ನನ್ನದೊಂದು ತಪ್ಪು

– ಪ್ರತಿಬಾ ಶ್ರೀನಿವಾಸ್.

guilt-2_l
“ಬೇಗ ಓಡಿ ಬಾರೆ, ಬೇಗ ಹೋಗಿ ಇಟ್ಟು ಬರೋಣ” ಎಂಬ ದನಿ ಕೇಳುತ್ತಿದ್ದಂತೆಯೇ ಚಪ್ಪಲಿ ಕೂಡ ಹಾಕದೇ ಓಡಿ ಬಂದೆ ಸ್ಕೂಲಿಂದ ಹೊರಗೆ. ಮಲೆನಾಡ ಮಡಿಲಲ್ಲಿ ನಮ್ಮದೊಂದು ಪುಟ್ಟ ಶಾಲೆ.  5 ನೇ ತರಗತಿ ಓದುತ್ತಿದ್ದ ನಮಗೆ ಆ ಶಾಲೆಯೇ ಪ್ರಪಂಚ. ನಮ್ಮ ಸ್ಕೂಲಿನ ಬೀಗ ತೆಗೆಯುವುದರೊಂದಿಗೆ ಶುರು ಆಗುವ ನಮ್ಮ ದಿನಚರಿ, ಗುಡಿಸೋದು, ಗಿಡಗಳಿಗೆ ನೀರು ಹಾಕೋದು, ಬಿಸಿಯೂಟ ಬಡಿಸೋದು, ಕೊನೆಗೆ ಶಾಲೆ ಬಾಗಿಲಿಗೆ ಬೀಗ ಜಡಿಯುತ್ತಾ ದಿನಚರಿ ಮುಗಿಯುತ್ತಿತ್ತು. ಪಾಟದ ಜೊತೆ ಆಟವಾಡುತ್ತಾ, ಕುಣಿಯುತ್ತಾ, ಸ್ವಾರ‍್ತವಿಲ್ಲದೇ, ದೊಡ್ಡಸ್ತಿಕೆ ಇಲ್ಲದೇ ಶಾಲೆಯ ಎಲ್ಲಾ ಕೆಲಸಗಳನ್ನು ಮಾಡುತ್ತಾ ಗುರುಗಳ ಮಾತನ್ನು ಕೇಳುವುದೇ ನಮಗೆ ಸಂತಸ.

ಇನ್ನೇನು ದಸರಾ ರಜೆ ಸಿಗುವ ದಿನಗಳು ಹತ್ತಿರದಲ್ಲಿದೆ, ರಜೆಯ ನಲಿವನ್ನು ಅಜ್ಜಿ ಮನೆಯಲ್ಲಿ ಕಳೆಯುವ ಕಾತರ ನಮ್ಮದು! ಜೊತೆ ಜೊತೆಗೆ ಪರೀಕ್ಶೆಗೆ ಒಂದಿಶ್ಟು ಚಿಕ್ಕ-ಪುಟ್ಟ ತಯಾರಿಗಳು. “ಸೋಮವಾರದಿಂದ ಪರೀಕ್ಶೆ, 15 ರ ತನಕ ಮಗ್ಗಿ ಎಲ್ಲಾ ಕಲ್ತಿರಬೇಕು” ಎನ್ನುವ ನಮ್ಮ ಗಣಿತ ಮೇಶ್ಟ್ರು ಕೂಗು ಪದೇ ಪದೇ ಕಿವಿಗೆ ಬೀಳುತ್ತಿತ್ತು.

ಅಂದು ಶನಿವಾರ,ನಮ್ಮ ಮೇಶ್ಟ್ರು ಬಿಳಿಹಾಳೆಯ ಒಂದು ಕವರ್ ಅನ್ನು ನಮ್ಮ ಕಯ್ಯಲ್ಲಿಟ್ಟು, “ನೀವಿಬ್ರು ಹೋಗಿ ಇದ್ನಾ ನಮ್ ಮನೆಲಿ ಇಟ್ಟು ಬನ್ನಿ” ಎನ್ನುತ್ತಾ ಕಚೇರಿಯ ಕೋಣೆಗೆ ಹೋದರು. ನಾನು ನನ್ನ ಗೆಳತಿ ನಿದಾನವಾಗಿ ಅವರ್ ಮನೆ ಕಡೆ ಹೋದ್ವಿ.

“ಹೇ! ಈ ಕವರ್ ಅಲ್ಲಿ ಏನ್ ಇದ್ಯೇ”?ಎಂದಳು ಗೆಳತಿ.

“ಏನೋ ನಂಗೊತ್ತಿಲ್ವೇ, ನೋಡಣ ತಡಿ”

“ಅಯ್ಯೋ ಇದು ನಮ್ ವಿಗ್ನಾನ ಪ್ರಶ್ನೆ ಪತ್ರಿಕೆ ಕಣೇ, ಬುದವಾರ ಇದೇ ಪರೀಕ್ಶೇ ಇರೋದು”ಎಂದು ಗೆಳತಿ ಹೇಳುತ್ತಿರುವಾಗಲೇ ಮುಕದಲ್ಲಿ ಮಂದಹಾಸ ಮೂಡಿತು.

ತಕ್ಶಣವೇ ಅಲ್ಲೇ ಇದ್ದ ಬಾವಿ ಕಟ್ಟೆ ಮೇಲೆ ಕುಳಿತು ಎಲ್ಲಾ ಪ್ರಶ್ನೆಗಳನ್ನು ನಮ್ಮ ಕಯ್ಯ ಮೇಲೆ ಬರೆದುಕೊಂಡೆವು. ಹಾಗೆ ಯಾಕೋ ಆ ಕಡೆ ತಿರುಗಿ ನೋಡಿದರೇ ಸುಮಾರು 23-24 ವರುಶದ ಒಬ್ಬ ಹುಡುಗ ನಮ್ಮ ಮಾತುಗಳನ್ನು ಆಲಿಸುತ್ತಾ ನಿಂತಿದ್ದು ಕಂಡೆವು. ಆದರೂ ನಾವು ನಮ್ಮ ಕೆಲಸ ಮುಗಿಸಿ ಆ ಕವರನ್ನು ಅವರ ಮನೆಯಲ್ಲಿಟ್ಟು ಶಾಲೆಗೆ ಬಂದೆವು. ಒಂದು ವಾರದಲ್ಲೇ ಪರೀಕ್ಶೆ ಮುಗಿಯಿತು.

ಉತ್ತರ ಪತ್ರಿಕೆ ಕೊಟ್ಟು ಮನೆಯಲ್ಲಿ ರುಜು ಮಾಡಿಸ್ಕೊಂಡು ಬನ್ನಿ ಅಂದ್ರು ನಮ್ ಮೇಶ್ಟ್ರು. ಸ್ಕೂಲ್ ಮುಗ್ಸಿ ಮನೆಗೆ ಹೊರಡಬೇಕಾದ್ರೇ ನಮ್ ಮೇಶ್ಟ್ರು ನನ್ನ ನನ್ ಗೆಳತಿನ ಕರ‍್ದು ಜೋರಾಗಿ ನಗುತ “ವಿಗ್ನಾನ ಪ್ರಶ್ನೆನ ಕಯ್ಯಲ್ಲಿ ಬರ್ ಕೊಂಡು ಹೋಗಿದ್ರಾ? ಚೀಟಿಲೀ ಬರ್ ಕೊಂಡು ಹೋಗಿದ್ರ? ” ಅಂತ ಕೇಳಿದ್ರು.

ತಕ್ಶಣವೇ ನಮ್ಮಿಬ್ರಿಗೇ ನಿಂತಲ್ಲೇ ಒಮ್ಮೆ ಪಾತಾಳಕ್ಕೆ ಹೋಗಿ ಬಂದಂಗೆ ಆಯ್ತು. ಮುಗುಳ್ನಗುತ್ತಾ ಮೇಶ್ಟ್ರು ಅಂದ್ರು “ಮೊನ್ನೇ ಬಾವಿ ಕಟ್ಟೆ ಹತ್ರ ಒಂದು ಹುಡ್ಗ ನಿಂತಿದ್ನಲ್ಲಾ ಅವ್ನು ನನ್ ಮಗ'” ಎಂದು ನಸು ನಕ್ಕರು.

ಏನು ಬಯ್ಯದೇ ಇದ್ದ ಅವರ ಆ ನಗುವಿನಲ್ಲಿ ನಮ್ಮ ತಪ್ಪಿಗೆ ಶಿಕ್ಶೆ ಇತ್ತು. ನಮ್ಮ ಕಣ್ಣೀರು, ಮಾಡಿದ ತಪ್ಪಿಗೆ ಪಶ್ಚಾತ್ತಾಪವಾಗಿತ್ತು. ನಮ್ಮ ತಪ್ಪಿನ ಅರಿವಾಗಿ ಮನೆ ಕಡೆ ನಡೆದೆವು.

( ಚಿತ್ರ ಸೆಲೆ:  kathleenmoulton.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Nanagu ide anubhava agiddu nenpaythu….. Matthe shaale mettilu attho aase….

ಅನಿಸಿಕೆ ಬರೆಯಿರಿ: