ಮತ್ತೆ ಬಂತು ಬಲೆನೊ

ಜಯತೀರ‍್ತ ನಾಡಗವ್ಡ.

1

ಬಲೆನೊ (Baleno) ಈ ಹೆಸರು ಬಾರತದ ಮಟ್ಟಿಗೆ ಹೊಸದೇನಲ್ಲ. ಅದರಲ್ಲೂ ಬಂಡಿಗಳ ಬಗ್ಗೆ ಗೊತ್ತಿರುವವರಿಗಂತೂ ಬಲೆನೊ ಹಳೆಯದ್ದೇ. 90ರ ಏಡಿನಲ್ಲಿ ಮಾರುತಿ ಸುಜುಕಿ ಕೂಟದವರು ಬಲೆನೊ ಹೆಸರಿನ ಸೆಡಾನ್ ಬಿಡುಗಡೆಗೊಳಿಸಿದ್ದರು. ಮೂರಕ್ಕಿಳಿಯದೇ ಆರಕ್ಕೇರದೇ ಅಶ್ಟಕಶ್ಟೇ ಹೆಸರು ಮಾಡಿದ್ದ ಈ ಬಂಡಿಯನ್ನು ಮಾರುತಿ ಸುಜುಕಿ ಕೂಟದವರು ಸಣ್ಣಗೆ ಮಾರುಕಟ್ಟೆಯಿಂದ ಹಿಂತೆಗೆದುಕೊಂಡು ವರುಶಗಳೇ ಕಳೆದಿವೆ. ಕೆಲವರ ನೆನಪಿನಿಂದ ಬಲೆನೊ ಹೆಸರು ಮರೆತು ಹೋಗಿರಲೂಬಹುದು. ಆದರೆ ಇದೀಗ ಅದೇ ಬಂಡಿಯನ್ನು ಮತ್ತೆ ಮಾರುಕಟ್ಟೆಯಲ್ಲಿ ಇಳಿಸಿದೆ.

3

ಈ ವರುಶ ಒಂದರ ಹಿಂದೊಂದರಂತೆ ರಾಕೆಟ್ ವೇಗದಲ್ಲಿ ಹೊಸ ಕಾರು ಬಿಡುಗಡೆ ಮಾಡುತ್ತಿರುವ ಮಾರುತಿ ಸುಜುಕಿ ಕೂಟ ದೀಪಾವಳಿ ಹೊಸ್ತಿಲಲ್ಲೇ ಬಲೆನೊ ಬಿಡುಗಡೆ ಮಾಡಿದೆ. ಇದೇ 26 ಅಕ್ಟೋಬರ್ ರಂದು ಎರಡನೇ ತಲೆಮಾರಿನ ಬಲೆನೊ ಬಾರತದಲ್ಲಿ ಬಿಡುಗಡೆಯಾಗಿದೆ. ಕಳೆದ ತಿಂಗಳಶ್ಟೇ ಪ್ರ್ಯಾಂಕ್‌ಪರ‍್ಟ್ ತಾನೋಡಗಳ ತೋರ‍್ಪಿನಲ್ಲಿ ಎರಡನೇ ತಲೆಮಾರಿನ ಬಲೆನೊ ಜಗತ್ತಿಗೆ ತೋರಿಸಲ್ಪಟ್ಟಿತ್ತು. ಬಾರತದಲ್ಲಿ ತಯಾರಿಸಲ್ಪಟ್ಟು ವಿದೇಶದಲ್ಲಿ ಮಾರಾಟಕ್ಕೆ ಅಣಿಗೊಂಡಿರುವ ಮಾರುತಿ ಸುಜುಕಿ ಕೂಟದ ಮೊದಲ ಬಂಡಿಯಿದು. ಮಾರುತಿ ಸುಜುಕಿಯವರ ನೆಲೆವೀಡು ಜಪಾನ್‌ಗೆ ಕೂಡ ಬಾರತದಲ್ಲಿ ಅಣಿಯಾದ ಬಲೆನೊ ರಪ್ತಾಗಲಿದ್ದು ಇದೇ ಮೊದಲು.  ಈ ಬಂಡಿ ಅಣಿಗೊಳಿಸಲೆಂದು ನೂರಾರು ಕೋಟಿ ಹಣ ಹೂಡಲಾಗಿದೆ ಎಂದು ಸುಜುಕಿ ಕೂಟ ಹೇಳಿಕೊಂಡಿದೆ. ಎರಡನೇ ತಲೆಮಾರಿನ ಬಲೆನೊದತ್ತ ಕಣ್ಣು ಹಾಯಿಸಿದರೆ ಈ ಮಾತು ದಿಟವೆನಿಸುತ್ತದೆ. ಮೊದಲ ಬಲೆನೊಗೂ ಹೊಸ ಬಲೆನೊಗೂ ಇಳೆ-ಆಗಸದಶ್ಟು ಅಂತರವೆನ್ನಬಹುದು. ಯಾಕೆಂದರೆ ಮೊದಲ ತಲೆಮಾರಿನ ಬಲೆನೊ ಸೆಡಾನ್ ಆಗಿದ್ದರೆ ಹೊಸ ತಲೆಮಾರಿನ ಬಲೆನೊ ಮೇಲ್ಮಟ್ಟದ ಕಿರುಹಿಂಗದ ಕಾರಾಗಿ ಬೀದಿಗಿಳಿದಿದೆ. ಹೆಸರು ಬಿಟ್ಟರೆ ಇವೆರಡರಲ್ಲಿ ಎಲ್ಲವೂ ಬೇರ‍್ಮೆಯಾಗಿದೆ. ಇದರಿಂದ ಹೊಸ ಬಲೆನೊಗೆ ಎರಡನೇ ತಲೆಮಾರಿನ ಬಲೆನೊ ಎನ್ನದೇ ಇರುವುದು ಲೇಸು.ಈ ಹೊಸ ಬಲೆನೊ ಮೇಲೆ ಒಂದು ಕಿರು ನೋಟ ಹಾಯಿಸೋಣ ಬನ್ನಿ.

ಬಿಣಿಗೆ:

ಬಲೆನೊಗೆಂದೇ ಹೊಸದಾದ ಒಂದು ಲೀಟರ್ ಅಳತೆಯ ಬೂಸ್ಟರ್ ಜೆಟ್ ಹೆಸರಿನ ಪೆಟ್ರೋಲ್ ಬಿಣಿಗೆಯನ್ನು ಬೆಳವಣಿಗೆ ಮಾಡಲಾಗಿದೆ. ಈ ಬಿಣಿಗೆ ಬಾರತದಲ್ಲಿ ಮಾರಾಟವಾಗುವ ಬಲೆನೊಗಳಿಗೆ ನೀಡಲಾಗಿಲ್ಲ. ಬಾರತದ ಕಾರೊಲವಿಗರಿಗೆ ಇದು ನಿರಾಶೆ ಮತ್ತು ಅಚ್ಚರಿ ಮೂಡಿಸಿದೆ. ನಂಬಿಕಸ್ತ ಕೆ12 ಬಿಣಿಗೆಯನ್ನು ಜೋಡಿಸಿದ ಬಲೆನೊ ಬಂಡಿಯನ್ನು ಬಾರತದ ಕೊಳ್ಳುಗರಿಗೆ ಪೆಟ್ರೋಲ್ ಆಯ್ಕೆಯಲ್ಲಿ ನೀಡಲಾಗಿದೆ. 1.2 ಲೀಟರ್ ಅಳತೆಯ ಕೆ-12 4 ಉರುಳೆಗಳ ಬಿಣಿಗೆ 84 ಪಿಎಸ್ ಕಸುವು ಉಂಟುಮಾಡಿ 115 ನ್ಯೂಟನ್ ಮೀಟರ್‌ನ ತಿರುಗುಬಲ ನೀಡಲಿದೆ. ಮಾರುತಿಯ ರಿಟ್ಜ್, ಸ್ವಿಪ್ಟ್, ಸೆಲೆರಿಯೊ, ಡಿಜಾಯರ್ ಹೀಗೆ ಹಲವಾರು ಮಾದರಿಗಳ ಲಕ್ಶಾಂತರ ಕಾರುಗಳಲ್ಲಿ ಕೆ-12 ಅಳವಡಿಸಲಾಗಿದ್ದು ಮಾರುತಿಯ ನಂಬಿಕಸ್ತ ಬಿಣಿಗೆ ಇದು.

ಡೀಸೆಲ್ ಆಯ್ಕೆಯಲ್ಲಿ ಹಳೆ ಹುಲಿ ಅದೇ 1.3 ಲೀಟರ್ ಅಳತೆಯ ಎಸ್‌ಡಿಇ ಡಿಡಿಆಯ್‌ಎಸ್ ಬಿಣಿಗೆ ಇರಲಿದೆ. 75 ಪಿಎಸ್ ಕಸುವಿನ ಈ ಬಿಣಿಗೆಯಿಂದ ಹೊರಬರುವ ತಿರುಗುಬಲ 190 ನ್ಯೂಟನ್ ಮೀಟರ್.

ಸುಮಾರು 900 ಮತ್ತು 1000 ಕೆಜಿ ತೂಕವಿರುವ ಪೆಟ್ರ‍ೋಲ್ ಮಾದರಿ ಮತ್ತು ಡೀಸೆಲ್ ಮಾದರಿಗಳನ್ನು ಬಹಳವೇ ಹಗುರಗೊಳಿಸಿ ಬಲೆನೊದ ಗೇಯ್ಮೆ (Performance) ಹೆಚ್ಚಿಸಲಾಗಿದೆ. ಡೀಸೆಲ್ ಬಿಣಿಗೆಯಲ್ಲಂತೂ ಸಾಕಶ್ಟು ಸುದಾರಿಸಿ ಮಯ್ಲಿಯೋಟ 27.39 ಕಿ.ಮೀ ಪ್ರತಿ ಲೀಟರ್‌ನಶ್ಟು ಮಾಡಲಾಗಿದೆ. ಪೆಟ್ರೋಲ್‌ನ ಮಾದರಿಯ ಮಯ್ಲಿಯೋಟ 21.4 ಕಿ.ಮೀ/ಲೀ.

Table1

ಸಾಗಣಿ (Transmission):

ಪೆಟ್ರೋಲ್ ಮಾದರಿಗಳಿಗೆ ಓಡಿಸುಗನ ಮತ್ತು ತನ್ನಿಡಿತದ ಎರಡು ಸಾಗಣಿ ನೀಡಲಾಗಿದೆ. ಪೆಟ್ರೋಲ್‌ನ ಓಡಿಸುಗನ ಹಾಗೂ ತನ್ನಿಡಿತದ ಸಾಗಣಿ ಎರಡರಲ್ಲಿ ಮಯ್ಲಿಯೋಟ ಒಂದೇ ಸಮನಾಗಿ ಇರುವಂತೆ ನೋಡಿಕೊಂಡಿದ್ದು ಮೆಚ್ಚುವ ಕೆಲಸ. ಇಲ್ಲಿ ಮಾರುತಿ ಸುಜುಕಿ ಕೂಟದವರು ಹೆಚ್ಚಿನ ಬೆವರು ಸುರಿಸಿದಂತೆ ತೋರುತ್ತದೆ. ಡೀಸೆಲ್ ಮಾದರಿಗಳಿಗೆ ಓಡಿಸುಗನಿಡಿತದ ಸಾಗಣಿ ಇರಲಿದೆ.

ಮಯ್ಕಟ್ಟು:

ಹೊರಮಯ್ ನೋಟದಲ್ಲಿ ಬಲೆನೊ ಬಂಡಿ ಅಂದವಾದ ಈಡುಗಾರಿಕೆ ಹೊಂದಿದೆ. ರೆಕ್ಕೆಯಂತೆ ಹೊರಚಾಚಿಕೊಂಡಿರುವ ಅಕ್ಕ-ಪಕ್ಕದ ಎರಡು ಕನ್ನಡಿಗಳು ಮಾರುತಿಯ ಎಸ್-ಕ್ರಾಸ್ ಬಂಡಿಯನ್ನು ನೆನಪಿಸುವುದು ದಿಟ. ನಾಲ್ಕು ಮೀಟರ್‌ಗಿಂತ ತುಸು ಕಡಿಮೆಯಿರುವ ಉದ್ದ, 1.745 ಮೀಟರ್ ಅಗಲದ ಬಲೆನೊ ನೋಡಲು ದೊಡ್ಡದೆನಿಸುತ್ತದೆ. ಹದವಾಗಿಸಿದ ಈಡುಗಾರಿಕೆ ಬಂಡಿಗೆ ಸಾಕಶ್ಟು ಹೊಸತನ ತರುವುದರೊಂದಿಗೆ ನೋಡುಗರ ಕಣ್ಣು ತುಂಬುವಂತಿದೆ. ಇದರಲ್ಲಿ ಮಾರುತಿ ಸುಜುಕಿಯವರಿಗೆ ನೂರಕ್ಕೆ ನೂರು ಅಂಕ ನೀಡಲೇಬೇಕು.

ಬಂಡಿಯ ಒಳಮಯ್ಮಾಟವೂ ಅಚ್ಚುಕಟ್ಟಾಗಿದೆ. 2.52 ಮೀಟರ್‌ಗಳವರೆಗೆ ಹರವು ಹೊಂದಿರುವ ಗಾಲಿಗಳು ಬಲೆನೊದ ಒಳಮಯ್‌ಗೆ ದೊಡ್ಡ ಜಾಗ ಒದಗಿಸಿವೆ. ಮುಂದಿರುವ ಓಡಿಸುಗವೆಡೆ(Driver Cabin) ಹಿಂಬಾಗ ಪಯಣಿಗರ ಕೂಡುವೆಡೆ ಸಾಕಶ್ಟು ಚಾಚಿಕೊಂಡಿದ್ದು ದೂರದ ಊರುಗಳಿಗೆ ಗಂಟೆಗಟ್ಟಲೆ ಸಾಗಲು ಯಾವುದೇ ಅಡ್ಡಿ ಆತಂಕಗಳಿಲ್ಲ.  ಬಲೆನೊದಲ್ಲಿ ಸರಕು ಚಾಚು ಒಟ್ಟು 339 ಲೀಟರ್ ಅಳತೆಯದ್ದು. ಸಣ್ಣ ಪುಟ್ಟ ಸರಕು, ಚೀಲಗಳಿಗೆ ತಕ್ಕನಾದ ಸರಕುಗೂಡು. ಬಾಗಿಲಗಳ ಬಳಿ ಬಾಟಲ್ ಇಡಲು ಬಾಟಲ್ ಸೇರುವೆ, ಓಡಿಸುಗನ ಪಕ್ಕದಲಿ ಚಹಾ/ಕಾಪಿ ಸೇರುವೆಗಳು ಇರುವುದರಿಂದ ನೀವು ಆರಾಮಾಗಿ ಕಾಪಿ ಸವಿಯುತ್ತ ಬಲೆನೊ ಬಂಡಿಯನ್ನು ಓಡಿಸಿಕೊಂಡು ಹೋಗಬಹುದು. ಓಡಿಸುಗನ ಮುಂದಿರುವ ತೋರುಮಣೆ (Dash board) ನೀಲಿ ಕಡಲಿನ ಬಣ್ಣದೊಂದಿಗೆ ಜಗಮಗಿಸಿದಶ್ಟೇ ಓಡಿಸುಗರಿಗೆ ಹೊಸ ಅನುಬವ ನೀಡುತ್ತದೆ.

Table2

ಒಳಬಾಗದ ಇನ್ನೊಂದು ವಿಶೇಶತೆಯೆಂದರೆ ತಿಳಿನಲಿ ಏರ‍್ಪಾಟು (Infotainment). 7 ಇಂಚಿನ ದೊಡ್ಡ ತೆರೆಯ ಬಲೆನೊದ ತಿಳಿನಲಿ ಏರ‍್ಪಾಟಿಗೆ ಓಡಿಸುಗರ ಬಳಿಯಿರುವ ಆಪಲ್ ಐ-ಪೋನ್‌ನೊಂದಿಗೆ ಸುಲಬವಾಗಿ ಜೋಡಿಸಬಹುದು. ಇದಕ್ಕೆಂದೇ ಆಪಲ್‌ನ ಕಾರ್-ಪ್ಲೇ (Car Play) ಬಳಕದ  ಒಡನುಡಿ (Interface) ನೀಡಿದ್ದು ಹಲವಾರು ಐ-ಪೋನ್ ಬಳಕೆದಾರರಿಗೆ ಇದು ಸಿಹಿ ಸುದ್ದಿ. ಮುಂಬರುವ ದಿನಗಳಲ್ಲಿ ಅಂಡ್ರ‍ಾಯ್ಡ್‌ಚೊಟಿಯುಲಿ ಬಳಕೆದಾರರಿಗೆ ನೆರವಾಗುವ ಅಂಡ್ರಾಯ್ಡ್ ಆಟೋ ಒಡನುಡಿ (Interface) ಇದರೊಂದಿಗೆ  ಕೂಡ ಇದರಲ್ಲಿ ಹೊರತರುವ ಸಾದ್ಯತೆಗಳಿವೆ.

2

ಬಾಗಿಲ ಬಳಿ ಮತ್ತು ಇನ್ನೂ ಕೆಲವೆಡೆ ಸಾದಾರಣ ಗುಣಮಟ್ಟ ಪ್ಲ್ಯಾಸ್ಟಿಕ್ ಮತ್ತು ಜಲ್ಲಿ ಬಳಕೆ ಮಾಡಿದ್ದು ಎದ್ದು ಕಂಡು ಕೊರತೆಯೆನ್ನಿಸಬಹುದು. ಇದನ್ನು ಬಿಟ್ಟರೆ ಬಲೆನೊ ಹೋಲಿಕೆಯಲ್ಲಿ ಬಹಳವೇ ಅಂದವೆನ್ನಬಹುದು.

ಹೋಲಿಕೆ:

ಹೋಲಿಕೆಯಲ್ಲಿ ಬಲೆನೊಗೆ ಹ್ಯುಂಡಾಯ್ ಆಯ್-20 (Hyundai i-20) ಮತ್ತು ಹೋಂಡಾದ ಜಾಜ್ (Honda Jazz) ನೇರ ಪಯ್ಪೋಟಿಗಾರರು.  ಮೂರು ಬಂಡಿಗಳ ಡೀಸೆಲ್ ಮಾದರಿಗಳನ್ನು ಹೋಲಿಸಿದರೆ 1.5 ಲೀಟರ್‌ನ ಜಾಜ್ 100 ಪಿಎಸ್ ಕಸುವಿನ ನೀಡಿ 200 ನ್ಯೂಟನ್‌ಮೀಟರ್ ತಿರುಗುಬಲ ಹೊರಹಾಕುತ್ತದೆ, ಅದೇ ಹ್ಯುಂಡಾಯ್‌ನ 1.4 ಲೀಟರ್ ಅಳತೆಯ ಬಿಣಿಗೆ 90 ಪಿಎಸ್ ಕಸುವಿನ 220 ನ್ಯೂಟನ್ ಮೀಟರ್ ತಿರುಗುಬಲ ಉಂಟುಮಾಡುವಂತದ್ದು. ಇದರಲ್ಲಿ ಬಲೆನೊ ತುಸು ಹಿಂದೆ ಬಿದ್ದಿದೆ. ಪೆಟ್ರೋಲ್ ಮಾದರಿಗಳಲ್ಲೂ ಜಾಜ್ ಮತ್ತು ಆಯ್-20 ಬಂಡಿಗಳಲ್ಲಿರುವ ಬಿಣಿಗೆಗಳು ಬಲೆನೊ ಮುಂದೆ ತುಸು ಮೇಲುಗಯ್ ಕಾಯ್ದುಕೊಂಡಿವೆ.

Table3

ಆದರೆ ಮಯ್ಲಿಯೋಟದ ವಿಶಯದಲ್ಲಿ ಜಾಜ್ ಮತ್ತು ಆಯ್-20 ಬಂಡಿಯ ಬಿಣಿಗೆಗಳು ಬಲೆನೊಗೆ ತಲೆಬಾಗುತ್ತವೆ. ಪ್ರತಿ ಲೀಟರ್ ಡೀಸೆಲ್‌ಗೆ 27.3 ಕಿ.ಮೀ ಸಾಗುವ ಜಾಜ್ ಬಲೆನೊಗೆ ಬಿರುಸಾದ ಪಯ್ಪೋಟಿಯೊಡ್ಡಿದೆ. ಪೆಟ್ರೋಲ್ ಮಾದರಿಗಳ ಮಯ್ಲಿಯೋಟದಲ್ಲಿ ಬಲೆನೊ ಗೆಲುವಿನ ಕುದುರೆಯಾಗಿ ಹೊರಹೊಮ್ಮಿದೆ ಎನ್ನಬಹುದು.

ಆಯಗಳ ವಿಶಯಕ್ಕೆ ಬಂದರೆ ಬಲೆನೊದ ಉದ್ದ, ಅಗಲ ಜಾಜ್ ಮತ್ತು ಆಯ್-20ಗಿಂತ ಹೆಚ್ಚು. ಆದರೆ ಹೋಂಡಾದ ಜಾಜ್ ಬಲೆನೊ ಮತ್ತು ಅಯ್-20ಗಿಂತ ಎತ್ತರವಾಗಿದೆ. ಈ ಮೂರು ಬಂಡಿಗಳ ಹೋಲಿಕೆಯನ್ನು ಕೆಳಕಂಡ ಪಟ್ಟಿಯಲ್ಲಿ ವಿವರವಾಗಿ ನೋಡಬಹುದು.

Table4

ಬೆಲೆ:

ಮಾರುತಿ ಸುಜುಕಿಗಿಂತ ಬಾರತೀಯ ಕೊಳ್ಳುಗರ ನಾಡಿಮಿಡಿತ ಬಲ್ಲವರುಂಟೇ? ಹವ್ದು ಮಾರುತಿ ಸುಜುಕಿ ಕೂಟದವರಿಗೆ ಕೊಳ್ಳುಗರ ಬೇಕು ಬೇಡಗಳ ತಕ್ಕ ಅರಿವಿದ್ದು, ಬೆಲೆಯ ಪಯ್ಪೋಟಿಯಲ್ಲಿ ಇವರನ್ನು ಸೋಲಿಸುವುದು ಕಶ್ಟದ ಮಾತು.  ಬಲೆನೊದ ಪೆಟ್ರ‍ೋಲ್ ಮಾದರಿ 4.99 ರಿಂದ 7.11 ಲಕ್ಸ ರೂ.ಗಳಲ್ಲಿ ದೊರೆಯಲಿದೆ. ಡೀಸೆಲ್ ಮಾದರಿ ರೂ.6.16 ರಿಂದ 8.11 ಲಕ್ಶಗಳವರೆಗೆ ಇರಲಿದೆ.

Price table

ಸಿಗ್ಮಾ, ಡೆಲ್ಟಾ, ಜೀಟಾ, ಅಲ್ಪಾ ಎಂಬ ನಾಲ್ಕು ವಿವಿದ ಬಗೆಗಳು ಹಾಗೂ ಕೆಂಪು, ಬೆಳ್ಳಿ, ಕಿತ್ತಳೆ, ಬಿಳಿ, ನೀಲಿ ಮತ್ತು ಕಂದು ಹೀಗೆ 6 ಬಣ್ಣಗಳ ಬಲೆನೊ ಮಾರುಕಟ್ಟೆಯಲ್ಲಿ ಸಿಗಲಿದೆ. ಎಲ್ಲರ ಕಣ್ಸೆಳೆಯುವ ಪ್ರಮುಕ ಸಂಗತಿಯೆಂದರೆ ಎಲ್ಲ ಮಾದರಿ/ಬಗೆಯ ಬಲೆನೊ ಕಾರುಗಳಲ್ಲಿ ಮುಂಬದಿಯ ಎರಡು ಗಾಳಿ ಚೀಲ (Air Bags) ಮತ್ತು ಸಿಲುಕದ ತಡೆತದ ಏರ‍್ಪಾಟು (ABS) ಅಳವಡಿಸಿದ್ದು. ಬಲೆನೊದಲ್ಲಿ ಪಯಣಿಸುವವರು ಕಾಪಿನ (Safety) ವಿಶಯದಲ್ಲಿ ಯಾವುದೇ ರಾಜಿ ಮಾಡುವುದು ಬೇಡ ನಿಮ್ಮ ಕಾಪಿಗೆ ಹೆಚ್ಚಿನ ಬೆಲೆ ಕೊಡಬೇಕಿಲ್ಲ ಇದಕ್ಕೆ ತಕ್ಕ ಏರ‍್ಪಾಟುಗಳನ್ನು ಎಲ್ಲ ಮಾದರಿ/ಬಗೆಯ ಬಲೆನೊದಲ್ಲಿ ಸಿಗಲಿದೆ ಎಂದು ಮಾರುತಿ ಸುಜುಕಿ ಹೇಳ ಹೊರಟಿದೆ.

ಮಾರುತಿ ಬಲೆನೊದ ಕೊಳ್ಳುವಿಕೆಯ ಬರಾಟೆಯೂ ಹಬ್ಬದ ದಿನಗಳಲ್ಲಿ ಜೋರಾಗೇ ಇದ್ದಂತೆ ತೋರುತ್ತದೆ, ಇದಕ್ಕೆ ಇಂಬು ನೀಡುವಂತೆ ಬಿಡುಗಡೆಯಾದ ಎರಡೇ ದಿನಗಳಲ್ಲಿ 4600 ಮಂದಿ ಬಂಡಿಯನ್ನು ಕಾಯ್ದಿರಿಸಿದ್ದಾರೆ. ಇದರಿಂದ ಹೊಸದಾಗಿ ಬಲೆನೊ ಬಂಡಿಯನ್ನು ಮುಂಗಡ ಕಾಯ್ದಿರಿಸುವವರು 2 ತಿಂಗಳು ಕಾಯಬೇಕು. ನೀವು ಬಲೆನೊ ಕೊಂಡು ಕೊಳ್ಳುವ ಮನಸ್ಸು ಮಾಡಿದ್ದರೆ ನಿಮ್ಮೂರಿನ ಹತ್ತಿರದ ಹೊಸ ನೆಕ್ಸಾ (NEXA) ಮಳಿಗೆಗಳಿಗೆ ಬೇಟಿ ನೀಡಬಹುದು.

(ಮಾಹಿತಿ ಮತ್ತು ತಿಟ್ಟ ಸೆಲೆNexaexperience.comAutocarindia.comOverdrive.in)

 

 

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks