ಹೊನಲು ಬೆಳಕಿನ ಟೆಸ್ಟ್ ಕ್ರಿಕೆಟ್

– ಹರ‍್ಶಿತ್ ಮಂಜುನಾತ್.

Day and night

ಇಂದಿನ ದಾಂಡಾಟ(Cricket)ವು ದಿನ ದಿನಕ್ಕೂ ಬದಲಾವಣೆಯ ದಾರಿಯಲ್ಲಿಯೇ ನಡೆದು ಬಂದಿದೆ. ನೋಡುಗರನ್ನು ಸೆಳೆಯುವಂತಹ ಮಾರ‍್ಪಾಡುಗಳನ್ನು ಅಳವಡಿಸಿಕೊಂಡು ಮುನ್ನುಗುತ್ತಿರುವ ದಾಂಡಾಟವು, ಹೊಸತನವನ್ನೇ ಬಂಡವಾಳಗಿಸಿಕೊಂಡಿದೆ ಎಂದರೆ ತಪ್ಪಿಲ್ಲ. ಇಂತಹ ಸಾಲಿಗೆ ಈ ಬಾರಿ ಸೇರಿಕೊಳ್ಳುತ್ತಿರುವುದು ಹೊನಲು ಬೆಳಕಿನ ಟೆಸ್ಟ್ ಪಯ್ಪೋಟಿ. ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಡುವೆ ನವೆಂಬರ್ ತಿಂಗಳ ಸುಮಾರಿಗೆ ನಡೆಯಲಿರುವ ಈ ಪಯ್ಪೋಟಿ ಇಂತಹ ಒಂದು ಹೊಸತನಕ್ಕೆ ಮುನ್ನುಡಿಯಾಗಿ ನಿಲ್ಲಲಿದೆ.

ಅಶ್ಟಕ್ಕೂ ದಾಂಡಾಟವು ಮೊದಲ್ಗೊಂಡಿದ್ದು ಟೆಸ್ಟ್ ಪಯ್ಪೋಟಿಯ ಮೂಲಕವೇ. ಆದರೆ ದಿನಗಳು ಉರುಳಿದಂತೆ ಬದಲಾವಣೆಯ ಗಾಳಿಗೆ ಒಂದು ನಾಳಿನ ಪಯ್ಪೋಟಿ, ಇಪ್ಪತ್ತು ಎಸೆತಗಟ್ಟುಗಳ (20-20) ಪಯ್ಪೋಟಿಗಳು ಹುಟ್ಟಿಕೊಂಡವು. ಆದರೆ ಹೆಚ್ಚಿನ ರೀತಿ ರಿವಾಜುಗಳ ಬದಲಾವಣೆಗೆ ಟೆಸ್ಟ್ ಪಯ್ಪೋಟಿಗಳು ಒಳಗಾಗಲಿಲ್ಲ. ಬದಲಾಗಿ ದಾಂಡಾಟದ ಇತರ ಮಾದರಿಗಳೇ ಹೊಸತನದ ಮಾರ‍್ಪಾಡುಗಳನ್ನು ಕಂಡುಕೊಂಡವು. ಆದರೆ ಈ ಬಾರಿ ಅಂತಹ ಒಂದು ಅವಕಾಶ ಟೆಸ್ಟ್ ಪಯ್ಪೋಟಿಯ ಪಾಲಾಗಿದೆ. ದಾಂಡಾಟದ ಹಳಮೆಯಲ್ಲಿಯೇ ಮೊದಲ ಬಾರಿಗೆ ಹೊನಲು ಬೆಳಕಿನ ಟೆಸ್ಟ್ ಪಯ್ಪೋಟಿಯೊಂದು ನಡೆಯಲಿದೆ.
ದಾಂಡಾಟಕ್ಕೂ ಮುಂಚೆ ಹೊನಲು ಬೆಳಕಿನ ಕಾಲ್ಚೆಂಡಿನಾಟವನ್ನು ಆಡಲಾಗುತ್ತಿತ್ತು. ಅಲ್ಲದೇ ಇದರತ್ತ ನೋಡುಗರೂ ಹೆಚ್ಚಾಗಿ ಬರುತ್ತಿದ್ದರು. ಇದನ್ನೇ ಗಮನದಲ್ಲಿಟ್ಟುಕೊಂಡು ದಾಂಡಾಟದಲ್ಲೂ ಇದನ್ನು ಜಾರಿಗೆ ತರಲು ಹಮ್ಮುಗೆಗಳು ನಡೆಯುತ್ತಿದ್ದವು. ಈ ನಿಟ್ಟಿನಲ್ಲಿ ಮೊದಲ ಬಾರಿಗೆ ಹೊನಲು ಬೆಳಕಿನ ದಾಂಡಾಟವನ್ನು ಆಗಸ್ಟ್ 11, 1952ರಲ್ಲಿ ಆಸ್ಟ್ರೇಲಿಯಾದ ನಾಡೊಳಗಣ ದಾಂಡಾಟದ ಕೂಟದಲ್ಲಿ ಆಡಿಸಲಾಯಿತು. ಬಿಬಿಸಿಯಲ್ಲಿ ನೇರಪ್ರಸಾರಗೊಂಡ ಈ ಪಯ್ಪೋಟಿಯನ್ನು ಒಂದು ಮಿಲಿಯನ್ ಗೂ ಹೆಚ್ಚು ಮಂದಿ ಗೆಂಟುಕಾಣ್ಕೆಯಲ್ಲಿ ನೋಡಿದ್ದರು. ಹೆಚ್ಚಿನ ಕುತೂಹಲದಿಂದ ತಡರಾತ್ರಿಯ ವರೆಗೆ ಸಾಗಿದ್ದ ಈ ಪಯ್ಪೋಟಿಯನ್ನು ಕೊನೆಯ ಹಂತದವರೆಗೂ ಮಂದಿ ನೋಡಿದ್ದರು.

ಆ ಬಳಿಕ ಅಯ್.ಸಿ.ಸಿಯು ಹೆಚ್ಚು ಹೆಚ್ಚು ಹೊನಲು ಬೆಳಕಿನ ಪಯ್ಪೋಟಿಯನ್ನು ಏರ‍್ಪಡಿಸಲು ಒತ್ತು ನೀಡಿತು. ಹಾಗೆಯೇ ಜಗತ್ತಿನ ಹೆಸರಾಂತ ದಾಂಡಾಟದ ಪೋಟಿಗಾರರನ್ನು ಕೂಡಿಸಿಕೊಂಡು 1977ರಲ್ಲಿ ಆಸ್ಟ್ರೇಲಿಯಾದ ಮೆಲ್ಬರ‍್ನ್ ಅಂಗಣದಲ್ಲಿ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಾಡುಗಳ ನಡುವೆ ಕೂಟವೊಂದನ್ನು ನಡೆಸಲಾಯಿತು. ಆ ಮೂಲಕ ಮೊದಲ ಬಾರಿಗೆ ಹೊನಲು ಬೆಳಕಿನ ದಾಂಡಾಟವನ್ನು ಆಡಿಸಲಾಯಿತು. ಆದರೆ ಕೇವಲ 2000 ಮಂದಿ ನೋಡುಗರನ್ನು ಸೆಳೆದ ಈ ಪಯ್ಪೋಟಿ ಅಶ್ಟೊಂದು ಹೆಸರುವಾಸಿಯಾಗಲಿಲ್ಲ. ಇದಾದ ಒಂದು ವರುಶದ ಬಳಿಕ ಮತ್ತೆ ಆಸ್ಟ್ರೇಲಿಯಾದ ಸಿಡ್ನಿ ಅಂಗಣದಲ್ಲಿ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಾಡುಗಳ ನಡುವೆ ಹೊನಲು ಬೆಳಕಿನ ಪಯ್ಪೋಟಿ ಏರ‍್ಪಟ್ಟಿತ್ತು. ಈ ಪಯ್ಪೋಟಿಯು ಸುಮಾರು 44000ಕ್ಕೂ ಹೆಚ್ಚು ಮಂದಿಯನ್ನು ಸೆಳೆಯಿತು. ಅಲ್ಲದೇ ಆ ಹೊತ್ತಿಗೆ ಬಹಳಶ್ಟು ಹೆಸರು ಮಾಡಿದ್ದ ಹೊನಲು ಬೆಳಕಿನ ಕಾಲ್ಚೆಂಡಿನಾಟ ದಾಂಡಾಟದ ಹೊಸ ಬದಲಾವಣೆಯನ್ನು ಬೆಂಬಲಿಸಿತು ಕೂಡ. ಇಲ್ಲಿಂದ ಮುಂದೆ ನಾಡು ನಾಡುಗಳ ನಡುವಣ ಹೊನಲು ಬೆಳಕಿನ ದಾಂಡಾಟದ ಪಯ್ಪೋಟಿಗಳು ನಡೆಯಲಾರಂಬಿಸಿದವು. ಅಲ್ಲದೇ ಇಂದಿನ ದಿನಗಳಲ್ಲಿ ನಡೆಯುವ ಒಂದು ನಾಳಾಟಗಳು ಹೆಚ್ಚಾಗಿ ಹೊನಲು ಬೆಳಕಿನದ್ದೇ ಆಗಿರುತ್ತದೆ.

ಆದರೆ ಇವೆಲ್ಲಾ ಪಯ್ಪೋಟಿಗಳು ಒಂದು ನಾಳಾಟವಾಗಿದ್ದವೇ ಹೊರತು ಅಯ್.ಸಿ.ಸಿ ಮುಂದಾಳ್ತನದಲ್ಲಿ ಯಾವುದೇ ಹೊನಲು ಬೆಳಕಿನ ಟೆಸ್ಟ್ ಪಯ್ಪೋಟಿಗಳು ನಡೆಯಲಿಲ್ಲ. ಕಡಿಮೆ ಎಂದರೂ ಐದು ದಿನಗಳ ವರೆಗೆ ನಡೆಯುವ ಟೆಸ್ಟ್ ಪಯ್ಪೋಟಿಯನ್ನು ಇರುಳಿನ ಮಿಂಚಿನ ಬೆಳಕಿನಲ್ಲಿ ನಡೆಸುವುದು ಅಶ್ಟು ಸುಲಬದ ಮಾತಲ್ಲ. ದಿನವೊಂದಕ್ಕೆ ಸುಮಾರು ಎಂಟು ಗಂಟೆಗಳ ಹೊತ್ತು ನಡೆಯುವ ಟೆಸ್ಟ್ ಪಯ್ಪೋಟಿಯಲ್ಲಿ ಇತ್ತಂಡಗಳು ಇರುಳಲ್ಲಿ ಆಡುವುದು ಕಶ್ಟದ ಮಾತು. ಆದರೆ ಈಗ ಅಂತಹ ಒಂದು ಸವಾಲನ್ನು ಎದುರಿಸುವ ಹೊತ್ತು ಬಂದಿದೆ.

ನವೆಂಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಎರಡು ಪಯ್ಪೋಟಿಗಳ ಕೂಟವೊಂದರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಕಾದಾಡಲಿವೆ. ಇದಕ್ಕೆ ಇತ್ತಂಡಗಳ ಮಂಡಳಿಗಳು ಒಪ್ಪಿಗೆ ನೀಡಿದ್ದು, ಆಸ್ಟ್ರೇಲಿಯಾವು ಈ ಕೂಟದ ಮುಂದಾಳ್ತನವನ್ನು ವಹಿಸಲಿದೆ. ಆದರೆ ಮೆಲ್ಬರ‍್ನ್ ಅತವಾ ಅಡಿಲೇಡ್ ಅಂಗಣದಲ್ಲಿ ಈ ಪಯ್ಪೋಟಿಯನ್ನು ನಡೆಸುವ ಹಮ್ಮುಗೆ ಇದ್ದು, ಇನ್ನಶ್ಟೇ ಈ ಬಗ್ಗೆ ಆಸ್ಟ್ರೇಲಿಯಾ ದಾಂಡಾಟದ ಮಂಡಳಿಯು ನಿರ‍್ದಾರ ಕಯ್ಗೊಳ್ಳಬೇಕಿದೆ. ಆದರೆ ಅಡಿಲೇಡ್ ಅಂಗಳದಲ್ಲಿ ಈ ಪಯ್ಪೋಟಿಯು ನಡೆಯಲಿದೆ ಎಂಬ ಸುದ್ದಿಯಿದೆ. ಹೊನಲು ಬೆಳಕಿನ ಟೆಸ್ಟ್ ಪಯ್ಪೋಟಿಯನ್ನು ನಡೆಸುವತ್ತ ಅಯ್.ಸಿ.ಸಿ ಈವರೆಗೆ ಅಂತಹ ಗಟ್ಟಿ ನಿರ‍್ದಾರವನ್ನು ತೆಗೆದುಕೊಂಡಿರಲಿಲ್ಲ. ಆದರೆ ಇದರತ್ತ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಮಂಡಳಿಯ ಕೆಲಸವನ್ನು ಗಮನದಲ್ಲಿಟ್ಟುಕೊಂಡು ಒಪ್ಪಿಗೆ ಸೂಚಿಸಿತ್ತು. ಈ ನಿಟ್ಟಿನಲ್ಲಿ ಕಳೆದ ವರುಶ ಜೂನ್ ತಿಂಗಳ ಹೊತ್ತಿಗೆ ಇಂತಹ ಒಂದು ಕೂಟದ ಹಮ್ಮುಗೆಯ ಬಗ್ಗೆ ಯೋಚಿಸಲಾಗಿತ್ತು. ಮೊದಮೊದಲು ನ್ಯೂಜಿಲ್ಯಾಂಡಿನ ಆಟಗಾರರು ಇದಕ್ಕೆ ವಿರೋದವನ್ನು ವ್ಯಕ್ತಪಡಿಸಿದ್ದರು. ಆದರೆ ಹಮ್ಮುಗೆಯೆಡೆಗೆ ಆಸ್ಟ್ರೇಲಿಯನ್ನರ ಎಡೆಬಿಡದ ಒತ್ತಾಯಕ್ಕೆ ಮಣಿದು ಒಪ್ಪಿಗೆ ಸೂಚಿಸಿದ್ದರು.

ನಮಗೆಲ್ಲಾ ತಿಳಿದಂತೆ ಇರುಳಿನಲ್ಲಿ ದಾಂಡುಗಾರ ಚೆಂಡನ್ನು ಎದುರಿಸುವುದು ನಿಜಕ್ಕೂ ಸವಾಲಿನ ಕೆಲಸ. ಒಂದು ನಾಳಾಟದಲ್ಲಿ ನಾಡಿನಾದ್ಯಂತ ತಂಡಗಳ ಉಡುಪು ಬೇರೆ ಬೇರೆ ಬಣ್ಣದ್ದಾಗಿರುತ್ತದೆ. ಹಾಗಾಗಿ ಬಿಳಿ ಬಣ್ಣದ ಹೊಳೆಯುವ ಚೆಂಡನ್ನು ಬಳಸುವುದು ಸಾಮಾನ್ಯ. ಅದೇ ಟೆಸ್ಟ್ ಪಯ್ಪೋಟಿಗಳ ವಿಚಾರಕ್ಕೆ ಬಂದಾಗ ಕೆಂಪು ಬಣ್ಣದ ಚೆಂಡನ್ನು ಮಾತ್ರ ಬಳಸಲಾಗುತ್ತದೆ. ಆದರೆ ಹೊನಲು ಬೆಳಕಿನ ಟೆಸ್ಟ್ ಪಯ್ಪೋಟಿಗೆಂದೇ ಅಯ್.ಸಿ.ಸಿ ಗುಲಾಬಿ ಬಣ್ಣದ ಹೊಳೆಯುವ ಚೆಂಡನ್ನು ಬಳಸಲು ಮುಂದಾಗಿದೆ. ವಿಶೇಶವೆಂದರೆ ನಾಡು ನಾಡುಗಳ ನಡುವಣ ಗಂಡಸರ ದಾಂಡಾಟದ ಪಯ್ಪೋಟಿಯಲ್ಲಿ ಗುಲಾಬಿ ಚೆಂಡನ್ನು ಬಳಸುತ್ತಿರುವುದು ಇದೇ ಮೊದಲು. ಈ ಹಿಂದೆ ಹೆಂಗಸರ ದಾಂಡಾಟದ ಪಯ್ಪೋಟಿಯಲ್ಲಿ ಗುಲಾಬಿ ಚೆಂಡನ್ನು ಬಳಸಿದ್ದರು. ಆದರೆ ಚೆಂಡುಗಳು ಬೇಗನೆ ತನ್ನ ಗುಣವನ್ನು ಕಳೆದುಕೊಳ್ಳುತ್ತದೆ ಎಂಬ ಕೂಗುಗಳು ಕೇಳಿಬಂದಿದ್ದವು. ಆದರೆ ಈ ಬಾರಿ ದಾಂಡಾಟದ ಚೆಂಡಿನ ತಯಾರಿಕೆಯಲ್ಲಿ ತುಸು ಬದಲಾವಣೆಯನ್ನು ತಂದು ಹೊಸ ಮಾದರಿಯ ಗುಲಾಬಿ ಬಣ್ಣದ ಚೆಂಡನ್ನು ಬಳಸಲಾಗುತ್ತಿದೆ. ಒಟ್ಟಿನಲ್ಲಿ ಈ ಪಯ್ಪೋಟಿಯು ಹಲವು ಕಾರಣಕ್ಕೆ ಎಲ್ಲೆಡೆ ಸದ್ದು ಮಾಡುತ್ತಿದ್ದು, ಎಲ್ಲರ ಗಮನ ಈ ಪಯ್ಪೋಟಿಯತ್ತ ಹರಿಯುತ್ತಿದೆ.

(ಮಾಹಿತಿ ಸೆಲೆ: ibnlive)

(ಚಿತ್ರ ಸೆಲೆ: mysports.today)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: