ಸಂತಸದ ಜಾಡುಹಿಡಿದು…

ಪ್ರಶಾಂತ ಎಲೆಮನೆ.

santasa_personality_development

ಜಗತ್ತಿನ ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಸುತ್ತೋದು ಸಂತಸ, ನೆಮ್ಮದಿಗಳ ಸುತ್ತಾನೇ! ಸಂತಸವನ್ನು ಹುಡುಕಿ ಕೆಲವರು ಹಿಮಾಲಯದ ತುದಿಯನ್ನ ಮುಟ್ಟಿದ್ದರೆ, ಕೆಲವರು ಸಾಗರದ ಆಳಕ್ಕೆ ಇಳಿದಿದ್ದಾರೆ. ಬ್ರಾನ್ಸನ್ ಅವರ ಹಾಗೆ ಬಲೂನಿನ ಮೇಲೆಯೇ ಜಗತ್ತನ್ನು ಸುತ್ತ ಹೊರಟವರೂ ಇದ್ದಾರೆ. ಕೆಲವರಿಗೆ ಹಾರೋ ಗಿಳಿ, ಕೆಲವರಿಗೆ ಮಾತಾಡೊ ಗಿಳಿ, ಒಳ್ಳೆ ಸಂಗೀತ, ಒಂದೊಳ್ಳೆ ಊಟ, ಕೆಲವರಿಗೆ ಹಣ ಕೂಡಿಡೋದರಲ್ಲೇ ನಲಿವಾದರೆ, ಕೆಲವರಿಗೆ ಕಳೆಯೋದರಲ್ಲೇ ಸುಕ. ಒಟ್ಟಾರೆ ಸಂತಸ ಎನ್ನುವುದು ಮನಸ್ಸಿನ ಒಂದು ಅನಿಸಿಕೆ, ಅವಸ್ತೆ.

ಸಂತಸ ಯಾವುದರಲ್ಲಿ, ಹೇಗೆ ಸಿಗುತ್ತೆ ಅನ್ನುವುದು ಎಶ್ಟು ಮುಕ್ಯವಾದದ್ದೋ, ಅದು ಎಸ್ಟು ಹೊತ್ತು ಇರುತ್ತೆ ಅನ್ನೋದು ಕೂಡ ಮುಕ್ಯ. ಮೊದಲ ಮಾವಿನಹಣ್ಣಿನ ಕುಶಿ ಎರಡನೇ ಮಾವಿನಹಣ್ಣನ್ನು ತಿನ್ನುವುದರಲ್ಲಿ ಇರುವುದಿಲ್ಲ.

ಸಂತಸ, ನೆಮ್ಮದಿಗಳ ಕತೆ ಹೀಗೆಲ್ಲಾ ಇರುವಾಗ ಎಲ್ಲರೂ ಒಪ್ಪತಕ್ಕ ಕೆಲವು ಸಂತೋಶದ ಸಂಗತಿಗಳೆಂದರೆ ಯಾವಾಗಲೂ ಒಳ್ಳೆಯದನ್ನು ಯೋಚಿಸಬೇಕು, ಸಿಟ್ಟು ಮಾಡ್ಕೋಬಾರದು, ಜಾಸ್ತಿ ಆಸೆ ಪಡಬಾರದು, ಸಂತಸವಾಗಿಯೇ ಇರ‍್ತೀವಿ ಅಂತ ಮನಸ್ಸು ಮಾಡಕೋಬೇಕು ಇತ್ಯಾದಿ,  ಇತ್ಯಾದಿ…

ಸಂತಸ ಮತ್ತು ಕೀಳರಿಮೆ:

ಸಂತಸ, ಸುಕದ ಕ್ಶಣಗಳಿಗಿಂತ ಸಂಕಟದ, ನೋವಿನ ನೆನಪುಗಳೇ ನಮ್ಮನ್ನ ಹೆಚ್ಚು ಕಾಡುತ್ತೆ. ಅಮೆಜಾನ್ ಮಿಂದಾಣದಲ್ಲಿ ಸುತ್ತು ಹೊಡೆದರೆ 2000ಕ್ಕೂ ಹೆಚ್ಚು ಪುಸ್ತಕಗಳು ಸಂತಸ, ಆತ್ಮವಿಶ್ವಾಸದ ಬಗ್ಗೆ ಹೇಳುತ್ತೆ. ಸುಕಕ್ಕೆ 7 ಸೂತ್ರಗಳು ಅಂತ ಕೆಲವರೆಂದರೆ, ಇನ್ನೂ ಕೆಲವರು ಸುಕದ 11 ಸೂತ್ರಗಳನ್ನ ಹೇಳುವವರು.

ಕೆಲವರು ನಮ್ಮ ಬದುಕು ಇವತ್ತೆ ಅಂದರೆ, ಕೆಲವರು ಹೇಳೋದು ನಾಳೆ ಅಂತ. ಹೀಗೆಲ್ಲ ಇದ್ದರೂ ಕೀಳರಿಮೆಯಿಂದ ಬಳಲುವವರ ಸಂಕ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಒಂದು ಅಂದಾಜಿನ ಪ್ರಕಾರ 2020ರ ವೇಳೆಗೆ ಆತ್ಮಹತ್ಯೆಯಿಂದ ಸಾಯುವವರ ಸಂಕ್ಯೆ ಕೊಲೆಯಿಂದ ಸಾಯುವ ಒಟ್ಟೂ ಸಂಕ್ಯೆಯನ್ನೇ ಮೀರಿಸಲಿದೆಯಂತೆ.

ಸಂತಸದ ರಸಾಯನ:

ನಮ್ಮ ಮನಸ್ಸಿಗೆ ಹಿತವೆನಿಸುತ್ತಿದೆ ಅಂದರೆ ನಮ್ಮ ದೇಹದ ಯಾವುದೋ ಮೂಲೆಯಲ್ಲಿ ಅದಕ್ಕೆ ಹುರುಪು ಸಿಕ್ಕಿರಲೇ ಬೇಕು. ಡೋಪಮೈನ್ ಎಂಬ ನರದೊಯ್ಯುಗದಡಕ (neurotransmitter) ಮೆದುಳಿನ ನಡುವಿನಲ್ಲಿದೆ, ಇದು ನಮ್ಮನ್ನು ಹುರುಪಿನಲ್ಲಿ ಇಡುವಂತೆ ಮಾಡುತ್ತದೆ. ಇದು ಗುಂಡಿಗೆ ಬಡಿತ, ಹೊಂದಾಣಿಕೆ ಮುಂತಾದ ಪ್ರಕ್ರಿಯೆಗಳಿಗೆ ಸಹಾಯಮಾಡುತ್ತೆ. ಸಿರೊಟೋನಿನ್ ಎಂಬ ಇನ್ನೊಂದು ನರದೊಯ್ಯುಗದಡಕ ತಲೆಯಲ್ಲಿ ಹುಟ್ಟಿ ರಕ್ತವನ್ನು ಸೇರುತ್ತದೆ. ಇದು ಕರುಳಿನ ಕೆಲವು ಕೆಲಸಗಳನ್ನೂ ನಿಯಂತ್ರಿಸುತ್ತೆ. ಕಿನ್ನತೆ ನಿಯಂತ್ರಿಸುವ ಮದ್ದುಗಳಲ್ಲಿ ಇದನ್ನು ಬಳಸುತ್ತಾರೆ.

ಎಂಡ್ರೋಪಿನ್(Endorphin) ಎನ್ನುವ ಅಡಕ ಉದ್ವೇಗವನ್ನ ಹಿಡಿತದಲ್ಲಿಡುತ್ತದೆ. ಇದನ್ನು ಪಿಟ್ಯುಟರಿ ಸುರಿಗೆ (pituitary gland) ಮತ್ತು ಮೆದುಳಿನ ಬಾಗಗಳಲ್ಲಿ ಕಾಣಬಹುದು. ವ್ಯಾಯಾಮ, ಸಿಹಿತಿನಿಸು, ಸಂಗೀತ ಕೇಳುವುದು, ಹೂವಿನ ಪರಿಮಳ ತೆಗೆದುಕೊಳ್ಳುವುದು ಇತ್ಯಾದಿ ಚಟುವಟಿಕೆಗಳಲ್ಲಿ ಬೇರೆ ಪ್ರಮಾಣದಲ್ಲಿ ಎಂಡ್ರೋಪಿನ್  ಬಿಡುಗಡೆಯಾಗುತ್ತೆ.

ಇನ್ನು ಮಾದಕತೆಯತ್ತ ತಿರುಗಿದರೆ ಅದರ ಕತೆಯೇ ಬೇರೆ. ಕೂಡಲೇ ಸಿಗುವ ಸಂತಸಕ್ಕೆ ತಾನೇ ಜಗತ್ತಿನಲ್ಲಿ ಮಾದಕವಸ್ತುವಿನ ಉದ್ಯಮ ವೇಗವಾಗಿ ಬೆಳೆಯುತ್ತಿರುವುದು! ಕಾಳಸಂತೆಯ ಇದರ ಉದ್ಯಮ  321.6 ಶತಕೋಟಿ ಅಮೆರಿಕನ್ ಡಾಲರ್, ಅದು 2003 ರಲ್ಲಿ ಜಗತ್ತಿನ ಒಟ್ಟು ವಹಿವಾಟಿನಲ್ಲಿ 1% ಪಾಲಿನಶ್ಟಿತ್ತು. ಮೆಕ್ಸಿಕನ್ ಆಡಳಿತದ ಪ್ರಕಾರ ಅಲ್ಲಿಯ 90% ಕೊಲೆಗಳು ಮಾದಕವಸ್ತುವಿಗೆ ಕೊಂಡಿಹಾಕಿಕೊಂಡಿವೆ. ಮನಸ್ಸಿಗೆ ಇವುಗಳು ಮುದ ನೀಡಿದರೂ ನಮ್ಮ ಮಯ್ಯಿಗೆ ಕೆಡುಕನ್ನುಂಟು ಮಾಡುತ್ತವೆ.

ಹೀಗೊಂದು ವಾದ:
ನೊಬೆಲ್ ವಿಜೇತ ಸೊಮ್ಮರಿಗ (Economist) ಡೇನಿಯಲ್ ಕಾಹ್ನೆಮನ್ (Daniel Kahneman) ತಮ್ಮ ದಶಕಗಳ ಅದ್ಯಯನವನ್ನು ಹೀಗೆ ಹೇಳುತ್ತಾರೆ,
ಒಂದು 20 ನಿಮಿಶದ ಒಳ್ಳೆ ಸಂಗೀತದ ಅನುಬವ ಕುಶಿ ನೀಡಿತು ಎಂದುಕೊಳ್ಳೋಣ, ಆದರೆ ಕೊನೆಗೆ ಹಾಡುಗಾರ ಕೆಟ್ಟ ಸ್ವರದಲ್ಲಿ ಕಿರುಚಿದರೆ ನಮ್ಮ ನೆನಪಿನಲ್ಲಿ ಕೊನೆಗೆ ಕೇಳಿದ ಕಿರುಚಾಟವೇ ಹೆಚ್ಚು ಉಳಿದುಬಿಡುತ್ತೆ. ಇಲ್ಲಿ ಎರಡು ಹಂತಗಳಿವೆ,

1) ಅನುಬವದ ನಾನು (Experiencing)
2) ನೆನಪಿನ ನಾನು (Memory)

ಸ್ವರ‍್ಗದಂತಹ ಜಾಗದಲ್ಲಿ ನಮ್ಮ ರಜೆ ಕಳೆದರೂ ಮುಂದೆ ನಮ್ಮ ಕುಶಿ ಇರೋದು ಅದರ ನೆನಪಿನಲ್ಲೇ. ಎರಡು ವರುಶದ ಕುಶಿಯನ್ನು ಒಂದು ಕೆಟ್ಟ ಗಟನೆ ಹಾಳು ಮಾಡಬಹುದು.

ನಮ್ಮ ಸಂತಸ ನಾವು ಅನುಬವಕ್ಕೆ (ಆ ಕಾಲ) ಹೆಚ್ಚಿನ ತೂಕ ನೀಡುತ್ತೇವೋ ಇಲ್ಲಾ ನಮ್ಮ ನೆನಪಿಗೋ ಎಂಬುದರ ಮೇಲೆಯೇ ಆಗಿದೆ. ನಮ್ಮ ಈಗಿನ ಸಂತಸವನ್ನೂ ಹಳೆಯ ನೆನಪುಗಳು ಹಾಳು ಮಾಡಬಹುದು. ಈಗಿನ ನೋವನ್ನು ಹಳೆಯ ನೆನಪುಗಳು ಮರೆಸಲೂಬಹುದು.

ದೇಶೀಯ ಸಂತಸದ ಅಳತೆ:

ದೇಶೀಯ ಮಟ್ಟದಲ್ಲಿ ಇದರ ಅಳತೆ ಬಿನ್ನ. ಒಟ್ಟು ದೇಶೀಯ ಉತ್ಪನ್ನವನ್ನು ದೇಶದ ಪ್ರಗತಿಯ ಮಾನದಂಡವಾಗಿ ಜಗತ್ತಿನ ಬಹುತೇಕ ದೇಶಗಳು ಪರಿಗಣಿಸಿದ್ದರೆ ಬೂತಾನಿನ ಅಂದಿನ ದೊರೆ 1972ರಲ್ಲೇ ಸಂತಸದ ಸೂಚ್ಯಂಕವನ್ನು ಪರಿಚಯಿಸಿದರು. ಇದು,

  • ಸುಸ್ತಿರ ಬೆಳವಣಿಗೆ (ಜೀವನ ಮಟ್ಟ)
  • ಪರಿಸರ ಸಂರಕ್ಶಣೆ
  • ಉತ್ತಮ ಆಡಳಿತ
  • ಸಾಂಸ್ಕ್ರುತಿಕ ಮೌಲ್ಯಗಳ ಸಂರಕ್ಶಣೆ ಮತ್ತು ಪ್ರಚಾರ

ಹೀಗೆ ಬೇರೆ ಬೇರೆ ಮಾನದಂಡವನ್ನು ಒಳಗೊಂಡಿದೆ. ಇನ್ನು ವಿಶ್ವ ಸಂತಸದ ವರದಿ 2015ರ ಪ್ರಕಾರ ಸ್ವಿಜರ‍್ಲ್ಯಾಂಡ್ ಜಗತ್ತಿನ ಅತಿ ಸಂತಸದ ದೇಶ. ಇದರಲ್ಲಿ ಬಾರತದ ಸ್ತಾನ 119ನೇದು. ಜಗತ್ತಿನ ಬೇರೆ ಬೇರೆ ಸಂಸ್ತೆಗಳು ತಮ್ಮದೇ ಸಂತಸದ ವರದಿಯನ್ನು ಬಿಡುಗಡೆ ಮಾಡುತ್ತಿವೆ. ಅಮೇರಿಕಾದಂತಹ ಮುಂದುವರಿದ ದೇಶಗಳೂ ಜನರ ಸಂತಸದ ಬೆಳವಣಿಗೆಯನ್ನು ಮೂಲ ಮಾನದಂಡವಾಗಿ ಪರಿಗಣಿಸುವತ್ತ ಚಿಂತನೆ ನಡೆಸಿವೆ.

ಕೊನೆಗೊಂದು ಕತೆ:
ಜಾಲತಾಣದಲ್ಲಿ ಓದಿದ ಸಣ್ಣ ಕತೆ ಇಲ್ಲಿದೆ. ಏನೂ ಇಲ್ಲ ಅಂತ ಚಿಂತಿಸೋ ಬದಲು ಇರೋದರಲ್ಲೇ ಸಂತಸವಾಗಿರು ಅಂತ ನೀತಿ ಹೇಳುತ್ತೆ ಇದು.

ಒಂದು ಸಲ ಸೂಪಿ ಸಂತರೊಬ್ಬರು ದಾರಿಮೇಲೆ ನಡ್ಕೊಂಡು ಹೋಗ್ತಾಯಿದ್ದರು. ಅವರಿಗೆ ಹೆಗಲ ಮೇಲೆ ಒಂದು ಹರುಕು ಚೀಲ ಹಾಕ್ಕೊಂಡು ಬೇಸರದಿಂದ ಬರ‍್ತಾಯಿರೋ ಒಬ್ಬ ಬಿಕ್ಶುಕ ಕಂಡ. ಅವರು ಅವನನ್ನು ಕೇಳಿದರು,

ಅಯ್ಯಾ ಯಾಕೆ ಬಹಳ ಬೇಸರದಲ್ಲಿಯಿದ್ದೀಯಪ್ಪ?

ಅದಕ್ಕೆ ಅವನಂದ,

ನನ್ನ ಹತ್ರ ಕುಶಿ ಪಡೋಕೆ ಏನಿದೆ, ಎನೂ ಇಲ್ಲ

ಅದಕ್ಕೆ ಬೇಸರದಲ್ಲಿದ್ದೀನಿ. ಸರಿ ಹಂಗಾದರೆ ನೋಡೋಣ ಕೊಡು ಅಂತ ಹೇಳಿ ಅವನ ಚೀಲ ತಗೊಂಡ್ರು ಅವರು. ಚೀಲ ತಗೊಂಡವರೇ ಅಲ್ಲಿಂದ ಒಡೋಕೆ ಶುರುಮಾಡಿದರು. ಗಲಿಬಿಲಿಗೊಂಡ ಬಿಕ್ಶುಕ ಅವರ ಬೆನ್ನಟ್ಟಿದ, ಆದರೆ ಅವರು ಇವನಿಗೆ ಸಿಗಲೇ ಇಲ್ಲ.

ಓಡಿ ಬಂದ ಸಂತರು ಬಿಕ್ಶುಕ ಬರೋ ದಾರಿ ಇದೇ ಅಂತ ತೀರ‍್ಮಾನ ಮಾಡಿ ಅಲ್ಲೇ ಚೀಲ ಇಟ್ಟು, ಅಲ್ಲೇ ಮರೆಯಲ್ಲಿ ಕೂತರು. ಅದೇ ದಾರೀಲಿ ಇನ್ನೂ ಬೇಸರದಿಂದ ಬಂದ ಬಿಕ್ಶುಕ ತನ್ನ ಚೀಲ ನೋಡಿ ಕುಶಿಯಿಂದ ಓಡಿಬಂದು ಎತ್ತಿಕೊಂಡ,

ಅಯ್ಯೋ ನಿನ್ನನ್ನು ಕಳೆದುಕೊಂಡು ಬಿಟ್ಟಿದ್ನಲ್ಲಾ!

ಅನ್ನುತ್ತಾ ಅದನ್ನು ತಬ್ಬಿಕೊಂಡ. ಇದನ್ನು ನೋಡ್ತಾ ಇದ್ದ ಸೂಪಿ ಸಂತರು ಮರೆಯಲ್ಲಿ ಮನಸಲ್ಲೇ ನಗ್ತಾ ಇದ್ದರು.

(ಮಾಹಿತಿ ಮತ್ತು ಚಿತ್ರಸೆಲೆಗಳು: www.huffingtonpost.comwww.ted.comhappinessbeyondthought, books.google.co.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: