’ಟೋಬು’ ಸೈಕಲ್!!

– ಡಾ|| ಅಶೋಕ ಪಾಟೀಲ.

tobu-cycle

’ಟೋಬು’ ಸೈಕಲ್!! ಅದರ ಹೆಸರೇ ನಮಗೆಲ್ಲ ಒಂದು ಹೇಳದ ನಲಿವನ್ನುಂಟುಮಾಡ್ತಿತ್ತು. ಅದನ್ನು ನೋಡಿದಾಗ ಆಗುವ ಹಿಗ್ಗಂತೂ ಹೇಳಲಿಕ್ಕೆ ಸಾಲದು. ಹುಸೇನ್ ಸಾಬಿಯ ಸೈಕಲ್ ಅಂಗಡಿಯಲ್ಲಿ ತಾಸಿನ ಬಾಡಿಗೆಗೆ ಸಿಗುತ್ತಿದ್ದ ಇರುವ ಮೂರು ಸಣ್ಣ ಸೈಕಲ್ ಗಳಲ್ಲೇ ಅತೀ ಸಣ್ಣ ಸೈಕಲ್ ಈ ’ಟೋಬು’. ಈ ಟೋಬುವಿಗೆ ಈ ಹೆಸರು ಯಾಕಿಟ್ಟೆವೋ, ಅತವಾ ಹುಸೇನ್ ಸಾಬಿಯೇ ತಾನಾಗಿ ಇಟ್ಟಿದ್ದನೋ ಆವಾಗ ತಿಳಿದಿದ್ದಿಲ್ಲ. ಆವಾಗ ಅದು ಬ್ರಾಂಡೆಡ್ ಕಿಡ್ ಸೈಕಲ್. ಅಂಗಡಿಯಲ್ಲಿ ಆವಾಗ ಅದರ ಬಾಡಿಗೆ ತಾಸಿಗೆ ಒಂದು ರೂಪಾಯಿ. ಅರೆ ತಾಸಿಗೆ ಐವತ್ತು ಪೈಸೆ. ಈ ಹುಸೇನಸಾಬಿ ಅಂಗಡಿಗೆ ಹತ್ತಿಕೊಂಡು ಹಿಂದೆ ಇರುವ ದೊಡ್ಡ ಮಿರಜಕರ್ ಕಂಪೌಂಡ್ ನಲ್ಲಿರುವ ನಮ್ಮ ಒಂದೇ ವಾರಿಗೆಯ ಎಂಟು ಹುಡುಗರಿಗೆ, ಈ ಸೈಕಲ್ ಬಾಡಿಗೆಗೆ ತಂದು ಕಂಪೌಂಡಿನಲ್ಲಿ ದೊಡ್ಡ ದೊಡ್ಡ ತೆಂಗಿನ ಮರಗಳ ನೆರಳಿನಡಿಯಲ್ಲಿ ಅದರ ಸವಾರಿ ಮಾಡುವದೆಂದರೆ ಪಂಚಪ್ರಾಣ. ಇದರ ಪಾಳಿ ಬರುವ ಸಲುವಾಗಿ ತಾಸುಗಟ್ಟಲೇ ಕಾಯಲೂ ನಾವು ತಯಾರಿರುತ್ತಿದ್ದೆವು. ಶನಿವಾರದ ಅರೆ ದಿನದ ಕಲಿಮನೆ ಮುಗಿದ ಮೇಲೆ ಯಾರು ಮೊದಲು ಅಂಗಡಿಗೆ ಹೋಗಿ ಬಾಡಿಗೆ ಕೊಟ್ಟು ಒಯ್ಯುತ್ತಾರೋ ಅವರೇ ಆ ದಿನದ ಹೀರೋ ಎನಿಸಿಕೊಳ್ಳುತ್ತಿದ್ದರು. ’ಟೋಬು’ ನ ಸಲುವಾಗೇ ಎಲ್ಲರೂ ಮುಗಿಬೀಳುತ್ತಿದ್ದುದೇ ಹುಸೇನಸಾಬಿಗೆ ಬೆರಗನ್ನುಂಟುಮಾಡುತ್ತಿತ್ತು.

ಇನ್ನೆರಡು ಸಣ್ಣ ಸೈಕಲ್ ಗಳನ್ನು ಎಶ್ಟೆಲ್ಲ ರಿಪೇರಿ ಮಾಡಿ ಮಜಬೂತಾಗಿ ರೆಡಿ ಮಾಡಿದ್ರೂ ಹುಡುಗರ‍್ಯಾರೂ ಇದರ ಬಗ್ಗೆ ಒಲವೇಕೆ ತೋರುತ್ತಿಲ್ಲ? ಎಂಬುದೇ ಅವನಿಗೆ ಉತ್ತರ ಸಿಗದ ಪ್ರಶ್ನೆಯಾಗಿತ್ತು. ಅಂಗಡಿಗೆ ಬಂದ ಗಿರಾಕಿಗಳಿಗೆ ಅವನು ಇದರ ಬಗ್ಗೆ ಕೇಳಿ ತನ್ನಂಗಡಿಯ ಟೋಬು ಸೈಕಲ್ ನ ಪ್ಯಾನ್ ಗಳ ಬಗ್ಗೆ ಹೇಳಿ ಬೀಗುತ್ತಿದ್ದ. ಟೋಬು ಸೈಕಲ್ ಸಲುವಾಗಿ ವೈಟಿಂಗ್ ಲಿಸ್ಟ್ ನಲ್ಲಿದ್ದಾಗ ಮಾತ್ರ ನಾವು ಇತರೆ ಸೈಕಲ್ ಗಳನ್ನು ಟೆಂಪರರಿಯಾಗಿ ಬಾಡಿಗೆಗೆ ಒಯ್ಯುತ್ತಿದ್ದವು. ಆದರೆ ಟೋಬುವಿನ ಮಜವೇ ಬೇರೆ. ಒಬ್ಬರಾದ ಮೆಲೆ ಒಬ್ಬರಂತೆ ಸರದಿಯ ಮೇಲೆ ಹುಸೇನಸಾಬಿಯ ಬುಕ್ಕದಲ್ಲಿ ಹೊತ್ತು ಬರೆದು ಸೈಕಲ್ ಒಯ್ಯುತ್ತಿದ್ದೆವು. ಸೈಕಲ್ ಬೀಳಿಸಿ ಏನಾದರೂ ಸಣ್ಣ ಪುಟ್ಟ ಸಾಮಾನುಗಳು ಮುರಿದರೆ, ಹುಸೇನಸಾಬಿಗೆ ಗೊತ್ತಾಗದಂತೆ ಸಟಕ್ಕನೇ ಹೊತ್ತಿಗೂ ಮೊದಲೇ ಕೊಟ್ಟು ಓಡಿಬಂದುಬಿಡುತ್ತಿದ್ದೆವು. ಪಾಪ ಹುಸೇನ್ಸಾಬಿ ಗೊತ್ತಿದ್ದೂ ಗೊತ್ತಿಲ್ಲದಂತೆ ಸೋಗು ಹಾಕುತ್ತಿದ್ದನೇನೋ?. ಎಲ್ಲರೂ ಇದ್ದಾಗ ಎಲ್ಲರಿಗೂ ಸಿಗಲೆಂದು ಕೇವಲ ಅರೆ ತಾಸಸ್ಟೇ ಒಯ್ಯಬೇಕೆಂಬ ಕಟ್ಟಳೆಯೊಂದನ್ನು ನಾನೇ ಹೊರಡಿಸುತ್ತಿದ್ದೆ. ನನ್ನೆಲ್ಲ ಕಟ್ಟಳೆಗಳು ಜಾರಿಯಾಗುತ್ತಿದ್ದವೆಂಬುದೇ ಸೋಜಿಗದ ಇರುವು. ಗುಂಪಿನಲ್ಲಿರುವವರಿಗಿಂತ ಆಯಸ್ಸಿನಲ್ಲಿ ತುಸು ದೊಡ್ಡವರಾಗಿದ್ದರೆ ಕೆಲ ವಿಶಯಗಳಲ್ಲಿ ತುಸು ಗಳಿಕೆ ಹೆಚ್ಚು. ಹುಸೇನಸಾಬಿಯು ಯಾವತ್ತೂ ಅದರ ಡಿಮಾಂಡ್ ನೋಡಿ ಅದರ ಬಾಡಿಗೆ ಹೆಚ್ಚು ಮಾಡಿದ್ದಿಲ್ಲ. ಈಗಿನ ವೇಳೆಗೆ ಮಾಡಿರುತ್ತಿದ್ದನೋ ಏನೋ? ನಮ್ಮ ಗುಂಪಿನಲ್ಲಿ ಕಂಪೌಂಡ್ ಮಾಲೀಕರ ಮಕ್ಕಳಿದ್ದರೂ ಅವರ ಹತ್ತಿರ ಸಾಕಶ್ಟು ಚಿಲ್ಲರೆ ಇರುತ್ತಿದ್ದರೂ ಎಲ್ಲರೂ ಆಡಬೇಕೆಂದು ಕೇವಲ ಅರೆ ತಾಸು ಬಾಡಿಗೆಯನ್ನು ಒಯ್ಯುತ್ತಿದ್ದುದ್ದು ಕೂಡ ಈಗ ಸೋಜಿಗವೆನಿಸುತ್ತದೆ. ಅವರಿಗೆ ನಲವರಿಕೆಗಳು.

’ಟೋಬು” ಏನೂ ಹೊಚ್ಚ ಹೊಸ ಸೈಕಲ್ ಏನಲ್ಲ. ಹಳೆಯದಾದರೂ ಉದ್ದನೆಯ ಬಾತುಕೋಳಿಯ ಕುತ್ತಿಗೆಯಂತ ಹ್ಯಾಂಡಲ್ ಎಂತ ಗಿಡ್ಡ ಬಡ್ಡಿಮಕ್ಕಳಿಗೂ ನಿಲುಕುತ್ತಿತ್ತು. ಕುಳ್ಳರಿದ್ದರೂ ಎಲ್ಲರಿಗೂ ಅದರ ಪೆಡಲ್ ಮೇಲೆ ಕಾಲು ಕುಳಿತುಕೊಳ್ಳುತ್ತಿದ್ದವು. ಉದ್ದನೆಯ ಸೀಟು ಅದರ ಹಿಂದೆ ಬ್ಯಾಕ್ ರೆಸ್ಟು. ಇಬ್ಬರು ಕುಳಿತುಕೊಳ್ಳುವುದಕ್ಕಾಗಿ ಇದ್ದರೂ ಯಾವಾಗಲೂ ಒಬ್ಬರೇ ಹೊಡೆದದ್ದೇ ಹೆಚ್ಚು. ’ಈ ಸುಡುಗಾಡು ಸೈಕಲ್ ಗೆ ಅದೆಶ್ಟು ಬೆನಕೊಂಡುಬಿಟ್ಟಾವಲ್ಲ ಹುಡುಗ್ರು?’ ಅಂತ ಕಂಪೌಂಡಿನಲ್ಲಿ ನಮ್ಮ ಸೈಕಲ್ ಆವಾಂತರಗಳಿಂದ ಸುಸ್ತಾಗಿದ್ದ ಆಂಟಿಯರು ಮಾತಾಡಿಕೊಳ್ಳುತ್ತಿದ್ದರು. ಕಂಪೌಂಡಿನೊಳಗಿದ್ದ ಮರಗಳಿಗೆ ಡಿಕ್ಕಿಯಂತೂ ಕಾಯಂ. ಆದರೆ ಕಂಪೌಂಡಿನಲ್ಲಿದ್ದ ಸೇದೋ ಬಾವಿಯಿಂದ ನೀರು ಹೊತ್ತೊಯ್ಯುತ್ತಿದ್ದ ಹೆಣ್ಣುಮಕ್ಕಳಿಗೆ, ಅಜ್ಜಿಯರಿಗೆ ನಮ್ಮ ಟೋಬೋ ಮುತ್ತುಕೊಡುವುದನ್ನು ಬಿಟ್ಟಿರಲಿಲ್ಲ. ಯಾಕೆಂದರೆ ಅವನಿಗೆ ಬ್ರೇಕ್ ಹಾಕಿ ಅರೆ ನಿಮಿಶದ ಮೇಲೇನೇ ಬ್ರೇಕ್ ಬಿದ್ದು ನಿಲ್ಲುತ್ತಿದ್ದ. ಆದರೆ ಅಶ್ಟೋತ್ತಿಗೆ ಆವಾಂತರಕ್ಕೆ ಕಾರಣವಾಗಿಬಿಡುತ್ತಿದ್ದ. ’ಹೊರಗೆ ಎಲ್ಲಾದರೂ ಆಡಿಕೊಂಡು ಸಾಯ್ರಿ, ಇನ್ನೊಂದು ಸರ‍್ತಿ ಕಂಪೌಂಡಿನಲ್ಲಿ ಸೈಕಲ್ ಗಿಕಲ್ ಅಂತಾ ತಂದ್ರೆ ಮುರಿದು ಬಿಸಾಕಿಬಿಡ್ತಿನಿ’ ಅಂತ ಅಜ್ಜಿಯೊಂದು ಯಾವಾಗಲೂ ಅಂಜಿಸುತ್ತಿತ್ತು. ಅದು ಇನ್ನೂ ಅಂಜಿಸುತ್ತೇನೋ ನೋಡಬೇಕೆನಿಸುತ್ತದೆ. ಉಳಿದ ಹುಡುಗರಿಗಿಂತ ನಾನು ಒಂದೆರಡು ವರ‍್ಶ ದೊಡ್ಡವನಾದ್ದರಿಂದ ನಾನೇ ದೊರೆ. ಎಲ್ಲ ಉಳಿದ ಹುಡುಗರ ಅಮ್ಮನವರ ಪಾಲಿಗೆ ಅಂದರೆ ಉಳಿದ ಆಂಟಿಯಂದಿರ ಪಾಲಿಗೆ ನಾನೇ ವಿಲನ್, ಅಂದ್ರೆ ಅವರ ಮಕ್ಕಳನ್ನು ಸೈಕಲ್ ಹುಚ್ಚಿಗೆ ಹಚ್ಚಿ ಹಾಳುಮಾಡುತ್ತಿದ್ದುದ್ದು ನಾನೇ ಎಂಬುದೇ ಅವರಿಗೆ ನನ್ನ ಮೇಲಿನ ಸಿಟ್ಟಿಗೆ, ತಾಪಕ್ಕೆ ಕಾರಣ.

ಶನಿವಾರ ಕಲಿಮನೆಯ ರಿಕ್ಶಾದಿಂದ ಇಳಿದಿದ್ದೇ ತಡ, ಬ್ಯಾಗನ್ನು ಮೂಲೆಯಲ್ಲಿ ಎಸೆದು ಅದಾಗಲೇ ರೆಡಿ ಮಾಡಿಕೊಂಡಿದ್ದ ಒಂದು ರೂಪಾಯಿಯನ್ನು ತೆಗೆದುಕೊಂಡು ಬಿಳಿ ಯುನಿಪಾರ‍್ಮ್ ನ್ನು ಬದಲಿಸದೇ ಹುಸೇನ್ ಸಾಬಿಯ ಟೋಬುವಿನ ಹತ್ತಿರ ಓಡುತ್ತಿದ್ದೆ. ಕೆಲವೊಮ್ಮೆ ಪಕ್ಕದಲ್ಲೇ ಇದ್ದ ಬೇಕರಿ ಕೆಲಸದ ಹುಡುಗರೂ ಬಾಡಿಗೆಗೆ ಒಯ್ದುಬಿಟ್ಟಿರುತ್ತಿದ್ದರು. ಮತ್ತೇ ಅವರಿಗಾಗಿ ಕಾಯುವುದೇ ಕೆಲಸ. ಸೈಕಲ್ ವಾಪಸ್ ಬಂತೆಂದ್ರೆ ಎಲ್ಲಿಲ್ಲದ ನಲಿವು. ಅದರ ಮೇಲೆ ಸವಾರಿ ಮಾಡುತ್ತಿರಲು ಉಳಿದ ಹುಡುಗರು ಬೇರೆ ಬೇರೆ ಕಲಿಮನೆಗಳಿಂದ  ಬೇರೆ ಬೇರೆ ರಿಕ್ಶಾಗಳಲ್ಲಿ ಬಂದಿಳಿದು ನನ್ನ ಸವಾರಿಯನ್ನು ನೋಡಿದರೆನೇ ನನಗೆ ಎಲ್ಲಿಲ್ಲದ ಹೆಮ್ಮೆ. ನನ್ನ ಬಾಡಿಗೆ ಹೊತ್ತು ಮುಗಿದ ಮೇಲೆನೆ ಉಳಿದವರ ಸವಾರಿ.

ಹೀಗೆ ದಿನಗಳೆದಂತೆ ನಾವೂ ದೊಡ್ದವರಾದೆವು. ಟೋಬು ದೊಡ್ದದಾಗಲೇ ಇಲ್ಲ. ನಾವೆಲ್ಲ ಈಗ ದೊಡ್ಡ ಸೈಕಲ್ ಗಳನ್ನು ಬಾಡಿಗೆ ತಂದು ಅಡ್ಡಗಾಲಲ್ಲಿ ತುಳಿಯುವುದನ್ನು ರೂಡಿ ಮಾಡಿಕೊಂಡಿದ್ದೆವು. ಟೋಬು ಸೈಕಲ್ ಹೊಡೆದರೆ ಇನ್ನೂ ’ಸಣ್ಣವ’ ಅನ್ನೋ ಆಶಯ ಮೂಡತೊಡಗಿದ್ದರಿಂದ ಅದು ಸಣ್ಣಗೆ ಮಿರಜಕರ್ ಕಂಪೌಂಡಿನಿಂದ ಕಾಣದಾಯಿತು. ಆಮೇಲೆ ನಾವು ಟೋಬುವನ್ನು ಮರತೇ ಹೋದೆವು. ಕಾಲಕಳೆದಂತೆ ವಿಪರೀತ ಹಟಕ್ಕೆ ಬಿದ್ದು, ಜಗಳವಾಡಿ, ಉಪವಾಸ ಮಾಡಿ ಇನ್ನಿಲ್ಲದಂತೆ ಕಾಡಿಸಿ, ಪೀಡಿಸಿ ಹೊಸ ಸೈಕಲ್ ಗಳನ್ನು ನಮ್ಮವಾಗಿಸಿಕೊಂಡೆವು. ಸೈಕಲ್ ತಂದ ದಿನ ಆ ಇರುಳು ಇಡೀ ನಿದ್ದೆ ಮಾಡಿದ್ದಿಲ್ಲವೇನೊ? ಕಲಿಮನೆಯಲ್ಲೂ ಅದೇ ಗುಂಗು. ಅದೊಂದು ದೊಡ್ಡ ಕತೆಯಾದೀತು. ಕಲಿಮನೆಯಲ್ಲಿ ನನ್ನದು ’ಅಟ್ಲಾಸ್ ಎಸ್ ಎಲ್ ಆರ‍್’ ನಮೂನೆಯಾದರೆ, ಗೆಳೆಯ ಆನಂದಂದು ಬಿಎಸ್ ಎ ಎಸೆಲಾರ್. ಅವಿನಾಶಂದು ’ಹೀರೋ ಹಂಸ’ ವಾದರೆ ಗುಂಡಂದು ’ಹೀರೋ ರೇಂಜರ್!’ ನಮ್ಮ ಡುಮ್ಮಂದು ನನ್ನ ಮಾಡಲ್ ಎಂಬುದೇ ಇನ್ನೊಂದು ಸಂತಸ. ಒಂದೊಮ್ಮೆ ಹೊಸದಾಗಿ ಸೈಕಲ್ ನ್ನು ನನ್ನ ಅಪ್ಪನ ಕಲಿಮನೆಗೆ ತೆಗೆದುಕೊಂಡು ಹೋಗಿದ್ದಾಗ ಅಪ್ಪನ ಸಹಕೆಲಸಗಾರ ಮೇಡಂ ಒಬ್ಬರು ’ಸರ್, ಮಗನಿಗೇನು ಹೆಲಿಕ್ಯಾಪ್ಟರ್ ಕೊಡಿಸಿರಲ್ಲಾ… ಬಾರಿ ಸೈಕಲ್ ಇದು’ ಎಂದು ಸೈಕಲ್ ನಮೂನೆಯನ್ನು ಕೊಂಡಾಡಿ ನನ್ನನ್ನು ಸುಮ್ ಸುಮ್ನೆ ಹಿಗ್ಗಿ ಹೀರೆಕಾಯಿಯಾಗುವಂತೆ ಮಾಡಿದ್ದರು.

ಹೊಸದಾಗಿ ತಂದ ಸೈಕಲ್ ನ್ನು ಮೊದಮೊದಲು ಕಲಿಮನೆಗೆ ಒಯ್ಯುತ್ತಿರಲೇ ಇಲ್ಲ. ಬೇಗ ಹಳೆಯದಾಗುತ್ತದೆಂದು!. ಇಳಿಹೊತ್ತು ಹತ್ತಿರದ ಜ್ಯೂನಿಯರ್ ಕಾಲೇಜು ಗ್ರೌಂಡ್ ನಲ್ಲಿ ಸುತ್ತಾಡಿಸಿ ವಾಪಸ್ ತಂದು ಜೋಪಾನವಾಗಿ ಮುಚ್ಚಿಡುತ್ತಿದ್ದೆ. ಒಂದು ಸರ‍್ತಿ ಗೆಳೆಯರೊಡನೆ ನನ್ನ ಹೊಸ ಸೈಕಲ್ ತಗೊಂಡು ಗ್ರೌಂಡ್ ಗೆ ಹೋಗಿದ್ದೆವು. ಆನಂದನು ನನ್ನ ಸೈಕಲ್ ನ್ನು ಕೆಡವಿಬಿಟ್ಟ! ಅವತ್ತ ಇಡೀ ದಿನ ಅತ್ತಿದ್ದೆ. ಇನ್ನೆಂದೂ ಯಾರಿಗೂ ಸೈಕಲ್ ಮುಟ್ಟಿಸಲ್ಲ ಎಂದು ಪ್ರಮಾಣ ಮಾಡಿದ್ದೆ. ಆನಂದ ಮತ್ತಿತರ ಗೆಳೆಯರು ಅದನ್ನು ನೆನಪಿಸಿಕೊಂಡು ಈಗಲೂ ಗೋಳಾಡಿಸುತ್ತಾರೆ. ಆವಾಗ ದಿನವೂ ಮನೆಯಲ್ಲಿ ಇಡುವುದನ್ನು ನೋಡಿ ಮನೆಯಲ್ಲಿ ’ಇದನ್ನು ಮುಚ್ಚಿಟ್ಟು ಪೂಜೆ ಮಾಡಾಕ ಅಶ್ಟ್ ಹಟ ಮಾಡಿ ತಂದ್ಯನು?. ಸಾಲಿಗೆ ಒಯ್ದೀ ಸರಿ, ಇಲ್ಲಾಂದ್ರೆ ವಾಪಸ್ ಮಾರಿಬಿಡ್ತಿನಿ’ ಅಂತ ಅಮ್ಮ ಗದರಿಸಿದ ಮೇಲೆ ಕಲಿಮನೆಗೆ ಒಯ್ಯೋದು ಶುರುವಾಯ್ತು. ಅದೂ ನಾ ಹೋಗುತ್ತಿದ್ದ ರಿಕ್ಶಾದ ಹಿಂದೆಯೇ ಹೋಗಿ, ಬರುವಾಗ ಅದರ ಹಿಂದೆಯೇ ಬರುತ್ತಿದ್ದೆ. ರಿಕ್ಶಾದಲ್ಲಿ ಕುಳಿತ ಉಳಿದವರಿಗಿಂತ ನಾನು ದೊಡ್ಡವನಾಗಿಬಿಟ್ಟಿದ್ದೆ. ದಿನಗಳೆದಂತೆ ನಾನೇ ಹೋಗತೊಡಗಿದೆ. ಮುಂದೆ ನನ್ನ ಪ್ರೈಮರಿ, ಹೈಸ್ಕೂಲ್ ವರೆಗೂ ಸೈಕಲ್ ನನ್ನ ಒಡನಾಡಿಯಾಗಿತ್ತು. ಎರಡು ಹೊತ್ತು ಟ್ಯೂಶನ್, ಶಾಲೆ, ಶನಿವಾರ ಆನೇಗುಂದಿಗೆ, ರವಿವಾರ ಹಂಪಿಗೆ, ಹತ್ತಿರದ ಸಿನಿಮಾ ಶೂಟಿಂಗ್ ಜಾಗಗಳಿಗೆ ಕರದೊಯ್ಯುವಲ್ಲಿ ಗೆಳೆಯರ ಸೈಕಲ್ ನೊಟ್ಟಿಗೆ ನನ್ನ ಸೈಕಲ್ ಯಾವತ್ತೂ ಜತೆಯಾಗಿತ್ತು. ಸಣ್ಣ ಪುಟ್ಟ ಪೆಟ್ಟುಗಳನ್ನು ನಾನೇ ಅದಕ್ಕೆ ಬೀಳಿಸಿ ತರಚು ಮಾಡಿದ್ದೇನೇ ಹೊರತು ಅದೇನೂ ನನಗೆ ಯಾವ ತೊಂದರೆಯನ್ನೂ ಕೊಟ್ಟಿರಲಿಲ್ಲ. ನಂತರ ಹೊಸಪೇಟೆಗೆ ಪಿಯುಸಿ ಕಲಿಯಲು ಹೋದಮೇಲೆ ಸೈಕಲ್ ನಂಟು ಮುಗಿಯಿತು.

ನಿನ್ನೆ ದಿನ ಮಗಳಿಗೆ ಹೊಸ ಸಣ್ಣ ಸೈಕಲ್ ಒಂದನ್ನು ಕೊಡಿಸಿದೆವು. ತುಂಬಾ ಆಕರ‍್ಶಕ, ಮಟ್ಟಸವಾದ ಹೊಸ ನಮೂನೆ ಸಣ್ಣ ಸೈಕಲ್ ಅದು. ಪಿಂಕ್ ಬಣ್ಣದ್ದೇ ಬೇಕು ಅಂತ ಅದನ್ನೇ ಸೆಲೆಕ್ಟ್ ಮಾಡಿದ ಮಗಳ ಸೈಕಲ್ ಮುಂದೆ ನನ್ನ ’ಟೋಬು’ ನೆನಪಾಗಿ ಕಾಡತೊಡಗಿದ್ದ. ಆಕೆಯೇನೂ ನನ್ನಶ್ಟು ಹಟ ಮಾಡಿರಲಿಲ್ಲ. ಎದುರು ಮನೆಯ ಮಕ್ಕಳಲ್ಲಿ ಕೆಲವರಾಗಲೇ ಸೈಕಲ್ ಒಡೆಯ ಒಡತಿಯರಾಗಿದ್ದರು. ಮಗಳಿಗಿಂತ ಹೆಚ್ಚಾಗಿ ನನ್ನಾಕೆಗೆ ತನ್ನ ಮಗಳಿಗೂ ಸೈಕಲ್ ಒಡತಿಯನ್ನಾಗಿಸಬೇಕೆಂಬ ಮಹದಾಸೆ. ಅಶ್ಟೇ! ಆದ್ರೆ ನನಗೆ ಅನಿಸಿದ್ದೆಂದರೆ, ನಾವೆಲ್ಲ ಅನುಬವಿಸಿದ ಬಾಡಿಗೆ ಸೈಕಲ್ ಅನುಬವ, ಅದನ್ನು ಯಾವತ್ತಾದರೂ ನಾನು ಕರೀದಿಸಬೇಕೆಂಬ ಹಟ, ಅದೇ ಸೈಕಲ್ ಗಾಗಿ ಕಾಯ್ದ ಗಳಿಗೆಗಳು, ಅವರಿವರ ಕೈಯಲ್ಲಿ ಬೈಸಿಕೊಂಡ ದಿಗಿಲು, ಹೊಚ್ಚ ಹೊಸ ಸೈಕಲ್ ಗಾಗಿ ಊಟ ಬಿಟ್ಟು, ಹೊಡತ ತಿಂದು, ಮರುಗಿ ಕೊಡಿಸಿದ ದಿನಗಳು ಇಂತವೆಲ್ಲ ಸಣ್ಣ ರೋಚಕಗಳನ್ನು ಮಗಳು ಅನುಬವಿಸಲೇ ಇಲ್ಲವಲ್ಲ?! ಎಂದು. ಅವಳು ಒಮ್ಮೆ ಕೇಳಿದಳು. ಅವರಮ್ಮ ಕೊಡಿಸಿಬಿಟ್ಟಳು. ಅಶ್ಟೇ! ಎಲ್ಲಿಯ ರಸಾನುಬವ, ಎಲ್ಲಿಯ ರೋಚಕತೆ?

ಆದರೂ ಹೊಸ ಸೈಕಲ್ ಅವಳನ್ನು ಉಲ್ಲಸಿತಳನ್ನಾಗಿ ಮಾಡಿತು. ಕಾರಿನಲ್ಲಿ ಅದನ್ನು ಡಿಕ್ಕಿಯಲ್ಲಿ ಇಡುವುದಕ್ಕೆ ಅಡ್ಡಿಪಡಿಸಿದಳು. ಹಿಂದಿನ ಸೀಟ್ ನಲ್ಲಿ ತಾನೇ ಪಕ್ಕ ಇಟ್ಟುಕೊಂಡು ಕೂತಳು.  ಮನೆಗೆ ಬಂದ ತಕ್ಶಣ ಸುತ್ತಮುತ್ತಲ ತನ್ನವರಿಗೆಲ್ಲ ತೋರಿಸಿ ಬಂದಳು. ನನ್ನಾಕೆಯೂ ಸಾರ‍್ತಕತೆಯನ್ನನುಬವಿಸಿದಳು, ಮಗಳು ಸೈಕಲ್ ಮೇಲೆ ಕುಳಿತು ಹಾಲ್, ಬೆಡ್ ರೂಮ್, ಕಿಚನ್ ಒಂದೂ ಬಿಡದಂತೆ ಬೆಲ್ ರಿಂಗಣಿಸುತ್ತಾ ಸುತ್ತಾಡಿಸಿದಳು, ಬೆಳಬೆಳಗ್ಗೆ ಸೈಕಲ್ ತೊಗೊಂಡು ಬೆಲ್ ಮಾಡುತ್ತ ಹಾಲು ಕೊಟ್ಟು ಹೋಗುವ ಪ್ರಕಾಶ ನನ್ನು ನೆನೆಸಿಕೊಂಡು ಹೆಮ್ಮೆಪಟ್ಟಳು. ಅವಳ ಕಂಗಳಲ್ಲಿ ಸಂತಸವೊಂದಿತ್ತು, ಆದರೆ ನಾನು ತಾಸುಗಟ್ಟಲೇ ಕಾಯ್ದು ಬಾಡಿಗೆಗೆ ತಂದು ಹೊಡೆಯುತ್ತಿದ್ದ ಟೋಬು ಸೈಕಲ್ ಕೊಡುತ್ತಿದ್ದ ಕುಶಿಯ ಮಂದೆ ಇವಳ ಸಂತಸ ಚೂರು ಕಡಿಮೆಯೇ ಎಂದೆನಿಸಿತು. ಇವಳ ಹೊಸ ಸೈಕಲ್ ಹಿಂದೆಯೇ ನನ್ನ ಹಳೆಯ ’ಟೋಬು’ ಒಂದೀಟೂ ಸದ್ದು ಮಾಡದೇ ಸುತ್ತಾಡಿದಂತಾಯಿತು.

(ಚಿತ್ರಸೆಲೆ:  sweetcouch.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: