ಪತ್ತೇದಾರಿ ಕತೆ – ಕೊಲೆಗಾರ ಯಾರು?..

– ಬಸವರಾಜ್ ಕಂಟಿ.

detective1

ಕಂತು-1 ಕಂತು-2

ಮಾರನೇಯ ದಿನ ಬೆಳಗ್ಗೆ ಟಿವಿ ನೋಡುವಾಗ ಬಂದ ಸುದ್ದಿ ಕೇಳಿ ಗಾಬರಿಯಾದನು ಪುಲಕೇಶಿ. ನಿನ್ನೆ ತನ್ನ ಮನೆಗೆ ಬಂದಿದ್ದ ಹುಡುಗ, ಅನುಪಮ್, ರೇಸ್ ಕೋರ‍್ಸ್ ರಸ್ತೆಯಲ್ಲಿದ್ದ ಅವನ ತಂದೆಯ ಮನೆಯಲ್ಲಿ ಹಿಂದಿನ ರಾತ್ರಿ ಕೊಲೆಯಾಗಿದ್ದನು. ಪೊಲೀಸರು ಆಗಲೇ ತನಿಕೆ ಶುರುಮಾಡಿದ್ದರು. ಪಾಪ ಎನಿಸಿ ಪುಲಕೇಶಿ ಮನಸ್ಸಿಗೆ ತುಂಬಾ ನೋವಾಯಿತು. ತಡೆದುಕೊಳ್ಳಲಾಗಲಿಲ್ಲ, ತನ್ನ ಗೆಳೆಯ ಎಸ್. ಆಯ್ ಶಶಿದರ್ ಗೆ ಕರೆಮಾಡಿ, ಮಹದೇವಯ್ಯನವರ ಮನೆ ವಿಳಾಸ ಪಡೆದು ಅಲ್ಲಿಗೆ ಬಂದನು. ಅಲ್ಲಿದ್ದ ಇನ್ನೊಬ್ಬ ಎಸ್. ಆಯ್, ಪುಲಕೇಶಿಯನ್ನು ಗುರುತು ಹಿಡಿದು ಮಾತನಾಡಿಸಿದನು.

“ನಮಸ್ಕಾರ ಪುಲಕೇಶಿಯವರೇ, ನಿಮ್ ತಂದೆ ಇದ್ದಿದ್ರೆ ಈ ಕೇಸನ್ನಾ ಈಗಿಂದೀಗ್ಲೆ ಮುಗಸ್ಬಿಟ್ಟಿರೋರು. ಬರೀ ಹೆಣ ನೋಡಿ ಕೊಲೆ ಹಿಂಗಿಂಗೇ ಆಯ್ತು ಅಂತ ತಟ್ ಅಂತಾ ಹೇಳೋರು. ಅಂತಾವ್ರು ನಮ್ ಡಿಪಾರ‍್ಟಮೆಂಟಲ್ಲಿ ಇದ್ದದ್ದೇ ನಮಗ್ ಹೆಮ್ಮೆ ನೋಡಿ”

ಪುಲಕೇಶಿಗೆ ಅಪ್ಪನ ಬಗ್ಗೆ ಹೆಮ್ಮೆಯಾಯ್ತು. “ಏನಾದ್ರು ಗೊತ್ತಾಯ್ತಾ ಸರ‍್?” ಕೇಸಿನ ಬಗ್ಗೆ ಕೇಳಿದನು ಪುಲಕೇಶಿ.

“ಇನ್ನೂ ಇಲ್ಲಾ. ಇನ್ನೇನು ಹೆಣ ಪೋಸ್ಟ್ ಮಾರ‍್ಟಮ್ಗೆ ಕಳಿಸ್ಬೇಕು”

“ಓಹ್! ನಾನೊಂದ್ಸಲಾ ನೋಡಬಹುದಾ?”

“ನೋಡಿ, ಅದಕ್ಕೇನು”

ಪುಲಕೇಶಿ ಮನೆಯ ಒಳಗೆ ಹೋದ. ವಿಶಾಲವಾದ ಮನೆ. ನಡುಮನೆಯ ಎಡಗಡೆ ಅಡಿಗೆ ಮನೆ, ಅದರ ಪಕ್ಕ ಒಂದು ಕೋಣೆ. ಬಲಬಾಗದಲ್ಲಿ ಮೇಲಿನ ಮಹಡಿಗೆ ಹೋಗಲು ಕಟ್ಟೆಗಳು. ಕಟ್ಟೆಗಳ ಹಿಂದೆ ಇನ್ನೂ ಎರಡು ಕೋಣೆಗಳು. ಬಗೆಬಗೆಯ ತಿಟ್ಟಗಳು, ಹೂಗುಚ್ಚಗಳಿಂದ ಮನೆಯನ್ನು ಅಚ್ಚುಕಟ್ಟಾಗಿ ಅಲಂಕರಿಸಲಾಗಿತ್ತು. ಅಡಿಗೆಮನೆಗೆ ಹೊಂದಿಕೊಂಡಿದ್ದ ಊಟ ಮಾಡುವ ಮೇಜಿನ ಬಳಿಯಲ್ಲಿ ಬಿದ್ದಿತ್ತು ಅವನ ಹೆಣ. ನೇರ ಹೆಣದ ಬಳಿಗೆ ಹೋದನು ಪುಲಕೇಶಿ. ಅಲ್ಲಿಯೇ ಸೋಪಾದ ಮೇಲೆ ಕುಳಿತಿದ್ದ ಒಬ್ಬ ಹೆಂಗಸು, ಪುಲಕೇಶಿಯನ್ನು ನೋಡಿ, ಮೇಲೆದ್ದು,

“ಯಾರ‍್ರೀ ನೀವು?” ಜೋರು ದನಿಯಲ್ಲಿ ಕೇಳಿದಳು. ಅಲ್ಲಿದ್ದ ಒಬ್ಬ ಪೇದೆಕಡೆಗೆ ತಿರುಗಿ, “ಯಾರ‍್ರೀ ಇವ್ರು? ಯಾರ‍್ಯಾರೋ ಬಂದು ಮನೆಯಲ್ಲಾ ಗಲೀಜು ಮಾಡ್ತಾರೆ. ಈಗಾಗ್ಲೆ ನೀವು ಶೂ ಹಾಕೊಂಡು ಮನೆಯಲ್ಲಾ ಓಡಾಡಿದ್ ಸಾಲ್ದಾ? ನೋಡಿ ಇಲ್ಲಿ, ಎಲ್ ಬೇಕೋ ಅಲ್ಲೆಲ್ಲಾ ಒಡಾಡಿ ಹೇಗೆ ನೆಲ ಕೊಳೆಯಾಗಿದೆ ಅಂತಾ” ಎಂದು ಅಲ್ಲಲ್ಲಿ ಬೂಟುಗಾಲಿಂದ ಆಗಿದ್ದ ಚೂರು ಪಾರು ಕೊಳೆ ತೋರಿಸಿದಳು.

ಪುಲಕೇಶಿ ತನ್ನ ಪರಿಚಯ ಹೇಳಿಕೊಂಡ. ತಾನೊಬ್ಬ ಪತ್ತೇದಾರ, ತನ್ನ ತಂದೆ ಪೊಲೀಸ್ ಇಲಾಕೆಯಲ್ಲಿದ್ದರು ಎಂದು ತುಸು ವಿವರ ನೀಡಿದ. ಎಸ್. ಆಯ್ ಅವರಿಗೆ ಸಹಾಯಕನಾಗಿ ಬಂದಿರುವುದಾಗಿ ಹೇಳಿ, ತನ್ನ ಬೂಟುಗಳನ್ನು ಹೊರಗಡೆ ಬಿಚ್ಚಿ ಬಂದಿರುವುದನ್ನು ಅವಳಿಗೆ ತೋರಿಸಿ ಸಮಾದಾನ ಪಡಿಸಿಲು ಪ್ರಯತ್ನಿಸಿದ. ಅವಳ ಸಿಟ್ಟು ಕಮ್ಮಿಯಾಗಲಿಲ್ಲ. ತಡೆದುಕೊಂಡು ಕುಂತಳು. ಪುಲಕೇಶಿ ಮತ್ತೆ ಹೆಣದ ಕಡೆಗೆ ಹೋಗಿ ಚುರುಕಾದನು.

ಹೆಣದ ಕಾಲಿನಲ್ಲಿ ಶೂ ಇರಲಿಲ್ಲ. ಸದ್ಯ ಶೂ ಇಲ್ಲ ಎಂದುಕೊಂಡ ಪುಲಕೇಶಿ. ಇಲ್ಲದಿದ್ದರೇ ಹೆಣಕ್ಕೂ ಬಯ್ಯುತ್ತಿದ್ದಳೇನೋ ಎಂದುಕೊಂಡು ಮನದಲ್ಲೇ ನಕ್ಕ. ಆದರೆ ಕಾಲುಚೀಲಗಳು ಇದ್ದವು. ಸ್ವಲ್ಪ ಕೊಳೆಯಾಗಿದ್ದವು. ಮುಟ್ಟಿ ನೋಡಿದ. ಹಸಿ ಇತ್ತು. ಹಿಂದಿನ ದಿನ ರಾತ್ರಿ ಮಳೆಯಲ್ಲಿ ನೆನದಿರಬೇಕು ಎಂದು ತೀರ‍್ಮಾನಿಸಿದ. ಊಟ ಮಾಡುವ ಮೇಜಿನ ಮೇಲೆ ಅನ್ನ ಕಲಿಸಿದ್ದ ತಟ್ಟೆ ಹಾಗೆಯೇ ಇತ್ತು. ಹೆಣದ ಬಲಗಯ್ಯ ಬೆರಳುಗಳಲ್ಲಿ ಅನ್ನದ ಅಗುಳುಗಳು ಮೆತ್ತಿಕೊಂಡಿದ್ದವು. ಹೆಣವನ್ನು ಸೂಕ್ಮವಾಗಿ ತಪಾಸಣೆ ಮಾಡಿದ. ಎಲ್ಲಿಯೂ ರಕ್ತದ ಗುರುತಿರಲಿಲ್ಲ. ವಿಶದಿಂದ ಸತ್ತಿರಬಹುದೇ ಎಂದುಕೊಂಡ. ಮರುಕ್ಶಣ ಸಾದ್ಯವಿಲ್ಲ ಎನಿಸಿತು. ಹೆಣ ಇದ್ದ ಸ್ತಿತಿಯಿಂದ ಸಾವು ಹೇಗಾಗಿರಬಹುದು ಎಂದು ತಿಳಿಯಲು ಸಾದ್ಯವಾಗಲಿಲ್ಲ. ಬಗ್ಗಿ ನೆಲ ನೋಡಿದ. ಅಲ್ಲಲ್ಲಿ ಪೊಲೀಸರ ಬೂಟಿನ ದೂಳು ಬಿಟ್ಟರೆ ನೆಲ ಶುಚಿಯಾಗಿತ್ತು. ಅಲ್ಲಿಂದ ಎದ್ದು ನೇರ ಸೋಪಾದ ಕಡೆಗೆ ಬಂದ. ಅಲ್ಲಿ ಮಹದೇವಯ್ಯನವರ ಎರಡನೇ ಹೆಂಡತಿ, ಮತ್ತು ಅವರ ಇನ್ನಿಬ್ಬರು ದತ್ತು ಮಕ್ಕಳು ಕೂತಿದ್ದರು. ಅವರ ಹೆಂಡತಿಗೆ ಅಯ್ವತ್ತು ದಾಟಿತ್ತು. ಇಬ್ಬರೂ ಮಕ್ಕಳು ಮೂವತ್ತು ದಾಟಿದವರಂತೆ ಕಾಣುತ್ತಿದ್ದರು.

“ನಿಮ್ಮನ್ನ ಒಂದೆರಡು ಪ್ರಶ್ನೆ ಕೇಳಬಹುದಾ?” ಎಂದ.

“ಅವ್ರು ಕೇಳಿದ್ದಾಯ್ತು. ಇನ್ನು ನೀವೂ ಕೇಳ್ಬೆಕಾ?” ಎಂದಳು ಸಿಟ್ಟು ತೋರಿಸುತ್ತಾ.

“ನನ್ ಪ್ರಶ್ನೆ ತುಂಬಾ ಸಿಂಪಲ್ ಇರುತ್ತೆ. ಪೊಲೀಸರು ಕೇಳೋ ತರಾ ಇರೊಲ್ಲ”

“ಏನ್ ಬೇಗ ಕೇಳಿ. ನಂಗೂ ಬೇರೆ ಕೆಲ್ಸ ಇದೆ” ಎಂದಳು.

“ನೀವು ಯಾವಾಗ ಅನುಪಮ್ ಸತ್ತಿದ್ದು ನೋಡಿದ್ರಿ?”

“ಏನ್ರಿ… ಪೊಲೀಸರು ಕೇಳಿದ್ದ್ ಪ್ರಶ್ನೆನೇ ಕೇಳ್ತೀರಾ? ಅವರಿಗ್ ಹೇಳಿದೀನಿ. ಬೇಕಾದ್ರೆ ಅವ್ರಿಗೇ ಕೇಳಿ”

“ಸಾರಿ ಮೇಡಂ. ಹೋಗ್ಲಿ ಬಿಡಿ, ಬೇರೆ ಪ್ರಶ್ನೆ ಕೇಳ್ತೀನಿ… ನೀವು ಬೆಳಗ್ಗೆ ಎಶ್ಟೊತ್ತಿಗೆ ಏಳ್ತೀರಾ?”

“ನಾನ್ ದಿನಾಲೂ ಏಳಗಂಟೆಗೆ ಏಳೋದು. ಆದ್ರೆ ಇವತ್ತು ಕೆಲಸದವಳು ಬಂದು ಬೇಗ ಎಬ್ಬಿಸಿದ್ಳು, ಆರ್ ಗಂಟೆಗೆ. ಅವ್ಳು ಮತ್ತೆ ಅವಳ ಗಂಡ ಬಾಗ್ಲು ತಗದು ಒಳಗೆ ಬಂದಾಗ ಅನುಪಮ್ ಡಾಯನಿಂಗ್ ಟೇಬಲ್ ಹತ್ರ ಬಿದ್ದಿದ್ದು ನೋಡಿದಾರೆ. ನನಗ್ ಬಂದು ಎಬ್ಬಿಸಿದ್ರು. ನಾವು ಅವನನ್ನಾ ಅಳ್ಳಾಡಿಸಿ ನೋಡಿದ್ವಿ. ಅವ್ನು ಸತ್ತಿರಬಹುದು, ಯಾವ್ದಕ್ಕೂ ಡಾಕ್ಟರ್ ಕರ‍್ಸೋಣ ಅಂತ ಗುಂಡಣ್ಣ ಹೇಳ್ದ. ಡಾಕ್ಟರ‍್ಗೆ ಪೋನ್ ಮಾಡಿ ಬರೋಕ್ ಹೇಳ್ದೆ”

“ಈ ಗುಂಡಣ್ಣ ಯಾರು?”

“ನಮ್ ಮನೆ ಕೆಲಸದವ್ನು. ಅವ್ನು ಅವ್ನ ಹೆಂಡ್ತಿ ನಮ್ ಮನೆ ಹೊರಗಡೆ ಇರೋ ಔಟ್ ಹೌಸ್ ನಲ್ಲಿ ಇರ‍್ತಾರೆ”

“ಸರಿ ಮೇಡಂ. ತ್ಯಾಂಕ್ ಯು” ಎಂದು ಅವಳ ಎದುರುಗಡೆ ಸೋಪಾದ ಮೇಲೆ ಕೂತಿದ್ದ ದತ್ತು ಮಕ್ಕಳ ಕಡೆ ಹೊರಳಿದನು.

“ಸರ್ ನಿಮ್ ಹೆಸರು?”

“ಕಿರಣ್”

“ಕಿರಣ್ ಅವ್ರೆ. ನಿನ್ನೆ ರಾತ್ರಿ ನೀವು ಎಲ್ಲಿದ್ರಿ?”

“ನಾನು ಮನೇಲಿ ಇರಲಿಲ್ಲ. ರಾತ್ರಿ ನನ್ ಪ್ರೆಂಡ್ ಜೊತೆ ಪಾರ‍್ಟಿ ಮುಗಸ್ಕೊಂಡು ಅವ್ನ ಮನೇಲೇ ಮಲಗಿದ್ದೆ. ಬೆಳಗ್ಗೆ ಇಲ್ಲಿ ಬಂದಿದ್ದು”

“ತ್ಯಾಂಕ್ ಯು… ಸಾರ್ ನಿಮ್ ಹೆಸರು?” ಎಂದು ಇನ್ನೊಬ್ಬ ದತ್ತುಮಗನಿಗೆ ಕೇಳಿದನು.

“ಕಾರ‍್ತಿಕ್ ಅಂತಾ… ನಾನು ಪ್ರೆಂಡ್ ಮದ್ವೆ ಅಂತಾ ಶಿಮೊಗ್ಗಾ ಹೋಗಿದ್ದೆ. ಈಗ ತಾನೇ ಬಂದೆ. ನೋಡಿ ನನ್ ಬ್ಯಾಗ್ ಇನ್ನೂ ಇಲ್ಲೇ ಇದೆ” ಎಂದ ತನ್ನ ಕಾಲಬಳಿ ಇದ್ದ ಚೀಲ ತೋರಿದ.

“ಸರಿ ಸರ್. ತ್ಯಾಂಕ್ ಯು” ಎಂದು ಅಲ್ಲಿಂದ ಎದ್ದ ಪುಲಕೇಶಿ.

ಮುಂಬಾಗಿಲ ಬಳಿ ನಿಂತಿದ್ದ ಕೆಲಸದ ಆಳಿನತ್ತ ಬಂದು, “ನೀವೇನಾ ಗುಂಡಣ್ಣ?” ಎಂದು ಕೇಳಿದ.

“ಹೌದು ಸರ‍್”

“ನೀವೇ ಅಂತೆ ಮೊದಲು ಹೆಣ ನೋಡಿದ್ದು?”

“ಹೌದು ಸಾರ್. ನಾನೇ… ದಿನಾ ಬರೋಹಾಗೆ ಇವತ್ತೂ ಬಂದು, ನನ್ ಹತ್ರ ಇರೋ ಕೀ ಯಿಂದ ಬಾಗ್ಲು ತಗದು ನೋಡಿದ್ರೆ ಅನುಪಮ್ ಸಾರು ಬಿದ್ದಿದ್ದ್ರು. ನಾನು ಅಲ್ಲಾಡ್ಸಿ ನೋಡ್ದೆ, ಅವ್ರು ಏಳಿಲ್ಲ. ಆಮೇಲೆ ಹೋಗಿ ಮೇಡಂಗೆ ಹೇಳ್ದೆ”

“ಟೇಬಲ್ ಮೇಲೆ ತಟ್ಟೆ ಇದ್ಯಲ್ಲಾ… ಅದೇ ಅನ್ನಾ ಸಾರು. ಅದು ಯಾವಾಗ್ ಮಾಡಿದ್ದು?”

“ನಿನ್ನೆ ರಾತ್ರಿ ಸರ್. ನನ್ ಹೆಂಡ್ತಿನೇ ಮಾಡಿಟ್ಟಿದ್ದು”

“ನಿನ್ನೆ ರಾತ್ರಿ ಇಲ್ಲಿ ಮಳೆ ಎಶ್ಟೊತ್ತಿಗೆ ನಿಂತಿದ್ದು?”

“ಸುಮಾರು ಹೊನ್ನೊಂದು ಗಂಟೆ ಸರ‍್”

“ಸರಿ” ಎಂದು ಪುಲಕೇಶಿ ಅವನ ಹೆಗಲ ಮೇಲೆ ಕಯ್ಯಿಟ್ಟು, ಪಿಸುದನಿಯಲ್ಲಿ, “ನಿಮ್ ಮೇಡಂ ಏನಯ್ಯಾ ಹಂಗ್ ಬಯ್ತಾರೆ. ತುಂಬಾ ಸ್ಟ್ರಿಕ್ಟಾ?”

“ಹೌದು ಸರ್. ಅವ್ರಿಗೆ ಮನೆ ತುಂಬಾ ನೀಟಾಗ್ ಇರ‍್ಬೇಕು. ಎಲ್ಲಾದ್ರು ಒಂಚೂರು ಕಸ ಕಾನ್ಸಿದ್ರು ಸಾಕು ಇಡೀ ಮನೆ ಗುಡ್ಸೋಕ್ ಹೇಳ್ತಾರೆ. ಒಂದೊಂದ್ಸಾರಿ ಸಿಟ್ಟ ಬಂದು ತಾವೇ ಪೊರಕೆ ಹಿಡಕೊಂಡು ಗುಡ್ಸೋಕೆ ಶುರು ಮಾಡಬಿಡ್ತಾರೆ ಸಾರ‍್” ಎಂದು ನಕ್ಕ.

ಪುಲಕೇಶಿಯೂ ನಕ್ಕ. ಮುಂದುವರೆಸಿ, “ಅನುಪಮ್ ಸರ್ ಅವ್ರು ಶೂ ಯಾವ್ದು ತೋರಿಸ್ತೀರಾ?”

“ಹೂಂ ಸರ‍್” ಎಂದು ಮನೆಯ ಹೊರಗೆ ಇರುವ ಶೂ ಇಡುವ ಜಾಗಕ್ಕೆ ಕರೆದುಕೊಂಡು ಹೋದ ಗುಂಡಣ್ಣ, ಅನುಪಮ್ ನ ಶೂಗಳನ್ನು ತೋರಿಸಿದ. ಜೋರಾಗಿ ಮಳೆಯಾಗಿದ್ದರಿಂದ ಅಲ್ಲಿದ್ದ ಶೂಗಳಲ್ಲಿ ಸ್ವಲ್ಪ ನೀರು ತುಂಬಿತ್ತು. ಕಾಲಿ ಇದ್ದ ಶೂಗಳು ಮೂರು ಜೊತೆ. ಒಂದು ಅನುಪಮ್, ಇನ್ನೆರಡು ದತ್ತು ಮಕ್ಕಳದು.

“ಗುಂಡಣ್ಣ, ನನಗೆ ಇನ್ನೊಂದು ವಿಚಾರ ಗೊತ್ತಾಗ್ಲಿಲ್ಲ ನೋಡು. ಇಶ್ಟ ದೊಡ್ಡ ಮನೆಗೆ ಸೆಕ್ಯೂರಿಟಿ ಇಲ್ವಾ?”

“ಸಾರ್ ಈ ಕಾಲೋನಿಯಲ್ಲಿ ಎಲ್ಲಾ ದೊಡ್ಡವರ ಮನೆಗಳೇ ಇರೋದು. ಪೊಲೀಸರು ರಾತ್ರಿ ಬೀಟ್ ಹಾಕ್ತಾನೇ ಇರ‍್ತಾರೆ. ಹಾಗಾಗಿ ಯಾರೂ ಸೆಕ್ಯೂರಿಟಿ ಇಟ್ಕೊಂಡಿಲ್ಲ”

“ಓ… ಸರಿ” ಎಂದು ಅಲ್ಲಿಂದ ಹೊರಟು, ಮನೆಯ ಹೊರಗೆ ನಿಂತಿದ್ದ ಎಸ್. ಆಯ್ ಕಡೆಗೆ ಬಂದು ಅವರ ಜೊತೆ ಏನೋ ಮಾತಾಡಿದ. ನಂತರ ಇಬ್ಬರೂ ಸೇರಿ ಮನೆಯ ಒಳಗೆ ಹೋದರು. ಅಲ್ಲಿ ಕುಳಿತಿದ್ದ ಮೇಡಂ, ದತ್ತು ಮಕ್ಕಳು, ಮತ್ತು ಆಳುಗಳಿಗೆ ಎಸ್. ಆಯ್ ಹೇಳಿದರು,
“ಎಲ್ರೂ ದಯವಿಟ್ಟು ನಮ್ ಪೇದೆಗೆ ನಿಮ್ ಪಿಂಗರ್ ಪ್ರಿಂಟ್ಸ ಕೊಡಿ” ಎಂದು ತಮ್ಮ ಹಿಂದೆ ನಿಂತಿದ್ದ ಪೇದೆಯಡೆಗೆ ಸನ್ನೆ ಮಾಡಿದರು. ಪೇದೆ ಪಿಂಗರ್ ಪ್ರಿಂಟ್ಸ ತೆಗೆದುಕೊಳ್ಳಲು ಅಣಿಯಾದ.

ಮೇಡಂ ಮಾತಾಡಿದರು, “ಅಲ್ರೀ, ಅನುಪಮ್ ಎಬ್ಬಿಸೋಕೆ ನಾನೇ ಅವನ ಮಯ್ ಹಿಡ್ದು ಅಲ್ಲಾಡಿಸಿದೀನಿ. ಅವನ ಮಯ್ ಮೇಲೆ ನನ್ ಪಿಂಗರ್ ಪ್ರಿಂಟ್ಸ ಸಿಕ್ಕಿ, ನೀವು ನಾನೇ ಕೊಲೆ ಮಾಡಿದ್ದು ಅಂದ್ರೆ?”

ಎಸ್. ಆಯ್ ಸಮಾದಾನ ಹೇಳಿದರು, “ಇಲ್ಲಾ ಮೇಡಂ. ಪಕ್ಕಾ ಎವಿಡೆನ್ಸ್ ಇಲ್ದೆ ನಾವು ಹಾಗೆ ಹೇಳೋಕ್ ಆಗೊಲ್ಲಾ. ಕೋರ‍್ಟಲ್ಲೂ ಅದು ನಿಲ್ಲೊಲ್ಲ”

“ಸರಿ” ಎಂದರು ಮೇಡಂ.

“ಹಾಗೇ ಎಲ್ರೂ ನಿಮ್ಮ್ ಒಂದೊಂದು ಕೂದಲು ಕೊಡಿ, ಪ್ಲೀಸ್”

“ಕೂದಲು ಯಾಕೆ?” ಮತ್ತೆ ಕೇಳಿದರು ಮೇಡಂ.

“ರೂಲ್ಸು ಮೇಡಂ. ನಮ್ ರೆಕಾರ‍್ಡಿಗೆ ಅಶ್ಟೇ”

ಎಲ್ಲರೂ ತಮ್ಮ ತಮ್ಮ ಬೆರಳಚ್ಚು ಮತ್ತು ಕೂದಲು ಕೊಟ್ಟರು. ಪೇದೆ ಸರಿಯಾಗಿ ಜೋಡಿಸಿಕೊಂಡನು.

********************************************************************************

ಮಾರನೆಯ ದಿನ ಪುಲಕೇಶಿ ಪೊಲೀಸ್ ಸ್ಟೇಶನ್ ಗೆ ಹೋಗಿ, ಕೇಸಿನ ಎಸ್. ಆಯ್ ಅವರನ್ನು ಕಂಡನು. ಎಸ್. ಆಯ್ ಕುಳಿತುಕೊಳ್ಳಲು ಹೇಳಿ ಕೇಸಿನ ಬೆಳವಣಿಗೆ ಹೇಳಿದರು.

“ಮೊದಲನೇ ದತ್ತು ಮಗ, ಕಿರಣ್, ಹಿಂದಿನ ರಾತ್ರಿ ಪ್ರೆಂಡ್ ಜೊತೆ ಇದ್ದೆ ಅಂತ ಹೇಳಿದ್ದಾ… ಆ ಪ್ರೆಂಡನ್ನು ಸ್ಟೇಶನ್ ಕರದು ಕೇಳಿದ್ವಿ”

“ಏನ್ ಹೇಳ್ದ?”

“ಅವ್ನು ತುಂಬಾ ಕುಡದಿದ್ನಂತೆ. ನನಗ್ ಏನೂ ನೆನೆಪಿಲ್ಲಾ ಸರ್ ಅಂದ. ನನಗ್ ಬೆಳಿಗ್ಗೆ ಎಚ್ಚರ ಆದಾಗ ನಾನು ನನ್ ಮನೇಲಿದ್ದೆ. ಕಿರಣ್ ಇರಲಿಲ್ಲ ಅಂದ. ಆದ್ರೆ ಕಿರಣ್ ಅವ್ನ ಮನೇಲಿ ಆಗಾಗ ಮಲಗೋದು ನಾರ‍್ಮಲ್ ಅಂತೆ. ಕುಡಿಯೋದು, ಇಬ್ರಲ್ ಒಬ್ರು ಎಚ್ಚರ ತಪ್ಪೋದು, ಅವ್ನ ಮನೇಲೇ ಮಲಗೋದು ನಡಿತಿರುತ್ತೆ ಅಂದ”

“ಹುಂ… ನೀವ್ ಏನ್ ಮಾಡಿದ್ರಿ?”

“ನಮ್ ಹುಡುಗನ್ನಾ ಪಾಲೋ ಮಾಡೋಕ್ ಬಿಟ್ಟಿದೀನಿ. ನೋಡೋಣ”

“ಇನ್ನೊಬ್ಬನ ಕತೆ ಏನು?”

“ಅವ್ನು ಹೇಳೋದು ನಿಜ ಇದ್ರೂ ಇರಬಹುದು. ಮದುವೆ ನಡೆದ ಮನೆಯಲ್ಲಿ ವಿಚಾರಿಸೋಕೆ ಶಿವಮೊಗ್ಗ ಪೊಲೀಸರಿಗೆ ಹೇಳಿದ್ದೆ. ಅವ್ನು ಅಲ್ಲೇ ಇದ್ನಂತೆ. ಆದ್ರೆ ಊಟ ಮುಗಿಸ್ಕೊಂಡು ತನ್ನ ಕಾರಲ್ಲಿ ಬೇಗ ಹೊರಟ್ನಂತೆ. ಇಲ್ಲಿಗೆ ಬರೋದಕ್ಕೆ ಹದಿನೆಂಟು ಗಂಟೆ ಯಾಕೆ ತೊಗೊಂಡ ಅನ್ನೋದು ಗೊತ್ತಾಗಲಿಲ್ಲ. ಅವನನ್ನೇ ಕೇಳ್ಬೇಕು”

“ಅವನ ಹಿಂದೆನೂ…”

“ಬಿಟ್ಟಿದೀನಿ”

“ಸರಿ” ಎಂದು ನಕ್ಕ ಪುಲಕೇಶಿ. “ಆ ಮನೆ ಕೆಲಸದವರ ಬಗ್ಗೆ ನಿಮಗ್ ಏನಾದ್ರು ಅನಿಸ್ತಾ?”

“ನಂಗೇನ್ ಅನ್ಸಿಲ್ಲಾ. ಆದ್ರೂ ಸುಮ್ಮನೆ ಬಿಡೋ ಹಾಗಿಲ್ಲ. ಅವರ ಮೊಬಾಯಿಲೂ ಟಾಪ್ ಮಾಡಿಸ್ತೀನಿ ಇರಿ”

“ಪೋಸ್ಟ ಮಾರ‍್ಟಮ್ ರಿಪೋರ‍್ಟ್ ಯಾವಾಗ್ ಬರುತ್ತೆ?”

“ಇನ್ನೇನ್ ಬರಬಹುದು. ಅದರ ಜೊತೆ ನೀವು ಕೇಳಿದ ಇನ್ನೊಂದು ರಿಪೋರ‍್ಟೂ ಬರುತ್ತೆ”

“ಇದು ಪ್ಲಾನ್ ಮಾಡಿ ಮಾಡಿರೋ ಕೊಲೆ ಅನ್ಸಲ್ಲಾ”

“ಯಾಕೆ?”

“ಕೊಲೆ ಮಾಡೋ ಹಾಗಿದ್ರೆ ಮನೆ ಹೊರಗೆ ಮಾಡ್ಸಿರೋರು. ಮನೇಲೇ ಆದ್ರೆ ಸಿಕ್ಕಾಕೊಳ್ಳೋ ಚಾನ್ಸು ಜಾಸ್ತಿ”

“ಇದ್ರೂ ಇರಬಹುದು”

“ಅವನ ಕೊಲೆ ರಾತ್ರಿ ಮಳೆ ನಿಂತ ಮೇಲೆ, ಅಂದ್ರೆ ಸುಮಾರು ಹನ್ನೊಂದ ಗಂಟೆ ಆದ್ಮೇಲೆ ನಡದಿದೆ”

“ಹೇಗ್ ಹೇಳ್ತೀರಾ?”

ಅಶ್ಟರಲ್ಲಿ ಪೇದೆಯೊಬ್ಬ ಬಂದು, “ಸರ್ ಪೊಸ್ಟ ಮಾರ‍್ಟಮ್ ರಿಪೋರ‍್ಟು ಮತ್ತು ಡಿ.ಎನ್.ಎ ರಿಪೋರ‍್ಟು ಇ-ಮೇಲಲ್ಲಿ ಬಂದಿದೆ. ಪ್ರಿಂಟ್ ತಗದಿದೀನಿ. ತೊಗೊಳ್ಳಿ” ಎಂದು ಕೊಟ್ಟನು.

ಪುಲಕೇಶಿ ಹೇಳಿದ ಹಾಗೆ ಹನ್ನೊಂದು ಹದಿನಯ್ದರಿಂದ ಹನ್ನೊಂದುವರೆ ನಡುವೆ ಅವನ ಕೊಲೆ ನಡೆದಿತ್ತು. ತಲೆಗೆ ಬಲವಾದ ಪೆಟ್ಟು ಬಿದ್ದು ಒಳಗಾಯವಾಗಿ ಸತ್ತಿದ್ದಾಗಿ ಇತ್ತು. ಪೊಸ್ಟ ಮಾರ‍್ಟೆಮ್ ರಿಪೊರ‍್ಟಲ್ಲಿ ಪುಲಕೇಶಿಗೆ ಅಶ್ಟೊಂದು ಒಲವಿರಲಿಲ್ಲ. ಅವನಿಗೆ ಬೇಕಾದದ್ದು ಡಿ.ಎನ್.ಎ ರಿಪೊರ‍್ಟು. ಅದನ್ನ ಎತ್ತಿ ನೋಡಿದ. ಅವನ ಊಹೆ ನಿಜವಾದದ್ದಕ್ಕೆ ತುಂಬಾ ಕುಶಿಯಾಯ್ತು. ಅದನ್ನು ಎಸ್. ಆಯ್ ಅವರಿಗೆ ಕೊಟ್ಟ. ಎಸ್. ಆಯ್ ಅದನ್ನು ಓದಿ ಬೆರಗಾದರು.

“ಪುಲಕೇಶಿ. ಅದ್ ಹೇಗ್ರಿ ನಿಮಗೆ ಈ ಡೌಟು ಬಂದಿದ್ದು? ಪರವಾಗಿಲ್ಲ, ನಿಮ್ ತಂದೆ ಚೆನ್ನಾಗೇ ಟ್ರೇನಿಂಗ್ ಕೊಟ್ಟಿದ್ದಾರೆ” ಎಂದರು ಎಸ್. ಆಯ್.

“ಮುಂದೆ ಏನು?” ಎಂದು ಅವನನ್ನೇ ಕೇಳಿದರು.

“ಕ್ರಿಶ್ಣಮೂರ‍್ತಿಯವರ ಬಗ್ಗೆ ಏನಾದ್ರು ಗೊತ್ತಾಯ್ತ ಸರ‍್?”

“ಪೇದೆ ಕಳಿಸಿದ್ದೆ. ಅವರು ಸಿಗಲಿಲ್ಲ. ಅವರ ಮಗ ಇದ್ರಂತೆ. ಅವ್ರು ನಿನ್ನೇನೆ ಅಮೇರಿಕದಲ್ಲಿ ಇರೋ ಅವರ ಮಗಳ ಹತ್ರ ಇದ್ದಕಿದ್ದಂತೆ ಹೋದ್ರಂತೆ. ಅವರ ಮಗಳ ಪೋನ್ ನಂಬರ್ ಇದೆ. ಮಾತಾಡ್ಬೇಕಾ?”

“ಇರಲಿ ಬಿಡಿ. ಬಹುಶ ಕೊಲೆ ನಡೆದಿದ್ದು ಗೊತ್ತಾಗಿ, ತಮಗೂ ಏನಾದ್ರು ಆಗ್ಬಹುದು ಅಂತ ಹೆದರಿ ಅಲ್ಲಿ ಹೋಗಿದಾರೆ ಅನ್ಸುತ್ತೆ. ಅವರ ಜೊತೆ ಆಮೇಲೆ ಮಾತಾಡಿ, ಆಸ್ತಿ ಎಲ್ಲಾ ಯಾರಿಗ್ ಸೇರುತ್ತೆ ಅಂತ ತಿಳ್ಕೋಬೇಕು”

ಕಾಪಿ ಬಂತು. ಇಬ್ಬರೂ ತುಸು ಹೊತ್ತು ಸುಮ್ಮನೆ ಕುಳಿತರು ಆಲೋಚಿಸಿದರು. ನಂತರ ಎಸ್. ಆಯ್ ಮಾತಾಡಿದರು, “ಏನಾದ್ರು ಕ್ಲೂ ಸಿಕ್ತಾ?”

“ನೆನ್ನೇನೆ ಸಿಕ್ಕಿದೆ ಸರ್. ಆದ್ರೆ ಮರ‍್ಡರ್ ವೆಪನ್ ಯಾವ್ದು ಅಂತ ನಮಗ್ ಇನ್ನೂ ಗೊತ್ತಾಗಿಲ್ಲ. ಹಾಗಾಗಿ ಕೊಲೆಗಾರ ಯಾರು ಅಂತ ಗೊತ್ತಾದ್ರು ನಮ್ ಹತ್ರ ಎವಿಡೆನ್ಸ್ ಇಲ್ಲ. ನೀವು ಹೂಂ ಅಂದ್ರೆ ಒಂದು ಡ್ರಾಮಾ ಮಾಡೋಣ. ಕೊಲೆಗಾರ ತಾನಾಗೇ ಒಪ್ಕೊಳ್ಳೋ ಹಾಗೆ ಮಾಡಬಹುದು. ಬೇಕಿದ್ರೆ ಸಾಕ್ಶಿಗೆ ಅಂತ ಕಮೀಶನರ್ ಸಾಹೇಬ್ರು, ಪೋಸ್ಟ ಮಾರ‍್ಟೆಂ ಮಾಡಿರೋ ಡಾಕ್ಟರ್ ಕರೆಸೋಣ. ಕ್ಯಾಮೆರಾ ಹೇಗಿದ್ರೂ ಇದ್ದೇ ಇರುತ್ತೆ”

“ಏನು ನಿಮ್ ಪ್ಲಾನು?”

(ಮುಂದುವರೆಯುವುದು : ಕೊನೆಯ ಕಂತು ನಾಳೆ ಮೂಡಿ ಬರುತ್ತದೆ) 

( ಚಿತ್ರ ಸೆಲೆ: michaelwjgage.blogspot.in )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 09/07/2015

    […] ಕಂತು-1 ಕಂತು-2 ಕಂತು-3 […]

ಅನಿಸಿಕೆ ಬರೆಯಿರಿ: