ವಿಶ್ವಮಟ್ಟದಲ್ಲಿ ಅಮೇರಿಕಾದ ರಾಜಕೀಯ ಬಲ ಕುಂದುತ್ತಿದೆಯೇ?

– ಅನ್ನದಾನೇಶ ಶಿ. ಸಂಕದಾಳ.

russia-china-vs-us

ಅಮೇರಿಕಾದೊಂದಿಗೆ ನಡೆಸುತ್ತಿದ್ದ ಶೀತಲ ಸಮರ ಕೊನೆಗೊಂಡು ಅನೇಕ ವರುಶಗಳ ನಂತರ ರಶ್ಯಾ ಮೊದಲ ಬಾರಿಗೆ ತನ್ನ ಮಿಲಿಟರಿ ಪಡೆಯನ್ನು ರಶ್ಯಾದಿಂದ ತುಂಬಾ ದೂರದಲ್ಲಿರುವ ಸಿರಿಯಾ ನಾಡಿನಲ್ಲಿ ತೊಡಗಿಸಿದೆ. ಐ ಎಸ್ ಐ ಎಸ್ (ISIS) ದಿಗಿಲುಕೋರರನ್ನು ಬಗ್ಗುಬಡಿಯಲು ತಾನು ಹೀಗೆ ಮಾಡಿದ್ದೇನೆ ಎನ್ನುವುದು ರಶ್ಯಾದ ಹೇಳಿಕೆ. ಆದರೆ ಸಿರಿಯಾದ ಅದ್ಯಕ್ಶರನ್ನು ಬದಲಾಯಿಸಬೇಕು ಎಂಬ ಅಮೆರಿಕಾದ ಬೇಡಿಕೆಯನ್ನು ಸಿರಿಯಾದ ಗೆಳೆಯ ನಾಡಾದ ರಶ್ಯಾ ಒಪ್ಪುತ್ತಿಲ್ಲ. ಮತ್ತೊಂದು ಕಡೆ, ವಿಯಟ್ನಾಂ ಮತ್ತು ಪಿಲಿಪೈನ್ಸ್ ನಾಡುಗಳ ನಡುವಿರುವ ತೆಂಕಣ ಚೀನಾ ಕಡಲಿನ (South China Sea) ಕೆಲವಶ್ಟು ಹರವು ತನ್ನ ಸುಪರ‍್ದಿಗೆ ಒಳಪಡುವುದರಿಂದ, ಅಮೇರಿಕಾಗೆ ವ್ಯಾಪಾರ ಅತವಾ ಬೇರೆ ಯಾವುದೇ ಕಾರಣಗಳಿದ್ದರೂ ಅದನ್ನು ಬಳಸಲು ತಾನು ಬಿಡುವುದಿಲ್ಲ ಎಂದು ಚೀನಾ ಹೇಳುತ್ತಿದೆ. ಜಗತ್ತಿನ ಯಾವ ಮೂಲೆಯಾದರೂ ಸರಿ, ತನ್ನ ಪ್ರಬಾವ ಬೀರುವ ಶಕ್ತಿ ಹೊಂದಿದ್ದ ಅಮೇರಿಕಾಗೆ, ರಶ್ಯಾ ಮತ್ತು ಚೀನಾದ ಈ ನಡೆಗಳಿಂದ ಕೊಂಚ ಹಿನ್ನಡೆಯಾದಂತಿದೆ.

ರಶ್ಯಾದ ಅದ್ಯಕ್ಶ ವ್ಲಾಡಿಮಿರ್ ಪುಟಿನ್ ಸಿರಿಯಾದಲ್ಲಿ ರಶ್ಯಾದ ಸೇನೆಯನ್ನು ತೊಡಗಿಸಿರುವುದು, ಜಿಹಾದಿಗಳನ್ನು ಮಟ್ಟಹಾಕಲು ಎಂದು ಹೇಳುತ್ತಿದ್ದಾರೆ. ಆದರೆ ಅವರ ಈ ನಡೆಯ ಹಿಂದೆ ಬೇರೆ ಕಾರಣಗಳೂ ಇವೆ. ರಶ್ಯಾದಲ್ಲಿ ತಮ್ಮ ಬಗ್ಗೆ ಜನರಲ್ಲಿ ಒಳ್ಳೆಯ ಅನಿಸಿಕೆ ಮೂಡಿಸುವುದು ಒಂದು ಕಡೆಯಾದರೆ ನಡು-ಮೂಡಣ ಏಶಿಯಾದ ನಾಡುಗಳ ಮುಂದಾಳುಗಳ ಗೆಳೆತನ ಮತ್ತು ನಂಬಿಕೆ ಗಳಿಸುವ ಲೆಕ್ಕಾಚಾರವೂ ಕೂಡ ಅದರಲ್ಲಡಗಿದೆ. ಹೀಗೆ ಮಾಡುತ್ತಾ ನಡು-ಮೂಡಣ ಏಶಿಯಾದ ಮೇಲಿರುವ ಅಮೆರಿಕಾದ ಹಿಡಿತವನ್ನು ಮೆಲ್ಲಗೆ ತಗ್ಗಿಸುವ ಯೋಚನೆ ಪುಟಿನ್ ಅವರದ್ದು. ಸಿರಿಯಾದ ಅದ್ಯಕ್ಶರಾದ ಬಶಾರ‍್-ಅಲ್-ಅಸಾದ್ ಮಾನವ ಹಕ್ಕುಗಳ ನಿಯಮಗಳನ್ನು ಗಾಳಿಗೆ ತೂರಿದ್ದರಿಂದ ಸಿರಿಯಾದ ಪ್ರಜೆಗಳಿಗೆ ಅನ್ಯಾಯವಾಗಿದೆ, ಆದ್ದರಿಂದ ಬಶಾರ್ ಅವರನ್ನು ಕೆಳಗಿಳಿಸಬೇಕು ಎನ್ನುವುದು ಅಮೇರಿಕಾದ ವಾದ. ಆದರೆ ರಶ್ಯಾ ಅಮೇರಿಕಾದ ಈ ವಾದವನ್ನು ಒಪ್ಪುವುದಿಲ್ಲ. ಮಾನವ ಹಕ್ಕುಗಳನ್ನು ನೆಪ ಮಾಡಿಕೊಂಡು, ಸಾರ‍್ವಬೌಮತ್ವ ಹೊಂದಿದ ನಾಡುಗಳ ಆಳ್ವಿಕೆಯು ತಮ್ಮ ಪರವಾಗಿರುವಂತೆ ಮಾಡುವುದೇ ಪಡುವಣ ನಾಡುಗಳ ಉದ್ದೇಶ ಎಂಬುದು ರಶ್ಯಾದ ಗಟ್ಟಿಯಾದ ನಿಲುವಾಗಿದೆ. ಒಂದೊಮ್ಮೆ ತನ್ನ ಆಳ್ವಿಕೆಯಲ್ಲಿ ರಶ್ಯಾದಲ್ಲಿ ಮಾನವ ಹಕ್ಕುಗಳ ಮೀರುವ ಕೆಲಸವಾದರೆ, ಅದನ್ನೇ ಮುಂದುಮಾಡಿಕೊಂಡು ಪಡುವಣದ ನಾಡುಗಳು ರಶ್ಯಾಗೂ ಕಾಲಿಡುತ್ತವೆ ಎಂಬ ಪುಟಿನ್ ರ ಎಣಿಕೆ, ಸಿರಿಯಾ ವಿಶಯದಲ್ಲಿ ರಶ್ಯಾವು ಅಮೇರಿಕಾದ ಎದುರು ನಿಲ್ಲುವಂತೆ ಮಾಡಿದೆ (ಯುಕ್ರೇನಿನ ಹಿಡಿತದಿಂದ ಕ್ರೈಮಿಯಾವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡ ರಶ್ಯಾದ ನಡೆ ಮಾನವ ಹಕ್ಕುಗಳ ಮೀರುವ ಕೆಲಸವೇ ಆಗಿದೆ ಎಂಬುದನ್ನು ಇಲ್ಲಿ ನೆನೆಯಬಹುದು).

us-china-trade-warತೆಂಕಣ ಚೀನಾ ಕಡಲು ಈಗ ನಾಡುಗಳ ರಾಜಕೀಯ ಬಲಾಬಲ ತೋರಿಸುವ ವೇದಿಕೆಯಾಗಿದೆ. ತೆಂಕಣ ಚೀನಾ ಕಡಲು, ಹಲವಾರು ಕುರ‍್ವೆಗಳು (Islands) ಮತ್ತು ನಡುಗಡ್ಡೆಗುಂಪುಗಳಿಂದ (archipelago) ಸುತ್ತುವರಿದ, ಪೆಸಿಪಿಕ್ ಸಾಗರ ಸೇರುವ ಕಡಲಾಗಿದೆ. ವಿಯಟ್ನಾಂ, ಪಿಲಿಪೈನ್ಸ್, ತೈವಾನ್, ಚೀನಾ – ಹೀಗೆ ಹಲವಾರು ನಾಡುಗಳ ನಡುವೆ ಈ ಕಡಲು ಹರಡಿಕೊಂಡಿದೆ. ಜಗತ್ತಿನ ಶೇ 33 ರಶ್ಟು ವಹಿವಾಟುಗಳು ಅತವಾ ಸಾಗಾಣಿಕೆ ಈ ಕಡಲ ಮೂಲಕ ಆಗುತ್ತದೆ. ಈ ಕಡಲ ಹರವಿನಲ್ಲಿರುವ ಕುರ‍್ವೆಗಳು ಮತ್ತು ನಡುಗಡ್ಡೆಗುಂಪುಗಳು ತೈಲ ಮುಂತಾದ ನೈಸರ‍್ಗಿಕ ಒಡಮೆಗಳನ್ನು (resources) ಹೊಂದಿರುವುದೇ ಈ ಕಡಲ ಸುತ್ತ ಇರುವ ನಾಡುಗಳ ನಡುವೆ ತಿಕ್ಕಾಟವನ್ನು ಹುಟ್ಟುಹಾಕಿದೆ. ಚೀನಾವು ಈ ಒಡಮೆಗಳನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು, ತೆಂಕಣ ಚೀನಾ ಕಡಲ ಬಹಳಶ್ಟು ಹರವನ್ನು ತಾನು ಹೊಂದಿರುವುದಾಗಿ ಹೇಳುತ್ತಾ ಕಡಲ ಸುತ್ತ ಇರುವ ನಾಡುಗಳಿಗೆ ಇರುಸು-ಮುರುಸು ಉಂಟುಮಾಡುತ್ತಿದೆ. ಈ ನಿಟ್ಟಿನಲ್ಲಿ ಕಡಲ ನಡುವಿನ ಹಲವಾರು ಕುರ‍್ವೆಗಳಲ್ಲಿ ಮತ್ತು ನಡುಗಡ್ಡೆ ಗುಂಪುಗಳಲ್ಲಿ, ಹಡಗು, ವಿಮಾನ ಮತ್ತು ಮಿಲಿಟರಿ ನೆಲೆಗಳನ್ನು ಚೀನಾವು ಹೊಂದಲು ಶುರು ಮಾಡಿದೆ. ಕಡಲ ಮೇಲಿನ ಸಾಗಾಣಿಕೆ ಮೇಲೆ ಕಣ್ಗಾವಲು ಇರಿಸುವುದು ಚೀನಾದ ಉದ್ದೇಶ. ಇಶ್ಟು ದಿವಸ ಯಾವುದೇ ಅಡೆ-ತಡೆಗಳಿಲ್ಲದೇ ಸರಾಗವಾಗಿ ಓಡಾಡುತ್ತಿದ್ದ ಅಮೇರಿಕಾದ ಹಡಗುಗಳಿಗೆ ಇನ್ನು ಮುಂದೆ ಹಾಗೆ ಸಾಗದಂತಾಗಿದೆ. ನಾಡುಗಳ ನಡುವೆ ಇರುವ ಅಂತರಾಶ್ಟ್ರೀಯ ಮಟ್ಟದಲ್ಲಿರುವ ಕಟ್ಟಲೆಗಳನ್ನು ಪಾಲಿಸದೇ, ‘ತೆಂಕಣ ಚೀನಾ ಕಡಲ’ ಹೆಚ್ಚಿನ ಹರವಿನ ಮೇಲೆ ಚೀನಾವು ತನ್ನ ಯಜಮಾನಿಕೆಯನ್ನು ಸಾರಿರುವುದು ಅಮೇರಿಕಾಗೆ ತಲೆಬಿಸಿ ಮಾಡಿದೆ.

ಸೋವಿಯತ್ ಒಕ್ಕೂಟ ಕುಸಿದ ಬಳಿಕ ಅಮೇರಿಕಾವೊಂದೇ ಜಾಗತಿಕ ಮಟ್ಟದಲ್ಲಿ ಬಲಶಾಲಿ ನಾಡಾಗಿ ಹೊರಹೊಮ್ಮಿತ್ತು. ಚೀನಾದಲ್ಲಿನ ಅರಾಜಕತೆ ಮತ್ತು ಒಳಗಿನ ಕಚ್ಚಾಟವೂ ಕೂಡ ಅಮೇರಿಕಾದ ರಾಜಕೀಯ ಬಲವು ಜಾಗತಿಕ ಮಟ್ಟದಲ್ಲಿ ಬೆಳೆಯಲು ಅನುವು ಮಾಡಿಕೊಟ್ಟಿತ್ತು. ಕಳೆದ 25 ವರುಶಗಳಲ್ಲಿ ಅಮೇರಿಕಾ ತನ್ನ ರಾಜಕೀಯ ಬಲವನ್ನು ಜಗತ್ತಿನೆಲ್ಲೆಡೆ ತೋರಿಸುತ್ತಾ ಮೇಲುಗೈ ಪಡೆದಿತ್ತು. ಆದರೆ ಈಗ ಸನ್ನಿವೇಶಗಳು ಬದಲಾಗುತ್ತಿರುವಂತೆ ಕಾಣುತ್ತಿವೆ. ಇತ್ತೀಚಿನ ಕೆಲವು ವರುಶಗಳಲ್ಲಿ ಅಮೇರಿಕಾದ ಶಕ್ತಿಯನ್ನು ಪ್ರಶ್ನಿಸುವ ಮತ್ತು ರಾಜಕೀಯವಾಗಿ ಅದರ ಬಲವನ್ನು ತಗ್ಗಿಸುವ ನಡೆಗಳು ರಶ್ಯಾ ಮತ್ತು ಚೀನಾ ಮಾಡುತ್ತಿರುವುದಂತೂ ನಿಜ. ಸಿರಿಯಾ ಮತ್ತು ತೆಂಕಣ ಚೀನಾ ಕಡಲಿನ ವಿಶಯದಲ್ಲಿ, ರಶ್ಯಾ ಮತ್ತು ಚೀನಾ ಎದುರು ನಿಂತಿರುವುದು, ಅಮೇರಿಕಾ ಇನ್ನುಮುಂದೆ ಜಾಗತಿಕವಾಗಿ ತನ್ನ ರಾಜಕೀಯ ಶಕ್ತಿಯನ್ನು ಕಾಯ್ದುಕೊಳ್ಳಲು ಸ್ವಲ್ಪ ಹೋರಾಟ ನಡೆಸಬೇಕಾಗುತ್ತದೆ ಎಂಬ ಮುನ್ಸೂಚನೆಯನ್ನು ನೀಡುತ್ತಿದೆ.

( ಮಾಹಿತಿ ಸೆಲೆ : economist.comwikipedia.org, bbc.com )

(ಚಿತ್ರ ಸೆಲೆ : syrianfreepress.wordpress.comteapartyorg.ning.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: