ಸಂಚು

ಬಸವರಾಜ್ ಕಂಟಿ.

car-acc

ಗೋದೂಳಿ ಸಮಯ. ಅವಳು ಮತ್ತು ಅವನು ಒಬ್ಬರ ತೋಳಿನಲ್ಲಿ ಒಬ್ಬರು ಸೇರಿ ಹೊರಳಾಡುತ್ತಿದ್ದರು. ಜಗವೇ ಮರೆತಂತಿದ್ದರು. ಅಶ್ಟರಲ್ಲಿ ಅವನ ಮೊಬಾಯಿಲಿಗೆ ಕರೆ ಬಂದಿತು.

“ಯಾರದು?” ಅವಳು ಕೇಳಿದಳು ಬೇಸರದಿಂದ, ರಸಬಂಗವಾಗಿ.

“ನಿನ್ನ ಗಂಡ! ಸುಮ್ಮನಿರು” ಎಂದನು. ಅವಳು ನಾಲಗೆ ಕಚ್ಚಿ ಸುಮ್ಮನಾದಳು. ಇವನು ಕರೆ ಎತ್ತಿ,

“ಹೇಳಪ್ಪಾ… ಹೇಗಿದೀಯಾ? ಹೇಗಿದೆ ಸಿಂಗಾಪೂರು?” ಅಂದ.

“ಅದೇನು ಇದ್ದದ್ದೇ ಬಿಡು. ನೀನ್ ಹೇಳು ಹೇಗಿದೀಯಾ?”

“ಚೆನ್ನಾಗಿದೀನಪ್ಪಾ. ಎಲ್ಲಾ ನಿನ್ ದಯೆ”

“ನನ್ ದಯೆ ಯಾಕಪ್ಪಾ?”

“ಮತ್ತೆ? ನನ್ ಬಿಸನೆಸ್ ಗೆ ನೀನೆ ಅಲ್ವಾ ಇನ್ವೆಸ್ಟ್ ಮಾಡಿದ್ದು?”

“ಅದಾ… ದುಡ್ಡ್ ಇತ್ತು, ಇನ್ವೆಸ್ಟ್ ಮಾಡ್ದೆ. ಅಶ್ಟೇ… ಪ್ರೆಂಡ್ ಅಂದ್ಮೇಲೆ ಅಶ್ಟೂ ಮಾಡದಿದ್ರೆ ಹೇಗೆ… ಎಲ್ಲಿದೀಯಾ ಈಗ?”.

“ನನ್ ಮನೇಲಿ… ಇನ್ನೇನ್ ವಿಶೇಶ?”

ಹೀಗೆ ಗೆಳೆಯರು ಮಾತು ಮುಂದುವರೆಸಿದರು, ತಮ್ಮ ನಿತ್ಯ ಬದುಕಿನ ಬಗ್ಗೆ ಮಾತಾಡಿಕೊಂಡರು. ಕಾಲೇಜಿನ ದಿನಗಳಿಂದ ಇಬ್ಬರೂ ಹತ್ತಿರದ ಗೆಳೆಯರಾಗಿದ್ದರು. ಇವಳಿಗೆ ಬೇಸರವಾಗಿ ಮಂಚದಿಂದ ಎದ್ದಳು. ಅಶ್ಟರಲ್ಲಿ ಅವಳ ಮೊಬಾಯಿಲಿಗೂ ಕರೆ ಬಂದಿತು, ಅವಳ ಗೆಳತಿಯದು. ಕೋಣೆಯಿಂದ ಹೊರ ಹೋಗಿ ಮಾತಾಡಿದಳು, ಗಂಡನಿಗೆ ಕೇಳಬಾರದೆಂದು. ತುಂಬಾ ಹೊತ್ತಾದ ಮೇಲೆ ಇಬ್ಬರದೂ ಕರೆ ಮುಗಿದು ಮತ್ತೆ ಮಂಚದಲ್ಲಿ ಒಂದಾದರು.

“ಇವನನ್ನಾ ದಾರಿಯಿಂದ ತೆಗೆಯೋ ವಿಶಯ ಏನ್ ಮಾಡ್ದೆ?” ಅವಳು ಕೇಳಿದಳು.

“ನಾನೂ ಅದನ್ನೇ ಯೋಚ್ನೆ ಮಾಡ್ತಾ ಇದ್ದೆ” ಅವಳ ಗಂಡನನ್ನ ಹೇಗಾದರೂ ಮಾಡಿ ಕೊಲ್ಲುವ ಮನಸ್ಸು ಮಾಡಿದ್ದರು. “ಹಾಗಾದ್ರೆ ಡಾಯ್ವೋರ‍್ಸ್ ಬೇಡ ಅಂತೀಯಾ?” ಕೇಳಿದ.

“ಗುಗ್ಗು. ಡಾಯ್ವೋರ‍್ಸ್ ಮಾಡಿದ್ರೆ ಅವನ್ ಆಸ್ತಿ ಸಿಗುತ್ತಾ. ಅವ್ನು ಸತ್ರೆ ನಾವು ಇಡೀ ಜೀವನಾ ಕೂತ್ಕೊಂಡ್ ತಿನ್ ಬಹುದು. ಕೂತ್ಕೊಂಡ್ ಯಾಕೆ, ಮಲ್ಕೊಂಡ್ ತಿನ್ಬಹುದು” ನಕ್ಕಳು. ಅವನೂ ನಕ್ಕ.

*******************************************
ಅವನು ಸಿಂಗಾಪುರಿನಿಂದ ಮೂರು ದಿನಗಳ ನಂತರ ಮರಳಿ ಬಂದ. ಯಾವತ್ತಿನಂತೆ ಹೆಂಡತಿಗೆ ಉಡುಗೊರೆಗಳನ್ನು ತಂದಿದ್ದ. ಅವಳು ಇಲ್ಲದ ಪ್ರೀತಿಯನ್ನು ತೋರಿಸಲು ಯಾವತ್ತಿನಂತೆ ಪ್ರಯತ್ನಿಸಿದಳು. ಯಾಕೋ ಏನೋ, ಪ್ರತೀಸಲಕ್ಕಿಂತ ಹೆಂಡತಿಗೆ ಈ ಬಾರಿ ಹೆಚ್ಚು ಪ್ರೀತಿ ತೋರಿಸಿದ. ಊಟಕ್ಕೆ ಕುಂತಾಗ,

“ದಿವ್ಯಾ, ನಾನ್ ಹೋದ ಕೆಲ್ಸ ಸಕ್ಸಸ್. ಅವ್ರು ನಮ್ಗೇ ಆರ‍್ಡರ್ ಕೊಡ್ತಾರಂತೆ. ನಂಗೆ ತುಂಬಾ ಕುಶಿ ಆಗಿದೆ. ಎಲ್ರೂ ಸೇರಿ ಎಲ್ಲಾದ್ರು ಟ್ರಿಪ್ ಹೋಗಿ ಪಾರ‍್ಟಿ ಮಾಡಿ ಬರೋಣ?”

“ಎಲ್ರೂ ಅಂದ್ರೆ?”

“ನಾನು, ನೀನು, ದಿನೇಶಾ, ಸೂರಿ”

ಅವನು ದಿನೇಶ್ ಅಂದ ತಕ್ಶಣ ಅವಳ ಮನಸ್ಸಿಗೆ ಏನೋ ಒಂದುಬಗೆಯ ಸಂತಸವಾಯಿತು.

“ಸರಿ. ಯಾವಾಗ?” ಅಂದಳು.

“ಬರೋ ಶನಿವಾರ? ಅಶ್ಟರಲ್ಲಿ ಮಯ್ಸೂರು ಹೋಗಿ ಅಪ್ಪಾ ಅಮ್ಮಂಗೆ ನೋಡ್ಕೊಂಡ್ ಬರ‍್ತೀನಿ”

“ನಾನೂ ಬರ‍್ಬೇಕಾ?” ಬೇಸರದಿಂದ ಕೇಳಿದಳು.

“ನಿಂಗ್ ಇಶ್ಟಾ ಇಲ್ದಿದ್ರೆ ಬೇಡಾ ಬಿಡು” ಅಂದನು.

********************************************

“ಟ್ರಿಪ್ಪಾ?” ಅವನು ಕೇಳಿದನು

“ಹೂಂ” ಅಂದಳು.

“ಯಾರ್ ಯಾರ್ ಹೋಗೋದು?”

“ನಾನು, ನೀನು ಮತ್ತೆ ಅವನ ಚಡ್ಡಿ ದೋಸ್ತ್ ಇದಾನಲ್ಲಾ, ಸೂರಿ, ಅವನು”

ತುಸು ಹೊತ್ತು ಯೋಚಿಸಿ, ಏನೋ ಹೊಳೆದಂತಾಗಿ “ಇದೇ ಸರಿಯಾದ್ ದಾರಿ ಅನ್ಸುತ್ತೆ” ಅಂದನು.

“ಏನು? ಯಾವ್ ದಾರಿ?”

“ಅವನನ್ನಾ ಸಾಯಿಸೋಕೆ”

“ಹೇಗೆ?”

“ನೀನು ಸ್ವಲ್ಪಾ ರಿಸ್ಕ್ ತೊಗೊಳ್ಳೋದಕ್ಕೆ ರೆಡಿಯಾಗ್ಬೇಕು. ಯಾರಿಗೂ ಡೌಟ್ ಬರೋದಿಲ್ಲಾ”.

“ಏನು ನಿನ್ ಪ್ಲಾನು?”

“ಟ್ರಿಪ್ ಹೇಗೂ ಅವನ್ ಕಾರಲ್ಲಿ ಹೋಗ್ತಿವಿ. ನಾನೇ ಡ್ರಾಯ್ವ್ ಮಾಡ್ತೀನಿ ಅಂತ ನೀನು ಕಾರು ಓಡಿಸಲು ಮುಂದಾಗು. ಮದ್ಯ ದಾರೀಲಿ  ಎಲ್ಲಾದರೂ ಕಾರು ನಿಲ್ಲಿಸಿದಾಗ ನಾನು ಹೇಗಾದರೂ ಮಾಡಿ ನಿನ್ನ ಜೊತೆ ಮುಂದಿನ ಸೀಟಿನಲ್ಲಿ ಕೂತ್ಕೋತೀನಿ”

“ಹೂಂ. ಸರಿ. ಆಮೇಲೆ?”

“ಆಮೇಲೆ ಸಮಯ ನೋಡಿ ಎದುರಿಗೆ ಬರೋ ಯಾವದಾದ್ರು ಗಾಡಿಗೆ ಜೋರಾಗಿ ಗುದ್ದು”

ಅವಳು ಬಾಯಿ ತೆರೆದಳು. “ಲೋ ಇಡಿಯಟ್. ನಮ್ ಗತಿ?” ಎಂದಳು.

“ಸ್ವಲ್ಪ ಕೇಳು. ಅವನ ಕಾರಿನಲ್ಲಿ ಮುಂದುಗಡೆ ಸೀಟಿಗೆ ಏರ್ ಬ್ಯಾಗ್ ಇದೆ. ಅಲ್ದೆ ನಾವು ಸೀಟ್ ಬೆಲ್ಟ್ ಬೇರೆ ಹಾಕೊಂಡಿರತೀವಿ. ನಮಗೆ ಪೆಟ್ ಆದ್ರೂ ಕಮ್ಮಿ ಆಗುತ್ತೆ. ಅವರಿಗೆ ಮಾತ್ರ ಜೋರಾಗಿ ಆಗ್ಬೇಕು. ಆ ರೀತಿ ನೀನ್ ಕಾರು ಗುದ್ದಬೇಕು. ಹಿಂದುಗಡೆ ಕೂತಿರೋರು ಸೀಟ್ ಬೆಲ್ಟ್ ಹಾಕಿರೊಲ್ಲ.”

ಅವಳು ತುಸು ಹೊತ್ತು ಯೋಚಿಸಿದಳು. ಅವನು ಮುಂದುವರೆಸಿದ, “ಹೀಗ್ ಮಾಡಿದ್ರೆ ಯಾರಿಗೂ ಅನುಮಾನ ಬರೊಲ್ಲ. ಕಾರು ಕಂಟ್ರೊಲ್ ತಪ್ತು ಅಂತ ಆಮೇಲೆ ಹೇಳ್ಬಹುದು.”

ಅವಳು ಇನ್ನೂ ಯೋಚಿಸುತ್ತಿದ್ದಳು. ಸ್ವಲ್ಪ ಹೊತ್ತಾದ ಮೇಲೆ, “ಅವಂಗೆ ಪಟ್ಟು ಕಮ್ಮಿಯಾಗಿ ಉಳ್ಕೊಂಡ್ ಬಿಟ್ರೆ?”

“ಅವ್ನು ಉಳ್ಕೊಳ್ಳೋಕೆ ಚಾನ್ಸೇ ಇರಬಾರ‍್ದು, ನೀನು ಹಂಗ್ ಗುದ್ದಬೇಕು. ಒಂದ್ ವೇಳೆ ಉಳ್ಕೊಂಡ್ರೆ ನಮ್ ಬ್ಯಾಡ್ ಲಕ್.”

“ನಂಗ್ ಯಾಕೋ ತುಂಬಾ ಬಯ ಆಗ್ತಾಯಿದೆ. ಅವನ್ ಜೊತೆ ಸೂರಿನೂ ಸಾಯಿಸ್ಬೇಕಾ?”

“ನೋಡು. ಇದೇ ಸರಿಯಾದ್ ದಾರಿ. ಅಶ್ಟೊಂದ್ ಆಸ್ತಿ ಬೇಕು ಅಂದ್ರೆ ಸುಮ್ನೆನಾ? ನಾವೂ ಸ್ವಲ್ಪ ರಿಸ್ಕ್ ತೊಗೋಬೇಕು. ಬೇರೆ ರೀತಿ ಸಾಯಿಸೋಕೆ ಪ್ರಯತ್ನ ಮಾಡಿದ್ರೆ ನಿನ್ ಮೇಲೆ ಡೌಟು ಬರೋದು ಗ್ಯಾರಂಟಿ. ಆಸ್ತಿ ಎಲ್ಲಾ ನಿನಗೆ ಬರುತ್ತಲ್ಲಾ… ಅಲ್ಲದೇ ನಮ್ಮಿಬ್ಬರ ಸಂಬಂದ ಹೇಗಾದ್ರು ಗೊತ್ತಾದ್ರೆ ನಾವು ಸಿಕ್ಕಾಕೊಳ್ಳೋದ್ರಲ್ಲಿ ಡೌಟೇ ಇಲ್ಲ. ಯೋಚನೆ ಮಾಡು”. ಅವಳ ಮನಸ್ಸೊಲಿಸಲು ಎಲ್ಲಾ ಪ್ರಯತ್ನ ಮಾಡಿದ. ಅವಳು ಸುಮಾರು ಹೊತ್ತು ಯೋಚಿಸಿ, ಅವನ ದಾರಿ ಸರಿ ಎಂದುಕೊಂಡು ಒಪ್ಪಿದಳು. ಅವರು ಅಂದುಕೊಂಡ ಆ ದಿನ ಬಂದೇ ಬಿಟ್ಟಿತು.

*******************************************

ಎಲ್ಲರೂ ಹುರುಪಿನಿಂದ ಊಟಿ ಹೋಗಲು ತಯಾರಾಗಿದ್ದರು. ಮಹೇಶ ಹಿಂದೆಂದಿಗಿಂತಲೂ ಕುಶಿಯಲ್ಲಿದ್ದ. ತನ್ನ ಕೆಲಸದಲ್ಲಿ ಆಗುತ್ತಿರುವ ಮುನ್ನಡೆಯಿಂದ ಬೀಗುತ್ತಿದ್ದ. ಅವನ ಬೆನ್ನ ಹಿಂದೆ ನಡೆಯುತ್ತಿರುವ ಅವನ ಸಾವಿನ ಸಂಚು ಅವನಿಗೆ ಗೊತ್ತಿರಲಿಲ್ಲ. ಸೂರಿ, ದಿನೇಶ ಆಗಲೇ ಅವನ ಮನೆಗೆ ಬಂದಿದ್ದರು. ಎಲ್ಲರೂ ಬೆಳಗಿನ ತಿಂಡಿ ಮುಗಿಸಿ ಮನೆಯಿಂದ ಹೊರಬಂದರು. ಅವನ ಕಾರು ಓಡಿಸುವವ ಕಾರನ್ನು ತಂದು ಮನೆಯ ಮುಂಬಾಗಿಲಿನಲ್ಲಿ ನಿಲ್ಲಿಸಿ ಕೆಳಗಿಳಿದ. ಮಹೇಶ ಕಾರು ತಾನೇ ಓಡಿಸಲು ಮುಂದಾದ. ತಕ್ಶಣ ಅವನನ್ನು ತಡೆದ ಅವನ ಹೆಂಡತಿ,

“ಮಹೀ, ಇವತ್ತು ನಾನ್ ಕಾರ್ ಓಡಿಸ್ಲಾ?” ಎಂದು ಕೇಳಿದಳು.

“ಇಲ್ಲಾ ಡಾರ‍್ಲಿಂಗ್. ನಾನ್ ಕಾರ್ ಓಡ್ಸಿ ತುಂಬಾ ದಿನಾ ಆಯ್ತು. ಯಾಕೋ ಇವತ್ತು ನಾನೇ ಓಡಿಸ್ಬೇಕು ಅನಿಸ್ತಾ ಇದೆ. ಬೇಕಿದ್ರೆ ಊಟಾ ಮಾಡಿದ್ ಮೇಲೆ ನೀನು ಓಡಿಸುವಂತೆ” ಅಂದನು.

ಅವಳು ತನ್ನ ಗೆಳೆಯ, ದಿನೇಶನ ಕಡೆ ನೋಡಿದಳು. ಅವನು “ಇರಲಿ” ಎನ್ನುವಂತೆ ಕಣ್ಣು ಮಿಟಿಕಿಸಿದನು. ಅವಳು ಸಿಟ್ಟು ತೋರಿಸುವವಳಂತೆ ಅವನ ಪಕ್ಕ ಕೂರದೆ, ಹಿಂದಿನ ಸೀಟಿನಲ್ಲಿ ಕೂತುಕೊಂಡಳು. ಮಹೇಶ ಅವಳನ್ನು ರಮಿಸಲು ಮುಂದಾದ.

“ಯಾಕೇ? ಸಿಟ್ಟ್ ಮಾಡ್ಕೊಂಡ್ಯಾ?” ಎಂದನು

“ಏನ ಇಲ್ಲಾ. ನಾನು ಇಲ್ಲೇ ಕಂಪರ‍್ಟೆಬಲ್ ಆಗಿದೀನಿ” ಅಂದಳು, ಮುಕ ತಿರುವಿ. ಮಹೇಶ ಮತ್ತೆ ಮಾತಾಡಲಿಲ್ಲ, ಕಾರು ಹತ್ತಿದ. ಸೂರಿ ಮಹೇಶನ ಪಕ್ಕ ಕುಂತ, ದಿನೇಶ ಕಾರಿನ ಹಿಂದುಗಡೆ, ತನ್ನ ಗೆಳತಿಯ ಜೊತೆ ಕುಂತನು. ಕಾರು ಮನೆಯಿಂದ ಹೊರಟು, ಊರಿನ ಬೀದಿಗಳನ್ನು ಸೇರಿತು. ದಿನೇಶ ಮತ್ತು ಅವನ ಗೆಳತಿ ಸುಮ್ಮನೆ ಕೂತಿದ್ದರೂ, ತಮ್ಮ ತಮ್ಮ ಮೊಬಾಯಿಲಿನ ಮೆಸೇಜ್ ಗಳ ಮೂಲಕವೇ ಮಾತನಾಡಿಕೊಳ್ಳುತ್ತಿದ್ದರು.

ಅವಳು: “ಈಗ್ ಏನ್ ಮಾಡೋದು”

ಅವನು: “ಪ್ಲಾನ್ ನಲ್ಲಿ ಏನು ಬದಲಾವಣೆ ಇಲ್ಲಾ. ಊಟಾ ಆದ್ಮೇಲೆ ಹೇಗೂ ನೀನೆ ಕಾರ್ ಓಡಸ್ತೀಯಲ್ಲಾ. ನಾನೂ ಹೇಗಾದ್ರು ಮಾಡಿ ಮುಂದೆ ಬಂದು ಕೂತ್ಕೊತೀನಿ”

ಅವಳು: “ಸರಿ”

ಅವನು: “ಯಾವದಾದ್ರು ಜಂಕ್ಶನ್ ನಲ್ಲಿ ಎದುರಿಗೆ ಬರೋ ಲಾರಿಗೇ ಗುದ್ದು”

ಅವಳು: “ಸರಿ. ಏನಾದ್ರು ಆದ್ರೆ ದೇವ್ರೇ ಗತಿ”

ಊರಿನ ಬೀದಿಗಳನ್ನು ದಾಟಿ ಸುಮಾರು ಒಂದು ಗಂಟೆ ಮೇಲೆ ಹಾಯ್ ವೇ ಕೂಡಿಕೊಂಡರು. ಕಾರು ವೇಗ ಹೆಚ್ಚಿಸಿಕೊಂಡಿತು. ಕಾರಿನ ವೇಗ ನೋಡಿ, ಅವನ ಪಕ್ಕ ಕೂತಿದ್ದ ಸೂರಿ ನಿದಾನವಾಗಿ ಓಡಿಸುವಂತೆ ಕೇಳಿದ. ಅವನನ್ನು ನೋಡಿ “ಯಾಕೋ ಹೆದರ‍್ತೀಯಾ?” ಎಂದು ಮುಗುಳ್ನಕ್ಕ ಮಹೇಶ. ತುಸು ಹೊತ್ತು ಕಳೆದ ಮೇಲೆ, ದಾರಿಯನ್ನು ಇಬ್ಬಾಗ ಮಾಡುವ ತಡೆ ಇಲ್ಲದ ಒಂದು ಕಡೆ ಕಾರು ಇದ್ದಕ್ಕಿದ್ದಂತೆ ಎದುರಿಗೆ ಬರುವ ಗಾಡಿಗಳತ್ತ ಹೊರಳಿ, ಕ್ಶಣಮಾತ್ರದಲ್ಲಿ ಲಾರಿಯೊಂದಕ್ಕೆ ಜೋರಾಗಿ ಗುದ್ದಿತು. ಹೊಡೆತಕ್ಕೆ ಕಾರಿನ ಮುಂಬಾಗ ನುಜ್ಜುಗುಜ್ಜಾಗಿ, ಹಿಂದೆ ಕೂತಿದ್ದ ದಿನೇಶ ಮತ್ತು ಮಹೇಶನ ಹೆಂಡತಿ ಕಾರಿನ ಮೇಲ್ಚಾವಣಿಗೆ ಹಾಗೂ ಎದುರಿನ ಸೀಟುಗಳಿಗೆ ಅಪ್ಪಳಿಸಿದರು. ಇಬ್ಬರ ತಲೆಗಳಿಗೂ ಜೋರು ಪೆಟ್ಟು ಬಿದ್ದಿತು. ಮುಂದೆ ಕೂತಿದ್ದ ಮಹೇಶ ಮತ್ತು ಸೂರಿಯ ಕಯ್ ಕಾಲುಗಳಿಗೆ ಅಲ್ಲಲ್ಲಿ ಪೆಟ್ಟಾಗಿತ್ತು. ಸೀಟ್ ಬೆಲ್ಟ್ ಹಾಕಿಕೊಂಡಿದ್ದ ಕಾರಣ ಅವರಗೆ ಬೇರೆಕಡೆ ಹೆಚ್ಚು ಪೆಟ್ಟಾಗಲಿಲ್ಲ. ಅದಲ್ಲದೆ ಗಾಳಿ ಚೀಲಗಳು (ಏರ್ ಬ್ಯಾಗ್ಸ್) ಸರಿಯಾದ ಸಮಯಕ್ಕೆ ತರೆದುಕೊಂಡಿದ್ದರಿಂದ ಅವರ ತಲೆಗಳೂ ಸುರಕ್ಶಿತವಾಗಿದ್ದವು. ಎಲ್ಲರಿಗೂ ಎಚ್ಚರ ತಪ್ಪಿತು. ಕೆಲವೇ ಕ್ಶಣಗಳಲ್ಲಿ ಜನರೆಲ್ಲಾ ಸೇರಿ ಅವರನ್ನು ಕಾರಿನಿಂದ ಹೊರತಗೆದು ಆಸ್ಪತ್ರೆಗೆ ಸಾಗಿಸಿದರು.

******************************

ಆಸ್ಪತ್ರೆಯಲ್ಲಿ ಮಹೇಶನ ಪಕ್ಕ ಕೂತು ಪೊಲೀಸ್ ಎಸ್. ಆಯ್. ಒಬ್ಬರು ನಡೆದ ಗಟಣೆಯ ವಿವರ ಬರೆದುಕೊಳ್ಳುತ್ತಿದ್ದರು. ಮಹೇಶನು ಆಗಾಗ ದುಕ್ಕಿಸುತ್ತ, ಕಣ್ಣೊರಿಸಿಕೊಳ್ಳುತ್ತ, ನಡೆದುದೆಲ್ಲವನ್ನೂ ಹೇಳುತ್ತಿದ್ದನು. ಹೆಂಡತಿ ಮತ್ತು ಗೆಳೆಯನನ್ನು ಕಳೆದುಕೊಂಡ ಮಹೇಶನ ದುಕ್ಕ ಎಲ್ಲೆ ಮೀರಿದಂತೆ ತೋರುತ್ತಿತ್ತು. ಅಕಸ್ಮಾತ್ತಾಗಿ ಗಾಡಿ ತನ್ನ ನಿಯಂತ್ರಣ ಕಳೆದುಕೊಂಡು, ಎದುರಿಗೆ ಬರುತ್ತಿದ್ದ ಲಾರಿಗೆ ಅಪ್ಪಳಿಸಿತೆಂದು ಹೇಳಿದನು. ಎಸ್. ಆಯ್. ತಮಗೆ ಬೇಕಾದ ಎಲ್ಲ ವಿವರ ಕೇಳಿ ಪಡೆದು, ಹೊರ ನಡೆದರು. ತುಸು ಸಮಯದ ಮೇಲೆ ಆಸ್ಪತ್ರೆಯಲ್ಲಿದ್ದ ಅವನ ಕೋಣೆಗೆ ಗೆಳೆಯ ಸೂರಿ ಬಂದ. ಅವನ ಕಯ್ಯಿಗೆ ಪಟ್ಟಿ ಕಟ್ಟಿದ್ದರು. ಕೋಣೆಯಲ್ಲಿ ಅವರಿಬ್ಬರೇ ಇದ್ದದ್ದು.

“ಅಂತು ಎಲ್ಲಾ ನಿನ್ ಪ್ಲಾನ್ ಪ್ರಕಾರಾನೇ ಆಯ್ತಲ್ಲಾ?” ಎಂದು ಕೇಳಿದ.

“ಹೌದು” ಎನ್ನುವಂತೆ ಕಿರುನಕ್ಕ ಮಹೇಶ.

“ನನಗಾದ್ರು ಹೇಳಬಾರದಿತ್ತಾ ನಿನ್ ಪ್ಲಾನ್ ಏನು ಅಂತ?”

“ಹೇಳಿದ್ರೆ ನೀನ್ ಬರ‍್ತಿದ್ಯಾ?”

ನಗುತ್ತ, “ಇಲ್ಲಾ ಬಿಡು” ಅಂದ.

ಸ್ವಲ್ಪ ಹೊತ್ತು ಇಬ್ಬರೂ ನಕ್ಕರು. ಏನೋ ಸಾದಿಸಿದ ಕಳೆ ಇಬ್ಬರ ಮುಕದಲ್ಲೂ ಇತ್ತು.

“ತ್ಯಾಂಕ್ಸಪ್ಪಾ” ಎಂದನು ಮಹೇಶ.

“ತ್ಯಾಂಕ್ಸಾ? ಯಾಕೆ?”

“ಅದೇ… ನಾನ್ ಸಿಂಗಾಪುರ್ ನಲ್ಲಿದ್ದಾಗ, ಇಲ್ಲಿ ನೀನು ಡಿಟೆಕ್ಟೀವ್ ಗಳಿಗೆ ಹೇಳಿ ಅವರಿಬ್ಬರ ಸಂಬಂದ ಇದೆ ಅಂತ ಕಾತ್ರಿ ಮಾಡಿಸಿಕೊಟ್ಟೆ ಅಲ್ಲಾ, ಅದಕ್ಕೆ?”

“ಪರವಾಗಿಲ್ಲ ಬಿಡು. ಆದ್ರೂ…”

“ಆದ್ರೂ?”

“ಡಾಯ್ವೋರ‍್ಸ್ ಕೊಟ್ಟಿದ್ರೆ ಆಗಿರೋದು”

“ಡಾಯ್ವೋರ‍್ಸ್ ಕೊಟ್ರೆ ಅವನ್ ಜೊತೆ ನನ್ ಕಣ್ಣ ಮುಂದೇನೆ ಓಡಾಡ್ಕೊಂಡ್ ಆರಾಮಾಗಿರತಿದ್ಳು. ನನಗಾದ ನಂಬಿಕೆ ದ್ರೋಹಕ್ಕೆ ಇದೇ ತಕ್ಕ ಶಿಕ್ಶೆ”

“ಎಶ್ಟ ದಿನದಿಂದ ಈ ಸಂಬಂದ ಇತ್ತು ಅಂತ ಏನಾದ್ರು ಗೊತ್ತಾಯ್ತಾ?”

“ಇಲ್ಲಾ. ಆದ್ರೆ ಅವತ್ತು ದಿನೇಶಂಗೆ ಕಾಲ್ ಮಾಡಿ ಮಾತಾಡೋವಾಗ ಅವಳ ಮೊಬಾಯಿಲಿನ ರಿಂಗ್ ಟೋನ್ ಕೇಳಿಸ್ದೆ ಇದ್ದಿದ್ರೆ ನನಗ್ ಗೊತ್ತೇ ಆಗ್ತಿರಲಿಲ್ವೇನೋ…”

(ಚಿತ್ರ ಸೆಲೆ: wrecked+car+drawing )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: