ನುಡಿ ಮತ್ತು ಲಿಂಗ ತಾರತಮ್ಯ

ಸಿ.ಪಿ.ನಾಗರಾಜ.

Nudi mattu linga

“ಲಿಂಗ” ಎಂಬ ಪದ ಎರಡು ತಿರುಳುಗಳಲ್ಲಿ ಬಳಕೆಯಾಗುತ್ತಿದೆ.

ಅ) ಜೀವದ ನೆಲೆಯಲ್ಲಿ:
ಮಾನವ ಜೀವಿಗಳಲ್ಲಿ ಕಂಡು ಬರುವ ಗಂಡು ಮತ್ತು ಹೆಣ್ಣು ಎಂಬ ಎರಡು ಬಗೆಗಳನ್ನು ಹೆಸರಿಸುತ್ತದೆ. ಮಗುವನ್ನು ಹೆತ್ತು ಮನುಕುಲದ ಮುಂದುವರಿಕೆಗೆ ಈ ಎರಡು ಜೀವಿಗಳ ಕೂಡುವಿಕೆಯು ಅಗತ್ಯವಾಗಿದೆ. ಜೀವದ ನೆಲೆಯಲ್ಲಿ ಗಂಡು ಮತ್ತು ಹೆಣ್ಣಿಗೆ ಸಮಾನತೆಯಿದೆ. ಇದನ್ನು ಇಂಗ್ಲಿಶಿನಲ್ಲಿ ‘ಸೆಕ್ಸ್’ ಎಂದು ಕರೆಯುತ್ತಾರೆ.

ಆ) ಸಾಮಾಜಿಕ ನೆಲೆಯಲ್ಲಿ:

ಗಂಡು-ಹೆಣ್ಣು ಎಂಬ ಎರಡು ಬಗೆಗಳನ್ನು ಸೂಚಿಸುವುದರ ಜತೆಗೆ “ಗಂಡು ಮೇಲು – ಹೆಣ್ಣು ಕೀಳು” ಎಂಬ ತಾರತಮ್ಯವನ್ನು ಎತ್ತಿಹಿಡಿಯಲಾಗಿದೆ. ಇದನ್ನು ಇಂಗ್ಲಿಶಿನಲ್ಲಿ ‘ಜೆಂಡರ‍್’ ಎಂದು ಕರೆಯುತ್ತಾರೆ. ಈ ರೀತಿಯ ಮೇಲು-ಕೀಳಿನ ತರತಮವನ್ನು ಮಾನವ ಸಮಾಜ ವಿಂಗಡಿಸಿದೆ. ಆದುದರಿಂದ ‘ಜೆಂಡರ‍್’ ಎಂಬುದು ಸಮಾಜ ನಿರ‍್ಮಿತವೆಂದು ಸಮಾಜ ವಿಜ್ನಾನಿಗಳು ಹೇಳುತ್ತಾರೆ.

ಅಲೆಮಾರಿಯಾಗಿದ್ದ ಮಾನವ ಜೀವಿಗಳು ಒಂದೆಡೆ ನಿಂತು ಬೇಸಾಯವನ್ನು ಮಾಡತೊಡಗಿದಾಗ ಕುಟುಂಬಗಳು ರಚನೆಗೊಂಡವು. ಈ ಕುಟುಂಬಗಳಲ್ಲಿ ತಾಯಿಯೇ ಮೇಟಿಯಾಗಿದ್ದಳು. ಹುಟ್ಟುವ ಮಕ್ಕಳು ಮತ್ತು ಉಳುಮೆ ಮಾಡುವ ಬೂಮಿಯು ಸಮುದಾಯದ ಒಟ್ಟು ಆಸ್ತಿಯಾಗಿದ್ದವು. ಮಕ್ಕಳು ತಾಯಿಯ ಹೆಸರಿನ ಕುಲಕ್ಕೆ ಸೇರಿದವರಾಗಿದ್ದು, ಆ ಕುಲದ ಹೆಸರನ್ನು ಪಡೆಯುತ್ತಿದ್ದರು. ಮಕ್ಕಳು ಹುಟ್ಟುವಲ್ಲಿ ತಂದೆಯು ಯಾರು ಎಂಬುದು ಮುಕ್ಯವಾದ ಸಂಗತಿಯಾಗಿರಲಿಲ್ಲ. ಹೆಣ್ಣಿನ ಕಾಮದ ನಂಟಿಗೆ ಯಾವುದೇ ಬಗೆಯ ಕಟ್ಟುಪಾಡುಗಳು ಇರಲಿಲ್ಲ.

ಅನಂತರದ ಸಾವಿರಾರು ವರುಶಗಳ ಜನಜೀವನದಲ್ಲಿ ಅನೇಕ ಪಲ್ಲಟಗಳು ಉಂಟಾಗಿ ಉಳುವ ಬೂಮಿಯ ಒಡೆತನವು ಒಟ್ಟು ಸಮುದಾಯದಿಂದ ಕಯ್ ತಪ್ಪಿಹೋಗಿ, ಕೇವಲ ಕೆಲವೇ ಗಂಡಸರ ಹಿಡಿತಕ್ಕೆ ಸಿಲುಕಿದಾಗ, ಆಸ್ತಿಯ ಮೇಲೆ ವ್ಯಕ್ತಿಯ ಒಡೆತನ ಉಂಟಾಯಿತು. ಗಂಡು ತನ್ನ ಬೀಜದಿಂದ ಹುಟ್ಟುವ ಮಕ್ಕಳಿಗೆ ಆಸ್ತಿಯ ಒಡೆತನದ ಹಕ್ಕು ದೊರೆಯಬೇಕೆಂಬ ಉದ್ದೇಶಕ್ಕೆ ಒಳಗಾಗಿ, ಹೆಣ್ಣಿಗೆ ಶೀಲದ ಚವ್ಕಟ್ಟನ್ನು ಹಾಕಿ, ಅವಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡ. ಹೆಣ್ಣಿನ ಕಾಮದ ನಂಟಿಗೆ ದಾರ‍್ಮಿಕ ಹಾಗೂ ಸಾಮಾಜಿಕ ಕಟ್ಟುಪಾಡುಗಳನ್ನು ಹಾಕಿ, ಅವಳ ಚಲನ-ವಲನಗಳನ್ನು ನಿಯಂತ್ರಿಸಿ, ಹೆಣ್ಣಿಗೆ ಯಾವುದೇ ಬಗೆಯ “ಮಾತಿನ ಸ್ವಾತಂತ್ರ್ಯ – ಚಲನ ಸ್ವಾತಂತ್ರ್ಯ – ಇಚ್ಚೆಯ ಸ್ವಾತಂತ್ರ್ಯ” ಇಲ್ಲದಂತೆ ಮಾಡಿ, ಅವಳನ್ನು ತನ್ನ ಗುಲಾಮಳನ್ನಾಗಿಸಿಕೊಂಡ. ಈ ರೀತಿ ಆಸ್ತಿ ಹಾಗೂ ಹೆಣ್ಣಿನ ಮೇಲಿನ ವ್ಯಕ್ತಿಗತ ಒಡೆತನ ಮತ್ತು ಗಂಡು ಮೇಲುಗಯ್ಯಾಗಿರುವ ಕುಟುಂಬದ ರಚನೆಯ ಕಾರಣದಿಂದಾಗಿ, ಸಾಮಾಜಿಕ ನೆಲೆಯಲ್ಲಿ ಗಂಡು-ಹೆಣ್ಣಿನಲ್ಲಿ ಲಿಂಗ ತಾರತಮ್ಯವುಂಟಾಯಿತು.

ಗಂಡಸು ಮೇಲುಗಯ್ಯನ್ನು ಪಡೆದಿರುವ ಸಮಾಜದಲ್ಲಿ ಮನೆಯ ಹೊರಗೆ ದುಡಿಯುವ ಗಂಡಸಿಗೆ ಆಡಳಿತದ ಗದ್ದುಗೆ, ಹಣ ಮತ್ತು ಸ್ತಾನಮಾನಗಳು ದೊರೆತರೆ, ಮನೆಯ ಒಳಗೆ ದುಡಿಯುವ ಹೆಣ್ಣು ಇವೆಲ್ಲದರಿಂದ ವಂಚಿತಳಾದಳು. ಅವಳ ಮಯ್ಯಿ ನಿಸರ‍್ಗ ನಿಯಮದಂತೆ ಮುಟ್ಟು, ಬಸಿರು, ಹೆರಿಗೆ ಮತ್ತು ಮಕ್ಕಳನ್ನು ಸಾಕಿ ಸಲಹಿ ಬೆಳೆಸುವುದರಲ್ಲಿ ಜರ‍್ಜರಿತವಾಯಿತು. ಹೆಣ್ಣು ತನ್ನ ಮಯ್-ಮನಗಳ ಅಗತ್ಯ ಮತ್ತು ಬಯಕೆಗಳನ್ನು ಈಡೇರಿಸಿಕೊಳ್ಳಲು ಗಂಡಸಿನ ಮುಂದೆ ಕಯ್ ಒಡ್ಡಿ ಬಾಳುವಂತಾಯಿತು. ಮನೆಯೊಳಗೆ ಅಡುಗೆಯ ವಸ್ತುಗಳನ್ನು ಬೇಯಿಸಿ ತಿಂಡಿತೀರ‍್ತಗಳನ್ನು ತಯಾರಿಸುವ, ಮಾಡಿದ್ದನ್ನು ಮನೆಯವರೆಲ್ಲರಿಗೂ ಉಣಬಡಿಸುವ, ಅವರು ಚೆಲ್ಲಿದ ಎಂಜಲನ್ನು ಎತ್ತುವ, ಪಾತ್ರೆಗಳ ಮುಸುರೆಯನ್ನು ತೊಳೆಯುವ, ಮನೆಯೊಳಗೆ ಬೀಳುವ ಕಸಕೊಳೆಯನ್ನು ಗುಡಿಸಿ ತೆಗೆಯುವ ಮತ್ತು ಮಕ್ಕಳನ್ನು ಹೆರುವ ಯಂತ್ರವಾದಳು.

ಹೆಣ್ಣಿನ ಈ ಬಗೆಯ ಬದುಕನ್ನು ಕನ್ನಡದ ಗಾದೆಯೊಂದು “ತಂದು ಹಾಕುವವನು ಗಂಡಸು; ಬೇಯಿಸಿ ಹಾಕುವವಳು ಹೆಂಗಸು” ಎಂದು ಹೇಳುತ್ತದೆ. ಇಂಗ್ಲಿಶ್ ನುಡಿ ಸಮುದಾಯದಲ್ಲಿ ಗಂಡಸನ್ನು “ಬ್ರೆಡ್ ವಿನ್ನರ‍್” ಎಂದು ಕರೆದರೆ, ಹೆಂಗಸನ್ನು “ಬ್ರೆಡ್ ಬೇಕರ‍್” ಎನ್ನುತ್ತಾರೆ. ಜಗತ್ತಿನ ಎಲ್ಲಾ ನುಡಿಸಮುದಾಯಗಳಲ್ಲಿಯೂ ಹೆಣ್ಣಿನ ಸ್ತಾನಮಾನಗಳು ಗಂಡಿಗಿಂತ ಕಡಿಮೆ ಮಟ್ಟದಲ್ಲಿವೆ. ಈ ಎಲ್ಲಾ ಕಾರಣಗಳಿಂದಾಗಿ ಹೆಣ್ಣನ್ನು “ಸೆಕೆಂಡ್ ಸೆಕ್ಸ್” ಎಂದು ಗುರುತಿಸುತ್ತಾರೆ. ಅಂದರೆ, ಮಾನವ ಸಮಾಜದಲ್ಲಿ ಗಂಡಸು ಮೊದಲದರ‍್ಜೆಯ ಪ್ರಜೆಯಾದರೆ, ಹೆಂಗಸು ಎರಡನೆಯ ದರ‍್ಜೆಯ ಪ್ರಜೆಯಾಗಿದ್ದಾಳೆ. ಇತ್ತೀಚಿನ ವರುಶಗಳಲ್ಲಿ ಹೆಣ್ಣು ವಿದ್ಯಾವಂತೆಯಾಗಿ, ಉದ್ಯೋಗವನ್ನು ಪಡೆದು, ಹಣಕಾಸಿನಲ್ಲಿ ಸ್ವಾವಲಂಬಿಯಾಗಿದ್ದರೂ, ಕುಟುಂಬದಲ್ಲಿ ಅವಳ ಅಂತಸ್ತು ಗಂಡನಿಗಿಂತ ಕಡಿಮೆಯಾಗಿರುತ್ತದೆ. ಆದುದರಿಂದಲೇ ಕುಟುಂಬದಲ್ಲಿ ನಡೆಯುವ ದಾರ‍್ಮಿಕ ಹಾಗೂ ಸಾಂಸ್ಕ್ರುತಿಕ ಆಚರಣೆಗಳಲ್ಲಿ ಮತ್ತು ಹಣಕಾಸಿನ ವ್ಯವಹಾರಗಳಲ್ಲಿ ಗಂಡಸರ ಮಾತಿಗೆ ಇರುವಶ್ಟು ಬೆಲೆಯು ಹೆಂಗಸರ ಮಾತಿಗೆ ಇರುವುದಿಲ್ಲ. ಎಲ್ಲ ಬಗೆಯ ಮಾತುಕತೆಗಳಲ್ಲಿಯೂ ಕೊನೆಯ ಮಾತು ಗಂಡಸರದೇ ಆಗಿರುತ್ತದೆ.

ಮಾನವ ಸಮುದಾಯದಲ್ಲಿ ಆಚರಣೆಯಲ್ಲಿರುವ ದರ‍್ಮಗಳಲ್ಲಿ ನಿರೂಪಣೆಗೊಂಡಿರುವ ಕಟ್ಟುಕಟ್ಟಳೆಗಳೆಲ್ಲವೂ ಗಂಡಸಿನ ಪರವಾಗಿವೆ. ಹಿಂದೂ ದರ‍್ಮದಲ್ಲಿ ಹೆಣ್ಣು ಸ್ವಾತಂತ್ರ್ಯಕ್ಕೆ ಯೋಗ್ಯಳಲ್ಲ; ಅವಳು ಚಿಕ್ಕಂದಿನಲ್ಲಿ ತಂದೆತಾಯಿಗಳು, ಹರೆಯದಲ್ಲಿ ಗಂಡ ಮತ್ತು ಮುಪ್ಪಿನಲ್ಲಿ ಮಕ್ಕಳು ಹೇಳಿದಂತೆ ಕೇಳಿಕೊಂಡಿರಬೇಕು. ಅಂದರೆ ಅವರಿಗೆ ಅಡಿಯಾಳಾಗಿ ಬಾಳಬೇಕು. ಇಸ್ಲಾಮ್ ದರ‍್ಮದಲ್ಲಿ ಹೆಣ್ಣಿಗೆ ಬುರ‍್ಕಾ ತೊಡಿಸಿ, ಅವಳಿಗೆ ಒಂದು ಸಾಮಾಜಿಕ ವ್ಯಕ್ತಿತ್ವವೇ ಇಲ್ಲದಂತೆ ಮಾಡಲಾಗಿದೆ. ಕ್ರಯ್‍ಸ್ತ ದರ‍್ಮದಲ್ಲಿ ಗಂಡಸಿನ ಎಲ್ಲಾ ಬಗೆಯ ಪಾಪದ ಕೆಲಸ ಮತ್ತು ಸಂಕಟಕ್ಕೆ ಹೆಂಗಸು ಕಾರಣವೆಂದು ಹೇಳಲಾಗಿದೆ. ಜಯ್‍ನ ದರ‍್ಮದಲ್ಲಿ ಹೆಣ್ಣಿನ ಜನ್ಮದಲ್ಲಿ ಮುಕ್ತಿಯನ್ನು ಪಡೆಯುವ ಅವಕಾಶವಿಲ್ಲ; ಮುಂದಿನ ಜನ್ಮದಲ್ಲಿ ಮತ್ತೆ ಗಂಡಾಗಿ ಹುಟ್ಟಿದರೆ ಮಾತ್ರ ಹುಟ್ಟುಸಾವಿನ ಸರಪಳಿಯಿಂದ ಬಿಡುಗಡೆಯನ್ನು ಪಡೆಯಬಹುದು. ದಾರ‍್ಮಿಕ ನಿಯಮ ಮತ್ತು ಸಾಮಾಜಿಕ ಕಟ್ಟುಪಾಡುಗಳನ್ನು ಮೀರಿ ಕಾಮದ ನಂಟನ್ನು ಪಡೆಯುವ ಹೆಣ್ಣು-ಗಂಡುಗಳಲ್ಲಿ, ಗಂಡಿನ ತಪ್ಪನ್ನು ಉದಾರವಾಗಿ ಕಾಣುವ ಮತ್ತು ಮನ್ನಿಸಿ ಮರೆತುಬಿಡುವ ಸಮಾಜವು, ಹೆಣ್ಣಿನ ತಪ್ಪನ್ನು ಅತ್ಯಂತ ಹೇಯವೆಂದು ಪರಿಗಣಿಸಿ, ಆಕೆಯನ್ನು ದಂಡಿಸುವುದಲ್ಲದೇ, “ನಾಯಿ ಮುಟ್ಟಿದ ಮಡಕೆಯೆಂದು” ದೂರ ತಳ್ಳುತ್ತದೆ.

ಹೆಣ್ಣಿನ ಜೀವನದ ಆಗುಹೋಗುಗಳನ್ನು ಒಟ್ಟಾರೆಯಾಗಿ ನೋಡಿ, ಆಕೆಯ ಬಗ್ಗೆ ಚಿಂತಿಸುತ್ತಿರುವ ಸ್ತ್ರೀವಾದಿ ಬರಹಗಾತಿಯರು ಈಗ ಜಗತ್ತಿನಲ್ಲಿ ಬಳಕೆಯಲ್ಲಿರುವ ನುಡಿಗಳನ್ನು “ಮ್ಯಾನ್ ಮೇಡ್ ಲಾಂಗ್ವೇಜ್/ಗಂಡು ಕಟ್ಟಿದ ನುಡಿ” ಎಂದು ಆರೋಪಿಸುತ್ತಾರೆ. “ಗಂಡು ಕಟ್ಟಿದ ನುಡಿ” ಎಂದರೆ ಗಂಡಸಿನ ಒಡೆತನ, ಅದಿಕಾರ ಮತ್ತು ಹತೋಟಿಗೆ ಒಳಪಟ್ಟು, ಗಂಡಸರ ಹಿತವನ್ನು ಕಾಪಾಡುವುದಕ್ಕಾಗಿ ಬಳಕೆಯಾಗುತ್ತಿರುವ ನುಡಿ. ಈ ಆರೋಪದಲ್ಲಿ ವಾಸ್ತವದ ಅಂಶ ಹೆಚ್ಚಾಗಿದೆ. ಜಗತ್ತಿನಲ್ಲಿ ಗಂಡಸರ ಮತ್ತು ಹೆಂಗಸರ ಜನಸಂಕೆಯ ಪ್ರಮಾಣವು ತುಸು ಹೆಚ್ಚುಕಡಿಮೆ ಸಮವಾಗಿದ್ದರೂ, ಮಾನವ ಸಮುದಾಯದ ಬದುಕನ್ನು ನಿರ‍್ದೇಶಿಸುತ್ತಿರುವ ಮತ್ತು ನಿಯಂತ್ರಿಸುತ್ತಿರುವ ದರ‍್ಮ-ರಾಜಕಾರಣ-ತತ್ವಜ್ನಾನ-ಕಾನೂನು-ವಿದ್ಯೆ-ವಾಣಿಜ್ಯ ಮತ್ತು ಇನ್ನಿತರ ಸಾಮಾಜಿಕ ಒಕ್ಕೂಟಗಳೆಲ್ಲವೂ ಬಹುತೇಕ ಪಾಲು ಗಂಡಸರಿಂದಲೇ ರಚನೆಗೊಂಡಿವೆ ಮತ್ತು ಗಂಡಸರಿಂದಲೇ ತುಂಬಿವೆ. ಮಾತಿನ ಸನ್ನಿವೇಶದಲ್ಲಿ ಪಾಲುಗೊಳ್ಳುವ ಗಂಡಸರಿಗೆ ಮತ್ತು ಹೆಂಗಸರಿಗೆ ಬೇರೆ ಬೇರೆ ಬಗೆಯ ಕಟ್ಟುಪಾಡುಗಳನ್ನು ಹಾಕಲಾಗಿದೆ. ಸಾರ‍್ವಜನಿಕ ವ್ಯವಹಾರದ ಮಾತುಕತೆಗಳಲ್ಲಿ ಹೆಣ್ಣು ಹೆಚ್ಚಾಗಿ ತೊಡಗುವಂತಿಲ್ಲ. ಹೆಚ್ಚು ಮಾತನಾಡುವ ಹೆಂಗಸಿಗಿಂತ ಕಡಿಮೆ ಮಾತನಾಡುವ ಇಲ್ಲವೇ ಸುಮ್ಮನಿರುವ ಹೆಂಗಸು ಒಳ್ಳೆಯವಳು ಎಂಬ ನಿಲುವು ಜನಮನದಲ್ಲಿದೆ. ಸಬೆಸಮಾರಂಬಗಳಲ್ಲಿ ಹೆಂಗಸರು ಜತೆಗೂಡಿದಾಗ ಸಹಜವಾಗಿ ಮಾತಿನಲ್ಲಿ ತೊಡಗಿದ್ದರೂ, ಅದನ್ನು ಗಮನಿಸುವ ಗಂಡಸರು “ಹೆಂಗಸರೇ ಹೀಗೆ… ವಿಪರೀತ ಮಾತನಾಡುತ್ತಾರೆ” ಎಂದು ಗೊಣಗುತ್ತಾರೆ.

ಹೆಂಗಸರ ದುಡಿಮೆಯ ನೆಲೆಗಳು ತುಂಬಾ ಸೀಮಿತವಾದುದರಿಂದ ಹೆಂಗಸರ ಗುಂಪಿನಲ್ಲಿ ನಡೆಯುವ ಮಾತುಕತೆಗಳಲ್ಲಿ ಮಕ್ಕಳ ಲಾಲನೆ-ಪಾಲನೆ, ಅಡುಗೆ, ಉಡುಗೆ-ತೊಡುಗೆ, ವ್ಯಕ್ತಿಗತವಾದ ನೋವು ನಲಿವಿನ ಸಂಗತಿಗಳೇ ಹೆಚ್ಚಾಗಿ ಪ್ರಸ್ತಾಪಗೊಳ್ಳುತ್ತವೆ. ಗಂಡಸರ ದುಡಿಮೆಯ ನೆಲೆಗಳು ತುಂಬಾ ವಿಸ್ತಾರವಾಗಿರುವುದರಿಂದ ಗಂಡಸರ ಗುಂಪಿನಲ್ಲಿ ನಡೆಯುವ ಮಾತುಕತೆಯಲ್ಲಿನ ಸಂಗತಿಗಳು ದೇಶವಿದೇಶಗಳ ವಿಚಾರಗಳಿಂದ ಹಿಡಿದು ಉಗ್ರಗಾಮಿಗಳ ಕೇಡಿನ ಕೆಲಸ-ಜಾತಿದರ‍್ಮಗಳ ಹಗೆತನ-ರಾಜಕಾರಣ-ದರ‍್ಮ-ಸಾಹಿತ್ಯ-ಆಟೋಟ ಮುಂತಾದುವನ್ನು ಒಳಗೊಂಡಿರುತ್ತವೆ.

ಆಸ್ತಿಪಾಸ್ತಿ ಮತ್ತು ಹಣವನ್ನು ಹೆಚ್ಚಾಗಿ ಹೊಂದಿರುವ, ಸುಮಾರಾಗಿ ಹೊಂದಿರುವ ಮತ್ತು ಏನೂ ಇಲ್ಲದಿರುವ ಕುಟುಂಬಗಳಲ್ಲಿನ ಗಂಡು-ಹೆಣ್ಣಿನ ಮಾತಿನ ವರ‍್ತನೆಗಳು ಬೇರೆಬೇರೆ ಬಗೆಗಳಲ್ಲಿರುತ್ತವೆ. ಗಂಡಸರು ಮತ್ತು ಹೆಂಗಸರ ಸಾಮಾಜಕ ವರ‍್ತನೆ ಮತ್ತು ನುಡಿ ವರ‍್ತನೆಗಳಲ್ಲಿ, ಅವರು ಹುಟ್ಟಿ ಬೆಳೆದು ಬಾಳುತ್ತಿರುವ ಜಾತಿ-ದರ‍್ಮ-ವರ‍್ಗ-ಓದು-ವಯಸ್ಸಿನ ಸಂಗತಿಗಳು ಬಹುಬಗೆಯ ಪರಿಣಾಮವನ್ನು ಬೀರುತ್ತವೆ.

ಗಂಡಸರು-ಗಂಡಸರು, ಗಂಡಸರು-ಹೆಂಗಸರು, ಹೆಂಗಸರು-ಹೆಂಗಸರು ಪರಸ್ಪರ ಜತೆಗೂಡಿ ಮಾತನಾಡುವಾಗ ಕಂಡು ಬರುವ ಮಾತನಾಡುವಿಕೆಯ ಬಗೆಗಳನ್ನು ಸಾಮಾಜಿಕ ನುಡಿ ವಿಜ್ನಾನಿಗಳು ಗುರುತಿಸಿದ್ದಾರೆ. ಅವುಗಳಲ್ಲಿ ಕೆಲವು ಈ ಕೆಳಕಂಡಂತಿವೆ.

ಅ) ಮಾತಿನ ಸನ್ನಿವೇಶದಲ್ಲಿ ಗಂಡಸು ಮಾತನಾಡುತ್ತಿರುವಾಗ ಹೆಂಗಸು ಮನವಿಟ್ಟು ಕೇಳುತ್ತಾಳೆ. ಆದರೆ ಹೆಂಗಸು ಆಡುವ ಮಾತುಗಳನ್ನು ಗಂಡಸು ಗಮನವಿಟ್ಟು ಕೇಳಿಸಿಕೊಳ್ಳುವುದಿಲ್ಲ. ಹೆಂಗಸು ತನ್ನ ಮಾತನ್ನು ಆಡಿ ಮುಗಿಸುವುದಕ್ಕೆ ಮುಂಚೆಯೇ ಗಂಡಸು ಮಾತಿನ ನಡುವೆ ತಲೆಹಾಕಿ ಮಾತನಾಡತೊಡಗುತ್ತಾನೆ. ಹೆಂಗಸಿನ ಮಾತಿಗೆ ಪದೇ ಪದೇ ಅಡ್ಡಿಪಡಿಸುತ್ತಾನೆ. ಇಂತಹ ನುಡಿವರ‍್ತನೆಗೆ ಕಾರಣವೇನೆಂದರೆ “ಹೆಂಗಸಿಗೆ ಏನು ತಿಳಿದಿದೆ? ಅವಳು ಸರಿಯಾಗಿ ಏನನ್ನೂ ತಾನೇ ಹೇಳಬಲ್ಲಳು?” ಎಂಬ ಅಹಂಕಾರ ಮತ್ತು ಹೆಣ್ಣಿನ ಬಗ್ಗೆ ತಿರಸ್ಕಾರದ ನಿಲುವು ಗಂಡಿನಲ್ಲಿದೆ.

ಆ) ಗಂಡಸರು ಒರಟಾಗಿ, ಗತ್ತಿನಿಂದ ಮತ್ತು ಕೆಲವೊಮ್ಮೆ ಬಾಯಿಗೆ ಬಂದಂತೆಲ್ಲಾ ಯಾವುದೇ ಸಂಕೋಚ ಹಾಗೂ ಹಿಂಜರಿಕೆಯಿಲ್ಲದೆ ಮಾತನಾಡಿರೆ, ಹೆಂಗಸರು ತಾವಾಡುವ ಮಾತುಗಳ ಬಗ್ಗೆ ಸಾಕಶ್ಟು ಎಚ್ಚರದಿಂದಿರುತ್ತಾರೆ. ಏಕೆಂದರೆ ತಾವಾಡುವ ಮಾತುಗಳು ತಮ್ಮ ವ್ಯಕ್ತಿತ್ವದ ಬಗ್ಗೆ ಇತರರಲ್ಲಿ ಬಹು ಬಗೆಯ ಅನಿಸಿಕೆಗಳನ್ನು ಮೂಡಿಸುತ್ತವೆ ಎಂಬ ಅರಿವು ಹೆಂಗಸರಲ್ಲಿದೆ.

ಇ) ಮಾತಿನ ಸನ್ನಿವೇಶದಲ್ಲಿ ಗಂಡಸರು ಒಂದು ವಿಶಯದಿಂದ ಮತ್ತೊಂದು ವಿಶಯಕ್ಕೆ ಬಹು ಬೇಗ ಹಾರುತ್ತಾರೆ. ಆದರೆ ಹೆಂಗಸರು ಯಾವುದೇ ಒಂದು ವಿಶಯವನ್ನು ಕುರಿತು ಸಂಪೂರ‍್ಣವಾಗಿ ಮಾತನಾಡಿದ ನಂತರವೇ, ಮತ್ತೊಂದು ವಿಶಯದತ್ತ ಗಮನ ಹರಿಸುತ್ತಾರೆ.

ಸಾಮಾಜಿಕ ವ್ಯವಹಾರದ ಮಾತಿನ ಸನ್ನಿವೇಶಗಳಲ್ಲಿ ಬಳಕೆಯಾಗುವ ನುಡಿಯು ಕೆಲವೊಮ್ಮೆ ಗಂಡಸರು ಮತ್ತು ಹೆಂಗಸರ ಬಗ್ಗೆ ಬೇರೆಬೇರೆ ಬಗೆಯ ತಿರುಳನ್ನು ನೀಡುತ್ತದೆ.

ಉದಾಹರಣೆ-1:
ಅಂಗಡಿಯೊಂದರಲ್ಲಿನ ಮಾಲೀಕನು ತನ್ನ ಗೆಳೆಯನೊಬ್ಬನಿಗೆ ಅಂಗಡಿಯಿಂದ ಹೊರಹೋಗುತ್ತಿರುವ ಒಬ್ಬ ತರುಣನತ್ತ ಕಯ್ ತೋರಿಸಿ “ಅವನು ನಮಗೆ ಒಳ್ಳೆಯ ಗಿರಾಕಿ” ಎಂದು ಹೇಳಿದಾಗ, ಆ ತರುಣನು ಯಾವಾಗಲೂ ನಮ್ಮ ಅಂಗಡಿಯಿಂದಲೇ ಸಾಮಾನುಗಳನ್ನು ಕೊಂಡುಕೊಳ್ಳುತ್ತಾನೆ ಎಂಬ ತಿರುಳು ಹೊರಹೊಮ್ಮುತ್ತದೆ. ಇದೇ ರೀತಿ ಅಂಗಡಿಗೆ ಬಂದು ಹೋಗುತ್ತಿರುವ ಒಬ್ಬ ತರುಣಿಯನ್ನು ತೋರಿಸುತ್ತಾ “ಅವಳು ನಮಗೆ ಒಳ್ಳೆಯ ಗಿರಾಕಿ” ಎಂದು ಹೇಳಿದರೆ, ಆಗ ಆ ತರುಣಿಯು ಒಬ್ಬ ಸೂಳೆ ಇಲ್ಲವೇ ಕಾಮದ ನಂಟನ್ನು ಪಡೆಯಲು ದೊರಕುತ್ತಾಳೆ ಎಂಬ ತಿರುಳು ಉಂಟಾಗುತ್ತದೆ. ಇಂತಹ ಸಾಂದರ‍್ಬಿಕ ತಿರುಳಿಗೆ ಕಾರಣವೇನೆಂದರೆ ಗಂಡು ಮೇಲುಗಯ್ಯನ್ನು ಪಡೆದಿರುವ ಸಮಾಜದಲ್ಲಿ ಹೆಣ್ಣನ್ನು ಕುರಿತು ಆಡುವ ಮಾತುಗಳಲ್ಲಿ ಕಾಮದ ನೆಂಟಿನ ನೆರಳು ಇರುತ್ತದೆ.

ಉದಾಹರಣೆ-2:
ಸಾರ‍್ವಜನಿಕ ರಂಗದಲ್ಲಿ ತೊಡಗಿರುವ ಹೆಂಗಸರ ಬಗೆಗೆ ವರದಿ ಮಾಡುವ ಬರಹಗಳಲ್ಲಿ, ಆಕೆಯ ಹೆಸರಿನ ಮೊದಲಲ್ಲಿ “ಕುಮಾರಿ” ಇಲ್ಲವೇ “ಶ್ರೀಮತಿ” ಎಂಬ ಪದಗಳನ್ನು ಬಳಸುತ್ತಾರೆ.
ಕುಮಾರಿ ಕಮಲ—–ಶ್ರೀಮತಿ ಕಮಲ
ಕುಮಾರಿ ಲಲಿತ—–ಶ್ರೀಮತಿ ಲಲಿತ
ಇಂತಹ ಪದಗಳ ಬಳಕೆಯನ್ನು ಕುರಿತು ಸಾಮಾಜಿಕ ನುಡಿ ವಿಜ್ನಾನಿಗಳು ಈ ರೀತಿ ಹೇಳುತ್ತಾರೆ.
“ಕುಮಾರಿ/ಶ್ರೀಮತಿ ಎಂಬ ಪದಗಳು ಒಂದು ಹೆಣ್ಣಿಗೆ ಮದುವೆಯಾಗಿದೆಯೋ ಇಲ್ಲವೋ ಎಂಬುದನ್ನು ಸಮಾಜಕ್ಕೆ ತಿಳಿಸುತ್ತವೆ. ಒಂದು ಹೆಣ್ಣು ನಮಗೆ ದೊರಕುತ್ತಾಳೆಯೋ ಇಲ್ಲವೇ ಈಗಾಗಲೇ ಬೇರೊಬ್ಬ ಗಂಡಸಿನ ವಶವರ‍್ತಿಯಾಗಿದ್ದಾಳೆಯೋ ಎಂಬುದನ್ನು ತಿಳಿಯುವ ಗಂಡು ಮೇಲುಗಯ್ಯನ್ನು ಪಡೆದಿರುವ ಸಮಾಜದ ಹುನ್ನಾರ ಈ ಬಗೆಯ ನುಡಿರಚನೆಯಲ್ಲಿ ಅಡಗಿದೆ. ಒಂದು ಗಂಡು ಮದುವೆಯಾಗಿದ್ದಾನೆಯೋ ಇಲ್ಲವೋ ಎಂಬುದನ್ನು ತಿಳಿಸುವ ಯಾವುದೇ ಬಗೆಯ ನುಡಿರಚನೆಗಳು ಬಳಕೆಯಲ್ಲಿಲ್ಲ. ಗಂಡಸರ ಹೆಸರಿನ ಮೊದಲಲ್ಲಿ ಬರುವ “ಶ್ರೀ” ಎಂಬ ಪದವು ಕೇವಲ ಗವ್‍ರವ ಸೂಚಕವೇ ಹೊರತು, ಗಂಡಿನ ಮದುವೆಯ ಬಗೆಗೆ ಯಾವುದೇ ಮಾಹಿತಿಯನ್ನು ನೀಡುವುದಿಲ್ಲ.”

ಉದಾಹರಣೆ-3:
ವಿದ್ಯಾವಂತೆಯರಾದ ಹೆಂಗಸರಲ್ಲಿ ಹಲವರು ತಮ್ಮ ಹೆಸರಿನ ಮುಂದೆ ಗಂಡನ ಇಲ್ಲವೇ ತಂದೆಯ ಹೆಸರನ್ನು ಹಾಕಿಕೊಳ್ಳುತ್ತಾರೆ.
ಸುದಾ ನಾರಾಯಣಮೂರ‍್ತಿ (ಗಂಡನ ಹೆಸರು)
ಗವುರಿ ಲಂಕೇಶ್ (ತಂದೆಯ ಹೆಸರು)
ಗಂಡನ ಹೆಸರನ್ನು ಹಾಕಿಕೊಳ್ಳುವ ಹೆಂಗಸರು, ತಾವು ಇಂತಹ ಗಂಡಸಿಗೆ ಸೇರಿದ ಆಸ್ತಿ ಇಲ್ಲವೇ ವಸ್ತು ಎಂಬುದನ್ನು ಸಮಾಜಕ್ಕೆ ಈ ಮೂಲಕ ತಿಳಿಸುತ್ತಾರೆ. ತಂದೆಯ ಹೆಸರನ್ನು ಹಾಕಿಕೊಳ್ಳುವ ಹೆಂಗಸರು ತಮ್ಮ ತಂದೆಯು ಸಾಮಾಜಿಕ ರಂಗದಲ್ಲಿ ಮಾಡಿರುವ ಒಳ್ಳೆಯ ಕೆಲಸ ಮತ್ತು ಗಳಿಸಿರುವ ಕೀರ‍್ತಿಯ ಹಿನ್ನೆಲೆಯಲ್ಲಿ ತಮ್ಮನ್ನು ಸಮಾಜ ಗುರುತಿಸುವಂತಾಗಲಿ ಎಂಬ ಉದ್ದೇಶವನ್ನು ಹೊಂದಿರುತ್ತಾರೆ. ಸಾವಿರಾರು ವರುಶಗಳಿಂದಲೂ ಗಂಡಿನ ಅಡಿಯಾಳಾಗಿ ಬಾಳುತ್ತಿರುವ ಹೆಣ್ಣು ಇತ್ತೀಚಿನ ಕಾಲಮಾನದಲ್ಲಿ ವಿಜ್ನಾನ, ತಂತ್ರಜ್ನಾನ ಹಾಗೂ ಓದಿನ ಮೂಲಕ ಸಮಾಜದ ಎಲ್ಲಾ ರಂಗಗಳಿಗೆ ಅಡಿಯಿಡುತ್ತಿದ್ದರೂ ಗಂಡಸಿನ ಹೆಸರನ್ನು ತನ್ನ ಹೆಸರಿನೊಡನೆ ಹಾಕಿಕೊಳ್ಳುವುದರ ಮೂಲಕ ತನ್ನ ಸಾಮಾಜಿಕ ಇರುವಿಕೆಯನ್ನು ಮತ್ತು ಸಾಮಾಜಿಕ ಅಂತಸ್ತನ್ನು ಗಂಡಿನ ನೆರಳಿನಲ್ಲಿಯೇ ಪಡೆಯುತ್ತಿರುವುದನ್ನು ಇಂತಹ ನುಡಿಚಹರೆಗಳು ಸೂಚಿಸುತ್ತವೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: