ನಮ್ಮ ಊರಿಗೂ ಬಂತು ನಗರ ಸಾರಿಗೆ

ನಾಗರಾಜ್ ಬದ್ರಾ.

Nagara Sarige

ಕರ‍್ನಾಟಕ ರಸ್ತೆ ಸಾರಿಗೆ ಸಂಸ್ತೆಯು ಬಡವರ ಬಂದು, ಬಡವರ ಸಾರಿಗೆ, ಕೋಟ್ಯಾಂತರ ಬಡವರಿಗೆ ತಮ್ಮ ಬಂದುಗಳನ್ನು ಬೇಟಿ ಮಾಡಿಸಿದ ನಮ್ಮ ಹೆಮ್ಮೆಯ ಸಾರಿಗೆ. ಈ ಸಾರಿಗೆಯ ಕೆಲಸದ ಸಾಮರ‍್ತ್ಯವನ್ನು ಹೆಚ್ಚಿಸುವ ಹಾಗೂ ಜನರಿಗೆ ಒಳ್ಳೆಯ ಸೇವೆಯನ್ನು ನೀಡುವ ದ್ರುಶ್ಟಿಯಿಂದ. ಕ.ರಾ.ರ.ಸಾ.ನಿ ಯನ್ನು ಕರ‍್ನಾಟಕ ಸರಕಾರವು ಪೆಬ್ರವರಿ 22, 1997 ರಲ್ಲಿ 4 ಬಾಗಗಳಾಗಿ ವಿಬಾಗಿಸಿತು.
1) ವಾಯವ್ಯ ಕರ‍್ನಾಟಕ ರಸ್ತೆ ಸಾರಿಗೆ ಸಂಸ್ತೆ, ಕೇಂದ್ರ ಕಚೇರಿ ಹುಬ್ಬಳ್ಳಿ
2) ಈಶಾನ್ಯ ಕರ‍್ನಾಟಕ ರಸ್ತೆ ಸಾರಿಗೆ ಸಂಸ್ತೆ, ಕೇಂದ್ರ ಕಚೇರಿ ಕಲ್ಬುರ‍್ಗಿ
3) ಕರ‍್ನಾಟಕ ರಸ್ತೆ ಸಾರಿಗೆ ಸಂಸ್ತೆ, ಕೇಂದ್ರ ಕಚೇರಿ ಬೆಂಗಳೂರು
4) ಬೆಂಗಳೂರು ಮಹಾನಗರ ಸಾರಿಗೆ ಸಂಸ್ತೆ, ಕೇಂದ್ರ ಕಚೇರಿ ಬೆಂಗಳೂರು

ಈಶಾನ್ಯ ಕರ‍್ನಾಟಕ ರಸ್ತೆ ಸಾರಿಗೆ ಸಂಸ್ತೆ ಅದೀನದಲ್ಲಿ ಕರ‍್ನಾಟಕದ 5 ಜಿಲ್ಲೆಗಳಾದ ಕಲ್ಬುರ‍್ಗಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯಪುರವನ್ನು ಸೇರಿಸಲಾಗಿತ್ತು. ಆಮೇಲೆ ಬಿ.ಎಸ್. ಯಡಿಯೂರಪ್ಪನವರು ನಮ್ಮ ರಾಜ್ಯದ ಮುಕ್ಯ ಮಂತ್ರಿಯಾಗಿದ್ದಾಗ, ಜನರ ಬಹಳ ದಿನದ ಬೇಡಿಕೆಯಂತೆ ಕಲ್ಬುರ‍್ಗಿ ಜಿಲ್ಲೆಯನ್ನು ಇಬ್ಬಾಗಿಸಿದರು, ಅದೇ ನಮ್ಮ ರಾಜ್ಯದ 30 ನೇ ಜಿಲ್ಲೆ ಯಾದಗಿರಿ. ಈ ಯಾದಗಿರಿ ಜಿಲ್ಲೆಯನ್ನು ಈ.ಕ.ರ.ಸಾ.ಸಂ ಗೆ ಸೇರಿಸಿದರು. ಒಟ್ಟಾಗಿ ಈ ಕ.ರ.ಸಾ. ಸಂಸ್ತೆಯ ಅದೀನದಲ್ಲಿ 7 ಜಿಲ್ಲೆಗಳು ಬರುತ್ತವೆ.

ಜಿಲ್ಲಾ ಕೇಂದ್ರದ ನಗರಗಳಲ್ಲಿ ಜನಸಂಕ್ಯೆಯು ಹೆಚ್ಚಿದಂತೆ ನಗರಗಳು ಬೆಳೆಯುತ್ತಾ ಹೋದವು. ಕಲ್ಬುರ‍್ಗಿ, ವಿಜಯಪುರ ಮತ್ತು ಬಳ್ಳಾರಿಯ ನಗರಸಬೆಗಳನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲುದರ‍್ಜೆಗೆ ಏರಿಸಲಾಯಿತು. ಬಡಜನರು, ಮದ್ಯಮ ವರ‍್ಗದ ಜನರು, ವಿದ್ಯಾರ‍್ತಿಗಳು ಮತ್ತು ದಿನಗೂಲಿ ನೌಕರರು ನಗರಗಳಲ್ಲಿ ಓಡಾಡಲು ಆಟೋಗಳನ್ನು ಅವಲಂಬಿಸಿದರು. ಆದ್ದರಿಂದ ನಗರಗಳಲ್ಲಿ ಆಟೋಗಳ ಹಾವಳಿ ಹೆಚ್ಚಾಯಿತು. ಜನರು ತಮ್ಮ ಪರಿವಾರದ ಜೊತೆಗೆ ನಗರದ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಹೋಗಬೇಕಾದರೆ 200 ರಿಂದ 300 ರೂಪಾಯಿಗಳು ನೀಡಬೇಕಾಗಿತ್ತು. ಇನ್ನು ಒಬ್ಬರೇ ಹೋಗಬೇಕಾದರೆ ಎರಡು ಆಟೋಗಳನ್ನು ಬದಲಿಸಬೇಕಾಗುತ್ತಿತ್ತು.

ನಗರಗಳಲ್ಲಿ ಮಕ್ಕಳನ್ನು ಮನೆಯಿಂದ ಶಾಲೆಗೆ ಕರೆದುಕೊಂಡು ಹೋಗಿಬರಲು ಆಟೋದವರು ತಿಂಗಳಿಗೆ 400 ರಿಂದ 500 ರೂಪಾಯಿ ಕೇಳುತ್ತಿದ್ದರು. ಬಡವರು ತಮ್ಮ ಮಕ್ಕಳ ಶಾಲೆಯ ಶುಲ್ಕ ಕಟ್ಟೋಕೆ ಪರದಾಡುತ್ತಿದ್ದರು, ಇನ್ನು ಆಟೋಗಳಿಗೆ ಎಲ್ಲಿಂದ ದುಡ್ಡು ಕೊಡಬೇಕು? ನಗರಗಳಲ್ಲಿ ಬಡವರು ತಮ್ಮ ಮಕ್ಕಳನ್ನು ಓದಿಸೋದು ಕಶ್ಟವಾಗುತ್ತಾ ಹೋಯಿತು. ನಗರದ ಯಾವದೋ ಮೂಲೆಯಲ್ಲಿ ಒಂದು ವಿಶ್ವವಿದ್ಯಾಲಯ, ಅಲ್ಲಿಗೆ ಹೋಗೋಕೆ ಒಂದೇ ಸಿಟಿ ಬಸ್ಸು. ಆ ಬಸ್ಸು ತಪ್ಪಿದರೆ ಆ ದಿನ ಕ್ಲಾಸ್ ಗೆ ರಜೆಯೇ. ಯಾಕೆಂದರೆ ಆಟೋದವರು ಅಲ್ಲಿಗೆ ಹೋಗೋಕೆ 40 ರಿಂದ 50 ರೂಪಾಯಿಗಳನ್ನು ಕೇಳುತ್ತಿದ್ದರು, ಬಡ ವಿದ್ಯಾರ‍್ತಿಗಳು ಎಲ್ಲಿಂದ ಕೊಡಬೇಕು? ದಿನಗೂಲಿ ಕಾರ‍್ಮಿಕರು ನಗರದಿಂದ ಸ್ವಲ್ಪ ದೂರದಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ಸ್ತಾಪಿಸಿದ ಕಂಪನಿಗಳಲ್ಲಿ, ಕೆಲಸಕ್ಕೆ ಹೋಗಲು ಆಟೋದವರಿಗೆ 30 ರಿಂದ 40 ರೂಪಾಯಿಗಳನ್ನು ಕೊಡುತ್ತಿದ್ದರು. ಅವರು ಒಂದು ದಿನ ದುಡಿದಿದ್ದ ಹಣದಲ್ಲಿ ಮುಕ್ಕಾಲು ಬಾಗ ಅಲ್ಲೆ ಕರ‍್ಚಾಗುತ್ತಿತ್ತು.

ಪ್ರತಿದಿನ ಹಳ್ಳಿಯಿಂದ ನಗರಕ್ಕೆ ಚಿಕಿತ್ಸೆಗಾಗಿ, ತಮಗೆ ಬೇಕಾದ ವಸ್ತುಗಳನ್ನು ಕೊಂಡುಕೊಳ್ಳಲು ಆಗಮಿಸುತ್ತಿದ್ದ ಜನರು ಆಟೊಗಳನ್ನೇ ಅವಲಂಬಿಸಿದ್ದರು. ಆದ್ದರಿಂದಲೇ ಆಟೋದವರು ಬರೀ 3 ರಿಂದ 4 ಕಿಲೋಮೀಟರ್ ಹೋಗಲು ಒಬ್ಬರಿಗೆ 20 ರಿಂದ 30 ರೂಪಾಯಿಗಳನ್ನು ಕೇಳುತ್ತಿದ್ದರು. ಹಳ್ಳಿಯ ಬಡಜನರು ಇಶ್ಟು ಹಣವನ್ನು ಎಲ್ಲಿಂದ ಕೊಡಬೇಕು? ಇದು ಅವರಿಗೆ ತುಂಬಾ ಬಾರವಾಗಿದ್ದರೂ ಅನಿವಾರ‍್ಯವಾಗಿ ಹಣಕೊಟ್ಟು ಹೋಗುತ್ತಿದ್ದರು. ನಮ್ಮ ಬಾಗದ ಜನರು ಬೆಂಗಳೂರಿಗೆ ಹೋದಾಗ ಅಲ್ಲಿಯ ಬಿ.ಎಂ.ಟಿ.ಸಿ ಯ ಸಾರಿಗೆ ವ್ಯವಸ್ತೆಯನ್ನು ಕಂಡು, ನಮ್ಮ ಊರಲ್ಲಿ ಯಾವಾಗ ಈ ರೀತಿಯ ಸಿಟಿ ಬಸ್ಸುಗಳು ಓಡಾಡುತ್ತವೆ ಅಂತ ಯೋಚಿಸುತ್ತಿದ್ದರು. ರಾಜಕಾರಣಿಗಳು ಎಲ್ಲವನ್ನೂ ಬರೀ ಬೆಂಗಳೂರು ನಗರಕ್ಕೆ ಕೊಡುತ್ತಾರೆ, ನಮ್ಮ ನಗರಕ್ಕೆ ಏನೂ ಮಾಡೋದಿಲ್ಲ ಅಂತ ಹಿಡಿ ಶಾಪ ಹಾಕುತ್ತಿದ್ದರು. ಮುಂದೆ ಒಂದು ದಿನ ನಮ್ಮ ನಗರಗಳಲ್ಲಿಯೂ ಅದೇ ರೀತಿಯ ಸಿಟಿ ಬಸ್ಸುಗಳು ಓಡಾಡಬಹುದು ಅಂತ ಕನಸು ಕಾಣುತ್ತಿದ್ದರು. ಅವರ ಆ ಒಂದು ದಿನ ಬೇಗನೆ ಬಂದೇಬಿಟ್ಟಿತು.

ಈ.ಕ.ರ.ಸಾ. ಸಂಸ್ತೆಯು ರಾಜ್ಯ ಸರಕಾರದ ಅನುದಾನ ಮತ್ತು ಕೇಂದ್ರ ಸರಕಾರದ ಜವಹರ ಲಾಲ್ ನೆಹರೂ ನ್ಯಾಶನಲ್ ಅರಬನ್ ರಿನಿವಲ್ ಮಿಶನ್ ಯೋಜನೆ (Jawaralala Neharu National Urban Renewal Mission)ಯ ಅಡಿ ನೀಡುವ ಅನುದಾನದ ಸಹಬಾಗಿತ್ವದಲ್ಲಿ, ಮೊದಲು ತನ್ನ ಅದೀನದಲ್ಲಿ ಬರುವ 7 ಜಿಲ್ಲೆಯ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಗರ ಸಾರಿಗೆಯನ್ನು ಶುರು ಮಾಡಿತು. ಆಯಾ ಸ್ತಳದ ಇತಿಹಾಸವನ್ನು ಆದರಿಸಿ ಆಯಾ ನಗರ ಸಾರಿಗೆಗೆ ಹೆಸರಿಡಲಾಯಿತು.
1) ಕಲ್ಬುರ‍್ಗಿ – ನ್ರುಪತುಂಗ ನಗರ ಸಾರಿಗೆ
2) ರಾಯಚೂರು – ರಾಯರತ ನಗರ ಸಾರಿಗೆ
3) ವಿಜಯಪುರ – ವಿಜಯಪುರ ನಗರ ಸಾರಿಗೆ
4) ಬಳ್ಳಾರಿ – ಬುವನ ವಿಜಯ ನಗರ ಸಾರಿಗೆ
5) ಬೀದರ – ಕಲ್ಯಾಣ ಕರ‍್ನಾಟಕ ನಗರ ಸಾರಿಗೆ
6) ಕೊಪ್ಪಳ – ಕಿಶ್ಕಿಂದ ನಗರ ಸಾರಿಗೆ
7) ಯಾದಗಿರಿ – ಗಿರಿ ನಗರ ಸಾರಿಗೆ

ಪ್ರತಿಯೊಂದು ನಗರಗಳಲ್ಲಿ ಅಂದಾಜು 40 ರಿಂದ 50 ಬಸ್ಸುಗಳನ್ನು ಓಡಾಡಿಸಲು ಪ್ರಾರಂಬಿಸಿದರು. ಎಲ್ಲಾ ಬಸ್ಸುಗಳು ಪೂರ‍್ತಿ ಹೈ- ಟೈಕ್ ಆಗಿದ್ದವು. ಪ್ರತಿಯೊಂದರಲ್ಲು ಸಿಸಿಟಿವಿ(CCTV), ಒಂದು ದೊಡ್ಡದಾದ ತುರ‍್ತು ನಿರ‍್ಗಮನ ದ್ವಾರ (Emergency door), ಡಿಜಿಟಲ್ ಡಿಸ್‍ಪ್ಲೆ ಬೋರ‍್ಡ್(Digital Display board), ಸಯ್ವಂ ಚಾಲಿತ ಬಾಗಿಲು, ಬೆಂಕಿ ನಂದಿಸುವ ಏರ‍್ಪಾಟು, ಇವೆಲ್ಲವೂ ಜನರನ್ನು ಆಕರ‍್ಶಿಸಿದವು. ನಗರ ಸಾರಿಗೆಯನ್ನು ಶುರು ಮಾಡಿದ ಮೊದಲ ತಿಂಗಳು ನಗರದಲ್ಲಿ ಎಲ್ಲೇ ಪ್ರಯಾಣ ಮಾಡಿದರು ಕೇವಲ 5 ರೂಪಾಯಿ ಪ್ರಯಾಣ ದರವನ್ನು ನಿಗದಿಪಡಿಸಲಾಯಿತು. ಅವರ ಈ ಯೋಜನೆ ಗೆಲುವು ಕೂಡ ಕಂಡಿತು. ಜನರು ಆಟೊಗಳನ್ನು ಬಿಟ್ಟು ಸಿಟಿ ಬಸ್ಸಿನಲ್ಲಿ ಓಡಾಡಲು ಶುರು ಮಾಡಿದರು. ಒಂದು ತಿಂಗಳು ಕಳೆದ ಮೇಲೆ ಪ್ರಯಾಣ ದರವನ್ನು ಪರೀಕ್ಶಿಸಿ ಹೆಚ್ಚಿಸಲಾಯಿತು. ಆದರೂ ಜನರು ಸಿಟಿ ಬಸ್ಸಿನಲ್ಲಿಯೇ ಪ್ರಯಾಣಿಸುತ್ತಿದ್ದರು ಯಾಕೆಂದರೆ ಆ ಪ್ರಯಾಣ ದರವು ಆಟೋಗಳ ಪ್ರಯಾಣ ದರದ ಅರ‍್ದಕ್ಕಿಂತ ಕಡಿಮೆಯಾಗಿತ್ತು. ಸರಕಾರವು ವಿದ್ಯಾರ‍್ತಿಗಳಿಗೋಸ್ಕರ ಕಡಿಮೆ ದರದಲ್ಲಿ ನೀಡುವ ಬಸ್ಸು ಪಾಸುಗಳನ್ನು,  ಶಾಲೆ – ಕಾಲೇಜಿನ ವಿದ್ಯಾರ‍್ತಿಗಳು ಉಪಯೋಗಿಸಿ ಪ್ರಯಾಣಿಸಲಾರಂಬಿಸಿದರು. ಹಳ್ಳಿಯಿಂದ ಬರುವ ಬಡಜನರಿಗೂ ತುಂಬಾ ಸಹಾಯವಾಯಿತು. ವಿಶ್ವವಿದ್ಯಾಲಯಕ್ಕೆ ಹೋಗಲು ಪ್ರತಿ 15 ನಿಮಿಶಕ್ಕೆ ಒಂದು ಬಸ್ಸು ಸಿಗುವಂತಾಯಿತು.

ನಗರ ಸಾರಿಗೆಯಿಂದ ಕೇವಲ 20 ರೂಪಾಯಿಯಲ್ಲಿ ಒಂದು ದಿನದ ಪಾಸ್ ಕೊಡುವ ವ್ಯವಸ್ತೆಯನ್ನು ಮಾಡಲಾಯಿತು. ನಗರ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸಿದ್ದ ಜನರಲ್ಲಿ ಬೆಂಗಳೂರಿನ ಬಿ.ಎಮ್.ಟಿ.ಸಿ ಯ ಬಸ್ಸಿನಲ್ಲಿ ಪ್ರಯಾಣಿಸಿದ ಹಾಗೆ ಅನುಬವವಾಗುತ್ತಿತ್ತು. ಈ.ಕ.ರ.ಸಾ. ಸಂಸ್ತೆಯು ನಗರ ಸಾರಿಗೆಯನ್ನು ಆರಂಬಿಸಿ ಒಂದು ವರ‍್ಶ ಕಳೆಯಿತು. ಎಲ್ಲಾ ನಗರ ಸಾರಿಗೆಗಳಿಗೆ ಒಂದು ವರ‍್ಶದಲ್ಲಿ ಲಾಬವಾಯಿತು ಹಾಗೂ ಜನರ ಸ್ಪಂದನೆಯು ಹೆಚ್ಚಾಯಿತು. ನಗರದ ಕೆಲವು ಕಾಲೋನಿಯಲ್ಲಿನ ರಸ್ತೆಗಳು ಚಿಕ್ಕದಾಗಿದ್ದವು ಆದ್ದರಿಂದ ನಗರ ಸಾರಿಗೆಯ ಬಸ್ಸುಗಳು ಅಲ್ಲಿ ಚಲಿಸಲು ಆಗುತ್ತಿರಲಿಲ್ಲ. ಆದ್ದರಿಂದ ಈ.ಕ.ರ.ಸಾ. ಸಂಸ್ತೆಯು ವಿಶೇಶವಾದ ಚಿಕ್ಕ ಬಸ್ಸುಗಳನ್ನು ಓಡಿಸಲು ಶುರು ಮಾಡಿತು. ಇದರಿಂದ ಕಾಲೋನಿಗಳಲ್ಲಿ ವಾಸಿಸುವ ಜನರ ಮುಕದಲ್ಲಿಯೂ ಮಂದಹಾಸ ಮೂಡಿತ್ತು.

ಎಲ್ಲರಿಂದಲೂ ಮೆಚ್ಚುಗೆಯನ್ನು ಪಡೆದ ಇವರು, ಕೆಲವು ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿಯೂ ನಗರ ಸಾರಿಗೆ ಪ್ರಾರಂಬಿಸಿದರು;

1) ಕಲ್ಬುರ‍್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನಲ್ಲಿ – ನಾಗಾವಿ ನಗರ ಸಾರಿಗೆ ಹಾಗೂ ಸೇಡಂ ತಾಲ್ಲೂಕು ನಗರ ಸಾರಿಗೆ
2) ರಾಯಚೂರು ಜಿಲ್ಲೆಯ ಸಿಂದನೂರು ತಾಲ್ಲೂಕು ನಗರ ಸಾರಿಗೆ
3) ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕು ಕೇಂದ್ರದಲ್ಲಿ – ಹಂಪಿರತ ನಗರ ಸಾರಿಗೆ
4) ಕೊಪ್ಪಳದ ಗಂಗಾವತಿ ತಾಲ್ಲೂಕು ನಗರ ಸಾರಿಗೆ

ಹೀಗೆ ಹಲವು ತಾಲ್ಲೂಕು ಕೇಂದ್ರಗಳಲ್ಲಿ ಸಾರಿಗೆಯನ್ನು ಆರಂಬಿಸಿದರು.

ಪ್ರಶಸ್ತಿಗಳು:
ಈ.ಕ.ರ.ಸಾ. ಸಂಸ್ತೆಯು ತನ್ನ ವ್ಯಾಪ್ತಿಯಲ್ಲಿ ಬರುವ ಸಣ್ಣ ಹಾಗೂ ಮದ್ಯಮ ವರ‍್ಗದ ನಗರಗಳಲ್ಲಿ ಪ್ರಾರಂಬಿಸಿರುವ ನಗರ ಸಾರಿಗೆಯನ್ನು, ನಗರ ಸಾರಿಗೆಯಲ್ಲಿನ ಕ್ರಾಂತಿಕಾರಿ ಬೆಳವಣಿಗೆ ಎಂದು ಪರಿಗಣಿಸಿ, ನವೆಂಬರ್ 28, 2014 ರಂದು  ಕೇಂದ್ರ ಸರಕಾರದ ನಗರಾವ್ರುದಿ ಸಚಿವಾಲಯವು ಅವಾರ‍್ಡ್ ಆಪ್ ಎಕ್ಸಲೆನ್ಸಿ (Award of Excellence) ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ಈ.ಕ.ರ.ಸಾ. ಸಂಸ್ತೆಯು ತನ್ನ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಜಿಲ್ಲಾ ಬಸ್ಸು ನಿಲ್ದಾಣಗಳನ್ನು, ತಾಲ್ಲೂಕು ಬಸ್ಸು ನಿಲ್ದಾಣಗಳನ್ನು ಕಡಿಮೆ ವೆಚ್ಚದಲ್ಲಿ ಪೂರ‍್ತಿ ಹೈ-ಟೆಕ್ ಆಗಿ ಹೊಸದಾಗಿ ನಿರ‍್ಮಾಣ ಮಾಡಿದ್ದಾರೆ. ವಾಯುಮಾಲಿನ್ಯದಲ್ಲಿ ವಿಶ್ವದ ನಂಬರ್ ಒನ್ ಸ್ತಾನದಲ್ಲಿರುವ ನಗರ ನಮ್ಮ ದೇಶದ ರಾಜದಾನಿ ನವದೆಹಲಿ. ಅಲ್ಲಿಯ ಪರಿಸರ ಎಶ್ಟು ಕಲುಶಿತವಾಗಿದೆ ಅಂತ ಒಮ್ಮೆ ನೀವೇ ಯೋಚಿಸಿ. ಇದಕ್ಕೆ ಕಾರಣ ನವದೆಹಲಿ ನಗರದಲ್ಲಿ ಹೆಚ್ಚುತ್ತಿರುವ ಬೈಕು, ಕಾರುಗಳ ಸಂಕ್ಯೆ. ದೆಹಲಿ ನಗರದಲ್ಲಿ ಎಲ್ಲಾ ರೀತಿಯ ಸಾರ‍್ವಜನಿಕ ಸಾರಿಗೆಗಳ ವ್ಯವಸ್ತೆ ಇವೇ, ಉದಾರಣೆಗೆ ದೆಹಲಿ ಮೇಟ್ರೋ, ಸಿಟಿ ಬಸ್ಸುಗಳ ಸಾರಿಗೆ. ಆದರೂ ಅದು ವಾಯು ಮಾಲಿನ್ಯದಲ್ಲಿ ವಿಶ್ವದ ನಂಬರ್ ಒನ್ ಸ್ತಾನದಲ್ಲಿ ಇರೋದು ವಿಪರ‍್ಯಾಸವೇ ಸರಿ. ಎಲ್ಲಾ ಸಾರ‍್ವಜನಿಕ ಸಾರಿಗೆಗಳ ವ್ಯವಸ್ತೆಗಳ ಮದ್ಯೆ ಸರಿಯಾದ ಸಂಪರ‍್ಕವಿಲ್ಲದೆ ಇರುವುದು ಇದಕ್ಕೆ ಕಾರಣ. ನಾವೆಲ್ಲರೂ ಆದಶ್ಟೂ ಸಾರ‍್ವಜನಿಕ ಸಾರಿಗೆಯನ್ನು ಉಪಯೋಗಿಸೋಣ. ನಮ್ಮ ನಗರಗಳಲ್ಲಿ ಆಗುತ್ತಿರುವ ಪರಿಸರ ಮಾಲಿನ್ಯವನ್ನು ತಡೆಯೋಣ.

ಈ.ಕ.ರ.ಸಾ. ಸಂಸ್ತೆಯ ರೀತಿಯಲ್ಲಿ ನಮ್ಮ ರಾಜ್ಯದ ಹಾಗೂ ದೇಶದ ಇತರ ಸಾರಿಗೆ ಸಂಸ್ತೆಗಳು ಸಣ್ಣ ಪಟ್ಟಣಗಳಲ್ಲಿ ನಗರ ಸಾರಿಗೆಗಳನ್ನು ಪ್ರಾರಂಬಿಸಲಿ ಅಂತ ಆಶೀಸೋಣ. ಅಲ್ಲಿಯ ಬಡಜನರಿಗೂ ಸಹಾಯವಾಗಲಿ ಎಂದು ಹಾರೈಸೋಣ. ಬಡಜನರ ನೋವಿಗೆ ಸ್ಪಂದಿಸಿ, ಸಣ್ಣ ಪಟ್ಟಣಗಳಲ್ಲಿಯೂ ನಗರ ಸಾರಿಗೆಯನ್ನು ಪ್ರಾರಂಬಿಸಿದ ಈಶಾನ್ಯ ಕರ‍್ನಾಟಕ ರಸ್ತೆ ಸಾರಿಗೆ ಸಂಸ್ತೆಗೆ, ಅನುದಾನವನ್ನು ನೀಡಿದ ಕೇಂದ್ರ ಸರಕಾರಕ್ಕೆ ಹಾಗೂ ನಮ್ಮ ರಾಜ್ಯ ಸರಕಾರಕ್ಕೆ, ನಮ್ಮ ಬಾಗದ ಲಕ್ಶಾಂತರ ಬಡಜನರ ಪರವಾಗಿ ನನ್ನ ಹ್ರುದಯಪೂರಕ ವಂದನೆಗಳು.

(ಚಿತ್ರಸೆಲೆ: skyscrapercity.com)

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. <> ತಪ್ಪು ಎಂದು ನನ್ನ ಅನಿಸಿಕೆ. ಇಬ್ಬಾಗ ಎಂದರೆ ಎರಡು ಭಾಗ.
    4 ಬಾಗಗಳಾಗಿ ವಿಭಾಗಿಸಿತು ಎಂಬುದು ಸರಿಯಾದ ಪ್ರಯೊಗ.

  2. ನಿಮ್ಮ ಅನಿಸಿಕೆ ಸರಿಯಾಗಿದೆ ಧನ್ಯವಾದಗಳು ಸರ್.

ಅನಿಸಿಕೆ ಬರೆಯಿರಿ: