ವಿರೋದಿಸುವುದೊಂದೇ ವಿರೋದ ಪಕ್ಶದ ಕೆಲಸವೇ?

ನಾಗರಾಜ್ ಬದ್ರಾ.

Parliament

ಉತ್ತರ ಬಾರತದ ರಾಜ್ಯಗಳಾದ ರಾಜಸ್ತಾನ, ಗುಜರಾತ್, ಪಶ್ಚಿಮ ಬಂಗಾಳ, ಒರಿಸ್ಸಾ ಮತ್ತು ಮದ್ಯಪ್ರದೇಶಗಳು ಬೀಕರ ಮಳೆಯಿಂದ ತತ್ತರಿಸಿವೆ. ಅಲ್ಲಿನ ಎಶ್ಟೋ ಹಳ್ಳಿಗಳು ಜಲಾವ್ರುತಗೊಂಡಿವೆ. ಇನ್ನು ದಕ್ಶಿಣ ಬಾರತದಲ್ಲಿ ಬೀಕರ ಬರಗಾಲದಿಂದ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದೇಶದ ಮುಕ್ಯವಾದ ಸಮಸ್ಯೆಗಳು ನಿರುದ್ಯೋಗ, ಬಡತನ, ಕುಡಿಯುವ ನೀರಿನ ಸಮಸ್ಯೆ, ಬ್ರಶ್ಟಾಚಾರ, ಬಯೋತ್ಪಾದನೆ, ಪಾಕಿಸ್ತಾನದಿಂದ ಗಡಿ ರೇಕೆಯಲ್ಲಿ ಕದನ ವಿರಾಮ ಉಲ್ಲಂಗನೆ, ನದಿಗಳ ಜೋಡಣೆ, ನದಿಗಳ ಹೂಳು ತೆಗೆಯುವುದು, ಐಸೀಸ್ ಉಗ್ರರ ಕರಿನೆರಳು ಬಾರತದ ಮೇಲೆ ದಿನೇ ದಿನೇ ಹೆಚ್ಚುತ್ತಿರುವುದು, ಮಹಿಳೆಯರ ಸುರಕ್ಶತೆ… ಹೀಗೆ ಪಟ್ಟಿ ಮಾಡುತ್ತಾ ಹೋದರೆ ಮುಗಿಯುವುದಿಲ್ಲ.

ಚರ‍್ಚಿಸಲು ಇಶ್ಟೆಲ್ಲಾ ಸಮಸ್ಯೆಗಳಿವೆ, ಆದರೆ ಈ ವರ‍್ಶದ ಸಂಸತ್ತಿನ ಮಳೆಗಾಲದ ಅದಿವೇಶನದಲ್ಲಿ, ಎರಡು ಸದನಗಳಲ್ಲಿ ಒಂದು ದಿನವೂ ಮೇಲಿನ ಯಾವುದೇ ವಿಶಯದ ಬಗ್ಗೆ ಚರ‍್ಚೆ ನಡೆಯಲಿಲ್ಲ. ವಿರೋದ ಪಕ್ಶಗಳ ಸದಸ್ಯರು ಲಲಿತ್ ಮೋದಿ ಪ್ರಕರಣದಲ್ಲಿ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್, ರಾಜಸ್ತಾನದ ಮುಕ್ಯಮಂತ್ರಿ ವಸುಂದರಾ ರಾಜೆ ಹಾಗೂ ವ್ಯಾಪಂ ಹಗರಣದಲ್ಲಿ ಮದ್ಯಪ್ರದೇಶದ ಮುಕ್ಯಮಂತ್ರಿ ಪ್ರುತ್ವಿರಾಜ್ ಸಿಂಗ್ ಚೌವಾಣರವರ ರಾಜೀನಾಮೆಗೆ ಪಟ್ಟುಹಿಡಿದು, ಸಂಸತ್ತಿನಲ್ಲಿ ಗದ್ದಲವನೆಬ್ಬಿಸಿ ಪ್ರತಿಬಟನೆ ನಡೆಸಿದರು. ಆದರೆ ಆಡಳಿತರೂಡ ಎನ್.ಡಿ.ಎ ಸರಕಾರವು ಮೂವರಿಗೆ ಕ್ಲೀನ್ ‍ಚಿಟ್ ನೀಡಿ ವಿರೋದ ಪಕ್ಶಗಳ ಬೇಡಿಕೆಯನ್ನು ತಳ್ಳಿಹಾಕಿತ್ತು. ಇವರಿಬ್ಬರ ಜಗಳದಲ್ಲಿ ಇಡೀ ಸಂಸತ್ತಿನ ಮಳೆಗಾಲದ ಅದಿವೇಶನದಲ್ಲಿ ಒಂದು ದಿನವೂ ಮೇಲಿನ ಸಮಸ್ಯೆಗಳ ಚರ‍್ಚೆಯು ನಡೆಯದೇ ಹೋಯಿತು.

ಸಂಸತ್ತಿನಲ್ಲಿ ಪ್ರತಿ ದಿನವು ಗಲಾಟೆ, ಗದ್ದಲ, ಪ್ರತಿಬಟನೆ, ಅದಿವೇಶವನದಿಂದ ಹೊರನಡೆಯುವುದರಲ್ಲಿ ಸಂಸತ್ತಿನ ಅಮೂಲ್ಯವಾದ ಸಮಯ ವ್ಯರ‍್ತವಾಯಿತು. ಚರ‍್ಚೆಯನ್ನು ಮಾಡುವ ಮನಸ್ಸು ಯಾವ ಪಕ್ಶಗಳಿಗೂ ಇರಲಿಲ್ಲ. ರಾಶ್ಟ್ರಪತಿಯವರು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಾಡಿನ ಜನತೆಯನ್ನು ಉದ್ದೇಶಿಸಿ ನೀಡಿದ ಬಾಶಣದಲ್ಲಿ, ಸಂಸತ್ತಿನಲ್ಲಿ ಸದಸ್ಯರ ನಡುವಳಿಕೆ ಬಗ್ಗೆ ತುಂಬಾ ಅಸಮಾದಾನವನ್ನು ವ್ಯಕ್ತಪಡಿಸಿದ್ದರು. ಸಂಸತ್ತು ಒಂದು ಯುದ್ದ ಬೂಮಿಯಾಗಿ ಪರಿವರ‍್ತನೆಗೊಂಡು, ಯಾವುದೇ ಸಮಸ್ಯೆಯ ಬಗ್ಗೆ ಚರ‍್ಚೆ ನಡೆಯದೇ ಹಾಳಾಗಿರುವುದಕ್ಕೆ ತುಂಬಾ ವಿಶಾದ ವ್ಯಕ್ತಪಡಿಸಿದ್ದರು.

ಎರಡು ಸದನಗಳ ಒಂದು ನಿಮಿಶದ ವೆಚ್ಚ 2.50 ಲಕ್ಶ ರೂಪಾಯಿಗಳು, ಒಂದು ಅದಿವೇಶನದ ಒಟ್ಟು ಹಣದ ವೆಚ್ಚ 260 ಕೋಟಿ ರೂಪಾಯಿ, ತೆರಿಗೆದಾರರ ಇಶ್ಟೊಂದು ಹಣ ಹಾಳಾಯಿತು. ಇದಕ್ಕೆ ಯಾರು ಕಾರಣರು? ಮತದಾನ ಮಾಡಿ ಇವರನ್ನು ಆಯ್ಕೆ ಮಾಡಿದ ನಾವೆಲ್ಲರೇ? ಅತವಾ ನಮ್ಮ ಮಹಾನ್ ನಾಯಕರುಗಳೇ? ಉತ್ತರ ನೀವೇ ಕಂಡುಕೊಳ್ಳಬೇಕು.

ಬಾರತದ ಸಂವಿದಾನದ ಪ್ರಕಾರ ವಿರೋದ ಪಕ್ಶವೆಂದರೆ, ಲೋಕಸಬೆಯಲ್ಲಿ ಯಾವ ಪಕ್ಶವು ಆಡಳಿತ ಪಕ್ಶಕ್ಕಿಂತ ಹಾಗೂ ಸಮ್ಮಿಶ್ರದ ಪಕ್ಶಗಳಿಗಿಂತ ಹೆಚ್ಚು ಸೀಟುಗಳನ್ನು ಹೊಂದಿರುತ್ತದೆಯೋ ಅದನ್ನು ವಿರೋದ ಪಕ್ಶವೆಂದು ಕರೆಯುತ್ತಾರೆ. ಒಂದು ಪಕ್ಶವು ಅದಿಕ್ರುತವಾಗಿ ವಿರೋದ ಪಕ್ಶದ ಸ್ತಾನವನ್ನು ಪಡೆಯಲು ಕನಿಶ್ಟ 10% ರಶ್ಟು ಸೀಟುಗಳನ್ನು ಹೊಂದಿರಬೇಕು. ಅಂದರೆ ನಮ್ಮ ಲೋಕಸಬೆಯಲ್ಲಿ ಒಟ್ಟು 543 ಸೀಟುಗಳಿಗೆ ಚುನಾವಣೆ ನಡೆಯುತ್ತದೆ. ಅದಿಕ್ರುತವಾಗಿ ವಿರೋದ ಪಕ್ಶದ ಸ್ತಾನವನ್ನು ಪಡೆಯಲು ಒಂದು ಪಕ್ಶವು ಒಟ್ಟು 54 ಸೀಟುಗಳನ್ನು ಗೆಲ್ಲಬೇಕು.

ವಿರೋದ ಪಕ್ಶದ ಕರ‍್ತವ್ಯಗಳು ಮತ್ತು ಜವಾಬ್ದಾರಿಗಳು:
1) ಆಡಳಿತ ಪಕ್ಶದ ವೈಪಲ್ಯವನ್ನು ಟೀಕಿಸುವುದು ಮತ್ತು ಅದನ್ನು ಜನರ ಮುಂದೆ ತರುವುದು.
2) ಸರಕಾರದ ದಬ್ಬಾಳಿಕೆ ಪ್ರವ್ರುತ್ತಿಗಳನ್ನು ವಿರೋದ ಮಾಡುವುದು.
3) ಸರಕಾರದ ಒಳ್ಳೆಯ ಕೆಲಸವನ್ನು ಬೆಂಬಲಿಸುವುದು.
4) ಸರಕಾರದ ತಪ್ಪು ನಿರ‍್ದಾರಗಳನ್ನು ವಿರೋದ ಮಾಡುವುದು ಮತ್ತು ಜನಾಬಿಪ್ರಾಯವನ್ನು ಸಂಗ್ರಹಿಸಿವುದು.
5) ಸರಕಾರದ ಜನ ವಿರೋದಿ ನೀತಿಗಳನ್ನು ವಿರೋದಿಸುವುದು.
6) ಸರಕಾರವು ಸಾಮಾನ್ಯ ಜನರ ಪರವಾಗಿ ಆಡಳಿತ ನಡೆಸುವ ಹಾಗೆ ನೋಡಿಕೊಳ್ಳುವುದು.
7) ಸರಕಾರದ ಒಳ್ಳೆಯ ಜನಪರ ನೀತಿಗಳನ್ನು, ದೇಶದ ಅಬಿವ್ರುದ್ದಿಗೆ ಅತ್ಯವಶ್ಯಕವಾದ ನೀತಿಗಳನ್ನು, ಮತ್ತು ದೇಶದ ವಿಶಯ ಬಂದಾಗ ಪಕ್ಶ ಬೇದವನ್ನು ಮರೆತು ಸರಕಾರವನ್ನು ಬೆಂಬಲಿಸುವುದು.
ಇಂಗ್ಲಿಶ್ ನಲ್ಲಿ ಒಂದು ಗಾದೆಯಿದೆ “Opposition is a watch dog of the government.” ಆದರೆ ಇಂದಿನ ವಿರೋದ ಪಕ್ಶಗಳು ನಡೆದುಕೊಳ್ಳುವ ರೀತಿಯೇ ಬೇರೆಯಾಗಿದೆ. ಇಂದಿನ ವಿರೋದ ಪಕ್ಶವೆಂದರೆ ಸರಕಾರವು ಏನೇ ಮಾಡಿದರು ಮತ್ತು ಮಾಡಲು ಯೋಚಿಸಿದರು ವಿರೋದ ಮಾಡುವುದು. ಒಟ್ಟಾರೆ ಸರಕಾರವನ್ನು ವಿರೋದಿಸುವುದು.

ಬಿ.ಜೆ.ಪಿ ಯು ವಿರೋದ ಪಕ್ಶದಲ್ಲಿದ್ದಾಗ, ಯು.ಪಿ.ಏ (UPA) ಸರಕಾರವು ಜಾರಿಗೆ ತರಲು ಯೋಚಿಸಿದ ಏಪ್.ಡಿ.ಐ (Foreign Direct Investment – FDI) ನೀತಿಯನ್ನು ವಿರೋದಿಸಿ ಒಂದು ದಿನದ ಬಾರತ ಬಂದ್ ಗೆ ಕರೆ ನೀಡಿ, ದೇಶಾದ್ಯಂತ ಹೋರಾಟ ಮಾಡಿತ್ತು. ಆದರೆ ಅದೇ ಬಿ.ಜೆ.ಪಿ ಪಕ್ಶವು ಅದಿಕಾರಕ್ಕೆ ಬಂದಮೇಲೆ ವಿಮಾ ಕ್ಶೇತ್ರದಲ್ಲಿ, ರಕ್ಶಣಾ ಕ್ಶೇತ್ರದಲ್ಲಿ, ಇಂಡಿಯನ್ ರೈಲ್ವೆಯಲ್ಲಿ, ಚಿಲ್ಲರೆ ಮಾರುಕಟ್ಟೆಯಲ್ಲಿ ಹೀಗೆ ಹಲವಾರು ಕ್ಶೇತ್ರದಲ್ಲಿ ಎಪ್.ಡಿ.ಐ ಅನುಮತಿ ನೀಡಿದೆ.

ಜಿ.ಎಸ್.ಟಿ (Goods and Services Tax – GST) ಬಿಲ್ಲನ್ನು ಕೂಡ ಬಿ.ಜೆ.ಪಿ ಯು ವಿರೋದ ಪಕ್ಶದಲ್ಲಿದಾಗ ವ್ಯಾಪಕವಾಗಿ ವಿರೋದಿಸಿತ್ತು. ಆದರೆ ಅದೇ ಬಿ.ಜೆ.ಪಿ ಯು ಇಂದು ಜಿ.ಎಸ್.ಟಿ ಬಿಲ್ಲನ್ನು ಜಾರಿಗೆ ತರಲು ಹೊರಟಿದೆ. ವಿಪರ‍್ಯಾಸ ಎಂದರೆ ಇಂದು ಕಾಂಗ್ರೆಸ್ ಪಕ್ಶವು ತನ್ನದೇ ಬಿಲ್ಲನ್ನು ವಿರೋದಿಸುತ್ತಿದೆ. ಯು.ಪಿ.ಎ ಸರಕಾರವು ಜಾರಿಗೆ ತಂದ ಆದಾರ್ ಕಾರ‍್ಡ್ ಯೋಜನೆಯನ್ನು ಬಿ.ಜೆ.ಪಿ ಯು ವಿರೋದಿಸಿ, ಅದನ್ನು ಒಂದು ಉಪಯೋಗಕ್ಕೆ ಬಾರದ ಯೋಜನೆ ಎಂದಿತ್ತು. ಇಂದು ತನ್ನ ಎಲ್ಲಾ ಯೋಜನೆಗಳ ಉಪಯೋಗ ಪಡೆದುಕೊಳ್ಳಲು ಅರ‍್ಹ ಪಲಾನುಬವಿಗಳು ಕಡ್ಡಾಯವಾಗಿ ಆದಾರ್ ಕಾರ‍್ಡನ್ನು ನೀಡಬೇಕು ಎಂದು ಹೇಳುತ್ತಿದೆ.

ಪ್ರದಾನ ಮಂತ್ರಿ ಮೋದಿಯವರು ಸಂಸತ್ತಿನಲ್ಲಿ ಬಾಶಣ ಮಾಡುವಾಗ ಯು.ಪಿ.ಎ ಸರಕಾರದ ಜನಪ್ರಿಯ ಯೋಜನೆ ಮಹಾತ್ಮ ಗಾಂದಿ ರಾಶ್ಟ್ರೀಯ ಉದೋಗ್ಯ ಕಾತ್ರಿ ಯೋಜನೆ(MNREGA) ಕಾಂಗ್ರೆಸಿನ ವೈಪಲ್ಯಕ್ಕೆ, ನಾಯಕತ್ವದ ವೈಪಲ್ಯಕ್ಕೆ ಮತ್ತು ಬ್ರಶ್ಟಾಚಾರಕ್ಕೆ ಹಿಡಿದ ಕನ್ನಡಿ ಎಂದು ಹೇಳಿದರು. ಕೆಲವು ತಿಂಗಳ ನಂತರ ಅವರದೇ ಸರಕಾರ ಉದ್ಯೋಗ ಕಾತ್ರಿ ಯೋಜನೆಯಿಂದ 30% ಬಡತನ ನಿರ‍್ಮೂಲನೆಗೆ ಸಹಾಯವಾಗಿದೆ ಎಂದು ವರದಿಯನ್ನು ನೀಡಿತ್ತು!

ಬಿ.ಜೆ.ಪಿ, ಕಾಂಗ್ರೆಸ್ ಹಾಗೂ ಇತರೆ ಪಕ್ಶಗಳು ನಮ್ಮ ಜನತೆಯನ್ನು ಮೂರ‍್ಕರನ್ನಾಗಿ ಮಾಡುತ್ತಿವೆ. ಆಡಳಿತ ಪಕ್ಶವು ಏನೇ ಮಾಡಿದರು ವಿರೋದ ಮಾಡುವುದು ವಿರೋದ ಪಕ್ಶದ ಕೆಲಸವಾಗಿದೆ. ಬಿ.ಜೆ.ಪಿ ಯವರು ವಿರೋದ ಪಕ್ಶದಲ್ಲಿದಾಗ ಬೇವಿನ ಮರವನ್ನು ನೆಟ್ಟು ಇಂದು ಮಾವಿನ ಹಣ್ಣುಗಳನ್ನು ನಿರೀಕ್ಶಿಸಿದರೆ ಹೇಗೆ ಸಾದ್ಯ? ಇಂದು ವಿರೋದ ಪಕ್ಶದಲ್ಲಿರುವ ಕಾಂಗ್ರೆಸ್ ಆದರೂ ತನ್ನ ಕರ‍್ತವ್ಯ ಮತ್ತು ಜವಾಬ್ದಾರಿಗಳನ್ನು ಅರಿತು ಉತ್ತಮ ವಿರೋದ ಪಕ್ಶವಾಗಿ ನಡೆದುಕೊಳ್ಳಲಿ ಅಂತ ಆಶಿಸೋಣ. ಬಿ.ಜೆ.ಪಿ, ಕಾಂಗ್ರೆಸ್ ಹಾಗೂ ಇತರೆ ಎಲ್ಲಾ ಪಕ್ಶಗಳು ದೇಶದ ಅಬಿವ್ರುದ್ದಿಯ ವಿಶಯದಲ್ಲಿ ಒಗ್ಗಟ್ಟಾಗಿರಲಿ ಎಂದು ಬಯಸೋಣ.

(ಚಿತ್ರ ಸೆಲೆ: thehindu.com)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. ದಯಮಾಡಿ ಮಹಾ ಪ್ರಾಣದ ಬಳಕೆ ಮಾಡಿ . ಧನ್ಯವಾದಗಳು

  2. ಮಾನ್ಯರೇ,

    ಬರಹವನ್ನು ಓದಿ ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ ದನ್ಯವಾದಗಳು.

    ’ಹೊನಲು’ ವಿನಲ್ಲಿ ಬರಹಗಳು ’ಎಲ್ಲರಕನ್ನಡ’ ದಲ್ಲಿ ಮೂಡಿಬರುತ್ತಿದ್ದು, ಅವುಗಳಲ್ಲಿ ಮಹಾಪ್ರಾಣಗಳು ಇರುವುದಿಲ್ಲ.
    ಹೆಚ್ಚಿನ ಮಾಹಿತಿಗೆ ಈ ಕೊಂಡಿಯನ್ನು ನೋಡಬಹುದು.

    http://128.199.25.99/%E0%B2%8E%E0%B2%B2%E0%B3%8D%E0%B2%B2%E0%B2%B0%E0%B2%95%E0%B2%A8%E0%B3%8D%E0%B2%A8%E0%B2%A1/

ಅನಿಸಿಕೆ ಬರೆಯಿರಿ:

%d bloggers like this: