ಸರ‍್ವಜ್ನನ ವಚನಗಳ ಹುರುಳು – 9ನೆಯ ಕಂತು

– ಸಿ.ಪಿ.ನಾಗರಾಜ.

 

81)   ಮೂರ್ಖಂಗೆ ಬುದ್ಧಿಯನು ನೂರ್ಕಾಲ ಹೇಳಿದರೆ
ಗೋರ್ಕಲ್ಲ ಮೇಲೆ ಮಳೆಗರೆದರಾ-ಕಲ್ಲು
ನೀರ್ಕೊಳ್ಳಬಹುದೆ ಸರ್ವಜ್ಞ

ಅರಿವನ್ನು ಹೊಂದಲು ಮನಸ್ಸಿಲ್ಲದ/ಪ್ರಯತ್ನಿಸದ ವ್ಯಕ್ತಿಗೆ ತಿಳುವಳಿಕೆಯನ್ನು ಹೇಳುವುದರಿಂದ ಯಾವ ಪ್ರಯೋಜನವೂ ಇಲ್ಲವೆಂಬುದನ್ನು ಹೇಳಲಾಗಿದೆ.

(ಮೂರ್ಖ=ತಿಳಿಗೇಡಿ/ಸರಿ-ತಪ್ಪುಗಳ ಅರಿವಿಲ್ಲದವನು ; ಬುದ್ಧಿ=ತಿಳುವಳಿಕೆ/ಅರಿವು ; ನೂರ‍್+ಕಾಲ ; ಕಾಲ=ಸಮಯ ; ನೂರ್ಕಾಲ=ಅನೇಕ ಬಾರಿ/ಹಲವು ಸಲ ; ಗೋರ್ಕಲ್ಲು=ಗಡುಸಾದ/ಗಟ್ಟಿಯಾದ ಕಲ್ಲು ; ಮಳೆ+ಕರೆದರೆ+ಆ ; ಕರೆ=ಸುರಿ/ಬೀಳು ; ನೀರ‍್+ಕೊಳ್ಳಬಹುದೆ ; ಕೊಳ್=ಪಡೆಯುವುದು/ಹೊಂದುವುದು ; ಬಹುದು=ಉಂಟಾಗು/ಒದಗು/ಸೇರು/ಕೂಡು ; ಆ ಕಲ್ಲು ನೀರ್ಕೊಳ್ಳಬಹುದೆ=ತನ್ನ ಮೇಲೆ ಸುರಿದ ಮಳೆನೀರನ್ನು ಹೀರಿಕೊಳ್ಳದ ಕಲ್ಲಿನಂತೆ ತಿಳಿಗೇಡಿಯಾದವನು ಇತರರು ಹೇಳುವ ತಿಳುವಳಿಕೆಯ ಮಾತನ್ನು ಅರಿತುಕೊಳ್ಳುವುದಿಲ್ಲ ಎಂಬ  ತಿರುಳಿನಲ್ಲಿ ಈ ರೂಪಕವು ಬಳಕೆಯಾಗಿದೆ)

82)   ಉಳ್ಳಾತ ನುಡಿದರೆ ಎಳ್ಳ ಮೇಲೆ ಜೇನಿಟ್ಟಂತೆ
ಇಲ್ಲದ ಬಡವ ನುಡಿದರೆ-ಬಾಯಿ ತುಂಬ
ಹೊಳ್ಳ ಹೊಯ್ದಂತೆ ಸರ್ವಜ್ಞ

ಸಮಾಜದಲ್ಲಿ ಸಿರಿವಂತರ ಮಾತಿಗೆ ಮೆಚ್ಚುಗೆಯನ್ನು/ಬಡವರ ಮಾತಿಗೆ ತಿರಸ್ಕಾರವನ್ನು ತೋರಿಸುವ ಬಗೆಯನ್ನು ರೂಪಕಗಳ ಮೂಲಕ ಹೇಳಲಾಗಿದೆ.

(ಉಳ್ಳ+ಆತ ; ಉಳ್=ಇರು ; ಆತ=ಅವನು ; ಉಳ್ಳಾತ=ಸಿರಿಸಂಪದಗಳನ್ನು ಹೊಂದಿರುವವನು/ಆಸ್ತಿಪಾಸ್ತಿಹಣಕಾಸುಳ್ಳವನು ; ನುಡಿದರೆ=ಮಾತನಾಡಿದರೆ ; ಎಳ್+ಅ ; ಎಳ್=ಜಿಡ್ಡುಳ್ಳ ಒಂದು ಬಗೆಯ ಕಾಳು ; ಎಳ್ಳ=ಎಳ್ಳಿನ ; ಜೇನು+ಇಟ್ಟ+ಅಂತೆ ; ಎಳ್ಳ ಮೇಲೆ ಜೇನಿಟ್ಟಂತೆ=ಎಳ್ಳು ಮತ್ತು ಜೇನನ್ನು ಜತೆಗೂಡಿಸಿಕೊಂಡು ತಿಂದಾಗ , ಅದರ ರುಚಿ ಹೆಚ್ಚಾಗುವಂತೆ ಸಿರಿವಂತರಾಡುವ ಮಾತು ಇಂಪಾಗಿರುತ್ತವೆ ; ಇಲ್ಲದ= ಸಿರಿವಂತಿಕೆಯಿಲ್ಲದ/ದಟ್ಟದರಿದ್ರನಾದ ; ಹೊಳ್=ಜಳ್ಳು/ಪೊಳ್ಳು /ಒಳಗೆ ತಿರುಳಿಲ್ಲದ ಕಾಳು/ತವಡು ; ಹೊಯ್+ದ+ಅಂತೆ ; ಹೊಯ್=ಹಾಕು/ಸುರಿ ; ಬಾಯಿ ತುಂಬ ಹೊಳ್ಳ ಹೊಯ್ದಂತೆ=ಒಳಗೆ ತಿರುಳಿಲ್ಲದ ಕಾಳನ್ನು/ಹೊಟ್ಟನ್ನು ಬಾಯಿಗೆ ಹಾಕಿಕೊಂಡು ಅಗಿದು ಬೇಸರದಿಂದ ಹೊರಕ್ಕೆ ಉಗಿಯುವಂತೆ ಬಡವರ ಮಾತನ್ನು ಕಡೆಗಣಿಸುತ್ತಾರೆ)

83)   ಬಡವನೊಂದೊಳುನುಡಿಯ ನುಡಿದರೆ ನಿಲ್ಲದು
ಕೊಡೆಯ ನೆಳಲಾತ ನುಡಿದರೆ-ನಾಯಕನ
ನುಡಿಯೆಂದು ನಿಲುಹೆ ಸರ್ವಜ್ಞ

ಬಡವರ ಮತ್ತು ಉಳ್ಳವರ ಮಾತುಗಳಿಗೆ ಸಮಾಜದಲ್ಲಿ ದೊರೆಯುವ ಬೆಲೆಯನ್ನು ಹೇಳಲಾಗಿದೆ.

(ಬಡವನು+ಒಂದು+ಒಳುನುಡಿಯ ; ಒಳು=ಒಳಿತಾದ/ಚೆನ್ನಾದ ; ನುಡಿ=ಮಾತು ; ನಿಲ್ಲದು=ಬೆಲೆಯನ್ನು ಪಡೆಯದು/ಒಪ್ಪಿತವಾಗದು ; ಕೊಡೆ=ಚತ್ರಿ ; ನೆಳಲ+ಆತ ; ನೆಳಲು=ನೆರಳು/ಆಶ್ರಯ/ಬಳಿ/ಆಸರೆ ; ಆತ=ಅವನು ; ಕೊಡೆಯ ನೆಳಲು= ದೊರೆ/ಸಿರಿವಂತ/ದೊಡ್ಡ ಗದ್ದುಗೆಯಲ್ಲಿರುವವರ ಸಾಮಾಜಿಕ ಅಂತಸ್ತನ್ನು ಸೂಚಿಸುವ ಒಂದು ಉಪಕರಣವಾಗಿ ಬಿಚ್ಚಿದ ಕೊಡೆಯನ್ನು ತಲೆಯ ಮೇಲೆ ಎತ್ತಿಹಿಡಿಯಲಾಗುತ್ತಿತ್ತು ; ಕೊಡೆಯ ನೆಳಲಾತ=ಸಮಾಜದಲ್ಲಿ ದೊಡ್ಡ/ಎತ್ತರದ ನೆಲೆಯಲ್ಲಿರುವವನು ; ನಾಯಕ=ಮುಂದಾಳು/ದೊರೆ/ಸಮುದಾಯವನ್ನು ಮುನ್ನಡೆಸುವವನು ; ನುಡಿ+ಎಂದು ; ನಿಲುಹು=ನೆಲೆಗೊಳಿಸು/ಇರುವಂತೆ ಮಾಡು ; ನಿಲುಹೆ=ನೆಲೆಗೊಳ್ಳುತ್ತದೆ/ಬೆಲೆಪಡೆಯುತ್ತದೆ/ಒಪ್ಪಿತವಾಗುತ್ತದೆ)

84)   ಬಡವನೊಳ್ಳೆಯ ಮಾತ ನುಡಿದರಲ್ಲೆಂಬರು
ಪೊಡವೀಶ ಬಳ್ಳುಗೆಡೆದಡೆ-ಹೊಗಳುತ
ಕಡುಜಾಣನೆಂಬರು ಸರ್ವಜ್ಞ

ವ್ಯಕ್ತಿಯು ಆಡುವ ಮಾತಿಗೆ ದೊರೆಯುವ ತೆಗಳಿಕೆ ಮತ್ತು ಹೊಗಳಿಕೆಯು ಆತನು ಹೊಂದಿರುವ ಸಾಮಾಜಿಕ ಅಂತಸ್ತನ್ನು ಅವಲಂಬಿಸಿರುತ್ತದೆ ಎಂಬುದನ್ನು ಹೇಳಲಾಗಿದೆ.

(ಬಡವನು+ಒಳ್ಳೆಯ ; ಮಾತ=ಮಾತನ್ನು ; ನುಡಿದರೆ+ಅಲ್ಲ+ಎಂಬರು ; ಪೊಡವಿ+ಈಶ ; ಪೊಡವಿ=ನೆಲ/ಬೂಮಿ/ರಾಜ್ಯ ; ಈಶ=ದೊರೆ/ಒಡೆಯ/ಯಜಮಾನ ; ಬಳ್ಳು+ಗೆಡೆದಡೆ ; ಬಳ್ಳು=ನರಿ ; ಬಳ್ಳು=ಬಗುಳು/ನಾಯಿನರಿಗಳ ಕೂಗುವಿಕೆ/ಅರಚುವಿಕೆ ; ಗೆಡೆ=ಬಾಯಿಗೆ ಬಂದಂತೆ ಮಾತನಾಡು/ಹರಟು/ಗಳಹು ; ಬಳ್ಳುಗೆಡೆ=ನಾಯಿ ಬೊಗಳುವುದು/ನರಿಯು ಊಳಿಡುವುದು/ಅರಚುವುದು-ಕೆಟ್ಟ/ಹಗುರವಾದ/ಪ್ರಯೋಜನವಿಲ್ಲದ ಮಾತುಗಳನ್ನು ಆಡುವುದು ; ಬಳ್ಳುಗೆಡೆದಡೆ=ಹರಟಿದರೆ/ಪೊಳ್ಳುನುಡಿಗಳನ್ನಾಡಿದರೆ ; ಕಡುಜಾಣನು+ಎಂಬರು ; ಕಡು=ಬಹಳ/ಹೆಚ್ಚಿನ ; ಜಾಣ=ಅರಿವುಳ್ಳವನು/ತಿಳುವಳಿಕೆಯುಳ್ಳವನು ; ಎಂಬರು=ಎನ್ನುವರು)

85)   ಒಡಲ ಕಟ್ಟಿಯೆ ತಾನು ಒಡವೆಯ ಗಳಿಸಿದರೆ
ಎಡೆಯಲಿ ಸಾಯಲದ ಕೊಳದೆ-ವಿತ್ತವ
ಒಡನೆ ಹೂಳುವರೆ ಸರ್ವಜ್ಞ

ಅತಿಜಿಪುಣತನದಿಂದ ಬಾಳುವವನ ಸಂಪತ್ತಿಗೆ ಒದಗುವ ಗತಿಯನ್ನು ಹೇಳಲಾಗಿದೆ.

(ಒಡಲು=ಹೊಟ್ಟೆ ; ಒಡಲ ಕಟ್ಟಿ=ಈ ಪದಕಂತೆಯು ಒಂದು ನುಡಿಗಟ್ಟಾಗಿ ಬಳಕೆಯಾಗಿದೆ . ಗಳಿಸಿದ/ಇರುವ ಸಂಪತ್ತನ್ನು ಬಳಸಿಕೊಂಡು ಸರಿಯಾಗಿ ಉಣ್ಣದೆ ಉಡದೆ ಜಿಪುಣತನದಿಂದಿರುವುದು/ನಲಿವನ್ನು ಹೊಂದದಿರುವುದು ;  ಇದನ್ನು ಜನಪದರು ” ಹೊಟ್ಟೆಬಟ್ಟೆಕಟ್ಟಿ ಬಾಳುವುದು ” ಎನ್ನುತ್ತಾರೆ ; ಒಡವೆ=ಆಸ್ತಿಪಾಸ್ತಿ ಹಣಕಾಸು ಚಿನ್ನಬೆಳ್ಳಿ ಮುಂತಾದ ಬೆಲೆಬಾಳುವ ವಸ್ತುಗಳು ; ಗಳಿಸು=ಸಂಪಾದಿಸು ; ಎಡೆ=ನಡುವೆ/ಇದ್ದಕ್ಕಿದ್ದಂತೆ ; ಸಾಯಲು+ಅದ ; ಸಾಯಲು=ಸಾವನ್ನಪ್ಪಲು/ಮರಣ ಹೊಂದಲು ; ಅದ=ಅದನ್ನು ; ಕೊಳ್+ಅದೆ ; ಕೊಳ್=ಪಡೆಯುವುದು/ಹೊಂದುವುದು ; ಕೊಳದೆ=ಪಡೆಯದೆ/ಹೊಂದದೆ ; ಎಡೆಯಲಿ ಸಾಯಲದ ಕೊಳ್=ಕೂಡಿಟ್ಟವನು ತುಂಬು ವಯಸ್ಸಾಗುವ ಮುನ್ನವೇ ಸಾವನ್ನಪ್ಪಿದರೆ , ಅವನ ಒಡವೆಯನ್ನು ಅದಕ್ಕೆ ಹಕ್ಕುದಾರರಾದವರು ವಶಪಡಿಸಿಕೊಳ್ಳುತ್ತಾರೆ ; ವಿತ್ತ=ಸಂಪಾದಿಸಿದ ಒಡವೆ/ಸಂಪತ್ತು ; ಒಡನೆ=ಜತೆಯಲ್ಲಿ ; ಹೂಳು=ಗುಂಡಿಯಲ್ಲಿ ಹಾಕಿ ಮಣ್ಣಿನಿಂದ ಮುಚ್ಚುವುದು)

86)   ಜಡೆಯ ಕಟ್ಟಲುಬಹುದು ಕಡವಸವನುಡಬಹುದು
ಬಿಡದೆ ದೇಗುಲದೊಳಿರಬಹುದು ಕರಣಗಳ
ತಡೆದು ನಿಲಬಾರ ಸರ್ವಜ್ಞ

ಹೊರಮಯ್ಯನ್ನು ಹತೋಟಿಯಲ್ಲಿಟ್ಟುಕೊಂಡಿರುವಂತೆ ತೋರಿಸಿಕೊಳ್ಳಬಹುದೇ ಹೊರತು , ಒಳಮನಸ್ಸು ಮಾತ್ರ ಬಯಕೆಗಳ ಒಳಮಿಡಿತದಿಂದ ತಲ್ಲಣಿಸುತ್ತಿರುತ್ತದೆ ಎಂಬುದನ್ನು ಹೇಳಲಾಗಿದೆ.

(ಜಡೆ ಕಟ್ಟುವುದು=ಹೆಂಡತಿಮಕ್ಕಳ ನೆಂಟನ್ನು ತೊರೆದು ಇಲ್ಲವೇ ಮದುವೆಯನ್ನೇ ಆಗದೆ ಸಂನ್ಯಾಸವನ್ನು ಪಡೆಯುವುದು/ತಮ್ಮ ತಲೆಯ ಜುಟ್ಟನ್ನು ಮೇಲಕ್ಕೆ ಎತ್ತಿಕಟ್ಟಿಕೊಳ್ಳುವುದು ರಿಸಿಮುನಿಗಳ/ವಿರಾಗಿಗಳ ಸಂಪ್ರದಾಯವಾಗಿತ್ತು ; ಕಡವಸವನು+ಉಡಬಹುದು ; ಕಡವಸ=ಜಿಂಕೆಯ ತೊಗಲು. ಇದನ್ನು ರಿಸಿಮುನಿಗಳು ಮಯ್ಯನ್ನು ಮುಚ್ಚಿಕೊಳ್ಳಲು/ಜಪವನ್ನು ಮಾಡುವಾಗ ಕುಳಿತುಕೊಳ್ಳಲು ಬಳಸುತ್ತಿದ್ದರು ; ಉಡು=ಉಟ್ಟುಕೊಳ್ಳುವುದು/ತೊಡುವುದು ; ಬಿಡದೆ=ಯಾವಾಗಲೂ/ಸದಾ ಕಾಲ ; ದೇಗುಲದೊಳು+ಇರಬಹುದು ; ದೇಗುಲ=ದೇವ+ಕುಲ ; ಕುಲ=ಮನೆ/ಮಂದಿರ/ನೆಲೆ ; ಕರಣಗಳು=ಕಣ್ಣು-ಕಿವಿ-ಮೂಗು-ನಾಲಗೆ-ತೊಗಲು ಎಂಬ ಅಯ್ದು ಬಗೆಯ ಅಂಗಗಳು ; ತಡೆ=ಹತೋಟಿಯಲ್ಲಿಡು/ಹದ್ದುಬಸ್ತಿನಲ್ಲಿಡು ; ನಿಲಬಾರ=ನಿಲ್ಲಿಸಲು ಬಾರದು/ಆಗುವುದಿಲ್ಲ ; ಕರಣಗಳ ತಡೆದು ನಿಲಬಾರ=ಮನದಲ್ಲಿ ಬಯಕೆಗಳ ಒಳಮಿಡಿತಗಳು ಉಂಟಾಗಲು/ಕೆರಳಲು ಕಾರಣವಾಗುವ ಅಯ್ದು ಇಂದ್ರಿಯಗಳನ್ನು ಹತೋಟಿಯಲ್ಲಿಡಲಾಗದು)

87)   ನೆತ್ತವೂ ಕುತ್ತವೂ ಹತ್ತಿದೊಡೆ ಅಳವಲ್ಲ
ಕುತ್ತದಿಂ ದೇಹ ಬಡವಕ್ಕು-ನೆತ್ತದಿಂ
ಬತ್ತಲೆಯಕ್ಕು ಸರ್ವಜ್ಞ

ಜೂಜಿನ ಚಟಕ್ಕೆ ಬಲಿಯಾದರೆ , ಎಂತಹ ಕೇಡು ಉಂಟಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.

(ನೆತ್ತ=ಪಗಡೆಯಾಟ/ಜೂಜು/ಸಂಪತ್ತನ್ನು ಒಡ್ಡಿ ಆಡುವ ಯಾವುದೇ ಆಟ ; ಕುತ್ತ=ರೋಗ/ಬೇನೆ ; ಹತ್ತು=ಅಂಟು/ಸೇರು/ಕೂಡು ; ಹತ್ತಿದೊಡೆ=ಅಂಟಿಕೊಂಡರೆ/ತಗುಲಿಕೊಂಡರೆ ; ನೆತ್ತ ಹತ್ತಿದೊಡೆ=ಜೂಜಾಡುವುದು ಮಾನಸಿಕ ಚಟವಾದರೆ/ಜೂಜಿನ ಸೆಳೆತಕ್ಕೆ ಒಳಗಾದರೆ ; ಕುತ್ತ ಹತ್ತಿದೊಡೆ=ರೋಗ ಅಂಟಿಕೊಂಡರೆ/ಬಂದರೆ ; ಅಳವು+ಅಲ್ಲ ; ಅಳವು=ಕಸುವು/ವಿವೇಕ/ಒಳಿತುಕೆಡುಕಿನ ಅರಿವು ; ಅಳವಲ್ಲ=ಒಳಿತಾಗುವುದಿಲ್ಲ/ತಡೆದುಕೊಳ್ಳುವ ಶಕ್ತಿಯಿರುವುದಿಲ್ಲ ; ಬಡವು+ಅಕ್ಕು ; ಬಡವು=ಸೊರಗುವಿಕೆ/ಬಲಕುಗ್ಗುವಿಕೆ ; ಅಕ್ಕು=ಆಗುವುದು ; ದೇಹ ಬಡವಕ್ಕು=ಮಯ್ಯಿನ ಕಸುವು ಕುಗ್ಗುತ್ತದೆ ; ಬತ್ತಲೆ+ಅಕ್ಕು ; ಬತ್ತಲೆ=ಬರಿ ಮಯ್/ ಉಡುಗೆತೊಡುಗೆಯಿಲ್ಲದ ಮಯ್ ; ನೆತ್ತದಿಂ ಬತ್ತಲೆಯಕ್ಕು=ಜೂಜಿನಿಂದಾಗಿ ಮನೆಮಟ ಆಸ್ತಿಪಾಸ್ತಿ ಹಣಕಾಸು ಎಲ್ಲವನ್ನೂ ಕಳೆದುಕೊಂಡು ಬರಿಗಯ್ಯಾಗಿ ಬೀದಿಪಾಲಾಗುವುದು)

88)   ಕಿರಿಯಂದಿನ ಪಾಪವರಿತಲ್ಲಿ ಹೋಯಿತ್ತು
ಅರಿತರಿತು ಮಾಡಿದನ ಪಾಪ-ವಜ್ರದ
ಸರಿಯಂತೆಯಿಕ್ಕು ಸರ್ವಜ್ಞ

ಅರಿಯದೆ ಮಾಡಿದ/ಅರಿತು ಮಾಡಿದ ಪಾಪದ ನಡುವಣ ವ್ಯತ್ಯಾಸಗಳನ್ನು ಹೇಳಲಾಗಿದೆ .

(ಕಿರಿ+ಅಂದಿನ ; ಕಿರಿ=ಚಿಕ್ಕ/ಎಳೆಯ ; ಅಂದಿನ=ಆ ಸಮಯ/ಕಾಲದ ; ಪಾಪವು+ಅರಿತ+ಅಲ್ಲಿ ; ಪಾಪ=ಇತರರಿಗೆ ಮತ್ತು ಸಮಾಜಕ್ಕೆ ಎಸಗಿದ ಕೇಡು/ಕೊಟ್ಟ ನೋವು/ಮಾಡಿದ ವಂಚನೆ ; ಅರಿ=ತಿಳಿ ; ಕಿರಿಯಂದಿನ ಪಾಪವರಿತಲ್ಲಿ ಹೋಯಿತ್ತು=ಚಿಕ್ಕಂದಿನಲ್ಲಿ ಮಾಡಿದ ಕೆಟ್ಟಕೆಲಸಗಳನ್ನು ದೊಡ್ಡವರಾದ ಮೇಲೆ ಅರಿತುಕೊಂಡು , ನನ್ನಿಂದ ಇಂತಹ ಕೆಟ್ಟದ್ದು ಆಗಿದೆಯಲ್ಲಾ ಎಂದು ಸಂಕಟಪಟ್ಟು , ಮತ್ತೆ ಕೆಟ್ಟದ್ದನ್ನು ಯಾರಿಗೂ ಮಾಡಬಾರದೆಂಬ ನಿಲುವನ್ನು ತಳೆದು , ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳುವುದು ; ಅರಿತು+ಅರಿತು ; ಅರಿತರಿತು=ತಿಳಿದೂ ತಿಳಿದೂ/ಚೆನ್ನಾಗಿ ಗೊತ್ತಿದ್ದು ;  ಮಾಡಿದನ=ಮಾಡಿದವನ ; ವಜ್ರ=ಗಡುಸಾದುದು/ಗಟ್ಟಿಯಾಗಿರುವುದು ; ಸರಿ=ಗಂಜಿ/ಅಂಬಲಿ/ಜಿಗುಟಾದ ವಸ್ತು/ಅಂಟು ; ವಜ್ರದ ಸರಿ=ಒಂದು ಬಗೆಯ ಅಂಟು . ಇದನ್ನು ಮರದ ಪಟ್ಟಿಗಳ ಸಂದುಗಳಿಗೆ ಬಳಿದು ಅನಂತರ ಅವನ್ನು ಜತೆಗೂಡಿಸಿದಾಗ , ಅವು ಗಟ್ಟಿಯಾಗಿ ಅಂಟಿಕೊಳ್ಳುತ್ತಿದ್ದವು ;  ಇಕ್ಕು=ಇರುವುದು ; ಅರಿತರಿತು ಮಾಡಿದನ ಪಾಪ ವಜ್ರದ ಸರಿಯಂತೆಯಿಕ್ಕು=ಉದ್ದೇಶಪೂರ‍್ವಕವಾಗಿ ಮಾಡಿದವನ ಪಾಪವು ಎಂದೆಂದಿಗೂ ಬಿಡದೆ ಅಂಟಿಕೊಂಡಿರುವುದು. ಅಂದರೆ ಆತ ನೀಚ/ಕೇಡಿ/ವಂಚಕನಾಗಿಯೇ ಬಾಳುತ್ತಿರುತ್ತಾನೆ)

89)   ಸಜ್ಜನರ ಸಂಗ ತಾ ಹೆಜ್ಜೇನ ಕೊಡನಂತೆ
ದುರ್ಜನರ ಕೂಟವಣುಮಾತ್ರ-ಬಚ್ಚಲ
ರೊಜ್ಜಿನಂತಿಹುದು ಸರ್ವಜ್ಞ

ಒಳ್ಳೆಯವರ/ಕೆಟ್ಟವರ ಒಡನಾಟದಿಂದ ಉಂಟಾಗುವ ಪರಿಣಾಮಗಳನ್ನು ಹೇಳಲಾಗಿದೆ .

(ಸಜ್ಜನ=ಒಳ್ಳೆಯ ನಡೆನುಡಿಯುಳ್ಳವನು ; ಸಂಗ=ಗೆಳೆತನ/ಒಡನಾಟ/ವ್ಯವಹಾರ ; ತಾ=ಅದು ; ಹೆಜ್ಜೇನು=ಹಿರಿದಾದ/ದೊಡ್ಡದಾದ ಜೇನುಹುಳು ; ಕೊಡನ+ಅಂತೆ ; ಕೊಡ=ಜೇನಿನ ಗೂಡು/ಗಡಿಗೆ/ಬಿಂದಿಗೆ ; ಹೆಜ್ಜೇನ ಕೊಡ=ದೊಡ್ಡಗಾತ್ರದ ಜೇನಿನ ಹುಟ್ಟು/ಗೂಡು/ಜೇನು ತುಂಬಿದ ಗಡಿಗೆ ; ಸಜ್ಜನರ ಸಂಗ ತಾ ಹೆಜ್ಜೇನ ಕೊಡನಂತೆ=ಸಿಹಿಯಾದ ಜೇನನ್ನು ಸವಿದು ನಲಿಯುವಂತೆ ಒಳ್ಳೆಯವರ ಜತೆಯಲ್ಲಿ ಮಾಡುವ ಗೆಳೆತನ/ವ್ಯವಹಾರದಿಂದ ಒಲವುನಲಿವನ್ನು ಕಾಣುತ್ತೇವೆ/ಪಡೆಯುತ್ತೇವೆ ; ದುರ್ಜನ=ಕೆಟ್ಟ ನಡೆನುಡಿಯುಳ್ಳವನು ; ಕೂಟವು+ಅಣು+ಮಾತ್ರ ; ಕೂಟ=ಗೆಳೆತನ/ಒಡನಾಟ/ನೆಂಟು ; ಅಣು=ಸಣ್ಣ ಕಣ/ತುಸು/ಕಿಂಚಿತ್ತು ; ಅಣುಮಾತ್ರ=ತುಸುವಾಗಿದ್ದರೂ ; ಬಚ್ಚಲು=ಪಾತ್ರೆಪಡಗಗಳನ್ನು ಮತ್ತು ಮಯ್ಯನ್ನು ತೊಳೆದ ನೀರು ಹರಿದುಹೋಗಲು ಮಾಡಿರುವ ಚರಂಡಿ/ಮೋರಿ ; ರೊಜ್ಜಿನಂತೆ+ಇಹುದು ; ರೊಜ್ಜು=ಕೆಸರು/ರಾಡಿ/ಬಗ್ಗಡ/ಕೊಳಕಾದ ವಸ್ತುಗಳಿಂದ ತುಂಬಿದ ನೀರು ; ಇಹುದು=ಇರುವುದು)

90)   ಸರ್ವಜ್ಞನೆಂಬವನು ಗರ್ವದಿಂದಾದವನೆ
ಸರ್ವರೊಳೊಂದೊಂದ ನುಡಿ ಕಲಿತು ವಿದ್ಯದ
ಪರ್ವತವಾದ ಸರ್ವಜ್ಞ

ಸರ‍್ವಜ್ನನು ತನ್ನ ಸಾಮಾಜಿಕ ನಡೆನುಡಿ ಹಾಗೂ ಕವಿಯ ವ್ಯಕ್ತಿತ್ವ ರೂಪುಗೊಂಡ ಬಗೆಯನ್ನು ಹೇಳಿಕೊಂಡಿದ್ದಾನೆ.

(ಸರ್ವಜ್ಞ+ಎಂಬವನು ; ಸರ್ವ=ಎಲ್ಲ/ಸಮಸ್ತ ; ಜ್ನ=ತಿಳಿದವನು/ಅರಿತವನು ; ಸರ್ವಜ್ಞ=ಎಲ್ಲವನ್ನೂ ತಿಳಿದವನು/ಕವಿಯ ಅಂಕಿತ ನಾಮ/ಕಾವ್ಯರಚನೆಗಾಗಿ ಇಟ್ಟುಕೊಂಡ ಹೆಸರು ; ಎಂಬವನು=ಎಂಬ ವ್ಯಕ್ತಿಯು ; ಗರ್ವದಿಂದ+ಆದವನೆ ; ಗರ್ವ=ಅಹಂಕಾರ/ಒಣಹೆಮ್ಮೆ/ಸೊಕ್ಕು ; ಆದವನೆ=ರೂಪುಗೊಂಡಿದ್ದಾನೆಯೇ/ಆಗಿದ್ದಾನೆಯೇ ; ಸರ್ವಜ್ಞನೆಂಬವನು ಗರ್ವದಿಂದಾವನೆ=ಸರ‍್ವಜ್ನನ ವ್ಯಕ್ತಿತ್ವವು ಗರ‍್ವದಿಂದ ರೂಪುಗೊಂಡಿಲ್ಲ. ಒಳಿತನ್ನು ಕೇಳುವ/ಕಾಣುವ/ತನ್ನದಾಗಿಸಿಕೊಳ್ಳುವ ವಿನಯದ ನಡೆನುಡಿಗಳಿಂದ ರೂಪುಗೊಂಡಿದೆ ; ಸರ್ವರೊಳು+ಒಂದು+ಒಂದು ; ಸರ್ವರೊರೊಳು=ಎಲ್ಲರಿಂದಲೂ ; ವಿದ್ಯ=ಅರಿವು/ತಿಳುವಳಿಕೆ/ಜ್ನಾನ ; ಪರ್ವತ+ಆದ ;  ಪರ್ವತ=ದೊಡ್ಡ ಬೆಟ್ಟ/ಗಿರಿ ; ವಿದ್ಯದ ಪರ್ವತವಾದ=ಹೆಚ್ಚಿನ ಪ್ರಮಾಣದಲ್ಲಿ ಒಳ್ಳೆಯ ಅರಿವು/ತಿಳುವಳಿಕೆಯನ್ನು ಪಡೆದುಕೊಂಡು ಬೆಳೆದಿದ್ದಾನೆ)

( ಚಿತ್ರಸೆಲೆ: wikipedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: