ದಿ ತಾವೋ ಆಪ್ ಪಿಸಿಕ್ಸ್ – ಕಿರುನೋಟ 2

ಕೆ.ಎಸ್.ಮಲ್ಲೇಶ್.

 

(ಬರಹ ಮುಂದುವರೆದಿದೆ…)

ವಸ್ತುಸ್ತಿತಿಯನ್ನು ವಿಶೇಶ ರೀತಿಯಲ್ಲಿ ಗಮನಿಸುವುದರ ಮೂಲಕ ಬುದ್ದಿರಹಿತ ಅನುಬವವೊಂದನ್ನು ಪಡೆಯಲು ಸಾದ್ಯವೆನ್ನುವ ದಾರ‍್ಶನಿಕ ಜ್ನಾನ ಕೂಡ ಮೊದಲಿಗೆ ಪ್ರಾಯೋಗಿಕ ಮಾರ‍್ಗಗಳನ್ನೇ ಅನುಸರಿಸುತ್ತದೆ. ಆದರೆ ಅದರ ಅನುಸರಣೆ ತಾರ‍್ಕಿಕ ಜ್ನಾನದಂತಲ್ಲ. ತಾರ‍್ಕಿಕ ಜ್ನಾನ ಪ್ರಯೋಗವನ್ನು ಅವಲಂಬಿಸಿದರೆ ದಾರ‍್ಶನಿಕ ಜ್ನಾನ ಅಂತರ‍್ದ್ರುಶ್ಟಿಯ ಅನುಬವವನ್ನು ಅವಲಂಬಿಸಿದೆ. ಬೌದ್ದದರ‍್ಶನದಲ್ಲಿ ಆತ್ಮಸಾಕ್ಶಾತ್ಕಾರವಾಗಬೇಕಾದರೆ ಮೊದಲು ಸರಿಯಾದ ವೀಕ್ಶಣೆ ಅಗತ್ಯವೆಂದು ಹೇಳಿರುವಲ್ಲಿ ಬುದ್ದಿರಹಿತವಾದ ಅನುಬವವೊಂದನ್ನೇ ಕುರಿತು ಹೇಳಲಾಗಿದೆಯೆಂದು ತಿಳಿಯಬಹುದು.

ದಾರ‍್ಶನಿಕರ ಪ್ರಕಾರ ನಿಜಸ್ತಿತಿಯೆಂದರೆ ಇಂದ್ರಿಯಗೋಚರವಾದುದಶ್ಟೇ ಅಲ್ಲ. ಅದರಿಂದಾಚೆಗೂ ಇರುವಂತಹದು. ಹಾಗೆಯೇ ವೀಕ್ಶಣೆ ಎಂದರೆ ಕೇವಲ ಕಣ್ಣಿಂದ ನೋಡುವುದಶ್ಟೇ ಅಲ್ಲ. ಅದನ್ನೂ ಕೂಡಿಕೊಂಡು ಪಡೆಯುವ ಒಂದು ಇಂದ್ರಿಯಾತೀತ ಅನುಬವ. ವೈಜ್ನಾನಿಕ ಪ್ರಯೋಗ ಮತ್ತು ದಾರ‍್ಶನಿಕ ಅನುಬವಗಳು ಬಹಳಶ್ಟು ಬಿನ್ನವಾಗಿದ್ದರೂ ಅವುಗಳ ನಡುವೆ ಸಾಮ್ಯವಿರುವುದು ವಿಸ್ಮಯವೆನ್ನಿಸಬಹುದು. ಅತ್ಯಂತ ಉನ್ನತ ತಂತ್ರಜ್ನಾನವನ್ನು ಉಪಯೋಗಿಸಿ ಒಬ್ಬ ಬೌತವಿಜ್ನಾನಿ ಅನೇಕ ಪರಿಣಿತರೊಡನೆ ಸೇರಿ ಪ್ರಯೋಗದಲ್ಲಿ ತೊಡಗಿ ಪಲಿತಾಂಶಗಳನ್ನು ಪಡೆದರೆ, ದಾರ‍್ಶನಿಕನಾದರೋ ಯಾವ ಯಂತ್ರಗಳನ್ನೂ ಬಳಸದೆ ಏಕಾಂತದಲ್ಲಿ ದ್ಯಾನಮಗ್ನನಾಗಿದ್ದು ಅಂತರ‍್ದ್ರುಶ್ಟಿಯ ಮೂಲಕ ಅನುಬವಗಳನ್ನು ಪಡೆಯುತ್ತಾನೆ. ವಿಜ್ನಾನದ ಪ್ರಯೋಗಗಳೋ ಪುನರಾವರ‍್ತನೀಯ. ಯಾರು ಬೇಕಾದರೂ ಯಾವಾಗ ಬೇಕೆನಿಸಿದರೂ ಮತ್ತೆ ಮತ್ತೆ ನಡೆಸಿ ಒಂದೇ ಪಲಿತಾಂಶಗಳನ್ನು ಪಡೆಯಬಹುದು. ಆದರೆ ದಾರ‍್ಶನಿಕ ಅನುಬವಗಳು ಹೀಗಲ್ಲ.

ಇವು ಕೆಲವರಿಗೆ ಮಾತ್ರ ಕೆಲ ಸಂದರ‍್ಬಗಳಲ್ಲಶ್ಟೇ ಗೋಚರವಾಗುತ್ತವೆ. ಇಂತಹ ವೈರುದ್ಯಗಳ ನಡುವೆ ಸಾಮ್ಯವನ್ನು ಗುರುತಿಸುವುದು ಮೇಲ್ನೋಟಕ್ಕೆ ವಿಸ್ಮಯಕ್ಕೆಡೆಮಾಡಬಹುದು. ಆದರೆ ಈ ವ್ಯತ್ಯಾಸಗಳು ಕೇವಲ ಮಾರ‍್ಗಗಳಲ್ಲಿವೆಯೇ ಹೊರತು ಅಲ್ಲಿನ ಪಲಿs ತಾಂಶಗಳಲ್ಲಲ್ಲ ಎನ್ನುವುದು ಸೂಕ್ಶ್ಮವಾಗಿ ಗಮನಿಸಿದರೆ ಅರಿವಾಗುತ್ತದೆ. ಸಾದಾರಣ ಸಾಮ್ಯಗಳು ಇವುಗಳನ್ನು ನಿಜಕ್ಕೂ ಸಾಮ್ಯವೆಂದು ಕಾಪ್ರ ಗುರುತಿಸುವುದಿಲ್ಲ. ಆದರೆ ಎರಡೂ ಜ್ನಾನಗಳ ಬಗ್ಗೆ ಬರೆಯುವಾಗ ಇವುಗಳನ್ನು ವಿಶೇಶವಾಗಿ ಗಮನಿಸುತ್ತಾರೆ.

ಪರಿಣತಿಯಿಂದ ಪಕ್ವತೆ ಮೊದಲನೆಯ ಸಾಮ್ಯವೊಂದನ್ನು ಕಾಪ್ರ ನಮ್ಮ ಮುಂದಿಡುತ್ತಾರೆ. ಆದುನಿಕ ಬೌತವಿಜ್ನಾನದ ಸೂಕ್ಶ್ಮಕಣಗಳನ್ನು ಕುರಿತು ಪುನಪ್ರ್ರಯೋಗ ಮಾಡಬಯಸುವ ಯಾರೇ ಆಗಲಿ ಹಲವಾರು ವರ‍್ಶಗಳ ತರಬೇತಿ ಪಡೆಯಬೇಕಾಗುತ್ತದೆ. ಆ ನಂತರವೇ ಆ ವ್ಯಕ್ತಿ ನಿರ‍್ದಿಶ್ಟ ಪ್ರಶ್ನೆಯೊಂದನ್ನು ಕೇಳಿ ಸೂಕ್ತ ಪ್ರಯೋಗ ಮಾಡುವುದರ ಮೂಲಕ ಬಂದ ಪಲಿತಾಂಶದಿಂದ ಉತ್ತರ ಕಂಡುಕೊಳ್ಳಲು, ಪದೇ ಪದೇ ಪ್ರಯೋಗವನ್ನು ಮಾಡಿ ಮೊದಲ ಉತ್ತರವನ್ನು ಮತ್ತೆ ಪಡೆಯಲು ಸಾದ್ಯ. ಇದೇ ರೀತಿ ದರ‍್ಶನಾಕಾಂಕ್ಶಿಯೂ ಹಲವಾರು ವರ‍್ಶ ಗುರುಸಾನ್ನಿದ್ಯದಲ್ಲಿ ತರಬೇತಿ ಹೊಂದಬೇಕು.

ಈ ತರಬೇತಿಯಲ್ಲಿ ನಿರ‍್ದಿಶ್ಟವಲ್ಲದಿದ್ದರೂ ಯಾವುದೋ ಕ್ಶಣದಲ್ಲಿ ದರ‍್ಶನವಾಗಿ ಜಯಶೀಲ ವಿದ್ಯಾರ‍್ತಿಯೆನಿಸಿದರೆ ಮತ್ತೆ ಮತ್ತೆ ಅದೇ ದರ‍್ಶನ ಬವಿಶ್ಯದಲ್ಲಿ ಕಂಡಿತ ಪುನರಾವರ‍್ತನೆಯಾಗುತ್ತದೆ ಎನ್ನುವ ಕಾಪ್ರ ಇದಕ್ಕೆ ಉದಾಹರಣೆಯಾಗಿ ಯಾರೇ ಆಗಲಿ ಕೆಲವೊಮ್ಮೆ ಏನನ್ನೋ ಯಾರ ಹೆಸರನ್ನೋ ಮರೆತು ಎಶ್ಟೇ ಏಕಾಗ್ರತೆಯಿಂದ ಪ್ರಯತ್ನಪಟ್ಟರೂ ಹೊಳೆಯದಿದ್ದುದು ನಂತರ ಆ ಪ್ರಸಂಗವನ್ನೇ ಮರೆತು ಯಾವುದೋ ವಿರಾಮ ಸ್ತಿತಿಯಲ್ಲೋ ಇನ್ನೇನನ್ನೋ ಮಾಡುತ್ತಿರುವಾಗ ಇದ್ದಕ್ಕಿದ್ದಂತೆ ಕ್ಶಣಮಾತ್ರದಲ್ಲಿ ಜ್ನಾಪಕಕ್ಕೆ ಬರುವ ಸನ್ನಿವೇಶವನ್ನು ಮುಂದಿಟ್ಟು ಇಂತಹ ನೇರ ಅನುಬವಗಳಂತೆಯೇ ದಾರ‍್ಶನಿಕ ಅನುಬವಗಳೂ ಕೂಡ ತರಬೇತಿಯಿಂದ ಪಕ್ವಗೊಂಡ ಮನಸ್ಸಿಗೆ ಗೋಚರವಾಗುತ್ತವೆ ಎನ್ನುತ್ತಾರೆ.

ಬಾಶೆಯ ಮಿತಿ:
ವೈಜ್ನಾನಿಕ ಸಿದ್ದಾಂತಗಳು ಮೊದಲೇ ತಿಳಿಸಿದಂತೆ ಕಂಡದ್ರುಶ್ಟಿಯಿಂದ ಪಡೆದ ಜ್ನಾನವನ್ನಶ್ಟೇ ತಿಳಿಸುವುದರಿಂದ ಮೂಲತಹ ಅವುಗಳಿಗೆ ಮಿತಿಯಿದೆ. ಅಂತೆಯೇ ಅವು ವಿಶ್ವಸ್ತಿತಿಯ ನೈಜ ಸ್ವರೂಪವನ್ನು ತಿಳಿಸಲಾರವು. ಈ ಸಿದ್ದಾಂತಗಳನ್ನು ಪರಸ್ಪರ ಜ್ನಾನವಿನಿಮಯಕ್ಕಾಗಿ ಪ್ರಚಲಿತ ಆಡುಬಾಶೆಯೊಂದನ್ನು ಬಳಸಿ ಹೇಳಬೇಕಾದ ಅನಿವಾರ‍್ಯತೆ ಇರುವುದರಿಂದ ಆ ಬಾಶೆಯ ಮಿತಿಯಿಂದಾಗಿಯೂ ನಿಜಸ್ತಿತಿಯ ಸ್ವರೂಪ ತಿಳಿಯಲು ಸಾದ್ಯವಾಗದಿರಬಹುದು. ದಾರ‍್ಶನಿಕ ಜ್ನಾನದಲ್ಲೂ ಇದೇ ತೊಡಕಿದೆ. ನಿಜಸ್ತಿತಿಯ ಪ್ರತ್ಯಕ್ಶ ಅನುಬವವು ನಮ್ಮ ಆಲೋಚನೆಗಳನ್ನೂ ಅಬಿವ್ಯಕ್ತಿಮಾರ‍್ಗಗಳನ್ನೂ ದಾಟಿ ನಿಲ್ಲುವುದರಿಂದ, ದರ‍್ಶನ ಜ್ನಾನವನ್ನು ಹೇಗೆ ಹೇಳಿದರೂ ಅದು ಪಾಶ್ರ್ವ ಸತ್ಯವಾಗಬಹುದೇ ವಿನಾ ಪರಿಪೂರ‍್ಣ ಸತ್ಯವಾಗಲಾರದು. ಈ ತೊಡಕನ್ನು ಬಿಡಿಸಲೆಂದೇ ದರ‍್ಶನ ಮಾರ‍್ಗಗಳಲ್ಲಿ ಅನೇಕ ತಾಂತ್ರಿಕ ವಿದಾನಗಳು,
ವಿಗ್ರಹಾರಾದನೆಗಳು, ಅಪರಿಮಿತ ದೇವರ ಕಲ್ಪನೆಗಳು ಹಿಂದೂ, ತಾವೋ ಮುಂತಾದ ಪೌರ‍್ವಾತ್ಯ ದರ‍್ಶನಗಳಲ್ಲಿ ಬಳಸಲ್ಪಟ್ಟಿರುವುದನ್ನು ವಿವರಿಸುತ್ತ ಎರಡೂ ಜ್ನಾನಗಳು ಅಬಿವ್ಯಕ್ತಗೊಳ್ಳುವ ಮಾರ‍್ಗಗಳಿಂದಾಗಿ ಮಿತಿಗೊಳಗಾಗುವುದನ್ನು ಕಾಪ್ರ ತಿಳಿಸಿದ್ದಾರೆ.

ಪ್ರಮುಕ ಸಾಮ್ಯಗಳು:

ಸಾದಾರಣವೆಂದು ಗುರುತಿಸಿದ ಮೇಲಿನ ಎರಡೂ ಸಾಮ್ಯಗಳು ಆಯಾ ಜ್ನಾನಗಳನ್ನು ಪಡೆಯುವಲ್ಲಿ ಮತ್ತು ಅವುಗಳನ್ನು ಅಬಿವ್ಯಕ್ತಗೊಳಿಸುವಲ್ಲಿ ಕಾಣುತ್ತವೆಯೇ ಹೊರತು ಆ ಜ್ನಾನಗಳ ಸ್ವರೂಪ ಅತವಾ ತತ್ವಗಳಿಗೆ ನಿಲುವುಗಳಿಗೆ ಸಂಬಂದಪಟ್ಟವಲ್ಲ. ಈ ಎರಡನೆಯ ಅಂಶವನ್ನು ಕುರಿತಾಗಿ ಇರುವ ಸಾಮ್ಯಗಳನ್ನೇ ಕಾಪ್ರ ತಮ್ಮ ಕ್ರುತಿಯಲ್ಲಿ ವಿಶಿಶ್ಟವಾಗಿ ಗುರುತಿಸುತ್ತಾರೆ. ಮುಂದಿನ ವಿವರಣೆ ಇವುಗಳನ್ನೇ ಕೇಂದ್ರೀಕರಿಸಿದೆ.

ದ್ವೈತ ಗುಣ:

ನ್ಯೂಟನ್ನನ ಕಾಲದಿಂದ 19ನೆ ಶತಮಾನದ ಅಂತ್ಯದವರೆಗೂ ಪ್ರಚಲಿತವಾಗಿದ್ದ ಬೌತವಿಜ್ನಾನದ ಸ್ವರೂಪ 20ನೆಯ ಶತಮಾನ ಆರಂಬವಾಗುತ್ತಿದ್ದಂತೆ ಕ್ಶಿಪ್ರ ಬದಲಾವಣೆಗೊಳಪಡಬೇಕಾಯಿತು. ಕೇವಲ ಸ್ತೂಲರೂಪದ ವಸ್ತುಸ್ತಿತಿಯನ್ನು ಸರಿಯಾಗಿ ಗ್ರಹಿಸಿದ ಹಿಂದಿನ ಬೌತವಿಜ್ನಾನಕ್ಕೆ ಸೂಕ್ಶ್ಮರೂಪದ ಬೌತಪ್ರಪಂಚವನ್ನು ತನ್ನ ಹಳೆಯ ಚೌಕಟ್ಟಿನಲ್ಲಿ ಹಿಡಿದಿಡಲಾಗಲಿಲ್ಲ. ಇದಕ್ಕೆ ಮುಕ್ಯ ಕಾರಣ ಸೂಕ್ಶ್ಮಜಗತ್ತಿನ ವಸ್ತುಸ್ತಿತಿ. ಆ ಹೊತ್ತಿಗಾಗಲೇ ಸ್ತೂಲಜಗತ್ತಿನ ಪ್ರತಿಯೊಂದು ವಸ್ತುವೂ ಪ್ರತ್ಯಕ್ಶನೋಟಕ್ಕೆ ಕಾಣದಶ್ಟು ಸೂಕ್ಶ್ಮ ಕಣಗಳಿಂದಾಗಿವೆ ಎನ್ನುವ ಸತ್ಯವನ್ನು ಮುಂದುವರೆದ ತಂತ್ರಜ್ನಾನವನ್ನು ಬಳಸಿ ನಡೆಸಿದ ಪ್ರಯೋಗಗಳಿಂದ ಪರೋಕ್ಶವಾಗಿ ಗುರುತಿಸಲಾಗಿತ್ತು. ಈ ಕಣಗಳ ವರ‍್ತನೆ ಸ್ತೂಲಜಗತ್ತನ್ನು ವಿವರಿಸುವ ಸಿದ್ದಾಂತಗಳನ್ನು ಪಾಲಿಸುವುದಿರಲಿ ಆ ಸಿದ್ದಾಂಗಳ ಮೂಲತತ್ವಗಳನ್ನೇ  ಬುಡಮೇಲು ಮಾಡುವಂತೆ ತೋರತೊಡಗಿತು.

ಉದಾಹರಣೆಗೆ ಬೆಳಕು ಎಲ್ಲೆಲ್ಲೂ ವ್ಯಾಪಕವಾಗಿ ಹರಡಿರುವ ಅಲೆಯಂತೆಯೂ ಅದೇ ಕ್ಶಣದಲ್ಲಿ ಒಂದೇ ಬಿಂದುವಿನಲ್ಲಿ ಗೋಚರಿಸುವ ಕಣದಂತೆಯೂ ವರ‍್ತಿಸುತ್ತಿದ್ದುದು ಗಮನಕ್ಕೆ ಬಂತು. ವಸ್ತುವೊಂದು ಕಣರೂಪದಲ್ಲಿದ್ದರೆ ಕಣದಂತೆಯೂ ಅಲೆಯಾಗಿದ್ದರೆ ಸದಾ ಅಲೆಯಂತೆಯೂ ವರ‍್ತಿಸುತ್ತದೆ. ಕಣವಾಗಿದ್ದಾಗ ಅಲೆಯ ಗುಣವಾಗಲೀ ಅಲೆಯಾಗಿದ್ದಾಗ ಕಣದ ಗುಣವಾಗಲೀ ಸಾದ್ಯವಿಲ್ಲವೆಂಬ ಇಂದ್ರಿಯಗೋಚರವೂ ತಾರ‍್ಕಿಕವೂ ಆದ ಪ್ರಮಾಣವನ್ನು ಮೂಲತತ್ವವನ್ನಾಗಿಸಿಕೊಂಡು ರೂಪಗೊಂಡಿದ್ದ ಹಿಂದಿನ ಬೌತವಿಜ್ನಾನದ ಸಿದ್ದಾಂತಕ್ಕೆ ಬೆಳಕಿನ ದ್ವೈತ ವರ‍್ತನೆ ಕಗ್ಗಂಟಾಗಿ ತೋರಿತು.

ಬೆಳಕಿನಂತೆ ಸೂಕ್ಶ್ಮಕಣಗಳು ಕೂಡ ಇಂತಹ ದ್ವೈತ ವರ‍್ತನೆಯನ್ನು ಹೊಂದಿವೆ ಎನ್ನುವ ಮುಂದುವರೆದ ಪ್ರಾಯೋಗಿಕ ಸತ್ಯವನ್ನು ಹಳೆಯ ಬೌತವಿಜ್ನಾನ ಅರಗಿಸಿಕೊಳ್ಳಲಾರದೆ ಸೋತಿತು. ಸ್ತೂಲ ಜಗತ್ತಿನ ವರ‍್ತನೆಗಳನ್ನು ಕೂಲಂಕುಶವಾಗಿ ಅದ್ಯಯನಮಾಡಿ ಪಡೆದಿದ್ದ ಜ್ನಾನವನ್ನೇ ಸತ್ಯವೆಂದು ತಿಳಿದುಕೊಂಡಿದ್ದ ವೈಜ್ನಾನಿಕ ಮನಸ್ಸಿಗೆ ಸೂಕ್ಶ್ಮಕಣಗಳ ಈ ದ್ವೈತ ವರ‍್ತನೆ ವಿರೋದಾಬಾಸಕ್ಕೆ ಎಡೆಮಾಡಿಕೊಟ್ಟು ಸಂದಿಗ್ದ ಪರಿಸ್ತಿತಿಗೆ ಸಿಲುಕಿಸಿದುದು ಒಂದು ಮಹತ್ತರ ಸಂಗತಿಯಾಯಿತು.

ಸೂಕ್ಶ್ಮಜಗತ್ತಿನ ನಿಜ ವರ‍್ತನೆಯನ್ನು ಅರಿಯುವುದಕ್ಕಾಗಿ ತಾರ‍್ಕಿಕವಾಗಿ ಎಶ್ಟೇ ಕಹಿ ಎನಿಸಿದರೂ ಅನಿವಾರ‍್ಯವಾಗಿ ಹೊಸತತ್ವಗಳನ್ನು ಹುಟ್ಟುಹಾಕಲೇಬೇಕಾಯಿತು. ಅಂತೆಯೇ ಬೌತವಿಜ್ನಾನದ ಹಳೆಯ ಸಿದ್ದಾಂತವನ್ನು ಕೈಬಿಟ್ಟು ಪ್ರತಿಯೊಂದು ಕಣಕ್ಕೂ ಈ ದ್ವೈತ ವರ‍್ತನೆಯಿದೆಯೆನ್ನುವುದನ್ನೇ ಪುರಸ್ಕರಿಸುವಂತಹ ಕ್ವಾಂಟಂ ಮೂಲತತ್ವಗಳನ್ನು ಸೇರಿಸಬೇಕಾಯಿತು.ಅನೇಕ ಹಳೆಯ ಪರಿಕಲ್ಪನೆಗಳ ಜಾಗದಲ್ಲಿ ಹೊಸ ಪರಿಕಲ್ಪನೆಗಳನ್ನು ಸೇರಿಸಿಕೊಂಡು ಬೆಳೆದದ್ದೇ ಆದುನಿಕ ಬೌತವಿಜ್ನಾನ. ಹೀಗೆ ಕಟ್ಟಿದ ಆದುನಿಕ ಬೌತವಿಜ್ನಾನದಲ್ಲಿ ದ್ವೈತ ವರ‍್ತನೆ ವಸ್ತುಸ್ತಿತಿಯ ನಿಜಗುಣವೆನ್ನುವುದು ಪ್ರಮುಕ ಮೂಲತತ್ವಗಳಲ್ಲಿ ಒಂದೆನಿಸಿತು.

ದ್ವೈತ ವರ‍್ತನೆ ಪಾಶ್ಚಿಮಾತ್ಯ ವೈಜ್ನಾನಿಕ ಚಿಂತನೆಗೆ ಹೊಸದೆನಿಸಿ ವಿರೋದಾಬಾಸಕ್ಕೆ ಎಡೆಮಾಡಿಕೊಟ್ಟು ನಂತರ ಅದನ್ನೇ ಸತ್ಯವೆಂದು ಸ್ವೀಕರಿಸಬೇಕಾದ ಅನಿವಾರ‍್ಯತೆಗೆ ಎಡೆಮಾಡಿಕೊಟ್ಟರೆ, ಪೌರ‍್ವಾತ್ಯ ದರ‍್ಶನಗಳು ವಿಶ್ವದಲ್ಲಿನ ವರ‍್ತನೆಗಳನ್ನು ಅನುಬವಿಸಿ ಪಡೆದ ದರ‍್ಶನಗಳಲ್ಲೂ ದ್ವೈತವರ‍್ತನೆ ಅತವಾ ಗುಣವಿರುವುದನ್ನು ಗುರುತಿಸಿದ್ದವು. ದಾರ‍್ಶನಿಕರು ಇಂತಹ ದ್ವೈತ ವರ‍್ತನೆಗಳನ್ನು ವಿರೋದಾಬಾಸಗಳೆಂದು ಬಾವಿಸದೆ ಸಹಜ ಅನುಬವಗಳೆಂದು ಸ್ವೀಕರಿಸಿ ಅವುಗಳ ಆಂತರ‍್ಯದಲ್ಲಿದ್ದ ಅಂಶಗಳನ್ನು ಅನುಬವಿಸಿ ನಿಜಸ್ತಿತಿಯ ಸಾಕ್ಶಾತ್ಕಾರ ಪಡೆಯಲು ಪ್ರಯತ್ನಿಸಿದರು. ದಾರ‍್ಶನಿಕ ಉಕ್ತಿಗಳಲ್ಲಿ ವಿರೋದಾಬಾಸವೆನಿಸುವ ಹೇಳಿಕೆಗಳು ಹೇರಳವಾಗಿ ತುಂಬಿರುವುದನ್ನು ನೋಡಿದರೆ ಅವು ಅನುಬವಗಳ ವಿಶೇಶ ನೆಲೆಗಳನ್ನು ಸೂಚಿಸುವಂತಿವೆ.

ಉದಾಹರಣೆಗೆ ಜೆನ್ ಗುರು ಡೈಟೊ ಚಕ್ರವರ‍್ತಿ ಗೊಡೈಗೋಗೆ ಹೇಳುವುದನ್ನು ಗಮನಿಸಿ.

ಕಲ್ಪಗಳ ಹಿಂದೆಯೇ ನಾವಿಬ್ಬರೂ ವಿದಾಯ ಹೇಳಿದೆವು, ಆದರೆ ಒಂದು ಕ್ಶಣವೂ ಅಗಲಿರಲಿಲ್ಲ. ದಿನವಿಡೀ ಮುಕಾಮುಕಿಯಾಗಿ ಕುಳಿತಿದ್ದೇವೆ ಆದರೆ ಸಂದಿಸುತ್ತಲೇ ಇಲ್ಲ.

ಚೀನಾದ ಯಿಂಗ್ ಮತ್ತು ಯಾಂಗ್ ಒಂದಕ್ಕೊಂದು ಪೂರಕವಾಗಿ ಸೇರಿ ಸ್ರುಶ್ಟಿಯ ಪರಿಪೂರ‍್ಣತೆಯನ್ನು ಪ್ರತಿನಿದಿಸುತ್ತವೆ.

ಹಿಂದೂ ದರ‍್ಶನದಲ್ಲಂತೂ ದ್ವೈತದ ಅನುಬವ ಅರ‍್ದನಾರೀಶ್ವರ, ಹರಿ-ಹರ, ಪ್ರಕ್ರುತಿ-ಪುರುಶ, ಆತ್ಮ-ಪರಮಾತ್ಮ ಹೀಗೆ ಹಲವು ರೀತಿಯಲ್ಲಿ ಪ್ರಕಟಗೊಂಡಿದೆ. ಸ್ರುಶ್ಟಿಯ ಸೂಕ್ಶ್ಮಪ್ರಪಂಚವನ್ನು ಪ್ರವೇಶಿಸಿದ ಬೌತ ಸಂಶೋದನೆ ಅಲ್ಲಿನ ಸತ್ಯವನ್ನು ತಿಳಿಯುವುದಕ್ಕಾಗಿ ತಾನೇ ಕಟ್ಟಿದ್ದ ತಾರ‍್ಕಿಕ ನೆಲೆಗಟ್ಟನ್ನು ದಾಟಿ ಹೊಸತತ್ವಗಳ ಬೆಳಕಿನಲ್ಲಿ ಸಾಕ್ಶಾತ್ಕರಿಸಿಕೊಂಡ ಒಂದು ಜ್ನಾನವೆಂದರೆ ಸ್ರುಶ್ಟಿಗೆ ದ್ವೈತ ವರ‍್ತನೆಯಿದೆ
ಎನ್ನುವುದು. ಪೌರ‍್ವಾತ್ಯ ದಾರ‍್ಶನಿಕರು ತಮ್ಮ ಒಳನೋಟದಲ್ಲಿ ಪಡೆದಿದ್ದ ಅನುಬವವೂ ಇದೇ ಎನ್ನುವಲ್ಲಿ ಕಾಪ್ರ ಎರಡೂ ಜ್ನಾನಗಳ ಮೊದಲ ಸಾಮ್ಯವನ್ನು ತೋರುತ್ತಾರೆ.  (ಮುಂದುವರೆಯುವುದು…)

(ಚಿತ್ರಸೆಲೆ: ವಿಕಿಪೀಡಿಯಾ)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 02/10/2015

    […] (ಬರಹ ಮುಂದುವರೆದಿದೆ…) […]

ಅನಿಸಿಕೆ ಬರೆಯಿರಿ: