‘ಅಬೆನಾಮಿಕ್ಸ್’ ಜಪಾನನ್ನು ಮೇಲೆತ್ತಬಹುದೇ?

– ಅನ್ನದಾನೇಶ ಶಿ. ಸಂಕದಾಳ.

shinjo abe

 

 

ನಾನು ಹೊರತಂದ ನೀತಿಗಳಿಂದ ಜಪಾನಿನಲ್ಲಿ 10 ಲಕ್ಶಕ್ಕೂ ಹೆಚ್ಚು ಕೆಲಸಗಳು ಹುಟ್ಟಿವೆ, ಕಳೆದ 15 ವರ‍್ಶಗಳಲ್ಲೇ ಹೆಚ್ಚು ಎನ್ನುವಂತ ಸಂಬಳ ಹೆಚ್ಚಳಿಕೆ ಕಂಡು ಬಂದಿದೆ.

ಹೀಗೊಂದು ಹೇಳಿಕೆ ನೀಡಿರುವವರು ಜಪಾನಿನ ಪ್ರದಾನ ಮಂತ್ರಿ – ‘ಶಿಂಜೊ ಅಬೆ’. ಹಣಕಾಸಿನ ಹಿಂಜರಿತಕ್ಕೆ ಒಳಗಾಗಿದ್ದ ಜಪಾನ್, 2014 ರ ಡಿಸೆಂಬರ್ ತಿಂಗಳಿಂದಾಚೆ ಹಿಂಜರಿತದಿಂದ ಮೆಲ್ಲನೆ ಹೊರಬರುತ್ತಿದೆ. ಜಪಾನಿನ ಹಣಕಾಸಿನ ಸ್ತಿತಿಯನ್ನು ಸರಿದಾರಿಗೆ ತರಲು ಅಬೆಯವರು ಹಾಕಿಕೊಂಡ ಹಮ್ಮುಗೆ ‘ಅಬೆನಾಮಿಕ್ಸ್’ ಎಂದೇ ಹೆಸರುಗಳಿಸಿದೆ. ಆದರೆ, ಅಬೆಯವರು ಬಂದು ಎರಡು ವರುಶಗಳಾದರೂ ಹಣಕಾಸಿನ ಸನ್ನಿವೇಶ ಅಶ್ಟೇನೂ ಸುದಾರಿಸಿಲ್ಲ ಎಂದು ಹಲವಾರು ಮಂದಿ, ಅಬೆಯವರ ಆಡಳಿತದ ಬಗ್ಗೆ ನಡೆಸಿದ ಸರ‍್ವೇಯೊಂದಕ್ಕೆ ಉತ್ತರಿಸಿದ್ದಾರೆ. ಅಬೆನಾಮಿಕ್ಸ್ ಬಗ್ಗೆ ಜಪಾನಿನಲ್ಲಿ ಪರ-ವಿರೋದ ಚರ‍್ಚೆಗಳು ಜೋರಾಗಿ ನಡೆಯುತ್ತಿವೆ.

ಶಿಂಜೊ ಅಬೆ ಸೆಪ್ಟಂಬರ್ 2006 ರಿಂದ ಸೆಪ್ಟಂಬರ್ 2007 ವರೆಗೆ ಜಪಾನಿನ ಪ್ರದಾನಮಂತ್ರಿಯಾಗಿದ್ದವರು. ನಂತರ ಡಿಸೆಂಬರ್ 2012 ರಲ್ಲಿ ಆರಿಸಿ ಬಂದಿದ್ದ ಅಬೆ, ಡಿಸೆಂಬರ್ 2014 ರಲ್ಲಿ ಮತ್ತೊಮ್ಮೆ ಆ ಹುದ್ದೆಗೇರಿದರು. ಜಪಾನ್ ಎದುರಿಸುತ್ತಿದ್ದ ಬೆಲೆತಗ್ಗಿಕೆಯನ್ನು (deflation) ಕೊನೆಗೊಳಿಸುವ ನಂಬಿಸಿಕೆಯನ್ನು (assurance) ನೀಡಿ ಚುನಾವಣೆಯನ್ನು ಅಬೆಯವರು ಗೆದ್ದಿದ್ದರು. ಅವರು ಆಡಳಿತ ಚುಕ್ಕಾಣಿ ಹಿಡಿದ ಮೇಲೆ ಶೇರು ಮಾರುಕಟ್ಟೆಯಲ್ಲಿ ಚುರುಕಿನ ಬೆಳವಣಿಗೆಗಳಾಗಿ ಶೇರುಗಳ ಬೆಲೆ ಶೇ 70 ಕ್ಕಿಂತ ಹೆಚ್ಚಳ ಕಂಡಿವೆ. ತಮ್ಮ ಹಣಕಾಸಿನ ನೀತಿಗಳಿಂದ ಒಂದು ಮಟ್ಟಕ್ಕೆ ಮಂದಿಮೆಚ್ಚುಗೆಯನ್ನು ಪಡೆದಿರುವ ಅಬೆ, ಏಪ್ರಿಲ್ ನಿಂದ ಸರಕು ಮತ್ತು ಸೇವೆಗಳ ಬಳಕೆಯ ಮೇಲೆ ತೆರಿಗೆಯನ್ನು ಹೆಚ್ಚಿಸಿದ್ದಾರೆ. ಕಾರಣ, ಬೆಲೆತಗ್ಗಿಕೆಯಿದ್ದಾಗ ಹಣದ ಹರಿವು ಕಡಿಮೆ ಇದ್ದು, ನಾಡಿನ ಆದಾಯವು ಕಡಿಮೆಯಾಗಿರುವುದು. ಬಳಕೆ ತೆರಿಗೆಯನ್ನು ಏರಿಸಿದ್ದರಿಂದ, ಕೆಲಸಗಾರರಿಗೆ ದೊರಕುವ ಸಂಬಳದಲ್ಲಿನ ಹೆಚ್ಚಳಿಕೆ ಬೆಲೆಯೇರಿಕೆಯೊಂದಿಗೆ ಸರಿದೂಗದಿರುವ ಸನ್ನಿವೇಶ ಜಪಾನಿನಲ್ಲಿದೆ. ಅಬೆ ಸರಕಾರದ ಈ ನಡೆ ಅಲ್ಲಿನ ಮಂದಿಗೆ ಹಿಡಿಸಿಲ್ಲ.

ಜಪಾನಿನ ಬೆಲೆತಗ್ಗಿಕೆಯನ್ನು ಕೊನೆಗೊಳಿಸಿ ವರುಶಕ್ಕೆ ಶೇ 2 ರಶ್ಟು ಹಣದುಬ್ಬರವನ್ನು ತಲುಪುವ ಗುರಿ ಶಿಂಜೊ ಅಬೆಯವರದಾಗಿತ್ತು. ಅದಕ್ಕಾಗಿ ಅವರು ಹಾಕಿಕೊಂಡ ಹಮ್ಮುಗೆ ಹೀಗಿತ್ತು. ಜಪಾನಿನ ಸೆಂಟ್ರಲ್ ಬ್ಯಾಂಕ್ ಆದ ‘ಬ್ಯಾಂಕ್ ಆಪ್ ಜಪಾನ್’, ಉಳಿದ ಬ್ಯಾಂಕುಗಳಿಂದ ಹೆಚ್ಚಿನ ಸರ‍್ಕಾರಿ ಬಾಂಡುಗಳನ್ನು ಮತ್ತು ಇತರ ಸ್ವತ್ತುಗಳನ್ನು ಪಡೆಯಬೇಕು. ಇದರಿಂದ ಉಳಿದ ಬ್ಯಾಂಕುಗಳ ಬಳಿ ಹೆಚ್ಚಿನ ಹಣ ಸೇರುತ್ತದೆ. ಆ ಹಣ ಬಳಸಿ ಸೆಂಟ್ರಲ್ ಬ್ಯಾಂಕ್ ಗೆ ಮಾರಿದ ಸ್ವತ್ತಿನ ಬದಲಾಗಿ, ಹೊಸದಾಗಿ ಸ್ವತ್ತನ್ನು ಮಾರುಕಟ್ಟೆಯಿಂದ ಕೊಳ್ಳಬೇಕು. ಹಾಗೇ ಸೆಂಟ್ರಲ್ ಬ್ಯಾಂಕ್, ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿ, ಬೇರೆ ಬೇರೆ ಕಂಪನಿಗಳ ಶೇರನ್ನು ಕೊಳ್ಳುವುದು ಮತ್ತು ರಿಯಲ್ ಎಸ್ಟೇಟ್ ಪಂಡ್ ಗಳನ್ನು ಕೊಳ್ಳುವುದು. ಕಂಪನಿಗಳ ಶೇರುಗಳ ಕೊಳ್ಳುವಿಕೆಯಿಂದ ಹೂಡಿಕೆ ಹೆಚ್ಚಾಗುತ್ತದೆ. ಹೂಡಿಕೆ ಹೆಚ್ಚಾದಂತೆ ಕೆಲಸಗಳು ಹುಟ್ಟುತ್ತಾ ಕೆಲಸವಿಲ್ಲದಿಕೆಯನ್ನು (unemployment) ಕಡಿಮೆ ಮಾಡುತ್ತವೆ. ಜಾಗತಿಕ ಮಾರುಕಟ್ಟೆಯಲ್ಲೂ ಹಣವನ್ನು ಹೂಡುತ್ತಾ ಜಪಾನಿನ ಸಲುವಳಿಯಾದ (currency) ಯೆನ್ ನ ಬೆಲೆ ಕಮ್ಮಿಯಾಗುವಂತೆ ಮಾಡುವುದು. ಅದು ಜಪಾನಿನ ದುಡ್ಡಿನ ಬೆಲೆ ಹೊರನಾಡುಗಳ ದುಡ್ಡಿನ ಬೆಲೆಯ ಎದಿರು ಕುಗ್ಗಿಸುತ್ತದೆ (currency depreciation). ಇದರಿಂದ ಹೊರನಾಡಿನಿಂದ ಪಡೆಯುವ ಸೇವೆ ಮತ್ತು ಸರಕುಗಳ ಬೆಲೆಯನ್ನು ಹೆಚ್ಚಿಸುತ್ತದೆ. ಹೀಗೆ ಹೊರಗಿನಿಂದ ಪಡೆಯುವ ಸೇವೆಗಳ ಮತ್ತು ಸರಕುಗಳ ಬೆಲೆ ದುಬಾರಿಯಾದಂತೆ, ಜಪಾನಿನಲ್ಲೇ ಮಾಡುಗೆಗಳನ್ನು ಉಂಟುಮಾಡಿ ಹೊರನಾಡುಗಳಿಗೆ ಕಳಿಸುವ ಚಟುವಟಿಕೆಗಳು ಹೆಚ್ಚುತ್ತವೆ. ಈ ಎಲ್ಲಾ ಚಟುವಟಿಕೆಯಿಂದ ಜಪಾನಿನಲ್ಲಿ ಹಣಕಾಸಿನ ಹರಿವು ಸರಳವಾಗುತ್ತದೆ ಎಂಬುದು ಅಬೆಯವರ ಲೆಕ್ಕಾಚಾರವಾಗಿತ್ತು.

ಆದರೆ ಅಬೆಯವರು ಅಂದುಕೊಂಡಂತೆ ಎಲ್ಲವೂ ಆಗಿಲ್ಲ. ಜಪಾನಿನ ಸೆಂಟ್ರಲ್ ಬ್ಯಾಂಕ್ ಹಣವನ್ನು ಶೇರು ಮಾರುಕಟ್ಟೆಯಲ್ಲಿ ಹೂಡಿದ ನಂತರ, ಯೆನ್ ನ ಬೆಲೆಯೇನೋ ಕಡಿಮೆ ಆಗಿದೆ. ಅದು ದೊಡ್ಡ ಕಂಪನಿಗಳಿಗೆ ಮತ್ತು ಬೇರೆ ಬೇರೆ ನಾಡುಗಳಲ್ಲೂ ತಮ್ಮ ಶಾಕೆಯನ್ನು ಹೊಂದಿರುವ ಕಂಪನಿಗಳಿಗೆ ಮಾತ್ರ ಅನುಕೂಲ ಮಾಡಿಕೊಟ್ಟಿದೆ. ಗಳಿಕೆ ಚೆನ್ನಾಗಿರುವ ಕಂಪನಿಗಳು ತನ್ನ ಕೆಲಸಗಾರರಿಗೆ ಸಂಬಳವನ್ನು ಹೆಚ್ಚಿಸುವಂತೆ ಅಬೆಯವರ ಸರಕಾರ ಆ ಕಂಪನಿಗಳ ಮೇಲೆ ಒತ್ತಡವನ್ನೂ ಹಾಕುತ್ತಿದೆ. ಕೆಲಸಗಾರರ ಸಂಬಳ ಹೆಚ್ಚಳ ಕಂಡಿರುವಲ್ಲಿ ಈ ಕಾರಣವೂ ಇದೆ. ಜಪಾನಿನಲ್ಲಿ ಆಮದಿಗೆ ಹೆಚ್ಚು ದುಡ್ಡನ್ನು ತೆರಬೇಕಾಗಿರುವುದರಿಂದ, ಬಹಳ ಕಂಪನಿಗಳು ಮಾಡುಗೆಗಳನ್ನು, ಕಡಿಮೆ ಕರ‍್ಚಿನಲ್ಲಿ ಉಂಟುಮಾಡುವಂತ ನಾಡುಗಳಲ್ಲೇ ಮಾಡಿಸಲು ಮುಂದಾಗಿದ್ದಾರೆ.

ಅಬೆಯವರ ಹಮ್ಮುಗೆ ಒಂದು ಮಟ್ಟಿಗೆ ಕೆಲಸವಿಲ್ಲದಿಕೆ ಕಡಿಮೆಯಾಗುವಂತೆ ಮಾಡಿರುವುದು ನಿಜ. ಆದರೆ ಹಣಕಾಸು ಏರ‍್ಪಾಡಿಗೆ ಒಳಪಡುವ ಎಲ್ಲಾ ವಲಯಗಳಲ್ಲಿ ಇಂತ ಬೆಳವಣಿಗೆಗಳು ಕಂಡು ಬಂದಿಲ್ಲ ಎಂಬುದು ಗಮನಿಸಬೇಕಾದ ಅಂಶ. ಅದನ್ನು ಅಬೆಯವರ ಸರಕಾರ ಕೂಡ ಒಪ್ಪಿಕೊಂಡಿದೆ. ಗಳಿಕೆಯಲ್ಲಿ ಮುಂದಿರುವ ಕಂಪನಿಗಳು ತಮ್ಮ ಆದಾಯವನ್ನು ಜಪಾನಿನಲ್ಲೇ ಮತ್ತಶ್ಟು ಹೂಡುತ್ತಾ ಬೇರೆ ಬೇರೆ ವಲಯಗಳನ್ನು ಮೇಲೆತ್ತಲು ಮುಂದಾಗಲಿ ಎಂಬ ಎಣಿಕೆ ಅಬೆ ಸರಕಾರದ್ದು. ಈ ವರ‍್ಶವೂ ಕೂಡ ಜಪಾನ್ ಸರಕಾರ, ಸೆಂಟ್ರಲ್ ಬ್ಯಾಂಕ್ ನಿಂದ ಹಣ ಹೂಡಿಸುವ ಸಾದ್ಯತೆ ಇದೆ. ಅಬೆನಾಮಿಕ್ಸ್ ಬಗ್ಗೆ ಚರ‍್ಚೆಗಳು ಜಪಾನಿನಲ್ಲಿ ಮುನ್ನೆಲೆಗೆ ಬಂದಿವೆ. ಜಗತ್ತಿನ ಮೂರನೇ ಅತಿ ದೊಡ್ಡ ಹಣಕಾಸಿನ ಏರ‍್ಪಾಡನ್ನು ಹೊಂದಿರುವ ಜಪಾನಿನಲ್ಲಿ ಹಣಕಾಸಿನೇರ‍್ಪಾಡು ಸದ್ಯಕ್ಕೆ ತೆವಳುತ್ತಿದೆ. ಅಬೆನಾಮಿಕ್ಸ್ ನಲ್ಲಿನ ಮುಂದಿನ ನಡೆಗಳು ಏನಿರಬಹುದು? ಜಪಾನಿನ ಹಣಕಾಸಿನ ಏರ‍್ಪಾಡು ಸರಿದಾರಿಗೆ ಬರಲು ಇನ್ನೂ ಎಶ್ಟು ಸಮಯ ತಗಲಬಹುದು? ಎಂಬ ಪ್ರಶ್ನೆಗಳ ಉತ್ತರಕ್ಕಾಗಿ ಕಾದು ನೋಡಬೇಕು.

(ಚಿತ್ರ ಸೆಲೆ : lhvnews.com )

(ಮಾಹಿತಿ ಸೆಲೆ : japantimes.co.jpwsj.comeconomist.com )

1 ಅನಿಸಿಕೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.