,
ಕಿರುನಗೆಯೊಂದ ಮೂಡಿಸಿ ತುಟಿಯಂಚಿನೆಡೆ,
ಕಯ್ ಹಿಡಿದು ಕರೆದೊಯ್ದಿವೆ ಹಳೆಯ ಹೊತ್ತಿನೆಡೆ.

ಚಿತ್ತವು ಅಂಕೆಯಿಂದ ಬಿಡಿಸಿಕೊಂಡ ಹಕ್ಕಿ,
ಯಾವುದೋ ಕಾಳಗ ಗೆದ್ದಂತ ಹಿಗ್ಗು,
ಹಸಿವು ಮರೆತಿದೆ, ನಿದ್ದೆಯ ಪರಿವಿಲ್ಲ,
ಹೇಳುವವರ ಮಾತಿಗೆ ಕಿವಿಯಿಲ್ಲ.

ದಿಗಂತವೇ ಬೇಲಿ ಆಡುವ ಎಡೆಗೆ
ಆಡಿದಶ್ಟೂ ಆಡಬೇಕೆನಿಸುವ ಬಯಕೆ
ಉರಿವ ನೇಸರನ ಎದುರು ಸೋಲದ ಹಟ,
ಇರುಳಿನಲಿ ಚಂದ್ರನ ಬೆಳಕಿನ ಒಡನಾಟ.

ದಿನಕ್ಕೊಂದು ಹೊಸಬಗೆಯ ಆಟ,
ಸೋಲಿನ ಲೆಕ್ಕಾಚಾರಕ್ಕೆ ಹೊತ್ತಿಲ್ಲ.
ದಣಿವರಿಯದೆ ಆಡಬೇಕು ಇನ್ನು,
ಚಿಂತೆಗೆ ಇಲ್ಲಿ ಜಾಗವಿಲ್ಲ.

(ಚಿತ್ರ ಸೆಲೆ: 4hdwallpapers.com )

ಇವುಗಳನ್ನೂ ನೋಡಿ

1 ಅನಿಸಿಕೆ

ಅನಿಸಿಕೆ ಬರೆಯಿರಿ: