ಗಾಳಿಚೀಲದ ಏರ‍್ಪಾಟು

ಜಯತೀರ‍್ತ ನಾಡಗವ್ಡ.

ಇಂದಿನ ದಿನಗಳಲ್ಲಿ ಬಂಡಿಗಳ ಕಾಪಿನ ವಿಶಯದ ಸಲುವಾಗಿ ಸಾಕಶ್ಟು ಮಾತುಕತೆ ನಡೆಯುತ್ತಿವೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ರಸ್ತೆ ಅವಗಡಗಳು ಕಾಪಿನ ವಿಶಯಕ್ಕೆ ಹೆಚ್ಚು ಒತ್ತು ನೀಡುವಂತೆ ಮಾಡಿವೆ. ಬಂಡಿಗಳ ಓಡಾಡುವವರಿಗೆ ತಮ್ಮ ಕಾಪಾಡುವಿಕೆಯು ಬಲು ಮುಕ್ಯ. ಅದರಲ್ಲೂ ದೂರದ ಊರುಗಳಿಗೆ ಪಯಣಿಸುವರು ಅಪಗಾತ,ಗುದ್ದುವಿಕೆಯಂತ ಗಂಡಾಂತರದಿಂದ ಯಾವಾಗಲೂ ತಮ್ಮನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿರುತ್ತದೆ. ಇಗ್ಗಾಲಿ ಬಂಡಿ ಮೇಲೆ ಓಡಾಡುವವರಿಗೆ ತಲೆಗಾಪು,ಕಾರ‍್ಬಂಡಿಗಳಲ್ಲಿ ಓಡಾಡುವವರಿಗೆ ಕಾಪಿನಪಟ್ಟಿ ಮುಂತಾದವು ಆಗುವ ಅನಾಹುತಗಳನ್ನು ತಡೆಯಬಲ್ಲವು ಇಲ್ಲವೇ ಅನಾಹುತಗಳನ್ನು ಕಡಿಮೆಗೊಳಿಸಬಲ್ಲವು. ಬಂಡಿಯ ಕೂರುಪಟ್ಟಿಯಶ್ಟೇ ಬಂಡಿಯ ಗಾಳಿಚೀಲ (Air Bag) ಕೂಡ ಬಲು ಮುಕ್ಯವಾಗಿದೆ.

ಹಳಮೆಯ ಪುಟಗಳನ್ನು ತಿರುವಿ ಹಾಕಿದಾಗ ವಿಶ್ವದ ಎರಡನೇಯ ಮಹಾಕಾದಾಟದ ಹೊತ್ತಿನಲ್ಲಿ ಮೊದಲ ಬಾರಿಗೆ ಬಾನೋಡದಲ್ಲಿ ಗಾಳಿಚೀಲ ಬಳಸಲಾಗಿತ್ತಂತೆ. ಆದರೆ ತಾನೋಡಗಳಲ್ಲಿ ಮೊದಲ ಬಾರಿಗೆ ಬಳಕೆಗೆ ಬಂದಿದ್ದು 1980ರ ಹೊತ್ತಿನಲ್ಲಿ.  1998ರ ಆಚೆಗೆ ಅಮೇರಿಕಾದಲ್ಲಿ ಎಲ್ಲ ತಾನೋಡಗಳಲ್ಲಿ ಗಾಳಿಚೀಲ ಇರುವಿಕೆಯನ್ನು ಕಡ್ಡಾಯಗೊಳಿಸಲಾಯಿತು. ಇಂದು ಮುಂದುವರೆದ ಎಲ್ಲ ದೇಶಗಳಲ್ಲಿ ಎಲ್ಲ ಬಂಡಿಗಳು ಗಾಳಿಚೀಲ ಹೊಂದಿರುವುದು ಕಂಡುಬರುತ್ತದೆ. ಬಾರತದಲ್ಲಿಯೂ ಇದೀಗ ಬಂಡಿಯ ಕಾಪಿನ ಅರಿವು ಎಲ್ಲೆಡೆ ಮೂಡುತ್ತಿದೆ. ಇಂದು ಬಿಡುಗಡೆಗೊಳ್ಳುತ್ತಿರುವ ಹೆಚ್ಚು ಕಡಿಮೆ ಎಲ್ಲ ಕಾರುಗಳಲ್ಲಿ ನಾವು ಗಾಳಿಚೀಲದ ಏರ‍್ಪಾಟನ್ನು(Air Bag System) ಕಾಣುತ್ತೇವೆ.

ಅಂಕಿ ಸಂಕ್ಯೆಗಳ ಪ್ರಕಾರ ಬಂಡಿಯೊಂದು ಇನ್ನೊಂದು ಬಂಡಿಯೊಂದಿಗೆ ಎದುರಾಗಿ ಗುದ್ದಿಕೊಂಡಾಗ (Frontal Crash) ಆಗುವ ಅವಗಡವನ್ನು ಗಾಳಿಚೀಲದ ಏರ‍್ಪಾಟ ಬಳಸಿ ಶೇಕಡಾ 30ರಶ್ಟು ತಡೆಯಬಹುದಂತೆ.ಬಂಡಿ ಕಾಪಿನ ಈ ವಿಶೇಶ ಏರ‍್ಪಾಟಿನ ಕುರಿತು ತಿಳಿದುಕೊಳ್ಳುವುದು ಕಾರು ಕೊಳ್ಳುಗರಿಗೆ ಅವಶ್ಯವಾಗಿದೆ. ಗಾಳಿಚೀಲದ ಏರ‍್ಪಾಟಿನ ಕೆಲಸದ ಕುರಿತಾದ ತಿಳಿಯುವ ಬನ್ನಿ.

ಕದಲಿಕೆಯ ಕಟ್ಟಳೆಯಂತೆ (Law of Motion) ವಸ್ತುವೊಂದರ ಮೇಲೆ ಹೊರಗಿನ ಬಲ ಹಾಕದೇ ಇದ್ದರೆ ಅದು ತನ್ನ ಮೊದಲಿನ ಸ್ತಿತಿಯಲ್ಲಿಯೇ ಮುಂದುವರೆಯುತ್ತದೆ. ಎತ್ತುಗೆಗೆ ನೆಲದ ಮೆಲೆ ಬಿದ್ದಿರುವ ಚೆಂಡನ್ನು ಬಲದಿಂದ ಒದ್ದಾಗಲೇ ಅದು ಮುಂದೆ ಸಾಗಿ ಕೆಲವು ಸೆಕೆಂಡುಗಳ ನಂತರ ಮೊದಲಿನ ಸ್ತಿತಿಗೆ ಬರುತ್ತದೆ ಇಲ್ಲದೇ ಹೋದರೆ ಅದು ಸುಮ್ಮನೆ ನೆಲದ ಮೇಲೆ ಬಿದ್ದಿರುತ್ತದೆ ಅಂದರೆ ತನ್ನ ಮೂಲ ಸ್ತಿತಿಯನ್ನು ಕಾಯ್ದುಕೊಂಡು ಹೋಗುತ್ತದೆ. ಹೊರಗಿನ ಬಲ ಚೆಂಡ ಮೇಲೆ ಬೀಳದ ಹೊರತು ಅದು ಕದಲದು. ಇದೇ ರೀತಿ ಬಂಡಿಯಲ್ಲಿ ನಾವು ಸಾಗುವಾಗ ಅದರ ವೇಗಕ್ಕೆ ತಕ್ಕಂತೆ ನಮ್ಮ ದೇಹವು ಹೊಂದಿಕೊಂಡಿರುತ್ತದೆ. ಬಂಡಿಯು ಎದುರಿನ ಬಂಡಿಗೆ ಗುದ್ದಿದಾಗ ನಮ್ಮ ದೇಹ ಇನ್ನೂ ಕಾರಿನ ವೇಗದಲ್ಲಿಯೇ ಸಾಗುವಂತಿರುತ್ತದೆ. ಕಾರಿನ ವೇಗ  ತಡೆತದಿಂದ ಒಮ್ಮೆಲೆ ಸೊನ್ನೆಗಿಳಿದರೂ, ಪಯಣಿಗರು ಮುಂದಕ್ಕೆ ತಳ್ಳಲ್ಪಡುವುದನ್ನು ನೋಡಿರಬಹುದು. ಇದರಿಂದ ನಮ್ಮ ದೇಹದ ಮುಂಬಾಗ ಬಂಡಿಯ ತೋರುಮಣೆಗೆ ಬಲು ಜೋರಾಗಿ ಅಪ್ಪಳಿಸಿ ಹೆಚ್ಚಿನ ಪೆಟ್ಟು ತಿನ್ನುತ್ತದೆ. ತಲೆ, ಕಯ್, ಮೊಗಕ್ಕೆ ದೊಡ್ಡ ಪೆಟ್ಟು ಬಿದ್ದು ತೊಂದರೆಯಾಗುತ್ತದೆ. ಕೆಲವೊಮ್ಮೆ ಸಾವು ಸಂಬವಿಸುತ್ತದೆ. ಮುಂದೆಡೆಯ ಗುದ್ದುವಿಕೆ ಇಲ್ಲವೇ ಅಕ್ಕ-ಪಕ್ಕದಿಂದ ಬಂಡಿಗಳೆರಡು ಗುದ್ದಿಕೊಂಡಾಗ ಇಂತ ಅನಾಹುತಗಳು ಹೆಚ್ಚು. ಇಂತ ಹೊತ್ತಿನಲ್ಲಿ ನಮ್ಮ ದೇಹದ ಮುಂಬಾಗ ದಿಡೀರ್‌ನೆ ಬಂಡಿಯ ತೋರುಮಣೆಗೆ(dashboard) ಅಪ್ಪಳಿಸುವುದನ್ನು ತಡೆಯಲಾಗದು. ಇದರ ಬಗ್ಗೆ ಸಾಕಶ್ಟು ಅರಕೆಗಾರರು, ಬಿಣಿಗೆಯರಿಗರು ಕೆಲಸ ಮಾಡಿದರು. ದಿಡೀರ್‌ನೆ ದೇಹ ಬಂಡಿ ಮುಂದಕ್ಕೆ ಅಪ್ಪಳಿಸುವುದನ್ನು ತಡೆಯಲಾಗದು ಆದರ ಹೊಡೆತ ಕಡಿತಗೊಳಿಸುವ ಚಳಕವೊಂದನ್ನು ಕಂಡುಕೊಂಡರು. ಇದೇ ಗಾಳಿಚೀಲದ ಏರ‍್ಪಾಟು.

ನಮ್ಮ ದೇಹದ ಮುಂಬಾಗ ಬಂಡಿಯ ತೋರುಮಣೆಗ ಅಪ್ಪಳಿಸುವ ಬದಲು ಮೆತ್ತನೆಯ ದಿಂಬಿನಂತ ವಸ್ತುವಿಗೆ ಡಿಕ್ಕಿ ಹೊಡೆದರೆ ಆಗುವ ತೊಂದರೆಯನ್ನು ಸಾಕಶ್ಟು ಕಡಿಮೆ ಮಾಡಬಹುದು. ಸಾವು ನೋವಿನ ಸಂಕ್ಯೆ ಇಳಿಮುಕವಾಗುವುದು. ಗಾಳಿಚೀಲವೆಂದರೆ ಗಾಳಿಯಿಂದ ತುಂಬಿರುವ ಬಲೂನು ಎನ್ನಬಹುದು. ಬಲುವೇಗದಿಂದ ನಮ್ಮ ತಲೆ ಅದೇ ಬಲದಿಂದ ಮೆತ್ತನೆಯ ಬಲೂನೊಂದಿಗೆ ಅಪ್ಪಳಿಸಿದರೆ ಪೆಟ್ಟು ಗಾಯದ ಪ್ರಮಾಣ ತಗ್ಗುತ್ತದೆ.

೩

ಗಾಳಿಚೀಲದ ಏರ‍್ಪಾಟು ಮುಕ್ಯವಾಗಿ ಮೂರು ಬಿಡಿಬಾಗಗಳನ್ನು ಹೊಂದಿದೆ. ಮೊದನೇಯದು ನಯ್ಟ್ರೋಜನ್ ಗಾಳಿಯಿಂದ ಉಬ್ಬಿಕೊಳ್ಳುವ ಚೀಲ (Air bag), ಎರಡನೇಯದಾಗಿ ಗುದ್ದುವಿಕೆಯ ಅರಿವಿಕ (Crash Sensor) ಮತ್ತು ಕೊನೆಯದು ಗಾಳಿ ಉಬ್ಬಿಸುಕ (Inflator). ಬಂಡಿಯೊಂದು ಇನ್ನೊಂದು ಬಂಡಿಗೆ ಇಲ್ಲವೇ ಗೋಡೆಗೆ ಗುದ್ದಿತು ಎಂದುಕೊಳ್ಳೋಣ. ಮೊದಲು ಅರಿವಿಕ ಗುದ್ದುವಿಕೆ ಬಲದ ಮಾಹಿತಿಯನ್ನು ಅರಿತು ಬಂಡಿಯ ಮೆದುಸರಕಿಗೆ (software) ಗುದ್ದುವಿಕೆ ಆಗಿದೆ ಎಂಬ ಮಾಹಿತಿ ಸಾಗಿಸುತ್ತದೆ. ಬಂಡಿಯ ಮೆದುಸರಕು ಕೂಡಲೇ ಉಬ್ಬಿಸುಕ ಚೀಲವನ್ನು ಉಬ್ಬಿಸುವಂತೆ ಮಾಡುತ್ತದೆ. ಗಾಳಿಚೀಲ ಸಿಡಿದು ಉಬ್ಬಿಕೊಂಡು ಅಪ್ಪಳಿಸುತ್ತಿರುವ ತಲೆ ಇತರೆ ದೇಹ ಬಾಗಕ್ಕೆ ಆಸರೆಯಾಗಿ ತಡೆಯೊಡ್ಡುತ್ತದೆ. ಸಾಮಾನ್ಯವಾಗಿ ಗಾಳಿಚೀಲ ಉದಿಕೊಳ್ಳಲು ಅದರಲ್ಲಿ ನಯ್ಟ್ರ‍ೋಜನ್ (Nitrogen) ಗಾಳಿ ಬಿಡುಗಡೆಗೊಂಡಿರುತ್ತದೆ. ಉಬ್ಬಿಸುಕದ ಒಳಗೆ ಸೋಡಿಯಮ್ ಅಜಾಯ್ಡ್‌ನೊಂದಿಗೆ (Sodium Azide) ಪೋಟ್ಯಾಶಿಯಂ ನಯ್ಟ್ರೇಟ್ (Potassium Nitrate) ಬೆರೆತು ನಯ್ಟ್ರೋಜನ್ ಗಾಳಿ ಹೊರಹಾಕಿ ಚೀಲ ಉಬ್ಬುವಂತೆ ಮಾಡುತ್ತವೆ. ಇದೆಲ್ಲವೂ ನಾವು ಕಣ್ಣು ಮಿಟುಕಿಸುವದಕ್ಕಿಂತ ವೇಗದಲ್ಲಿ ಪೂರ‍್ಣಗೊಂಡಿರುತ್ತದೆ.  ಅಂದರೆ ಸೆಕೆಂಡೊಂದರ 25ನೇಯ ಒಂದು ಬಾಗದಲ್ಲಿ (1/25th of Second) ಇಶ್ಟೆಲ್ಲ ಕೆಲಸವಾಗಿರುತ್ತದೆ.  ಕೆಲವು ಸೆಕೆಂಡುಗಳ ನಂತರ ಈ ನಯ್ಟ್ರೋಜನ್ ಗಾಳಿ ಸಣ್ಣಗೆ ಚೀಲದಲ್ಲಿ ಒದಗಿಸಲಾಗಿರುವ ತೂತುಗಳ ಮೂಲಕ ಹೊರ ನುಸುಳುತ್ತದೆ ಆಗ ಗುದ್ದುವಿಕೆಗೊಳಗಾದವರನ್ನು ಹೊರತೆಗೆದು ಮುಂದಿನ ಆರಯ್ಕೆಗೆ ಕರೆದೊಯ್ಯಬಹುದಾಗಿರುತ್ತದೆ.

೪

ಮೊದ ಮೊದಲು ಈ ಚಳಕ ಕಂಡುಹಿಡಿದಾಗ ಕೆಲವು ಕೇಳ್ವಿಗಳು ಎದ್ದಿದ್ದವು. ಅವುಗಳೆಂದರೆ,

  1. ಕಾರಿನಲ್ಲಿ ನಯ್ಟ್ರೋಜನ್ ಗಾಳಿಯನ್ನು ಕೂಡಿಡುವುದು ಹೇಗೆ?
  2. ಕಾರಿನ ಜೀವನದುದ್ದಕ್ಕೂ ಹೆಚ್ಚಿನೊತ್ತಡದಿಂದ ನಯ್ಟ್ರ‍ೋಜನ್ ಗಾಳಿಯನ್ನು ಕೂಡಿಡಬೇಕೆ?
  3. ಕಾರನ್ನು ನಾವು ಮಳೆ, ಚಳಿ ಹಾಗೂ ಬೇಸಿಗೆಯಲ್ಲಿ ಬಳಸುತ್ತಿರುತ್ತೇವೆ. ಹೀಗೆ ಬದಲಾಗುವ ವಾತಾವರಣ,ಬಿಸುಪಿಗೆ (Temperature) ತಕ್ಕಂತೆ ಗಾಳಿಚೀಲ ಚಕ್ಕನೆ ಉಬ್ಬಿಕೊಂಡು ತನ್ನ ಕೆಲಸವನ್ನು ಮಾಡಬಲ್ಲುದೇ?

ದಿನಗಳೆದಂತೆ ಅರಕೆಗಾರರು ಹೆಚ್ಚಿನ ಅರಕೆಗಳನ್ನು ನಡೆಸಿ ಇದಕ್ಕೆ ಹೇಳ್ವಿಕಂಡುಕೊಂಡರು. ನಯ್ಟ್ರೋಜನ್ ಗಾಳಿ ಕೂಡಿಡದೇ ಅದು ಕೂಡಲೇ ತಯಾರಾಗಿ ಗಾಳಿಚೀಲ ಉಬ್ಬಿ ಸಿಡಿಯುವಂತೆ ಮಾಡಲಾಯಿತು.

ಗಾಳಿಚೀಲದ ಏರ‍್ಪಾಟು ಬಳಸುವಾಗ ಕೆಲ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಬಂಡಿಯಲ್ಲಿ ಸಾಗುವಾಗ ಕೂರುಪಟ್ಟಿಯನ್ನು ಬಳಸುವುದು ಯಾವಾಗಲೂ ನಮ್ಮನ್ನು ಕಾಪಾಡುತ್ತದೆ. ಬಂಡಿಯಲ್ಲಿ ಗಾಳಿಚೀಲದ ಏರ‍್ಪಾಟು ಅಳವಡಿಸಲಾಗಿದೆಯೆಂದು ಕೂರುಪಟ್ಟಿ (Seat belt) ಕಡೆಗಣಿಸದಿರಿ.  ಕೂರುಪಟ್ಟಿ ಮತ್ತು ಗಾಳಿಚೀಲ ಇವೆರಡು ಸೇರಿ ನಮ್ಮನ್ನು ಗುದ್ದುವಿಕೆಯಿಂದ ಉಂಟಾದ ತೊಂದರೆಗಳಿಂದ ತಡೆಯಬಲ್ಲವು ಎಂಬುದು ನೆನಪಿನಲ್ಲಿಡಿ.

ಗಾಳಿಚೀಲದ ಏರ‍್ಪಾಟು ಕೆಲಸ ಮಾಡಲು ಬಂಡಿಯು ಒಂದು ನಿರ‍್ದರಿಸಿದ ವೇಗ ದಾಟಿರಬೇಕು. ಕೆಲವು ಬಂಡಿ ತಯಾರಕರ ವೇಗದ ಮಿತಿ 10 ರಿಂದ 15 ಮಯ್ಲಿ ಪ್ರತಿ ಗಂಟೆ. ಅಂದರೆ ಬಂಡಿಯು ಸುಮಾರು 10ಮಯ್ಲಿ ಇಲ್ಲವೇ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ಸಾಗುತ್ತಿದ್ದಾಗ ಗುದ್ದುವಿಕೆಯಾದರೆ ಮಾತ್ರವೇ ಗಾಳಿ ಚೀಲದೇರ‍್ಪಾಟು ಕೆಲಸ ಮಾಡುತ್ತದೆ. ಕಡಿಮೆ ವೇಗದಲ್ಲಿ ಗುದ್ದುವಿಕೆಯಿಂದ ಹೆಚ್ಚು ಪೆಟ್ಟು, ಅವಗಡಗಳು ಆಗುವುದಿಲ್ಲವೆಂದು ಓರೆಗೆ ಹಚ್ಚಿ ಇಂತ ವೇಗದ ಮಿತಿಯನ್ನು ನಿರ‍್ದರಿಸಿರಲಾಗಿದೆ.

5

ಇನ್ನೂ ಚಿಕ್ಕಮಕ್ಕಳು, ವಯಸ್ಸಾದವರು ಇಲ್ಲವೇ ರೋಗದಿಂದ ಬಳಲುತ್ತಿರುವವರು ಗಾಳಿಚೀಲ ಸಿಡಿಯುವ ವೇಗದಿಂದ ತೊಂದರೆ ಅನುಬವಿಸುವ ಸಾದ್ಯತೆ ಇರುತ್ತದೆ. ಪುಟಾಣಿ ಮಕ್ಕಳು ಕಾರಿನೋಡಿಸುಗನ ಪಕ್ಕದಲ್ಲಿ ಕೂಡದೇ ಹಿಂಬಾಗದಲ್ಲಿ ಕುಳಿತರೆ ಒಳಿತು. ಮಕ್ಕಳು ಕಾರಿನ ಹಿಂದುಗಡೆಯ ಕೂರುಮಣೆಯಲ್ಲಿ ಕೂಡಿಸದೇ ಅವರಿಗೆಂದೇ ಬೇರೆಯದೇ ಆದ ಕೂರುಮಣೆಯನ್ನು ಕಾರಿನ ಕೂರುಮಣೆಯ ಮೇಲಿಟ್ಟು ಕೂಡಿಸಬೇಕು.

ಸಾಮಾನ್ಯವಾಗಿ ಗಾಳಿಚೀಲ ಚೀಲ ನಯ್ಲಾನ್ ಬಟ್ಟೆಯಿಂದ ತಯಾರಿಸಲಾಗಿರುತ್ತದೆ. ಓಡಿಸುಗನ ಗಾಳಿಚೀಲವನ್ನು ಹೆಚ್ಚಾಗಿ ಮಿಂತಿಗುರಿಯಲ್ಲಿ ಇಲ್ಲವೇ ತೋರುಮಣೆಯೊಳಗೆ ಜೋಡಿಸಿಟ್ಟುರುತ್ತಾರೆ. ಅದಕ್ಕಾಗಿ ಓಡಿಸುಗರು ಮಿಂತಿಗುರಿಯನ್ನು ತಮ್ಮ ಕೂರುಮಣೆಗೆ ತಕ್ಕಂತೆ ಜೋಡಿಸಿಕೊಳ್ಳಬೇಕು. ಗಾಳಿಚೀಲ ಹೂತಿಟ್ಟಿರುವ ಮಿಂತಿಗುರಿ/ತೋರುಮಣೆಯಿಂದ ಓಡಿಸುಗನ ಎದೆಯೆಲಬು (Breast bone) ನಡುವೆ ಸುಮಾರು ಹತ್ತು ಇಂಚುಗಳ ದೂರವನ್ನು ಕಾಯ್ದುಕೊಂಡರೆ ಒಳ್ಳೆಯದು. ಗಾಳಿಚೀಲದ ಹತ್ತಿರವಿದ್ದರೆ ಅವಗಡವಾದಾಗ ಗಾಳಿಚೀಲ ಸಿಡಿಯುವ ಬಲದಿಂದ  ಓಡಿಸುಗರಿಗೆ ನೋವುಂಟಾಗಬಹುದು. ಅದಕ್ಕೆ ತಕ್ಕ ದೂರವನ್ನು ಕಾಯ್ದುಕೊಳ್ಳಲೇಬೇಕು.

ಹಲವು ಬಂಡಿಗಳಲ್ಲಿ ಅಕ್ಕ ಪಕ್ಕದ ಗುದ್ದುವಿಕೆಯಿಂದ ತೊಂದರೆಯಾಗುವುದನ್ನು ತಡೆಯಲು ಇದೀಗ ಬಂಡಿಯ ಬಾಗಿಲಿಗೂ ಗಾಳಿಚೀಲವನ್ನು (Door/Side air bags) ಅಳವಡಿಸಿರುತ್ತಾರೆ. ವಯಸ್ಸಾದವರು, ಮಕ್ಕಳು ಮತ್ತು ರೋಗ ರುಜಿನಗಳಿಂದ ಬಳಲುತ್ತಿರುವವರಿಗೆ ಇವುಗಳು ಸಿಡಿದಾಗ ತೊಂದರೆಯೂ ಆಗಬಹುದು. ಇಂತವರೊಂದಿಗೆ ಸಾಗುವಾಗ ಅಗತ್ಯ ಎಚ್ಚರಿಕೆ ಕಯ್ಗೊಂಡು ಬಾಗಿಲಿನ ಗಾಳಿಚೀಲಗಳನ್ನು ಕೆಲಸ ಮಾಡದಂತೆ ಅವುಗಳನ್ನು ನಿಲ್ಲಿಸುವ ಏರ‍್ಪಾಟನ್ನು ಬಳಸಿಕೊಳ್ಳಬಹುದು.

ಗಾಳಿಚೀಲದ ಬಳಕೆಯ ಬಗ್ಗೆ ಮೇಲೆ ತಿಳಿಸಿದ ಹಲವಾರು ಎಚ್ಚರಿಕೆಯ ಬಗ್ಗೆ ತಕ್ಕುದಾದ ಕಟ್ಟಳೆಗಳನ್ನು ಮುಂದುವರೆದ ನಾಡುಗಳು ಅಳವಡಿಸಿಕೊಂಡಿವೆ. ನಮ್ಮ ಬಾರತದಲ್ಲಿ ಕಳೆದ ಕೆಲವು ವರುಶಗಳಲ್ಲಿ ಗಾಳಿಚೀಲ ಅಳವಡಿಸಿದ ಕಾರುಗಳು ತಯಾರಾದರೂ ಅದಕ್ಕೆ ತಕ್ಕ ಕಟ್ಟಳೆಗಳನ್ನು ಸರಕಾರಗಳು ಇನ್ನೂ ಜಾರಿಗೊಳಿಸಿಲ್ಲ. ಆದಶ್ಟು ಬೇಗ ಇವುಗಳು ಜಾರಿಗೆ ಬಂದರೆ  ಎಲ್ಲರಿಗೂ ಒಳ್ಳೆಯದು.

(ಮಾಹಿತಿ ಮತ್ತು ತಿಟ್ಟ ಸೆಲೆ: howstuffworks.com, autojumble.world)

 

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಗಾಳಿ ಚೀಲ ತಂತ್ರಜ್ಞಾನ ಚನ್ನಾಗಿದೆ

ಅನಿಸಿಕೆ ಬರೆಯಿರಿ:

%d bloggers like this: