ಪರಮಹಂಸರ ಪಾಲಿನ ಬಾಡು

– ಸಿ.ಪಿ.ನಾಗರಾಜ.

right-or-wrong3
ಹಳ್ಳಿಗಾಡಿನ ಪರಿಸರದಲ್ಲಿ ನೆಲೆಗೊಂಡಿರುವ ಕಾಳಮುದ್ದನದೊಡ್ಡಿಯ ಬಾರತಿ ಕಾಲೇಜಿನ ವಿದ್ಯಾರ‍್ತಿನಿಲಯದಲ್ಲಿರುವ ಹುಡುಗರಲ್ಲಿ ಮಾಂಸಾಹಾರಿಗಳೇ ಹೆಚ್ಚು. ವರುಶಕ್ಕೊಮ್ಮೆ ‘ ಹಾಸ್ಟೆಲ್ ಡೇ ‘ ಬಂದಾಗ ಬಾಡಿನೂಟವೇ ಆಗಬೇಕು. ಅದಿಲ್ಲವೆಂದರೆ ‘ ಹಾಸ್ಟೆಲ್ ಡೇ ‘ ಆಚರಿಸುವುದರಲ್ಲಿ ಯಾವ ಸೊಗಸೂ ಇಲ್ಲ. ಇಂತಹ ದಿನದಲ್ಲಿ ವಿದ್ಯಾರ‍್ತಿನಿಲಯದ ಪಾಲಕರು ತಮ್ಮ ನೆರವಿಗೆ ಒಂದಿಬ್ಬರು ಮಾಸ್ತರರನ್ನು ಕರೆಯುತ್ತಿದ್ದರು. ಏಕೆಂದರೆ ಮಾಂಸವನ್ನು ಬಡಿಸುವಾಗ, ಒಂದೆರಡು ತುಂಡು ಹೆಚ್ಚುಕಡಿಮೆಯಾದರೂ, ಹುಡುಗರು ತಮ್ಮತಮ್ಮಲ್ಲೇ ತಲೆ ತಲೆ ಕೆಚ್ಚಾಡಿಕೊಳ್ಳುವುದು ಗ್ಯಾರಂಟಿ.

‘ ಹಾಸ್ಟೆಲ್ ಡೇ ‘ ಪ್ರಯುಕ್ತ ಒಂದು ರವಿವಾರ ನಡುಹಗಲಿನಲ್ಲಿ ಬಾಡಿನೂಟ ನಡೆಯುತ್ತಿತ್ತು. ಇಬ್ಬರು ಹುಡುಗರ ಸಹಾಯದಿಂದ ಹುಡುಗರ ದೊನ್ನೆಗೆ ಮಾಂಸವನ್ನು ಸಮಪ್ರಮಾಣದಲ್ಲಿ ಎಚ್ಚರಿಕೆಯಿಂದ ಹಾಕಿಸುವುದರಲ್ಲಿ ಮಗ್ನನಾಗಿದ್ದೆ. ಆಗ ಒಬ್ಬ ಹುಡುಗ ನನ್ನ ಬಳಿಗೆ ಬಂದು –

” ಸಾರ್…ಪರಮಹಂಸರ ಪಾಲಿನ ಬಾಡಿನ ದೊನ್ನೆಯನ್ನು ಹಂಗೆ ಎತ್ತಿಡಬೇಕಂತೆ ಸಾರ್ ” ಎಂದ.

” ಏನಯ್ಯ ನೀನು ಹೇಳ್ತೀರೋದು ? ಯಾವ ಪರಮಹಂಸರ ಬಾಡು? ”

” ರಾಮಕ್ರಿಶ್ಣ ಪರಮಹಂಸರ ಪಾಲಿನ ದೊನ್ನೆ ಬಾಡು ಸಾರ್”

ನನಗೆ ಅವನು ಏನು ಹೇಳುತ್ತಿದ್ದಾನೆ ಎಂಬುದನ್ನು ತಿಳಿಯಲಾಗದೆ, ತುಸು ಕೋಪದಿಂದ –

” ಅದೇನ್ ಸರಿಯಾಗಿ ಹೇಳೋ ? ” ಎಂದು ಗದರಿಸಿದೆ.

ಆಗ ಅವನ ಪಕ್ಕದಲ್ಲಿದ್ದ ಮತ್ತೊಬ್ಬ ಹುಡುಗ ವಿವರವಾಗಿ ಹೇಳತೊಡಗಿದ –

” ಸಾರ್… ಹಾಸ್ಟೆಲ್ ಡೇ ಸಮಾರಂಬದಲ್ಲಿ ಇವತ್ತು ರಾತ್ರಿ ನಡೆಯುವ ‘ ದಿವ್ಯ ದೇಗುಲ ‘ ನಾಟಕದಲ್ಲಿ ರಾಮಕ್ರಿಶ್ಣ ಪರಮಹಂಸರ ಪಾತ್ರ ಮಾಡವ್ನಲ್ಲ…ಸೆಕೆಂಡ್ ಬಿ.ಎ. ದೊಳ್ಳೆಗವುಡ…ಅವನು ಇವನಿಗೆ ಹಿಂಗೆ ನಿಮಗೆ ಹೇಳ್ಬುಟ್ಟು ಬಾ ಅಂತ ಕಳ್ಸವ್ನೆ. ಅದೇ ನಾಟಕದಲ್ಲಿ ಇವನು ಒಂದು ಪಾತ್ರ ಮಾಡವ್ನೆ ಸಾರ್. ಇವರೆಲ್ಲಾ ದೊಳ್ಳೆಗವುಡನ್ನ…’ಪರಮಹಂಸರು’ ಅಂತ್ಲೇ ಕರೆಯೋದು ಸಾರ್ ”

” ಅವನಿಗೆ ಈಗ್ಲೆ ಬಂದು ಊಟ ಮಾಡೋಕೆ ಏನಂತೆ ದಾಡಿ ? ”

” ಅವನು ಇವತ್ತು ಬಾಡು ತಿನ್ನಬಾರದಂತೆ ಸಾರ್. ನಾಟಕ ಕಲಿಸಿರುವ ನಮ್ಮ ಲೆಕ್ಚರರ್ ತಿಮ್ಮೆಗವುಡರು…ದೊಳ್ಳೆಗವುಡನಿಗೆ ‘ ಬಾಡು ತಿನ್ಬೇಡ ‘ ಅಂತ ಕಂಡೀಶನ್ ಮಾಡವ್ರೆ ಸಾರ್ ”

” ಯಾಕಂತೆ ? ”

” ರಾಮಕ್ರಿಶ್ಣ ಪರಮಹಂಸರ ಅಹಿಂಸೆಯ ಸಂದೇಶವನ್ನು ಸಾರುವ ಪಾತ್ರವನ್ನು ದೊಳ್ಳೆಗವುಡ ಮಾಡುತ್ತಿರುವುದರಿಂದ…ಮಾಂಸ ಮಡ್ಡಿ ತಿನ್ನದೇ ಶುಚಿಯಾಗಿರ‍್ಬೇಕು ಅಂತ ಅವನಿಗೆ ಅಪ್ಪಣೆ ಮಾಡವ್ರೆ ಸಾರ್ ”

ಅತ್ತ ನಾಟಕದ ನಿರ‍್ದೇಶಕರಾದ ಗುರುಗಳ ಮಾತನ್ನು ಮೀರಲಾರದೆ, ಇತ್ತ ಬಾಡನ್ನು ತಿನ್ನುವ ಆಸೆಯನ್ನು ಬಿಡಲಾರದ ದೊಳ್ಳೆಗವುಡನು, ನಾಟಕ ಮುಗಿದ ಮೇಲೆ ಬಾಡನ್ನು ತಿನ್ನುವ ಯೋಜನೆಯನ್ನು ಹಾಕಿಕೊಂಡು, ತನ್ನ ಪಾಲಿನ ಬಾಡಿನ ದೊನ್ನೆಯನ್ನು ಕಾದಿರಿಸುವಂತೆ ಹೇಳಿ ಕಳುಹಿಸಿದ್ದ. ಪರಮಹಂಸ ಪಾತ್ರದಾರಿ ದೊಳ್ಳೆಗವುಡನಿಗೆ…ಅಂದು ರಾತ್ರಿ ತಿನ್ನಲೆಂದು ಎರಡು ದೊನ್ನೆಗಳಲ್ಲಿ ಬಾಡನ್ನು ತುಂಬಿಸಿಟ್ಟೆನು.

(ಚಿತ್ರ ಸೆಲೆ: business2community.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: