ಬಾಯಲ್ಲಿ ನೀರೂರಿಸುವ ಗರಿ ಗರಿ ಚಕ್ಕುಲಿ

ಕಲ್ಪನಾ ಹೆಗಡೆ.

chakkuli
ಬೇಕಾಗುವ ಸಾಮಗ್ರಿಗಳು:
1. ½ ಸೇರು ಉದ್ದಿನ ಬೇಳೆ
2. ½ ಸೇರು ಕಡ್ಲೆಬೇಳೆ
3. 2 ಸೇರು ಅಕ್ಕಿ
4. ¼ ಸೇರು ಹುರಗಡ್ಲೆ
5. 2 ಚಮಚ ಜೀರಿಗೆ
6. 2 ಚಮಚ ಓಂ ಕಾಳು
7. 2 ಚಮಚ ಎಳ್ಳು
8. ಉಪ್ಪು
9. ಎಣ್ಣೆ

ಮಾಡುವ ವಿದಾನ:
ಅಕ್ಕಿ, ಬೇಳೆಗಳನ್ನು ಚೆನ್ನಾಗಿ ತೊಳೆದು ಬಟ್ಟೆ ಮೇಲೆ ಹಾಕಿ ನೀರು ಹೋಗುವತನಕ ಇಡಬೇಕು. ಬಿಸಿಲಿನಲ್ಲಿ ಇಟ್ಟರೆ ಬೇಗ ನೀರು ಆರಿ ಹೋಗತ್ತೆ. ಆನಂತರ ಅಕ್ಕಿ, ಬೇಳೆಗಳನ್ನು ಹುರಿದುಕೊಳ್ಳಿ. ಹುರಿದ ಅಕ್ಕಿ ಬೇಳೆಗಳನ್ನು ಮಿಕ್ಸಿಗೆ ಹಾಕಿ ಅತವಾ ಗಿರಣಿಯಲ್ಲಿ ಹಿಟ್ಟು ಮಾಡಿಕೊಳ್ಳಿ. ಆಮೇಲೆ ಬಾಣಲೆಗೆ 3 ಸೇರು ನೀರು ಹಾಕಿ ಅದಕ್ಕೆ 2 ಚಮಚ ಎಣ್ಣೆ, ಜೀರಿಗೆ, ಓಂ ಕಾಳು, ಎಳ್ಳು, ರುಚಿಗೆ ತಕ್ಕಶ್ಟು ಉಪ್ಪು (2 ಚಮಚ – ಮೇಲೆ ನೀಡಿರುವ ಅಳತೆಯ ಅದಾರದ ಮೇಲೆ) ಹಾಕಿ ಕುದಿಸಿ. (ನಿಮಗೆ ಕಾರದ ಚಕ್ಕುಲಿ ಬೇಕೆಂದರೆ ಜೊತೆಗೆ ಮೆಣಸಿನ ಪುಡಿಯನ್ನು ಹಾಕಿ). ಆನಂತರ ಕುದಿಸಿದ ನೀರಿಗೆ ಹಿಟ್ಟನ್ನು ಹಾಕಿ ಸವಟಿನಿಂದ ಕಲಸಿ. ಆಮೇಲೆ ಸ್ವಲ್ಪ ಆರುವ ತನಕ ತಟ್ಟೆ ಮುಚ್ಚಿಡಿ.

ಆನಂತರ ಸ್ವಲ್ಪ ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಚೆನ್ನಾಗಿ ಮ್ರುದುಮಾಡಿಕೊಳ್ಳಿ. ಚಕ್ಕುಲಿ ಒತ್ತುವ ಮಶಿನ್ ನಿಂದ ಸುತ್ತಾಕಾರದಲ್ಲಿ ಸುತ್ತಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಚೆನ್ನಾಗಿ ಕಾದ ಬಳಿಕ ಸುತ್ತಿದ ಚಕ್ಕುಲಿಯನ್ನು ಎಣ್ಣೆಯಲ್ಲಿ ಬಿಟ್ಟು ಒಂದುಕಡೆ ಬೆಂದ ನಂತರ ತಿರುಗಿಸಿ ಹಾಕಿ, ಗರಿ ಗರಿ ಆಗುವತನಕ ನಿದಾನವಾಗಿ ಎಣ್ಣೆಯಲ್ಲಿ ಬೇಯಿಸಿ. ಆನಂತರ ಜಾಲಿ ಸವಟಿನಿಂದ ಚಕ್ಕುಲಿಯನ್ನು ತೆಗೆದು ಎಣ್ಣೆ ಬಸಿಯುವತನಕ ಅದರಲ್ಲೆ ಇಟ್ಟು, ಆ ನಂತರ ತಯಾರಿಸಿದ ಗರಿ ಗರಿ ಚಕ್ಕುಲಿಯನ್ನು ತಿನ್ನಲು ನೀಡಿ.

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. vinayak says:

    ಎಣ್ಣೆ ಕುಡಿಯದಂತೆ ಏನಾದರೂ ಸಲಹೆ ಸಿಗಬಹುದಾ??

ಅನಿಸಿಕೆ ಬರೆಯಿರಿ: