ಅಗ್ಗದ ಕಾರುಗಳ ಕಾವೇರಿಸಿದ ಕ್ವಿಡ್

ಜಯತೀರ‍್ತ ನಾಡಗವ್ಡ.

kwid2

ಬಲುದಿನಗಳಿಂದ ಸುದ್ದಿಯಲ್ಲಿದ್ದ ರೆನೋ (Renault) ಕೂಟದವರ ಕ್ವಿಡ್ (Kwid) ಬಂಡಿ ಕಳೆದ ಗುರುವಾರ ಸೆಪ್ಟೆಂಬರ್ 24 ರಂದು ಬಿಡುಗಡೆಗೊಂಡಿದೆ. ಕಿಕ್ಕಿರಿದು ತುಂಬಿರುವ ಕಿರು ಹಿಂಗದ ಕಾರುಗಳ (hatchback) ಗುಂಪಿಗೆ ಮತ್ತೊಂದು ಹೊಸ ಸೇರ‍್ಪಡೆಯಾಗಿದೆ. ಅದರಲ್ಲೂ ಅಗ್ಗದ ಬೆಲೆಯ ಟಾಟಾ ನಾನೊ (Tata Nano),  ಮಾರುತಿ ಸುಜುಕಿ ಅಲ್ಟೊ (Maruti Suzuki Alto), ಹ್ಯುಂಡಾಯ್ ಇಯಾನ್ (Hyundai Ion) ಇವುಗಳ ಕಾದಾಟಕ್ಕೆ ಕ್ವಿಡ್ ಸೇರಿಕೊಂಡಿದೆ. ಸೇರಿಕೊಂಡಿದೆ ಎನ್ನುವುದಕ್ಕಿಂತ ಇವುಗಳನ್ನು ಮೆಟ್ಟಿ ನಿಲ್ಲಲು ಬಂದಂತಿದೆ. ಹವ್ದು ಕ್ವಿಡ್ ಬಂಡಿಯ ಬೆಲೆ ಹಾಗೂ ಅದರಲ್ಲಿರುವ ಪರಿಚೆಗಳನ್ನು ನೋಡಿದರೆ ಯಾರಾದರೂ ಹೀಗೆ ಹೇಳುತ್ತಾರೆ.

ಬಲು ವರುಶಗಳಿಂದ ಬಾರತದ ನಂಬರ್-1 ಕಾರಾಗಿ ಮೆರೆಯುತ್ತಿರುವ, ಕಳೆದ ವರುಶ ಜಗತ್ತಿನಲ್ಲಿ ಅತಿ ಹೆಚ್ಚು ಮಾರಾಟಗೊಂಡು ಜಗತ್ತಿನ ನಂ.1 ಕಾರು ಎನ್ನಿಸಿಕೊಂಡ ಮಾರುತಿ ಸುಜುಕಿ ಅಲ್ಟೊಗೆ ಕಡಿವಾಣ ಹಾಕಲು ರೆನೋ ಕೂಟದವರಿಂದ ಕ್ವಿಡ್ ಎಂಬ ಹೊಸ ಬಂಡಿ ಅಣಿಗೊಂಡಿದೆ. ಅಲ್ಟೊ ಕಾರಿಗಿಂತ ಕಡಿಮೆ ಬೆಲೆಯಲ್ಲಿ ಅಲ್ಟೊಗಿಂತ ಹೆಚ್ಚಿನ ಪರಿಚೆಗಳು (features), ಅಳವುತನವುಳ್ಳ ಕಾರೊಂದನ್ನು ಬಾರತದಲ್ಲಿ ತಂದು ತಮ್ಮ ನೆಲೆಯನ್ನು ಹರವುಗೊಳಿಸುವ ಹೊಂಚು ಹಾಕಿದ್ದು ಬೇರೆ ಯಾರೂ ಅಲ್ಲ ರೆನೋ-ನಿಸ್ಸಾನ್ ಜಂಟಿ ಕೂಟದ ಮೇಲಾಳು ಕಾರ‍್ಲೊಸ್ ಗೊಸ್ನ್. ಬಾರತ ಅಗ್ಗದ ಬೆಲೆ ಕೊಳ್ಳುಗರನ್ನು ಗಮನದಲ್ಲಿರಿಸಿ ಈ ಬಂಡಿ ಹಮ್ಮುಗೆಗೆ ಕಾರ‍್ಲೊಸ್ ಗೊಸ್ನ್ (Carlos Ghosn) ಮುಂದಾಳುತನದ ರೆನೋ ಕಯ್ ಹಾಕಿತ್ತು.

3 ವರುಶಗಳ ಹಿಂದೆ ಡಸ್ಟರ್ (Duster) ಮೂಲಕ ತಮ್ಮ ಕೂಟ ಬಾರತದಲ್ಲಿ ನೆಲೆಯೂರುವಂತೆ ಮಾಡಿದ್ದ ಗೊಸ್ನ್ ಇದೀಗ ತಮ್ಮ ನೆಲೆಯನ್ನು ಇನ್ನಶ್ಟು ಗಟ್ಟಿಗೊಳಿಸುವತ್ತ ಹೆಜ್ಜೆ ಇಟ್ಟಿದ್ದಾರೆ. ತಿಂಗಳೊಂದಕ್ಕೆ ಸುಮಾರು 20 ರಿಂದ 25 ಸಾವಿರದಶ್ಟು ಮಾರಲ್ಪಡುವ ಅಲ್ಟೊ ಬಂಡಿಯನ್ನು ಎದುರು ಹಾಕಿಕೊಳ್ಳುವುದು ಕೇಳಿ ಬಾರತದ ತಾನೋಡ ಕಯ್ಗಾರಿಕೆಯಲ್ಲಿ ಅಚ್ಚರಿ ಮೂಡಿತ್ತು. ಸಾಕಶ್ಟು ಅರಕೆ ಮಾಡಿ ಒರೆಗೆ ಹಚ್ಚಿದ ನಂತರ ಇದೀಗ ಸೆಪ್ಟೆಂಬರ್ 24 ರಂದು ಕ್ವಿಡ್ ಬಿಡುಗಡೆಯಾಗಿದೆ.

ಕಳೆದೆರಡು ತಿಂಗಳಿಂದ ಟಿವಿ, ಸುದ್ದಿಹಾಳೆ, ಮಿಂದಾಣ, ಸಾಮಾಜಿಕ ತಾಣ ಸೇರಿದಂತೆ ಎಲ್ಲೆಡೆ ಕ್ವಿಡ್ ಕಾರಿನ ಬಯಲರಿಕೆಗಳೇ ಕಂಡು ಬರುತ್ತಿವೆ. ಹೆಸರುವಾಸಿ ತಾನೋಡದ ಸುದ್ದಿ ಪತ್ರಿಕೆಗಳು, ಮಿಂದಾಣಗಳು ಕ್ವಿಡ್ ಬಗ್ಗೆ ಮೆಚ್ಚುಗೆ ತಿಳಿಸಿವೆ. ಅಲ್ಟೊ ಹಿಂದಿಕ್ಕುವುದರಲ್ಲಿ ಎರಡು ಮಾತಿಲ್ಲ ಅನ್ನುವ ಮಾತುಗಳು ಕೇಳಿ ಬಂದಿವೆ. ಬಾರತದ ಕೊಳ್ಳುಗರನ್ನು ಮತ್ತು ಮಾರುಕಟ್ಟೆಯನ್ನು ಚೆನ್ನಾಗಿ ಅರಿತು ಕ್ವಿಡ್ ಬಂಡಿ ತಯಾರು ಮಾಡಲಾಗಿದೆ ಎಂಬುದು ಮೇಲ್ನೋಟದಿಂದ ಕಂಡು ಬರುತ್ತಿದೆ.

ಕ್ವಿಡ್ ಕಾರಿನ ಹೆಚ್ಚು ಕಡಿಮೆ ಎಲ್ಲ ಬಿಡಿಬಾಗಗಳನ್ನು ಬಾರತದಲ್ಲಿ ಬೆಳೆಸಲಾಗಿದೆ. ರೆನೋ ಕೂಟ ಹೇಳುವಂತೆ ಶೇಕಡಾ 98 ರಶ್ಟು ಬಿಡಿಬಾಗಗಳನ್ನು ಬಾರತದ ಚೆನ್ನಯ್, ಬೆಂಗಳೂರು, ಪುಣೆ, ದೆಹಲಿ, ರಾಜ್‌ಕೋಟ್ ಮುಂತಾದ ಊರುಗಳಲ್ಲಿ ನೆಲೆಸಿರುವ ವಿವಿದ ತಯಾರಕರಲ್ಲಿ ಬೆಳೆಸಿ ಒರೆಗೆ ಹಚ್ಚಲಾಗಿದೆ. ಅಗ್ಗದ ಬೆಲೆಯ ಕಾರುಗಳ ಪಯ್ಪೋಟಿ ಕಾವೇರುವಂತೆ ಮಾಡಿರುವ ಕ್ವಿಡ್ ಕಾರಿನ ಒಳನೋಟ ಇಲ್ಲಿದೆ.

ಬಿಣಿಗೆ (Engine):

ಕ್ವಿಡ್‌ನಲ್ಲಿ 0.8 ಲೀಟರ್ ಅಳತೆಯ ಪೆಟ್ರೋಲ್ ಬಿಣಿಗೆಯೊಂದನ್ನು ಅಳವಡಿಸಲಾಗಿದೆ. 3 ಉರುಳೆಯ ಬಿಣಿಗೆಯನ್ನು ಕ್ವಿಡ್ ಕಾರಿಗೆಂದೇ ಬೆಳೆಸಲಾಗಿದೆ. 53 ಕುದುರೆಬಲದ ಈ ಪುಟ್ಟ ಬಿಣಿಗೆ 72 ನ್ಯೂಟನ್ ಮೀಟರ್ ತಿರುಗುಬಲ (Torque) ಉಂಟು ಮಾಡುತ್ತದೆ.

ಇನ್ನು, ಮಯ್ಲಿಯೋಟದಲ್ಲಿ ಇದಕ್ಕೆ ಸರಿಸಾಟಿ ಇಲ್ಲವೆಂದೇ ಹೇಳಬಹುದು. ಕ್ವಿಡ್ ಬಿಣಿಗೆಯ ಮಯ್ಲಿಯೋಟ (Mileage) ಪ್ರತಿ ಲೀಟರ್‌ಗೆ 25.17 ಕಿಲೋಮೀಟರ್. ಸದ್ಯಕ್ಕೆ ಬಾರತದಲ್ಲಿ ಹೆಚ್ಚಿನ ಮಯ್ಲಿಯೋಟ ನೀಡುವ ಪೆಟ್ರ‍ೋಲ್ ಬಿಣಿಗೆ ಇದೆಂದು ದಾಕಲೆ ಬರೆದಿದೆ.

Table1
ಸಾಗಣಿ (Transmission):

ಅಗ್ಗದ ಬೆಲೆಯ ಕಾರುಗಳಲ್ಲಿ ತನ್ನಿಡಿತದ ಸಾಗಣಿ (Automatic Transmission) ದೊರೆಯುವುದು ಬಲು ಅಪರೂಪ. ಕ್ವಿಡ್ ಕೂಡ ಇದಕ್ಕೆ ಹೊರತಾಗಿಲ್ಲ, ಕೇವಲ 5-ವೇಗದ ಓಡಿಸುಗನ ಹಿಡಿತದ ಸಾಗಣಿ (Manual Transmission) ಜೋಡಿಸಲಾಗಿದೆ. ಮುಂದಿನ ವರುಶ ಕ್ವಿಡ್ ಬಂಡಿಗೆ 1 ಲೀಟರ್ ಬಿಣಿಗೆ ಜೋಡಿಸಿ ಇತರೆ ಮಾದರಿಗಳನ್ನು ಹೊರತರಲಾಗುತ್ತದೆ ಅದರಲ್ಲಿ ಓಡಿಸುಗ ಮತ್ತು ತನ್ನಿಡಿತದ ಬೆರಕೆ ಸಾಗಣಿ ಸಿಗುವ ಸಾದ್ಯತೆಯಿದೆ.

ಹೊರನೋಟ:

kwid

ನೋಡಲು ಸೊಗಸಾಗಿ ಕಾಣುವ ಕ್ವಿಡ್ ಕೊಳ್ಳುಗರ ಮನ ಗೆಲ್ಲುವುದು ಕಂಡಿತ. ಬಾರತದ ಕೊಳ್ಳುಗರ ನಿಟ್ಟಿನಲ್ಲಿ ಹೊರನೋಟ ಅಂದವಾಗಿದ್ದರೆ ಅರ‍್ದ ಯುದ್ದ ಗೆದ್ದಂತೆಯೇ ಸರಿ. ಇದು ಕ್ವಿಡ್ ವಿಶಯದಲ್ಲಿ ಹೆಚ್ಚಾಗಿ ಅನ್ವಯಿಸುತ್ತದೆ. ದೊಡ್ಡ ಗಡುಸಾದ ಮಯ್ ಹೊಂದಿರುವ ಅಗ್ಗದ ಬೆಲೆಯ ಕಾರು ಎಂಬ ಹಣೆಪಟ್ಟಿ ಹೊತ್ತಿದೆ. ಹಲವರಂತೂ ಇದು ಡಸ್ಟರ್ ಬಂಡಿಯ ಕಿರಿಯ ತಮ್ಮ ಎಂದು ಹೊಗಳಿದ್ದಾರೆ.

back side

ಉದ್ದ, ಅಗಲ, ಎತ್ತರ ಹಾಗೂ ನೆಲ ತೆರವಿನ ವಿಶಯಗಳೆಲ್ಲದರಲ್ಲೂ ಕ್ವಿಡ್ ನೂರಕ್ಕೆ ನೂರು ಅಂಕ ಪಡೆದಿದೆ. 180 ಮಿಲಿಮೀಟರ್‌ಗಳ ನೆಲ ತೆರವು (ground clearance) ಇತ್ತಿಚೀಗೆ ಬಿಡುಗಡೆಯಾದ ಎಸ್‌ಕ್ರಾಸ್ (S Cross), ಕ್ರೇಟಾ (Creta) ಎಂಬ ಕಿರು ಆಟೋಟದ ಬಂಡಿಗಳಿಗೆ (SUV) ಸರಿಹೊಂದುತ್ತದೆ.

Table2

ಕ್ವಿಡ್ ಬಂಡಿಗೆ ರೆನೋ ಕೂಟ ಅಯ್ದು ಚೆಂದದ ಬಣ್ಣಗಳ ಆಯ್ಕೆ ನೀಡಿದೆ. ಕೆಂಪು, ಬಿಳಿ, ಕಂದು, ಬೆಳ್ಳಿ ಮತ್ತು ಮದರಂಗಿ ಹೋಲುವ ಕಡು ಹಸಿರು ಬಣ್ಣ ತೊಟ್ಟು ಕ್ವಿಡ್ ನಿಮ್ಮ ಮುಂದಿರಲಿದೆ.

ಒಳನೋಟ:

Interior

ಬಂಡಿಯ ಒಳನೋಟವೂ ಯಾವುದಕ್ಕೂ ಕಡಿಮೆಯಿಲ್ಲದೇ ಒಪ್ಪವಾಗಿದೆ. ಏಳು ಇಂಚಿನ ಸೋಕು ತೆರೆಯ (Touch Screen) ತಿಳಿನಲಿ ಏರ‍್ಪಾಟು (Infotainment System), ತಲುಪುದಾರಿ ಏರ‍್ಪಾಟುಗಳನ್ನು (Navigation System) ನೀಡಿರುವ ರೆನೋ ಕೂಟ, ಕ್ವಿಡ್ ಬಂಡಿಯನ್ನು ದೊಡ್ಡ ಬಂಡಿಗಳ ಗುಂಪಿನಲ್ಲಿ ನಿಲ್ಲುವಂತೆ ಮಾಡಿದೆ. ಓಡಿಸುಗನ ಮುಂಬಾಗದ ಕೂರುಗಳನ್ನು ಹಿಂದೆ ಮುಂದೆ ಮಾಡಿ ಹೊಂದಿಸಿಕೊಳ್ಳಬಹುದು.

 

ಎರಡು ಸರಕು ಗೂಡು (Glove box), ಎರಡು ಮುಂಬಾಗಿಲ ಬಳಿ ಬಾಟಲ್ ಕೂಡಿಡಲು ಜಾಗ ಮತ್ತು ಓಡಿಸುಗನ ಬಳಿ ಕಾಪಿ/ಚಹಾ ಕಪ್ ಸೇರಿಸಿಡಲು ಸೇರುವೆಗಳನ್ನು ಅಚ್ಚುಕಟ್ಟಾಗಿ ನೀಡಲಾಗಿದೆ. ಕೆಲವೆಡೆ ವೆಚ್ಚ ಕಡಿತಗೊಳಿಸಲು ಕೆಲವು ಪರಿಚೆಗಳಿಗೆ ಕತ್ತರಿ ಹಾಕಿದ್ದರೂ ಅವುಗಳು ಇಲ್ಲಿ ಅಶ್ಟೊಂದು ಮುಕ್ಯವೆನ್ನಿಸುವುದಿಲ್ಲ ಯಾಕೆಂದರೆ ಎದುರಾಳಿಗಳ ಬಂಡಿಗಳಲ್ಲೂ ಇಂತ ಪರಿಚೆಗಳು ಸಿಗುವುದಿಲ್ಲ.

Table3

300 ಲೀಟರ್‌ನ ದೊಡ್ಡ ಸರಕು ಚಾಚು (Boot Space) 28 ಲೀಟರ್‌ನ ಉರುವಲು ಚೀಲ (Fuel Tank) ಹೊಂದಿರುವ ಕ್ವಿಡ್ ಕಾರು 660 ಕೆಜಿ ತೂಕ ತೂಗುವ ಮೂಲಕ ಹಗುರವಾಗಿದೆ.

ಪಯ್ಪೋಟಿ:

ಕ್ವಿಡ್ ಕಾರು ಎದುರಾಳಿಗಿಂತ ಬಹುತೇಕ ಎಲ್ಲ ವಿಶಯಗಳಲ್ಲೂ ಮುಂದಿದೆ.  ಅಲ್ಟೊ ಬಿಣಿಗೆ,  ಕ್ವಿಡ್‍ನ ಬಿಣಿಗೆಗಳ ಅಳತೆಯಲ್ಲಿ ಹೆಚ್ಚಿನ ಬೇರ‍್ಮೆ ಕಾಣದು. ಆದರೆ ಹ್ಯುಂಡಾಯ್ ಇಯಾನ್ ಬಿಣಿಗೆಯ ಅಳತೆ 0.81 ಲೀಟರ್ ಆಗಿದ್ದು ತುಸು ಹೆಚ್ಚಿದೆ.

Table5ಕ್ವಿಡ್ ಬಿಣಿಗೆಯ ಕಸುವು 53 ಕುದುರೆಬಲವಿದ್ದರೆ, ಅಲ್ಟೊ ಇಲ್ಲಿ 47 ಕುದುರೆಬಲ ಹೊಂದಿ ಹಿಂದೆ ಬೀಳುತ್ತದೆ. ಇಯಾನ್ ಬಿಣಿಗೆ 54 ಕುದುರೆಬಲದ ಕಸುವು ಪಡೆದಿದೆ. ಬಿಣಿಗೆಯ ತಿರುಗುಬಲ ಇಯಾನ್ ಬಂಡಿಯಲ್ಲಿ 74.5 ನ್ಯೂಟನ್ ಮೀ ಇದ್ದರೆ ಕ್ವಿಡ್ 72 ಮತ್ತು ಮಾರುತಿ ಸುಜುಕಿ ಅಲ್ಟೊ 69 ನ್ಯೂಟನ್ ಮೀಟರ್‌ಗಳಶ್ಟು ತಿರುಗುಬಲ ಉಂಟು ಮಾಡುತ್ತದೆ.

ಮೂರು ಬಂಡಿಗಳ ಆಯಗಳ ಹೋಲಿಕೆಯಲ್ಲಿ ಕ್ವಿಡ್ ಮುಂಚೂಣಿಯಲ್ಲಿದೆ. ಉದ್ದ, ಅಗಲ, ಗಾಲಿಗಳ ನಡುವಣ ದೂರ ಹೀಗೆ ಎಲ್ಲದರಲ್ಲೂ ಕ್ವಿಡ್ ಮುಂದೆ ಅಲ್ಟೊ, ಇಯಾನ್ ಕಾರುಗಳು ಮಂಡಿಯೂರುತ್ತವೆ. ತಲುಪುದಾರಿ, ತಿಳಿನಲಿ ಮುಂತಾದ ಏರ‍್ಪಾಟುಗಳು ಕೂಡ ಇತರೆ ಬಂಡಿಗಳಲ್ಲಿ ಕಾಣಸಿಗಲಾರದು.

Table6
ಬೆಲೆ:

ಈ ಬಂಡಿಯ ಎಕ್ಸ್-ಶೋ ರೂಮ್ ಆರಂಬಿಕ ಬೆಲೆ 2.57 ಲಕ್ಶ ರೂಪಾಯಿಗಳು ಅಶ್ಟೇ. RXE, RXL, RXT ಎಂಬ ಮಾದರಿಗಳು ಹೆಚ್ಚಿನ ಪರಿಚೆಗಳನ್ನು ನೀಡಲಿದ್ದು ಇವುಗಳ ಬೆಲೆ 2.88, 3.11 ಮತ್ತು 3.44 ಲಕ್ಶಗಳಲ್ಲಿ ಸಿಗುತ್ತವೆ. ಒಂದು ತಿಂಗಳ ಮೊದಲೇ ಮುಂಗಡ ಕಾಯ್ದಿರಿಸುವಿಕೆ ಶುರುವಾಗಿದೆ. 20-25 ಸಾವಿರ ರೂಪಾಯಿ ನೀಡಿ ಕಾರನ್ನು ಕಾಯ್ದಿರಿಸಬಹುದು.
Table4ಕೊಳ್ಳುಗರು ತಮ್ಮ ಚೂಟಿಯುಲಿ (Smart Phone) ಮೂಲಕವೂ ಬಂಡಿಯನ್ನು ಕಾಯ್ದಿರಿಸುವ ಅವಕಾಶವಿದೆ. ಇದಕ್ಕೆಂದೇ ಒಂದು ಬಳಕವನ್ನು (Application) ಸಿದ್ದಪಡಿಸಲಾಗಿದೆ. ಬಳಕದಲ್ಲಿ ಕ್ವಿಡ್ ಬಂಡಿಯ ಎಲ್ಲ ಮಾಹಿತಿಗಳು ಸಿಗುತ್ತವೆ. ಬಳಕದ ಮೂಲಕ ಕೇವಲ 5000 ರೂಪಾಯಿ ಮುಂಗಡ ಹಣ ನೀಡಿ ಬಂಡಿ ಕಾಯ್ದಿರಿಸಬಹುದು. ಬಂಡಿ ಕೊಳ್ಳಲೆಂದು ಹುಬ್ಬಳ್ಳಿಯ ರೆನೋ ಮಳಿಗೆಗೆ ಕರೆ ನೀಡಿದಾಗ ತಿಳಿದು ಬಂದಿದ್ದು ಅಕ್ಟೋಬರ್ ಮೊದಲ ವಾರ ಮಳಿಗೆಯಲ್ಲಿ ಕ್ವಿಡ್ ಕಾರು ಕಾಣ ಸಿಗಲಿವೆಯಂತೆ.

ಬಂಡಿ ಕರೀದಿಸಲೇ ಬೇಕೆಂಬುವವರು ಆದಶ್ಟು ಬೇಗ ಮುಂಗಡ ಕಾಯ್ದಿರಿಸುವುದು ಒಳಿತಂತೆ. ಬಂಡಿಯ ಬೆಲೆ ತಿಳಿಯುತ್ತಿದ್ದಂತೆ ಸಾಕಶ್ಟು ಕೊಳ್ಳುಗರು ರೆನೋ ಮಳಿಗೆಗಳಿಗೆ ಮುಗಿಬಿದ್ದಿದ್ದು, ನೀವು ಮುಂಗಡ ನೀಡಿ ಕಾರು ಪಡೆಯಲು ಸರದಿಯಲ್ಲಿ ತಿಂಗಳಗಟ್ಟಲೆ ಕಾಯಬೇಕಾದ ಪರಿಸ್ತಿತಿ ಬಂದರೂ ಬರಬಹುದು.

ರೆನೋ ತನ್ನ ಮಿಂದಾಣದಲ್ಲಿ ಹಾಕಿರುವ ಕ್ವಿಡ್ ಕಾರಿನ ಬಯಲರಿಕೆ…

[youtube https://www.youtube.com/watch?v=_xAA2zNnJcc&w=560&h=315]

(ಮಾಹಿತಿ ಮತ್ತು ತಿಟ್ಟ ಸೆಲೆ: www.renault.co.in, www.autocarindia.com)

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: