ನುಡಿಯೆಲ್ಲ ತತ್ವ ನೋಡಾ!

ಮೇಟಿ ಮಲ್ಲಿಕಾರ‍್ಜುನ.

Allama-Prabhu-blog

ಅಲ್ಲಮನ ಈ ಮುಂದಿನ ವಚನವೊಂದರ ಮೂಲಕ ‘ನಮಗೆ ಬೇಕಾಗಿರುವ ಬದುಕಿನ ದಾರಿಗಳು’ ಎಂತಹವು? ಅಂತಹ ದಾರಿಯೊಂದನ್ನು ರೂಪಿಸಿಕೊಳ್ಳಲು ‘ನುಡಿ ಹೇಗೆ ಒತ್ತಾಸೆಯಾಗಬಲ್ಲದು’ ಎಂಬುದನ್ನು ಚರ‍್ಚಿಸುವುದು ಈ ಟಿಪ್ಪಣಿಯ ಗುರಿಯಾಗಿದೆ. ಏಕೆಂದರೆ ಬದುಕಿನ ಚಲನಶೀಲತೆಗೆ ನುಡಿ ಕಾರಣವಾಗುವ ಹಾಗೆಯೇ, ಬದುಕಿನ ದಾರಿಗಳನ್ನು ತಪ್ಪಿಸುವಲ್ಲಿಯೂ ಮೊದಲ ಕಾರಣವೇ ನುಡಿ ಆಗಿರುತ್ತದೆ. ಹಾಗಾಗಿ ನುಡಿಯೊಂದು ಯಾವತ್ತಿಗೂ ನಿರ‍್ಲಿಪ್ತವಾಗಿರುವ ವಿದ್ಯಮಾನವಾಗಿರಲಾರದು. ಆ ಕಾರಣವಾಗಿ ಬದುಕಿನ ಹಲವು ವಿನ್ಯಾಸಗಳನ್ನು ಸೂಚಿಸುವ ಸೂಚಕವಾಗಿ ನುಡಿಯೊಂದು ಮುಂಚೂಣಿಗೆ ಬಂದಿರುತ್ತದೆ ಎಂಬೀ ದಿಟವನ್ನು ಒಪ್ಪಿ ನಾನು ಈ ಬರಹವನ್ನು ಬರೆಯಲು ಮುಂದಾಗಿರುತ್ತೇನೆ.

ತನ್ನ ತಾನರಿದಡೆ ನುಡಿಯೆಲ್ಲ ತತ್ವ ನೋಡಾ!
ತನ್ನ ತಾ ಮರೆದಡೆ ನುಡಿಯೆಲ್ಲ ಮಾಯೆ ನೋಡಾ!
ಅರಿದು ಮರೆದು ಶಿವಯೋಗಿಯ ಶಬ್ದವೆಲ್ಲವು
ಉಪದೇಶವಲ್ಲದೇ ಭಿನ್ನವುಂಟೆ?
ನಿನ್ನ ಮನದ ಕಳವಳವ ತಿಳುಹಲೆಂದು ಮಾತನಾಡಿಸಿ ನೋಡಿದಡೆ,
ಎನ್ನ ಮನದೊಳಗೆ ಕಂದು ಕಲೆ ಎಂಬುದಿಲ್ಲ ನೋಡಾ!
ನಮ್ಮ ಗುಹೇಶ್ವರಲಿಂಗಕ್ಕೆ ನೀನು ಕರುಣದ ಶಿಶುವಾದ ಕಾರಣ
ಬಾಯ್ದೆಗೆದೆನಲ್ಲದೆ, ಭಿನ್ನವುಂಟೆ ಹೇಳಾ!

 

ಅಲ್ಲಮನನ್ನು ಕುರಿತು ಈಗಾಗಲೆ ಸಾಕಶ್ಟು ಬರಹಗಳು ಬಂದಿವೆ. ಅವರ ವಚನಗಳನ್ನೂ ಕುರಿತು ಇನ್ನೂ ಹೆಚ್ಚಿನ ಬರಹಗಳು ಬಂದಿರುತ್ತವೆ. ಆದರೂ ಅಲ್ಲಮನ ವಚನವೊಂದನ್ನು ಕುರಿತು ಒಂದಿಶ್ಟು ಚರ‍್ಚೆಗಳನ್ನು, ನುಡಿಯರಿಮೆ ನೆಲೆಯಿಂದ ಬೆಳೆಸುವುದು ಮಾತ್ರ ಈ ಟಿಪ್ಪಣಿಯ ಗುರಿಯಾಗಿದೆ. ಅಂದರೆ ನುಡಿಯನ್ನೇ ನೆಲೆಯಾಗಿಸಿಕೊಂಡಿರುವ ಅಲ್ಲಮನ ಈ ವಚನವನ್ನು ಮಾತ್ರ ಎದುರಿಗೆ ಇಟ್ಟುಕೊಂಡು ಇಲ್ಲಿಯ ಚರ‍್ಚೆಗಳು ಮೈದಾಳುತ್ತವೆ. ಇಲ್ಲಿಯ ಯಾವ ಚರ‍್ಚೆಯು ಕೂಡ ತನ್ನಶ್ಟಕ್ಕೆ ತಾನು ಸ್ವತಂತ್ರವೂ ಅಲ್ಲ ಮತ್ತು ಸ್ವಾಯತ್ತವೂ ಅಲ್ಲ. ಅಂತಹವೊಂದು ಸ್ವಾತಂತ್ರ್ಯ ಹಾಗೂ ಸ್ವಾಯತ್ತತೆ ಯಾವುದೆ ತಿಳಿವು ಇಲ್ಲವೇ ಚಿಂತನೆಯೊಟ್ಟಿಗೆ ಪ್ರತ್ಯೇಕವಾಗಿ ನೆಲೆಗೊಳ್ಳಲಾರದು. ತಿಳಿವು ಯಾವತ್ತಿಗೂ ಸಮೂಹಗಳ ಒಡಲಿಂದಲೇ ಹೊರಹೊಮ್ಮುತ್ತದೆ. ಹೀಗೆ ಹೊರಹೊಮ್ಮುವ ತಾತ್ವಿಕ ಚೌಕಟ್ಟುಗಳು ಎದುರಿಸಬಹುದಾದ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಎಂತಹವು? ಮತ್ತು ಅವುಗಳ ಪರಿಣಾಮದಿಂದ ಸಮೂಹಗಳು ಅನುಬವಿಸುವ ಇಕ್ಕಟ್ಟುಗಳ ಸ್ವರೂಪ ಯಾವ ಬಗೆಯದು? ಎಂಬುದನ್ನು ವಿವರಿಸುವುದು ಈ ವಚನದ ಆಶಯವಾಗಿದೆ. ಇಂತಹ ಆಶಯಗಳನ್ನು ಸಮುದಾಯಗಳ ವಿನ್ಯಾಸಗಳೊಂದಿಗೆ ಮುಕಾಮುಕಿ ಆಗಿಸಿದರೆ, ಹುಟ್ಟಿಕೊಳ್ಳಬಹುದಾದ ಸಾಮಾಜಿಕ ಬಿಕ್ಕಟ್ಟುಗಳು ಎಂತಹವು ಎಂಬುದನ್ನು ಈ ಚರ‍್ಚೆಗಳು ಎತ್ತಿ ತೋರಿಸುತ್ತವೆ. ಒಂದು ಸಂಗತಿಯನ್ನು ಮೊದಲೇ ನಿಚ್ಚಳಪಡಿಸಿಕೊಳ್ಳಬೇಕು. ಅದೇನೆಂದರೆ ನುಡಿ ಕುರಿತು ಅಲ್ಲಮನ ಈ ವಚನವು ಕನ್ನಡವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಹೇಳಿರುವ ಮಾತಲ್ಲ. ಒಟ್ಟಾರೆ ನುಡಿಯ ತಾತ್ವಿಕತೆಯನ್ನು, ಮಹತ್ವವನ್ನು ಹಾಗೂ ಮನೋದರ‍್ಮವನ್ನು ಕಂಡರಿಸುವ ನಿಲುವುಗಳು ಇದರಲ್ಲಿ ಅಡಕವಾಗಿವೆ. ಇದೊಂದು ರೀತಿಯಲ್ಲಿ ನುಡಿಯನ್ನು ಕುರಿತು, ಆ ನುಡಿ ಮೂಲಕವೇ ಬಿಡಿಸಿ ಹೇಳುವ ಬಗೆಯಾಗಿದೆ. ಇಂತಹ ಮೆಟಾಲಿಂಗ್ವಿಸ್ಟಿಕ್ ಸ್ವರೂಪದ ವಿವರಗಳನ್ನು ತಾತ್ವಿಕಗೊಳಿಸುವುದು ಅಶ್ಟೊಂದ ಸುಳುವಾದ ಸಂಗತಿಯಲ್ಲ. ಬಾಶಾಶಾಸ್ತ್ರದಲ್ಲಿ ಇಂತಹ ಚಿಂತನೆಯನ್ನು ನುಡಿ ತತ್ವಶಾಸ್ತ್ರವೆಂದು ಕರೆಯುತ್ತಾರೆ. 

ಈ ನುಡಿ ತತ್ವಶಾಸ್ತ್ರವು ಕನ್ನಡದಲ್ಲಿ ಒಂದು ಶಾಸ್ತ್ರೀಯ ನೆಲೆಯಾಗಿ ಇದುವರೆಗೂ ಬೆಳೆದು ಬರಲಿಲ್ಲ [ಕೆಲವು ಅಪವಾದಗಳನ್ನು ಹೊರತುಪಡಿಸಿ ಈ ಮಾತನ್ನು ಹೇಳುತ್ತೇನೆ]. ಆದರೆ ಸಾಹಿತ್ಯದಲ್ಲಿ ಹಾಗೂ ನುಡಿ ಮತ್ತು ಸಂಸ್ಕ್ರುತಿ ಕುರಿತ ಬರಹಗಳಲ್ಲಿ ಈ ನುಡಿ ತತ್ವಶಾಸ್ತ್ರೀಯ ಚಿಂತನೆಗಳು ಪ್ರಕಟಗೊಂಡಿರುವುದನ್ನು ಕಾಣಬಹುದು. ಇಂತಹ ಮೆಟಾಲಿಂಗ್ವಿಸ್ಟಿಕ್ ಚಿಂತನೆಗಳ ಹಿಂದೆ ಸಮೂಹಗಳ ಏಳ್ಗೆಯನ್ನು ಕಾಣುವ ಇರಾದೆಯು ಅಂತಸ್ತವಾಗಿರುತ್ತದೆ. ಇಂತಹ ಚಿಂತನೆಗಳು, ಪ್ರಜಾಪ್ರಬುತ್ವದ ಮಾದರಿಯಲ್ಲಿ ಕೆಲಸ ಮಾಡುತ್ತವೆ. ಅಂದರೆ ಆಯಾ ಸಮಾಜಿಕರ ಅಬಿವ್ಯಕ್ತಿಗಳ ನಂಬಿಕೆಯನ್ನು ವೈಚಾರಿಕಗೊಳಿಸುವ ನೆಲೆಯಾಗಿರುತ್ತವೆ. ಸಮೂಹಗಳ ಒಡಲಲ್ಲಿ ಹುದುಗಿರುವ ಅಸಮಾನ ರಚನೆಗಳ ವಿನ್ಯಾಸಗಳನ್ನು ವೈಚಾರಿಕವಾಗಿ ಸರಿಪಡಿಸುವ ಮಾದರಿಗಳು ನುಡಿಯ ಇಂತಹ ತಾತ್ವಿಕ ಚೌಕಟ್ಟುಗಳಲ್ಲಿ ಸಿಗುತ್ತವೆ. ಮನುಶ್ಯ ತನ್ನ ಬುದ್ದಿಯನ್ನು ಯತಾವತ್ತಾಗಿ ಬಳಸುವುದಕ್ಕೆ ಮತ್ತು ಆ ಹೊತ್ತಿನ ವಾಸ್ತವವನ್ನು ಅರಿವುದಕ್ಕೆ ಮಾತ್ರ ಸೀಮಿತನಾಗದೇ, ಇಂತಹ ಯತಾಸ್ತಿತಿ ಮತ್ತು ವಾಸ್ತವವನ್ನು ಬದಲಾಯಿಸುವ ನಿಲುವುಗಳನ್ನು ಹೊಂದಿರುತ್ತಾನೆ. ಗ್ರಹಿಕೆಯ ಮೂಲತತ್ವಗಳ ಬೆಳವಣಿಗೆ, ಬದಲಾವಣೆ ಹಾಗೂ ವೈಚಾರಿಕಗೊಳಿಸುವ ಮಾದರಿಗಳು ನುಡಿಯಿಂದಲೇ ಮೊದಲಾಗುತ್ತವೆ.

ಸಾಂಸ್ಕ್ರುತಿಕ, ರಾಜಕೀಯ ಹಾಗೂ ಶೈಕ್ಶಣಿಕ ಕ್ರಾಂತಿಗಳನ್ನು ನಿರಂತರಗೊಳಿಸಲು ನುಡಿಯ ಈ ವೈಚಾರಿಕ ಮಾದರಿಗಳು ಯಾವತ್ತಿಗೂ ನೆರವಾಗುತ್ತವೆ. ಅರವತ್ತರ ದಶಕದಲ್ಲಿ ಯುರೋಪಿನ ಚಿಂತನೆಯ ಮಾದರಿಗಳಲ್ಲಿ ತಲೆಯೆತ್ತಿದ ಇಂತಹ ಪ್ರಕ್ರಿಯೆಯನ್ನೇ ಬಾಶಿಕ ತಿರುವು [ಲಿಂಗ್ವಿಸ್ಟಿಕ್ ಟರ‍್ನ್] ಎಂದು ಗುರುತಿಸಿರುವುದನ್ನು ಕಾಣಬಹುದು. ಮಾನವ ಇಲ್ಲವೇ ಸಮೂಹಗಳು ಚರಿತ್ರೆಯ ಉತ್ಪನ್ನ ಹಾಗೂ ಚರಿತ್ರೆಗಳೇ ಸಮೂಹಗಳನ್ನು ರೂಪಿಸುತ್ತವೆ ಎಂಬ ಸರಳವಾದ ನಂಬಿಕೆಯನ್ನು, ಬದಲಾಯಿಸುವ ನೆಲೆಗಳು ಇಂತಹ ಬಾಶಿಕ ತಿರುವಿನಲ್ಲಿ ಹುದುಗಿರುತ್ತವೆ. ಪರಿಣಾಮವಾಗಿ ಚರಿತ್ರೆ ಮತ್ತು ಚರಿತ್ರೆಯ ತಾತ್ವಿಕ ಚೌಕಟ್ಟುಗಳನ್ನು ಮರುಕಟ್ಟಲು ಸಾದ್ಯವಾಗುತ್ತದೆ. ಸಾಮಾಜಿಕ ಮತ್ತು ರಾಜಕೀಯ ಪಲ್ಲಟವನ್ನು ನೆಲೆಗೊಳಿಸುವ ಬಗೆಯೇ ಈ ಬಾಶಿಕ ತಿರುವುಗಳ ಮುಕ್ಯ ಗುರಿಯಾಗಿರುತ್ತದೆ. ಅಲ್ಲಮನ ಈ ಮೇಲಿನ ವಚನವು ಕೂಡ ಇಂತಹ ತಿಳಿವನ್ನೇ ಮಂಡಿಸುತ್ತದೆ. ಆದರೆ ಈ ಬಗೆಯ ಸಾಹಿತ್ಯಕ ಪರಿಕರಗಳು ಅರಿವಿನ ಆಕರಗಳಾಗಿ ಮಾನ್ಯತೆ ಪಡೆಯದೆ ಇರುವುದರಿಂದ, ಅವುಗಳೊಳಗಿನ ಚಿಂತನೆ ಮತ್ತು ಚಿಂತನೆಯನ್ನು ಕಟ್ಟುವ ಪರಿಕರಗಳು ಕೇವಲ ರಸಾನುಬವಕ್ಕೆ ಸೀಮಿತವಾಗಿವೆ. ಜ್ನಾನಮೀಮಾಂಸೆ ಎಂಬುದು ಸಮುದಾಯಗಳ ವಿವೇಕಕ್ಕೆ ಹೊರತಾದ ಚೌಕಟ್ಟು ಎಂಬ ನಂಬಿಕೆಯೇ ಸಾಮಾಜಿಕ-ಮಾನಸಿಕ ಬಿರುಕುಗಳಿಗೆ ಕಾರಣವಾಗುತ್ತದೆ. ಒಂದೊಂದು ನುಡಿ ಸಮುದಾಯದ ಲಾಂಗ್ವೇಜ್ ಸೈಕಾಲಜಿ ಮತ್ತು ಲಾಂಗ್ವೇಜ್ ಸೋಶಿಯಾಲಜಿಯನ್ನು ಆಳವಾದ ಓದಿಗೆ ಒಗ್ಗಿಸದೇ ಹೋದರೆ, ಅಂತಹ ಸಮುದಾಯ ಯಾವುದೇ ಏಳ್ಗೆಯನ್ನು ಕಾಣಲಾರದು ಹಾಗೂ ಬದುಕಿನ ಮುಂಗಾಣ್ಕೆಯನ್ನೂ ಹೊಂದಲು ಸಾದ್ಯವಾಗಲಾರದು. ಇಂತಹ ಇಕ್ಕಟ್ಟುಗಳಿಂದ ಬಿಡಿಸಿಕೊಳ್ಳಲು ನುಡಿ ಮತ್ತು ನುಡಿಯ ಓದುಗಳನ್ನು ನಾವೆಲ್ಲರೂ ನಂಬಬೇಕಿದೆ.

ಯಾವುದೇ ವಿದ್ಯಮಾನವು ರಾಜಕೀಯ ಮಹತ್ವವನ್ನು ಪಡೆದುಕೊಳ್ಳುತ್ತದೆ ಅಂದರೆ, ಅದೊಂದು ಸಾಮಾಜಿಕ ಆದ್ಯತೆಯ ಬಗೆಯಾಗಿ ಮಾತ್ರವೇ ಹೊರತು, ಬೇರೆ ಯಾವುದೇ ಸಾಮಾಜಿಕ ಬೇಡಿಕೆಗಳನ್ನು ಈಡೇರಿಸುವ ಇರಾದೆಯಿಂದಲ್ಲ. ಎತ್ತುಗೆಗಾಗಿ ಕನ್ನಡ ಮಾದ್ಯಮವನ್ನು ಕುರಿತ ಚರ‍್ಚೆಗಳು ರಾಜಕೀಯ ಮಹತ್ವವನ್ನು ಗುರಿಯಾಗಿಟ್ಟುಕೊಂಡು ಮುಂಚೂಣಿಗೆ ಬರುತ್ತವೆ. ಇಲ್ಲವಾದರೆ ಕೇವಲ ರಾಜಕೀಯ ಸರಿತನವನ್ನು ತೋರಿಸುವ ತುಡಿತದಿಂದ ಕೂಡಿರುತ್ತವೆ. ಆದರೆ ಕನ್ನಡ ಮಾದ್ಯಮವನ್ನು ನೆಲೆಗೊಳಿಸುವ ಮೂಲಕ ಯಾವ ಬಗೆಯ ಸಾಮಾಜಿಕ ಮಹತ್ವ, ಪರಿಣಾಮ ಮತ್ತು ಪ್ರಬಾವವನ್ನು ಉಂಟುಮಾಡಬಹುದು ಎಂಬ ಸಂಗತಿಯು ಈ ಚರ‍್ಚೆಗಳಲ್ಲಿ ಕಾಣೆಯಾಗಿರುತ್ತದೆ. ನುಡಿಯೆಂಬುದೇ ಬದುಕಿನ ವಿನ್ಯಾಸವೆಂದು ತಿಳಿದವರಿಗೆ ನುಡಿಯ ಮಹತ್ವದ ಅರಿವು ಬೇರೆಯಾಗಿರುತ್ತದೆ. ಆದರೆ ಬದುಕಿನ ಹಲವು ವಿದ್ಯಮಾನಗಳಲ್ಲಿ ನುಡಿಯೂ ಒಂದು ಎಂದಾದರೆ, ಈ ಬಗೆಯ ತಿಳಿವಿನ ಪರಿಣಾಮದಿಂದ ನುಡಿಗೆ ಇರುವ ಮಹತ್ವ ಕಳೆದು ಹೋಗುತ್ತದೆ. ನುಡಿಯ ಮಹತ್ವವನ್ನು ಮಾತ್ರ ಹೇಳುವುದು ನನ್ನ ಗುರಿಯಲ್ಲ ಬದಲಾಗಿ ಬದುಕು ಮಹತ್ವವನ್ನು ಪಡೆಯಬೇಕಾದರೆ, ಅಂತಹ ಮಹತ್ವವೊಂದು ಎಲ್ಲಿ ಅಡಕವಾಗಿರುತ್ತದೆ ಎಂಬುದನ್ನು ಅರಿಯುವುದಾಗಿದೆ. ಇದಕ್ಕೆ ಒತ್ತಾಸೆಯಾಗಿರುವುದು ನುಡಿಯೇ ಆಗಿರುತ್ತದೆ. ಅಂದರೆ ನುಡಿ ಹಾಗೂ ಸಂಸ್ಕ್ರುತಿಗಳನ್ನು ಬೆಸೆಯುವ ಮೂಲತತ್ವಗಳನ್ನು ಅರಿಯುವ ಬಗೆಯೇ ಇಂತಹ ವಿಶ್ಲೇಶಣೆಗಳ ಮೊದಲ ಕಾಳಜಿ ಆಗಿರುತ್ತದೆ.

ತಿಳಿವನ್ನು ಮಂಡಿಸುವ ಹಾಗೂ ತಿಳಿವನ್ನು ವಿಶ್ಲೇಶಿಸುವ ಬಗೆಗಳ ನಡುವೆ ಗೆರೆ ಎಳೆಯಲು ಸಾದ್ಯವಿಲ್ಲ. ಆದರೆ ಆಯಾ ಸಮುದಾಯದ ತಿಳಿವಿನ ದಾರಿಗಳನ್ನು ಮರೆಸುವ ನೆಲೆಗಳು ಎಂತಹವು ಎಂಬುದನ್ನು ಮಾತ್ರ ಗೆರೆ ಎಳೆದು ತೋರಿಸಬಹುದು ಎಂಬ ದಿಟವನ್ನು ಅಲ್ಲಮನ ಈ ವಚನವು ಗಟ್ಟಿಯಾಗಿ ಹೇಳುತ್ತದೆ. ನುಡಿಯ ಮಹತ್ವವನ್ನು ಮರೆತವರು, ಅದನ್ನು ಮನಗಾಣಬೇಕಾದ ಅನಿವಾರ‍್ಯ ಎಶ್ಟೊಂದು ಅಗತ್ಯವಿದೆ ಎಂಬುದನ್ನು ಈ ಚರ‍್ಚೆಗಳು ನೆನಪಿಸುತ್ತವೆ. ಸಾಂಸ್ಕ್ರುತಿಕ ನೆನಪು ಮತ್ತು ಮರೆವುಗಳ ನಡುವಣ ತಿಕ್ಕಾಟ ಕೇವಲ ಒಂದು ಕಾಲಗಟ್ಟದ ಪ್ರಶ್ನೆ ಮಾತ್ರವಲ್ಲ, ಸಮೂಹಗಳ ಸಾಂಸ್ಕ್ರುತಿಕ ಹಾಗೂ ರಾಜಕೀಯ ಗುರುತಿನ ಚರಿತ್ರೆಯನ್ನು ನಿರ‍್ನಾಮಗೊಳಿಸುವ ಬಗೆಯೂ ಆಗಿರುತ್ತದೆ. ಮರೆವು, ನೆನಪು ಮತ್ತು ಮಾಯೆಯ ರೂಪಕವಾಗಿ ನುಡಿಯೊಂದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅಲ್ಲಮ ತನ್ನೀ ವಚನದಲ್ಲಿ ಹೇಳುತ್ತಾರೆ.

ಬಹುತೇಕವಾಗಿ ಅಲ್ಲಮನ ವಚನಗಳು ಜನರಲ್ಲಿ ಕೇವಲ ತಿಳಿವನ್ನು ಮೂಡಿಸುವ ಇರಾದೆಯಿಂದ ಹುಟ್ಟಿಕೊಂಡಂತವುಗಳಲ್ಲ. ಬದಲಾಗಿ ತಿಳಿವಿನ ತಿಳಿವನ್ನು, ಅರಿವಿನ ಅರಿವನ್ನು ಕುರಿತು ಚಿಂತಿಸುವ ನೆಲೆಯಲ್ಲಿರುತ್ತವೆ. ಈ ಬಗೆಯ ಆಲೋಚನೆಯ ಕ್ರಮವನ್ನು ಕೇವಲ ಒಂದು ಜಿಜ್ನಾಸೆಯ ವಿದ್ಯಮಾನವಾಗಿ ನೋಡಲಾಗುತ್ತದೆ. ಆದರೆ ಅಲ್ಲಮನ ಗುರಿ ಇರುವುದು ಬದುಕಿನ ನೋಟಕ್ರಮದೊಳಗೆಯೇ ಜಿಜ್ನಾಸೆಯೊಂದು ವಿಕಾಸಗೊಳ್ಳುವ ಹಾಗೂ ಅಂತಹ ಪ್ರಕ್ರಿಯೆಯಿಂದ ಉಂಟಾಗುವ ಪರಿಣಾಮಗಳನ್ನು ಗೊತ್ತುಪಡಿಸುವ ನಿಲುವಾಗಿದೆ. ಯಾವುದೇ ಕ್ರಿಯೆ ನೇರವಾಗಿ ಪರಿಣಾಮವನ್ನು ಸೂಚಿಸಲಾರದು. ಹೊರತಾಗಿ ಒಂದೊಂದು ಕ್ರಿಯೆಯು ಉಂಟಾಗಬಹುದಾದ ವಿದ್ಯಮಾನವೊಂದನ್ನು ಮಾತ್ರ ಸೂಚಿಸುತ್ತದೆ. ಹಾಗಾಗಿ ಪರಿಣಾಮವೆಂಬುದು ಕ್ರಿಯೆಯೊಳಗೆಯೇ ಅಂತಸ್ತವಾಗಿರುವುದಿಲ್ಲ ಎಂಬ ದಿಟವನ್ನು ಈ ಮಾತುಗಳು ನಿಚ್ಚಳಪಡಿಸುತ್ತವೆ. ಆದರೆ ಯಾವುದೇ ಕ್ರಿಯೆಯಿಂದ ಹೊರಹೊಮ್ಮಬಹುದಾದ ಪರಿಣಾಮದ ವಿನ್ಯಾಸಗಳನ್ನು, ಗೆರೆಕೊರೆದು ತೋರಿಸುವ ವಿವೇಕ ಅಲ್ಲಮನ ವಚನಗಳಿಗೆ ಇರುತ್ತದೆ. ಎತ್ತುಗೆಗಾಗಿ ‘ಮಂಜಿನ ಶಿವಾಲಯಕ್ಕೆ ಬಿಸಿಲ ಕಳಸವುಂಟೆ?’ ಎಂಬೀ ರೂಪಕವನ್ನು ನಿಗಾಯಿಟ್ಟು ನೋಡಿದರೆ, ಅಲ್ಲಮನ ವಚನಗಳ ಕಾಣ್ಕೆಯನ್ನು ಅರಿತುಕೊಳ್ಳಲು ಸಾದ್ಯವಾಗುತ್ತದೆ. ಮಂಜು ಮತ್ತು ಬಿಸಿಲು ಇವುಗಳು ಕೇವಲ ವೈರುದ್ಯದ ನಿಲುವುಗಳಲ್ಲ. ಬದುಕಿನ ವಿನ್ಯಾಸದೊಳಗಿನ ವಿರೋದಬಾಸವನ್ನು ಅರಿಯುವ ಮಾದರಿಯೆಂದೇ ಹೇಳಬೇಕು. ಏಕೆಂದರೆ ಮಂಜು ಮತ್ತು ಬಿಸಿಲುಗಳು ಒಡಗೂಡಿದರೆ, ಪರಿಣಾಮ ಏನಾಗುತ್ತೆ? ಎಂಬುದಶ್ಟನ್ನೇ ಅಲ್ಲಮ ಹೇಳುತ್ತಿಲ್ಲ, ಬದಲಾಗಿ ಇಂತಹ ಪರಿಣಾಮಗಳ ಮೂಲಕ ಆಯಾ ವಸ್ತು ಇಲ್ಲವೇ ವಿದ್ಯಮಾನಗಳ ಅಸ್ತಿತ್ವದ ಗುರುತುಗಳನ್ನು ಮುಂಗಾಣಿಸುವ ಬಗೆಯೂ ಆಗಿರುತ್ತದೆ. ಆದ್ದರಿಂದ ಯಾವುದು ಏನನ್ನು, ಹೇಗೆ ನಿಯಂತ್ರಿಸುತ್ತದೆ ಮತ್ತು ಅವುಗಳ ಅಸ್ತಿತ್ವದ ಚಹರೆಗಳು ಎಂತಹವು ಅನ್ನುವುದು ಅಲ್ಲಮನ ವಚನದ ಈ ಸಾಲವೊಂದು ಎತ್ತಿ ತೋರಿಸುತ್ತದೆ.

ಆದರೆ ನಾನಿಲ್ಲಿ ಅಲ್ಲಮನನ್ನು ಈ ಸೀಮಿತ ತಾತ್ವಿಕ ಚೌಕಟ್ಟಿಗೆ ಕಟ್ಟಿ ಹಾಕಲಾರೆ. ಹೇಗೆ ನುಡಿಯೊಂದು ಅರಿವಿನ ಕುರುಹು ಆಗಬಲ್ಲದು ಎಂಬುದನ್ನು ತಿಳಿಯುವ ಜರೂರಿದೆ. ಆದ್ದರಿಂದ ನುಡಿಗೂ ಮತ್ತು ಬದುಕಿಗೂ ಇರುವ ನಂಟಸ್ತಿಕೆಯನ್ನು ಅಲ್ಲಮನ ಈ ವಚನದ ಮೂಲಕ ತಿಳಿಯುವುದಾಗಿದೆ. ಮತ್ತು ಅಲ್ಲಮನ ಮಾತುಗಳು ಅತ್ಯಂತ ಪರಿಣಾಮಕಾರಿಯಾಗಿ ಏನನ್ನು ಹೇಳುತ್ತವೆ ಎಂಬುದು ಇಲ್ಲಿ ಅಮೂರ‍್ತವಾಗಿದೆ ದಿಟ. ಆದರೆ ಈ ಅಮೂರ‍್ತತೆ ಇಲ್ಲಿ ಒಂದು ಸಾಮಾಜಿಕ ಒತ್ತಡವಾಗಿ ನುಡಿಯೊಂದರ ಇಡೀತನವನ್ನು ಸಾಮಾಜಿಕ ಅಸ್ಮಿತೆಯ ಸಂಕೇತವನ್ನಾಗಿ ಕಾಣಿಸುತ್ತದೆ. ಆದರೆ ಇಂತಹ ಸಮೀಕರಣವನ್ನು ಕೇವಲ ಒಂದು ಸೂಚಕವನ್ನಾಗಿ ಮಾತ್ರ ಇಲ್ಲಿ ಗಮನಿಸಬೇಕಾದ ಅಗತ್ಯವಿದೆ. ಸಾಮಾಜಿಕತೆ ಎಂಬುದನ್ನು ನಾವು ಬಿಡಿಸಿ ನೋಡಬೇಕಾದರೆ ನುಡಿಯನ್ನು ಹಾಗೂ ಅದು ಕಟ್ಟಿಕೊಡುವ ತಾತ್ವಿಕತೆಯನ್ನು ಅರಿಯಲೆಬೇಕಾದ ಜರೂರಿದೆ.

(ಚಿತ್ರಸೆಲೆ: pixgood.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: