ಹೆಚ್ಚು ಗಮನವಿಟ್ಟು ಕೆಲಸ ಮಾಡುವುದು ಹೇಗೆ?

– ರತೀಶ ರತ್ನಾಕರ.

Gamana_Thitta

ಕೆಲಸದ ಕಡತವನ್ನು ಗಮನವಿಟ್ಟು ಓದುವಾಗ ಇಲ್ಲವೇ ತರಗತಿಯ ಪಾಟಗಳನ್ನು ಗಮನವಿಟ್ಟು ಕೇಳುವಾಗ, ನಮಗೇ ತಿಳಿಯದಂತೆ ಯಾವುದಾದರು ಸಿನಿಮಾ, ಆಟ ಇಲ್ಲವೇ ತಿರುಗಾಟದ ಕಡೆಗೆ ಮನಸ್ಸು ಹೊರಳಿರುತ್ತದೆ. ಕೂಡಲೇ ಎಚ್ಚರವಾದಂತೆ ಆಗುತ್ತದೆ, ಓದುವುದನ್ನು ಬಿಟ್ಟು ಗಮನ ಬೇರೆಡೆಗೆ ಹರಿದಿರುವುದು ನಮ್ಮ ಅರಿವಿಗೆ ಬರುತ್ತದೆ. ತಿರುಗಿ ಓದಲು/ಪಾಟ ಕೇಳಲು ಪ್ರಯತ್ನಿಸುತ್ತೇವೆ. ಅಲ್ಲಿ ಕೊಂಚ ಹೊತ್ತು ಗಮನವಿರುತ್ತದೆ, ಮತ್ತೆ ಇನ್ನೆಲ್ಲೋ ಮನಸ್ಸು ಹರಿಯುತ್ತದೆ…

ಗಮನವಿಟ್ಟು ಕೆಲಸ ಮಾಡುತ್ತಿರುವಾಗ ಹೀಗೆ ಮನತಿರುಗುವುದು( mind wandering), ಹಗಲುಗನಸು ಕಾಣುವುದು ತುಂಬಾ ಸಾಮಾನ್ಯ. ಕೆಲವೊಮ್ಮೆ ಇದು ಹೆಚ್ಚಾದಾಗ ಕೆಲಸವನ್ನು ಮುಂದುವರಿಸಲಾಗದೆ ಹಿಡಿದ ಕೆಲಸವನ್ನು ಅಲ್ಲಿಗೇ ಕೈಬಿಡುವುದೂ ಇದೆ. ಇಂತಹ ತೊಂದರೆಗಳು ತುಂಬಾ ಸಾಮಾನ್ಯ. ಈ ತೊಂದರೆಯಿಂದ ತಪ್ಪಿಸಿಕೊಳ್ಳುವುದು ಕೂಡ ತುಂಬಾ ಸುಲಬ!

ಮನೆಯಲ್ಲಿ ಒಂದು ಚೆಂದದ ಹೂವಿನ ಗಿಡ ಇರುತ್ತದೆ. ಇದ್ದಕ್ಕಿದ್ದ ಹಾಗೆ ಅದರ ಬೇರುಗಳಿಗೆ ಹುಳ ಹಿಡಿದು ಗಿಡವು ಬಾಡುತ್ತಾ ಹೋಗುತ್ತದೆ. ಆಗ ಗಿಡಕ್ಕೆ ನೀರು ಕಡಿಮೆ ಆಗಿದೆ ಎಂದು ಹೆಚ್ಚು ನೀರು ಹಾಕುವುದಾಗಲಿ, ಬಿಸಿಲಾಗಿದೆ ಎಂದು ನೆರಳನ್ನು ನೀಡುವುದಾಗಲಿ ಮಾಡಿದರೆ ಗಿಡವು ಉಳಿಯುವುದಿಲ್ಲ. ಗಿಡದ ಬೇರನ್ನು ಕೊರೆಯುತ್ತಿರುವ ಹುಳಕ್ಕೆ ಮದ್ದನ್ನು ಹಾಕಿ ಸಾಯಿಸಬೇಕು ಆಗ ಗಿಡವು ಮತ್ತೆ ಹುರುಪು ಪಡೆದುಕೊಳ್ಳುತ್ತದೆ. ಗಮನ ಕೆಡುವ ತೊಂದರೆಯೂ ಹಾಗೆ, ಗಮನವನ್ನು ಕೆಡಿಸುತ್ತಿರುವ ಸೆಲೆಯನ್ನು ಕಂಡುಹಿಡಿಯಬೇಕು, ತೊಂದರೆಯ ಬೇರನ್ನು ಕಂಡುಹಿಡಿದು ಬಗೆಹರಿಸಬೇಕು. ಅದಕ್ಕಾಗಿ ಗಮನ ಕೆಡುವುದರ ಇಟ್ಟಳವನ್ನು (structure) ತಿಳಿದುಕೊಳ್ಳಬೇಕಾಗುತ್ತದೆ.

ಗಮನ ಕೆಡುವುದರಲ್ಲಿ ನಾಲ್ಕು ಹಂತಗಳಿವೆ.
1. ಮೊದಲು, ಮಾಡಬೇಕಾದ ಕೆಲಸವನ್ನು ಆರಿಸಲಾಗುತ್ತದೆ. ಮೇಲೆ ನೋಡಿದಂತೆ ಅದು ಓದು, ಬರಹ, ಕಚೇರಿಯ ಕೆಲಸ ಯಾವುದು ಬೇಕಾದರೂ ಆಗಿರಬಹುದು. ಅದನ್ನು ಗಮನವಿಟ್ಟು ಮಾಡುವಂತೆ ಮನಸ್ಸು ತೀರ‍್ಮಾನ ತೆಗೆದುಕೊಳ್ಳುತ್ತದೆ.
2. ಕೆಲಸ ಆರಂಬಿಸಿದ ಕೆಲವೇ ಹೊತ್ತಿನಲ್ಲಿ ಗಮನ ಬೇರೆಡೆಗೆ ಹೋಗುತ್ತದೆ. ಆದರೆ ಇದು ಮನಸ್ಸಿನ ಅರಿವಿಗೆ ಬಂದಿರುವುದಿಲ್ಲ. ನಮಗೆ ತಿಳಿಯದಂತೆ ಯಾವುದೋ ಬೇರೆ ಸುದ್ದಿಯ ಬಗ್ಗೆ ಮನಸ್ಸು ಯೋಚಿಸುತ್ತಿರುತ್ತದೆ.
3. ಸ್ವಲ್ಪ ಹೊತ್ತಿನ ಬಳಿಕ ತಟ್ಟನೆ ಮನಸ್ಸಿಗೆ ಎಚ್ಚರವಾಗುತ್ತದೆ. ‘ನಾನು ಮಾಡಬೇಕಾದ ಕೆಲಸ ಇದಾಗಿರಲಿಲ್ಲ.’ ಎಂದು ಅರಿವಿಗೆ ಬರುತ್ತದೆ. ಕೆಲವೊಮ್ಮೆ, ಮಾಡುತ್ತಿರುವ ಕೆಲಸಕ್ಕೆ ಒಂದು ಚೂರು ನಂಟಿಲ್ಲದ ಸುದ್ದಿಯ ಕಡೆಗೆ ಮನಸ್ಸು ತಿರುಗಿರುತ್ತದೆ. ಎತ್ತುಗೆಗೆ, ಹೊಸ ಹಮ್ಮುಗೆಯ(project) ವಿವರಗಳನ್ನು ಓದಿ ತಿಳಿಯುತ್ತಿರುವಾಗ ಯಾವುದೋ ಮದುವೆ ಮನೆಯಲ್ಲಿ ಜಾಮೂನು ತಿನ್ನುವ ಕಡೆಗೆ ಮನಸ್ಸು ಹರಿದಿರುತ್ತದೆ.
4. ಮನಸ್ಸಿಗೆ ಎಚ್ಚರವಾದ ಮೇಲೆ ಮಾಡುತ್ತಿದ್ದ ಕೆಲಸದಡೆಗೆ ತಿರುಗಿ ಗಮನಹರಿಸುವುದು. ತಿರುಗಿ ಕೆಲಸಮಾಡುವುದೋ ಇಲ್ಲವೇ ಅಲ್ಲಿಗೇ ಕೈಬಿಡುವುದೋ ಎಂಬ ಆಯ್ಕೆ ನಮ್ಮ ಕೈಯಲ್ಲಿ ಇರುತ್ತದೆ.

ಮೇಲಿನ ನಾಲ್ಕು ಹಂತಗಳನ್ನು ನೋಡಿದಾಗ, 1 ಮತ್ತು 4 ನೇ ಹಂತಗಳು ಅರಿವಿಗೆ ಎಟಕುವ ಹಂತಗಳು. ಅಂದರೆ ಈ ಕೆಲಸಗಳು ಆಗುವುದು ನಮ್ಮ ಅರಿವಿಗೆ ಬರುತ್ತವೆ. ಈ ಕೆಲಸಗಳನ್ನು ಶುರುಮಾಡುವುದು ಇಲ್ಲವೇ ನಿಲ್ಲಿಸುವುದು ನಮ್ಮ ಹಿಡಿತದಲ್ಲಿ ಇರುತ್ತದೆ. ಆದರೆ 2 ಮತ್ತು 3 ನೇ ಹಂತಗಳು ನಮ್ಮ ಅರಿವಿಗೆ ಎಟುಕುವುದಿಲ್ಲ. ನಮಗೆ ಗೊತ್ತೇ ಆಗದಂತೆ ಈ ಕೆಲಸಗಳು ಆಗಿಬಿಡುತ್ತವೆ. 2 ನೇ ಹಂತದಲ್ಲಿ, ಅರಿವಿಗೆ ಎಟುಕದ ಬಲವೊಂದು ಮನತಿರುಗುವಂತೆ ಮಾಡುತ್ತದೆ. ಇನ್ನು 4 ನೇ ಹಂತವು, ಅರಿವಿಗೆ ಬಾರದ ಬಲವೊಂದು ಮನಸ್ಸನ್ನು ಎಚ್ಚರಗೊಳಿಸುತ್ತದೆ. ಇದೇ ಗಮನ ಕೆಡುವುದರ ಇಟ್ಟಳ.

ಈ ತೊಂದರೆಗೆ ಬಗೆಹರಿಕೆ:
ಇದು ಸುಲಬ. ಗಮನ ಹೇಗೆ ಕೆಡುತ್ತಿದೆ ಎಂದು ಗುರುತಿಸುವುದು. ಅಂದರೆ ಎಂದಿನ ಕೆಲಸದಲ್ಲಿ ಮೇಲಿನ ನಾಲ್ಕು ಹಂತಗಳಲ್ಲಿ ಗಮನ ಕೆಡುವುದನ್ನು ಗುರುತಿಸುತ್ತಾ ಹೋಗುವುದೇ ಇದರ ಬಗೆಹರಿಕೆ. ಆದರೆ ಒಂದೇ ಸಲಕ್ಕೆ ಇದು ಬಗೆಹರಿಯುವುದಿಲ್ಲ. ಮೊದಲು, ಗಮನ ಕೆಡುವುದರಲ್ಲಿ ಇರುವ ನಾಲ್ಕು ಹಂತಗಳನ್ನು ಮೆದುಳು ಬಿಡಿಬಿಡಿಯಾಗಿ ಗುರುತಿಸುವುದು. ಮೊದಮೊದಲು ಕೆಲಸ ಆರಂಬಿಸಿದ ನಾಲ್ಕು ನಿಮಿಶದಲ್ಲಿ ಗಮನ ಕೆಡುತ್ತಿದ್ದರೆ, ಈ ಪಳಗಿಕೆ(practice)ಯಿಂದ ಐದು, ಹತ್ತು ಇಲ್ಲವೇ ಹದಿನೈದು ನಿಮಿಶಗಳ ಬಳಿಕ ಕೆಡುವುದು. ಅಂದರೆ, ಗಮನ ಕೆಡುವ ಮೊದಲು ಕೆಲಸದಲ್ಲಿ ಕಳೆಯುವ ಹೊತ್ತು ಹೆಚ್ಚಾಗುತ್ತಾ ಹೋಗುತ್ತದೆ.

ಈ ಬಗೆಹರಿಕೆಯನ್ನು ಮುಂದುವರೆಸಿದರೆ, ಮನಸ್ಸು ಎಚ್ಚರವಾದ ಮೇಲೆ ಹಿಡಿದ ಕೆಲಸವನ್ನು ಕೈಬಿಟ್ಟು ಮೇಲೇಳುವುದಕ್ಕಿಂತ, ಮತ್ತೆ ಕೆಲಸವನ್ನು ಮುಂದುವರಿಸುವಂತೆ ಆಗುತ್ತದೆ. ಮನತಿರುಗುವ ಹೊತ್ತು ಕೂಡ ಕಡಿಮೆಯಾಗುತ್ತಾ ಹೋಗುತ್ತದೆ. ಮನತಿರುಗಿದರೂ ನೀವು ಮಾಡುತ್ತಿರುವ ಕೆಲಸಕ್ಕೆ ಹತ್ತಿರದ ನಂಟಿರುವ ಸುದ್ದಿಯತ್ತ ಮನತಿರುಗುತ್ತದೆ. ಎತ್ತುಗೆಗೆ, ಈ ವರುಶ ಬಂಡಿಯನ್ನು ಕೊಳ್ಳುವುದೋ ಬೇಡವೋ ಎಂಬ ತೀರ‍್ಮಾನದತ್ತ ಯೋಚಿಸುವಾಗ, ಮಾರುಕಟ್ಟೆಯಲ್ಲಿರುವ ಹೊಸ ಬಂಡಿಗಳತ್ತ ಮನತಿರುಗುವುದು.

ಮಾಡುವ ಒಂದೊಂದು ಕೆಲಸದಲ್ಲಿಯೂ ಹೀಗೆ ಗಮನ ಕೆಡುವುದನ್ನು ಗುರುತಿಸುತ್ತಾ ಹೋದರೆ, ಕೆಲಸದೆಡೆಗಿನ ಗಮನವು ಹಂತ ಹಂತವಾಗಿ ಗಟ್ಟಿಯಾಗುತ್ತಾ ಹೋಗುತ್ತದೆ. ಯಾವುದೇ ಕೆಲಸವಾಗಲಿ, ತೀರ‍್ಮಾನಗಳಾಗಲಿ ಗಮನವಿಟ್ಟು ಮಾಡಿದರೆ ಅದರಲ್ಲಿ ಗೆಲುವು ಸಿಗುತ್ತದೆ. ಕೆಲಸದ ನಡುವೆ ಹೆಚ್ಚು ಗಮನ ಕೆಡದಿರಲಿ. ಹಾಗೇನಾದರು ಆಗುತ್ತಿದ್ದರೆ ಅದು ಹೇಗೆ ಕೆಡುತ್ತಿದೆ ಎಂದು ಗುರುತಿಸುತ್ತಾ ಹೋಗಿ. ಅಶ್ಟೆ.

(ಮಾಹಿತಿ ಸೆಲೆ: hbr.org)
(ಚಿತ್ರಸೆಲೆ: honalu.net)

1 ಅನಿಸಿಕೆ

  1. ಮಾಹಿತಿ ಚೆನ್ನಾಗಿದೆ . ಆದರೆ ಅನುಸರಿಸುವುದು ಕಷ್ಟ .

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.