ಕನ್ನಡದಲ್ಲಿ ಇಂಬು ಮತ್ತು ಹೊತ್ತು

ಡಿ.ಎನ್.ಶಂಕರ ಬಟ್.

personal-world-clock_www.timeanddate.com

ಹೊತ್ತು (time) ಮತ್ತು ಇಂಬು(place)ಗಳ ನಡುವೆ ಹಲವು ಬೇರ‍್ಮೆ(difference)ಗಳಿವೆ; ಮೇಲೆ ತಿಳಿಸಿದ ಹಾಗೆ, ಹೊತ್ತಿಗೆ ಒಂದೇ ಆಯ(dimension)ವಿದೆಯಾದರೆ, ಇಂಬಿಗೆ ಮೂರು ಆಯಗಳಿವೆ; ಇಂಬಿನ ಹಿಂದೆ-ಮುಂದೆ ಎಂಬ ಒಂದು ಆಯಕ್ಕೆ ಹೊಂದಿಕೆಯಾಗಬಲ್ಲ ಆಯವಶ್ಟೇ ಹೊತ್ತಿಗೆ ಇದೆಯಲ್ಲದೆ, ಮೇಲೆ-ಕೆಳಗೆ ಮತ್ತು ಎಡಕ್ಕೆ-ಬಲಕ್ಕೆ ಎಂಬ ಇಂಬಿನ ಬೇರೆ ಎರಡು ಆಯಗಳಿಗೆ ಹೊಂದಿಕೆಯಾಗಬಲ್ಲ ಆಯಗಳು ಹೊತ್ತಿನಲ್ಲಿಲ್ಲ.

ಹೀಗಿದ್ದರೂ, ನಮ್ಮಲ್ಲಿರುವ ಹೊತ್ತಿನ ಅರಿವು ಇಂಬಿನ ಇಟ್ಟಳದ ಮೇಲೆ ನೆಲೆಯಾಗಿರುವ ಹಾಗೆ ಕಾಣಿಸುತ್ತದೆ. ಹಲವು ಇಂಬಿನ ಪದಗಳನ್ನು ಹೊತ್ತಿನ ಪದಗಳಾಗಿಯೂ ಬಳಸುತ್ತಿರುವುದಕ್ಕೆ ಇದೇ ಕಾರಣವಿರಬೇಕು. ಈ ಬಳಕೆ ಹೇಗೆ ನಡೆಯುತ್ತದೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ:

(1) ಮಾರ‍್ಪುರುಳಿನ (metaphor) ಬಳಕೆ ಮತ್ತು ಒಟ್ಟ(suffix)ನ್ನು ಸೇರಿಸಿದ ಬಳಕೆ

ಹಲವು ಇಂಬಿನ ಪದಗಳನ್ನು ಅವುಗಳ ಮಾರ‍್ಪುರುಳಿನಲ್ಲಿ ಹೊತ್ತಿನ ಪದಗಳಾಗಿ ಬಳಸಲಾಗುತ್ತಿದೆ; ಹಿಂದೆ-ಮುಂದೆ, ಮೊದಲು, ಮೇಲೆ-ಕೆಳಗೆ, ತನಕ-ಒಳಗೆ-ವರೆಗೆ, ಮತ್ತು ಒಡನೆ ಎಂಬ ಇಂಬಿನ ಪದಗಳನ್ನು ಈ ಬಗೆಯಲ್ಲಿ ಅವುಗಳಲ್ಲಿ ಯಾವ ಮಾರ‍್ಪಾಡನ್ನೂ ಮಾಡದೆ ಹೊತ್ತಿನ ಪದಗಳಾಗಿ ಬಳಸಲಾಗುತ್ತದೆ:

(1ಕ)    ಎರಡು ದಿನಗಳ ಹಿಂದೆ ಅವನು ಇಲ್ಲಿದ್ದ.
(1ಚ)    ಕೆಲಸ ಮುಗಿದ ಮೇಲೆ ಅವನು ಮನೆಗೆ ಬಂದ.
(1ಟ)    ನೀವು ಬರುವ ವರೆಗೆ ಅವನು ಇಲ್ಲಿರುತ್ತಾನೆ.
(1ತ)    ಮೂರೇಡುಗಳ ಕೆಳಗೆ ಅವರು ಈ ಊರಲ್ಲಿದ್ದರು.

ಇದಲ್ಲದೆ, ಬೇರೆ ಕೆಲವು ಇಂಬಿನ ಪದಗಳಿಗೆ ಇಲ್ಲವೇ ಬೇರು(root)ಗಳಿಗೆ ಒಟ್ಟುಗಳನ್ನು ಸೇರಿಸಿ ಹೊತ್ತಿನ ಪದಗಳಾಗಿ ಮಾರ‍್ಪಡಿಸಲಾಗಿದೆ:
(ಕ) ಬಳಿ ಎಂಬ (ಮರದ ಬಳಿ ಕುಳಿತಿದ್ದಾನೆ) ಇಂಬಿನ ಪದಕ್ಕೆ ಕ ಒಟ್ಟನ್ನು ಸೇರಿಸಿ ಬಳಿಕ ಎಂಬ ಹೊತ್ತಿನ ಪದವನ್ನು ಪಡೆಯಲಾಗಿದೆ (ಅವನು ಬಳಿಕ ಬರುತ್ತಾನೆ).
(ಚ) ಮುನ್ ಎಂಬ ಬೇರಿನಿಂದ ಪಡೆದ ಮುಂದೆ ಎಂಬ ಇಂಬಿನ ಪದವನ್ನು ಮಾರ‍್ಪುರುಳಿನಲ್ಲಿ ಹೊತ್ತಿನ ಪದವಾಗಿ ಬಳಸುವುದಲ್ಲದೆ, ಅದಕ್ಕೆ ಬೇರೆ ಒಟ್ಟುಗಳನ್ನು ಸೇರಿಸಿ ಪಡೆದ ಮುನ್ನ ಮತ್ತು ಮುಂಚೆ ಎಂಬವುಗಳನ್ನು ಹೊತ್ತಿನ ಪದಗಳಾಗಿ ಬಳಸಲಾಗುತ್ತದೆ (ಬರುವ ಮುನ್ನ); ಇವಕ್ಕೆ ಇಂಬಿನ ಹುರುಳಿರುವ ಹಾಗೆ ತೋರುವುದಿಲ್ಲ.
(ಟ) ಮೇಲೆ ಎಂಬ ಇಂಬಿನ ಪದವನ್ನು ಆ ಎಂಬ ತೋರುಪದ(demonstrative pronoun)ದೊಂದಿಗೆ ಬಳಸಿರುವ ಆಮೇಲೆ ಎಂಬ ನುಡಿತಕ್ಕೂ ಹೊತ್ತಿನ ಹುರುಳಿದೆಯಲ್ಲದೆ ಇಂಬಿನ ಹುರುಳಿಲ್ಲ.
(ತ) ಕೂಡು ಎಂಬ ಎಸಕಪದ(verb)ದಿಂದ ಪಡೆದಿರುವ ಕೂಡ ಎಂಬ ಇಂಬಿನ ಪದಕ್ಕೆ ಒತ್ತಿಹೇಳುವ ಏ ಒಟ್ಟನ್ನು ಸೇರಿಸಿ ಕೂಡಲೇ ಎಂಬ ಹೊತ್ತಿನ ಪದವನ್ನು ಪಡೆಯಲಾಗಿದೆ; ಈ ಪದಕ್ಕೂ ಹೊತ್ತಿನ ಹುರುಳಿದೆಯಲ್ಲದೆ ಇಂಬಿನ ಹುರುಳಿಲ್ಲ.

(2) ಹೊತ್ತನ್ನು ಕಾಣುವುದರಲ್ಲಿ ಎರಡು ಬಗೆಗಳು

ಹೊತ್ತನ್ನು ಎರಡು ಬಗೆಗಳಲ್ಲಿ ಕಾಣಲು ಬರುತ್ತದೆ: (1) ಅದು ಮುಂದುವರಿಯುತ್ತಿದ್ದು, ಆ ಮುಂದುವರಿಕೆಯನ್ನು ಗಮನಿಸುತ್ತಿರಬಹುದು; ಇಲ್ಲವೇ (2) ಅದು ಕದಲದಿದ್ದು, ಆಡುಗನೇ ಅದರ ಒಂದೆಡೆಯಿಂದ ಇನ್ನೊಂದೆಡೆಗೆ ಮುಂದುವರಿಯುವಂತೆಯೂ ನೆನೆಯಬಹುದು. ಕೆಳಗಿನ ಎರಡು ಸೊಲ್ಲುಗಳಲ್ಲಿ ಈ ಎರಡು ಬಗೆಯ ಬಳಕೆಗಳನ್ನು ಕಾಣಬಹುದು:

(1ಕ)    ತಿಂಗಳು ಮುಗಿಯುತ್ತಾ ಬಂತು.
(1ಚ)    ದಿನಗಳು ಎಶ್ಟು ಬೇಗ ಓಡುತ್ತಿವೆ!
(1ಟ)    ನಾವು ಈ ತಿಂಗಳ ಕೊನೆಯನ್ನು ತಲಪುತ್ತಿದ್ದೇವೆ.

(1ಕ-ಚ)ಗಳಲ್ಲಿ ಹೊತ್ತನ್ನೇ ಮುಂದುವರಿಯುತ್ತಿರುವ ಹಾಗೆ ಕಾಣಲಾಗಿದೆ; ಇದಕ್ಕೆ ಬದಲು, (1ಟ)ದಲ್ಲಿ ಹೊತ್ತು ಇಂಬಿನ ಹಾಗೆ ಕದಲದೆ ನಿಂತಿದ್ದು, ಆಡುಗನೇ ಅದರಲ್ಲಿ ಮುಂದುವರಿಯುತ್ತಿರುವ ಹಾಗೆ ಕಾಣಲಾಗಿದೆ.
ಹಿಂದೆ ಮತ್ತು ಮುಂದೆ ಎಂಬ ಎರಡು ಇಂಬಿನ ಪದಗಳನ್ನು ಹೊತ್ತಿನ ಪದಗಳಾಗಿ ಬಳಸುವಲ್ಲಿ ಈ ಎರಡು ಬಗೆಯ ನೆನಸಿಕೆಗಳು ಕಾಣಿಸಿಕೊಳ್ಳುತ್ತವೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಹೋಲಿಸಿ ನೋಡಬಹುದು:

(1ಕ)    ನೀವು ಮುಂದೆ ಹೋಗಿ; ನಾವು ಹಿಂದಿನಿಂದ ಬರುತ್ತೇವೆ.
(1ಚ)    ನೀವು ಮೊದಲು ಹೋಗಿ; ನಾವು ಆಮೇಲೆ ಬರುತ್ತೇವೆ.
(2ಕ)    ಹಿಂದೆ ಹಲವಾರು ತೊಡಕುಗಳನ್ನು ಎದುರಿಸಿದ್ದೆವು; ಮುಂದೆ ಏನಾಗಲಿದೆಯೋ ತಿಳಿಯದು.
(2ಚ)    ಮೊದಲಿಗೆ ಹಲವಾರು ತೊಡಕುಗಳನ್ನು ಎದುರಿಸಿದ್ದೆವು; ಆಮೇಲೆ (ಇನ್ನು ಮೇಲೆ) ಏನಾಗಲಿದೆಯೋ ತಿಳಿಯದು.

ಮೇಲೆ ಕೊಟ್ಟಿರುವ (ಕ) ಸೊಲ್ಲುಗಳ ಹುರುಳನ್ನು (ಚ) ಸೊಲ್ಲುಗಳು ತಿಳಿಸುತ್ತವೆಯೆಂದು ಹೇಳಬಹುದು; (1ಕ) ಸೊಲ್ಲಿನಲ್ಲಿ ಬಂದಿರುವ ಮುಂದೆ ಎಂಬ ಪದಕ್ಕೆ (1ಚ) ಸೊಲ್ಲಿನಲ್ಲಿ ಮೊದಲು ಎಂಬ ಹುರುಳನ್ನು ಕೊಡಲಾಗಿದೆ, ಮತ್ತು ಹಿಂದೆ ಎಂಬ ಪದಕ್ಕೆ ಆಮೇಲೆ ಎಂಬ ಹುರುಳನ್ನು ಕೊಡಲಾಗಿದೆ; ಇದಕ್ಕೆ ಬದಲು, (2ಕ)ದಲ್ಲಿ ಬಂದಿರುವ ಮುಂದೆ ಎಂಬ ಪದಕ್ಕೆ (2ಚ) ಸೊಲ್ಲಿನಲ್ಲಿ ಆಮೇಲೆ ಇಲ್ಲವೇ ಇನ್ನು ಮೇಲೆ ಎಂಬ ಹುರುಳನ್ನು ಕೊಡಬೇಕಾಗಿದೆ, ಮತ್ತು ಹಿಂದೆ ಎಂಬ ಪದಕ್ಕೆ ಮೊದಲಿಗೆ ಎಂಬ ಹುರುಳನ್ನು ಕೊಡಬೇಕಾಗಿದೆ.

ಹೊತ್ತನ್ನು ಎರಡು ಬೇರೆ ಬೇರೆ ನೆಲೆಗಳಿಂದ ಕಾಣುತ್ತಿರುವುದೇ ಈ ಬಗೆಯಲ್ಲಿ ಹಿಂದೆ ಮತ್ತು ಮುಂದೆ ಎಂಬ ಪದಗಳಿಗೆ ಎರಡು ಬಗೆಯ ಹುರುಳುಗಳು ದೊರಕಲು ಕಾರಣವೆಂದು ಹೇಳಲು ಬರುತ್ತದೆ; ಹೊತ್ತು ಮುಂದುವರಿಯುತ್ತಾ ಇದ್ದು, ಆಡುಗರು ಅದನ್ನೊಂದು ಕದಲದ ನೆಲೆಯಿಂದ ಗಮನಿಸುತ್ತಿರುವರಾದರೆ, ಮುಂದೆ ಎಂಬುದು ಮೊದಲಿನದಾಗುತ್ತದೆ, ಮತ್ತು ಹಿಂದೆ ಎಂಬುದು ಆಮೇಲಿನದಾಗುತ್ತದೆ. ಮೊದಲಿನದು ಈಗಾಗಲೇ ನಡೆದಿದ್ದು ಅದು ಆಡುಗರ ಮುಂದಿದೆ; ಆದರೆ, ಆಮೇಲಿನದು ಇನ್ನೂ ನಡೆಯಬೇಕಿದ್ದು ಅದು ಆಡುಗರ ಹಿಂದಿದೆ.

ಇದಕ್ಕೆ ಬದಲು, ಹೊತ್ತು ಕದಲದಿದ್ದು, ಆಡುಗರೇ ಮುಂದುವರಿಯುತ್ತಿರುವರಾದರೆ, ಮೊದಲಿನ ಎಸಕ(event)ಗಳು ಅವರ ಹಿಂದೆ ಇರುವ ಎಸಕಗಳಾಗುತ್ತವೆ, ಮತ್ತು ಆಮೇಲಿನ ಎಸಕಗಳು ಅವರ ಮುಂದೆ ಇರುವ ಎಸಕಗಳಾಗುತ್ತವೆ.
ಆದರೆ, ಮುಂದೆ ಮತ್ತು ಹಿಂದೆ ಎಂಬ ಪದಗಳನ್ನು ಇಂಬಿನ ಪದಗಳಾಗಿ ಬಳಸುವಲ್ಲಿ ಈ ರೀತಿ ಎರಡು ಬಗೆಯ ಹುರುಳುಗಳು ದೊರಕುವುದಿಲ್ಲ ಎಂಬುದನ್ನು ಗಮನಿಸಬಹುದು. ಹೊತ್ತಿನ ಪದಗಳಾಗಿ ಬರುವ ಅವುಗಳ ಹೆಚ್ಚಿನ ಹುರುಳಿನಲ್ಲಶ್ಟೇ ಈ ಬೇರ‍್ಮೆ ಕಾಣಿಸಿಕೊಳ್ಳುತ್ತದೆ.

(3) ಎರಡು ಬಗೆಯ ಪತ್ತುಗೆ(relation)ಗಳು

ಇಂಬಿನ ಪದಗಳಲ್ಲಿ ಹೆಚ್ಚಿನವೂ ಯಾವುದಾದರೊಂದು ಪತ್ತುಗೆಯನ್ನು ತಿಳಿಸುತ್ತಿರುತ್ತವೆ; ಅವನ್ನು ಹೊತ್ತಿನ ಪದಗಳಾಗಿ ಬಳಸಿರುವಲ್ಲೂ ಅವು ಒಂದು ಪತ್ತುಗೆಯನ್ನು ತಿಳಿಸುವ ಈ ಪರಿಚೆಯನ್ನು ಉಳಿಸಿಕೊಳ್ಳುತ್ತವೆ. ಆದರೆ, ಇಂಬಿನ ಪದಗಳಾಗಿ ಬರುವಲ್ಲಿ ಅವು ಒಂದು ಪಾಂಗಿ(object)ನೊಂದಿಗಿನ ಪತ್ತುಗೆಯನ್ನು ತಿಳಿಸುತ್ತವೆ, ಮತ್ತು ಹೊತ್ತಿನ ಪದಗಳಾಗಿ ಬರುವಲ್ಲಿ ಅವು ಒಂದು ಎಸಕ(event)ದೊಂದಿಗಿನ ಪತ್ತುಗೆಯನ್ನು ತಿಳಿಸುತ್ತವೆ ಎಂಬುದಾಗಿ ಅವುಗಳ ನಡುವೆ ಬೇರ‍್ಮೆಯಿದೆ:

(1ಕ)    ಹುಡುಗ ಮಾಡಿನ ಮೇಲೆ ಕುಳಿತಿದ್ದಾನೆ.
(1ಚ)    ಹುಡುಗ ಶಾಲೆಯಿಂದ ಬಂದ ಮೇಲೆ ಕಾಲು ತೊಳೆಯಲಿಲ್ಲ.

(1ಕ)ದಲ್ಲಿ ಮೇಲೆ ಎಂಬುದನ್ನು ಇಂಬಿನ ಪದವಾಗಿ ಬಳಸಲಾಗಿದ್ದು, ಅದು ಮಾಡು ಎಂಬ ಪಾಂಗಿಗೂ ಹುಡುಗನಿಗೂ ನಡುವಿನ ಪತ್ತುಗೆಯನ್ನು ತಿಳಿಸುತ್ತದೆ; ಇದಕ್ಕೆ ಬದಲು, (1ಚ)ದಲ್ಲಿ ಅದೇ ಪದವನ್ನು ಹೊತ್ತಿನ ಪದವಾಗಿ ಬಳಸಲಾಗಿದ್ದು, ಅದು ಶಾಲೆಯಿಂದ ಬರುವ ಎಸಕಕ್ಕೂ ಹುಡುಗನಿಗೂ ನಡುವಿನ ಪತ್ತುಗೆಯನ್ನು ತಿಳಿಸುತ್ತದೆ.
ಹೊತ್ತಿನ ಪದಗಳಾಗಿ ಬರುವ ಕೆಲವು ಪರಿಚೆಪದಗಳನ್ನು ಹೆಸರುಪದಗಳ ಪತ್ತುಗೆ ರೂಪದೊಂದಿಗೆ ಬಳಸಲು ಬರುತ್ತದೆ; ಆದರೆ, ಇಂತಹ ಬಳಕೆಗಳಲ್ಲೂ ಅವು ನೇರವಾಗಿ ಎರಡು ಪಾಂಗುಗಳ ನಡುವಿನ ಪತ್ತುಗೆಯನ್ನು ತಿಳಿಸುವ ಬದಲು ಒಂದು ಎಸಕದ ಮೂಲಕ ತಿಳಿಸುತ್ತವೆ:

(1ಕ)    ಅವನು ಅವಳಿಗಿಂತ ಮೊದಲು ಬಂದಿದ್ದ.
(1ಚ)    ಅವನು ನಮಗಿಂತ ಮುಂದೆ ಇದ್ದಾನೆ.

(1ಕ)ದಲ್ಲಿ ಮೊದಲು ಎಂಬುದು ನೇರವಾಗಿ ಅವನಿಗೂ ಅವಳಿಗೂ ನಡುವಿರುವ ಪತ್ತುಗೆಯನ್ನು ತಿಳಿಸುವುದಕ್ಕಿಂತಲೂ ಬರುವಿಕೆಯ ಮಟ್ಟಿಗೆ ಅವರ ನಡುವಿರುವ ಹೊತ್ತಿನ ಪತ್ತುಗೆಯನ್ನು ತಿಳಿಸುತ್ತದೆ. ಆದರೆ, (1ಚ)ದಲ್ಲಿಎರಡು ಪಾಂಗುಗಳ ನಡುವಿರುವ ಇಂಬಿನ ಬೇರ‍್ಮೆಯನ್ನು ಮುಂದೆ ಎಂಬುದು ತಿಳಿಸುತ್ತದೆ.

ಮೂರು ಆಯಗಳ ಇಂಬಿನ ಪದಗಳನ್ನು ಒಂದೇ ಆಯದ ಹೊತ್ತಿನ ಪದಗಳಾಗಿ ಬಳಸುವಲ್ಲಿ ಹೇಗೆ ಹಲವು ಬಗೆಯ ಹೊಂದಾಣಿಕೆಗಳನ್ನು ನಮ್ಮ ನುಡಿಯಲ್ಲಿ ನಡೆಸಲಾಗಿದೆ ಎಂಬುದನ್ನು ಮೇಲಿನ ಬಳಕೆಗಳು ತಿಳಿಸುತ್ತವೆ.

(ತಿಟ್ಟಸೆಲೆ: www.timeanddate.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.